ADVERTISEMENT

ನಾರಾಯಣ ಎ. ಅಂಕಣ–ಅನುರಣನ| ಮತ್ತೂ ಮತ್ತೂ ಜಾತಿ ಜಾತಿ

ಹಳೆಯದನ್ನೆಲ್ಲಾ ಬದಿಗಿಟ್ಟು ಸಮಕಾಲೀನ ಸಾಮಾಜಿಕ ಕೆಡುಕುಗಳ ಜಾತಿಮೂಲವನ್ನು ಪ್ರಶ್ನಿಸಬೇಕಿದೆ

ನಾರಾಯಣ ಎ
Published 19 ಜುಲೈ 2021, 19:30 IST
Last Updated 19 ಜುಲೈ 2021, 19:30 IST
   

ಸಾಮಾಜಿಕ ಮಹಾಪಾತಕವೊಂದನ್ನು ಪದರೂಪಕ್ಕಿಳಿ ಸಲು ಒಂದು ನಿರ್ದಿಷ್ಟ ಜಾತಿಯ ಹೆಸರು ಬಳಕೆ ಯಾಗುತ್ತಿರುವುದರ ಕುರಿತು ಹುಟ್ಟಿಕೊಂಡ ವಿವಾದ ತಣ್ಣಗಾಗಿದೆ. ತಣ್ಣಗಾಯಿತು ಎಂದ ಮಾತ್ರಕ್ಕೆ ಮುಗಿದೇ ಹೋಯಿತು ಎನ್ನುವ ಹಾಗಿಲ್ಲವಾದ ಕಾರಣ, ಈ ವಿವಾದದಾಚೆಗಿನ ಕೆಲ ಹೊಸ ಪ್ರಶ್ನೆಗಳನ್ನು ಜಾತಿಗೆ ಸಂಬಂಧಿಸಿದಂತೆ ಕೇಳಬೇಕಿದೆ.

ನಾರಾಯಣ ಎ.

ಭೌತಿಕವಾದ ಯಾವುದೇ ಪದಾರ್ಥ ರೂಪಾಂತರ ಹೊಂದೀತೇ ಹೊರತು ನಾಶವಾಗದು ಎನ್ನುವ ಭೌತಶಾಸ್ತ್ರದ ಸಿದ್ಧಾಂತದಂತೆ ಅಥವಾ ಆತ್ಮಕ್ಕೆ ನಾಶವಿಲ್ಲ ಎಂಬ ಅಧ್ಯಾತ್ಮದ ತತ್ವದಂತೆ ಈ ಜಾತಿಯ ಕತೆಯೂ ಇರಬೇಕು. ಅದರ ನಿರ್ಮೂಲನವು ಒಂದು ಅಸಾಧ್ಯತೆ ಎಂಬಂತೆಯೂ ಅದರ ನಿರಂತರ ರೂಪಾಂತರವೇ ಸತ್ಯವೆಂದೂ ಸದ್ಯಕ್ಕೆ ಕಾಣಿಸುತ್ತದೆ.

ಸ್ವಾತಂತ್ರ್ಯ ಸುವರ್ಣೋತ್ಸವದ ಸಂದರ್ಭದಲ್ಲಿ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯು ಆಗ 97ರ
ಹರೆಯದಲ್ಲಿದ್ದ ಲೇಖಕ ಎ.ಎನ್.ಮೂರ್ತಿರಾಯರಿಗೆ ‘ಸ್ವಾತಂತ್ರ್ಯಾನಂತರ ನೀವು ಕಂಡ ಮಹತ್ತರ ಬದಲಾವಣೆ ಏನು’ ಅಂತ ಕೇಳಿತ್ತು. ಅದಕ್ಕೆ ಅವರು ‘ಜಾತಿ ಶಿಥಿಲವಾಗುತ್ತಾ ಸಾಗಿದೆ; ಅಂತರ್ಜಾತಿ ವಿವಾಹಗಳು ಹೆಚ್ಚುತ್ತಿವೆ’ ಎಂದಿದ್ದರು. ಜಾತಿ ವ್ಯವಸ್ಥೆಯು ಶ್ರೇಣೀಕೃತ ಶೋಷಣೆಯ ಅಸ್ತ್ರವಾಗಿ ಮುಂದುವರಿಯುವುದಕ್ಕಿಂತ ಹೆಚ್ಚಾಗಿ ಸಾಮಾಜಿಕ ಅನನ್ಯತೆಯ (identity) ಕುರುಹಾಗಿ ಬದಲಾಗುತ್ತಿದೆ ಎಂದು ‘ಗ್ರಾಮೀಣ ಭಾರತ ಇನ್ನೂ ಉಳಿದಿದೆಯೇ?’ (Whither the Indian Village?) ಎಂಬ ಲೇಖನದಲ್ಲಿ ಸಮಾಜಶಾಸ್ತ್ರಜ್ಞ ದೀಪ೦ಕರ್ ಗುಪ್ತ 2005ರಲ್ಲಿ ಬರೆದಿದ್ದರು. ಜಾತಿಯ ಬೇರುಗಳು ಶಿಥಿಲವಾಗುತ್ತಿರಬಹುದು. ಜಾತಿ ರೂಪಾಂತರ ಹೊಂದುತ್ತಿರಬಹುದು. ಆದರೆ ಜಾತೀಯ ಶಕ್ತಿ ದುರ್ಬಲಗೊಳ್ಳುತ್ತಿದೆಯೇ? ಈ ಪ್ರಶ್ನೆ ನಮ್ಮನ್ನು ಸಂವಿಧಾನದ ಕಾಲಬುಡಕ್ಕೆ ಒಯ್ಯುತ್ತದೆ.

ADVERTISEMENT

ಸಂವಿಧಾನವು ಜಾತಿಯನ್ನು ನೇರವಾಗಿ ನಿಷೇಧಿಸಿಲ್ಲ. ಆದರೆ ಪರೋಕ್ಷವಾಗಿ ಅದು ಜಾತಿಯ ವಿರುದ್ಧ ಸಮರ ಸಾರಿದೆ. ಈ ಸಮರದ ಕತೆ ರೋಚಕವಾದುದು. ಚರಿತ್ರೆ ಯಲ್ಲಿ ನಾವು ಓದುವ ನೂರು ವರ್ಷಗಳ ಯುದ್ಧದಂತೆ, ಪುರಾಣಗಳಲ್ಲಿ ಬರುವ ಸಾವಿರ ವರ್ಷಗಳ ಯುದ್ಧದಂತೆ ಸಂವಿಧಾನ ಮತ್ತು ಜಾತಿಯ ನಡುವಣ ಈ ಯುದ್ಧವೂ ಎಷ್ಟು ಕಾಲ ಅಂತ ಊಹಿಸಲಾಗದಷ್ಟು ಸುದೀರ್ಘವಾಗಿ ನಡೆಯಬಹುದೇನೋ. ಅದರ ಪರಿಣಾಮಗಳನ್ನೂ ಊಹಿಸಲಾಗದು. ಆದರೆ, ಇದುವರೆಗಿನ 70 ವರ್ಷಗಳಲ್ಲಿ ಸಂವಿಧಾನ ಗೆದ್ದು ಸೋತಿದೆ, ಜಾತಿ ಸೋತು ಗೆದ್ದಿದೆ.

ಸಂವಿಧಾನವು ಜಾತಿಯ ಬೇರುಗಳನ್ನು ಒಂದೆಡೆಯಿಂದ ಶಿಥಿಲಗೊಳಿಸುತ್ತಿರುವಂತೆಯೇ, ಇನ್ನೊಂದೆಡೆಯಿಂದ ಈ ಶಿಥಿಲಾವಸ್ಥೆಯನ್ನೇ ತಮ್ಮ ಅಸ್ಮಿತೆಯ ನಾಶ ಅಂತ ಭಾವಿಸಿದ ಜಾತೀಯ ಶಕ್ತಿಗಳು ಜಾತಿಪ್ರಜ್ಞೆಯನ್ನು ನಿರಂತರ ಜಾಗೃತಗೊಳಿಸುತ್ತಿವೆ. ಅಷ್ಟೇ ಅಲ್ಲ, ಸಂವಿಧಾನ ಹುಟ್ಟುಹಾಕಿದ ಪ್ರಜಾಸತ್ತಾತ್ಮಕ ರಾಜಕೀಯದಲ್ಲಿ ಅಧಿಕಾರದ ಗುರಿ ಸೇರಲು ಜಾತಿಯೂ ಒಂದು ರಹದಾರಿ ಎಂಬ ಸ್ಥಿತಿ ನಿರ್ಮಾಣವಾಗಿ, ಯಾವ ಜಾತಿ ವ್ಯವಸ್ಥೆಯನ್ನು ಸಂವಿಧಾನ ನಿರ್ಮೂಲನ ಗೊಳಿಸಬೇಕೆಂದು ಹೊರಟಿತ್ತೋ ಆ ವ್ಯವಸ್ಥೆಯನ್ನು ಅದು ಇನ್ನೊಂದು ರೀತಿಯಲ್ಲಿ ಪೋಷಿಸಿದೆ ಕೂಡಾ. ಅಂದರೆ ಜಾತಿ ಎಂಬುದು ದುರ್ಬಲಗೊಳ್ಳುತ್ತಿರುವ ಹಾಗೂ ಪ್ರಬಲಗೊಳ್ಳುತ್ತಿರುವ ಕ್ರಿಯೆಗಳು ಏಕಕಾಲದಲ್ಲಿ ಜರುಗುತ್ತಿವೆ. ಹಾಗಾಗಿ ಅಂತರ್ಜಾತಿ ವಿವಾಹಗಳ ಜತೆಗೆ ಮರ್ಯಾದೆಗೇಡು ಹತ್ಯೆಗಳೂ ಹೆಚ್ಚುತ್ತಿವೆ. ಜಾತಿಯು ಶ್ರೇಣೀಕೃತ ತಾರತಮ್ಯದ ಅಸ್ತ್ರವಾಗಿ ಉಳಿದಿಲ್ಲ ಎಂದು ಸಂಭ್ರಮಿಸುವಾಗಲೇ ಉನ್ನ, ಉನ್ನಾವೋ, ಖೈರ್ಲಾಂಜಿಯ ಆಕ್ರಂದನಗಳು ಕಿವಿಗಪ್ಪಳಿಸುತ್ತವೆ.

ಜಾತಿಯಿಂದಾಗುವ ಅನಾಹುತಗಳ ವಿಚಾರದಲ್ಲಿ ಈ ಕಾಲದ ಸತ್ಯ ಯಾವುದು? ಜಾತಿ ಸೃಷ್ಟಿಸಿದ ಅಸಮಾನತೆ ಯಿಂದಾಗಿ ದೊಡ್ಡ ಸಂಖ್ಯೆಯ ಜನರಿಗೆ ಇನ್ನೂ ಅನ್ಯಾಯ ಆಗುತ್ತಿರುವುದು ಸತ್ಯ. ‘ಯಾವುದೋ ಕಾಲದಲ್ಲಿ ನಮ್ಮಿಂದ ಇತರರಿಗೆ ಅನ್ಯಾಯ ಆಗಿರಬಹು ದಾದದ್ದು ಹೌದೆಂದುಕೊಂಡರೂ ಈಗ ನಾವು ಹಾಗೆಲ್ಲಾ ಮಾಡುತ್ತಿಲ್ಲ, ಜಾತಿಯ ಹೆಸರಲ್ಲಿ ಆಗುತ್ತಿರುವ ಅನ್ಯಾಯವನ್ನು ನಮ್ಮ ತಲೆಗೆ ಮಾತ್ರ ಕಟ್ಟುವುದು ಸರಿಯಲ್ಲ’ ಎಂಬ ಕೆಲವರ ವಾದ ಕೂಡಾ ಸತ್ಯ.

ಒಂದು ಕಾಲದಲ್ಲಿ ಜಾತಿ ತಾರತಮ್ಯದಿಂದ ಅನ್ಯಾಯಕ್ಕೊಳಗಾದವರು ಸಂವಿಧಾನ ನೀಡಿದ ಅವಕಾಶ ಬಳಸಿಕೊಂಡು ಸದೃಢರಾದಾಗ ಸಮಾನತೆಗಾಗಿ ಶ್ರಮಿಸದೆ, ತಾರತಮ್ಯ ಎಸಗುತ್ತಿರುವವರ ಜತೆ ಕೈಜೋಡಿಸುತ್ತಿರುವುದು ಸತ್ಯ. ಬೇರೆ ಯಾವುದೋ ಕಾರಣಕ್ಕೆ ಆದ ಪ್ರತಿಕೂಲ ಸ್ಥಿತಿ ತನ್ನ ಜಾತಿಯ ಕಾರಣದಿಂದಾಗಿಯೇ ಆಯಿತು ಅಂತ ಕೆಲವರು ಹುಸಿ ಜಾತೀಯತೆಯ ಕತೆ ಕಟ್ಟುತ್ತಿರುವುದೂ ಸತ್ಯ. ಜಾತಿಯ ವಿಚಾರದಲ್ಲಿ ಸತ್ಯ ಏನು ಎನ್ನುವುದು ಹೀಗೆ ಗೊಂದಲಮಯವಾಗಿರುವ ಸ್ಥಿತಿಯನ್ನೇ ಬಂಡವಾಳವಾಗಿಸಿಕೊಂಡು ಕೆಲ ಜಾತೀಯ ಶಕ್ತಿಗಳು ಪಾರಮ್ಯ ಮೆರೆಯುತ್ತಿರುವುದು ಸತ್ಯ. ಹಾಗಾಗಿ ಇಂದಿನ ಸತ್ಯೋತ್ತರ ಕಾಲದಲ್ಲಿ ಜಾತಿಶಕ್ತಿಯ ಕರಾಳ ಮುಖವನ್ನು ಅನಾವರಣಗೊಳಿಸಲು ಚಾರಿತ್ರಿಕವಾಗಿ ಯಾವ ಜಾತಿಯವರು ಇನ್ಯಾವ ಜಾತಿಯವರಿಗೆ ಅನ್ಯಾಯ ಮಾಡಿದರು ಎನ್ನುವುದರ ಸುತ್ತ ಕಟ್ಟಿದ ಪ್ರಶ್ನೆಗಳಷ್ಟೇ ಸಾಕಾಗದು. ವರ್ತಮಾನದಲ್ಲಿನ ಕೆಲ ಘೋರ ಕೆಡುಕುಗಳ ಜಾತಿಮೂಲವನ್ನೂ ಪ್ರಶ್ನಿಸಬೇಕಾಗಿದೆ.

ನಮ್ಮ ಕಣ್ಣಮುಂದೆ ನಡೆಯುತ್ತಿರುವ ದೊಡ್ಡ ಸಾಮಾಜಿಕ ಕೆಡುಕು ಎಂದರೆ, ಸಮಾನತೆಯ ಏಕೈಕ ಅಸ್ತ್ರವಾದ, ಸಂವಿಧಾನದ ವಿರುದ್ಧ ಗುಪ್ತವಾಗಿ ನಡೆಯು ತ್ತಿರುವ ಪ್ರಹಾರ. ಸಂವಿಧಾನವನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಾ ಒಳಗೊಳಗಿಂದಲೇ ಅದನ್ನು ದುರ್ಬಲ ಗೊಳಿಸಲು ಜನರ ಮನಸ್ಸನ್ನು ಅಣಿಗೊಳಿಸುವ ಈ ಪಿತೂರಿಯ ಪರಿಣಾಮ, ಚಾರಿತ್ರಿಕವಾಗಿ ಜಾತಿಯ ಕಾರಣದಿಂದ ಆದ ಎಲ್ಲಾ ಅನ್ಯಾಯವನ್ನು ಮೀರಿಸು ವಂಥದ್ದಾಗಿರುತ್ತದೆ. ಇಂತಹದ್ದೊಂದು ಸಂಚಿನ ಹಿಂದೆ ಯಾವ ಜಾತಿ ಇದೆ ಅಂತ ಪ್ರಶ್ನಿಸಬೇಕಿದೆ. ಇದಕ್ಕೆ ಪೂರಕವಾಗಿ ತರಹೇವಾರಿ ಸುಳ್ಳುಗಳನ್ನು ಸೃಷ್ಟಿಸಿ ಹರಡಲೆಂದೇ ಸ್ಥಾಪನೆಯಾಗಿರುವ ‘ಐ.ಟಿ. ಸೆಲ್’ಗಳ ಮತ್ತು ಜಾಲತಾಣಗಳ ಮೂಲದಲ್ಲಿ ಪ್ರವರ್ತಿಸುತ್ತಿರುವ ಜಾತಿ ಯಾವುದಿರಬಹುದು ಅಂತ ಕೇಳಬೇಕಿದೆ.

ಸರ್ಕಾರವನ್ನು ಪ್ರಶ್ನಿಸಿದರೆ ಅದನ್ನು ದೇಶದ್ರೋಹ ಅಂತಲೂ ಧರ್ಮ ಮತ್ತು ಅಧ್ಯಾತ್ಮದ ಹೆಸರಿನಲ್ಲಿ ನಡೆಯುವ ದುರಾಚಾರಗಳನ್ನು ಪ್ರಶ್ನಿಸಿದರೆ ಅದನ್ನು ಧರ್ಮದ್ರೋಹ ಅಂತಲೂ ಹಣೆಪಟ್ಟಿ ನೀಡುವ ಆಧುನಿಕ ಕಂದಾಚಾರವನ್ನು ಹುಟ್ಟುಹಾಕಿದವರ ಜಾತಿ ಯಾವುದಿರಬಹುದು ಅಂತ ಕೇಳಬೇಕಿದೆ. ಯುದ್ಧವನ್ನು ವೈಭವೀಕರಿಸುತ್ತಾ ಅನಗತ್ಯ ಹಿಂಸೆಯನ್ನು ಪ್ರತಿಪಾದಿಸುತ್ತಾ ಕೊನೆಗೆ ಗುಂಪುಕೊಲೆಗಳಂತಹ ಅಮಾನುಷ ಕ್ರೌರ್ಯಕ್ಕೆ ಮೂಲಪ್ರೇರಣೆ ನೀಡಿದ ಮತ್ತು ಅವುಗಳನ್ನು ಸಮರ್ಥಿಸುತ್ತಿರುವ ಪರಂಪರೆಯ ಪ್ರವರ್ತಕರು ಯಾವ ಜಾತಿಯವರಾಗಿರಬಹುದು ಅಂತ ಕಂಡುಕೊಳ್ಳಬೇಕಿದೆ.ಇತರ ಧರ್ಮಗಳಿಂದಾಗಿ ತಮ್ಮ ಧರ್ಮ ಅಪಾಯದಲ್ಲಿದೆ ಎನ್ನುವ ಮಿಥ್ಯೆಯನ್ನು ಹರಡುವುದರ ಮೂಲಕ ಜನಮನದಲ್ಲಿ ಅಭದ್ರತೆ ಯನ್ನೂ ದ್ವೇಷ ಭಾವನೆಯನ್ನೂ ಬಿತ್ತಿ ರಾಜಕೀಯ ಬೆಳೆ ತೆಗೆಯಲು ಬೇಕಾದ ಬೌದ್ಧಿಕ ಗೊಬ್ಬರ ಒದಗಿಸುವವರ ಜಾತಿ ಯಾವುದು ಅಂತ ಕೇಳಬೇಕಿದೆ.ಎಲ್ಲಾ ವೈರುಧ್ಯ- ಏಳುಬೀಳುಗಳ ನಡುವೆಯೂ ದೇಶ ಉಳಿಸಿಕೊಂಡು ಬಂದಿದ್ದ ಅಂತಃಸತ್ವದ ಅಗಾಧ ಶಕ್ತಿಯನ್ನೇ ಬುಡಮೇಲು ಮಾಡುತ್ತಿರುವ ಇನ್ನೂ ಹಲವಾರು ಹುನ್ನಾರಗಳ ಹಿಂದಿನ ಜಾತಿ ಮೂಲವನ್ನು ಅನಾವರಣಗೊಳಿಸಬೇಕಿದೆ.

ಮೇಲೆ ಹೇಳಿದ ಅಷ್ಟೂ ಅನಾಹುತಕಾರಿ ವಿದ್ಯಮಾನ ಗಳಿಗೆ ಒಂದೇ ಜಾತಿಯವರು ಸಂಪೂರ್ಣ ಕಾರಣರು ಅಥವಾ ಬಹುತೇಕ ಕಾರಣರು ಅಂತ ಕಂಡುಬಂದರೆ ಆ ಜಾತಿಯವರ ಬಗ್ಗೆ ಮರುಕ ಪಡಬೇಕಾಗುತ್ತದೆ. ಯಾಕೆಂದರೆ, ಇಂತಹ ಮನಃಸ್ಥಿತಿಯ ಮಂದಿಯನ್ನು ಭಾರಿ ಸಂಖ್ಯೆಯಲ್ಲಿ ಹೊಂದಿದ ಯಾವುದೇ ಜಾತಿ ಅಥವಾ ಸಮುದಾಯ ತನ್ನ ಬೌದ್ಧಿಕ ಪತನದ ಹಾದಿ ಯಲ್ಲಿ ಈಗಾಗಲೇ ತಲುಪಬಾರದಷ್ಟು ಕೆಳಮಟ್ಟಕ್ಕೆ ತಲುಪಿ ಆಗಿದೆ ಅಂತ ಅರ್ಥ. ಒಮ್ಮೆ ಇಡೀ ಸಮಾಜ ತಾಳ್ಮೆ ಕಳೆದುಕೊಂಡು ಈ ಪ್ರವೃತ್ತಿಯ ವಿರುದ್ಧ ತಿರುಗಿಬಿದ್ದರೆ ಆಗ ಅಂತಹ ಜಾತಿಯಲ್ಲಿ ಇರಬಹುದಾದ ಒಳ್ಳೆಯವರೂ ಉಳಿದವರ ಪಾಪಕ್ಕೆ ಬೆಲೆ ತೆರಬೇಕಾದೀತು.

ಒಂದು ವೇಳೆ ಮೇಲೆ ಹೇಳಿದ ಅಷ್ಟೂ ಅನಾಹುತಕಾರಿ ವಿದ್ಯಮಾನಗಳ ಹುಟ್ಟು ಮತ್ತು ಪ್ರಸರಣದಲ್ಲಿ ಎಲ್ಲಾ ಜಾತಿಯವರ ಸಮಾನ ಪಾಲು ಇದೆ ಎಂದಾದರೆ, ಅಂತಹ ಅಪಾಯಕಾರಿ ಪ್ರವೃತ್ತಿಯ ಮಂದಿಯನ್ನು ಆಯಾ ಜಾತಿಗಳಿಂದ ಪ್ರತ್ಯೇಕಿಸಿ ಬೇರೆಯೇ ಆದ ಒಂದು ಜಾತಿ ಅಂತ ಗುರುತಿಸಬೇಕಾಗುತ್ತದೆ. ಆ ಜಾತಿಯನ್ನು ಈಗ ಇರುವ ಯಾವುದೇ ನಿರ್ದಿಷ್ಟ ಜಾತಿಯ ಹೆಸರನ್ನು ಬಳಸಿ ಕರೆಯುವ ತಪ್ಪು ಮಾಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.