ADVERTISEMENT

ನೀತಿ ನಿವಾರಿಸಲಾಗದ ಮೂಲ ಸಮಸ್ಯೆ

ನಾರಾಯಣ ಎ
Published 29 ಸೆಪ್ಟೆಂಬರ್ 2021, 18:22 IST
Last Updated 29 ಸೆಪ್ಟೆಂಬರ್ 2021, 18:22 IST
   

ಹೊಸ ಶಿಕ್ಷಣ ನೀತಿಯು ಉನ್ನತ ಶಿಕ್ಷಣದಲ್ಲಿ ತರಲು ಉದ್ದೇಶಿಸಿರುವ ಬದಲಾವಣೆಗಳಿಗೆ ಮಾತ್ರ ಈ ಲೇಖನ ಸೀಮಿತವಾಗಿದೆ. ಅದರಲ್ಲೂ ಉನ್ನತ ಶಿಕ್ಷಣ ಕುರಿತಾದ ಶೈಕ್ಷಣಿಕ ವಿಚಾರಗಳನ್ನಷ್ಟೇ ಇಲ್ಲಿ ಪರಿಗಣಿಸಲಾಗಿದೆ- ಆಡಳಿತಾತ್ಮಕ ಬದಲಾವಣೆಗಳ ವಿಚಾರಗಳನ್ನಲ್ಲ. ಹಾಗಾಗಿ, ಸಮಗ್ರ ಹೊಸ ಶಿಕ್ಷಣ ನೀತಿಯ ಸುತ್ತ ಹುಟ್ಟಿಕೊಂಡಿರುವ ರಾಜಕೀಯ ಚರ್ಚೆಗಳ ಯುಕ್ತಾಯುಕ್ತತೆಯ ಬಗ್ಗೆ ಇಲ್ಲಿ ಪ್ರಸ್ತಾಪಿಸುವುದಿಲ್ಲ.

ನಾರಾಯಣ ಎ.

ಕೇವಲ ಉನ್ನತ ಶಿಕ್ಷಣ ಹಂತದ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಹೊಸ ನೀತಿಯ ಆಶಯ ಮತ್ತು ಅದು ಪ್ರಸ್ತಾಪಿಸಿರುವ ಸುಧಾರಣೆಗಳು ಮಹತ್ವಪೂರ್ಣವಾಗಿವೆ ಮತ್ತು ಈ ಕಾಲದ ಅಗತ್ಯಗಳಿಗೆ ಅನುಗುಣವಾಗಿಯೂ ಇವೆ. ಆದರೆ, ನಮ್ಮ ವಿಶ್ವವಿದ್ಯಾಲಯಗಳು, ಅದರಲ್ಲೂ ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳು ಮಾತ್ರ ನಿಧಾನವಾಗಿ ಸಾಯಲಿವೆ. ಬೇಕಾದರೆ ಬರೆದಿಟ್ಟುಕೊಳ್ಳಿ- ನಮ್ಮ ಬಹುತೇಕ ವಿಶ್ವವಿದ್ಯಾಲಯಗಳು ಸಂಪೂರ್ಣ ನೆಲಕಚ್ಚಲಿವೆ.

ವಿಶ್ವವಿದ್ಯಾಲಯಗಳ ಈ ನಿಚ್ಚಳ ನಾಶಕ್ಕೆ ಹೊಸ ಶಿಕ್ಷಣ ನೀತಿ ಕಾರಣವಾಗಲಿದೆ ಅಂತ ಖಂಡಿತಾ ಇಲ್ಲಿ ಹೇಳುತ್ತಿಲ್ಲ. ಈ ದೇಶದ ವಿಶ್ವವಿದ್ಯಾಲಯಗಳು ಪತನದ ಹಾದಿಯಲ್ಲಿ ಸಾಗಲು ತೊಡಗಿ ದಶಕಗಳೇ ಕಳೆದಿವೆ. ಈಗ ಬಂದಿರುವ ನೀತಿಯೂ ಅವುಗಳನ್ನು ವಿನಾಶದಂಚಿನಿಂದ ರಕ್ಷಿಸಲಾರದು ಎನ್ನುವುದಷ್ಟೇ ಹೊಸ ನೀತಿಯ ಬಗ್ಗೆ ಇರುವ ಆಕ್ಷೇಪ. ಹೊಸ ನೀತಿಯಿಂದಾಗಿ ಉದ್ಭವಿಸಿದ ಪರಿಸ್ಥಿತಿ ಹೇಗಿದೆ ಎಂದರೆ, ಉಸಿರಾಡಲೂ ಸಾಧ್ಯವಾಗದಷ್ಟು ನಿಶ್ಶಕ್ತನಾಗಿ ಮಲಗಿ ಸಾವನ್ನು ಎದುರು ನೋಡುತ್ತಿದ್ದವನನ್ನು ಒಮ್ಮಿಂದೊಮ್ಮೆಲೆ ಎಬ್ಬಿಸಿ ಒಲಿಂಪಿಕ್ಸ್‌ಗೆ ಕಳುಹಿಸುವ ಪ್ರಯತ್ನದಂತೆ ಇದೆ.

ADVERTISEMENT

ಹಾಗೆಂದ ಮಾತ್ರಕ್ಕೆ ದೇಶದಲ್ಲಿ ಒಳ್ಳೆಯದ್ದು ಎನ್ನ ಬಹುದಾದ ಉನ್ನತ ಶಿಕ್ಷಣ ಸಂಸ್ಥೆಗಳೇ ಇಲ್ಲ ಎಂದಾಗಲೀ ಉನ್ನತ ಶಿಕ್ಷಣ ನೀಡಲು ಅರ್ಹರಾದ ಪ್ರಾಧ್ಯಾಪಕ ವೃಂದವೇ ಇಲ್ಲ ಎನ್ನುವುದಾಗಲೀ ಅರ್ಥವಲ್ಲ. ಅಲ್ಲೋ ಇಲ್ಲೋ ಒಂದಷ್ಟು ಒಳ್ಳೆಯ ಸಂಸ್ಥೆಗಳು ಇರಬಹುದು, ಎಲ್ಲೋ ಬೆರಳೆಣಿಕೆಯ ಉತ್ತಮ ಪ್ರಾಧ್ಯಾಪಕರು ಇನ್ನೂ ಉಳಿದಿರಲೂಬಹುದು. ಆದರೆ, ಒಂದು ಹೊಸ ನೀತಿ ಎಂದಾಗ ಅದು ಇಡೀ ವ್ಯವಸ್ಥೆಯ ಧಾರಣಾ ಸಾಮರ್ಥ್ಯವನ್ನು ಗಮನದಲ್ಲಿ ಇಟ್ಟುಕೊಂಡು ಬದಲಾವಣೆಗಳನ್ನು ಪ್ರಸ್ತಾಪಿಸಬೇಕಾಗುತ್ತದೆ. ಹೊಸ ನೀತಿ ಪ್ರಸ್ತಾಪಿಸಿರುವ ಅಂಶಗಳು ಅದೆಷ್ಟು ಮಹತ್ವಾಕಾಂಕ್ಷೆಯಿಂದ ಕೂಡಿವೆ ಎಂದರೆ, ಈಗ ಇರುವ ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಗೆ ಅದನ್ನು ಭರಿಸಿ ಅನುಷ್ಠಾನಗೊಳಿಸುವುದು ಬಿಡಿ, ಕನಿಷ್ಠ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಕೂಡಾ ಇದೆ ಅಂತ ಅನ್ನಿಸುವುದಿಲ್ಲ.

ಹೀಗೆಲ್ಲಾ ಹೇಳುತ್ತಿದ್ದರೆ, ಇದು ಸಿನಿಕತನದ ಮಾತು, ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಅವಮಾನಿಸುವ ಮಾತು ಅಂತ ಅನ್ನಿಸಬಹುದು. ಖಂಡಿತಾ ಅಲ್ಲ. ವಾಸ್ತವದಲ್ಲಿ ಇಲ್ಲಿ ಬಳಸಿದ ಸಭ್ಯ ಪದಗಳು ತಿಳಿಸಬಹು ದಾದದ್ದಕ್ಕಿಂತಲೂ ಹೆಚ್ಚು ಈ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯು ಕೆಟ್ಟುಹೋಗಿದೆ. ರಾಮಾಯಣದಲ್ಲಿ ಹನುಮಂತನಿಗೆ ತನ್ನ ಶಕ್ತಿಯ ಬಗ್ಗೆ ತಿಳಿದಿರಲಿಲ್ಲ, ಹಾಗಾಗಿ ಸಮಸ್ತ ರಾಮಸೇನೆ ಸೇರಿ ಹನುಮಂತನ ಶಕ್ತಿ ಏನು ಅಂತ ಆತನಿಗೆ ಹೇಳಿ ಎಚ್ಚರಿಸಬೇಕಾಯಿತು. ನಮ್ಮ ಉನ್ನತ ಶಿಕ್ಷಣ ಇದಕ್ಕೆ ತದ್ವಿರುದ್ಧ ಸ್ಥಿತಿಯಲ್ಲಿದೆ. ಉತ್ತರ ದಾಯಿತ್ವ ಎನ್ನುವುದನ್ನು ಲವಲೇಶವೂ ಎದುರಿಸದ ಅದಕ್ಕೆ ಅದರ ದೌರ್ಬಲ್ಯ ಏನು ಅಂತ ತಿಳಿದಿಲ್ಲ. ‘ಗೊತ್ತಿಲ್ಲ ಎನ್ನುವುದು ಸಮಸ್ಯೆಯಲ್ಲ. ಗೊತ್ತಿಲ್ಲ ಅಂತ ಗೊತ್ತಿಲ್ಲದೆ ಇರುವುದು ಸಮಸ್ಯೆ’ ಎನ್ನುವುದು ಶೈಕ್ಷಣಿಕ ತತ್ವಶಾಸ್ತ್ರದ ಮಾತು. ಇದು ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯ ಸಮಸ್ಯೆಯೂ ಹೌದು. ಆ ವ್ಯವಸ್ಥೆ ಯಂತ್ರೋಪಾದಿಯಲ್ಲಿ ಸೃಷ್ಟಿಸುತ್ತಿರುವ ಪದವೀಧರರ ಸಮಸ್ಯೆಯೂ ಹೌದು. ಆದಕಾರಣ ಈ ಹಂತದಲ್ಲಾದರೂ ಉನ್ನತ ಶಿಕ್ಷಣದ ಬಗ್ಗೆ ಅಪ್ರಿಯ ಸತ್ಯಗಳನ್ನು ಹೇಳದೇ ಹೋದರೆ ಅದು ಮುಂದಿನ ಜನಾಂಗಕ್ಕೆ ಮಾಡುವ ಅನ್ಯಾಯವಾಗುತ್ತದೆ.

ಹೊಸ ಶಿಕ್ಷಣ ನೀತಿಯ ಮಹತ್ವಾಕಾಂಕ್ಷೆಗೂ ದೇಶದ ಉನ್ನತ ಶಿಕ್ಷಣದ ವಾಸ್ತವ ಸ್ಥಿತಿಗೂ ಇರುವ ಅಜ
ಗಜಾಂತರಕ್ಕೆ ಒಂದು ಉದಾಹರಣೆ ನೋಡೋಣ. ಹೊಸ ಶಿಕ್ಷಣ ನೀತಿಯು ಅಂತರರಾಷ್ಟ್ರೀಯ ಗುಣಮಟ್ಟದ ಉನ್ನತ ಶಿಕ್ಷಣವನ್ನು ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳಲ್ಲಿ ನೀಡುವ ಭರವಸೆ ನೀಡುತ್ತದೆ. ಮೊದಲಿಗೆ ಈ ಅಂತರರಾಷ್ಟ್ರೀಯ ಮಟ್ಟ ಅಂದರೆ ಏನು ಎನ್ನುವ ಪ್ರಶ್ನೆ. ಇಡೀ ವಿಶ್ವದ ವಿದ್ಯಾರ್ಥಿ ಸಮೂಹವನ್ನು ಈಗಲೂ ಸೂಜಿಗಲ್ಲಿನಂತೆ ಆಕರ್ಷಿಸುವ ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಹಾರ್ವರ್ಡ್, ಕೊಲಂಬಿಯಾ ಮುಂತಾದ ವಿಶ್ವವಿದ್ಯಾಲಯಗಳು ಹುಟ್ಟಿದ್ದು ಸ್ಥಳೀಯ ವಿಶ್ವವಿದ್ಯಾಲಯಗಳಾಗಿಯೇ. ಆಯಾ ಸ್ಥಳೀಯ ಪರಿಸರದಲ್ಲಿ, ಆಯಾ ಕಾಲಕ್ಕೆ ಬೇಕಾದ ಉತ್ಕೃಷ್ಟತೆ ಮತ್ತು ಸಮತೆಯ ಸೂತ್ರಗಳನ್ನು ಅಳವಡಿಸಿಕೊಂಡು ಕಟ್ಟಿದ ಸಂಸ್ಥೆಗಳು ಅಂತರರಾಷ್ಟ್ರೀಯ ಮನ್ನಣೆ ಗಳಿಸಿಯೇ ಗಳಿಸುತ್ತವೆ. ಅಂತರರಾಷ್ಟ್ರೀಯ ಮಟ್ಟ ಅಂತ ಒಂದು ಇಲ್ಲ. ಇರುವುದು ಗುಣಮಟ್ಟ ಅಂತ ಮಾತ್ರ. ಬೇರೇನನ್ನಾದರೂ ಆಮದು ಮಾಡಿಕೊಳ್ಳ ಬಹುದೋ ಏನೋ, ಆದರೆ ಗುಣಮಟ್ಟ ಎನ್ನುವುದು ಸ್ಥಳೀಯವಾಗಿಯೇ ಬೆಳೆಯಬೇಕು.

ಅದೇನೇ ಇರಲಿ, ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಅಂತ ಸ್ವೀಕೃತವಾಗಿರುವ ವಿಶ್ವವಿದ್ಯಾಲಯಗಳು ಆ ಮಟ್ಟಕ್ಕೆ ಏರಲು ಸಾಧ್ಯವಾಗಿದ್ದು ಹೇಗೆ ಎನ್ನುವುದು ಮುಖ್ಯ ಪ್ರಶ್ನೆ. ಅದು ಸಾಧ್ಯವಾದದ್ದು ಅಲ್ಲಿರುವ ಗುಣ ಮಟ್ಟದ ಪ್ರಾಧ್ಯಾಪಕ ವರ್ಗದ ಕಾರಣದಿಂದಾಗಿ. ಗುಣ ಮಟ್ಟದ ಶಿಕ್ಷಣ ವ್ಯವಸ್ಥೆಗೆ ಹೆಸರಾಗಿರುವ ದೇಶಗಳಲ್ಲಿ ಇರುವ ಒಂದು ಸಾಮಾನ್ಯ ವಿಶ್ವವಿದ್ಯಾಲಯದಲ್ಲಿ ಕೂಡಾ ಪ್ರಾಧ್ಯಾಪಕರ ಹುದ್ದೆ ಸಂಪಾದಿಸುವುದು ಕಠಿಣ ಪರಿಶ್ರಮ ವನ್ನು ಬೇಡುತ್ತದೆ. ಆ ದೇಶಗಳಲ್ಲಿ ಪಡೆಯಲು ಅತ್ಯಂತ ಕಷ್ಟವಾದ ಉದ್ಯೋಗ ಅಂತ ಒಂದು ಇದ್ದರೆ ಅದು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ಉದ್ಯೋಗ. ಸರ್ಕಾರವು ಆಡಳಿತಕ್ಕೆ, ರಾಜಕಾರಣಕ್ಕೆ ಬೇಕಾದ ಬಹುತೇಕರನ್ನು ವಿಶ್ವವಿದ್ಯಾಲಯಗಳಿಂದಲೇ ಪಡೆದುಕೊಳ್ಳುವುದು ಅಲ್ಲಿ ವಾಡಿಕೆ.

ಭಾರತದ ಪರಿಸ್ಥಿತಿ ನೋಡಿ. ಸ್ವಾತಂತ್ರ್ಯಾನಂತರದ ಮೊದಲ ಎರಡು- ಮೂರು ದಶಕಗಳ ಕಾಲ ಈ ದೇಶದ ಉನ್ನತ ಶಿಕ್ಷಣ ರಂಗ ಕಂಡ ಅದ್ಭುತ ಪ್ರಾಧ್ಯಾಪಕ ಪರಂಪರೆ ಈಗ ಹೆಚ್ಚುಕಡಿಮೆ ಅಳಿದೇ ಹೋಗಿದೆ. ಇಂತಹದ್ದೊಂದು ಘೋರ ಪತನಕ್ಕೆ ಕಾರಣವಾದದ್ದಾದರೂ ಏನು ಎನ್ನುವುದೇ ಒಂದು ಚೋದ್ಯ. ಈಗ ಕಳಪೆ ಸ್ನಾತಕೋತ್ತರ ಪದವಿ ಪಡೆದವರು ಮತ್ತು ಕಳಪೆ ಪಿಎಚ್.ಡಿ. ಪದವಿ ಪಡೆದವರು ಬೋಧಕರಾಗಿ ಕಳಪೆ ಸ್ನಾತಕೋತ್ತರ ಪದವೀಧರರನ್ನು ಮತ್ತು ಕಳಪೆ ಪಿಎಚ್.ಡಿ. ಪದವೀಧರರನ್ನು ಸೃಷ್ಟಿಸುತ್ತಿದ್ದಾರೆ. ಇವರು ಮತ್ತೆ ಪ್ರಾಧ್ಯಾಪಕರಾಗಿ ಮತ್ತಷ್ಟು ಕಳಪೆ ಪದವೀಧರ
ರನ್ನು ಸೃಷ್ಟಿಸುತ್ತಾರೆ. ಮುಂದೆ ಇಂತಹವರೂ ಪ್ರಾಧ್ಯಾಪಕ ರಾಗುತ್ತಾ ಸಾಗುವ ಸ್ಥಿತಿ ನಿರ್ಮಾಣವಾಗುವ ಮೂಲಕ ಇಡೀ ವ್ಯವಸ್ಥೆ ಒಂದು ಅಧೋಗತಿಯ ಸುಳಿಯಲ್ಲಿ (downward spiral) ಸಿಲುಕಿಕೊಂಡಿದೆ. ಇದಕ್ಕೆ ಅಪವಾದ ಎನ್ನುವವರು ಸಣ್ಣ ಸಂಖ್ಯೆಯಲ್ಲಿ ಇರಬಹುದು. ಅವರು ಒಟ್ಟು ವ್ಯವಸ್ಥೆಯ ಅಧಃಪತನವನ್ನು ತಡೆಯಲಾಗುವುದಿಲ್ಲ.

ಇದೆಂತಹ ವಿಷಮ ವರ್ತುಲ ಎಂದರೆ, ಇದರಿಂದ ಹೊರಬರುವುದು ಕಷ್ಟ. ಯಾಕೆಂದರೆ, ಈಗಾಗಲೇ ವ್ಯವಸ್ಥೆ ಯೊಳಗೆ ಬೇರೂರಿದವರನ್ನು ಬಿಡಲೂ ಕಷ್ಟ, ಅವರನ್ನು ಹೊಸ ಅವಶ್ಯಕತೆಗೆ ಒಗ್ಗಿಸಲೂ ಕಷ್ಟ. ಹೊಸದಾಗಿ ಸೂಕ್ತರನ್ನು ನೇಮಿಸೋಣ ಎಂದರೆ, ಇಡೀ ವ್ಯವಸ್ಥೆಯೇ ದಶಕಗಳಿಂದ ಬರಡಾಗಿರುವಾಗ ಸೂಕ್ತರಾದವರು ಸಿಗುವುದಾದರೂ ಎಲ್ಲಿಂದ. ಈ ಮೂಲಭೂತ ಸಮಸ್ಯೆ ಯಿಂದ ಉನ್ನತ ಶಿಕ್ಷಣವನ್ನು ಬಿಡುಗಡೆಗೊಳಿಸುವ ಯಾವ ಅಂಶವೂ ಹೊಸ ನೀತಿಯಲ್ಲಿ ಕಾಣಿಸುತ್ತಿಲ್ಲ. ಇದುವೇ ಇಲ್ಲದ ಮೇಲೆ ಬೇರೇನಾದರೂ ಇದ್ದರೆಷ್ಟು ಬಿಟ್ಟರೆಷ್ಟು.

ಇಷ್ಟು ಸಮಯ ಅಧಿಕೃತ ಸರ್ಟಿಫಿಕೇಟ್ ಸಿಗು ತ್ತದೆ ಎನ್ನುವ ಕಾರಣಕ್ಕೆ ಎಲ್ಲಾ ರೀತಿಯ ವಿಶ್ವವಿದ್ಯಾಲಯಗಳ
ಲ್ಲಿಯೂ ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು. ಕೆಲವೇ ವರ್ಷಗಳಲ್ಲಿ ಔದ್ಯೋಗಿಕ ರಂಗ ಕಂಡುಕೇಳರಿಯದ ರೀತಿಯಲ್ಲಿ ಬದಲಾಗಲಿದ್ದು ಹೊಸ ಉದ್ಯೋಗಾವಕಾಶ ಗಳಿಗೆ ಸರ್ಟಿಫಿಕೇಟ್ ಬೇಕಾಗುವ ಪರಿಸ್ಥಿತಿ ಇರುವುದಿಲ್ಲ. ಎಂಬಲ್ಲಿಗೆ ಜ್ಞಾನ- ಜ್ಞಾನಗ್ರಹಣ ಚಿಂತನೆ- ಯೋಚನೆ, ವಿವೇಕ- ವಿವೇಚನೆ ಇತ್ಯಾದಿಗಳ ಕುರಿತು ತಲೆಕೆಡಿಸಿಕೊಳ್ಳದ ವಿಶ್ವವಿದ್ಯಾಲಯಗಳ ಅವಶ್ಯಕತೆ ಯಾರಿಗೂ ಇರುವುದಿಲ್ಲ. ಹೊಸ ಶಿಕ್ಷಣ ನೀತಿ ಇದನ್ನು ಮನಗಂಡಿದೆ. ಆದರೆ ನಮ್ಮ ಬಹುತೇಕ ವಿಶ್ವವಿದ್ಯಾಲಯಗಳು ಮಾಹಿತಿ ಆಧಾರಿತ ಶಿಕ್ಷಣ ಮತ್ತು ಪ್ರಮಾಣಪತ್ರ ನೀಡುವಾಚೆಗಿನ ಶಿಕ್ಷಣದ ಬಗ್ಗೆ ಕನಿಷ್ಠ ಯೋಚಿಸುವ ಸ್ಥಿತಿಯಲ್ಲೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.