ADVERTISEMENT

ಅನುರಣನ: ನಿಜ ಪ್ರಾಧ್ಯಾಪಕರೊಬ್ಬರ ರಾಜೀನಾಮೆ ಪ್ರಸಂಗ

ಸಾಂವಿಧಾನಿಕ ಮೌಲ್ಯಗಳ ಪ್ರತಿಪಾದನೆಯಲ್ಲೇ ಅಪಾಯ ಕಂಡ ಆಧುನಿಕ ವಿ.ವಿಯೊಂದರ ಕತೆ

ನಾರಾಯಣ ಎ
Published 26 ಮಾರ್ಚ್ 2021, 19:30 IST
Last Updated 26 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೆಹಲಿಯ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರತಾಪ್ ಭಾನು ಮೆಹ್ತಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಕೊಡುವುದು, ರಾಜೀನಾಮೆ ಪಡೆಯುವುದೆಲ್ಲಾ ಮಾಮೂಲಿಯಾಗಿರುವ ಈ ಕಾಲದಲ್ಲಿ, ಒಂದು ಖಾಸಗಿ ವಿಶ್ವವಿದ್ಯಾಲಯದ ಒಬ್ಬ ಪ್ರಾಧ್ಯಾಪಕರ ಪ್ರಕರಣವೊಂದು ಏನು ಮಹಾ? ವಿಶ್ವವಿದ್ಯಾಲಯಗಳು ಬೊಕ್ಕಸಕ್ಕೆ ಭಾರ, ಅಲ್ಲಿ ಕಲಿಸುವವರು ಭೂಮಿಗೆ ಭಾರ ಎಂಬ ಒಂದು ಮನಃಸ್ಥಿತಿ ಸ್ಥೂಲವಾಗಿ ವ್ಯಾಪಿಸಿರುವ ಸಮಾಜ ಇದು.

ಈ ಮನಃಸ್ಥಿತಿಯನ್ನು ಸಮರ್ಥಿಸುವ ರೀತಿಯಲ್ಲಿ ಹಲವಾರು ವಿಶ್ವವಿದ್ಯಾಲಯಗಳು ಮತ್ತು ಅಲ್ಲಿರುವವರು ನಡೆದುಕೊಳ್ಳುತ್ತಿರುವ ಪರಿಸ್ಥಿತಿಯೂ ಈ ದೇಶದಲ್ಲಿದೆ. ಇವೆಲ್ಲವನ್ನೂ ಒಪ್ಪಿಕೊಂಡ ನಂತರವೂ ಮೆಹ್ತಾ ಅವರ ರಾಜೀನಾಮೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸ ಬೇಕಿದೆ. ಯಾಕೆಂದರೆ, ಇಲ್ಲಿ ವರ್ತಮಾನದ ಪ್ರಮುಖ ಆಗುಹೋಗುಗಳ ಸುಳಿಗಳೊಳಗಿನ ಸುಳಿಗಳಲ್ಲಿ ಸಿಕ್ಕಿ
ಹಾಕಿಕೊಂಡಿರುವ ಹಲವಾರು ಪ್ರಶ್ನೆಗಳಿವೆ. ಆ ಒಳಸುಳಿಗಳನ್ನು ಅರ್ಥೈಸುವ ಮೊದಲು ಎರಡು ವಿಷಯಗಳನ್ನು
ಸ್ಪಷ್ಟಪಡಿಸಬೇಕಿದೆ.

ಅಶೋಕ ವಿಶ್ವವಿದ್ಯಾಲಯವು ದೇಶದ ‘ಯಾವುದೋ ಇನ್ನೊಂದು’ ಖಾಸಗಿ ವಿಶ್ವವಿದ್ಯಾಲಯ ಅಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸಾವಿರಾರು ಖಾಸಗಿ- ಸರ್ಕಾರಿ ವಿಶ್ವವಿದ್ಯಾಲಯಗಳು ನಾಯಿಕೊಡೆಗಳಂತೆ ಎದ್ದು ನಿಲ್ಲುತ್ತಿರುವ ಈ ಕಾಲಘಟ್ಟದಲ್ಲಿ, ಅಶೋಕ ವಿಶ್ವವಿದ್ಯಾಲಯ ನಿಜ ಅರ್ಥದ ವಿಶ್ವವಿದ್ಯಾಲಯವಾಗಿ ಎದ್ದು ನಿಂತ ಒಂದು ಸಂಸ್ಥೆ. ಜಾಗತಿಕ ಮಟ್ಟದ ವಿಶ್ವವಿದ್ಯಾಲಯ ಎನ್ನುವಷ್ಟರ ಮಟ್ಟಿಗೆ ಅದರ ಹೆಸರು ಪಸರಿಸಿದೆ. ಹಾಗೆಯೇ, ಮೆಹ್ತಾ ಕೂಡಾ. ಅವರನ್ನು ಈ ದೊಡ್ಡ ದೇಶದ ಪ್ರಾಧ್ಯಾಪಕರುಗಳ ಪೈಕಿ ‘ಇನ್ನೊಬ್ಬರು’ ಅಂತ ಪರಿಗಣಿಸಲಾಗದು. ಅವರು ಸಮಕಾಲೀನ ಭಾರತದ ಅತ್ಯಂತ ಮೇಧಾವಿ ಮತ್ತು ಸಮಚಿತ್ತದ ವಿಶ್ಲೇಷಕರಲ್ಲಿ ಒಬ್ಬರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಸಮಾಜ ವಿಜ್ಞಾನಿ.

ADVERTISEMENT

ಮೆಹ್ತಾ ಅವರ ರಾಜೀನಾಮೆ ಪತ್ರದ ಎರಡು ವಾಕ್ಯಗಳು ಗಮನ ಸೆಳೆಯುತ್ತವೆ: ‘ನಾನು ಈ ಹುದ್ದೆಯಲ್ಲಿ ಮುಂದುವರಿಯುವುದು ವಿಶ್ವವಿದ್ಯಾಲಯಕ್ಕೆ ರಾಜಕೀಯ ಹೊರೆ (political liability) ಎಂದು ಆಡಳಿತ ಮಂಡಳಿ ಭಾವಿಸಿದೆ!’ ಮುಂದಿನ ವಾಕ್ಯ: ‘ಸಾಂವಿಧಾನಿಕ ಮೌಲ್ಯಗಳಾದ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಬೆಂಬಲಿಸುವ ನನ್ನ ಬರವಣಿಗೆಯು ವಿಶ್ವವಿದ್ಯಾಲಯದ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ ಎನ್ನುವ ಗ್ರಹಿಕೆಯನ್ನು ಮನಗಂಡು ನಾನು ರಾಜೀನಾಮೆ ನೀಡುತ್ತಿದ್ದೇನೆ’.

ಒಬ್ಬ ಪ್ರಾಧ್ಯಾಪಕ ಒಂದು ವಿಶ್ವವಿದ್ಯಾಲಯಕ್ಕೆ ರಾಜಕೀಯವಾಗಿ ಹೊರೆಯಾಗುವುದು ಎಂದರೆ ಏನು? ಇದು ಇಲ್ಲಿರುವ ಪ್ರಶ್ನೆ. ಮೆಹ್ತಾ ಅವರು ಇಂದಿನ ರಾಜಕೀಯದ ಅರ್ಥಹೀನ ಎಡ-ಬಲ ಗುಂಪುಗಳಲ್ಲಿ ಗುರುತಿಸಿಕೊಂಡವರಲ್ಲ. ಅವರು ಈಗಿನ ಸರ್ಕಾರವನ್ನು ಟೀಕಿಸಿ ಬರೆಯುವುದು, ಮಾತನಾಡುತ್ತಿರುವುದು ನಿಜ. ಅವರು ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನೂ ಟೀಕಿಸುತ್ತಿದ್ದರು. ಆ ಕಾಲಕ್ಕೆ ‘ಹೊಸ ನಾಯಕತ್ವ’ ದೇಶಕ್ಕೆ ಬೇಕು ಎಂದು ಬಯಸಿದವರಲ್ಲಿ ಅವರೂ ಒಬ್ಬರು. ಹಾಗಾಗಿ ಇವತ್ತಿಗೂ ‘ಶುದ್ಧ’ ಉದಾರಿಗಳು ಅವರ ಮೇಲೆ ಕತ್ತಿ ಮಸೆಯುತ್ತಿದ್ದಾರೆ. ಮೆಹ್ತಾ ಆಳುವ ಪಕ್ಷವನ್ನೂ ಅದರ ನಾಯಕನನ್ನೂ ಟೀಕಿಸುವುದನ್ನೇ ಹವ್ಯಾಸವನ್ನಾಗಿಸಿಕೊಂಡ ಚಿಂತಕ ರಲ್ಲ. ಅಳೆದು-ತೂಗದೆ ಯಾವುದೇ ತೀರ್ಮಾನಕ್ಕೆ ಬರುವವರಲ್ಲ. ಸುತ್ತಿ ಬಳಸಿ ಆಡುವವರೂ ಅಲ್ಲ- ಎಂದೂ ಧ್ವನಿ ಏರಿಸಿ ಮಾತನಾಡದೆ ಹೋದರೂ ಒಮ್ಮೆ ಮನವರಿಕೆಯಾದ ವಾದವನ್ನು ಮಂಡಿಸುವಲ್ಲಿ ಪೆಟ್ಟೊಂದು -ತುಂಡೆರಡು ಎಂಬ ನೀತಿಯನ್ನು ಪಾಲಿಸುತ್ತಾ ಬಂದವರು. ಒಬ್ಬ ಚಿಂತಕನಾಗಿ, ಸಂಶೋಧಕನಾಗಿ, ವಿಶ್ಲೇಷಕನಾಗಿ ತಾನು ಕಂಡ ಸತ್ಯಗಳನ್ನು ಸಾರ್ವಜನಿಕವಾಗಿ ಪ್ರತಿಪಾದಿಸುವ ಕೆಲಸವನ್ನು ಅವರು ಮಾಡಿದ್ದು ವಿಶ್ವವಿದ್ಯಾಲಯಕ್ಕೆ ‘ರಾಜಕೀಯ ಹೊರೆ’ ಆಗುತ್ತದೆ!

ಯಾವುದೋ ರಾಜಕೀಯ ವ್ಯಕ್ತಿ ಹುಟ್ಟುಹಾಕಿದ ಅಥವಾ ಹಣ ಮಾಡುವ ದಂಧೆಯ ಭಾಗವಾಗಿ ಕಟ್ಟಿದ್ದ ಒಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಈ ಅಭಿಪ್ರಾಯಕ್ಕೆ ಬಂದಿದ್ದರೆ ಅದರಲ್ಲಿ ಅಸಹಜ ಏನೂ ಇರುತ್ತಿರಲಿಲ್ಲ. ಅಶೋಕ ವಿಶ್ವವಿದ್ಯಾಲಯ ಹಾಗಲ್ಲ. ಅದು ಖಾಸಗಿ ವಿಶ್ವವಿದ್ಯಾಲಯವಾಗಿದ್ದರೂ ಅದನ್ನು ಕಟ್ಟಿದವರು ಉದ್ಯಮ ಕ್ಷೇತ್ರದ ದಿಗ್ಗಜರಾಗಿದ್ದರೂ ಅವರ ಉದ್ದೇಶ ಇದ್ದದ್ದೇ ಈ ದೇಶದಲ್ಲೊಂದು ನಿಜ ಅರ್ಥದ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು, ಅಲ್ಲಿ ಮುಕ್ತ ಚಿಂತನೆ ಇರಬೇಕು, ಅಲ್ಲಿ ನಿತ್ಯ ಕುತೂಹಲಿ ವಿದ್ಯಾರ್ಥಿ ಸಮೂಹ ಇರಬೇಕು, ಅಲ್ಲಿ ನಿರಂತರ ಅಧ್ಯಯನಶೀಲ ಪ್ರಾಧ್ಯಾಪಕರ ಸಮೂಹ ಇರಬೇಕು, ಅಲ್ಲಿ ಸ್ವಂತಿಕೆಯಿಂದ ಯೋಚಿಸಲು ಪ್ರೇರೇಪಿಸುವ ಶೈಕ್ಷಣಿಕ ವಾತಾವರಣ ಇರಬೇಕು ಎಂಬಂತಹ ಕಾರಣಗಳಿಗಾಗಿ.

ಇಂತಹ ಒಂದಷ್ಟು ವಿಶ್ವವಿದ್ಯಾಲಯಗಳು ಈ ದೇಶದಲ್ಲಿ ತಲೆಯೆತ್ತದ ಹೊರತು ದೇಶಕ್ಕೆ ಭವಿಷ್ಯ ಇಲ್ಲ ಎನ್ನುವುದನ್ನು ಮನಗಂಡು, ಅವರು ತಮ್ಮ ಸ್ವಂತ ಸಂಪತ್ತನ್ನು ಧಾರೆ ಎರೆದು ಕಟ್ಟಿದ ಸಂಸ್ಥೆ ಅದು. ಸ್ವತಂತ್ರವಾಗಿ ಯೋಚಿಸುವ ಮನಸ್ಸುಗಳನ್ನು ಸೃಷ್ಟಿಸದೇ ಹೋದರೆ ಆಗುವ ನಷ್ಟಗಳೇನು ಎನ್ನುವುದನ್ನು ಅವರು ತಮ್ಮ ಸ್ವಂತ ಉದ್ಯಮಗಳಲ್ಲೇ ಕಂಡುಕೊಂಡು ಇಂತಹದ್ದೊಂದು ಸಾಹಸಕ್ಕೆ ಇಳಿದಿದ್ದಿರಬೇಕು. ಸರ್ಕಾರಿ ಧನಸಹಾಯದ ಮೇಲೆ ಎಳ್ಳಷ್ಟೂ ಅವಲಂಬಿಸಿಲ್ಲದ ಈ ವಿಶ್ವವಿದ್ಯಾಲಯದಲ್ಲೇ ಪ್ರಾಧ್ಯಾಪಕನ ಹಾಗಿರುವ
ಪ್ರಾಧ್ಯಾಪಕರೊಬ್ಬರು ‘ರಾಜಕೀಯ ಹೊರೆ’ಯಾಗುತ್ತಾರೆ ಎಂದರೆ ಆ ರಾಜಕೀಯ ಯಾವುದು? ‘ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ’ ಬರವಣಿಗೆಗಳು ಇಂತಹದ್ದೊಂದು ವಿಶ್ವವಿದ್ಯಾಲಯವೊಂದರ ಹಿತಾಸಕ್ತಿಗೆ ಮಾರಕವಾಗುವುದು ಎಂದರೆ ಏನು? ಯಾರ ಹಿತಾಸಕ್ತಿ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಎಲ್ಲರಿಗೂ ಗೊತ್ತಿದೆ.

ಅಭದ್ರತೆ ಎನ್ನುವುದು ಅಧಿಕಾರಸ್ಥರನ್ನು ಸದಾ ಕಾಡುವ ಮನೋರೋಗ. ಈ ರೋಗಕ್ಕೆ ಹೊರಗಣ ಔಷಧಿ ಫಲಿಸುವುದಿಲ್ಲ. ಪ್ರಬುದ್ಧತೆ ಇದ್ದ ಅಧಿಕಾರಸ್ಥ ನಾಯಕರಿಗೆ ಮಾತ್ರ ಅಭದ್ರತೆಯನ್ನು ಮೀರಿ ಅಧಿಕಾರ ಚಲಾಯಿಸಲು ಸಾಧ್ಯ ಆಗುವುದು. ಈ ರೋಗದ ವಿಶೇಷತೆ ಅಂದರೆ, ಅದರ ದುಷ್ಪರಿಣಾಮ ಆಗುವುದು ಅದು ಯಾರನ್ನು ಕಾಡುತ್ತದೋ ಅವರ ಮೇಲಲ್ಲ. ಅಧಿಕಾರಸ್ಥರ ಈ ರೋಗಕ್ಕೆ ಬೆಲೆ ತೆರಬೇಕಾಗಿ ಬರುವುದು ಅವರು ಯಾರನ್ನು ತಮ್ಮ ಅಭದ್ರತೆಗೆ ಕಾರಣ ಅಂತ ಊಹಿಸುತ್ತಾರೋ ಅವರು.

ಒಂದು ವಿರೋಧಾಭಾಸ ಗಮನಿಸಿ. ಅಹಮದಾ ಬಾದಿನ ಸರ್ಕಾರಿ ಸ್ವಾಮ್ಯದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಇತ್ತೀಚೆಗೆ ಸಲ್ಲಿಕೆಯಾದ ಒಂದು ಪಿಎಚ್‌.ಡಿ ಪ್ರಬಂಧದಲ್ಲಿ, ಕೇಂದ್ರದಲ್ಲಿ ಆಳುವ ಪಕ್ಷದ ಚರ್ಯೆಯನ್ನು ವಿವರಿಸಿದ ರೀತಿ ಸರಿ ಇಲ್ಲ ಅಂತ ರಾಜಕಾರಣಿಯೊಬ್ಬರು ಆಕ್ಷೇಪ ಎತ್ತಿದರು. ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸದರಿ ಪ್ರಬಂಧವನ್ನು ಪರಿಶೀಲನೆಗೆ ಒಪ್ಪಿಸಬೇಕು ಎಂದು ಸಂಸ್ಥೆಗೆ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಂಸ್ಥೆಯ ನಿರ್ದೇಶಕರು ‘ಪಿಎಚ್‌.ಡಿ ಪ್ರಬಂಧ ಪರಿಶೀಲಿಸುವುದು ನಿಮ್ಮ ಕೆಲಸವಲ್ಲ. ಅದನ್ನು ವಿಧಿವತ್ತಾಗಿ ಪರಿಶೀಲಿಸಲಾಗಿದೆ, ಪದವಿ ನೀಡಲಾಗಿದೆ ಮತ್ತು ಸಂಸ್ಥೆಯ ನಿರ್ಧಾರ ಅಂತಿಮ’ ಅಂತ ಕಡ್ಡಿ ಮುರಿದ ಹಾಗೆ ಹೇಳಿದರು.

ಅವರು ರಾಜೀನಾಮೆ ನೀಡಿಲ್ಲ. ಸರ್ಕಾರಿ ಸ್ವಾಮ್ಯದ ಜೆಎನ್‌ಯುನಲ್ಲಿ ಸರ್ಕಾರದ ಕಡು ಟೀಕಾಕಾರರು ಇದ್ದಾರೆ. ಅವರ‍್ಯಾರೂ ರಾಜೀನಾಮೆ ನೀಡಿಲ್ಲ. ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳಿಗೆ ಇದ್ದ ಸ್ವಾತಂತ್ರ್ಯ- ಸ್ವಾಯತ್ತತೆ ಸಾಲದು ಎಂದು ಸ್ಥಾಪನೆಯಾದ ಖಾಸಗಿ ವಿಶ್ವವಿದ್ಯಾಲಯ ದಲ್ಲಿ ಸಾಂವಿಧಾನಿಕ ಮೌಲ್ಯವನ್ನು ಪ್ರತಿಪಾದಿಸಿದರೂ ಅಪಾಯ. ಇದರ ಅರ್ಥ ಇಷ್ಟೇ. ಒಂದು ಒಳ್ಳೆಯ ಸರ್ಕಾರಿ ವಿಶ್ವವಿದ್ಯಾಲಯಕ್ಕೆ ಯಾವುದೇ ಖಾಸಗಿ ವಿಶ್ವವಿದ್ಯಾಲಯ ಸಾಟಿಯಾಗಲಾರದು.

ಖಾಸಗಿ ವಿಶ್ವವಿದ್ಯಾಲಯಗಳು ಕಲಿಸುವ-ಕಲಿಯುವ ಉತ್ಕೃಷ್ಟ ಕೇಂದ್ರಗಳಾದಾವೋ ಏನೋ. ಆದರೆ ಅಧಿ
ಕಾರಸ್ಥರನ್ನು ಎದುರು ಹಾಕಿಕೊಂಡು ಮುಕ್ತ ಅಭಿಪ್ರಾಯ ಗಳನ್ನು ಪ್ರತಿಪಾದಿಸುವಲ್ಲಿ ಅವುಗಳು ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಸರಿದೂಗಲಾರವು. ಆದರೆ ಇದು ಒಂದು ಸಣ್ಣ ಸಮಾಧಾನ ಅಷ್ಟೇ. ಯಾಕೆಂದರೆ, ಈ ಧೈರ್ಯ ತೋರಬಲ್ಲ ಸಾರ್ವಜನಿಕ ವಿಶ್ವವಿದ್ಯಾಲಯಗಳು ಬೆರಳೆಣಿಕೆಯಷ್ಟು ಮಾತ್ರ ಇವೆ. ಹಾಗೆಯೇ, ಈ ಸಂಸ್ಥೆಗಳಲ್ಲಿ ಈಗ ಇಂತಹ ಧೈರ್ಯ ತೋರುವ ಪ್ರಾಧ್ಯಾಪಕ ವೃಂದ ಇದೆ. ಮುಂದೆ ಇಂತಹ ಪ್ರಾಧ್ಯಾಪಕರು ಬಾರದಂತೆ ದೇಶದ ಅಭದ್ರ ನಾಯಕತ್ವ ನೋಡಿಕೊಳ್ಳುತ್ತದೆ.

ಒಮ್ಮೆ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಈ ರೀತಿಯ ಹೊಸಬರು ತುಂಬಿಕೊಂಡಾಗ ದೇಶದಲ್ಲಿ ನಿಜ ಅರ್ಥದ ವಿಶ್ವವಿದ್ಯಾಲಯಗಳೇ ಇರುವುದಿಲ್ಲ. ಹಾಗಾದಾಗ ಭಾರತದಲ್ಲಿ ಸಂಪೂರ್ಣ ಕತ್ತಲೆಯ ಯುಗವೊಂದು ಪ್ರಾರಂಭವಾದಂತೆ. ಅಂತಹ ಕತ್ತಲೆಯಲ್ಲಿ ತನಗೆ ಸಂಪೂರ್ಣ ಭದ್ರತೆ ಇರುತ್ತದೆ ಅಂತ ಯಾವುದೇ ಅಭದ್ರ ನಾಯಕತ್ವ ದೃಢವಾಗಿ ನಂಬುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.