ADVERTISEMENT

ಸದಾ ಬೆಳಕಿಗೆ ಸೌರಕುಟೀರ

​ಪ್ರಜಾವಾಣಿ ವಾರ್ತೆ
Published 9 ಮೇ 2018, 19:30 IST
Last Updated 9 ಮೇ 2018, 19:30 IST
ವೇಣುಗೋಪಾಲ್
ವೇಣುಗೋಪಾಲ್   

ನವೀಕರಿಸಬಹುದಾದ ಇಂಧನಗಳಲ್ಲಿ ಸೌರಶಕ್ತಿಗೆ ಮೊದಲ ಸ್ಥಾನ. ಸೌರಶಕ್ತಿಯಂತಹ ಸಾಂಪ್ರದಾಯಿಕವಲ್ಲದ ಇಂಧನ ವಿಕೇಂದ್ರೀಕರಣದ ಮೂಲಕ ಬಡತನ ಹೋಗಲಾಡಿಸಿ, ಸಾಮಾಜಿಕ–ಆರ್ಥಿಕ ಸಮಾನತೆ ಸಾಧಿಸಲು ಸಾಧ್ಯ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ‘ಸೆಲ್ಕೋ ಫೌಂಡೇಷನ್’.

ಸೌರಶಕ್ತಿಯ ಬಳಕೆಯಿಂದ ಬಡಜನರ ಬದುಕು ಸುಧಾರಿಸಲು ಸಾಧ್ಯ ಎಂಬ ಕಾರಣಕ್ಕೆ ಈಗಾಗಲೇ ಈ ಸಂಸ್ಥೆ ಕೊಳೆಗೇರಿ ಪ್ರದೇಶಗಳಲ್ಲಿ ಸೌರಶಕ್ತಿ ಬಳಕೆಯ ಬಗ್ಗೆ ಜಾಗೃತಿ ಬೆಳೆಸುವ ಜೊತೆಗೆ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಸೌರಶಕ್ತಿ ಎಂಬ ಅಸ್ತ್ರದ ಮೂಲಕ ಹಲವು ಸಮುದಾಯಗಳಲ್ಲಿ ಆಶಾಕಿರಣವನ್ನು ಮೂಡಿಸಿರುವ ಸಂಸ್ಥೆ ಸದ್ಯ ‘ಸೌರ ಕುಟೀರ’ ಎಂಬ ಹೊಸತೊಂದು ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ.

ನಗರದ ಸಗಾಯಪುರದ ಚಾರ್ಲ್ಸ್‌ ಬಸ್ ನಿಲ್ದಾಣದ ಬಳಿ ಸೆಲ್ಕೋ ಫೌಂಡೇಷನ್ ಮತ್ತು ಯುನೈಟೆಡ್ ವೇ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ‘ಸೌರಶಕ್ತಿ ಕುಟೀರ-ಸೌರಚಾಲಿತ ಸೇವೆ’ ಪ್ರಾರಂಭಿಸಲಾಗಿದೆ.

ADVERTISEMENT

ಸೌರ ಚಾಲಿತ ಫ್ರಿಡ್ಜ್‌, ಸೌರಚಾಲಿತ ಪ್ರಿಂಟರ್, ಮೊಬೈಲ್‌ ಚಾರ್ಜರ್, ದೀಪಗಳು, ಬ್ಯಾಟರಿಗಳು ಹೀಗೆ ಸೌರಶಕ್ತಿಚಾಲಿತ ಹಲವು ಬಳಕೆಯ ವಸ್ತುಗಳು ಈ ಪುಟ್ಟ ಅಂಗಡಿಯಲ್ಲಿ ಇವೆ. ವೇಣುಗೋಪಾಲ್ ಇದರ ಉಸ್ತುವಾರಿ ನೋಡಿಕೊಳ್ಳುತ್ತಾರೆ.

ಸಮಾಜದ ಅಭಿವೃದ್ಧಿಗೆ ಸರ್ಕಾರದ ನೆರವಿನಿಂದ ಕೆಲ ಎನ್‌ಜಿಒಗಳು ‘ನೇಬರ್‌ಹುಡ್‌ ಇಂಪ್ರೂವ್‌ಮೆಂಟ್‌ ಪ್ರೋಗ್ರಾಂ’ ಸ್ಪರ್ಧೆ ನಡೆಸಿತ್ತು. ಅದರಲ್ಲಿ ಸೌರಕುಟೀರ ಯೋಜನೆ ಆಯ್ಕೆಯಾಯಿತು. ಬಿಬಿಎಂಪಿ ಅನುಮತಿ ಪಡೆದು ಇದನ್ನು ಪೈಲಟ್‌ ಯೋಜನೆಯಾಗಿ ಪ್ರಾರಂಭಿಸಲಾಗಿದೆ.

ಬೀದಿ ಬದಿಯಲ್ಲೊಂದು ಪುಟ್ಟ ಅಂಗಡಿ ಇಟ್ಟುಕೊಂಡವರಿಗೆ ವಿದ್ಯುತ್‌ ಶುಲ್ಕ ಭರಿಸುವುದು ಕಷ್ಟ. ಕತ್ತಲೆ ಎಂಬ ಕಾರಣಕ್ಕೆ ರಾತ್ರಿ ಹೊತ್ತಿನಲ್ಲಿ ಹಲವರು ಈ ಅಂಗಡಿಗಳ ಬಳಿ ಸುಳಿಯುವುದಿಲ್ಲ. ಬೆಳಕಿಲ್ಲದೆ ವ್ಯಾಪಾರ ಮಾಡುವುದು ಸುಲಭವಲ್ಲ. ಇಂತಹ ವ್ಯಾಪಾರಿಗಳ ಬದುಕಿನಲ್ಲಿ ಬೆಳಕು ಮೂಡಿಸುವುದು ಈ ಯೋಜನೆಯ ಪ್ರಾರಂಭಿಕ ಉದ್ದೇಶ. ಪೋರ್ಟಬಲ್‌ ಬ್ಯಾಟರಿಯಲ್ಲಿ ಸೌರಶಕ್ತಿಯನ್ನು ಸಂಗ್ರಹಿಸಿ ಅದರ ಮೂಲಕ ಬೆಳಕು ಪಡೆಯಲಾಗುತ್ತದೆ.

ಬ್ಯಾಟರಿಯನ್ನು ವೇಣುಗೋಪಾಲ್‌ ಬೆಳಿಗ್ಗೆ ವ್ಯಾಪಾರಿಗಳ ಬಳಿಗೆ ಹೋಗಿ ಸಂಗ್ರಹಿಸಿ ತರುತ್ತಾರೆ. ಅದನ್ನು ಚಾರ್ಜ್‌ ಮಾಡಿ ವ್ಯಾಪಾರಿಗಳಿಗೆ ಸಂಜೆ ಮರಳಿ ನೀಡುತ್ತಾರೆ. ಸದ್ಯ ಸುಮಾರು ನಲವತ್ತು ಮಂದಿ ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ.

‌‌‘ಸೌರ ಕುಟೀರ’ ಎಂಬುದು ನಮ್ಮ ಹೊಸ ಯೋಜನೆಯಾಗಿದ್ದು, ನೆರೆಹೊರೆಯವರ ಸಮಸ್ಯೆ ಕೇಳಿ ಈ ಯೋಜನೆ ರೂಪಿಸಲಾಗಿದೆ. ಸ್ವಾವಲಂಬಿ ಉದ್ಯೋಗದ ಮಾದರಿಯಿದು. ಯುವಶಕ್ತಿ ಈ ಕುರಿತು ಹೆಚ್ಚು ಆಕರ್ಷಿತರಾಗಬೇಕು’ ಎನ್ನುತ್ತಾರೆ ಮ್ಯಾಗ್ನೆಸ್‌ ಪ್ರಶಸ್ತಿ ಪುರಸ್ಕೃತ ಡಾ. ಹರೀಶ್ ಹಂದೆ.

‘ಕಡಿಮೆ ಆದಾಯದ ಸಮುದಾಯದವರಿಗೆ ಕೈಗೆಟುಕುವಂತೆ ಸೇವೆ ಮಾಡುವ ಉದ್ದೇಶದಿಂದ ಪ್ರಾರಂಭವಾದ ಸೌರಶಕ್ತಿ ಕುಟೀರ ಬಡಜನರಿಗೆ ಅನೇಕ ರೀತಿಯಲ್ಲಿ ಲಾಭವಾಗಲಿದೆ. ನಾವು ಈಗಾಗಲೇ ಗ್ರಾಮೀಣ ಭಾಗದಲ್ಲಿ ಈ ಕೆಲಸ ಮಾಡಿದ್ದೇವೆ. ಈಗ ನಗರದಲ್ಲೂ ಪ್ರಾರಂಭವಾಗಿದ್ದು, ನಗರದಲ್ಲಿ ನಮ್ಮ ಸಂಸ್ಥೆಯ ಪ್ರಥಮ ಯೋಜನೆಯಿದು’ ಎನ್ನುತ್ತಾರೆ ಅವರು.

‘ಈ ಯೋಜನೆಯನ್ನು ನೋಡಿ ನಗರದ ಇತರ ಬಡಾವಣೆಯವರು ಅನುಸರಿಸುವಂತಾಗಬೇಕು. ಯುವಕರು ಇಂಥ ಯೋಜನೆಯನ್ನು ಶುರು ಮಾಡಿದರೆ ಸಮಾಜಕ್ಕೆ ಉಪಯೋಗವಾಗುತ್ತದೆ. ಸ್ವಾವಲಂಬಿ ಬದುಕಿಗೆ ಈ ಕುಟೀರ ಉಪಯೋಗವಾಗುತ್ತದೆ’ ಎನ್ನುವ ಅಭಿಪ್ರಾಯ ಅವರದು.

‘ಸೌರಶಕ್ತಿಯೆಂದರೆ ಒಂಥರದಲ್ಲಿ ಸೂರ್ಯನಿಗೆ ಪ್ಲಗ್ ಹಾಕಿದ್ದಂತೆ. ಫ್ರಿಡ್ಜ್‌, ಮೊಬೈಲ್ ಚಾರ‍್ಜ್, ಬ್ಯಾಟರಿ, ಬಲ್ಬ್ ಎಲ್ಲವೂ ಇಲ್ಲಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಿ. ಇಂಥ ಸೌರಶಕ್ತಿ ಕುಟೀರಗಳು ನಮ್ಮ ನಗರದಲ್ಲಿ ನೂರಾರು ಬರಲಿ’ ಎನ್ನುತ್ತಾರೆ ಬೆಂಗಳೂರು ಫೌಂಡೇಶನ್‍ನ ಸಿಇಒ ಶ್ರೀಧರ್ ಪಬ್ಬಿಶೆಟ್ಟಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.