ADVERTISEMENT

ಕರುಳ ಭಾಷೆಯೇ ಕೊರಳ ಭಾಷೆಯಾದಾಗ...

ಪ್ರಕಾಶ್ ರೈ
Published 3 ನವೆಂಬರ್ 2018, 20:09 IST
Last Updated 3 ನವೆಂಬರ್ 2018, 20:09 IST
325
325   

ನೀನು ನಂಗೆ ಭಾಷೆ ಕೊಡು!

ಹಾಗಂತ ಚಿಕ್ಕವರಿದ್ದಾಗ ಹೇಳಿದ್ದು ನಿಮಗೂ ನೆನಪಿರಬಹುದು. ‘ಭಾಷೆ ಕೊಡು’ ಅಂದರೆ ಪ್ರಮಾಣ ಮಾಡು, ಮಾತು ಕೊಡು ಅಂತ ಅರ್ಥ. ಮಾತು ಕೊಡುವುದು ಅಂದರೆ ಭಾಷೆ ಕೊಡುವುದು. ಕೊಟ್ಟ ಭಾಷೆಗೆ ತಪ್ಪದೇ ಇರುವುದು.

ಎಷ್ಟು ಚೆನ್ನಾಗಿದೆ ನೋಡಿ ಕನ್ನಡ ಮಾತು. ಅದು ಪ್ರಮಾಣವಚನವನ್ನು ಭಾಷೆ ಅನ್ನುತ್ತದೆ. ಮಾತು ಅನ್ನುತ್ತದೆ. ಕನ್ನಡದಲ್ಲಿ ಆಡುವುದು ಬರೀ ಮಾತಲ್ಲವೇ ಅಲ್ಲ, ಅದು ಪ್ರಮಾಣ ವಚನವೇ. ಆಡಿದ ಮೇಲೆ ಮುಗಿಯಿತು. ಸಾಲ ಕೊಡುವವರು ಮತ್ತು ತೆಗೆದುಕೊಳ್ಳುವವರ ನಡುವೆ ಭಾಷೆಯ ಒಪ್ಪಂದ ಆಗುತ್ತಿತ್ತು. ಭಾಷೆಯನ್ನು ಧಿಕ್ಕರಿಸಿದರೆ ಅಂಥವನನ್ನು ಯಾರೂ ನಂಬುತ್ತಿರಲಿಲ್ಲ. ತಾನು ಕೊಟ್ಟ ಮಾತನ್ನು ಮುರಿಯಬಾರದು ಎಂಬ ಎಚ್ಚರ ಕೊಟ್ಟವನಿಗೂ ಇರುತ್ತಿತ್ತು. ಕೊಟ್ಟ ಭಾಷೆಗೆ ತಪ್ಪಿದರೆ ಅದು ಕೆಟ್ಟ ಯೋಚನೆ ಆಗುತ್ತಿತ್ತು.

ADVERTISEMENT

ಈ ರಾಜ್ಯೋತ್ಸವದ ದಿನ ಬ್ಯಾಂಕಾಕಿನಲ್ಲಿ ಕೂತು ಕನ್ನಡದ ಕುರಿತೇ ಯೋಚಿಸುತ್ತಿದ್ದಾಗ ಇವೆಲ್ಲ ನೆನಪಾದವು. ನನ್ನ ಮನಸ್ಸು ಹಿಂದೆಹಿಂದಕ್ಕೆ ಹೋಯಿತು.

ಬಹಳ ವರ್ಷಗಳ ಹಿಂದಿನ ಮಾತು. ನನ್ನ ಮಗಳಿಗೆ ಆಗ ಐದು ವರ್ಷ.

ಪರೀಕ್ಷೆ ಮುಗಿದು ಬೇಸಿಗೆ ರಜೆ ಬಂದಿತ್ತು. ತೋಟದ ಮನೆಯಲ್ಲಿ ಇದ್ದೆವು. ರಜೆಯ ಮಜ ಅನುಭವಿಸಲು ನಾನು ಅವಳು ತರಕಾರಿ ತರಲು ಹೊರಟೆವು. ಅದಕ್ಕೂ ಮುನ್ನ ನಮ್ಮಿಬ್ಬರ ನಡುವೆ ಒಂದು ಒಪ್ಪಂದವಾಗಿತ್ತು. ಅದೇನೆಂದರೆ, ತರಕಾರಿ ಮಾರುವವರೊಂದಿಗೆ ಅವಳೇ ಚೌಕಾಸಿ ಮಾಡಿ, ಬೆಲೆ ನಿಗದಿಪಡಿಸಿಕೊಳ್ಳಬೇಕು. ನಾನು ಯಾವುದಕ್ಕೂ ತಲೆ ಹಾಕಬಾರದು ಅಂತ. ಅದು ಮಹಾಬಲಿಪುರಂ ಎಂಬ ಸಣ್ಣ ಊರಿನ, ರಸ್ತೆ ಬದಿಗಿನ ತರಕಾರಿ ಅಂಗಡಿ. ಮಗಳು ಹೋಗಿ ಅಂಗಡಿಯಲ್ಲಿದ್ದ ಮುದುಕಿಯ ಮುಂದೆ ನಿಂತು- ಮೆಣಸಿನ ಕಾಯಿಗೆ ಚಿಲ್ಲಿ, ಬದನೇಕಾಯಿಗೆ ಬ್ರಿಂಜಾಲ್, ಆಲೂಗಡ್ಡೆಗೆ ಪೊಟ್ಯಾಟೊ ಎಂದು ಎಲ್ಲಾ ತರಕಾರಿಗಳನ್ನು ಇಂಗ್ಲಿಷ್‌ನಲ್ಲಿ ಹೆಸರಿಸಿ ಕೇಳುತ್ತಿದ್ದಾಳೆ. ಅಂಗಡಿಯ ಮುದುಕಿಗೆ ಅರ್ಥವಾಗುತ್ತಿಲ್ಲ. ಕೊನೆಗೆ ಒಂದೊಂದು ತರಕಾರಿಯನ್ನು ಕೈಯಿಂದ ಮುಟ್ಟಿ, ಮುಟ್ಟಿ ಆಕೆಗೆ ತೋರಿಸಿ ಇದು ಬೇಕು ಅಂತ ಕೊಂಡುಕೊಂಡಳು.

ಪಕ್ಕದಲ್ಲಿ ನಿಂತು ನೋಡುತ್ತಿದ್ದ ನನ್ನ ಒಳಗೆ ಕೋಪ ಕುದಿಯುತ್ತಿದೆ. ಜೊತೆಗೆ ಹೇಳಿಕೊಳ್ಳಲಾಗದ ವೇದನೆಯೂ ಆಗುತ್ತಿದೆ. ನನ್ನ ಮಗಳು ಮಾತೃಭಾಷೆಯನ್ನು ಸರಿಯಾಗಿ ಕಲಿಯದಿದ್ದರೆ ಇನ್ನೇನಾಗುತ್ತೆ ಹೇಳಿ? ಮನೆಗೆ ಬಂದರೆ ನನಗೂ, ನನ್ನ ಹೆಂಡತಿಗೂ ಜೋರು ಜಗಳ. ಕಾರಣ, ನನ್ನ ಮಗಳನ್ನು ಶಾಲೆಗೆ ಸೇರಿಸುವಾಗ, ಮಾತೃಭಾಷೆಗೆ ಪ್ರಾಮುಖ್ಯತೆ ಕೊಡದೆ ಹಿಂದಿ, ಫ್ರೆಂಚ್‌ನಂಥ ಅನ್ಯಭಾಷೆಗಳನ್ನು ಕಲಿತರೆ ಭಾವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ಯೋಚಿಸಿದವಳು ಅವಳು. ಮಾತೃಭಾಷೆಯನ್ನು ಕಡ್ಡಾಯವಾಗಿ ಕಲಿಯಲೇಬೇಕು ಎಂದು ಆಗಲೇ ಹಟಕ್ಕೆ ಬಿದ್ದವನು ನಾನು.

ನನ್ನ ಮಾತೃಭಾಷೆ ಕನ್ನಡ. ಅದನ್ನು ಕಲಿಯಲೇಬೇಕು ಅನ್ನೋ ಪ್ರಶ್ನೆ ನನ್ನ ಜೀವನದಲ್ಲಿ ಬರಲೇ ಇಲ್ಲ. ಅಂಬೆಗಾಲಿಡುತ್ತಾ ನಡೆಯುವಂತೆ ಸರಳವಾಗಿ, ಸಹಜವಾಗಿ ಕಲಿತುಬಿಟ್ಟೆ.

ಈಗ ಕನ್ನಡ, ತಮಿಳು, ಮಲೆಯಾಳಂ, ಇಂಗ್ಲಿಷ್‌, ಹಿಂದಿಯಂಥ ಹಲವು ಭಾಷೆಗಳು ನನ್ನೊಳಗೆ ಮನೆಮಾಡಿವೆ. ಮಾತೃಭಾಷೆ ಕನ್ನಡವನ್ನು ಹೊರತುಪಡಿಸಿ, ಮಿಕ್ಕೆಲ್ಲಾ ಭಾಷೆಗಳನ್ನು ನನ್ನ ಅವಶ್ಯಕತೆಗಾಗಿ, ವೃತ್ತಿಗಾಗಿ ಕಲಿತದ್ದು. ಸ್ಪಷ್ಟವಾಗಿ ನನ್ನ ಮಾತೃಭಾಷೆಯನ್ನು ಬರೆಯಲು, ಓದಲು ಗೊತ್ತು. ನನ್ನ ಭಾಷೆಯ ಶ್ರೇಷ್ಠ ಸಾಹಿತಿಗಳನ್ನು, ಅವರ ರಚಿಸಿದ ಸಾಹಿತ್ಯವನ್ನು ಓದಿದ್ದೇನೆ. ಆ ಚಿಂತಕರು ನನ್ನನ್ನು ಶಿಲ್ಪಿಗಳಂತೆ ಕೆತ್ತಿದ್ದಾರೆ. ನಾನು ಉಸಿರಾಡುವ ಗಾಳಿಯಂತೆ, ಉಣ್ಣುವ ಊಟದಂತೆ, ನನ್ನ ತಾಯಿ ಹೇಳುವ ಕಥೆಗಳನ್ನು ಕೇಳಿ, ಕೇಳಿ ಎಣಿಸಿಟ್ಟ ನಕ್ಷತ್ರಗಳಂತೆ, ನನ್ನ ನರನಾಡಿಗಳಲ್ಲಿ ಹರಿಯುವ ರಕ್ತದಂತೆ, ಕನ್ನಡ ಭಾಷೆಯೂ ನನ್ನೊಳಗೆ ಪ್ರವಹಿಸುತ್ತಿದೆ. ನನ್ನ ಮಾತೃಭಾಷೆಯನ್ನು ಚೆನ್ನಾಗಿ ಕಲಿತಿದ್ದರಿಂದಲೇ ಬೇರೆ ಭಾಷೆಗಳನ್ನು ತುಂಬಾ ಸರಳವಾಗಿ ಕಲಿಯಲು ಸಾಧ್ಯವಾದದ್ದು.

ನನ್ನ ಮಾತೃಭಾಷೆ ಕನ್ನಡ. ನನ್ನ ಮಗಳ ಮಾತೃಭಾಷೆ ತಮಿಳು. ಏಕೆಂದರೆ, ಅವಳ ತಾಯಿ ತಮಿಳು, ಅವಳು ಹುಟ್ಟಿ ಬೆಳೆದ ಪರಿಸರವೂ ತಮಿಳು. ಒಂದು ಮಾತೃಭಾಷೆಯು ಸ್ಫುರಿಸುವ ಸಿಹಿಯ ರುಚಿ ನನ್ನ ಮಗಳಿಗೆ ತಿಳಿದಿಲ್ಲವೆನ್ನುವುದು ಆವತ್ತು ನನ್ನ ಆತಂಕ, ಕೋಪಕ್ಕೆ ಕಾರಣವಾಗಿತ್ತು.

ಕೇವಲ ಸಂವಹನಕ್ಕಷ್ಟೇ ಭಾಷೆ ಎಂದು ಇಂದಿನ ತಲೆಮಾರು ಯೋಚಿಸಲಾರಂಭಿಸಿದೆ. ಅದನ್ನು ಮೀರಿ ಒಂದು ಭಾಷೆಯ ಮಹತ್ವ ಅರ್ಥವಾಗುತ್ತಿಲ್ಲ. ನನ್ನ ಪ್ರಕಾರ ಭಾಷೆ ಎನ್ನುವುದು ನಮ್ಮ ಅಭಿವ್ಯಕ್ತಿಯ ರೂಪ, ಸುಖ- ದುಃಖಗಳನ್ನು ವ್ಯಕ್ತಪಡಿಸುವ ವಾಹಿನಿ. ನಾವು ಬದುಕುವ ಪ್ರದೇಶದಲ್ಲಿ, ನಮ್ಮ ಸುತ್ತ ಇರುವ ಜನ ಯಾವ ಭಾಷೆಯನ್ನು ಮಾತನಾಡುತ್ತಾರೋ, ಅದನ್ನು ಶುದ್ಧವಾಗಿ ಮಾತನಾಡುವುದೇ ನಾವು ಅವರಿಗೆ ಕೊಡುವ ಮರ್ಯಾದೆ. ನಾನು ನಿಮ್ಮ ಹಾಗಿಲ್ಲ, ಡಿಫರೆಂಟ್ ಅಂತ ತೋರಿಸಿಕೊಳ್ಳಲು ಮಾತನಾಡುವುದು ನಮ್ಮೊಳಗಿನ ಅನಾಗರಿಕತೆಯ ಕುರುಹು.

ಒಮ್ಮೆ ಸಾಫ್ಟ್‌ವೇರ್ ಕಂಪನಿಯ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದೆ. ನೂರಾರು ಯುವಕ, ಯುವತಿಯರೊಂದಿಗೆ ಸಂವಾದ ನಡೆಸುವ ಅವಕಾಶ ದೊರೆತಿತ್ತು. ಅಲ್ಲಿ ಸೇರಿದ್ದವರು ವಿದ್ಯಾವಂತರು, ದೊಡ್ಡ ಸಂಬಳ ತೆಗೆದುಕೊಳ್ಳುವವರು. ಎಲ್ಲರೂ ಸ್ಟೆಬಲ್‌ ಆಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು.

ಒಬ್ಬ ಯುವಕನನ್ನು ‘ನಿಮ್ಮೂರು ಯಾವುದಪ್ಪಾ’ ಅಂತ ಕೇಳಿದೆ? ‘ಚಿಕ್ಕಮಗಳೂರು ಹತ್ತಿರದ ಗ್ರಾಮ’ ಅಂದ ಅವ. ‘ಮತ್ಯಾಕಪ್ಪಾ, ಕನ್ನಡ ಮಾತಾಡೋದಿಲ್ಲ’ ಅಂದೆ. ಸಾರ್, ಇಂಗ್ಲಿಷ್‌ ಮೀಡಿಯಂನಲ್ಲಿ ಓದಿದ್ದು, ಅದಕ್ಕೆ ಕನ್ನಡ ಸರಿಯಾಗಿ ಬರೋಲ್ಲ’ ಅಂದುಬಿಟ್ಟ.

ಅವನ ಮಾತಿಗೆ ನಗು, ಕೋಪ ಒಟ್ಟಿಗೆ ಒತ್ತರಿಸಿ ಬಂತು.

ಈ ಹುಡುಗನ ಅಂದಿನ ಉತ್ತರ ಮುಂದಿನ ಜನಾಂಗದ ಎಲ್ಲರ ಉತ್ತರವೂ ಆದರೆ ಆಶ್ಚರ್ಯವಿಲ್ಲ. ನಗರಕೇಂದ್ರಿತ ಶಾಲೆಗಳಲ್ಲಿ ಮಾತೃಭಾಷೆಯ ಕೈ ಕಾಲುಗಳನ್ನು ಕಟ್ಟಿ ಮೂಲೆಯಲ್ಲಿ ಕೂಡಿಸಿದ್ದಾರೆ. ಮನೆಯಲ್ಲೂ ಅದೇ ಗತಿ. ಭವಿಷ್ಯದ ಭಯದ ಅವಸರದಲ್ಲಿ ನಮ್ಮ ಭಾಷೆ ಮನಸ್ಸಿನಿಂದ ಅಳಿಸಿಹೋಗುತ್ತಿದೆ. ಮಾತೃಭಾಷೆಯನ್ನೇ ಕಲಿಯದ ನಮ್ಮ ಮಕ್ಕಳು ನಮ್ಮೊಂದಿಗಿದ್ದರೂ ಪರಕೀಯರಲ್ಲವೇ?

ಮನುಷ್ಯ ಜೀವನದ ಅನಿವಾರ್ಯ, ಅವಶ್ಯಕತೆಗೆ ಎಷ್ಟು ಭಾಷೆಗಳನ್ನಾದರೂ ಕಲಿಯಬಹುದು. ಹಾಗೇ, ಇಂಗ್ಲಿಷ್‌ನಲ್ಲಿ ಮಾತಾಡೋದು, ಬರೆಯೋದನ್ನು ಕಲಿಯೋದು ಸಂತೋಷದ ವಿಷಯವೇ. ಆದರೆ ಇಂಗ್ಲಿಷ್‌ ಗೊತ್ತಿಲ್ಲ ಅನ್ನೋದೇ ತಪ್ಪೆಂದು, ಬದುಕಿನ ದೊಡ್ಡ ದುರಂತವೆಂದು ಭಾವಿಸೋದು ಇದೆಯಲ್ಲಾ, ಇದು ಎಷ್ಟು ಸರಿ? ‘ಅಯ್ಯೊ ನನಗೆ ಇಂಗ್ಲಿಷ್‌ ಗೊತ್ತೇ ಇಲ್ಲ’ ಅಂತ ಒಂದು ನಾಡೇ ಕೀಳರಿಮೆಯಿಂದ ಅಲೆಯೋದು ದುರಂತವಲ್ಲವೇ? ಇದು ಬಿಡಿ, ಇಂಗ್ಲಿಷ್‌ನಲ್ಲಿ ಬೀಗ್ತಾರಲ್ಲಾ, ಅವರಾದರೂ ಆ ಭಾಷೆಯನ್ನು ಸರಿಯಾಗಿ ಕಲಿತು ಮಾತನಾಡುತ್ತಿದ್ದಾರೆಯೇ, ಅದೂ ಇಲ್ಲ. ಶೇಕ್ಸ್‌ಪಿಯರ್, ವರ್ಡ್ಸ್‌ವರ್ಥ್, ಯೇಟ್ಸ್, ಹೆಮಿಂಗ್‌ವೇ, ಮಿಲ್ಟನ್ ಹೀಗೆ ಇಂಗ್ಲಿಷ್‌ನ ಯಾವ ಚಿಂತಕರ ಬಗ್ಗೆಯೂ ತಿಳಿದಿರೋದಿಲ್ಲ. ಆಂಗ್ಲ ಭಾಷೆಯ ಸೌಂದರ್ಯವನ್ನು, ಲಾಲಿತ್ಯವನ್ನು, ಸಾಹಿತ್ಯವನ್ನು, ಚಿಂತನೆಯನ್ನು ಹೀಗೆ ಯಾವುದನ್ನೂ ಅರಿಯದೆ, ಕೇವಲ ವ್ಯಾಪಾರದ ಅವಶ್ಯಕತೆಗೆ ಬೇಕಾದ ಕೆಲವು ಪದಗಳನ್ನು ಮಾತ್ರ ತಿಳಿದುಕೊಂಡು, ಇಂಗ್ಲಿಷ್‌ ನನಗೆ ಚೆನ್ನಾಗಿ ಗೊತ್ತು ಅಂದರೆ ಹೇಗೆ, ಹೇಗೆ ಒಪ್ಪಿಕೊಳ್ಳೋದು?

ಭಾಷೆ ಅನ್ನೋದು ಕೇವಲ ಪದಬಂಧ ಎಂದು ಅರ್ಥ ಮಾಡಿಕೊಂಡಿರುವವರಿಗೆ ಜೀವನವೇ ಗೊತ್ತಿಲ್ಲವೆಂದು ಅರ್ಥ. ಬದುಕಲೂ ತಿಳಿದಿಲ್ಲ ಅಂತ ಅರ್ಥ. ಹೀಗಾಗಿಯೇ ನಮ್ಮ ಇಂದಿನತಲೆಮಾರಿಗೆ ಶೇಕ್ಸ್‌ಪಿಯರ್‌ನ ಇಂಗ್ಲಿಷ್‌ನಲ್ಲಿರುವ ಸೌಂದರ್ಯವೂ ಅರ್ಥವಾಗೋದಿಲ್ಲ, ಡೊನಾಲ್ಡ್ ಟ್ರಂಪ್ ಇಂಗ್ಲಿಷ್‌ನ ಹಿಂದಿರುವ ಕ್ರೌರ್ಯವೂ ಗೊತ್ತಾಗೋದಿಲ್ಲ. ಭಾಷೆ ಮನುಷ್ಯರ ಬದುಕನ್ನೂ, ಅವನ ಗ್ರಹಿಕೆಯನ್ನೂ ಹಾಗೇ ಪ್ರತಿಫಲಿಸುತ್ತದೆ.

ತೆಲುಗು ರಾಜ್ಯದ ಬರಗಾಲ ಪೀಡಿತ ರಾಯಲಸೀಮೆಯ ಜನ ಯಾರಾದರು ತಪ್ಪು ಮಾಡಿದರೆ- ‘ನೀನು ಮಾಡಿದ ಪಾಪಗಳೆಲ್ಲಾ ಜೀರ್ಣಿಸಿಕೊಳ್ಳಲಾಗದೆ, ಹೊಟ್ಟೆ ಒಡೆದು ಸಾಯ್ತೀಯ ನೋಡು’ ಅಂತ ಕಠೋರವಾಗಿ ಬೈಯ್ತಾರೆ. ಅದೇ ಗೋದಾವರಿ, ಕೃಷ್ಣಾ ನದಿ ತೀರದ ಜನ- ‘ನೀನು ಮಾಡಿದ ಪಾಪಗಳೆಲ್ಲಾ ಮುಂದೊಂದು ದಿನ ಹಣ್ಣಾಗಿ ಬೀಳ್ತವೆ ನೋಡು’ ಅಂತ ಹಣ್ಣುಗಳನ್ನು ರೂಪಕವಾಗಿ ಬಳಸಿ ನಯವಾಗಿ ಬಯ್ಯುತ್ತಾರೆ. ಏಕೆಂದರೆ, ಸಮೃದ್ಧ ಮರಗಳಿರುವ ಪ್ರದೇಶ ಅದು. ಅವರಾಡುವ ಮಾತುಗಳಲ್ಲಿ ಅಲ್ಲಿನ ಜನರ ಬದುಕನ್ನು, ಪ್ರಾದೇಶಿಕ ಸಮೃದ್ಧಿಯನ್ನು ನೋಡಬಹುದು. ಆದ್ದರಿಂದಲೇ ಒಂದು ಭಾಷೆಯನ್ನು ಕಲಿಯುವುದು ಎಂದರೆ ಆ ಮುಖೇನ ಆ ಜನರ ಸಂಸ್ಕೃತಿಯನ್ನೂ ಅರಿತುಕೊಳ್ಳೋದು ಎಂದರ್ಥ.

ಬಸವಣ್ಣ, ಬೇಂದ್ರೆ, ಕುವೆಂಪು, ತೇಜಸ್ವಿ, ಲಂಕೇಶ್, ಕೆಎಸ್‌ನ ಇಂಥವರ ವಿಚಾರಧಾರೆ ಅರಿಯದೇ ಕನ್ನಡವನ್ನು ಕಲಿತಿದ್ದೇನೆ ಅಂತ ಹೇಳೋದಕ್ಕೆ ಆಗದು. ಒಂದು ನಾಡಿನ ವಿಚಾರಧಾರೆಯನ್ನು, ಬದುಕನ್ನು ದಾಖಲಿಸಿದ ಹಲವು ಬರಹಗಾರರನ್ನು ಅರಿಯದೇ ಕೇವಲ ವ್ಯಾಪಾರಕ್ಕೆ ಮಾತ್ರ ಭಾಷೆಯನ್ನು ಕಲಿಯುವ ಮನಃಸ್ಥಿತಿ ಇರುವುದರಿಂದಲೇ, ನಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ನಿಂತಿದ್ದೇವೆ. ಇಂಗ್ಲಿಷ್‌ ಭಾಷೆಯನ್ನು ಗುರಾಣಿಯನ್ನಾಗಿ ಮಾಡಿಕೊಂಡು, ಆ ಭಾಷೆ ತಿಳಿಯದೇ ಇದ್ದರೆ ಬದುಕಿರುವುದೇ ದಂಡ ಅಂತ ಹೆದರಿಸುತ್ತಿದ್ದೇವೆ.

ಬ್ರಿಟಿಷರು ನಮ್ಮ ನಾಡಿನ ಮೇಲೆ ಆಧಿಪತ್ಯ ಸ್ಥಾಪಿಸುವುದಕ್ಕೆ ಬಳಸಿದ ಆಯುಧ ಅಂದರೆ ಅವರ ಭಾಷೆ. ಮನುಷ್ಯ ಯಾವ ಭಾಷೆ ಮಾತಾಡ್ತಾನೋ ಆ ನಾಡಿನವನು ಆಗಿಬಿಡ್ತಾನೆ ಅನ್ನೋ ಸತ್ಯ ಅವರು ಚೆನ್ನಾಗಿ ತಿಳಿದುಕೊಂಡಿದ್ದರು. ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ಮಾವ, ಅತ್ತೆ ಹೀಗೆ ಕೂಡುಕುಟುಂಬದಲ್ಲಿ ಬದುಕುವ ನಮ್ಮ ಸಂಸ್ಕೃತಿಯಲ್ಲಿ ಸಂಬಂಧಗಳಿಗೆ ಸುಂದರ ಹೆಸರುಗಳಿವೆ. ಆದರೆ ಕೂಡು ಕುಟುಂಬದ ಸಂಸ್ಕೃತಿ ಇಲ್ಲದ ಭಾಷೆಯನ್ನು ಯಾವ ಪ್ರಶ್ನೆಯೂ ಕೇಳದೆ ನಮ್ಮ ಮನೆಯೊಳಗೆ ಬಿಟ್ಟುಕೊಂಡಿದ್ದರಿಂದಲೇ, ನಮ್ಮ ಎಲ್ಲಾ ಸಂಬಂಧಗಳು ಅಂಕಲ್, ಆಂಟಿ ಆಗಿಬಿಟ್ಟಿವೆ.

ಸಂಬಂಧಗಳ ಹೆಸರುಗಳನ್ನು ಕಳೆದುಕೊಳ್ಳೋದು, ಸಂಬಂಧಗಳನ್ನೇ ಕಳಚಿಕೊಂಡಂತೆ ಅಲ್ಲವೇ? ಇಂಗ್ಲೆಂಡ್‌ನಲ್ಲಿ ಹುಟ್ಟಿ ಬಿಸಿಲನ್ನು ನೋಡದ ಮಕ್ಕಳು ‘ರೈನ್, ರೈನ್ ಗೋ ಅವೇ’ ಅಂತ ಹಾಡಿದರೆ ಅದರಲ್ಲಿ ಅರ್ಥವಿದೆ. ಆದರೆ ಮಳೆ ಇಲ್ಲದೆ ಕೆರೆ, ನದಿಗಳು ಬತ್ತಿಹೋಗುತ್ತಿರುವ ನಮ್ಮ ಭಾಮಿಯ ಮಕ್ಕಳು ರೈನ್ ರೈನ್ ಗೋ ಅವೇ ಅಂತ ಹಾಡಬಹುದೇ? ಅವರ ಹಾಡಬೇಕಾದದ್ದು ‘ಎಲ್ಲಿ
ಹೋಗುವಿರಿ ನಿಲ್ಲಿ ಮೋಡಗಳೇ, ನಾಲ್ಕು ಹನಿಯ ಚೆಲ್ಲಿ’ ಅಂತ ತಾನೇ?

ಜೀವನದಲ್ಲಿ ಕೆಲವೊಂದನ್ನು ಯಾವ ಕಾರಣಕ್ಕೂ ಬದಲಿಸಲಾಗದು. ನಾನು ಹುಟ್ಟಿದ ಜಾತಿಗೂ, ನನಗೂ ಸಂಬಂಧವಿಲ್ಲ, ಅದು ನನ್ನಮೇಲೆ ವೃಥಾ ಹೇರಲ್ಪಟ್ಟಿದೆ ಎಂದು ಅದನ್ನು ಬದಲಾಯಿಸಬಹುದು. ನನ್ನ ಮತ ನನಗೆ ಹಿಡಿಸಲಿಲ್ಲ ಅಂತ ಇನ್ನೊಂದು ಮತವನ್ನು ಆರಿಸಿಕೊಳ್ಳಬಹುದು. ಆದರೆ ಯಾರಿಗೂ ಅವರವರ ಮಾತೃಭಾಷೆಯನ್ನು ಬದಲಾಯಿಸಿಕೊಳ್ಳಲು ಆಗೋದಿಲ್ಲ. ಹಾಗೇನಾದರೂ ಮಾಡಿದರೆ ಹೆತ್ತ ತಾಯಿಯನ್ನೇ ಬದಲಿಸಿಕೊಂಡಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.