ADVERTISEMENT

ಬೆರಗಿನ ಬೆಳಕು: ಕವಿ-ನಾಯಕ

ಡಾ. ಗುರುರಾಜ ಕರಜಗಿ
Published 10 ಅಕ್ಟೋಬರ್ 2021, 19:31 IST
Last Updated 10 ಅಕ್ಟೋಬರ್ 2021, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಪಾರಿಜಾತವ ಕಂಡು ನಿಡುಸುಯ್ದು, ಪದಗಳಿಂ|
ಶೌರಿಕಥೆಯನು ಹೆಣೆದು ತೃಪ್ತನಹನು ಕವಿ||
ಊರಿನುದ್ದಾನಕದ ತರಿಸಿ ಬೆಳೆಸುವ ಕಾರ್ಯ -|
ಧೀರನಲ ರಾಜ್ಯಕನು – ಮಂಕುತಿಮ್ಮ ||473||

ಪದ-ಅರ್ಥ: ನಿಡುಸುಯ್ದು= ನಿಟ್ಟುಸಿರುಬಿಟ್ಟು, ಶೌರಿಕಥೆ= ಕೃಷ್ಣನ ಕಥೆ, ಊರಿನುದ್ಯಾನಕದ= ಊರಿನ+ ಉದ್ಯಾನಕೆ+ ಅದ, ರಾಜ್ಯಕ= ರಾಜ್ಯದ ಆಡಳಿತ ನಡೆಸುವವನು.

ವಾಚ್ಯಾರ್ಥ: ಪಾರಿಜಾತ ಹೂವನ್ನು ಕಂಡು, ನಿಟ್ಟುಸಿರುಬಿಟ್ಟು ಕೃಷ್ಣನ ಕಥೆಯನ್ನು ಸುಂದರವಾಗಿ ಬರೆದು ತೃಪ್ತಿಪಡುವನು ಕವಿ. ಆದರೆ ಪಾರಿಜಾತವನ್ನು ಕಂಡು ಅದರ ಸಸಿಯನ್ನು ಊರಿನ ಉದ್ಯಾನಕ್ಕೆ ತರಿಸಿ, ಬೆಳೆಸಿ ಎಲ್ಲರಿಗೆ ದೊರಕುವಂತೆ ಮಾಡುವವನು ಧೀರ ರಾಜ್ಯದ ಆಡಳಿತಗಾರ.

ADVERTISEMENT

ವಿವರಣೆ: ಕಾವ್ಯ ಸೃಷ್ಟಿಗೆ ಒಂದು ಪ್ರೇರಣೆ ಇದ್ದೇ ಇರುತ್ತದೆ. ದೇಶಕಾಲದಲ್ಲಿ ನಡೆಯುವ ಘಟನೆಗಳು, ವಿಷಯಗಳು ಕಾವ್ಯದ ಮೂಲಸಾಮಗ್ರಿಗಳಾಗುತ್ತವೆ. ಆಗ ಕವಿ, ಸಂವೇದನೆಯ ಕೇಂದ್ರದಲ್ಲಿ ತನ್ನನ್ನು ಕಲ್ಪಿಸಿಕೊಂಡು ಆ ಘಟನೆಗಳಿಗೆ ಅಕ್ಷರವಾಗುವ ಸಾಮರ್ಥ್ಯವನ್ನು ಪಡೆಯುತ್ತಾನೆ. ಅವನ ಕಾವ್ಯದ ಜೀವಾಳವೆಂದರೆ ಸೌಂದರ್ಯ. ಕಾವ್ಯಸತ್ಯ ವಾಸ್ತವ ಸತ್ಯವಲ್ಲ ಅದು ಕಲ್ಪನಾ ಸತ್ಯ. ಶಬ್ದದ ಶೃವ್ಯ ಹಾಗೂ ಅರ್ಥಬೋಧಕ ಅಂಶಗಳಲ್ಲಿ ಸೌಂದರ್ಯವನ್ನು ಸಾಧಿಸುವುದು ಅವನ ಗುರಿ. ಕಗ್ಗ ಈ ಚೌಪದಿಯ ಮೊದಲ ಎರಡು ಸಾಲುಗಳಲ್ಲಿ ಕವಿ ಮಾಡಬಹುದಾದದ್ದನ್ನು ಹೇಳುತ್ತದೆ. ಕವಿಯ ಕಣ್ಣಿಗೆ ಸುಂದರವಾದ ಪಾರಿಜಾತದ ಹೂವು ಕಣ್ಣಿಗೆ ಬಿತ್ತು. ಆತ ಪಾರಿಜಾತದ ಮರವನ್ನು ತರುವ, ಬೆಳೆಸುವ ವಿಚಾರ ಮಾಡಲಾರ. ತನ್ನ ಅಸಹಾಯಕತೆಗೆ ಬಿಸುಸುಯ್ದು, ತನಗೆ ಸಿದ್ಧವಾದ ಶಕ್ತಿಯಿಂದ ಕಾವ್ಯವನ್ನು ಬರೆಯಲು ತೊಡಗುತ್ತಾನೆ. ಕೃಷ್ಣನ ಜೀವನದಲ್ಲಿ ಬರುವ ಪಾರಿಜಾತದ ಹೂವಿನ ಕಥೆಯನ್ನು ಬಳಸಿಕೊಂಡು ಅತ್ಯಂತ ಸುಂದರವಾದ ಕಾವ್ಯವನ್ನು ಬರೆದು ತೃಪ್ತನಾಗುತ್ತಾನೆ. ಆದರೆ ಅದೇ ಪಾರಿಜಾತ ಪುಷ್ಪವನ್ನು ಒಬ್ಬ ಸಮರ್ಥ ಆಡಳಿತಗಾರ ನೋಡಿದರೆ ಏನಾಗಬಹುದು? ಆತ ತನ್ನೂರಿನ ಜನಕ್ಕೆ ಆ ಸುಂದರ ಹೂವು ದೊರಕಲೆಂದು ಯೋಜಿಸಿ, ಪಾರಿಜಾತ ಗಿಡದ ಸಸಿಯನ್ನು ತರಿಸಿ, ಉದ್ಯಾನದಲ್ಲಿ ನೆಡಸಿ, ಬೆಳಸಿ ಪೋಷಿಸುತ್ತಾನೆ. ನಗರದ ಜನಕ್ಕೆಲ್ಲ ಪಾರಿಜಾತದ ಹೂವುಗಳು ದೊರೆಯುವಂತೆ ನೋಡಿಕೊಳ್ಳುತ್ತಾನೆ. ಕೆಲವರು ಕಾವ್ಯವನ್ನೋದಿದರೆ ಪಾರಿಜಾತದ ಹೂವು ದೊರಕಿದಂತಾಯಿತೇ? ಆದ್ದರಿಂದ ರಾಜ್ಯಕನ ಕಾರ್ಯ ದೊಡ್ಡದು ಎನ್ನಬಹುದು. ಮತ್ತೆ ಕೆಲವರು ರಾಜ್ಯಕ ಹಾಕಿಸಿದ ಗಿಡ ಬದುಕುವುದು ಕೆಲಕಾಲ ಮಾತ್ರ ಆದರೆ ಕವಿಯ ಕಾವ್ಯ ಶಾಶ್ವತವಾದದ್ದು ಎನ್ನಬಹುದು. ಇಬ್ಬರ ಕಾರ್ಯಗಳೂ ಶ್ರೇಷ್ಠವಾದವುಗಳೇ. ಶ್ರೀರಾಮ ತುಂಬ ದೊಡ್ಡವನೇ, ಕೃಷ್ಣನೂ ದೊಡ್ಡವನು. ಆದರೆ ವಾಲ್ಮೀಕಿ ರಾಮಾಯಣವನ್ನು ಬರೆಯದಿದ್ದರೆ, ವ್ಯಾಸರು ಮಹಾಭಾರತ, ಭಾಗವತಗಳನ್ನು ಬರೆಯದಿದ್ದರೆ ಅವರ ಮಹಿಮೆ ಜಗತ್ತಿಗೆ ಹೇಗೆ ತಿಳಿಯುತ್ತಿತ್ತು? ಕವಿಗೆ ನಾಯಕನ ಪ್ರೇರಣೆ ಮತ್ತು ನಾಯಕನಿಗೆ ಕವಿಯಿಂದ ಶಾಶ್ವತತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.