ADVERTISEMENT

ಬೆರಗಿನ ಬೆಳಕು: ಮಾಂಗಲೀಕ ಆನೆಯ ದಾನ

ಡಾ. ಗುರುರಾಜ ಕರಜಗಿ
Published 13 ಜೂನ್ 2021, 19:31 IST
Last Updated 13 ಜೂನ್ 2021, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ರಾಜ ಏನು ಬೇಕೋ ಬೇಡಿ ಎಂದು ಕೇಳಿದಾಗ ಒಬ್ಬ ಬ್ರಾಹ್ಮಣ ಮುಂದೆ ಬಂದು ಹೇಳಿದ, ‘ಮಹಾರಾಜಾ, ನಾವು ಕಲಿಂಗದೇಶದ ಪ್ರಜೆಗಳು. ನಮ್ಮ ದೇಶದಲ್ಲಿ ಕಲ್ಪನಾತೀತವಾದ ಬರಗಾಲ ಬಂದಿದೆ. ಬದುಕು ಅಸಹನೀಯವಾಗಿದೆ. ನಮ್ಮ ರಾಜ ಏನೆಲ್ಲ ಧಾರ್ಮಿಕ ಕಾರ್ಯಗಳನ್ನು ಮಾಡಿದರೂ ಮಳೆಯಾಗಲಿಲ್ಲ. ನಮಗೆ ಜ್ಞಾನಿಗಳು ಹೇಳಿದಂತೆ ತಾವು ಎಲ್ಲಿ ಕಾಲಿಡುತ್ತೀರೋ ಅಲ್ಲಿ
ಸಮೃದ್ಧತೆ ಬರುತ್ತದೆ. ತಾವು ಬರುವುದಾಗದಿದ್ದರೆ ತಮ್ಮ ಮಾಂಗಲೀಕ ಆನೆ ಬಂದರೂ ಮಳೆ ಬಂದು ದೇಶ ಸುಭಿಕ್ಷವಾಗುತ್ತದಂತೆ. ಅದಕ್ಕಾಗಿ ತಮ್ಮ ಆನೆಯನ್ನು ದಾನವಾಗಿ ಕೇಳಲು ಬಂದಿದ್ದೇವೆ’. ಒಂದು ಕ್ಷಣ ಬೋಧಿಸತ್ವ ವೆಸ್ಸಂತರ ಕಣ್ಣುಮುಚ್ಚಿ ಚಿಂತಿಸಿದ. ತಾನು ತನ್ನ ಹೃದಯವನ್ನೇ, ಇಡೀ ದೇಹವನ್ನೇ ಬೇಡಿದವರಿಗೆ ಕೊಡುತ್ತೇನೆಂದು ಮಹಾಪ್ರತಿಜ್ಞೆ ಮಾಡಿದವನು. ಇವರು ಕೇವಲ ಬಾಹ್ಯವಸ್ತುವನ್ನು ಕೇಳುತ್ತಿದ್ದಾರೆ. ಅವರ ಅಪೇಕ್ಷೆಯನ್ನು ಪೂರೈಸುತ್ತೇನೆ. ನಂತರ ಅವರಿಗೆ ವಚನವನ್ನು ನೀಡಿದ. ‘ನಾನು ಈಗ ಸವಾರಿಮಾಡುತ್ತಿರುವ ಅಪರೂಪದ ಮಾಂಗಲೀಕ ಆನೆಯನ್ನು ಇವರಿಗೆ ಕೊಟ್ಟುಬಿಡುತ್ತಿದ್ದೇನೆ. ಇದು ಅತ್ಯಂತ ಶ್ರೇಷ್ಠವಾದ ಆನೆ. ಅದರ ನಾಲ್ಕು ಕಾಲುಗಳಲ್ಲಿ ನಾಲ್ಕು ಲಕ್ಷ ಬೆಲೆಬಾಳುವ ಆಭರಣಗಳಿವೆ. ಹೊಟ್ಟೆಯ ಕೆಳಗಿನ ರತ್ನಗಂಬಳಿಗೆ ಒಂದು ಲಕ್ಷ, ಆನೆಯ ಬೆನ್ನಿನ ಮೇಲೆ ಹರಡಿರುವ ಮುತ್ತು, ಮಣಿ ಹಾಗೂ ಚಿನ್ನದ ಜಾಲದ ಬೆಲೆ ಪ್ರತಿಯೊಂದಕ್ಕೆ ಮೂರು ಲಕ್ಷ. ಎರಡೂ ಕಿವಿಗಳಿಗೆ ಹಾಕಿರುವ ಗಂಟೆಗಳಿಗೆ ಎರಡು ಲಕ್ಷ. ಹಣೆಯ ಮೇಲಿನ ಆಭರಣಕ್ಕೆ ಒಂದು ಲಕ್ಷ. ಇದಲ್ಲದೆ ಕಿವಿಯ ಚೂಡಾಲಂಕಾರ, ದಂತಗಳ ಅಲಂಕಾರ, ಸೊಂಡಿಲಿಗೆ ಹಾಕಿದ ಆಭರಣಗಳು, ಹೀಗೆ ಆನೆಯ ಆಭರಣಗಳ ಬೆಲೆಯೇ ಇಪ್ಪತ್ತೆರಡು ಲಕ್ಷ. ಆನೆಯನ್ನು ಹತ್ತಲು ಬಳಸುವ ಮೆಟ್ಟಿಲು ಮತ್ತು ಆನೆಯ ಆಹಾರಕ್ಕೆ ಬಳಸುವ ಕಡಾಯಿ ಇವು ಕೂಡ ಲಕ್ಷ ಬೆಲೆಬಾಳುವಂಥವುಗಳು. ಈ ಆನೆಯೊಂದಿಗೆ ಅದರ ರಕ್ಷಣೆಗೆ ಮತ್ತು ಆರೈಕೆಗೆಂದು ಇರುವ ಐದು ಮಾವಟಿಗರು ಮತ್ತು ಐದು ನೂರು ಜನ ಸೇವಕರು ಇವರೆಲ್ಲರನ್ನು ದಾನವಾಗಿ ಕಲಿಂಗದೇಶಕ್ಕೆ ಕೊಡುತ್ತಿದ್ದೇನೆ’ ಎಂದು ಘೋಷಣೆ ಮಾಡಿದ.

ಆನೆಯನ್ನು ದಾನವಾಗಿ ಕೊಟ್ಟ ಘೋಷಣೆಯಾದೊಡನೆ ಭೂಮಿ ನಡುಗಿತು, ಜನ ಗಲಾಟೆ ಮಾಡಿದರು. ನಗರದ ಎಲ್ಲ ಹಿರಿಯರು ಕ್ಷುಬ್ಧರಾದರು. ತಮ್ಮ ನಗರದ ಮಂಗಳದ ಸಂಕೇತವಾದ ಆನೆಯನ್ನು ಬೇರೆ ದೇಶಕ್ಕೆ ಕೊಟ್ಟಿದ್ದು ತಪ್ಪಾಯಿತು, ಇದರಿಂದ ದೇಶಕ್ಕೆ ಅನಿಷ್ಟ ಬರುವುದೆಂದು ಅವರು ಭೀತರಾದರು. ಅವರೆಲ್ಲ ಗುಂಪುಕಟ್ಟಿಕೊಂಡು ರಾಜನ ಬಳಿಗೆ ಬಂದರು. ಅದರಲ್ಲಿ ಸಮಾಜದ ಎಲ್ಲ ಸ್ತರದ ಜನರಿದ್ದರು. ಅವರು, ‘ಪ್ರಭು, ದೇಶಕ್ಕೆ ದೊಡ್ಡ ಅನ್ಯಾಯವಾಗುತ್ತಿದೆ. ನಿಮ್ಮ ಪುತ್ರ ವೆಸ್ಸಂತರ ಬೇಡಿದವರಿಗೆ ಅನ್ನ, ವಸ್ತ್ರ, ಪಾನಗಳನ್ನು, ಧನಕನಕಗಳನ್ನು ದಾನ ಮಾಡಿದ್ದಲ್ಲಿ ಯಾರಿಗೂ ಅಭ್ಯಂತರವಿಲ್ಲ. ಆದರೆ ನಮ್ಮ ದೇಶದ ಮಂಗಲವಾದ, ರಾಜಪೂಜಿತವಾದ ಆನೆಯನ್ನು ಹೇಗೆ ದಾನ ಕೊಟ್ಟ? ಅದು ಮಹಾನ್ ಯುದ್ಧಗಳನ್ನು ಜಯಿಸಿದ, ಶತ್ರುಮರ್ದನ ಮಾಡುವ, ದೊಡ್ಡ ದಂತಗಳುಳ್ಳ, ಕೈಲಾಸಗಿರಿಯಂತೆ ಬೆಳ್ಳಗಿರುವ, ಮಹಾನ್ ಆನೆಯನ್ನು ದಾನ ಕೊಟ್ಟಿರುವುದು ಸರಿಯಲ್ಲ, ನೀವು ನಿಮ್ಮ ಸಿವಿ ರಾಜ್ಯದ ಜನತೆಯ ಮಾತುಗಳನ್ನು ಕೇಳದಿದ್ದರೆ, ನಾಗರಿಕರು ತಮ್ಮನ್ನು ಮತ್ತು ತಮ್ಮ ಪುತ್ರನನ್ನು ಅಧಿಕಾರದಿಂದ ಕೆಳಗಿಳಿಸಿ ವಶಪಡಿಸಿಕೊಳ್ಳುತ್ತಾರೆ’ ಎಂದು ಎಚ್ಚರಿಸಿದರು. ರಾಜನಿಗೆ ಇದೊಂದು ಇಕ್ಕಟ್ಟಿನ ಪರಿಸ್ಥಿತಿಯಾಯಿತು.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT