ADVERTISEMENT

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಪರರಂ ಬಾಗಿಲು ಇಹ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 23:13 IST
Last Updated 21 ಮಾರ್ಚ್ 2023, 23:13 IST
   

ನೆಲದ ಬೇಸಾಯ ತಾನೊಳ್ಳಿತಾಗಿರೆ ನಿನಗೆ |
ಫಲವದೆಂತಹುದೆಂಬ ಶಂಕೆಗೆಡೆಯುಂಟೆ? ||
ಒಳಿತರೊಳೆ ನೀಂ ಬಾಳು; ಪರವದೆಂತಿರ್ದೊಡೇಂ?
ಇಳೆಯೆ ಬಾಗಿಲು ಪರಕೆ – ಮಂಕುತಿಮ್ಮ || 847 ||

ಪದ-ಅರ್ಥ: ತಾನೊಳ್ಳಿತಾಗಿರೆ=ತಾನು+ಒಳ್ಳಿತು+ಆಗಿರೆ(ಆಗಿದ್ದರೆ), ಫಲವದೆಂತಹುದೆಂಬ=ಫಲವು+ಅದು+ಎಂತಹದು+ಎಂಬ, ಶಂಕೆಗೆಡೆಯುಂಟೆ=ಶಂಕೆಗೆ(ಸಂಶಯಕ್ಕೆ)+ಎಡೆ(ಸ್ಥಾನ)+ಉಂ ಟೆ, ಒಳಿತರೊಳೆ=ಒಳ್ಳೆಯದರಲ್ಲಿ, ನೀಂ=ನೀನು, ಪರವದೆಂತಿರ್ದೊಡೇಂ=ಪರವು(ಪರಲೋಕವು)+ಎಂತು(ಹೇಗೆ)+ಇರ್ದೊಡೇ(ಇದ್ದರೇನು), ಇಳೆಯೆ=ಭೂಮಿಯೆ,
ಪರಕೆ (ಪರಲೋಕಕ್ಕೆ, ಮೇಲಕ್ಕೆ)
ವಾಚ್ಯಾರ್ಥ: ನೆಲದ ಬೇಸಾಯವನ್ನು ಚೆನ್ನಾಗಿ ಮಾಡಿದರೆ ಫಲ ಹೇಗೆ ಬಂದೀತು ಎಂಬ ಸಂಶಯವೇಕೆ? ಪರಲೋಕ
ಹೇಗಿದ್ದರೇನು? ನೀನು ಒಳ್ಳೆಯತನದಲ್ಲೇ ಬಾಳು. ಈ ಭೂಮಿಯ ಮೇಲಿನ ಜೀವನವೇ ಪರಲೋಕಕ್ಕೆ ಬಾಗಿಲು.
ವಿವರಣೆ: ಭಾರತದ ಜ್ಞಾನ ಪರಂಪರೆಗೆ ಒಂದು ವಿಶೇಷವಾದ ಗುಣವಿದೆ. ಯಾವುದೇ ಮಹತ್ವದ ಪರಿಕಲ್ಪನೆಯನ್ನು ನೀಡಿದವರು ತಮ್ಮ ಮಾಲಿಕತ್ವವನ್ನು ಸ್ಥಾಪಿಸುವುದಿಲ್ಲ. ಮಹಾನ್ ಕೃತಿಗಳನ್ನು ನೀಡಿದ ವ್ಯಾಸರಾಗಲೀ, ವಾಲ್ಮೀಕಿಗಳಾಗಲೀ, ತಮ್ಮ ಕೃತಿಗಳಲ್ಲಿ ಲೇಖಕತ್ವವನ್ನು ಹೇರುವುದಿಲ್ಲ. ನಮ್ಮ ವೇದಗಳು ಅಪೌರುಷೇಯ ಎನ್ನುವುದು ಇದಕ್ಕಾಗಿಯೇ. ಅದೊಂದು ಸಮುದಾಯಿಕ ಪ್ರಜ್ಞೆ (community wisdom)ಯಾಗಿಯೇ ಉಳಿಯುತ್ತದೆ. ತಾನು ಬರೆದ ಚಿಂತನೆ ಯಾರಿಗೆ, ಯಾವಾಗ ಪ್ರಯೋಜನವಾದೀತು, ಅದರ ಫಲ ಚೆನ್ನಾಗಿ ಆದೀತೇ ಎಂಬ ತಳಮಳ ಅಲ್ಲಿಲ್ಲ್ಲ. ಒಳ್ಳೆಯದಾದದ್ದು ಎಂದಿಗೋ ಒಳ್ಳೆಯ ಫಲವನ್ನೇ ನೀಡುತ್ತದೆಂಬ ಧೃಡ ನಂಬಿಕೆ ಅಲ್ಲಿ ಕಾಣುತ್ತದೆ. ಕಗ್ಗದ ಮೊದಲೆರಡು ಸಾಲುಗಳು, ಭಗವದ್ಗೀತೆಯ ಪ್ರಸಿದ್ಧವಾದ, “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ|” ದ ಅರ್ಥವನ್ನು ಧ್ವನಿಸುತ್ತವೆ. ಇದರ ಪದಶ: ಅರ್ಥ ಸುಲಭ. “ನಿನಗೆ ಹಕ್ಕಿರುವುದು ಕರ್ಮದ ಮೇಲೆಯೇ ಹೊರತು ಅದರ ಫಲದ ಮೇಲಲ್ಲ”. ಹಾಗೆಂದಾಗ ನೀನು ಬರೀ ಕರ್ಮ ಮಾಡುತ್ತ ಹೋಗು, ಫಲದ ಬಗ್ಗೆ ಚಿಂತಿಸಬೇಡ ಎಂದರ್ಥವೇ? ಇಡೀ ತಿಂಗಳು ದುಡಿ, ಸಂಬಳದ ಅಪೇಕ್ಷೆ ಬೇಡ, ಹೆಂಡತಿ, ಮಕ್ಕಳನ್ನು ಚೆನ್ನಾಗಿ ನೋಡಿಕೋ ಆದರೆ ಅವರಿಂದ ಏನನ್ನೂ ಬಯಸಬೇಡ ಎಂದರೆ ಬಹಳಷ್ಟು ಜನ ಇದು ಅಪ್ರಸ್ತುತವಾದದ್ದು ಎಂದಾರು. ಮುಂದೆ ವಿಪರೀತ ಮಳೆಯಾದೀತು ಅಥವಾ ಬರಗಾಲ ಬಂದೀತು ಎಂದುಕೊಂಡು ಬೀಜವನ್ನೇ ನೆಲದಲ್ಲಿ ಹಾಕದಿದ್ದರೆ ಬೆಳೆ ಹೇಗೆ ಬಂದೀತು? ಕಗ್ಗ ಅದನ್ನೇ ಹೇಳುತ್ತದೆ. ಚೆನ್ನಾಗಿ ಬೇಸಾಯಮಾಡುವುದು ಕರ್ಮ. ಹಾಗೆ ಚೆನ್ನಾಗಿ ಬೇಸಾಯ ಮಾಡಿದ್ದೇ ಆದರೆ ಫಲ ಚೆನ್ನಾಗಿಯೇ ಬರುತ್ತದೆ. ಅದರ ಬಗ್ಗೆ ಶಂಕೆ ಬೇಡ. ಪರಲೋಕದ ಆಸೆಯಲ್ಲಿ ಭೂಮಿಯ ಬದುಕನ್ನು ನಿಸ್ಸಾರ ಮಾಡಬೇಡ. ಒಳ್ಳೆಯ ರೀತಿಯಲ್ಲಿ ಚೆನ್ನಾಗಿ ಬಾಳುವೆ ಮಾಡು. ಪರರ ಚಿಂತೆ ಬೇಡ. ಯಾಕೆಂದರೆ ಇಹದ ಸುಂದರ ಬದುಕೇ ಪರದ ಬಾಗಿಲು. ಇಹದ ಬದುಕು ಒಣಗಿ, ಸೊರಗಿದರೆ ಪರದ ಬಾಗಿಲು ಹೇಗೆ ತೆರೆದೀತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT