ADVERTISEMENT

ಬೆರಗಿನ ಬೆಳಕು: ಮಾಸದ ಜೀವಗುಣಗಳು

ಡಾ. ಗುರುರಾಜ ಕರಜಗಿ
Published 20 ಅಕ್ಟೋಬರ್ 2021, 19:30 IST
Last Updated 20 ಅಕ್ಟೋಬರ್ 2021, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಕ್ಲೇಶ ನೂರಾಗಿರೆಯುಮಾಶೆಗಳ ಪುನರುದಯ |
ಬೇಸರದ ನುಡಿಯೊಳಂ ಲೇಸುಗಳ ನೆನಪು ||
ಆಶೆ ಸಾಯ್ತೆಂದೊಡಂ ಚೆಲುವೆನಲು ಕಣ್ಣಲೆತ |
ಮಾಸವಿ ಜೀವಗುಣ – ಮಂಕುತಿಮ್ಮ || 480 ||

ಪದ-ಅರ್ಥ: ಕ್ಲೇಶ=ಕಷ್ಟ, ನೂರಾಗಿರೆಯುಮಾಶೆಗಳ=ನೂರಾಗಿ+ಇರೆಯುಂ(ಇದ್ದರೂ)+ಆಶೆಗಳ, ಪುನರುದಯ=ಮರುಹುಟ್ಟು, ಸಾಯ್ತೆಂದೊಡಂ=ಸಾಯಿತು (ಸತ್ತು ಹೋಯಿತು)+
ಎಂದೊಡಂ(ಎಂದರೆ), ಕಣ್ಣಲೆತ=ಕಣ್ಣು+ಅಲೆತ, ಮಾಸವೀ=ಮಾಸವು(ಕಡಿಮೆಯಾಗವು, ಕಳೆದುಹೋಗವು)+ಈ.

ವಾಚ್ಯಾರ್ಥ: ನೂರು ಕಷ್ಟಗಳು ಬಂದರೂ ಆಶೆಗಳು ಮರುಹುಟ್ಟು ಪಡೆಯುತ್ತವೆ. ಬೇಸರದ ಮಾತಿನಲ್ಲಿಯೇ ಹಿಂದಾದ ಸಂತೋಷದ ನೆನಪುಗಳು. ಆಸೆಗಳು ಸತ್ತು ಹೋಗಿವೆ ಎಂದರೂ ಸುಂದರವಾದದ್ದರೆಡೆಗೆ ಕಣ್ಣು ಅಲೆಯುತ್ತದೆ. ಈ ಜೀವಗುಣಗಳು ಎಂದಿಗೂ ಮಾಸುವುದಿಲ್ಲ.

ADVERTISEMENT

ವಿವರಣೆ: ಅವನಿಗೆ ವಯಸ್ಸಾಗಿದೆ. ಬಡತನ ತಪ್ಪಲಿಲ್ಲ. ಒಬ್ಬನೇ ಮಗ ಸತ್ತು ಹೋದ. ಅವನ ಹೆಂಡತಿ, ಮಕ್ಕಳನ್ನು ಈತನೇ ಸಾಕಬೇಕು. ಗಂಡ ತೀರಿ ಹೋದ ಮಗಳು, ಮಕ್ಕಳನ್ನು ಕರೆದುಕೊಂಡು ಬಂದಿದ್ದಾಳೆ. ಅವರೆಲ್ಲರ ಹೊಟ್ಟೆಗೆ ಆಧಾರವಾಗಬೇಕು. ಇವನಿಗೆ ತಿಳಿದದ್ದು ಒಂದೇ ಕೆಲಸ. ಕಾಡಿನಿಂದ ಕಟ್ಟಿಗೆ ತಂದು ಮಾರುವುದು. ಸಂಕಟದಿಂದಲೇ ಕಾಡಿಗೆ ಹೋದ. ಕಟ್ಟಿಗೆಯ ದೊಡ್ಡ ಹೊರೆ ಮಾಡಿದ. ಶಕ್ತಿ ಹಾಕಿ ಅದನ್ನು ಹೊರಲು ಹೋದಾಗ ಕಾಲು ಜಾರಿ ಮೋಟು ಬೇರಿಗೆ ಬಡಿದು ಕಾಲಿನ ರಕ್ತ ಚಿಮ್ಮಿತು. ಛೇ, ಸಾಕು ನನ್ನ ಜನ್ಮ, ಇಡೀ ಬದುಕಿನಲ್ಲಿ ಒದ್ದಾಟ ತಪ್ಪಲಿಲ್ಲ ಎಂದುಕೊಂಡು ಸಂಕಟದಿಂದ ಕೂಗಿದ. ‘ಯಮದೇವ, ಎಲ್ಲಿದ್ದೀಯಪ್ಪ? ಬೇಗ ಬಂದು ನನ್ನನ್ನೂ ಕರೆದುಕೊಂಡು ಹೋಗು. ಸಾಕು ಈ ಜನ್ಮ’. ಆಕಾಶದಲ್ಲಿ ಹೋಗುತ್ತಿದ್ದ ಯಮ ಇವನ ಮೊರೆಯನ್ನು ಕೇಳಿ ಕೆಳಗೆ ಬಂದು, ‘ಅಯ್ಯಾ, ನಾನೇ ಯಮರಾಜ. ಏನು ಬೇಕಿತ್ತು?’ ಎಂದ. ಮುದುಕ ಗಾಬರಿಯಿಂದ ತಡಬಡಾಯಿಸಿ ಹೇಳಿದ, ‘ಅಯ್ಯಾ, ನೀನೇಕೆ ಬಂದೆಯಪ್ಪ? ನನಗೆ ವಯಸ್ಸಾಯಿತು. ಅರಳುಮರಳು. ಯಾರನ್ನೋ ಕರೆಯುತ್ತೇನೆ. ನೀನು ಮಾತ್ರ ಬರಬೇಡಪ್ಪ. ನಾನು ಚೆನ್ನಾಗಿದ್ದೇನೆ. ಈ ಹೊರೆ ತುಂಬ ಭಾರ, ಎತ್ತುವುದಕ್ಕಾಗುವುದಿಲ್ಲ. ಸ್ವಲ್ಪ ಎತ್ತಿ ತಲೆಯ ಮೇಲೆ ಹೊರಿಸುತ್ತೀಯಾ?’. ಯುಮನಿಂದ ಹೊರೆ ತಲೆಗೇರಿಸಿಕೊಂಡು, ‘ಅಯ್ಯಾ, ಮತ್ತೆ ನಾನು ಹೀಗೆ ಕರೆದರೆ ಬರಲೇಬೇಡ. ನಾನಿನ್ನೂ ಸಾಕಷ್ಟು ವರ್ಷವಿದ್ದು ಕೆಲಸ ಮಾಡಬೇಕಾಗಿದೆ’ ಎಂದ! ಯಮ ಮುಗುಳ್ನಕ್ಕು ಹೋದ. ಸಾಕು ಈ ಬಾಳು, ಸಾವು ಬಂದರೆ ಸಾಕು ಎನ್ನುವವರು ಸಾವು ಮುಂದೆ ಬಂದು ನಿಂತಾಗ ಅದರಿಂದ ಪಾರಾಗಬಯಸುತ್ತಾರೆ.

ಕಗ್ಗ, ಮನುಷ್ಯನ ಸ್ವಭಾವವನ್ನು ತುಂಬ ಚೆನ್ನಾಗಿ ಚಿತ್ರಿಸುತ್ತದೆ. ನಮಗೆ ನೂರಾರು ಕಷ್ಟಗಳಿವೆ. ಆದರೆ ಅವುಗಳೊಂದಿಗೆ ಹೊಸ ಹೊಸ ಆಸೆಗಳು ಚಿಗುರುತ್ತವೆ. ದುಃಖಗಳ ಸರಮಾಲೆ ಕೊರಳೊಳಗಿದ್ದಾಗ, ಹಿಂದೆ ಪಟ್ಟ ಸಂತಸದ ನೆನಪುಗಳು ಆ ದುಃಖಗಳನ್ನು ಸಹ್ಯಗೊಳಿಸುತ್ತವೆ. ನಾನಿನ್ನು ಆಸೆಗಳನ್ನು ಗೆದ್ದುಬಿಟ್ಟೆ, ನನಗಾವ ಆಸೆಗಳೂ ಇಲ್ಲ ಎಂದು ಬುದ್ಧನಂತೆ ಮುಖಮಾಡಿ ಕುಳಿತವರು, ಚೆಲುವಾದದ್ದು ಕಣ್ಣ ಮುಂದೆ ಸುಳಿದರೆ ಅವರ ಕಣ್ಣುಗಳು ಆ ಕಡೆಗೆ ಎಳೆಯುತ್ತವೆ. ಕಗ್ಗ ಇವುಗಳನ್ನು ದೋಷಗಳೆಂದು ಹಳಿಯುವುದಿಲ್ಲ. ಇವು ಮನುಷ್ಯನ ಜೀವಗುಣಗಳು. ಅದೆಷ್ಟು ಶತಮಾನಗಳು ಕಳೆದರೂ, ಅದೆಷ್ಟು ಮನುಷ್ಯನಲ್ಲಿ ವಿಕಾಸವಾದರೂ, ಈ ಮೂಲವಾದ ಜೀವಗುಣಗಳು ಮರೆಯಾಗುವುದಿಲ್ಲ. ಮಾಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.