ADVERTISEMENT

ಹಳೆಯ ಸೈನಿಕ ಸಾಯುವುದಿಲ್ಲ

ಬ್ರಿಗೇಡಿಯರ್ ಐ.ಎನ್.ರೈ
Published 9 ಏಪ್ರಿಲ್ 2019, 10:34 IST
Last Updated 9 ಏಪ್ರಿಲ್ 2019, 10:34 IST

2003ರ ಮೇ 1ರಂದು ಆರಂಭವಾದ ನನ್ನ ನಿವೃತ್ತಿಯ ಪ್ರಕ್ರಿಯೆ ಮೇ 31ರಂದು ಮುಗಿದಾಗ ನನ್ನ ಜೀವನದಲ್ಲೇ ಎಂದೂ ಬರಬಾರದು ಎಂದೇ ಅಂದುಕೊಳ್ಳುತ್ತಿದ್ದ ಆ ದಿನ ಬಂದೇ ಬಿಟ್ಟಿತು- ನಾನೀಗ ನಿವೃತ್ತ ಬ್ರಿಗೇಡಿಯರ್ ಐ. ಎನ್‌. ರೈ

ಸೈನಿಕರಿಂದ ಹಿಡಿದು, ಎನ್‍ಸಿಒ, ಜೆಸಿಒ, ಸೈನಿಕ ಶಾಲೆ, ಅಕೌಂಟ್ಸ್ ವಿಭಾಗ,...ಅತ್ಯುನ್ನತ ದರ್ಜೆಯ ಆಫೀಸರ್‍ಗಳ ತನಕ ಎಲ್ಲರ ಜೊತೆಯೂ ವಿವಿಧ ಹಂತಗಳಲ್ಲಿ ಬೀಳ್ಕೊಡುಗೆ ಸಮಾರಂಭ, ಪಾರ್ಟಿಗಳಾದವು. ನನ್ನ ಕೊನೆಯ ಕರ್ತವ್ಯ ದಿನದಂದು ಎಲ್ಲಾ ಆಫೀಸರ್‍ಗಳೂ ನನ್ನನ್ನು ಖುರ್ಚಿಯೊಂದರ ಮೇಲೆ ಕೂರಿಸಿಕೊಂಡು, ಹೊತ್ತು ಕೊಂಡೇ ಆಫೀಸರ್ಸ್ ಮೆಸ್‍ಗೆ ವಿದಾಯ ಸಮಾರಂಭಕ್ಕೆ ಕರೆದುಕೊಂಡು ಹೋದಾಗ ನನ್ನ ಕಣ್ಣುಗಳು ಹನಿಗೂಡಿದ್ದುವು!. ಅದೊಂದು ಸಂಭ್ರಮದ್ದೋ, ನೋವಿನದ್ದೋ ಎಂದು ವರ್ಣಿಸಲಾರದ ಗಳಿಗೆಯಾಗಿತ್ತು.

ಅಂತೂ ಕೊನೆಯ ದಿನದಂದು ಯುದ್ಧ ಸ್ಮಾರಕದಲ್ಲಿ ರೇತ್(ಪುಷ್ಪಹಾರ) ಇಟ್ಟು, ನಮ್ಮ ಯುದ್ಧವೀರ ಸೈನಿಕರಿಗೆ ಬ್ರಿಗೇಡಿಯರ್ ಆಗಿ ಕೊನೆಯ ನಮನ ಸಲ್ಲಿಸಿದೆ. ಸೈನಿಕ ವಸತಿಗ್ರಹದ ಗಾರ್ಡ್‍ಗಳಿಂದ ಸೆಲ್ಯೂಟ್ ಸ್ವೀಕಾರವೂ ಆಯ್ತು. ತೆರೆದ ಜೀಪ್ ನಲ್ಲಿ ನನ್ನನ್ನು ಕುಳ್ಳಿರಿಸಿ ಎಲ್ಲರೂ ಜೀಪನ್ನು ಎಳೆದು ಮೆರವಣಿಗೆ ಮಾಡಿದರು. ಹೌದು, ನನ್ನ ವೃತ್ತಿಯ ಕೊನೆಯ ದಿನ. ನನ್ನ ಆತ್ಮವನ್ನು ಅಲ್ಲೇ ಬಿಟ್ಟು ಹೊರಡುವ ಗಳಿಗೆ. ಕಣ್ಣು ತುಂಬಾ ನೀರು ಮತ್ತು ಈಗಲೂ ಆ ಕ್ಷಣ ನೆನೆದರೆ ಕಣ್ಣು ಹನಿಗೂಡುತ್ತದೆ. ಇನ್ನೆಂದೂ ನಾನು ಜೀವನದಲ್ಲಿ ಈ ಯೂನಿಫಾರ್ಮ್ ತೊಡುವ ಅವಕಾಶವಿಲ್ಲ. ನನ್ನ ಪ್ರೀತಿಯ ಸೈನಿಕರೇ, ನಾನು ‘ನಿವೃತ್ತ’ ಎಂಬ ಎಂದೂ ಇಷ್ಟ ಪಡದ ಪದವನ್ನು ಅಂಟಿಸಿಕೊಳ್ಳುತ್ತಿದ್ದೇನೆ! ಎಂದು ಕೂಗಿ ಹೇಳಬೇಕೆನಿಸುತ್ತಿತ್ತು. ಇದೇ ಭಾರವಾದ ಭಾವದೊಂದಿಗೆ ಎಲ್ಲಾ ನಿಯಮಗಳಿಗೂ ನನ್ನನ್ನು ನಾನು ಒಪ್ಪಿಸಿಕೊಳ್ಳುತ್ತಿದ್ದೆ.

ADVERTISEMENT

ಹಳೆಯ ಸೈನಿಕ ಸಾಯುವುದಿಲ್ಲ-ಆತ ನಿಧಾನವಾಗಿ ಅಳಿಸಿ ಹೋಗುತ್ತಾನೆ!. ಭಾರವಾದ ಹೃದಯದಿಂದ, ಸೇನಾನಿಯ ದಿನ ನಿತ್ಯದ ಜೀವನಕ್ಕೆ ವಿದಾಯ ಹೇಳಿದ ನಾನು, ಎಲ್ಲರಿಂದಲೂ ಬೀಳ್ಕೊಂಡು, ಪ್ರೀತಿ, ಅಭಿಮಾನ ಮತ್ತು ನೆನಪನ್ನು ಮಾತ್ರ ಹೊತ್ತುಕೊಂಡು ಸೈನ್ಯದ ಕ್ಯಾಂಪ್‍ನ್ನು ಬಿಟ್ಟು ಹೊರಟೆ.

**

ಇಂದಿಗೂ ನನಗೆ ಎಷ್ಟೋ ಸೈನಿಕರು ಕರೆ ಮಾಡುತ್ತಾರೆ- ಎನ್‍ಸಿಒ, ಜೆಸಿಒಗಳು, 1971ರ ಯುದ್ಧದಲ್ಲಿ, ನಾಗಾಲ್ಯಾಂಡ್‍ನಲ್ಲಿ, ಶ್ರೀಲಂಕಾದಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನನ್ನೊಂದಿಗೆ ಯುದ್ಧದಲ್ಲಿ, ಇನ್ನಿತರ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದವರು. ಆಗ ಪ್ರೀತಿಯ ಮಾತುಕತೆಗಳು, ನೆನಪುಗಳು, ಜೋಕ್ಸ್‌‌‌ಗಳು, ನೋವುಗಳು, ಕಳೆದುಕೊಂಡವರು, ಇರುವವರು-ಹೀಗೆ ಎಲ್ಲಾ ಮಾತುಗಳೂ ಬರುತ್ತವೆ. ಪ್ರೀತಿಯ ಮುಂದೆ ಮತ್ತೇನಿದೆ!

ಆದರೂ ನಾನು ದೇವರನ್ನು ನೆನೆಯುತ್ತೇನೆ. ಅನೇಕ ಕಾರಣಗಳಿಗಾಗಿ. 1970ರ ಏಪ್ರಿಲ್‍ನಲ್ಲಿ ನಾನು 8ಸಿಖ್ ಲೈಟ್‍ಇನ್ಫೆಂಟರಿಯಲ್ಲಿ ಸೈನಿಕನಾಗಿ ಸೇರಿದೆ. 1971ರಲ್ಲಿ ಇದೇ ಇನ್ಫೆಂಟರಿಯಲ್ಲಿದ್ದು ಯುದ್ಧದಲ್ಲಿ ಬಾಗಿಯಾದೆ. 1990ರಲ್ಲಿ ಇದೇ ವಿಭಾಗವನ್ನು ಕಮಾಂಡ್ ಮಾಡಿದೆ. ಈಗ ಇದೇ ಏಪ್ರಿಲ್ ಮೊದಲ ವಾರದಲ್ಲಿ ಈ ಯೂನಿಟ್ ಜಲಂಧರ್ ನಲ್ಲಿ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿದೆ ಮತ್ತು ಈ ಲೇಖನ ಪ್ರಕಟವಾಗುತ್ತಿರುವ ಈ ಹೊತ್ತಿನಲ್ಲಿ ನಾನೀಗ ಜಲಂಧರ್‍ನಲ್ಲಿ ಬೆಳ್ಳಿಹಬ್ಬದ ಸಮಾರಂಭದಲ್ಲಿ ಪತ್ನಿಯೊಂದಿಗೆ ಹಳೆಯ ಸ್ನೇಹಿತರೊಂದಿಗೆ ಇದ್ದೇನೆ. 1971ರ ಯುದ್ಧದಲ್ಲಿ ನನಗೆ ಕಮಾಂಡಿಂಗ್ ಆಫೀಸರ್ ಆಗಿದ್ದವರು ಇಂದು ಇಲ್ಲ. ಆದರೆ ನಾನೀಗ ಅವರ ಪತ್ನಿ ಮತ್ತು ಮಗಳೊಂದಿಗೆ, ಅನೇಕ ವೀರಯೋಧರ ವಿಧವೆಯರೊಂದಿಗೆ, ಮಕ್ಕಳೊಂದಿಗೆ ಇಲ್ಲಿ ಬೆಳ್ಳಿ ಹಬ್ಬಾಚರಣೆಯಲ್ಲಿ ಭಾಗಿಯಾಗಿದ್ದೇನೆ. ಇದೊಂದು ಕುಟುಂಬದ ಪುನರ್ಮಿಲನ ಎಂಬ ಭಾವವನ್ನೂ ನನಗೆ ತರುತ್ತಿದೆ, ಶಾಲಾ ವಿದ್ಯಾರ್ಥಿಯೋರ್ವ ಈ ದಿನಕ್ಕಾಗಿ ಕಾದಿದ್ದಂತೆ ಕಾದು ಹೊರಟಿದ್ದೇನೆ.

ಈಗ ನಾನು ಮಂಗಳೂರಿನಲ್ಲಿ ನಿವೃತ್ತ ಜೀವನವನ್ನು ಕಳೆಯುತ್ತಿದ್ದೇನೆ-ಅಥವಾ ನಿಧಾನಕ್ಕೆ ಅಳಿಸಿಹೋಗುತ್ತಿದ್ದೇನೆ, ಅನೇಕ ಶಿಕ್ಷಣ ಸಂಸ್ಥೆಗಳನ್ನು ಸಂದರ್ಶಿಸುತ್ತಾ, ಇಂದಿನ ಯುವ ಜನರನ್ನು ಕುರಿತು ಮಾತಾಡುತ್ತಾ ಇರುತ್ತೇನೆ. ನೆನಪಿನಾಳದಿಂದ ಅನೇಕ ಘಟನೆಗಳು ಮತ್ತೆ ಮತ್ತೆ ನನ್ನನ್ನು ಕಾಡುತ್ತಿವೆ. ಹೆಚ್ಚಾಗಿ ಇಂದಿ ಯುವ ಜನರೊಂದಿಗೆ ನಾನು ದೇಶದ ಬಗ್ಗೆ, ದೇಶ ಪ್ರೇಮದ ಬಗ್ಗೆ ಮಾತಾಡುತ್ತಾ, ನಮ್ಮ ನೆಲದ ಕಾನೂನನ್ನು ಗೌರವಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ. ನಮ್ಮ ದೇಶದ ಶ್ರೀಮಂತ ಇತಿಹಾಸ ಓದಿ, ಅರಿತುಕೊಳ್ಳಿ, ನಮ್ಮನ್ನು ಅದೆಷ್ಟೋ ಧೀಮಂತ ರಾಜ ಮಹಾರಾಜರು ಆಳಿದ್ದಾರೆ, ಇತಿಹಾಸದಲ್ಲೂ ಅದೆಷ್ಟೋ ಆದರ್ಶ ನಾಯಕರಿದ್ದಾರೆ, ಅವರ ಬಗ್ಗೆ ತಿಳಿದುಕೊಳ್ಳಿ ಎನ್ನುತ್ತೇನೆ. ಸ್ವಾತಂತ್ರ್ಯ ಹೋರಾಟಗಾರರು, ಅವರು ಮಾಡಿದ ತ್ಯಾಗ ಬಲಿದಾನಗಳು ನಮಗೆ ತಿಳಿಯಬೇಕು. ಸ್ವಾತಂತ್ರ್ಯ ಪೂರ್ವ-ಸ್ವಾತಂತ್ರ್ಯೋತ್ತರ ಭಾರತದ ಬಗ್ಗೆ ತಿಳಿಯಬೇಕು, ಯುದ್ಧಗಳ ಬಗ್ಗೆ, ಅಲ್ಲಿ ನಮ್ಮವರ ಅಥವಾ ನೈಜ ಸೈನಿಕರ ತ್ಯಾಗ ಬಲಿದಾನಗಳ ಬಗ್ಗೆ ತಿಳಿಯಬೇಕು-ಈ ರೀತಿಯ ತಿಳಿವಳಿಕೆಗಳು ನಮ್ಮೊಳಗಿನ ದೇಶ ಭಕ್ತಿಯನ್ನು ಉದ್ಧೀಪನಗೊಳಿಸಬೇಕು ಎಂಬುದನ್ನು ನಮ್ಮ ಯುವ ಜನತೆಗೆ ತಿಳಿಹೇಳುತ್ತಿದ್ದೇನೆ-ಆ ಮೂಲಕ ಸಂತೋಷ ಕಂಡುಕೊಳ್ಳುತ್ತಿದ್ದೇನೆ.

ಅನೇಕರು ಕೇಳುತ್ತಾರೆ, ನಾವು ಅಥವಾ ನಮ್ಮ ಮಕ್ಕಳು ಸೈನ್ಯಕ್ಕೆ ಯಾಕೆ ಸೇರಬೇಕು. ಹೌದು, ಗೌರವ, ಅಭಿಮಾನ, ಹೆಮ್ಮೆಯಿಂದ ನಾವು ಮಾಡಬಹುದಾದ ಕೆಲಸವಿದ್ದರೆ, ಅದು ಸೈನಿಕನ ಕೆಲಸವೆನ್ನುತ್ತೇನೆ. ಇದು ಕೆಲಸದಲ್ಲಿರುವಾಗ, ನಿವೃತ್ತನಾದಮೇಲೂ, ಗಾಯಾಳುವಾದರೂ, ಅಂಗವಿಕಲನಾದರೂ ಅಥವಾ ಸತ್ತರೂ ನಮ್ಮನ್ನು ನೋಡಿಕೊಳ್ಳುವ ವಿಶ್ವದ ಏಕೈಕ ವ್ಯವಸ್ಥೆ ಇದ್ದರೆ ಅದು ಸೈನ್ಯ. ಇಂದು ಕೇವಲ ಪಿಯುಸಿ ಆದವನೂ ಪದವಿ ಮುಗಿಸಿ ಎಲ್ಲೋ ದೊಡ್ಡ ಹುದ್ದೆಯಲ್ಲಿರುವವನಿಗಿಂತ ಹೆಚ್ಚು ಸಂಬಳ ತೆಗೆದುಕೊಳ್ಳುವ ಅತ್ಯಂತ ಉನ್ನತ ಕ್ಷೇತ್ರ ಇದ್ದರೆ ಅದು ಸೈನ್ಯ. ಅತ್ಯುತ್ತಮ ನಿವೃತ್ತಿ ವೇತನ, ಆರೋಗ್ಯ ಕಾಳಜಿಯನ್ನು ಜೀವಮಾನದ ತನಕವೂ ನೀಡುವ ವ್ಯವಸ್ಥೆ ಇದ್ದರೆ ಅದು ಸೈನ್ಯದಲ್ಲಿ ಮಾತ್ರ. ಇದೆಲ್ಲದರ ಜೊತೆಗೆ ಸೇವೆಯಲ್ಲಿರುವಾಗ, ಸತ್ತರಂತೂ ಅದರಷ್ಟು ದೊಡ್ಡ ಸಾರ್ಥಕ್ಯ ಬೇರೆ ಇಲ್ಲ ಮತ್ತು ಅದು ಸೈನ್ಯದಲ್ಲಿ ಮಾತ್ರ ಸಾಧ್ಯ.

ನಿಮಗೆ ಯುದ್ಧ ಭೂಮಿಯಲ್ಲಿ ಭಯ ಆಗುತ್ತಿರಲಿಲ್ಲವೇ ಎಂಬುದೂ ಅನೇಕರ ಪ್ರಶ್ನೆ. ಮತ್ತೆ ಕೆಲವರು ಕೇಳುತ್ತಾರೆ, ಸರ್, ನಾನು ನನ್ನ ಮಗನನ್ನು ಸೈನ್ಯಕ್ಕೆ ಕಳಿಸಿದರೆ ಆತ ಅಲ್ಲಿ ಯುದ್ಧಭೂಮಿಯಲ್ಲಿ ಸತ್ತು ಬಿಟ್ಟರೆ?? ಆಗೆಲ್ಲಾ ನಮ್ಮವರ ಮುಗ್ಧತೆಗೆ ನಗು ಬರುತ್ತದೆ. ಖಂಡಿತಕ್ಕೂ ಸೈನಿಕನಾಗಿ ಭಯ ಎಂಬ ಶಬ್ದವೇ ನಮಗೆ ಅಪರಿಚಿತ. ನಮ್ಮ ತರಬೇತಿಯ ವೇಳೆಗೆ ನಮ್ಮನ್ನು ಹೆಮ್ಮೆಯ ಮತ್ತು ಶೌರ್ಯದ ಸಿಂಹಗಳ ಮಧ್ಯೆ ಇರುವ ಮತ್ತೊಂದು ಹೆಮ್ಮೆಯ ಸಿಂಹದಂತೆ ಪಳಗಿಸುತ್ತಾರೆ. ಇದಕ್ಕಿಂತಲೂ ಮುಖ್ಯವಾಗಿ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಹೇಳಿದ ಹಾಗೆ, ಓ ಕುಂತಿ ಪುತ್ರ, ಏಳು, ಎದ್ದು ಎದುರಾಳಿಯೊಂದಿಗೆ ಹೋರಾಡು. ಒಂದೊಮ್ಮೆ ಮಡಿದೆಯಾದರೆ ವೀರ ಸ್ವರ್ಗ ನಿನಗೆ ಕಾದಿದೆ, ಗೆದ್ದರೆ ಈ ಭುಮಿಯ ಮೇಲಿನ ಜೀವನವನ್ನು ಆಸ್ವಾದಿಸು!. ಅಂದರೆ ಸೈನ್ಯದಲ್ಲಿ ನಮಗೆ ಸಾವು ಎಂಬುದೇ ಇಲ್ಲ. ಒಂದೋ ವೀರಸ್ವರ್ಗ, ಇಲ್ಲವಾದರೆ ಈ ಭೂಮಿಯ ಋಣ- ಮತ್ತೆ ಭಯವೆಲ್ಲಿಯದು!. ಇನ್ನು ನಮ್ಮ ಮಕ್ಕಳು ಸೈನ್ಯಕ್ಕೆ ಹೋದರೆ ಸಾಯುತ್ತಾರಾ!. ಸ್ನೇಹಿತರೇ, ಭಾರತಾಂಬೆಯ ರಕ್ಷಣೆಗಾಗಿ ತಮ್ಮ ಜೀವವನ್ನು ನೀಡುತ್ತಿರುವ ಪ್ರತೀ ಸೈನಿಕನೂ ಯಾವುದೋ ತಾಯಿಯ ಮಗನೇ. ಅದರೆ ಈ ಅದೃಷ್ಟವಂತ ಮಗ ದೇಶದ ಮಗನಾಗುತ್ತಾನೆ. ಪ್ರತೀ ದಿನ ನಾವು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ನೋಡುತ್ತೇವೆ, ರಸ್ತೆಯಲ್ಲಿ ಅಪಘಾತದಲ್ಲಿ, ಆತ್ಮಹತ್ಯೆಯ ಮೂಲಕ ಅಥವಾ ಎಷ್ಟೋ ಕ್ಷುಲ್ಲಕವಾಗಿ ಜನ ಸಾಯುತ್ತಾರೆ. ಹೇಳಿ, ಈ ಸಾವುಗಳಲ್ಲಿ ನಾವು ಕಳೆದುಕೊಂಡವರ ಬಗ್ಗೆ ನನಗೂ ಖೇದವಿದೆ, ದುಃಖವಿದೆ, ಆದರೆ ಹೇಳಿ, ಎದೆಯಲ್ಲಿ ಗುಂಡೇಟು ತಿಂದು, ಭಾರತ್ ಮಾತಾಕಿ ಜೈ ಎಂದು ಕೂಗುತ್ತಾ ನೆಲಕ್ಕೊರಗಿ, ಮತ್ತೆ ರಾಷ್ಟ್ರಧ್ವಜವನ್ನು ದೇಹಕ್ಕೆ ಸುತ್ತಿಸಿಕೊಂಡು, ಚಿನ್ನದ ಅಕ್ಷರಗಳಲ್ಲಿ ನಮ್ಮ ಹೆಸರನ್ನು ಬರೆಸಿಕೊಂಡು ದೇಶಕ್ಕಾಗಿ ಸಾಯುವುದು- ಓಹ್, ಅದೆಷ್ಟು ಧನ್ಯತೆ! ಮತ್ತೆಲ್ಲಿಯ ಭಯ!

ಮತ್ತೆ ಕೆಲವರು ಕೇಳಿದ್ದಾರೆ. ನಿಮ್ಮದೇ ಓರಗೆಯವರು, ಸ್ನೇಹಿತರು ಅಥವಾ ಸಹೋದ್ಯೋಗಿ ಸೈನಿಕರು, ನಿಮ್ಮ ಕಣ್ಣೆದುರೇ ಹುತಾತ್ಮರಾದಾಗ ಏನನ್ನಿಸುತ್ತಿತ್ತು!. ಹೌದು, ನನಗೆ ಇಂತಹ ಸಾವುಗಳನ್ನು ಕಂಡಾಗ ಎರಡೆರಡು ಭಾವಗಳು, ನನ್ನ ಸ್ವಂತ ಮಗನನ್ನೋ, ಕುಟುಂಬದ ಸದಸ್ಯನನ್ನೋ ಕಳೆದುಕೊಂಡ ಸಂಕಟವೊಂದೆಡೆ ಆದರೆ, ಮರುಕ್ಷಣದಲ್ಲಿ ಆ ಸಾವನ್ನು ಹೊಂದಿದವರ ಬಗ್ಗೆ ಹೊಟ್ಟೆಕಿಚ್ಚು. ಇಂತಹ ಅದ್ಭುತವಾದ ಸಾವಿಗಿಂತ ನಾನು ಹೊರತಾದೆನಲ್ಲ, ಈ ಸ್ನೇಹಿತ ಅದೆಷ್ಟು ಅದೃಷ್ಟ ಶಾಲಿ ಎಂದು!

ಇನ್ನು ಕೆಲವರು ಕೇಳುತ್ತಾರೆ, ನಿಮ್ಮ ಜೀವನದಲ್ಲಿ ಪೂರ್ಣಗೊಳಿಸಿಕೊಳ್ಳಲಾರದ ಆಸೆಯೇನಾದರೂ ಇತ್ತೇ ಎಂದು. ಖಂಡಿತಕ್ಕೂ. ಪೂರ್ಣ ಜೀವನವನ್ನು ಸೈನ್ಯದಲ್ಲೇ ಕಳೆದೆ. ಒಮ್ಮೆ ಕೋಮಾಕ್ಕೆ ಹೋಗಿ ಮರು ಹುಟ್ಟು ಪಡೆದೂ ಬಂದೆ. ಈಗಲೂ ಜೀವಂತವಿದ್ದೇನೆ. ನನಗೆ ಪೂರ್ಣಗೊಳ್ಳದ ಆಸೆ ಎಂದಿದ್ದರೆ, ಯುದ್ಧಭೂಮಿಯಲ್ಲಿ ಹುತಾತ್ಮನಾಗುವ ಭಾಗ್ಯ ನನಗೆ ದೊರೆಯದ ಕೊರತೆ ನನ್ನನ್ನು ಕಾಡುತ್ತಿದೆ. ಓರ್ವ ಯೋಧನಾಗಿ ನಾನೀಗ ‘ಅಳಿಸಿ’ಹೋಗುತ್ತಿದ್ದೇನೆ- ಸಾಯುವುದಕ್ಕಿಂತ ವಯೋನಿವೃತ್ತಿಯಾಗಿ ಅಳಿಸಿ ಹೋಗುವ ವಿಧಾನ ಅತ್ಯಂತ ಹೆಚ್ಚು ನೋವನ್ನು ನೋಡುತ್ತದೆ.

ನನ್ನ, ಜೀವನ ಅಥವಾ ವೃತ್ತಿ ಜೀವನವನ್ನು ಗಮನಿಸಿದರೆ ಖಂಡಿತಕ್ಕೂ ಬೇಸರ, ದುಃಖ ಇನಿತೂ ಇಲ್ಲ. ಜೀವನದ ಸುಮಾರು ಆರೂವರೆ ವರ್ಷಗಳನ್ನು ಅತ್ಯಂತ ಎತ್ತರದ 13000 ಅಡಿಗಳಲ್ಲಿ ಮೈನಸ್ ಡಿಗ್ರೀ ಉಷ್ಣಾಂಶಗಳಲ್ಲಿ ಕಳೆದಿದ್ದೇನೆ. ಮೂರು ದೊಡ್ಡ ಯುದ್ಧಗಳಲ್ಲಿ ಭಾಗಿಯಾಗಿದ್ದೇನೆ, ಅನೇಕ ಅತೀ ಹತ್ತಿರದ ಮುಖಾಮುಖಿಯನ್ನು ಶತ್ರು ಸೈನಿಕರೊಂದಿಗೆ ಸೆಣೆಸಿದ್ದೇನೆ, ಸಾವಿಗೂ ಮುಖಾಮುಖಿಯಾಗಿ ಗೆದ್ದು ಬಂದಿದ್ದೇನೆ, ನನ್ನ ಅತ್ಯಾಪ್ತ ಸ್ನೇಹಿತರುಗಳು ಹುತಾತ್ಮರಾಗಿದ್ದನ್ನು ಕಂಡಿದ್ದೇನೆ, ಅಕಾಡೆಮಿಯಲ್ಲಿ ನನ್ನನ್ನು ತಿದ್ದಿದ ‘ಗುರು’ವಿನಂತವರ ಕಂಚಿನ ಕಂಠದ ಸೂಚನೆಗಳು ಇಂದಿಗೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ. ’ಜಂಟಲ್ ಮೆನ್ ಕೆಡೆಟ್, ಎಲ್ಲಿಯ ತನಕ ಶತ್ರು ಸೈನ್ಯದ ಫಾಕ್ಟರಿಯಲ್ಲಿ ತಯಾರಾಗುವ ಗುಂಡಿನ ಮೇಲೆ ನಿನ್ನ ಹೆಸರು ಮುದ್ರಣವಾಗುವುದಿಲ್ಲವೋ, ಅಲ್ಲಿಯ ತನಕ ನಿನಗೆ ಸಾವಿಲ್ಲ, ಹೆದರಬೇಡ)....ಹೌದು, ನನಗೆ ಯಾವುದೇ ಖೇದವಿಲ್ಲ.

ಸ್ನೇಹಿತರೇ, ಹೌದು, ಒಂದು ಖೇದವಿದೆ. ನಾನು ನನ್ನ ಸೈನ್ಯದ ಜೀವನದಲ್ಲಿ ಇಡೀ ರಾಷ್ಟ್ರದ ಯುವಕರನ್ನು ಕಂಡಿದ್ದೇನೆ. ಅವರೆಲ್ಲರಿಗೂ ಹೋಲಿಸಿದರೆ, ನಮ್ಮ ಜಿಲ್ಲೆ ಯುವಕರು ಅತ್ಯಂತ ಬುದ್ಧಿವಂತರು, ಧೈರ್ಯಶಾಲಿಗಳು ಮತ್ತು ಆರೋಗ್ಯವಂತರೂ. ಆದರೆ ನನ್ನ 34ವರ್ಷಗಳ ಸುದೀರ್ಘ ಸೇನಾನಿಯ ಜೀವನದಲ್ಲಿ ನಮ್ಮ ಜಿಲ್ಲೆಯ ಒಬ್ಬನೇ ಒಬ್ಬ ಸೈನಿಕ ಅಧಿಕಾರಿಯ ಕೈಕುಲುಕುವ ಅದೃಷ್ಟ ಸಿಗಲಿಲ್ಲ -ಈ ಬಗ್ಗೆ ನನಗೆ ಖೇದವಿದೆ. ಯಾಕೆ ನಮ್ಮಲ್ಲಿ ಈ ಬಗ್ಗೆ ತಿಳುವಳಿಕೆ ಬಂದಿರಲಿಲ್ಲ ಎಂದು ಖೇದಗೊಂಡಿದ್ದೆ. ಆದರೆ....

ಈಗ ಕಾಲ ಬದಲಾಗಿದೆ. ಇತ್ತೀಚೆಗೆ ಎಷ್ಟೋ ಪೋಷಕರು ತಮ್ಮ ಮಕ್ಕಳು ಸೈನ್ಯದಲ್ಲಿ ಅಧಿಕಾರಿಗಳಾದ ಬಗ್ಗೆ ಹೇಳುತ್ತಾರೆ-ಈ ಹೆಮ್ಮೆ ನನ್ನ ಅಂದಿನ ನೋವನ್ನು ಸ್ವಲ್ಪವಾದರೂ ಮರೆಸುತ್ತಿದೆ.

ನಿರೂಪಣೆ: ಅರೆಹೊಳೆ ಸದಾಶಿವ ರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.