ADVERTISEMENT

ಮ್ಯೂಚುವಲ್ ಫಂಡ್: ಹೂಡಿಕೆಯಲ್ಲಿ ವೈವಿಧ್ಯ ಹೇಗೆ?

ಅವಿನಾಶ್ ಕೆ.ಟಿ
Published 23 ಮೇ 2021, 19:30 IST
Last Updated 23 ಮೇ 2021, 19:30 IST
ಅವಿನಾಶ್ ಕೆ.ಟಿ.
ಅವಿನಾಶ್ ಕೆ.ಟಿ.   

ಹೂಡಿಕೆಯಲ್ಲಿ ವೈವಿಧ್ಯ ಇರಬೇಕು ಎನ್ನುವ ಕಾರಣಕ್ಕೆ ನಾವು ಬೇರೆ ಬೇರೆ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತೇವೆ. ಆದರೆ ಆ ಬೇರೆ ಬೇರೆ ಮ್ಯೂಚುವಲ್ ಫಂಡ್ ಯೋಜನೆಗಳು ನಿಮ್ಮ ಹೂಡಿಕೆಯ ಹಣವನ್ನು ಒಂದೇ ರೀತಿಯ ಷೇರುಗಳಲ್ಲಿ ತೊಡಗಿಸುವ ಸಾಧ್ಯತೆ ಇರುತ್ತದೆ. ಇದನ್ನು ಮ್ಯೂಚುವಲ್ ಫಂಡ್ ಪರಿಭಾಷೆಯಲ್ಲಿ ‘ಓವರ್‌ಲ್ಯಾಪ್’ ಎಂದು ಕರೆಯುತ್ತಾರೆ. ಎರಡು ಯೋಜನೆಗಳ ಮೂಲಕ ಒಂದೇ ಬಗೆಯ ಹೂಡಿಕೆ ಆಗುವ ಪ್ರಕ್ರಿಯೆ ಇದು. ಹೀಗೆ ಆದಾಗ, ಹೂಡಿಕೆಯಲ್ಲಿ ವೈವಿಧ್ಯ ಸಾಧಿಸುವ ಉದ್ದೇಶ ಈಡೇರುವುದಿಲ್ಲ.

ವಿವರಣೆ: ಹೂಡಿಕೆಯಲ್ಲಿ ವೈವಿಧ್ಯ ಇರಬೇಕು ಎಂಬ ಉದ್ದೇಶದಿಂದ ನೀವು ಮೇಲಿನ ಎರಡು ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತೀರಿ ಎಂದು ಭಾವಿಸೋಣ. ಆದರೆ, ಗಮನಿಸಿ ಮೇಲಿನ ಎರಡು ಫಂಡ್‌ಗಳ ಹೂಡಿಕೆಯಲ್ಲಿ ಒಂದಿಷ್ಟು ಸಾಮ್ಯತೆ ಕಂಡುಬರುತ್ತಿದೆ. ಎಕ್ಸಿಸ್ ಬ್ಲೂಚಿಪ್ ಫಂಡ್, ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಶೇ 10.06ರಷ್ಟು ಹಣ ತೊಡಗಿಸಿದ್ದರೆ, ಕೆನರಾ ರೊಬೆಕೋ ಬ್ಲೂಚಿಪ್ ಎಚ್‌ಡಿಎಫ್‌ಸಿಯಲ್ಲಿ ಶೇ 8.48ರಷ್ಟು ಹೂಡಿಕೆ ಮಾಡಿದೆ. ಹೀಗೆ ಈ ಎರಡೂ ಫಂಡ್‌ಗಳು ಒಂದೇ ಕಂಪನಿಗಳಲ್ಲಿ ತುಸು ಬೇರೆ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿವೆ. ಹೀಗಿರುವಾಗ, ಹೂಡಿಕೆಯಲ್ಲಿ ವೈವಿಧ್ಯ ತರುವ ಉದ್ದೇಶಕ್ಕಾಗಿ ನೀವು ಈ ಎರಡು ಫಂಡ್‌ಗಳನ್ನು ಆಯ್ಕೆ ಮಾಡಿಕೊಂಡ ಉದ್ದೇಶ ಈಡೇರಿಲ್ಲ ಎಂದಾಯಿತು. ಒಂದೇ ರೀತಿಯ 27 ಕಂಪನಿಗಳಲ್ಲಿ ಎರಡೂ ಫಂಡ್‌ಗಳು ಹಣ ತೊಡಗಿಸಿವೆ. ಎಕ್ಸಿಸ್ 7 ಪ್ರತ್ಯೇಕ ಕಂಪನಿಗಳಲ್ಲಿ ಹೂಡಿದ್ದರೆ, ಕೆನರಾ 22 ಪ್ರತ್ಯೇಕ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ. ಇಲ್ಲಿ ಹೂಡಿಕೆ ವೈವಿಧ್ಯ ಸಾಧಿಸಲು ಹೆಚ್ಚು ಅವಕಾಶ ಇಲ್ಲ.

‘ಓವರ್‌ಲ್ಯಾಪ್’ ತಿಳಿಯುವುದು ಹೇಗೆ?: ಹೂಡಿಕೆ ವೇಳೆ ಫಂಡ್‌ಗಳ ಆಯ್ಕೆಗೂ ಮುನ್ನ ‘ಓವರ್‌ಲ್ಯಾಪ್’ ಬಗ್ಗೆ ತಿಳಿದುಕೊಂಡು ಮುನ್ನಡೆಯುವುದು ಬಹಳ ಮುಖ್ಯ. ದಿ ಫಂಡೂ ಡಾಟ್ ಕಾಂ (www.thefundoo.com ), ಅಡ್ವೈಸರ್ ಖೋಜ್ ಡಾಟ್ ಕಾಂ (www.advisorkhoj.com) ನಂತಹ ಜಾಲತಾಣಗಳಲ್ಲಿ ಮ್ಯೂಚುವಲ್ ಫಂಡ್ ಪೋರ್ಟ್‌ಫೋಲಿಯೋ ‘ಓವರ್‌ಲ್ಯಾಪ್’ ಬಗ್ಗೆ ತಿಳಿಯಬಹುದು. ಉದಾಹರಣೆಗೆ, ದಿ ಫಂಡೂ ವೆಬ್‌ಸೈಟ್‌ಗೆ ಭೇಟಿ ನೀಡಿ Tools ಎನ್ನುವ ಹೈಪರ್‌ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ಅಲ್ಲಿ ಪೋರ್ಟ್‌ಫೋಲಿಯೊ ‘ಓವರ್‌ಲ್ಯಾಪ್’ ಐಕಾನ್ ಕಾಣಿಸುತ್ತದೆ. ಅದರ ಮೇಲೆಕ್ಲಿಕ್ ಮಾಡಿ, ಸ್ಕೀಮ್ ‘ಎ’ ಮತ್ತು ಸ್ಕೀಮ್‌ ‘ಬಿ’ ಫಂಡ್ ಆಯ್ಕೆ ಮಾಡಬೇಕು. ನಂತರ Go ಎನ್ನುವ ಕೊಂಡಿಯ ಮೇಲೆ ಕ್ಲಿಕ್ ಮಾಡಿದಾಗ ನಿಮಗೆನಿರ್ದಿಷ್ಟ ಎರಡು ಫಂಡ್‌ಗಳ ನಡುವೆ ಎಷ್ಟು ‘ಓವರ್‌ಲ್ಯಾಪ್’ ಇದೆ ಎನ್ನುವುದು ತಿಳಿಯುತ್ತದೆ.

ADVERTISEMENT

(ಗಮನಿಸಿ: ಹಣಕಾಸು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ಕೆಲವು ಕಂಪನಿಗಳ ಹೆಸರು ಮತ್ತು ವೆಬ್‌ಸೈಟ್‌ಗಳ ಹೆಸರು ಉಲ್ಲೇಖಿಸಲಾಗಿದೆ. ಇಲ್ಲಿ ಬರೆದಿರುವ ಹೆಸರುಗಳು ಹೂಡಿಕೆ ಶಿಫಾರಸು ಅಲ್ಲ.)

ಷೇರುಪೇಟೆಯಲ್ಲಿ ಹೂಡಿಕೆದಾರರ ಉತ್ಸಾಹ
ಮೇ 21ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡಿವೆ. 50,540 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 3.70ರಷ್ಟು ಗಳಿಕೆ ಕಂಡಿದೆ. 15,175 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 3.38ರಷ್ಟು ಜಿಗಿದಿದೆ. ಉತ್ತಮ ತ್ರೈಮಾಸಿಕ ಫಲಿತಾಂಶಗಳು, ದಿನದಿಂದ ದಿನಕ್ಕೆ ತಗ್ಗುತ್ತಿರುವ ಕೋವಿಡ್ ಪ್ರಕರಣಗಳು, ಕೆಲವೆಡೆ ಲಾಕ್‌ಡೌನ್ ಸಡಿಲ ಸೇರಿ ಕೆಲವು ಪ್ರಮುಖ ಕಾರಣಗಳಿಗಳಿಂದ ಮಾರುಕಟ್ಟೆಯಲ್ಲಿ ಸಕಾರಾತ್ಮಕತೆ ಇದೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 7.5ರಷ್ಟು ಗಳಿಕೆ ಕಂಡಿದೆ. ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 7ರಷ್ಟು ಮತ್ತು ನಿಫ್ಟಿ ರಿಯಲ್ ಎಸ್ಟೇಟ್ ಶೇ 6.7ರಷ್ಟು ಹೆಚ್ಚಳ ಕಂಡಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,753.9 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಹೂಡಿಕೆದಾರರು ₹ 1,318.52 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಈ ವಾರ ಇಂಡಸ್ ಇಂಡ್ ಬ್ಯಾಂಕ್ ಶೇ 14ರಷ್ಟು, ಎಸ್‌ಬಿಐ ಶೇ 12ರಷ್ಟು, ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 11ರಷ್ಟು, ಎಚ್‌ಡಿಎಫ್‌ಸಿ ಶೇ 8ರಷ್ಟು ಮತ್ತು ಬಜಾಜ್ ಫೈನಾನ್ಸ್ ಶೇ 7ರಷ್ಟು ಗಳಿಕೆ ಕಂಡಿವೆ. ಏರ್‌ಟೆಲ್ ಶೇ 6ರಷ್ಟು, ಬ್ರಿಟಾನಿಯಾ ಶೇ 5ರಷ್ಟು ಮತ್ತು ಟಾಟಾ ಸ್ಟೀಲ್ ಶೇ 2ರಷ್ಟು ಕುಸಿದಿವೆ.

ಮುನ್ನೋಟ: 15,175 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಸಾರ್ವಕಾಲಿಕ ದಾಖಲೆ ಮಟ್ಟವನ್ನು ಮೀರಿ ಮುನ್ನಡೆಯಲು ಇನ್ನು 250 ಅಂಶಗಳನ್ನಷ್ಟೇ ದಾಟಬೇಕಿದೆ. ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿರುವುದು ಹೂಡಿಕೆದಾರರ ಉತ್ಸಾಹಕ್ಕೆ ಕಾರಣವಾಗಿದೆ. ಆದರೆ ಲಸಿಕೆ ನೀಡುವಲ್ಲಿ ಆಗುತ್ತಿರುವ ವಿಳಂಬ ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದಲ್ಲದೆ ಕೋವಿಡ್ ಪ್ರಕರಣಗಳು ಮತ್ತೆ ಏರುಗತಿಯತ್ತ ಮುಖ ಮಾಡಿದರೂ ಸೂಚ್ಯಂಕಗಳು ಹಿನ್ನಡೆ ಅನುಭವಿಸುವ
ಸಂಭವವಿದೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.