ADVERTISEMENT

ಐಪಿಒ: ಷೇರು ಸಿಗುವ ಸಾಧ್ಯತೆ ಹೆಚ್ಚಿಸುವುದು ಹೇಗೆ?

ಅವಿನಾಶ್ ಕೆ.ಟಿ
Published 14 ಮಾರ್ಚ್ 2021, 19:30 IST
Last Updated 14 ಮಾರ್ಚ್ 2021, 19:30 IST
ಷೇರುಪೇಟೆ ವಹಿವಾಟು–ಸಾಂದರ್ಭಿಕ ಚಿತ್ರ
ಷೇರುಪೇಟೆ ವಹಿವಾಟು–ಸಾಂದರ್ಭಿಕ ಚಿತ್ರ   

ಐಪಿಒ ಮೂಲಕ ಷೇರು ಖರೀದಿಸಲು ಹೂಡಿಕೆದಾರರು ನಿರೀಕ್ಷೆಗೂ ಮೀರಿ ಮುಂದಾದರೆ ಲಾಟರಿ ಪದ್ಧತಿ ಮೂಲಕ ಷೇರುಗಳ ಹಂಚಿಕೆಯಾಗುತ್ತದೆ. ಹೀಗಿದ್ದರೂ, ಐಪಿಒ ಮೂಲಕ ಷೇರು ಪಡೆದುಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಲು ಕೆಲವು ಸರಳ ಮಾರ್ಗಗಳಿವೆ.

‘ನಾನು ಬಹಳಷ್ಟು ಬಾರಿ ಐಪಿಒಗೆ (ಆರಂಭಿಕ ಸಾರ್ವಜನಿಕ ಹೂಡಿಕೆ) ಅರ್ಜಿ ಸಲ್ಲಿಸಿದ್ದೇನೆ. ಆದರೆ ಒಂದು ಬಾರಿಯೂ ನನಗೆ ಐಪಿಒದಲ್ಲಿ ಷೇರುಗಳು ಸಿಕ್ಕಿಲ್ಲ’ ಎಂದು ಅನೇಕರು ದೂರುತ್ತಾರೆ. ಐಪಿಒಗೆ ಅರ್ಜಿ ಸಲ್ಲಿಸಿ ಮಾತ್ರಕ್ಕೆ, ಹಂಚಿಕೆ ವೇಳೆ (Share Allotment) ಷೇರುಗಳು ಸಿಕ್ಕೇ ಸಿಗುತ್ತದೆ ಎಂಬ ಖಾತರಿ ಇಲ್ಲ. ಐಪಿಒ ಮೂಲಕ ಷೇರು ಖರೀದಿಸಲು ಹೂಡಿಕೆದಾರರು ನಿರೀಕ್ಷೆಗೂ ಮೀರಿ ಮುಂದಾದರೆ ಲಾಟರಿ ಪದ್ಧತಿ ಮೂಲಕ ಷೇರುಗಳ ಹಂಚಿಕೆಯಾಗುತ್ತದೆ. ಹೀಗಿದ್ದರೂ, ಐಪಿಒ ಮೂಲಕ ಷೇರು ಪಡೆದುಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಲು ಕೆಲವು ಸರಳ ಮಾರ್ಗಗಳಿವೆ.

1) ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ: ಅಪೂರ್ಣ ಮಾಹಿತಿ ಅಥವಾ ಅಸ್ಪಷ್ಟ ಮಾಹಿತಿಯ ಕಾರಣಕ್ಕಾಗಿ ಬಹಳಷ್ಟು ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ. ಎರಡೆರಡು ಕಡೆ ಬಿಡ್ಡಿಂಗ್ ಮಾಡಿ, ಒಂದು ಕಡೆ ಹೂಡಿಕೆದಾರ ಅಂತ ನಮೂದಿಸಿ, ಮತ್ತೊಂದು ಕಡೆ ಷೇರುದಾರ ಎಂದು ನಮೂದಿಸಿದರೆ ನಿಮ್ಮ ಕೋರಿಕೆ ರದ್ದಾಗುವ ಸಾಧ್ಯತೆ ಇರುತ್ತದೆ. ಪ್ಯಾನ್ ನಂಬರ್, ಡಿ-ಮ್ಯಾಟ್ ಖಾತೆ ವಿವರ, ಬ್ಯಾಂಕ್ ವಿವರ ಸರಿಯಾಗಿದೆಯಾ ಎಂಬುದನ್ನು ನೋಡಿಕೊಳ್ಳಿ.

ADVERTISEMENT

ನೀವು ಆನ್‌ಲೈನ್ ಆ್ಯಪ್‌ಗಳ ಮೂಲಕ ಐಪಿಒ ಅರ್ಜಿ ಸಲ್ಲಿಸುತ್ತಿದ್ದರೆ ಬ್ಯಾಂಕ್ ಖಾತೆ, ಡಿ-ಮ್ಯಾಟ್ ಖಾತೆ ಮತ್ತು ಯುಪಿಐ ಐಡಿ ನಿಮ್ಮ ಪ್ಯಾನ್ ನಂಬರ್ ಜೊತೆ ಸರಿಯಾಗಿ ಲಿಂಕ್ ಆಗಿದೆಯೇ ಎಂಬುದನ್ನು ನೋಡಿಕೊಳ್ಳಿ. ಕೆಲವರು ಐಪಿಒಗೆ ಅರ್ಜಿ ಸಲ್ಲಿಸುವಾಗ ತಮ್ಮ ಬ್ಯಾಂಕ್ ಖಾತೆ, ಡಿ-ಮ್ಯಾಟ್ ಮತ್ತು ಪ್ಯಾನ್ ವಿವರ ನೀಡಿ, ಮಡದಿಯ ಯುಪಿಐ ಐಡಿ ಲಿಂಕ್ ಮಾಡಿರುತ್ತಾರೆ. ಹೀಗಾದಾಗ ಅರ್ಜಿ ತಿರಸ್ಕೃತಗೊಳ್ಳುತ್ತದೆ. ಅರ್ಜಿ ಭರ್ತಿ ಮಾಡುವಾಗ ಯಾವುದೇ ಲೋಪ ಆಗದಂತೆ ನೋಡಿಕೊಳ್ಳಿ.

2) ಹಲವು ಡಿ-ಮ್ಯಾಟ್ ಖಾತೆಗಳನ್ನು ಬಳಸಿದರೆ ಅರ್ಜಿ ತಿರಸ್ಕೃತ: ನಿಮ್ಮ ಬಳಿ ಎರಡೋ ಮೂರೋ ಡಿ-ಮ್ಯಾಟ್ ಖಾತೆಗಳಿದ್ದು, ಎಲ್ಲಾ ಖಾತೆಗಳಿಂದ ಒಂದೇ ಪ್ಯಾನ್ ನಂಬರ್ ಬಳಸಿ ಐಪಿಒಗೆ ಅರ್ಜಿ ಸಲ್ಲಿಸಿದರೆ ಅದು ತಿರಸ್ಕೃತಗೊಳ್ಳುತ್ತದೆ. ಹಾಗಾಗಿ, ಒಂದೇ ಡಿ-ಮ್ಯಾಟ್ ಖಾತೆ ಬಳಸಿ ಅರ್ಜಿ ಸಲ್ಲಿಸಿ.

3) ಕುಟುಂಬದವರು, ಸ್ನೇಹಿತರ ಡಿ-ಮ್ಯಾಟ್ ಖಾತೆ ಬಳಸಿ: ನಿಮ್ಮ ಡಿ-ಮ್ಯಾಟ್ ಖಾತೆ ಬಳಸಿ ಐಪಿಒಗೆ ಅರ್ಜಿ ಸಲ್ಲಿಸುವ ಜೊತೆಗೆ, ನಿಮ್ಮ ಮಡದಿ, ಮಕ್ಕಳು, ಸ್ನೇಹಿತರು ಅಥವಾ ಸಂಬಂಧಿಕರ ಹೆಸರಲ್ಲಿ ಡಿ-ಮ್ಯಾಟ್ ಖಾತೆಯಿದ್ದರೆ ಅಲ್ಲಿಂದಲೂ ಅರ್ಜಿ ಸಲ್ಲಿಸಿ. ಐಪಿಒದಲ್ಲಿ ನಿರೀಕ್ಷೆಗೂ ಮೀರಿ ಜನರು ಹೂಡಿಕೆ ಮಾಡಿದಾಗ ಷೇರುಗಳ ಹಂಚಿಕೆ ಲಾಟರಿ ಪದ್ಧತಿಯಲ್ಲಿ ಆಗುವ ಕಾರಣ ಕುಟುಂಬದವರು, ಸ್ನೇಹಿತರ ಅಕೌಂಟ್ ಬಳಸಿ ಅರ್ಜಿ ಸಲ್ಲಿಸಿದಾಗ ಷೇರುಗಳು ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ. ಪ್ಯಾನ್ ಕಾರ್ಡ್ ಆಧಾರದಲ್ಲಿ ಐಪಿಒ ಹಂಚಿಕೆಯಾಗುವುದರಿಂದ ಹೀಗೆ ಮಾಡಿದಾಗ ಷೇರುಗಳು ಸಿಗುವ ಸಾಧ್ಯತೆ ದ್ವಿಗುಣವಾಗುತ್ತದೆ.

4) ಕಟ್ ಆಫ್ ಬೆಲೆ ಆಯ್ಕೆ ಮಾಡಿ: ಐಪಿಒ ನಂತರದಲ್ಲಿ ನಿಗದಿತ ಕಂಪನಿ ಷೇರುದಾರರಿಗೆ ಯಾವ ಬೆಲೆಗೆ ಷೇರುಗಳನ್ನು ಹಂಚಿಕೆ ಮಾಡುತ್ತದೋ ಅದೇ ಕಟ್ ಆಫ್‌ ಬೆಲೆ (Cut-off price). ಉದಾಹರಣೆಗೆ ಐಪಿಒ ಮಾಡುತ್ತಿರುವ ಕಂಪನಿ ₹ 100ರಿಂದ ₹ 105ರ ಬೆಲೆಯಲ್ಲಿ ಷೇರುಗಳನ್ನು ಬಿಡ್ ಮಾಡಬಹುದು ಎಂದು ಹೇಳುತ್ತದೆ ಎಂದುಕೊಳ್ಳೋಣ. ನೀವು ಪ್ರತಿ ಷೇರಿಗೆ ₹ 105 ಕೊಡಲು ಒಪ್ಪಿದರೆ ನಿಮಗೆ ಷೇರು ಸಿಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ.

ಐಪಿಒದಲ್ಲಿ ಹೂಡಿಕೆಗೆ ಮಾಡುವ ಮುನ್ನ ಗಮನಿಸಿ:

1. ನೀವು ಐಪಿಒ ಹೂಡಿಕೆ ಮಾಡಲು ಬಯಸಿರುವ ಕಂಪನಿ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ.

2. ಕಂಪನಿಯ ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ, ಅವರ ಪೂರ್ವಾಪರಗಳೇನು ಎಂಬುದನ್ನು ಗಮನಿಸಿ.

3. ಕಂಪನಿಯ ಭವಿಷ್ಯದ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಕಲೆಹಾಕಿ.

4. ಕಂಪನಿಯ ಮೌಲ್ಯವನ್ನು ಸರಿಯಾಗಿ ಅಂದಾಜು ಮಾಡಿ. ಕಂಪನಿಯು ಗಳಿಕೆಗೆ ಮಾಡುತ್ತಿರುವ ವೆಚ್ಚದ ಅನುಪಾತ ಅರಿತುಕೊಳ್ಳಿ.

5. ಐಪಿಒಗೆ ಹೋಗುವ ಕಂಪನಿಯು ತನ್ನ ಇಡೀ ಉದ್ಯಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕವಾಗಿ ಮುಕ್ತವಾಗಿಟ್ಟಿರುತ್ತದೆ. ಆ ದಾಖಲೆಯಲ್ಲಿ ಕಂಪನಿಯ ಹಣಕಾಸಿನ ಸ್ಥಿತಿಗತಿ ಸೇರಿ ಎಲ್ಲ ಮಾಹಿತಿ ಇರುತ್ತದೆ. ಇದನ್ನು ಸರಿಯಾಗಿ ಓದಿದಾಗ ನಿರ್ದಿಷ್ಟ ಐಪಿಒ ಹೂಡಿಕೆಗೆ ನೀವು ಮುಂದಾಗಬೇಕೇ ಬೇಡವೇ ಎನ್ನುವುದು ಅರಿವಾಗುತ್ತದೆ.

ಷೇರುಪೇಟೆಯಲ್ಲಿ ಹೆಚ್ಚಿದ ಅನಿಶ್ಚಿತ ಸ್ಥಿತಿ

ಮಾರ್ಚ್ 12ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಗಳು ಒಂದಿಷ್ಟು ಗಳಿಕೆಯೊಂದಿವೆ ವಹಿವಾಟು ಪೂರ್ಣಗೊಳಿಸಿವೆ. 50,792 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ಮತ್ತು 15,030 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿರುವ ನಿಫ್ಟಿ ವಾರದ ಅವಧಿಯಲ್ಲಿ ಶೇಕಡ 1ರಷ್ಟು ಗಳಿಕೆ ಕಂಡಿವೆ. ನಿಫ್ಪಿ ಬ್ಯಾಂಕ್ ಶೇ 1ರಷ್ಟು ಗಳಿಸಿದ್ದರೆ, ಮಿಡ್ ಕ್ಯಾಪ್ ಸೂಚ್ಯಂಕ ಬಹುತೇಕ ಯಥಾಸ್ಥಿತಿಯಲ್ಲಿದೆ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಬಾಂಡ್‌ಗಳ ಮೇಲಿನ ಗಳಿಕೆ ಹೆಚ್ಚಾದ ಕಾರಣ ಷೇರುಪೇಟೆ ಸೂಚ್ಯಂಕಗಳು ಕಳೆದ ಶುಕ್ರವಾರದ ವಹಿವಾಟಿನಲ್ಲಿ ಏಕಾಏಕಿ ಕುಸಿತ ದಾಖಲಿಸಿವೆ.

ಅವಿನಾಶ್ ಕೆ.ಟಿ.

ಮಾರ್ಚ್ 8ರಿಂದ ಮಾರ್ಚ್ 12ರವರೆಗಿನ ವಹಿವಾಟನ್ನು ಗಮನಿಸಿದರೆ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾಗಿರುವುದು ಕಂಡುಬರುತ್ತದೆ. ವಲಯವಾರು ಪ್ರಗತಿಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್, ವಾಹನ ಉತ್ಪಾದನೆ, ರಿಯಲ್ ಎಸ್ಟೇಟ್ ವಲಯಗಳು ಶೇ 1ರಿಂದ ಶೇ 3ರಷ್ಟು ಕುಸಿದಿವೆ. ಮಾಹಿತಿ ತಂತ್ರಜ್ಞಾನ ವಲಯ ಅತಿ ಹೆಚ್ಚು ಗಳಿಕೆ ಕಂಡಿದೆ.

ಇಳಿಕೆ–ಏರಿಕೆ: ನಿಫ್ಟಿಯಲ್ಲಿ ಕಳೆದ ವಾರದ ವಹಿವಾಟಿನಲ್ಲಿ ಹೀರೊ ಮೋಟೋಕಾರ್ಪ್ ಶೇ 3.21ರಷ್ಟು, ಅದಾನಿ ಪೋರ್ಟ್ಸ್ ಶೇ 2.78ರಷ್ಟು, ಬಜಾಜ್ ಆಟೋ ಶೇ 2.76ರಷ್ಟು, ಅಲ್ಟ್ರಾಟೆಕ್ ಸಿಮೆಂಟ್ ಶೇ 2.53ರಷ್ಟು ಮತ್ತು ಟಾಟಾ ಮೋಟರ್ಸ್ ಶೇ 2.34ರಷ್ಟು ಕುಸಿತ ದಾಖಲಿಸಿವೆ. ಯುಪಿಎಲ್ ಶೇ 4.86ರಷ್ಟು, ಟೆಕ್ ಮಹೀಂದ್ರ ಶೇ 4.54ರಷ್ಟು, ಇನ್ಫೊಸಿಸ್ ಶೇ 4.42ರಷ್ಟು, ಎಚ್‌ಸಿಎಲ್ ಟೆಕ್ ಶೇ 4.01ರಷ್ಟು ಮತ್ತು ಎಲ್ ಆ್ಯಂಡ್ ಟಿ ಶೇ 3.45ರಷ್ಟು ಗಳಿಕೆ ಕಂಡಿವೆ. ಮಿಡ್ ಕ್ಯಾಪ್ ವಲಯದಲ್ಲಿ ಎಂಟಿಎನ್‌ಎಲ್, ಸಾರೆಗಾಮ, ಬಿಇಎಂಎಲ್, ಕಾನ್ ಫಿನ್ ಮತ್ತು ಐಟಿಡಿಸಿ ಹೆಚ್ಚು ಗಳಿಕೆ ದಾಖಲಿಸಿವೆ.

ಮುನ್ನೋಟ: ಕೈಗಾರಿಕೆ ಉತ್ಪಾದನೆ ಅಂಕಿ-ಅಂಶ ಮತ್ತು ಗ್ರಾಹಕ ಬೆಲೆ ಸೂಚ್ಯಂಕದ ದತ್ತಾಂಶಕ್ಕೆ ಷೇರುಪೇಟೆ ಇಂದು ಪ್ರತಿಕ್ರಿಯಿಸುವ ಸಾಧ್ಯತೆಯಿದೆ. ಇದರ ಜತೆ ಜಾಗತಿಕ ವಿದ್ಯಮಾನಗಳು ಮತ್ತು ಕೋವಿಡ್ ಕುರಿತ ಬೆಳವಣಿಗೆಗಳು ಪ್ರಭಾವ ಬೀರಲಿವೆ. ಮಾರುಕಟ್ಟೆಯಲ್ಲಿ ಸದ್ಯ ಅನಿಶ್ಚಿತತೆ ಮುಂದುವರಿಯಲಿದೆ. ಈಗಿನ ಸ್ಥಿತಿಯಲ್ಲಿ ಆರ್ಥಿಕವಾಗಿ ಸದೃಢವಾಗಿರುವ ಮತ್ತು ಮೂಲಭೂತವಾಗಿ ಉತ್ತಮ ಬೆಳವಣಿಗೆ ಸಾಧಿಸಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದು.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂ ನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.