ADVERTISEMENT

ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಲೇಖನ | ಕಾಂಗ್ರೆಸ್‌ಗೆ ಬೇಕಿದೆ ಒಳಬಂಡಾಯ

ಪ್ರಶ್ನಿಸುವವರು, ಸರ್ವಾಧಿಕಾರಿ ನಾಯಕತ್ವದ ವಿರುದ್ಧ ನಿಲ್ಲುವವರು ಪಕ್ಷಕ್ಕೆ ಶಕ್ತಿ ತುಂಬುತ್ತಾರೆ

ಕ್ಯಾಪ್ಟನ್‍ ಗೋಪಿನಾಥ್‍
Published 4 ಆಗಸ್ಟ್ 2020, 19:30 IST
Last Updated 4 ಆಗಸ್ಟ್ 2020, 19:30 IST
ಕಾಂಗ್ರೆಸ್‌ ಪಕ್ಷ
ಕಾಂಗ್ರೆಸ್‌ ಪಕ್ಷ   

‘ನಾನು ಬಂಡೇಳುತ್ತೇನೆ; ಹಾಗಾಗಿಯೇ ನಾನು ಉಳಿದುಕೊಂಡಿದ್ದೇನೆ’ ಎಂದು ಆಲ್ಬರ್ಟ್ ಕಮು ಹೇಳಿದ್ದ. ಕಮು ಪಾಲಿಗೆ ಅಸ್ತಿತ್ವಕ್ಕೆ ಸಮರ್ಥನೆಯೆಂಬುದು, ‘ನಾನು ಆಲೋಚಿಸುತ್ತೇನೆ; ಹಾಗಾಗಿ ನಾನು ಬದುಕಿದ್ದೇನೆ’ ಎಂಬುದಕ್ಕಿಂತಲೂ ಹೆಚ್ಚಿನದ್ದಾಗಿತ್ತು. ನಂಬಿಕೆ, ಕ್ರಿಯೆಗಳನ್ನು ಪ್ರಶ್ನಿಸದೆಯೇ ಬದುಕುವುದು ಅಂದರೆ ಹಾಗೆ ಬದುಕುವ ವ್ಯಕ್ತಿ ಯಾವುದಕ್ಕೂ ಬಾರದ ತ್ಯಾಜ್ಯ ಇದ್ದಂತೆ. ಪ್ರಭುತ್ವ, ರಾಜನ ಅಧಿಕಾರ, ಧಾರ್ಮಿಕ ವ್ಯವಸ್ಥೆ ಅಥವಾ ರಾಜಕೀಯ ಪಕ್ಷದ ವಿರುದ್ಧ ಬಂಡೇಳುವುದು ಮನುಷ್ಯನ ಮೂಲ ವರ್ತನೆ. ಇದು ನಾಗರಿಕತೆಯ ವಿಕಾಸಕ್ಕೆ ಆಧಾರವೂ ಹೌದು.

ಈ ಗುಣವು ವಿಶ್ವದ ಎಲ್ಲ ಮಹಾನ್ ವ್ಯಕ್ತಿಗಳಲ್ಲೂ ಇತ್ತು– ಟಾಲ್‌ಸ್ಟಾಯ್‌, ಮಹಾತ್ಮ ಗಾಂಧಿ, ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಸಾಕ್ರೆಟಿಸ್, ಬುದ್ಧ ಮತ್ತು ಬಸವಣ್ಣನಲ್ಲಿ ಇದು ಇತ್ತು. ದಬ್ಬಾಳಿಕೆ, ಅನ್ಯಾಯ, ಅಸಮಾನತೆಗಳನ್ನು ಇವರೆಲ್ಲ ಪ್ರಶ್ನಿಸಿದರು, ಅವುಗಳ ವಿರುದ್ಧ ಬಂಡೆದ್ದರು. ಇವನ್ನೆಲ್ಲ ಹಿನ್ನೆಲೆಯಲ್ಲಿ ಇಟ್ಟುಕೊಂಡು ಆಲೋಚಿಸಿದಾಗ, ನೆಹರೂ–ಗಾಂಧಿ ವಂಶದ ವಿರುದ್ಧ ಬಂಡೇಳಲು ಅಥವಾ ಆ ವಂಶವನ್ನು ಪ್ರಶ್ನಿಸಲು ಕಾಂಗ್ರೆಸ್ ಸದಸ್ಯರಲ್ಲಿ ಯಾರೂ ಸಿದ್ಧರಿಲ್ಲದಿರುವುದು ಏಕೆ, ಸದಸ್ಯರ ವಂಶವಾಹಿಯಲ್ಲಿ ಅಂಥದ್ದೇನಿದೆ ಎಂಬ ಪ್ರಶ್ನೆಗಳು ಮೂಡುತ್ತವೆ.

2019ರ ಲೋಕಸಭಾ ಚುನಾವಣೆಯಲ್ಲಿನ ಸೋಲಿಗೆ ಜವಾಬ್ದಾರಿ ಹೊತ್ತು, ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನದಿಂದ ದೂರ ಸರಿದರು. ಹೊಸ ನಾಯಕನನ್ನು ಆಯ್ಕೆ ಮಾಡುವಂತೆ ಪಕ್ಷದ ಸದಸ್ಯರಿಗೆ ರಾಹುಲ್ ಮತ್ತೆ ಮತ್ತೆ ಮನವಿ ಮಾಡಿಕೊಳ್ಳುತ್ತಿದ್ದರೂ ಪಕ್ಷದ ಯುವ ಮುಖಂಡರಾಗಲೀ ಹಿರಿಯರಾಗಲೀ ಮುಂದೆ ಬಂದು ‘ಹೊಸ ನಾಯಕನ ಆಯ್ಕೆಗೆ ಚುನಾವಣೆ ನಡೆಸಿ’ ಎಂದು ಕೇಳಲಿಲ್ಲ. ನೆಹರೂ–ಗಾಂಧಿ ವಂಶದ ಯಾರಾದರೂ ಮುಂದೆ ಬಂದು ತಮ್ಮನ್ನು ಮುನ್ನಡೆಸಲಿ ಎಂದು ಇಡೀ ಪಕ್ಷ ಕಾಯುತ್ತಿತ್ತು.

ADVERTISEMENT

ವಿಧೇಯ ನಾಯಕಗಣವು ಸೋನಿಯಾ ಗಾಂಧಿ ಅವರೆದುರು ಅಡ್ಡಬಿದ್ದು, ಹಂಗಾಮಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿ ಎಂದು ಅವರನ್ನೇ‍ಪುನಃ ಕುರ್ಚಿಯಲ್ಲಿ ಕೂರಿಸಿತು. ವಂಶದ ಹೊರಗಿನವರು ಅಧ್ಯಕ್ಷ ಸ್ಥಾನವನ್ನು ಕೇಳದಿರಲಿ ಎಂದು ಧೂರ್ತತನದಿಂದ ಮಾಡುವ ಕೆಲಸ ಇದು.

ಸೋನಿಯಾ ಅವರು ಹಿಂದೆ ಅನಿವಾರ್ಯವಾಗಿ ಪಕ್ಷದ ಚುಕ್ಕಾಣಿ ಹಿಡಿದಿದ್ದವರು. ಧೈರ್ಯ, ಕುಗ್ಗದ ಮನೋಭಾವ, ಚಾಣಾಕ್ಷತನ ಹಾಗೂ ಭಾರತದ ರಾಜಕಾರಣ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯದಿಂದಾಗಿ, ಅವರು ಪಕ್ಷವನ್ನು ಒಟ್ಟಾಗಿ ಇರಿಸಿಕೊಂಡರು. ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ರಚಿಸಿಕೊಂಡು, ದೇಶವನ್ನು ಹತ್ತು ವರ್ಷ ಆಳಿದರು.

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್

ನಿಷ್ಠಾವಂತರನ್ನು ತಮ್ಮ ಸುತ್ತ ಇರಿಸಿಕೊಂಡು ಸೋನಿಯಾ ಅವರು ಈ ಸಾಧನೆ ತೋರಿದರು. ಪುತ್ರ ರಾಹುಲ್ ಅವರು ಹೊರೆಯಂತೆ ಇದ್ದರೂ ತಮ್ಮ ಸುತ್ತ ಇದ್ದವರಿಗೆ ಗಣನೀಯ ಪ್ರಭಾವ ಇತ್ತಾದ ಕಾರಣ ಸೋನಿಯಾ ಅವರಿಗೆ ಇದು ಸಾಧ್ಯವಾಯಿತು. ರಾಜಕೀಯದ ಯಾವುದೇ ಮಾನದಂಡ ಅನುಸರಿಸಿ ನೋಡಿದರೂ ಇದೊಂದು ಮಹತ್ವದ ಸಾಧನೆಯೇ.

ಈಗ ರಾಹುಲ್ ಅವರು ಅಧ್ಯಕ್ಷ ಸ್ಥಾನ ತ್ಯಜಿಸಿದ ನಂತರ ಪಕ್ಷಕ್ಕೆ ಮಂಕು ಕವಿದಂತೆ ಆಗಿದೆ. ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಅವರು ಭಿನ್ನಮತೀಯರ ನೇತೃತ್ವ ವಹಿಸಿಕೊಂಡ ನಂತರ, ಕಾಂಗ್ರೆಸ್ಸಿನಲ್ಲಿ ಮತ್ತೆ ಸಮತೋಲನ ತಪ್ಪಿದೆ. ಅಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಉತ್ಸಾಹ ತೋರುತ್ತಿರುವ ಬಿಜೆಪಿಗೆ ನೆಲೆ ಬಿಟ್ಟುಕೊಡುವ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಕರ್ನಾಟಕ, ಮಧ್ಯಪ್ರದೇಶದಲ್ಲಿ ಸರ್ಕಾರವನ್ನು ಕಳೆದುಕೊಂಡ ನಂತರ ಕಾಂಗ್ರೆಸ್ ಈಗ ರಾಜಸ್ಥಾನದಲ್ಲಿಯೂ ಅದೇ ಸ್ಥಿತಿ ಎದುರಿಸುವ ಅಪಾಯದಲ್ಲಿದೆ. ಇದು ಪಕ್ಷದ ಪಾಲಿಗೆ ಅಸ್ತಿತ್ವದ ಪ್ರಶ್ನೆಯಾಗಬಹುದು.

ಕಾಂಗ್ರೆಸ್ಸಿನ ಕುಟುಂಬ ರಾಜಕಾರಣದಲ್ಲಿ ಅಧಿಕಾರ ಕೇಂದ್ರಗಳು ಹಲವು ಇವೆ. ರಾಹುಲ್ ಅವರು ತಮ್ಮದೇ ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಆಕ್ರಮಣ ನಡೆಸುತ್ತಿದ್ದಾರೆ. ಇತ್ತ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಪಕ್ಷದಲ್ಲಿ ಒಂದಿಷ್ಟು ಕೆಲಸಗಳನ್ನು ಮಾಡುತ್ತ, ಸಚಿನ್ ಪೈಲಟ್ ಜೊತೆ ತೆರೆಯ ಹಿಂದೆ ಸಂಧಾನ ನಡೆಸುತ್ತ ಇದ್ದಾರೆ. ವಯಸ್ಸಾಗಿರುವ, ಆರೋಗ್ಯವು ಅಷ್ಟೇನೂ ಚೆನ್ನಾಗಿರದ ಸೋನಿಯಾ ಅವರು ಧೈರ್ಯದಿಂದ ಒಂದಿಷ್ಟು ಕೆಲಸಗಳನ್ನು ಮಾಡಲು ಮುಂದಾಗುತ್ತಿದ್ದಾರೆ. ಆದರೆ, ಸಚಿನ್ ಪೈಲಟ್ ಹಾಗೂ ಅವರ ಜೊತೆಗಿರುವ ಶಾಸಕರ ಮೇಲೆ ಹಿಡಿತ ಸಾಧಿಸಲು ಅವರಿಂದ ಆಗುತ್ತಿಲ್ಲ. ಇವೆಲ್ಲದರ ಜೊತೆಯಲ್ಲೇ, ಹಳೆಯ ನಿಷ್ಠಾವಂತರು ಸಂಘಟನೆಯ ವಿಚಾರದಲ್ಲಿ ಒಂದಿಷ್ಟು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸಮುದ್ರ
ಪ್ರಕ್ಷುಬ್ಧಗೊಂಡ ಸಂದರ್ಭದಲ್ಲೇ ಕಾಂಗ್ರೆಸ್ ಎಂಬ ಹಡಗಿಗೆ ದಿಗ್ದರ್ಶಕ ಇಲ್ಲದಂತೆ ಆಗಿದೆ.

ಪರಿಸ್ಥಿತಿ ಹೀಗಿದ್ದರೂ ಹಳಬರಾದ ದಿಗ್ವಿಜಯ ಸಿಂಗ್, ಪಿ. ಚಿದಂಬರಂ, ಕಪಿಲ್ ಸಿಬಲ್, ಮನಮೋಹನ್ ಸಿಂಗ್ ಅವರ ಸಾಲಿನವರಾಗಲೀ ಅಥವಾ ಪಕ್ಷದಲ್ಲಿನ ಯುವಕರಾಗಲೀ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಆಗಲಿ ಎಂದು ಬಹಿರಂಗವಾಗಿ ಆಗ್ರಹ ಮಾಡುತ್ತಿಲ್ಲ. ವಂಶದ ಕುಡಿಯ ಎದುರು ನಿಂತು ಚುನಾವಣೆಯಲ್ಲಿ ಸ್ಪರ್ಧಿಸಲು ಒಬ್ಬನೇ ಒಬ್ಬ ವ್ಯಕ್ತಿ ಸಿದ್ಧನಿಲ್ಲ. ವಂಶವೊಂದಕ್ಕೆ ತನ್ನನ್ನು ತಾನು ಅಡಮಾನ ಇರಿಸಿಕೊಂಡಿರುವ, ನಿಸ್ಸಹಾಯಕವಾಗಿ ಶರಣಾಗಿರುವ ರಾಜಕೀಯ ಪಕ್ಷ ಉಳಿದುಕೊಳ್ಳುತ್ತದೆಯೇ? ಪಕ್ಷದ ಅಂಗಾಂಗಗಳು ಅಸ್ವಸ್ಥಗೊಂಡಿರುವಾಗ, ಅದನ್ನು ಸರಿಪಡಿಸಿಕೊಳ್ಳುವ ಮನಸ್ಸು ಆ ಅಂಗಾಂಗಗಳಲ್ಲಿ ಇಲ್ಲದಿರುವಾಗ ಅಂತಹ ರಾಜಕೀಯ ಪಕ್ಷಕ್ಕೆ ಮುಂದುವರಿಯುವ ಅರ್ಹತೆ ಇದೆಯೇ? ಹಳೆಯ ರಾಜಕೀಯ ಪಕ್ಷವೊಂದು ಯಾವ ರೀತಿಯ ಕುಸಿತವನ್ನು ಕಂಡಿದೆ ನೋಡಿ...

ಪಾಠ ಕಲಿಯಲು ಕಾಂಗ್ರೆಸ್ ಬೇರೆಲ್ಲೂ ನೋಡ ಬೇಕಾಗಿಲ್ಲ. 134 ವರ್ಷಗಳಿಗೂ ಅಧಿಕವಾಗಿರುವ ತನ್ನ ಚೈತನ್ಯಶಾಲಿ ಇತಿಹಾಸವನ್ನು ಅವಲೋಕಿಸಿದರೆ ಸಾಕು. ತಮ್ಮ ಕಾಲಘಟ್ಟದಲ್ಲಿ ದಿಗ್ಗಜರಾಗಿದ್ದ ಹಲವರು– ಅವರಲ್ಲಿ ವಿದೇಶಿಯರೂ ಇದ್ದರು– ಪಕ್ಷದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಗೋಪಾಲಕೃಷ್ಣ ಗೋಖಲೆ, ಮಹಾತ್ಮ ಗಾಂಧಿ, ಸರೋಜಿನಿ ನಾಯ್ಡು, ಚಿತ್ತರಂಜನ್ ದಾಸ್, ಮೌಲಾನಾ ಆಜಾದ್, ಮದನ ಮೋಹನ ಮಾಳವೀಯ, ಆ್ಯನಿ ಬೆಸೆಂಟ್, ಸುಭಾಷ್‌ಚಂದ್ರ ಬೋಸ್, ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ, ಸರ್ದಾರ್ ಪಟೇಲ್‌... ಇವರೆಲ್ಲ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದವರು.

ಸ್ಥಾಪನೆಯಾದ ಕಾಲದಿಂದಲೂ ಪಕ್ಷವು ಪ್ರಜಾತಂತ್ರ, ಆಲೋಚನೆಗಳಲ್ಲಿ ಬಹುತ್ವ, ಎಲ್ಲ ಧರ್ಮಗಳ ಜನರನ್ನೂ ಒಳಗೊಳ್ಳುವ ತತ್ವದಲ್ಲಿ ನಂಬಿಕೆ ಇರಿಸಿದೆ. ದೊಡ್ಡ ವ್ಯಕ್ತಿಗಳನ್ನು ಈ ಪಕ್ಷ ಏಕೆ ತನ್ನತ್ತ ಸೆಳೆಯಿತು, ಭಾರಿ ಪ್ರಮಾಣದಲ್ಲಿ ಜನಬೆಂಬಲವನ್ನು ಏಕೆ ಪಡೆದುಕೊಂಡಿತು ಎಂಬುದನ್ನು ಇದು ವಿವರಿಸುತ್ತದೆ. ಮಹಾತ್ಮ ಗಾಂಧಿ ವಿರೋಧ ಇದ್ದರೂ ಬೋಸ್ ಅವರು 1938 ಹಾಗೂ 1939ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷದ ಅಧ್ಯಕ್ಷರಾದರು. 1950ರಲ್ಲಿ ಪಟೇಲರ ಬೆಂಬಲ ಪಡೆದು ಪುರುಷೋತ್ತಮ ದಾಸ್ ಟಂಡನ್ ಅಧ್ಯಕ್ಷರಾದರು. ಆಗ ಟಂಡನ್ ಅವರನ್ನು ನೆಹರೂ ವಿರೋಧಿಸಿದ್ದರು.

ಸಾವಿನಂಚಿಗೆ ಸರಿಯುತ್ತಿರುವ ಆಲೋಚನೆಗಳನ್ನು ಪ್ರಶ್ನಿಸುವವರು, ಸರ್ವಾಧಿಕಾರಿ ನಾಯಕತ್ವದ ವಿರುದ್ಧ ನಿಲ್ಲುವವರು ಪಕ್ಷಕ್ಕೆ ಶಕ್ತಿ ತುಂಬುತ್ತಾರೆ. ಯಾವುದೇ ಪಕ್ಷದ ಆರೋಗ್ಯಕ್ಕೆ ವ್ಯಕ್ತಿಗತ ನೆಲೆಯಲ್ಲಿ ಕಾಣಿಸುವ ಭಿನ್ನಾಭಿಪ್ರಾಯ ಬೇಕು. ಯಥಾಸ್ಥಿತಿಯನ್ನು ಪ್ರಶ್ನಿಸುವವರು ತಾವಿರುವ ಪಕ್ಷದಲ್ಲಿ ಬದಲಾವಣೆ ತರುತ್ತಾರೆ ಅಥವಾ ಪಕ್ಷದಿಂದ ಹೊರನಡೆದು ಹೊಸದೇನನ್ನೋ ಕಟ್ಟುತ್ತಾರೆ.

ಪಕ್ಷವನ್ನು ಇಬ್ಭಾಗ ಮಾಡಿ, ಹಳಬರ ವಿರುದ್ಧ ಸೆಟೆದುನಿಂತ ಇಂದಿರಾ ಗಾಂಧಿ ಅವರಿಗೆ ಪಕ್ಷದ ಚಿಹ್ನೆಯನ್ನೂ ನಿರಾಕರಿಸಲಾಯಿತು. ಆದರೂ ಇಂದಿರಾ ಅವರು ದೈತ್ಯಾಕಾರವಾಗಿ ಬೆಳೆದುನಿಂತರು. ದಣಿವರಿಯದ, ಭಯವೆಂದರೆ ಏನೆಂದು ತಿಳಿಯದ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ಸನ್ನು ತೊರೆದು ತಮ್ಮದೇ ಆದ ಪಕ್ಷ ಕಟ್ಟಿದರು. ಪಶ್ಚಿಮ ಬಂಗಾಳದಲ್ಲಿ ದಶಕಗಳಿಂದ ಅಧಿಕಾರದಲ್ಲಿದ್ದ ಭಾರತೀಯ ಕಮ್ಯುನಿಸ್ಟ್ ಪಕ್ಷವನ್ನು (ಮಾರ್ಕ್ಸ್‌ವಾದಿ) ಅವರು ಏಕಾಂಗಿಯಾಗಿ ಹೋರಾಡಿ ಸೋಲಿಸಿದರು.

ವಂಶಪಾರಂಪರ್ಯದ ರಾಜಕಾರಣ ನಡೆಸುವ ಆರೋಪಕ್ಕೆ ಗುರಿಯಾಗಿರುವ ನೆಹರೂ– ಗಾಂಧಿ ಕುಟುಂಬವು ಪಕ್ಷವನ್ನು ಸರಿಪಡಿಸುತ್ತದೆ ಎಂದು ನಿರೀಕ್ಷಿಸಲು ಆಗದು. ಪಕ್ಷ ಉಳಿಯಬೇಕು ಎಂದಾದರೆ, ನಾಯಕತ್ವದಲ್ಲಿ ಬದಲಾವಣೆ ತರಲು, ಪಕ್ಷಕ್ಕೆ ಹೊಸ ಜೀವ ನೀಡಲು, ಪಕ್ಷವನ್ನು ಪುನರುಜ್ಜೀವಗೊಳಿಸಲು ಪಕ್ಷದ ಒಳಗಡೆಯೇ ಒಂದು ಬಂಡಾಯ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.