ADVERTISEMENT

ಸೋಂಕು: ಕೊಳೆಗೇರಿಗಳು ತಾಳಬಲ್ಲವೇ?

ಸಮಾಜವು ಮರೆತುಬಿಟ್ಟಿರುವ ಜನರನ್ನು ನೆನಪಿಸಿಕೊಳ್ಳಲೇಬೇಕಾದ ಕಾಲ ಇದಾಗಿದೆ!

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 19:45 IST
Last Updated 12 ಏಪ್ರಿಲ್ 2020, 19:45 IST
13-EditLEAD-04-20
13-EditLEAD-04-20   

ಕೋವಿಡ್–19 ಸಾಂಕ್ರಾಮಿಕ ಕಾಯಿಲೆಯು ವಿಶ್ವದ ಎಲ್ಲೆಡೆ ಹರಡಲು ಕಾರಣರಾಗಿದ್ದು ವಿಮಾನಗಳಲ್ಲಿ, ಐಷಾರಾಮಿ ಹಡಗುಗಳಲ್ಲಿ ಪ್ರಯಾಣಿಸುವ ಶಕ್ತಿ ಇರುವವರು. ಆದರೆ, ನಗರಗಳ ಕೊಳೆಗೇರಿಗಳಲ್ಲಿ ವಾಸಿಸುವ, ಸಮಾಜವು ಮರೆತುಬಿಟ್ಟಿರುವ ಜನರಿಗೆ ಕೊರೊನಾ ವೈರಾಣುವಿನ ಬೆದರಿಕೆ ಹೆಚ್ಚಾಗಿ ಎದುರಾಗಿದೆ.

ಸರಿಸುಮಾರು ನೂರು ಕೋಟಿ ಜನ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಶುದ್ಧ ನೀರು, ನಿರ್ಮಲ ಪರಿಸರ, ಸರಿಯಾದ ಮನೆ ಇವ್ಯಾವುವೂ ಇಲ್ಲದ, ಜನರಿಂದ ಗಿಜಿಗುಡುವ ವಸತಿ ಪ್ರದೇಶಗಳನ್ನು ವಿಶ್ವಸಂಸ್ಥೆಯು ‘ಕೊಳೆಗೇರಿ’ ಎಂದು ವ್ಯಾಖ್ಯಾನಿಸಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆಗಳು ಕೊಳೆಗೇರಿಗಳಿಗೆ ಪ್ರವೇಶ ಪಡೆಯುವುದಿದೆ. ಕೋವಿಡ್–19 ಕಾಯಿಲೆ ಹರಡಿರುವ ಬಗ್ಗೆ ಮುಂಬೈನ ಧಾರಾವಿ, ಕರಾಚಿಯ ಒರಾಂಗಿ ಪಟ್ಟಣ, ಮನಿಲಾದ ಪಯಟಾಸ್‌ಗಳಿಂದ ವರದಿಯಾಗಿದೆ. 2014ರಿಂದ 2016ರ ನಡುವೆ ಪಶ್ಚಿಮ ಆಫ್ರಿಕಾದಲ್ಲಿ ಕಾಣಿಸಿಕೊಂಡ ಎಬೊಲಾ ಸಾಂಕ್ರಾಮಿಕವು ಪ್ರಮುಖವಾಗಿ ಹರಡಿದ್ದು ಗಿನಿಯಾ, ಸಿಯೆರಾ ಲಿಯೋನ್, ಲೈಬೀರಿಯಾಗಳ ಜನಜಂಗುಳಿಯಿಂದ ಕೂಡಿರುವ ಕೊಳೆಗೇರಿಗಳಲ್ಲಿ.

ಸಾಂಕ್ರಾಮಿಕಗಳು ಹರಡುವ ಸಮಯದಲ್ಲಿ ಕೊಳೆಗೇರಿ ವಾಸಿಗಳು ಶೀತಜ್ವರ ಹಾಗೂ ಡೆಂಗಿಯಂತಹ ಕಾಯಿಲೆಗಳಿಗೆ ಬಹುಬೇಗ ತುತ್ತಾಗುತ್ತಾರೆ. ದೆಹಲಿಯಿಂದ 2018ರಲ್ಲಿ ಬಂದ ವರದಿಯೊಂದರ ಅನ್ವಯ: ವ್ಯಾಪಕವಾಗಿ ಲಸಿಕೆ ಹಾಕಿದರೂ ಸಾಮಾಜಿಕ ಅಂತರವನ್ನು (ಮನೆಯಲ್ಲೇ ಇರುವುದು, ಶಾಲೆಗಳನ್ನು ಮುಚ್ಚುವುದು, ರೋಗಿಗಳನ್ನು ಇತರರಿಂದ ಬೇರೆ ಮಾಡುವುದು) ಕಾಯ್ದುಕೊಂಡರೂ ಕೊಳೆಗೇರಿ ವಾಸಿಗಳು ಸೋಂಕಿಗೆ ತುತ್ತಾಗುವ ಪ್ರಮಾಣವು ಇತರರಿಗೆ ಹೋಲಿಸಿದರೆ ಶೇಕಡ 44ರಷ್ಟು ಹೆಚ್ಚು.

ADVERTISEMENT

ಕೊಳೆಗೇರಿಗಳಲ್ಲಿ ಸೋಂಕು ಹರಡುವ ಪ್ರಮಾಣ ಹೆಚ್ಚಿರುವುದಕ್ಕೆ ಒಂದು ಮುಖ್ಯ ಕಾರಣ, ಅಲ್ಲಿ ಜನ ಒಂದೆಡೆ ಗುಂಪುಗೂಡುವುದು. ಉದಾಹರಣೆಗೆ, ದೆಹಲಿಯ ಕೊಳೆಗೇರಿಯೊಂದರಲ್ಲಿ ಜನಸಾಂದ್ರತೆಯು ಇತರ ಕಡೆಗಳಿಗೆ ಹೋಲಿಸಿದರೆ 10ರಿಂದ 100 ಪಟ್ಟು ಹೆಚ್ಚು. ಮಕ್ಕಳಲ್ಲಿರುವ ಅಪೌಷ್ಟಿಕತೆ ಹಾಗೂ ದೀರ್ಘಕಾಲೀನ ಕಾಯಿಲೆಗಳು ವಯಸ್ಕರಲ್ಲಿ ಹೆಚ್ಚಿರುವುದು ಕೂಡ ಕೊಳೆಗೇರಿ ನಿವಾಸಿಗಳು ಸೋಂಕಿಗೆ ಸುಲಭವಾಗಿ ತುತ್ತಾಗುವಂತೆ ಮಾಡುತ್ತವೆ.

ನೈರ್ಮಲ್ಯ ಕಾಯ್ದುಕೊಳ್ಳುವ ಸೇವೆಗಳು ತೀರಾ ಸೀಮಿತವಾಗಿರುವುದು ಕೂಡ ಇನ್ನೊಂದು ಸಮಸ್ಯೆ. ನಿರ್ಮಲ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲದಿರುವ ಕೊಳೆಗೇರಿಗಳಲ್ಲಿ ಕೊರೊನಾ ವೈರಾಣು ಮನುಷ್ಯನ ಮಲದ ಮೂಲಕವೂ ಹರಡಬಹುದು. ಇಲ್ಲಿ ಶುದ್ಧ ನೀರಿನ ಲಭ್ಯತೆಯೂ ಇರುವುದಿಲ್ಲ.

ವಾತಾನುಕೂಲ ವ್ಯವಸ್ಥೆ ಸರಿಯಾಗಿ ಇಲ್ಲದ ಮನೆಗಳಲ್ಲಿ ಸೌದೆ ಬಳಸಿ ಅಡುಗೆ ಮಾಡುವುದು ತೀವ್ರತರಹದ ಉಸಿರಾಟದ ಸಮಸ್ಯೆ ಸೃಷ್ಟಿಸಬಲ್ಲದು. ಕೊರೊನಾ ವೈರಾಣುವಿನ ಸೋಂಕಿಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸಬಲ್ಲದು. ಆಡಳಿತದಲ್ಲಿ ಇರುವವರು ಕೊಳೆಗೇರಿಗಳಲ್ಲಿ ವಾಸಿಸುವ ಸಮುದಾಯಗಳನ್ನು ಅಲಕ್ಷ್ಯ ಮಾಡುವುದು ಸಾಂಕ್ರಾಮಿಕಗಳು ಹರಡುವುದಕ್ಕೆ ಅವಕಾಶ ಕಲ್ಪಿಸುವ ಬಹುಮುಖ್ಯ ಅಂಶ.

ಕೊಳೆಗೇರಿ ನಿವಾಸಿಗಳ ವಿಚಾರದಲ್ಲಿ ವೈದ್ಯಕೀಯ ಕ್ರಮಗಳನ್ನು ಜಾಗರೂಕವಾಗಿ ತೆಗೆದುಕೊಳ್ಳಬೇಕು. ಕೊಳೆಗೇರಿವಾಸಿಗಳ ಅಗತ್ಯಗಳನ್ನು ಪರಿಗಣಿಸದೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸುವುದು ವಾಸ್ತವದಲ್ಲಿ ಪ್ರಯೋಜನಕಾರಿಯಲ್ಲ. ಸಮುದಾಯ ಸಂಘಟನೆಗಳ ಜೊತೆ ಸೇರಿ ನೀತಿಗಳನ್ನು ರೂಪಿಸಬೇಕು. ಸ್ಥಳೀಯ ಗುಂಪುಗಳನ್ನು ಕೂಡ ಇದರಲ್ಲಿ ತೊಡಗಿಸಿಕೊಳ್ಳಬಹುದು.ಬ್ರೆಜಿಲ್‌ನಲ್ಲಿ ಕೆಲವು ಗುಂಪುಗಳು ಒಟ್ಟಾಗಿ ಕೊಳೆಗೇರಿಗಳ ಪ್ರವೇಶದ್ವಾರದಲ್ಲಿ ಕೈತೊಳೆಯುವ ಕಿಯೋಸ್ಕ್‌ಗಳನ್ನು ನಿರ್ಮಿಸಿವೆ.

ಕೊಳೆಗೇರಿ ಪ್ರದೇಶಗಳಲ್ಲಿ ಯಾವುದೇ ಸಾಂಕ್ರಾಮಿಕವು ನೆಲೆ ಕಂಡುಕೊಂಡಿತು ಎಂದಾದರೆ, ಅದರ ಪ್ರಮಾಣವೆಷ್ಟು ಎನ್ನುವುದನ್ನು ಅಂದಾಜಿಸುವುದು ಕಷ್ಟವಾಗುತ್ತದೆ. ಅದರ ಪರಿಣಾಮವಾಗಿ, ಕಾಯಿಲೆ ಹರಡುವುದನ್ನು ತಡೆಯುವುದೂ ಕಷ್ಟವಾಗುತ್ತದೆ. ಉದಾಹರಣೆಗೆ, ಕೊಳೆಗೇರಿಗಳನ್ನು ನಿರ್ಲಕ್ಷಿಸಿದರೆ ನಗರದಲ್ಲಿನ ಸೋಂಕಿತರ ಅಂದಾಜು ಪ್ರಮಾಣದ ಲೆಕ್ಕದಲ್ಲಿ ಶೇಕಡ 10ರಿಂದ ಶೇಕಡ 50ರಷ್ಟು ಕಡಿಮೆ ಆಗಿಬಿಡುತ್ತದೆ ಎಂದು ದೆಹಲಿಯ ಸಂಶೋಧಕರು ಹೇಳಿದ್ದಾರೆ. ಕೊಳೆಗೇರಿಗಳಲ್ಲಿ ಸೋಂಕಿನ ಪ್ರಮಾಣ ಎಷ್ಟು ಎಂಬುದನ್ನು ಕಡಿಮೆ ಅಂದಾಜು ಮಾಡಿದಾಗ, ಅಲ್ಲಿಗೆ ಆರೋಗ್ಯ ಸೇವೆ ಸೌಲಭ್ಯಗಳೂ ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುತ್ತವೆ. ಇವೆಲ್ಲದರ ಜೊತೆ ಆರ್ಥಿಕ ಸಮಸ್ಯೆ ಕೂಡ ಇರುತ್ತದೆ. ಕೊರೊನಾ ವೈರಾಣುವಿನ ಆರ್ಥಿಕ ಪರಿಣಾಮಗಳು ಕೊಳೆಗೇರಿ ನಿವಾಸಿಗಳ ಮೇಲೆ, ಇತರರ ಮೇಲೆ ಆಗುವ ರೀತಿಯಲ್ಲೇ ಇರುವುದಿಲ್ಲ. ಕೊಳೆಗೇರಿ ನಿವಾಸಿಗಳಲ್ಲಿ ಹೆಚ್ಚಿನವರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಾರೆ. ಲಾಕ್‌ಡೌನ್‌ ಅವಧಿಯಲ್ಲಿ ಈ ವಲಯವೇ ಮರೆಯಾಗಿರುತ್ತದೆ. ನವದೆಹಲಿ, ಮುಂಬೈ, ಮನಿಲಾ, ಕರಾಚಿ, ರಿಯೊ ಡಿ ಜನೈರೊ ಅಥವಾ ನೈರೋಬಿಯಂತಹ ನಗರಗಳ ಕೊಳೆಗೇರಿಗಳ ಜನರ ದಿನದ ದುಡಿಮೆಯು ಲಾಕ್‌ಡೌನ್‌ ಪರಿಣಾಮವಾಗಿ ಈಗಾಗಲೇ ಸಂಕಷ್ಟಕ್ಕೆ ಸಿಲುಕಿದೆ.

ಇಂತಹ ಪರಿಣಾಮಗಳನ್ನು ಊಹಿಸಿ ಬ್ರೆಜಿಲ್ ಸರ್ಕಾರವು ತುರ್ತು ಆರ್ಥಿಕ ಕ್ರಮವನ್ನು ಕೈಗೊಂಡಿತು. ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವವರಿಗೆ ಮೂರು ತಿಂಗಳವರೆಗೆ 114 ಡಾಲರ್ ನೀಡುವ ಯೋಜನೆ ಇದು. ಈ ವಲಯಗಳ ಕೆಲಸಗಾರರಿಗೆ ಮಾಲೀಕರು ವೇತನ ಕೊಡಬೇಕು, ಅವರು ಇರುವ ಮನೆಗಳಿಂದ ಮನೆ ಮಾಲೀಕರು ಅವರನ್ನು ಎತ್ತಂಗಡಿ ಮಾಡಬಾರದು ಎನ್ನುವ ಮನವಿಯನ್ನು ದೆಹಲಿಯ ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಆದರೆ ಇನ್ನೂ ಹೆಚ್ಚಿನ ಕ್ರಮಗಳು ಬೇಕು ಎಂಬುದು ಸ್ಪಷ್ಟ.

ಜಿ–20 ದೇಶಗಳು ಘೋಷಿಸಿರುವ ಕೊರೊನಾ ನಿಧಿಯು ಕೊಳೆಗೇರಿ ನಿವಾಸಿಗಳಿಗಾಗಿಯೂ ವಿನಿಯೋಗ ಆಗಬೇಕು. ಲಾಕ್‌ಡೌನ್‌ ಅವಧಿಯ ಸಂಕಷ್ಟ ನಿವಾರಣೆಗಾಗಿ ಬಡವರಿಗೆ ಮೂರು ತಿಂಗಳ ಅವಧಿಗೆ ಪಡಿತರ ನೀಡಲಾಗುವುದು ಹಾಗೂ ನಗದು ವರ್ಗಾವಣೆ ಮಾಡಲಾಗುವುದು ಎಂದು ಭಾರತ ಹೇಳಿದೆ. ಕಡಿಮೆ ಆದಾಯ ಇರುವವರ ನೆರವಿಗಾಗಿ ಹಲವು ದೇಶಗಳು ನಗದು ವರ್ಗಾವಣೆ ಯೋಜನೆ ಹೊಂದಿವೆ. ಈ ಯೋಜನೆಗಳ ವ್ಯಾಪ್ತಿಯನ್ನು ವಿಸ್ತರಿಸಬೇಕು.

ಲಾಕ್‌ಡೌನ್‌ ಅವಧಿಯಲ್ಲಿ ಕೆಲಸ ಕಳೆದುಕೊಂಡವರಿಗೆ ತರಬೇತಿ ನೀಡಿ, ಅವರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊರೊನಾ ಸೋಂಕಿತರ ಜೊತೆ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡುವ ಕೆಲಸಕ್ಕೆ ಬಳಸಿಕೊಳ್ಳಬಹುದು. ಬ್ರೆಜಿಲ್‌ನ ಕುಟುಂಬ ಆರೋಗ್ಯ ಯೋಜನೆಯ ಅಡಿಯಲ್ಲಿ ಸ್ಥಳೀಯರಿಗೆ ತರಬೇತಿ ನೀಡಿ, ಅವರು ತಮ್ಮ ಸಮುದಾಯದವರಿಗೆ ಮೂಲಭೂತ, ಪ್ರಾಥಮಿಕ ಕಾಳಜಿ ಕುರಿತು ಅರಿವು ಮೂಡಿಸುವಂತೆ ಮಾಡಲಾಗುತ್ತಿದೆ.

ಅಕ್ರಮ ವಸತಿ ಪ್ರದೇಶಗಳು ಇರುವುದು ಅಭಿವೃದ್ಧಿಶೀಲ ದೇಶಗಳಲ್ಲಿ ಮಾತ್ರವೇ ಅಲ್ಲ, ಶ್ರೀಮಂತ ದೇಶಗಳ ನಗರಗಳಲ್ಲಿ ಕೂಡ ಇಂತಹ ವಸತಿ ಪ್ರದೇಶಗಳಿವೆ. ಶಾಶ್ವತ ಸೂರು ಇಲ್ಲದವರು ತಾತ್ಕಾಲಿಕವಾಗಿ ತಂಗಿರುವ ಪ್ರದೇಶಗಳು ಲಾಸ್‌ ಏಂಜಲಿಸ್, ಸಿಯಾಟಲ್, ನ್ಯೂಯಾರ್ಕ್‌ ನಗರ, ಪ್ಯಾರಿಸ್, ಲಂಡನ್‌ನಲ್ಲಿ ಕೂಡ ಇವೆ. ಇವು ಸಾಂಕ್ರಾಮಿಕಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಬಾಂಗ್ಲಾದೇಶ, ಲೆಬನಾನ್, ಕೀನ್ಯಾ ಮತ್ತು ಗ್ರೀಸ್ ದೇಶಗಳಲ್ಲಿನ ನಿರಾಶ್ರಿತರ ಶಿಬಿರಗಳು ಕೊರೊನಾ ವೈರಾಣುವಿನಿಂದ ತಪ್ಪಿಸಿಕೊಳ್ಳಲಾರವು ಎಂಬ ಆತಂಕ ಹೆಚ್ಚುತ್ತಿದೆ.

ಕೊಳೆಗೇರಿಗಳು, ತಾತ್ಕಾಲಿಕ ವಸತಿ ಶಿಬಿರಗಳು, ನಿರಾಶ್ರಿತರ ಶಿಬಿರವಾಸಿಗಳನ್ನು ಮರೆಯದೆ ನೋಡಿಕೊಳ್ಳುವುದು ವಿಶ್ವದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಹಾಗೂ ಸರ್ಕಾರಗಳ ಕೆಲಸ.

***

ಲೇಖಕರು: ಲೀ ರಿಲೆ: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ (ಬರ್ಕಲಿ) ಸಾರ್ವಜನಿಕ ಆರೋಗ್ಯ ಶಾಲೆಯಲ್ಲಿ ಪ್ರೊಫೆಸರ್.

ರಾಬರ್ಟ್‌: ಅದೇ ವಿ.ವಿ.ಯಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಇವಾ: ಸ್ಯಾನ್‌ಫ್ರಾನ್ಸಿಸ್ಕೊದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧನಾ ಫೆಲೊ.

ದಿ ನ್ಯೂಯಾರ್ಕ್‌ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.