ADVERTISEMENT

ಹೊಲಸು ಹೊರಗಿಹುದೇ ಊರೊಳಗಿಲ್ಲವೇ?

ಸಮುದಾಯವನ್ನು ಅಂತರಂಗದ ಅವಲೋಕನದಿಂದ ವಿಮುಖಗೊಳಿಸುವ ಯತ್ನಗಳ ಕುರಿತು ಇರಲಿ ಎಚ್ಚರ

ಟಿ.ಎನ್‌.ವಾಸುದೇವಮೂರ್ತಿ
Published 7 ಸೆಪ್ಟೆಂಬರ್ 2020, 19:30 IST
Last Updated 7 ಸೆಪ್ಟೆಂಬರ್ 2020, 19:30 IST
   

ಮನುಷ್ಯನ ಉಳಿದೆಲ್ಲ ವ್ಯಾಮೋಹಗಳಿಗಿಂತಲೂ ಧರ್ಮದ ಮೇಲಿನ ಮೋಹ ಅತ್ಯಂತ ಪ್ರಬಲವಾದುದು. ಆಳದಲ್ಲಿ ಮನುಷ್ಯ ಏಕಾಂಗಿಯಾಗಿದ್ದಾನೆ, ದುರ್ಬಲ ನಾಗಿದ್ದಾನೆ, ಸದಾ ಅನಾಥ ಭಾವವನ್ನು ಅನುಭವಿಸುತ್ತಿರುತ್ತಾನೆ. ಧರ್ಮವಾದರೂ ಅವನಿಗೆ ಒಂದು ಸಾಂತ್ವನ, ಸಾಂಗತ್ಯ ಮತ್ತು ಭವ್ಯ ಭವಿಷ್ಯದ ಭರವಸೆಗಳನ್ನು ನೀಡುತ್ತದೆ. ಸಾಂಸಾರಿಕ ವ್ಯಾಮೋಹಗಳು ಅವನಿಗೆ ಒಂದಲ್ಲ ಒಂದು ಹಂತದಲ್ಲಿ ಜುಗುಪ್ಸೆ ಮೂಡಿಸಿರಬಹುದು. ಆದರೆ, ಸದಾಕಾಲ ಭವಿಷ್ಯದ ಖಾತರಿಯನ್ನೇ ನೀಡುವ ಧರ್ಮದಿಂದ ಅವನಿನ್ನೂ ಹಾಗೆ ಭ್ರಮನಿರಸನಗೊಂಡಿಲ್ಲ.

ಟಿ.ಎನ್‌. ವಾಸುದೇವಮೂರ್ತಿ

ಮಂಥರೆ ತನ್ನ ಏಕಮಾತ್ರ ಮೋಹದ ‘ವಸ್ತು’ವಾದ ಭರತನೇ ರಾಜ್ಯಭಾರ ಮಾಡಬೇಕು ಎಂದು ಬಯಸಿದಂತೆ, ಅನೇಕರು ತನ್ನ ಮೋಹದ ವಸ್ತುವೇ ಇಡೀ ಜಗತ್ತನ್ನಾಳಬೇಕು ಎಂದು ಬಯಸುತ್ತಾರೆ. ಅಂದು ಮಂಥರೆಗೆ ಅಯೋಧ್ಯೆಯ ಅರಮನೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸಬೇಕೆಂಬ ಉದ್ದೇಶವಿರಲಿಲ್ಲ. ಅವಳ ಮೋಹವೇ ಅಂದು ಅಲ್ಲಿನ ಸಂಭ್ರಮದ ವಾತಾವರಣವನ್ನು ಹಾಳುಗೆಡವಿತು.

ಹಾಳುಗೆಡಹುವ ಶಕ್ತಿ ಬಹಿರಂಗದಲ್ಲಿ ಎಲ್ಲೋ ಇದೆ ಎಂದು ಭಾವಿಸಿರುವಷ್ಟೂ ಕಾಲ ನಮ್ಮ ದೈನಂದಿನ ಕ್ಷೋಭೆಗಳಿಗೆ ಕೊನೆ ಇರುವುದಿಲ್ಲ. ಅಂತರಂಗ ಬದಲಾಗದೆ ಬಹಿರಂಗದ ಜಗತ್ತು ಬದಲಾಗದು. ಇಲ್ಲಿ ಅಂತರಂಗವೆಂಬ ಪದಕ್ಕೂ ಹಿರಿದಾದ ವ್ಯಾಪ್ತಿ ಇದೆ. ಅದು ವ್ಯಕ್ತಿಯ ಅಂತರಂಗವಷ್ಟೇ ಆಗಬೇಕಿಲ್ಲ. ಒಂದು ಸಮುದಾಯ ಅಥವಾ ಕೋಮಿಗೂ ತನ್ನದೇ ಆದ ಅಂತರಂಗವಿರುತ್ತದೆ. ಬೇರೆ ಬೇರೆ ಕಾಲಘಟ್ಟಗಳಲ್ಲಿ ನಾನಾ ಕೋಮುಗಳ ಅಂತರಂಗದಲ್ಲಿ ಸಂಭವಿಸಿದ ಪಲ್ಲಟಗಳನ್ನು ಇತಿಹಾಸದಲ್ಲಿ ಗುರುತಿಸಬಹುದು. ಉದಾಹರಣೆಗೆ, ಮಹಾತ್ಮ ಗಾಂಧಿಯೊಂದಿಗೆ ಹಿಂದೂ ಕೋಮಿನ ಅಂತರಂಗದಲ್ಲಿ ಒಂದು ವಿಶಿಷ್ಟ ಪರಿವರ್ತನೆ ಸಂಭವಿಸಿತು. ಆಧ್ಯಾತ್ಮಿಕ ಸಾಧನೆಯು ಸಮಾಜಸೇವೆ, ರಾಜಕಾರಣ, ಶಿಕ್ಷಣದಂತಹ ಕ್ಷೇತ್ರಗಳಲ್ಲಿ ನಡೆಸುವ ಪ್ರಯೋಗಗಳನ್ನೂ ಒಳಗೊಳ್ಳಬಲ್ಲದು ಎಂಬ ಕಲ್ಪನೆ ಹಿಂದೂ ಸಮುದಾಯಕ್ಕೆ ಗಾಂಧಿಗೆ ಮುಂಚೆ ಇರಲಿಲ್ಲ.

ADVERTISEMENT

ಗಾಂಧೀಜಿಯ ಹಲವಾರು ಪ್ರಯೋಗಗಳು ವಿಫಲವಾದವು. ಆದರೆ ಆ ಪ್ರಯೋಗಗಳಿಂದ ಹಿಂದೂ ಕೋಮಿನ ಅಂತರಂಗದಲ್ಲಿ ಆಮೂಲಾಗ್ರ ಪರಿವರ್ತನೆ ಯಂತೂ ಆಯಿತು. ಇಂದು, ಗಾಂಧಿಯನ್ನು ಪರಿಗಣಿಸದ ಹಿಂದೂ ಧರ್ಮದ ವಿವೇಚನೆ ಅಪೂರ್ಣವಾಗುತ್ತದೆ, ಅಪಕ್ವವೆನಿಸುತ್ತದೆ. ಗಾಂಧಿ ನಂತರ ಹಿಂದೂ ಸಮುದಾಯದೆದುರು ವಿಕಾಸದ ಅನಂತ ಸಾಧ್ಯತೆಗಳು ತೆರೆದುಕೊಂಡವು. ತಮ್ಮ ಎಲ್ಲ ಪ್ರಯೋಗಗಳಲ್ಲೂ ಗಾಂಧಿ ‘ಶತ್ರು’ವನ್ನು ಹೊರಗೆಲ್ಲೋ ಕಾಣುವ ಪ್ರಯತ್ನ ಮಾಡಲಿಲ್ಲ. ಆ ಕಾಣದ ಶತ್ರು ತಮ್ಮದೇ ಅಂತರಂಗದಲ್ಲಿ ಹುದುಗಿರಬಹುದೇ ಎಂದು ಬೆದಕತೊಡಗಿದರು. ಅಂತರಂಗಕ್ಕೆ ಕುರುಡಾದವನು ಮಾತ್ರ ಹೊರಗೆ ಶತ್ರುವನ್ನು ಕಾಣುತ್ತಾನೆ ಎಂದು ನಂಬಿದ್ದರು.

ಶತ್ರುವನ್ನು ಸಮುದಾಯದಿಂದ ಹೊರಗೆ ಗುರುತಿಸುವ ಪ್ರವೃತ್ತಿಯಿಂದ ಉಂಟಾಗುವ ಬಹುಮುಖ್ಯ ತೊಡಕೆಂದರೆ, ಅದು ಸಮುದಾಯವನ್ನು ಅಂತರಂಗದ ಅವಲೋಕನದಿಂದ ವಿಮುಖಗೊಳಿಸುತ್ತದೆ. ಹಾಗೆ ಶತ್ರುವನ್ನು ತನ್ನಿಂದ ಹೊರಗೆ ಕಾಣಲೆಳಸುವುದೂ ಒಂದು ಬಗೆಯ ಆತ್ಮವಂಚನೆಯಾಗಿದೆ. ಅದು ಒಳಗಿನ ಶತ್ರುವನ್ನು ಒಳಗೇ ಗೋಪ್ಯವಾಗಿ ಪೋಷಿಸುವ ಗುಪ್ತ ಕಾರ್ಯತಂತ್ರವೂ ಆಗಿರಬಹುದು.

ಈ ಕುಟಿಲ ತಂತ್ರಗಾರಿಕೆಯಿಂದ ಒಂದು ಸಮುದಾ ಯದ ರಾಜಕೀಯ ಪ್ರಾಬಲ್ಯ ವರ್ಧಿಸಬಹುದು. ಆದರೆ ಅದರಿಂದ ಆ ಸಮುದಾಯದ ಅಂತರಂಗ ವಿರೂಪ ಗೊಳ್ಳುತ್ತದೆ, ಅದು ಶತಶತಮಾನಗಳಿಂದಲೂ ಪೋಷಿಸಿಕೊಂಡು ಬಂದಿರುವ ಧಾರ್ಮಿಕ ಮೌಲ್ಯಗಳು ರಸಾತಲ ತಲುಪುತ್ತವೆ. ಧರ್ಮವನ್ನು ರಾಜಕೀಯ ಪ್ರಾಬಲ್ಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವವರು ‘ಅನ್ಯ ಧರ್ಮೀಯನ ಅಟ್ಟಹಾಸ ಮಿತಿಮೀರುತ್ತಿದೆ, ಅವನನ್ನು ಮಟ್ಟ ಹಾಕಬೇಕಾದುದು ನಮ್ಮ ಕರ್ತವ್ಯ’ ಎಂದು ತನ್ನ ಕೋಮಿನವರನ್ನು ಪ್ರಚೋದಿಸುತ್ತಾರೆ. ಆದರೆ ನಿಜವಾದ ಧರ್ಮಶ್ರದ್ಧೆಯುಳ್ಳವನು, ಮೊದಲಿಗೆ, ಅನ್ಯರನ್ನು ಸರಿಪಡಿಸುವ ಗೊಡವೆಗೇ ಹೋಗುವುದಿಲ್ಲ; ಅಂತಹ ಉದ್ದೇಶಕ್ಕಾಗಿ ತನ್ನದೇ ಧರ್ಮದ ಅಂತರಂಗವನ್ನು ವಿರೂಪಗೊಳಿಸುವ ಅವಿವೇಕತನಕ್ಕೆ ಮುಂದಾಗುವುದಿಲ್ಲ. ನಿಜವಾದ ಧಾರ್ಮಿಕ ವ್ಯಕ್ತಿಗೆ ತಾನು ನಂಬಿದ ದೇವರು ಸೃಷ್ಟಿಸಿರುವ ಪ್ರಪಂಚದಲ್ಲಿ ದೋಷಗಳೇ ಕಾಣಿಸುವುದಿಲ್ಲ. ದೇವರ ಸೃಷ್ಟಿಯಲ್ಲಿ ದೋಷಗಳನ್ನು ಬೆದಕುವವನು ಧಾರ್ಮಿಕ ವ್ಯಕ್ತಿ ಹೇಗಾಗಬಲ್ಲ?

ಪರಮ ಧಾರ್ಮಿಕ ವ್ಯಕ್ತಿಯಾದ ಗಾಂಧೀಜಿಗೂ ದೋಷಗಳು ಕಂಡವು. ಆದರೆ ಅದನ್ನವರು ವ್ಯಕ್ತಿಗಂಟಿದ ತಾತ್ಕಾಲಿಕ ರೋಗದಂತೆ ಕಂಡರಲ್ಲದೇ ಸೃಷ್ಟಿಯಲ್ಲಿ ಕಾಣಲಿಲ್ಲ. ಅಂತಹ ವ್ಯಾಧಿಗ್ರಸ್ತನನ್ನು- ಅವನ ಕೋಮು ಯಾವುದೇ ಇರಲಿ- ಅವರು ನತದೃಷ್ಟನಂತೆ ಕಂಡರಲ್ಲದೆ ಶತ್ರುವಿನಂತೆ ಕಾಣಲಿಲ್ಲ. ಗಾಂಧಿಯ ಸತ್ಯಾಗ್ರಹ ಹೋರಾಟವು ಬ್ರಿಟಿಷರ ವಿರುದ್ಧದ ಹೋರಾಟವಾಗಿರಲಿಲ್ಲ. ಆಧುನಿಕತೆಯಿಂದ ವಿರೂಪಗೊಂಡು ಪತಿತರಾಗಿದ್ದ ಬ್ರಿಟಿಷರನ್ನು ತನ್ನೊಂದಿಗೆ ಶ್ರೇಯೋಮಾರ್ಗದಲ್ಲಿ ಕರೆದೊಯ್ಯುವ ಪ್ರಯತ್ನವಾಗಿತ್ತು. ಈ ಸೃಷ್ಟಿಯಲ್ಲಿ ಪ್ರತಿಯೊಬ್ಬನೂ ತನಗೆ ಅರಿವಿದ್ದೋ ಇಲ್ಲದೆಯೋ ನಿರಂತರವಾಗಿ ಶ್ರೇಯೋಮಾರ್ಗದಲ್ಲಿ ಹೆಜ್ಜೆ ಹಾಕುತ್ತಿದ್ದಾನೆ ಎಂಬ ಕುವೆಂಪು ಅವರ ‘ಪೂರ್ಣದೃಷ್ಟಿ’ಯೂ ಗಾಂಧಿಯ ಈ ಔದಾರ್ಯದಿಂದಲೇ ಮೂಡಿದುದಾಗಿದೆ.

ಇಂದು ಧಾರ್ಮಿಕ ಮೋಹದಿಂದ ಪೀಡಿತವಾದ ಪ್ರತಿಯೊಂದು ಸಮುದಾಯವೂ ತನ್ನೊಳಗಿನ ಶತ್ರುವನ್ನು ಪತ್ತೆಹಚ್ಚಿ ಗುಣಮುಖವಾದರೆ ಸಾಕಾಗಿದೆ. ಯಾವ ಸಮುದಾಯವೂ ಅನ್ಯ ಸಮುದಾಯವನ್ನು ತನ್ನೊಳಗೆ ಸೇರಿಸಿಕೊಳ್ಳುವ ಔದಾರ್ಯವನ್ನಾಗಲೀ ಅಥವಾ ತನ್ನದೇ ಸಮುದಾಯ, ಸಂಪ್ರದಾಯಗಳ ವಿರುದ್ಧ ಪ್ರತಿಭಟಿಸುವ ಪ್ರಯತ್ನವನ್ನಾಗಲೀ ಮಾಡಬೇಕಾಗಿಲ್ಲ. ಹಾಗೆ ಪ್ರತಿಭಟಿಸುವವನ ಬದುಕು ಸಾಮಾಜಿಕ ಮತ್ತು ಖಾಸಗಿ ಎಂಬೆರಡು ವಿಧದಲ್ಲಿ ಬಿರುಕುಗೊಳ್ಳುತ್ತದೆ. ಉದಾಹರಣೆಗೆ, ಯು.ಆರ್. ಅನಂತಮೂರ್ತಿಯವರು ತಮ್ಮ ‘ಭಾರತೀಪುರ’ ಕಾದಂಬರಿಯಲ್ಲಿ ಜಗನ್ನಾಥನೆಂಬ ಪಾತ್ರವನ್ನು ಸೃಷ್ಟಿಸಿದ್ದಾರೆ. ವಿದೇಶದಲ್ಲಿ ಓದಿ ಬಂದಿದ್ದ ಜಗನ್ನಾಥನಿಗೆ ತನ್ನ ಹುಟ್ಟೂರಾದ ಭಾರತೀಪುರವು ಕಂದಾಚಾರವೆಂಬ ಕೊಳಚೆ ಮಡುವಿನಂತೆ ಕಾಣಿಸುತ್ತದೆ. ಅಲ್ಲಿನ ಮೌಢ್ಯ, ಅಸ್ಪೃಶ್ಯತೆಯಂತಹ ಅನಿಷ್ಟಗಳನ್ನು ಈಗಿಂದೀಗಲೇ ನಾಶ ಮಾಡಬೇಕೆನಿಸುತ್ತದೆ. ಅದಕ್ಕೆ ಅವನು ಕಂಡುಕೊಳ್ಳುವ ಉಪಾಯ ದೇವರ ಕೋಣೆಯಲ್ಲಿದ್ದ ಸಾಲಿಗ್ರಾಮವನ್ನು ಹೊರಗೆ ತಂದು ಅಂಗಳದಲ್ಲಿದ್ದ ಅಸ್ಪೃಶ್ಯರ ಕೈಲಿ ಮುಟ್ಟಿಸುವುದು. ಅವನ ಈ ಹುಂಬ ಪ್ರಯತ್ನವನ್ನು ಸಂಪ್ರದಾಯಸ್ಥರಾದ ಮನೆಯ ಸದಸ್ಯರಾಗಲೀ, ಅಸ್ಪೃಶ್ಯರಾಗಲೀ ಉತ್ತೇಜಿಸುವುದಿಲ್ಲ.

ಜಗನ್ನಾಥನಂಥವರಿಗೆ ಧರ್ಮ, ಸಂಪ್ರದಾಯ ಗಳಿಂದ ಸಿಗುವ ಕಲ್ಪಿತ ಭರವಸೆಗಳನ್ನು ಪೋಷಿಸಿಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ. ಅವರ ಬಳಿ ಪಶ್ಚಿಮದ ವಿದ್ಯೆ ಇರುತ್ತದೆ, ಪಾಶ್ಚಾತ್ಯ ಆಧುನಿಕತೆಯ ಸಂಪರ್ಕವಿರುತ್ತದೆ. ಅವರು ನಂಬುವ ಬದುಕು ಭಾರತೀಪುರದ ಸಾಲಿಗ್ರಾಮ, ದೇವತಾರಾಧನೆಗಳಿಂದಾಚೆಗೂ ವಿಸ್ತರಿಸಿ ರುತ್ತದೆ. ಅವರು ತಮ್ಮ ನೆಲದ ಕೊಳಚೆ ಮಡುವನ್ನು ದಾಟಿ ಗಗನ ಮಾರ್ಗದಲ್ಲಿ ಯಾವ ಕ್ಷಣದಲ್ಲಾದರೂ ಭಾರತೀಪುರದಿಂದ ಆಚೆಗೆ ಪಾರಾಗಬಲ್ಲರು. ಆದರೆ ಧರ್ಮವನ್ನೇ ನಂಬಿ ಬದುಕುತ್ತಿರುವ ನಮ್ಮ ದೇಶದ ಕೆಳಮಧ್ಯಮ ವರ್ಗದ ಬಹುಸಂಖ್ಯಾತ ಮನಸ್ಸುಗಳು ಹಾಗೆ ಸಮುದ್ರೋಲ್ಲಂಘನ ಮಾಡಲಾರವು.
ಭಾರತೀಪುರದಲ್ಲಿ ಚಿತ್ರಿತವಾದಂತೆ ಕೊಳಚೆ ಗುಂಡಿಯಾಗಿ ಪರಿಣಮಿಸಿರುವ ತಮ್ಮ ತಮ್ಮ ಧಾರ್ಮಿಕ ವಾತಾವರಣವನ್ನು ಸ್ವಚ್ಛಗೊಳಿಸಿಕೊಂಡು ಅದರಲ್ಲೇ ಬಾಳಬೇಕಾದ ಹಣೆಬರಹ ಇವರದ್ದಾಗಿದೆ.

ಇಲ್ಲಿನ ಕೊಳಚೆಯ ಮಡು ಇಂದಲ್ಲ ನಾಳೆ ಸಿಹಿನೀರಿನ ಬುಗ್ಗೆಯಾಗಿ ಹೊಮ್ಮಿದರೂ ಹೊಮ್ಮಬಹುದು. ಏಕೆಂದರೆ ಹುಟ್ಟಿದಾಗ ಇದು ಸಿಹಿನೀರಿನ ಮಡುವೇ ಆಗಿತ್ತು. ಆದರೆ ಕೊಳಚೆಯನ್ನೇ ತಮ್ಮ ಬಂಡವಾಳವನ್ನಾಗಿಸಿ ಕೊಳ್ಳುವ ಒಳಗಿನ ಶತ್ರುಗಳು ಅದಕ್ಕೆ ಆಸ್ಪದ ನೀಡುವುದಿಲ್ಲ. ಆದ್ದರಿಂದ ಕಶ್ಮಲವನ್ನು ತೊಡೆಯಲು ಬಯಸುವ ಧರ್ಮಭೀರುಗಳು ತಮ್ಮೊಳಗೇ ಇದ್ದು ತಮ್ಮಂತಾಗದ ತಮ್ಮ ಪಾಲಿನ ಶತ್ರುವನ್ನು ಸರಿಯಾಗಿ ಗುರುತಿಸಬೇಕಾಗಿದೆ. ಹಾಗಲ್ಲದೆ ಧಾರ್ಮಿಕ ಮೋಹಕ್ಕೆ ವಶವಾಗಿ ತಮ್ಮೆಲ್ಲ ಗೋಳಿಗೂ ಹೊರಗಿನವರನ್ನೇ ಗುರಿ ಮಾಡುತ್ತ ಹೋದರೆ ಅವರು ಕೊನೆತನಕ ಕಶ್ಮಲದ ಮಧ್ಯೆಯೇ ಇದ್ದುಬಿಡಬೇಕಾಗುತ್ತದೆ. ಮೋಹಗ್ರಸ್ತನಾ ದವನಿಗೆ ಕಶ್ಮಲವೂ ಮೋಹದ ವಸ್ತುವಾಗಬಲ್ಲದು.

ಲೇಖಕ: ಸಹಾಯಕ ಪ್ರಾಧ್ಯಾಪಕ,
ಜ್ಯೋತಿನಿವಾಸ್ ಕಾಲೇಜ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.