ADVERTISEMENT

ಒಳಚರಂಡಿ ಪೈಪ್‌ಲೈನ್‌ ಸಮರ್ಪಕ ಅಳವಡಿಕೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST

ಬೆಂಗಳೂರು: ‘ಮಂಜುನಾಥ ನಗರ ವ್ಯಾಪ್ತಿಯ ಒಳಚರಂಡಿ ಪೈಪ್‌ಲೈನುಗಳನ್ನು ಬೆಂಗಳೂರು ಜಲಮಂಡಳಿಯು ಆರು ವಾರಗಳಲ್ಲಿ ಸಮಪರ್ಕವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ನಾಲ್ಕನೇ ಹೆಚ್ಚುವರಿ ನ್ಯಾಯಾಲಯ ಆದೇಶಿಸಿದೆ.

ಈ ಸಂಬಂಧ ಮಾಗಡಿ ರಸ್ತೆ ಸಮೀಪದ ಮಂಜುನಾಥ ನಗರದ ನಿವಾಸಿ ಬಾನು ಮಿತ್ರಾ ಎಂಬುವರು ಸಲ್ಲಿಸಿದ್ದ ದಾವೆಯ ವಿಚಾರಣೆ ನಡೆಸಿದ ವೇದಿಕೆಯ ಅಧ್ಯಕ್ಷ ಎಸ್.ಎಲ್.ಪಾಟೀಲ ಹಾಗೂ ಎನ್‌.ಆರ್.ರೂಪಾ ಈ ಕುರಿತಂತೆ ನಿರ್ದೇಶನ ನೀಡಿದ್ದಾರೆ.

‘ದೂರುದಾರರ ಮನವಿಗೆ ಸ್ಪಂದಿಸುವಲ್ಲಿ ಜಲಮಂಡಳಿ ಅಧಿಕಾರಿಗಳು ಕಿವುಡತನ ಪ್ರದರ್ಶಿಸಿದ್ದಾರೆ. ಸಮಸ್ಯೆ ಬಗೆಹರಿಸಿ ಎಂದು ಸ್ವತಃ ಮುಖ್ಯಮಂತ್ರಿಗಳೇ ನಿರ್ದೇಶನ ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಅಷ್ಟೇ ಏಕೆ ವೇದಿಕೆ ನೀಡಿದ ನೋಟಿಸ್‌ಗೂ ಜಲಮಂಡಳಿ ಉತ್ತರ ನೀಡದೆ ನಿರ್ಲಕ್ಷ್ಯ ತೋರಿದೆ’ ಎಂದು ವೇದಿಕೆ ಅತೃಪ್ತಿ ವ್ಯಕ್ತಪಡಿಸಿದೆ.

ADVERTISEMENT

‘ನಮ್ಮ ಮನೆ ಪ್ರದೇಶದಲ್ಲಿ ಚರಂಡಿ ಪೈಪ್‌ ಲೈನ್‌ಗಳನ್ನು ಸೂಕ್ತ ರೀತಿಯಲ್ಲಿ ಅಳವಡಿಸಿಲ್ಲ. ಇದರಿಂದ ಮಳೆಗಾಲದಲ್ಲಿ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ 2012ರಿಂದ ನಾವು ಕಟ್ಟಿರುವ ಮಾಸಿಕ ಕಂದಾಯವನ್ನು ವಾಪಸು ನೀಡಬೇಕು. ನಮಗಾಗಿರುವ ನಷ್ಟಕ್ಕೆ ₹5ಲಕ್ಷ ಲುಕ್ಸಾನು ಭರಿಸಿಕೊಡಲು ಜಲಮಂಡಳಿಗೆ ನಿರ್ದೇಶಿಸಬೇಕು’ ಎಂದು ಬಾನು ಮಿತ್ರಾ ದಾವೆಯಲ್ಲಿ ಕೋರಿದ್ದರು.

ಅರ್ಜಿದಾರರ ಪರ ವಕೀಲ ಎಸ್‌.ನರಸಿಂಹ ವಾದ ಮಂಡಿಸಿದ್ದರು.

ದೂರು ಬಂದಿಲ್ಲ: ಈ ಕುರಿತಂತೆ ಮಂಜುನಾಥ ನಗರದ ಜಲಮಂಡಳಿ ಸಹಾಯಕ ಎಂಜಿನಿಯರ್‌ ಶೇಖರ್ ಶ್ರೀಧರ ನಾಯಕ್‌ ಪ್ರತಿಕ್ರಿಯಿಸಿ, ‘ನಮಗೆ ಈ ರೀತಿಯ ಯಾವುದೇ ದೂರು ಬಂದಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.