ADVERTISEMENT

‘ಮಹಾರಥಿ’ಯ ಮಂಜುಗಣ್ಣಿನ ಹಿನ್ನೋಟ

ತಾವು ಅವಧಿ ತೀರಿದ ಸರಕು ಎಂಬ ಕಹಿಸತ್ಯದ ಅರಿವು ಅಡ್ವಾಣಿಯವರಿಗೆ ಆಗುತ್ತಿಲ್ಲ

ಉಮಾಪತಿ
Published 11 ನವೆಂಬರ್ 2018, 20:00 IST
Last Updated 11 ನವೆಂಬರ್ 2018, 20:00 IST
ಡಿ. ಉಮಾಪತಿ
ಡಿ. ಉಮಾಪತಿ   

ಮೊನ್ನೆ ಲಾಲ್ ಕೃಷ್ಣ ಅಡ್ವಾಣಿ ಅವರ ಜನುಮದಿನ ಹೆಚ್ಚು ಸದ್ದಿಲ್ಲದೆ ಸರಿದು ಹೋಯಿತು. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಒಂದು ಕಾಲದ ಗುರುವಿನ ಮನೆಗೆ ತೆರಳಿ, ಕೆಂಪು ಗುಲಾಬಿ ಮೊಗ್ಗೊಂದನ್ನು ಕೈಗಿತ್ತು, ನಡು ಬಗ್ಗಿಸಿ ವಿನಯದಿಂದ ನಮಿಸಿದರು. ಈ ಚಿತ್ರಾವಳಿಯನ್ನು ಸಮೂಹ ಮಾಧ್ಯಮಗಳು ಬಿತ್ತರಿಸದೆ ಹೋಗಿದ್ದರೆ ಕೇಸರಿ ಪಕ್ಷದ ಮಹಾಶಿಲ್ಪಿಗಳಲ್ಲಿ ಒಬ್ಬರಾದ ಅಡ್ವಾಣಿಯವರಿಗೆ 90 ತುಂಬಿದ ವಿದ್ಯಮಾನ ನವದೆಹಲಿಯ ಪೃಥ್ವೀರಾಜ ಮಾರ್ಗದ ಅವರ ಮನೆಯಂಗಳವನ್ನೂ ದಾಟುತ್ತಿರಲಿಲ್ಲ.

ಒಂದು ಕಾಲದ ಗುರು- ಶಿಷ್ಯರಾಗಿದ್ದ ಈ ಇಬ್ಬರು ಮಹಾರಥಿಗಳ ನಡುವೆ ಕಳೆದ ಐದು ವರ್ಷಗಳಲ್ಲಿ ನಡೆದ ಶೀತಲ ಸಮರದಲ್ಲಿ ಗುರುವೇ ಸೋತು ಹಣ್ಣಾಗಿದ್ದಾರೆ. ದೈನ್ಯತೆಯೇ ಮೈ ತಳೆದಂತೆ ಶರಣಾಗಿರುವ ಉದಾಹರಣೆಗಳು ಇತ್ತೀಚಿನ ತಿಂಗಳುಗಳಲ್ಲಿ ಕಣ್ಣಿಗೆ ರಾಚಿವೆ. ಇದೇ 2018ರ ಮಾರ್ಚ್ 11ರಂದು ತ್ರಿಪುರಾದ ಹೊಸ ಮುಖ್ಯಮಂತ್ರಿಯ ಅಧಿಕಾರ ಸ್ವೀಕಾರ ಸಮಾರಂಭ. ವೇದಿಕೆಯ ಮೇಲೆ ವಿನಮ್ರತೆಯೇ ಮೈತಳೆದಂತೆ ಪ್ರಧಾನಿಯವರತ್ತ ಕೈ ಜೋಡಿಸಿ ನಿಂತ ಅಡ್ವಾಣಿಯವರನ್ನು ಕಂಡೂ ಕಾಣದಂತೆ ನಿರ್ಲಕ್ಷಿಸಿ ಮುಂದೆ ನಡೆಯುತ್ತಾರೆ ಮೋದಿ. ಅಡ್ವಾಣಿ ಪಕ್ಕದಲ್ಲೇ ನಿಂತಿದ್ದ ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಮುಂದೆ ನಿಂತು ಮಾತಾಡಿ ವಾಪಸಾಗುತ್ತಾರೆ. ಆಗಲೂ ವಯೋವೃದ್ಧ ಅಡ್ವಾಣಿ ಮತ್ತೊಮ್ಮೆ ದೈನ್ಯತೆಯಿಂದ ಮೋದಿಯವರತ್ತ ನೋಟ ನೆಟ್ಟು ಕೈ ಜೋಡಿಸಿ ನಮಸ್ಕರಿಸಿ ನಿಂತಿರುತ್ತಾರೆ. ಪ್ರಧಾನಿಯ ಮನ ಆಗಲೂ ಕರಗುವುದಿಲ್ಲ. ನೋಡದವರಂತೆ ನಡೆದು ಬರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ, ಟಿ.ವಿ. ಸುದ್ದಿವಾಹಿನಿಗಳಲ್ಲಿ ಭಾರೀ ಪ್ರಚಾರ ಪಡೆದ ದೃಶ್ಯಾವಳಿಯಿದು. ಅಡ್ವಾಣಿಯವರ ಇಂತಹ ಹಲವು ಶೋಚನೀಯ ಸ್ಥಿತಿಯ ದೃಶ್ಯಾವಳಿಗಳು ಅಂತರ್ಜಾಲದಲ್ಲಿ ಲಭ್ಯ ಇವೆ. ತಮ್ಮ ಮಹತ್ವಾಕಾಂಕ್ಷೆಗಳಿಗೆ ವಿರುದ್ಧವಾಗಿ ನಿಲ್ಲುವ ಯಾರನ್ನೂ ಸಹಿಸಿದವರಲ್ಲ ಮೋದಿ. ಗುಜರಾತಿನಲ್ಲಿ ಪಕ್ಷದ ಒಳಗೆ ಮತ್ತು ಹೊರಗೆ ತಮ್ಮ ವಿರುದ್ಧ ಯಾವುದೇ ಭಿನ್ನದನಿಗಳು ತಲೆಯೆತ್ತದಂತೆ ತುಳಿದಿಟ್ಟಿರುವ ಖ್ಯಾತಿ ಅವರದು. ಈ ಮಾತಿಗೆ ಸಂಘಪರಿವಾರದ ಸಂಸ್ಥೆಗಳು ಕೂಡ ಹೊರತಾಗಿರಲಿಲ್ಲ. ವಿಶ್ವ ಹಿಂದೂ ಪರಿಷತ್ತಿನ ಪ್ರವೀಣ್ ತೊಗಾಡಿಯಾ ಅವರು ಗುಜರಾತಿನ ಹೊರಗಷ್ಟೇ ಹುಲಿಯೆನಿಸಿದ್ದರು. ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್ತಿಗೂ ಮೂಗುದಾರ ತೊಡಿಸಿ ಮೂಲೆಗೆ ತಳ್ಳಿದ್ದರು.

2013ರ ಸೆಪ್ಟೆಂಬರ್ 25ರಷ್ಟು ಹಿಂದಕ್ಕೆ ಪಯಣಿಸಿ ನೋಡೋಣ. ಭೋಪಾಲದ ಭಾರೀ ವೇದಿಕೆಯ ಮೇಲೆ ತಾಸುಗಟ್ಟಲೆ ಅಕ್ಕಪಕ್ಕ ಕುಳಿತಿದ್ದ ಈ ನಾಯಕರ ಕಣ್ಣುಗಳು ಅರೆಕ್ಷಣವೂ ಸಂಧಿಸುವುದಿಲ್ಲ. ಹೂಗುಚ್ಛ ಕೊಟ್ಟವರು ಪಡೆದವರು ಇಬ್ಬರೂ ಪರಸ್ಪರರ ಮುಖ ನೋಡುವುದಿಲ್ಲ. ಮರುಗಳಿಗೆಯೇ ಹೂಗುಚ್ಛ ಪಡೆದ ಶಿವರಾಜಸಿಂಗ್ ಚೌಹಾಣ್ ಅಡ್ವಾಣಿ ಕಾಲು ಮುಟ್ಟಿ ನಮಸ್ಕರಿಸುತ್ತಾರೆ. ನೋಟವನ್ನು ಮತ್ತೆತ್ತಲೋ ತೂರಿ ನಿಂತಿದ್ದ ಮೋದಿ, ಗುರುವಿನ ಗಮನ ಬೇರೆಲ್ಲೋ ಇದ್ದಾಗ ಹಠಾತ್ತನೆ ತಾವೂ ಕಾಲಿಗೆ ಎರಗುವ ಕಾಟಾಚಾರವನ್ನು ಮುಗಿಸುತ್ತಾರೆ. ಆ ವೇಳೆಗೆ ಅಡ್ವಾಣಿ ಅವರನ್ನು ಒಲಿಸಿಕೊಳ್ಳುವ ಪ್ರಯತ್ನಗಳಲ್ಲಿ ವಿಫಲರಾಗಿ ಬೇಸತ್ತಿರುವ ಸಾಧ್ಯತೆಯೂ ಉಂಟು. ಅದಕ್ಕೆ ಮುನ್ನ ದೆಹಲಿಯಲ್ಲಿ ರಾಮ್ ಜೇಠ್ಮಲಾನಿ ಹುಟ್ಟುಹಬ್ಬದ ಸಂದರ್ಭದಲ್ಲೂ ಮೋದಿ ತೋರಿದ್ದ ಗೌರವಕ್ಕೆ ಅಡ್ವಾಣಿ ಸ್ಪಂದಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಮೊನ್ನೆ ಪ್ರಧಾನಿಯವರು ಅಡ್ವಾಣಿಯವರನ್ನು ಭೇಟಿ ಮಾಡಿ ಅವರ ಕುರಿತು ಒಳ್ಳೆಯ ಮಾತಾಡಿದ್ದು ಒಂದು ವಿಶೇಷ ವಿದ್ಯಮಾನ. ಅವರ ದೊಡ್ಡತನವನ್ನು ಅವರ ಅಭಿಮಾನಿ ವರ್ಗ ಹೊಗಳಿದೆ.

ADVERTISEMENT

ಅಡ್ವಾಣಿ- ಮೋದಿಯವರ ಗುರುಶಿಷ್ಯ ಬಂಧ, ವಿಚಿತ್ರ ತಿರುವುಗಳು ಮತ್ತು ಏಳು ಬೀಳುಗಳಿಂದ ಕಿಕ್ಕಿರಿದ ಸಂಬಂಧ. ರಾಮಜನ್ಮಭೂಮಿ ಆಂದೋಲನವನ್ನು ಬಡಿದೆಬ್ಬಿಸಿದ್ದ ದಿನಗಳು. ತಾವು ಕೈಗೊಂಡ ಪ್ರಸಿದ್ಧ ರಾಮರಥಯಾತ್ರೆಯ ಸಾರಥಿಯನ್ನಾಗಿ ಅಡ್ವಾಣಿ ಆರಿಸಿದ್ದು ನೆಚ್ಚಿನ ಶಿಷ್ಯ ನರೇಂದ್ರ ಮೋದಿಯವರನ್ನೇ. ಗುಜರಾತಿನಲ್ಲಿ ರಥಯಾತ್ರೆಯ ಇಂಚಿಂಚು ಮಾರ್ಗವನ್ನೂ ಯೋಜಿಸಿ ಗೊತ್ತುಮಾಡಿದವರು ಮೋದಿ. 1987ರ ಅಹಮದಾಬಾದ್ ನಗರಸಭಾ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿಯು ಆ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರದ ರುಚಿ ಕಂಡಿತ್ತು. 1984ರಲ್ಲಿ ದಿಲ್ಲಿಯಲ್ಲಿ ಸ್ಪರ್ಧಿಸಿ ಸೋತಿದ್ದ ಅಡ್ವಾಣಿ ಅವರನ್ನು ಗಾಂಧೀನಗರದಿಂದ ಲೋಕಸಭೆಗೆ ಸ್ಪರ್ಧಿಸುವಂತೆ 1991ರಲ್ಲಿ ಆಹ್ವಾನಿಸಿದ್ದು ನರೇಂದ್ರ ಮೋದಿ. ಪಕ್ಷದಲ್ಲೇ ತಮ್ಮ ಮಗ್ಗುಲ ಮುಳ್ಳಾಗಿದ್ದ ಶಂಕರಸಿಂಗ್ ವಘೇಲ ಅವರ ಗಾಂಧೀನಗರ ಕ್ಷೇತ್ರವನ್ನು ಗುರುವಿಗೆ ದಕ್ಷಿಣೆಯಾಗಿ ಒಪ್ಪಿಸಿದ ಮೋದಿ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದ ಚಾಣಾಕ್ಷರು. ಗುಜರಾತ್ ನರಮೇಧದ ನಂತರ ರಾಜಧರ್ಮ ಪಾಲಿಸಿಲ್ಲವೆಂದು ಅಂದಿನ ಪ್ರಧಾನಿ ವಾಜಪೇಯಿ ಆಕ್ರೋಶಕ್ಕೆ ತುತ್ತಾಗಿದ್ದ ಶಿಷ್ಯ ಮೋದಿಯ ಬೆನ್ನಿಗೆ ಗಟ್ಟಿಯಾಗಿ ನಿಂತು ಬಚಾವು ಮಾಡಿದ್ದವರೇ ಗುರು ಅಡ್ವಾಣಿ. ಆದರೆ ಅಡ್ವಾಣಿ ಅವರ ರಾಮರಥಯಾತ್ರೆ ಬಿತ್ತಿದ ದ್ವೇಷೋನ್ಮಾದದ ಬೀಜವು ಬಾಬರಿ ಮಸೀದಿಯ ಧ್ವಂಸ ಮತ್ತು ಆನಂತರದ ಹಿಂಸಾಚಾರದ ಸರಣಿ ಹರಿಸಿರದಿದ್ದರೆ ಗೋಧ್ರೋತ್ತರ ನರಮೇಧದ ಕಳಂಕ ಮೋದಿ ಹೆಗಲು ಏರುತ್ತಿರಲಿಲ್ಲ ಎಂಬುದು ಕಟು ವಾಸ್ತವ.

ಗುರು ಕಾರುಣ್ಯದ ನೆರಳಿನಲ್ಲಿ ಬೆಳೆದ ಮೋದಿ, ಒಂದು ದಿನ ಗುರುವಿಗೇ ಸಂಚಕಾರ ತರುವ ಶಿಷ್ಯ ಆದಾರೆಂದು ಖುದ್ದು ಅಡ್ವಾಣಿಯವರೂ ಎಣಿಸಿರಲಾರರು. ಆದರೆ ಸಿಂಹಾಸನದ ಮೋಹವೆಂಬುದು ತಂದೆ- ಮಗ, ಅಣ್ಣ- ತಮ್ಮಂದಿರ ನಡುವೆ ಹಗೆತನದ ಹೊಗೆಯಾಡಿಸಿ ಪ್ರಾಣಗಳಿಗೇ ಎರವಾಗಿರುವ ನಿದರ್ಶನಗಳಿಂದ ಇತಿಹಾಸ ರಕ್ತರಂಜಿತ. ಇಂತಹುದೇ ಕಾಲದ ಉರುಳಲ್ಲಿ ಸಿಕ್ಕವರು ಗುರು ಅಡ್ವಾಣಿ ಮತ್ತು ಶಿಷ್ಯ ಮೋದಿ. 2009ರ ಲೋಕಸಭಾ ಚುನಾವಣೆಗಳಲ್ಲಿ ಅಡ್ವಾಣಿಯವರೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದೇ ಕೊನೆ. ಅಲ್ಲಿಂದಾಚೆಗೆ ತಮ್ಮನ್ನು ಪೊರೆದು ಪೋಷಿಸಿದ ಗುರುವಿನ ಪ್ರಧಾನಿ ಹುದ್ದೆಯ ಆಸೆಗೆ ನೀರೆರೆವುದ ನಿಲ್ಲಿಸಿದರು ಮೋದಿ. ಗುರು ಆಸೆಪಡುವ ಪದವಿ ತಮ್ಮದೇ ಆಗಬಾರದೇಕೆ ಎಂಬ ಮಹದಾಸೆ ಬಲಿತು ಮುಂದಿನ ಚುನಾವಣೆ ಹೊತ್ತಿಗೆ ಹೆಮ್ಮರವಾಗಿ ಬೇರು ಬಿಟ್ಟಿತ್ತು. ಈ ಬೇರುಗಳನ್ನು ಕೀಳುವುದಿರಲಿ, ಅಲ್ಲಾಡಿಸಲೂ ಅಸಹಾಯಕರಾದರು ಅಡ್ವಾಣಿ.

ಮೋದಿ ಪಟ್ಟಾಭಿಷೇಕ ವಿರೋಧಿಸಿ ಪಕ್ಷದ ಎಲ್ಲ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದರು ಅಡ್ವಾಣಿ. ಬದುಕಿಡೀ ಬೆವರು ಸುರಿಸಿದ ನಂತರವೂ ಪ್ರಧಾನಿ ಹುದ್ದೆ ಕೈ ತಪ್ಪಿತೆಂಬ ಹತಾಶೆ, ತಾವುಪೊರೆದು ಪೋಷಿಸಿದ ಶಿಷ್ಯನೇ ಎದುರು ಬಿದ್ದನೆಂಬ ಬೇಗುದಿ, ಪಕ್ಷದ ನೆನ್ನೆಮೊನ್ನೆಯಮೌಲ್ಯಗಳು- ಸಿದ್ಧಾಂತಗಳು ಇಂದಿನ ಪೀಳಿಗೆಯ ಕೈಯಲ್ಲಿ ನಶಿಸಿ ಹೋದವು ಎಂಬಭ್ರಮನಿರಸನ ಎಲ್ಲವೂ ಅಡ್ವಾಣಿ ಅವರ ನಡೆಗಳ ಹಿಂದೆ ಪ್ರಕಟವಾಗಿವೆ.

ಪಕ್ಷವನ್ನು ಮತ್ತು ಮೋದಿ ಅವರನ್ನು ಎತ್ತರಕ್ಕೆ ಬೆಳೆಸಿದ ಹಿರಿಯ ನಾಯಕರು ಅಡ್ವಾಣಿ. ಪ್ರಧಾನಿ ಹುದ್ದೆಯ ಮೇಲೆ ಆಸೆ ಇಟ್ಟುಕೊಂಡಿದ್ದರೆ ತಪ್ಪಲ್ಲ. 1998ರಲ್ಲಿ ಎನ್‌ಡಿಎ ಸರ್ಕಾರ ರಚಿಸಿದ ಹೊತ್ತಿನಲ್ಲಿ ವಾಜಪೇಯಿ ಅವರಿಗೆ ಪ್ರಧಾನಿ ಹುದ್ದೆ ಬಿಟ್ಟುಕೊಟ್ಟು ಹಿಂದೆ ಸರಿದಿದ್ದವರು. ನಂತರದ ಸರದಿ ತಮ್ಮದೆಂದು ಭಾವಿಸಿದ್ದವರು. ತಾವು ಬೆಳೆಸಿದ ಶಿಷ್ಯನಿಗಿಂತ ಮೊದಲೇ ತಮ್ಮ ಸರದಿ ಬರುವುದು ನ್ಯಾಯವೆಂದು ಬಗೆದಿದ್ದವರು. ತಾವಿನ್ನು ಬಿಜೆಪಿಯ ಪಾಲಿಗೆ ಅವಧಿ ತೀರಿದ ನಿರುಪಯುಕ್ತ ಸರಕು ಎಂಬ ಕಟು ವಾಸ್ತವವನ್ನು ಅವರು ಈಗಲೂ ಒಪ್ಪಿಕೊಂಡಿರುವ ಸೂಚನೆಗಳಿಲ್ಲ. ಪಕ್ಷದ ಒಳಗಿನ ಮೋದಿ ಪ್ರವಾಹಕ್ಕೆ ಎದುರಾಗಿ ಈಜುವ ಪ್ರಯತ್ನವನ್ನು ಅವರು ಎಂದೋ ಕೈಬಿಟ್ಟಿದ್ದಾರೆ.

‘ಕರೆಯದ ಹಸು ಮತ್ತು ಮುದಿ ಎತ್ತುಗಳನ್ನು ಕಸಾಯಿಖಾನೆಗೆ ಹೊಡೆವುದು ಪಾಪವಷ್ಟೇ ಅಲ್ಲ ಕೃತಘ್ನತೆ ಕೂಡ’ ಎನ್ನುವ ಪರಿವಾರವು ತಮ್ಮ ಮನೆಯ ಹಿರಿಯರನ್ನು ನಡೆಸಿಕೊಂಡಿರುವ ಪರಿ, ಗರಿ ಮೂಡಿಸುವಂತಹದೇನೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.