ADVERTISEMENT

ಡಾ. ಗೀತಾ ಕೃಷ್ಣಮೂರ್ತಿ ಅಂಕಣ| ಮನೆಗೆಲಸ: ಮತಬೇಟೆಗೆ ಹೊಸ ಅಸ್ತ್ರ!

ಮಹಿಳೆಯರ ಗೃಹಕೃತ್ಯಕ್ಕೆ ಬೆಲೆ ಕಟ್ಟಿದರೆ ಅದರ ದೂರಗಾಮಿ ಪರಿಣಾಮ ಏನಿರಬಹುದು?

ಡಾ.ಗೀತಾ ಕೃಷ್ಣಮೂರ್ತಿ
Published 9 ಫೆಬ್ರುವರಿ 2021, 19:57 IST
Last Updated 9 ಫೆಬ್ರುವರಿ 2021, 19:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ತಮಿಳುನಾಡಿನ ಹೊಸ ರಾಜಕೀಯ ಪಕ್ಷವೊಂದು ಇತ್ತೀಚೆಗೆ, ಮಹಿಳೆಯರು ಮಾಡುವ ಮನೆಗೆಲಸವನ್ನು ಮೌಲ್ಯೀಕರಿಸಿ ಅದಕ್ಕೆ ವೇತನ ನೀಡುವ ಭರವಸೆಯನ್ನು ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವ ಮೂಲಕ, ಮಹಿಳೆಯರ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದೆ. ಮನೆಗೆಲಸವೇನು ಮಹಾ ಎನ್ನುತ್ತಿದ್ದ ಸಮಾಜದ ಧೋರಣೆ ಸ್ವಲ್ಪ ಸ್ವಲ್ಪವೇ ನಿಧಾನಗತಿಯಲ್ಲಿ ಬದಲಾಗುತ್ತಿರುವ ಸಮಯ ಇದು. ಆದ್ದರಿಂದ, ಈ ಭರವಸೆಯನ್ನು ಕಾರ್ಯರೂಪಕ್ಕೆ ತರುವ ಸಾಧ್ಯಾಸಾಧ್ಯತೆ ಗಳ ಬಗ್ಗೆ ಹಾಗೂ ಅಂಥ ಭರವಸೆ ಈಡೇರಿದಲ್ಲಿ ಅದು ಉಂಟು ಮಾಡಬಹುದಾದ ದೂರಗಾಮಿ ಪರಿಣಾಮಗಳ ಬಗ್ಗೆ ಚಿಂತಿಸಬೇಕಾದ ಅಗತ್ಯ ಅನಿವಾರ್ಯವಾಗಿದೆ.

ಡಾ.ಗೀತಾ ಕೃಷ್ಣಮೂರ್ತಿ

ಮನೆಗೆಲಸದ ಮೌಲ್ಯಮಾಪನದ ಮಾನದಂಡ ಯಾವುದು? ಮೌಲ್ಯಮಾಪನ ಸಾಧ್ಯವೇ? ಅದಕ್ಕೆ ಹೇಗೆ ಹಣ ವಿತರಣೆ ಮಾಡಲಾಗುತ್ತದೆ? ಅದಕ್ಕೆಂದು ಮೀಸಲಿಟ್ಟ ಹಣ ಮಧ್ಯದಲ್ಲಿರುವ ತಿಮಿಂಗಿಲಗಳನ್ನು ದಾಟಿ, ಗೃಹಿಣಿಯರ ಕೈ ಸೇರುತ್ತದೆಯೇ? ಹಾಗೆ ನೀಡಿದ್ದೇ ಆದರೆ, ಮನೆಯಲ್ಲಿ ಅವಳ ಸ್ಥಾನಮಾನದ ಮೇಲಾಗುವ ಪರಿಣಾಮಗಳೇನು? ಪ್ರಶ್ನೆಗಳ ಮಹಾಪೂರವನ್ನೇ ಈ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಭರವಸೆ ಸೃಷ್ಟಿಸಿದೆ.

ಹಾಗೆಂದ ಮಾತ್ರಕ್ಕೆ ಗೃಹಿಣಿ ತನ್ನ ಮನೆಯಲ್ಲಿ ಮಾಡುವ ಗೃಹಕೃತ್ಯದ ಮೌಲ್ಯಮಾಪನ ಹಿಂದೆಂದೂ ಆಗಿಯೇ ಇಲ್ಲವೆಂದಲ್ಲ. ಮೋಟಾರು ವಾಹನಗಳ ಅಧಿನಿಯಮದ ಅಡಿಯಲ್ಲಿ, ಅಪಘಾತದಲ್ಲಿ ಮರಣ ಹೊಂದಿದ ಗೃಹಿಣಿಯ ಸಂಬಂಧ ಪರಿಹಾರವನ್ನು ನೀಡುವಾಗ, ಕಳೆದ 30 ವರ್ಷಗಳಿಂದಲೂ ಭಾರತೀಯ ನ್ಯಾಯಾಲಯಗಳು ಗೃಹಕೃತ್ಯದ ಮೌಲ್ಯಮಾಪನ
ವನ್ನು ಮಾಡುತ್ತಾ ಬಂದಿವೆ. ನ್ಯಾಯಾಲಯದ ಮುಂದೆ ನಿರ್ದಿಷ್ಟ ಪ್ರಕರಣದಲ್ಲಿ ಮೃತ ಗೃಹಿಣಿಯ ಸಂಬಂಧ ಹೀಗೆ ಮೌಲ್ಯಮಾಪನ ಮಾಡುವುದಕ್ಕೂ ಒಂದು ಪ್ರಣಾಳಿಕೆ
ಯಲ್ಲಿನ ಭರವಸೆಯನ್ನು ಈಡೇರಿಸುವ ಸಂಬಂಧ ಎಲ್ಲರಿಗೆ ಅನ್ವಯವಾಗುವಂತೆ ಗೃಹಕೃತ್ಯದ ಮೌಲ್ಯಮಾಪನ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ.

ADVERTISEMENT

ಈ ಹಿಂದೆ ಮೋಟಾರು ವಾಹನ ಅಪಘಾತದಲ್ಲಿ ಮೃತಳಾದ ತನ್ನ ಪತ್ನಿಯ ಸಂಬಂಧ ಹೂಡಿದ ದಾವೆಯಲ್ಲಿ ಪತಿ ₹ 11 ಲಕ್ಷ ಪರಿಹಾರವನ್ನು ಕ್ಲೇಮು ಮಾಡಿದ್ದ. ಆದರೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆತನಿಗೆ ಪರಿಹಾರವಾಗಿ ಮಂಜೂರು ಮಾಡಿದ ಮೊಬಲಗು
₹ 32 ಲಕ್ಷ. ಆತ ಕೇಳಿದುದಕ್ಕಿಂತ ಹತ್ತಿರಹತ್ತಿರ ಮೂರು ಪಟ್ಟು ಹೆಚ್ಚಿಗೆ! ಇದಕ್ಕೆ ಅವರು ನೀಡಿದ ಕಾರಣ, ಗೃಹ ಕೃತ್ಯದಲ್ಲಿ ಆಕೆ ನೀಡುತ್ತಿದ್ದ ಸಹಕಾರವನ್ನೂ ಆತ ಕಳೆದುಕೊಂಡಿದ್ದಾನೆ ಎಂಬುದು!

ಮುಂಬೈನ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಇತ್ತೀಚೆಗೆ ನೀಡಿರುವ ಈ ತೀರ್ಪು, ಗೃಹಕೃತ್ಯಕ್ಕೆ ಹಣದ ರೂಪದಲ್ಲಿ ಬೆಲೆ ಕಟ್ಟಲಾಯಿತು ಎಂಬುದಕ್ಕಿಂತ, ಗೃಹಕೃತ್ಯಕ್ಕೆ ಸಿಗಬೇಕಾದ ಮಾನ್ಯತೆ ಸಿಕ್ಕಿತು ಎಂಬುದು ಮುಖ್ಯವಾಗುತ್ತದೆ ಮತ್ತು ಅದೇ ಮುಖ್ಯವಾಗಬೇಕು.

ಮತ್ತೊಂದು ಪ್ರಕರಣದಲ್ಲಿ, ತೀರಾ ಇತ್ತೀಚೆಗೆ ಸುಪ್ರೀಂ ಕೋರ್ಟ್‌, ಮೋಟಾರು ವಾಹನ ಅಪಘಾತದಲ್ಲಿ ಮಡಿದ ಗೃಹಿಣಿಯ ಸಂಬಂಧ, ಹೈಕೋರ್ಟ್‌ ನಿಗದಿಪಡಿಸಿದ
₹ 22 ಲಕ್ಷ ಪರಿಹಾರವನ್ನು ₹ 33.20 ಲಕ್ಷಗಳಿಗೆ ಏರಿಸಿ ನಿಗದಿಪಡಿಸಿತು. ಆಕೆ ಜೀವಂತ ಇದ್ದಿದ್ದರೆ, ಕುಟುಂಬಕ್ಕೆ ಬೆಲೆ ಕಟ್ಟಲಾಗದ ತನ್ನ ಸೇವೆಯಿಂದ ನೀಡುತ್ತಿದ್ದ ಕೊಡುಗೆಯನ್ನು ಪರಿಗಣಿಸಿ, ಅವಳ ಕೊಡುಗೆಯಿಂದಾಗಿ ಕುಟುಂಬಕ್ಕೆ ಆಗುತ್ತಿದ್ದ ಉಪಕಾರಕ್ಕೆ ಕಾಲ್ಪನಿಕವಾಗಿ ಬೆಲೆ ಕಟ್ಟಿ ಪರಿಹಾರವನ್ನು ನಿರ್ಧರಿಸಬೇಕಾಗುತ್ತದೆ ಎಂದು ಈ ಏರಿಕೆಗೆ ಕಾರಣ ನೀಡಿತು. ಇದು ಗೃಹಿಣಿಯರು ಮಾಡುವ ಮನೆಯ ಕೆಲಸ, ಪಡುವ ಶ್ರಮ ಮತ್ತು ತ್ಯಾಗಕ್ಕೆ ನೀಡುವ ಮಾನ್ಯತೆ. ಇದು, ಗೃಹಕೃತ್ಯದ ಬಗ್ಗೆ ಇರುವ ಅಸಡ್ಡೆಯ ಧೋರಣೆ ಬದಲಾಗುತ್ತಿದೆ ಎಂಬುದರ ಸೂಚಿಯೂ ಹೌದು. ನಮ್ಮ ಸಂವಿಧಾನದ ಆಶಯವಾದ ಸಾಮಾಜಿಕ ಸಮಾನತೆ ಮತ್ತು ಘನತೆಯ ಜೀವನ ಒದಗಿಸಬೇಕೆಂಬುದರ ಈಡೇರಿಕೆಯೂ ಹೌದು. ಈ ಹಿನ್ನೆಲೆಯಲ್ಲಿ, ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈ ಉದ್ದೇಶಗಳನ್ನು ಈಡೇರಿಸಬಲ್ಲದೇ?

ಮಹಿಳೆ ತನ್ನ ಅಸ್ಮಿತೆ ಮತ್ತು ಹಕ್ಕುಗಳಿಗಾಗಿ ಪ್ರಾರಂಭಿಸಿದ ಹೋರಾಟದೊಂದಿಗೇ ಗೃಹಿಣಿಯಾಗಿ ಮಾಡುವ ಕೆಲಸವನ್ನೂ ದುಡಿಮೆಯ ಪರಿಭಾಷೆಯಲ್ಲಿ ತರಬೇಕೆಂಬ ಹೋರಾಟವೂ ಪ್ರಾರಂಭವಾಯಿತು ಎನ್ನ ಬಹುದು. ಇಂಥ ತೀರ್ಪುಗಳಲ್ಲಿ ಆ ಹೋರಾಟದ ಪ್ರತಿಫಲವನ್ನೂ ಕಾಣಬಹುದು ಹಾಗೆಯೇ ಬದಲಾಗುತ್ತಿರುವ ಸಮಾಜದ ಮನೋಭಾವವನ್ನೂ ಕಾಣಬಹುದು. ಇದು ಆಶಾದಾಯಕವಾದ ಬೆಳವಣಿಗೆ.

ಇಂಥ ಹೋರಾಟದ ಹಿಂದಿರುವ ಕಾಳಜಿ ಮತ್ತು ಉದ್ದೇಶ, ಮನೆಗೆಲಸವೇನು ಮಹಾ ಎಂಬ ಭಾವನೆ ಬದಲಾಗಬೇಕು ಮತ್ತು ಮನೆಗೆಲಸವನ್ನು ಹಗುರವಾಗಿ ಪರಿಗಣಿಸುವ ಪುರುಷಪ್ರಧಾನ ಸಮಾಜದ ಚಿಂತನಾ ಕ್ರಮ ಬದಲಾಗಬೇಕು ಎಂಬುದು. ಆದರೆ, ಗೃಹಕೃತ್ಯಕ್ಕೆ ಬೆಲೆ ಕಟ್ಟಿ, ಮನೆಯಲ್ಲಿ ದುಡಿಸಿಕೊಳ್ಳುವಾಗ ಹಕ್ಕು ಎಂಬಂತೆ ದುಡಿಸಿಕೊಳ್ಳುವ ಪುರುಷ ವ್ಯಕ್ತಿಗಳ ಧೋರಣೆ ಮತ್ತು ಚಿಂತನಾ ಕ್ರಮ ಏನಾಗಬಹುದು ಎಂಬುದನ್ನು, ಪ್ರಣಾಳಿಕೆಯ ಭರವಸೆಯನ್ನು ಸಂಭ್ರಮಿಸುವ ಮುನ್ನ ಗಂಭೀರವಾಗಿ ಯೋಚನೆ ಮಾಡಬೇಕಿದೆ. ಮಹಿಳಾ ಮತಗಳನ್ನು ಸೆಳೆಯುವ ಉದ್ದೇಶ ಹೊಂದಿರುವ ಈ ಪ್ರಣಾಳಿಕೆಯ ಭರವಸೆ ಈಡೇರಿದಲ್ಲಿ, ಮತ್ತೆ ಮಹಿಳೆ ಗೃಹಕೃತ್ಯದಲ್ಲಿಯೇ ಬಂದಿಯಾಗುವ ಪರಿಸ್ಥಿತಿ ನಿರ್ಮಾಣ
ವಾಗಬಹುದು ಎಂಬ ವಾದವಿದೆ. ಆ ವಾದವನ್ನು
ತಳ್ಳಿಹಾಕುವಂತಿಲ್ಲ. ಹಾಗೊಂದು ವೇಳೆ ಆದದ್ದೇ ಆದರೆ ಪುರುಷ ಪ್ರಧಾನ ಸಮಾಜದ ಬದಲಾಗುತ್ತಿರುವ ಮನೋಭಾವಕ್ಕೆ ಹಿನ್ನಡೆಯುಂಟಾಗದೆ ಇದ್ದೀತೇ?

ಗೃಹಕೃತ್ಯಕ್ಕೆ ಮಾನ್ಯತೆ ದೊರೆಯಬೇಕಾದ
ಜಾಗದಲ್ಲಿ, ‘ದುಡ್ಡು ತಗೊಳ್ಳೋದಿಲ್ಲವೆ, ಮಾಡಲಿ’ ಎಂಬ ಧೋರಣೆ ಮೇಲುಗೈ ಆಗಬಹುದು.
ಮನೆಗೆಲಸದಾಕೆ, ಅಡುಗೆಯವಳು, ಆಯಾ
ಮುಂತಾದವರನ್ನೆಲ್ಲ ವಜಾಗೊಳಿಸಬಹುದು. ಇದು ಬರೀ ಹಣದ ಪ್ರಶ್ನೆ ಅಲ್ಲ. ಅವರ ಕೆಲಸಕ್ಕೆ ಸಿಗುವ ಮಾನ್ಯತೆ ಎನ್ನುವವರ ಆಶಾವಾದಿತ್ವವನ್ನು ಅಲ್ಲಗಳೆ
ಯಲಾಗದು. ಆದರೆ, ಗೃಹಕೃತ್ಯಕ್ಕೆ ನೀಡುವ ವೇತನದಿಂದಾಗಿ, ಮಹಿಳೆ ನಿರ್ವಹಿಸುತ್ತಿದ್ದ ಪಾತ್ರವನ್ನು ಸ್ಥಿರೀಕರಿಸಿದಂತಾಗುತ್ತದೆ ಎಂಬ ಅಭಿಪ್ರಾಯವಿದೆ. ಹಾಗೇ ಆಗಬೇಕೆಂದಿಲ್ಲ, ಆದರೆ ಹಾಗೆ ಆಗುವ ಸಂಭವವಂತೂ ಇದ್ದೇ ಇರುತ್ತದೆ. ಆದರೆ, ವೆನಿಜುವೆಲಾದಲ್ಲಿ ಹಾಗಾಗಿಲ್ಲ. ಅಲ್ಲಿಯ ಸಂವಿಧಾನ, ಗೃಹಿಣಿಯರಿಗೆ ಸಾಮಾಜಿಕ ಭದ್ರತೆಯಾಗಿ ವೇತನ ನೀಡುತ್ತದೆ. ಅದು ವೇತನರಹಿತ ಗೃಹಕೃತ್ಯ ಮತ್ತು ಮನೆಮಂದಿಯ ಬಗೆಗಿನ ಕಾಳಜಿಗೆ ದೊರೆತ ಮಾನ್ಯತೆ. ಅದು, ತಾವು ಮಾಡುವ ಕೆಲಸಗಳ ಸಂಬಂಧದಲ್ಲಿ ನಿರ್ಧಾರ ಕೈಗೊಳ್ಳಲೂ ತಮಗೆ ಧೈರ್ಯ ನೀಡಿದೆ, ಕಡಿಮೆ ಸಂಬಳ ಬರುವ ಉದ್ಯೋಗವನ್ನು ತ್ಯಜಿಸುವ ಸ್ವಾತಂತ್ರ್ಯವನ್ನೂ ನೀಡಿದೆ, ಅಲ್ಲದೆ ತಮಗೆ ದೊರೆತಿರುವ ಆರ್ಥಿಕ ಬಲದಿಂದ ಗಂಡಂದಿರನ್ನು ತ್ಯಜಿಸಿ ಹೊರಬರುವ ಸ್ವಾತಂತ್ರ್ಯ ದೊರೆತಿದೆ ಎಂಬುದು ಅವರ ಅಭಿಮತ.

ಆದರೆ ಭಾರತದಲ್ಲಿ, ಉದ್ಯೋಗದಲ್ಲಿರುವ ಸ್ತ್ರೀ ಹಾಗೂ ಪುರುಷರ ನಡುವಿನ ಸಂಖ್ಯೆಯಲ್ಲಿ ತೀರ ಅಂತರವಿದೆ ಎಂಬುದು ವಾಸ್ತವ. ಹಾಗೆಯೇ, ಗೃಹಕೃತ್ಯದ ಹೊರೆ ಪುರುಷನಿಗಿಂತ ಮಹಿಳೆಯ ಮೇಲೆ ಹತ್ತು ಪಟ್ಟು ಹೆಚ್ಚು ಮತ್ತು ಅದರಲ್ಲಿ ತೊಡಗಿಸಿಕೊಳ್ಳುವ ಸಮಯವೂ ಹತ್ತು ಪಟ್ಟು ಹೆಚ್ಚು. ಉದ್ಯೋಗದಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆಯಿರುವುದಕ್ಕೂ ಇದೇ ಬಹುಮಟ್ಟಿಗೆ ಕಾರಣ. ಮಹಿಳೆಯರ ಆರ್ಥಿಕ ಅವಲಂಬನೆ ಮನೆಯಲ್ಲಿ ಅವಳ ಸ್ಥಾನಮಾನ ಕಡಿಮೆಯಾಗುವುದಕ್ಕೆ ಕಾರಣವಾದಂತೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಅವಕಾಶಗಳನ್ನೂ ಕಸಿದುಕೊಂಡಿದೆ. ದುಡಿಯುವ ಮಹಿಳೆಯರಲ್ಲೂ ತಾವು ದುಡಿದ ಹಣದ ನಿಯಂತ್ರಣ ವನ್ನು ಹೊಂದಿಲ್ಲದೆ ಇರುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅವಳಿಗೆ ಕೊಡುವ ವೇತನ, ಅವಳಿಗೆ ಹೆಚ್ಚಿನ ಗೌರವವನ್ನು, ಸಮಾನತೆಯನ್ನು, ಸ್ವಾತಂತ್ರ್ಯವನ್ನು
ತಂದುಕೊಡುತ್ತದೆಂದು ಭಾವಿಸಬಹುದೇ? ಖಂಡಿತ ವಾಗಿಯೂ ಇಲ್ಲ ಎಂಬುದೇ ಅನೇಕರ ವಾದ.

ಎಲ್ಲಕ್ಕಿಂತ ಹೆಚ್ಚಾಗಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಉಂಟಾಗಬಹುದಾದ ಗೊಂದಲ, ಸ್ಪಷ್ಟ ಕಾರ್ಯಸೂಚಿಯ ಕೊರತೆಯಿಂದಾಗಿ ಇದು ಕೇವಲ ಭರವಸೆಯಾಗಿ ಉಳಿಯುವ ಸಾಧ್ಯತೆಯೇ ಹೆಚ್ಚು. ಮಹಿಳೆ ಯರಿಗೆ ಬೇಕಾಗಿರುವುದು ಅನುಷ್ಠಾನ ಸಾಧ್ಯವಲ್ಲದ ಘೋಷಣೆಗಳಲ್ಲ. ಘನತೆಯಿಂದ ಜೀವನ ನಡೆಸಲು ಅಗತ್ಯವಾದ ಪರಿಸರದ ನಿರ್ಮಾಣ. ಸಮಾಜದ ಮನೋಧರ್ಮದಲ್ಲಿ ಅಗತ್ಯವಾದ ಬದಲಾವಣೆಗಳನ್ನು ತರುವ ಮೂಲಕ ಇಂಥ ಪರಿಸರ ನಿರ್ಮಾಣ ಮಾಡುವುದರ ಕಡೆಗೆ ನಿಜವಾದ ಕಾಳಜಿ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.