ADVERTISEMENT

ಸಭಾಪತಿ ಸ್ಥಾನ ಇಷ್ಟವಿಲ್ಲ: ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2018, 19:30 IST
Last Updated 5 ಜೂನ್ 2018, 19:30 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಮಂಡ್ಯ: ‘ವಿಧಾನ ಪರಿಷತ್‌ ಸಭಾಪತಿ ಸ್ಥಾನ ನನಗೆ ವೈಯಕ್ತಿಕವಾಗಿ ಇಷ್ಟವಿಲ್ಲ. ಅದರ ಮೇಲೆ ಆಸಕ್ತಿಯೂ ಇಲ್ಲ. ಆದರೆ ಪಕ್ಷ ನೀಡಿದರೆ ಆ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದು ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಇಲ್ಲಿ ಮಂಗಳವಾರ ಹೇಳಿದರು.

‘ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಸಚಿವ ಸ್ಥಾನ ಅಪೇಕ್ಷೆಪಟ್ಟಿದ್ದೆ. ಶಿಕ್ಷಣ ಕ್ಷೇತ್ರದಲ್ಲಿರುವ ಬಹುಕಾಲದ ಸಮಸ್ಯೆಗಳನ್ನು ಬಗೆಹರಿಸಲು ನನ್ನದೇ ಆದ ಪಟ್ಟಿ ತಯಾರಿಸಿಕೊಂಡಿದ್ದೆ. ಆದರೆ ವಿಧಾನಸಭಾ ಸದಸ್ಯರಿಗೆ ಮಾತ್ರ ಸಚಿವ ಸ್ಥಾನ ಎಂದು ತೀರ್ಮಾನವಾಗಿದೆ. ಹೀಗಾಗಿ ಸಚಿವನಾಗುವ ಆಸೆಯನ್ನು ಕೈಬಿಟ್ಟಿದ್ದೇನೆ. ನನಗೇನೂ ಅಸಮಾಧಾನ ಇಲ್ಲ. ಯಾರೇ ಶಿಕ್ಷಣ ಸಚಿವರಾದರೂ ಅವರಿಗೆ ಸಹಕಾರ ನೀಡುತ್ತೇನೆ. ನನ್ನಲ್ಲಿರುವ ಪಟ್ಟಿಯನ್ನು ಅವರಿಗೆ ನೀಡಿ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುತ್ತೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

9 ಮಂದಿ ಪ್ರಮಾಣವಚನ: ‘ಬುಧವಾರ ಜೆಡಿಎಸ್‌ನಿಂದ 9 ಮಂದಿ ಮಾತ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ. ಇದರಲ್ಲಿ ನನ್ನ ಹೆಸರು ಇಲ್ಲ. ಬಿಜೆಪಿಯ ಆರೋಪಗಳಿಗೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿಯಾಗಿರುವ ಕಾರಣ, ಕೇಂದ್ರದಲ್ಲಿ ಖಾತೆ ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಖಾತೆ ಹಂಚಿಕೆ ಸುಲಭವಲ್ಲ. ಸರ್ಕಾರದ ಉಳಿವಿಗಾಗಿ ಎಲ್ಲರೂ ತಾಳ್ಮೆಯಿಂದ ವರ್ತಿಸಬೇಕು. ನಮ್ಮದು ಪ್ರಜಾಪ್ರಭುತ್ವ ಪಕ್ಷವಾಗಿದ್ದು ಎಲ್ಲರ ಸಹಕಾರ ಅವಶ್ಯ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.