ADVERTISEMENT

ಅಸ್ಮಿತೆಗೊಂದು ವ್ಯಾಖ್ಯಾನ ಕೊಟ್ಟ ಅಕ್ಬರ್‌...

ಆಕಾರ್ ಪಟೇಲ್
Published 15 ಅಕ್ಟೋಬರ್ 2018, 3:06 IST
Last Updated 15 ಅಕ್ಟೋಬರ್ 2018, 3:06 IST
   

ಇಪ್ಪತ್ತೈದು ವರ್ಷಗಳ ಹಿಂದೆ ನಾನು ಸೂರತ್‌ನಿಂದ ಬಾಂಬೆಗೆ (ಆಗ ಈ ಊರನ್ನು ಹೀಗೆ ಕರೆಯಲಾಗುತ್ತಿತ್ತು) ಕೆಲಸ ಹುಡುಕಿಕೊಂಡು ಬಂದೆ. ನಮ್ಮ ಕುಟುಂಬ ನೆಚ್ಚಿಕೊಂಡಿದ್ದ ಪಾಲಿಸ್ಟರ್ ತಯಾರಿಕಾ ಉದ್ದಿಮೆ ನೆಲಕಚ್ಚಿತ್ತು. ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಎನ್ನುವುದು ಆಗ ನನ್ನ ಶೈಕ್ಷಣಿಕ ಅರ್ಹತೆ ಆಗಿತ್ತು. ನಾನು ಶಾಲೆಯಿಂದ ಹೊರಬಿದ್ದ ನಂತರ ಯಂತ್ರಗಳನ್ನು ಬಳಸುವ ತರಬೇತಿಯನ್ನು ಈ ಕೋರ್ಸ್‌ ಅಡಿ ಪಡೆದಿದ್ದೆ. ಅಂದರೆ, ನಾನು ಆಗ ಕಚೇರಿ ಕೆಲಸ ಮಾಡಲು ಅಗತ್ಯವಿರುವ ಅರ್ಹತೆ ಹೊಂದಿರಲಿಲ್ಲ.

ಆಮದು- ರಫ್ತು ವಹಿವಾಟಿನಲ್ಲಿ ಕೆಲಸ ಗಿಟ್ಟಿಸಲು ಯತ್ನಿಸಿದೆ. ಹಾಗೆಯೇ, ಷೇರು ಮಾರುಕಟ್ಟೆಯಲ್ಲಿ ಕೂಡ ಕೆಲಸಕ್ಕೆ ಯತ್ನಿಸಿದೆ (ಗುಜರಾತಿ ಎನ್ನುವುದೇ ನನ್ನ ಅರ್ಹತೆ ಆಗಿತ್ತು). ಆದರೆ, ಆಗಷ್ಟೇ ಹರ್ಷದ್ ಮೆಹ್ತಾ ಹಗರಣ ಹೊರಬಂದಿತ್ತಾದ ಕಾರಣ ಅಲ್ಲಿ ಏನೂ ನಡೆಯುತ್ತಿರಲಿಲ್ಲ.

ನಾನು ಆಗ ನನ್ನ ಸ್ನೇಹಿತನ ತಂಗಿಯ ಕುಟುಂಬದ ಜೊತೆ ವಿಲೆ ಪಾರ್ಲೆ ಪ್ರದೇಶದಲ್ಲಿ ವಾಸಿಸುತ್ತಿದ್ದೆ. ಕೆಲಸ ಹುಡುಕಿಕೊಂಡು ಒಂದೆಡೆಯಿಂದ ಇನ್ನೊಂದೆಡೆ ಅಲೆಯುತ್ತ ದಿನ ಕಳೆಯುತ್ತಿದ್ದೆ. ಒಂದು ದಿನ, ಸುದ್ದಿಪತ್ರಿಕೆಯೊಂದರಲ್ಲಿ ಕೆಲಸ ಖಾಲಿ ಇರುವ ಬಗ್ಗೆ ಅಲ್ಲಿನ ರೈಲಿನಲ್ಲಿ ಜಾಹೀರಾತು ಗಮನಿಸಿದೆ. ದೀರ್ಘವೂ, ಬೇಸರ ತರಿಸುವಂಥದ್ದೂ ಆಗಿರುವ ಕಥೆಯನ್ನು ಚಿಕ್ಕದ್ದಾಗಿ ಹೇಳಬೇಕು ಎಂದಾದರೆ: ನಾನು ಆ ಕೆಲಸಕ್ಕೆ ಅರ್ಜಿ ಸಲ್ಲಿಸಿದೆ. ಪತ್ರಿಕಾವೃತ್ತಿಗೆ ನಿರ್ದಿಷ್ಟವಾದ ಯಾವುದೇ ಕೌಶಲ ಬೇಕಿಲ್ಲವಾದ ಕಾರಣ ಆ ಕೆಲಸ ಗಿಟ್ಟಿಸಿಕೊಂಡೆ, ಹಾಗೆ ಕೆಲಸ ಗಿಟ್ಟಿಸಿಕೊಂಡಿದ್ದು ನನಗೇ ಆಘಾತ ತಂದಿತು! ಅದಾದ ಮೂವತ್ತು ದಿನಗಳ ನಂತರ ಆ ಪತ್ರಿಕೆ ಬಾಗಿಲು ಮುಚ್ಚಿತು.

ADVERTISEMENT

ಆದರೆ, ಆಗ ನನಗೆ ಇನ್ನೊಂದು ಪತ್ರಿಕೆಯಲ್ಲಿ- ಅಂದರೆ ‘ದಿ ಏಷ್ಯನ್ ಏಜ್‌’ನಲ್ಲಿ - ಕೆಲಸ ಗಿಟ್ಟಿಸಿಕೊಳ್ಳುವುದು ಸಾಧ್ಯವಾಯಿತು. ಅದರ ಸಂಪಾದಕರಾಗಿದ್ದವರು ಎಂ.ಜೆ. ಅಕ್ಬರ್. ಅವರ ಖ್ಯಾತಿಯ ಬಗ್ಗೆ ನನಗೆ ಗೊತ್ತಿರಲಿಲ್ಲ. ಏಕೆಂದರೆ, ಆ ಕಾಲದಲ್ಲಿ ಸೂರತ್‌ನಲ್ಲಿ ಇಂಗ್ಲಿಷ್‌ ಪತ್ರಿಕೆಗಳು ಇರಲಿಲ್ಲ.

ಆ ಪತ್ರಿಕೆಯ ಮುಂಬೈ ಕಚೇರಿಯಲ್ಲಿ (ಆ ವೇಳೆಗೆ ಆ ಊರಿನ ಹೆಸರು ಹಾಗೆ ಬದಲಾಗಿತ್ತು) 1995ರಿಂದ 1998ರವರೆಗೆ ಕೆಲಸ ಮಾಡಿದೆ. ಅದು ನನ್ನಲ್ಲಿ ಪರಿವರ್ತನೆ ತರುವ ಅನುಭವಗಳನ್ನು ನೀಡಿತು. ಕಚೇರಿಗಳಲ್ಲಿ ಮಹಿಳೆಯರು ಕಾಣಿಸದಂತಹ ಹಿನ್ನೆಲೆಯಿಂದ ಬಂದವ ನಾನಾಗಿದ್ದೆ.

ನನ್ನ ಕುಟುಂಬ ನಡೆಸುತ್ತಿದ್ದ ಕಾರ್ಖಾನೆಗಳಲ್ಲಿ - ಅವು ಒಂದರ್ಥದಲ್ಲಿ ಸಣ್ಣ ತಯಾರಿಕಾ ಘಟಕಗಳಾಗಿದ್ದವು - ಕೆಲವು ಮಹಿಳೆಯರು ಕೆಲಸ ಮಾಡುತ್ತಿದ್ದರು. ಆದರೆ ಅವರೆಲ್ಲ ಕಾರ್ಮಿಕರು. ಕೈಗಾರಿಕಾ ಲೋಕದ ಭಾಷೆಯಲ್ಲಿ ಅವರನ್ನೆಲ್ಲ 'ಸಹಾಯಕರು' ಎಂದು ಕರೆಯಲಾಗುತ್ತಿತ್ತು. ಅಂದರೆ, ಅವರು ಸಣ್ಣಪುಟ್ಟ ವಸ್ತುಗಳನ್ನು ಆಚೀಚೆ ಎತ್ತಿ ಇಡುವುದು, ಜಾಗವನ್ನು ಸ್ವಚ್ಛಗೊಳಿಸುವುದು ಮುಂತಾದ ಕೆಲಸಗಳನ್ನು ಮಾತ್ರ ಮಾಡುತ್ತಿದ್ದರು. ಅವರು ಕೆಲಸಗಳಲ್ಲಿ ಭಾಗಿಯಾಗಿತ್ತಿದ್ದುದು ಅಷ್ಟಕ್ಕೆ ಮಾತ್ರ ಸೀಮಿತ ಆಗಿತ್ತು. ಆದರೆ, ನಾನು ಕೆಲಸ ಮಾಡಿದ ದಿನಪತ್ರಿಕೆಯ ಕೆಲಸಗಳಲ್ಲಿ ಮಹಿಳೆಯರು ಸಮಾನ ಭಾಗಿಗಳಾಗಿದ್ದರು.

ಮಹಿಳೆಯೊಬ್ಬರು ನನಗೆ ಬಾಸ್‌ ಕೂಡ ಆಗಿದ್ದರು. ಇದು ನನ್ನ ಪಾಲಿಗೆ ಕಲಿಕೆಯ ಅನುಭವ ನೀಡಿತು. ಇಂತಹ ಅನುಭವ ಸಣ್ಣ ಪಟ್ಟಣಗಳ ಎಲ್ಲ ಪುರುಷರಿಗೂ ಕಡ್ಡಾಯವಾಗಿ ಸಿಗಬೇಕು. ನಾನು ಮಹಿಳೆಯರ ಕುರಿತ ನನ್ನ ದೃಷ್ಟಿಕೋನ ಬದಲಿಸಿಕೊಳ್ಳುವುದನ್ನು ಕಲಿಯಬೇಕಾಯಿತು. ಹಾಗೆ ಕಲಿಯಬೇಕಾಗಿದ್ದು ಒಳ್ಳೆಯದೂ ಹೌದು.

ನನಗಿಂತ ಹೆಚ್ಚು ಚೂಟಿಯಾಗಿದ್ದ, ನನಗಿಂತ ಹೆಚ್ಚು ಓದಿಕೊಂಡಿದ್ದ ವ್ಯಕ್ತಿಗಳ ಜೊತೆ ಒಡನಾಟ ಸಿಕ್ಕಿದ್ದು ನನ್ನಲ್ಲಿ ಪರಿವರ್ತನೆ ತಂದ ಇನ್ನೊಂದು ಅಂಶ. ಸೂರತ್‌ನಂತಹ ಪಟ್ಟಣಗಳವರು ಹೊರ ಜಗತ್ತಿಗೆ ತೆರೆದುಕೊಂಡಿರುವುದು ಎಷ್ಟು ಸೀಮಿತ ಎಂಬುದನ್ನು ದೆಹಲಿ, ಮುಂಬೈ, ಹೈದರಾಬಾದ್ ಅಥವಾ ಕೋಲ್ಕತ್ತದಲ್ಲಿ ಬೆಳೆದವರಿಗೆ ವಿವರಿಸುವುದು ಕಷ್ಟದ ಕೆಲಸ. ಇಂಟರ್ನೆಟ್ ಯುಗಕ್ಕಿಂತ ಮೊದಲಿನ ಕಾಲಕ್ಕೆ, ಖಾಸಗಿ ಟಿ.ವಿ. ವಾಹಿನಿಗಳು ಹೆಚ್ಚು ಇಲ್ಲದಿದ್ದ ಕಾಲಕ್ಕೆ ಈ ಮಾತು ಹೆಚ್ಚು ಅನ್ವಯ ಆಗುತ್ತದೆ. ಹಣ ಸಂಪಾದನೆಗೆ ಸಂಬಂಧಿಸದೆ ಇದ್ದರೆ ಕಲಿಕೆಯಲ್ಲಿ ಅಥವಾ ಜ್ಞಾನ ಸಂಪಾದನೆಯಲ್ಲಿ ವಿಶೇಷ ಆಸಕ್ತಿ ತೋರುವ ಊರು ಆಗಿರಲಿಲ್ಲ ಸೂರತ್, ಅದು ಈಗಲೂ ಹಾಗೆ ಆಗಿಲ್ಲ. ಮೂವತ್ತು ವರ್ಷಗಳ ಹಿಂದೆ ಅಲ್ಲಿ ಇಂಗ್ಲಿಷ್ ಪುಸ್ತಕಗಳನ್ನು ಮಾರಾಟ ಮಾಡುವ ಅಂಗಡಿ ಇದ್ದಿದ್ದು ಒಂದೇ ಒಂದು. ಆಗ ಅಲ್ಲಿನ ಜನಸಂಖ್ಯೆ ಅಂದಾಜು 15 ಲಕ್ಷ ಆಗಿತ್ತು.

ಹಾಗಾಗಿ, ಶುದ್ಧ ಅನುಭವ ಮಾತ್ರವೇ ಅಲ್ಲದೆ, ಕಲಿಕೆಯ ಮೂಲಕವೂ ಜಗತ್ತಿನ ಬಗ್ಗೆ ಹೆಚ್ಚು ಅರ್ಥ ಮಾಡಿಕೊಂಡಿದ್ದ ನನ್ನದೇ ವಯಸ್ಸಿನ ಇತರರ ಜೊತೆ ಒಡನಾಡುವುದು ನನ್ನ ಪಾಲಿಗೆ ಮಹತ್ವದ್ದಾಗಿತ್ತು. ನಾನು ಹೀಗೆ ಒಡನಾಡಿದ ವ್ಯಕ್ತಿಗಳಲ್ಲಿ ಅತ್ಯಂತ ಹೆಚ್ಚು ಪ್ರಭಾವಶಾಲಿ ಆಗಿದ್ದವರು ಎಂ.ಜೆ. ಅಕ್ಬರ್. ನಾನು ಕೆಲಸ ಮಾಡುತ್ತಿದ್ದುದು ಮುಂಬೈನಲ್ಲಿ. ಅವರು ಇದ್ದಿದ್ದು ದೆಹಲಿಯಲ್ಲಿ. ಹಾಗಾಗಿ, ಅವರ ಜೊತೆ ಒಡನಾಡುವ ಅವಕಾಶ ಹೆಚ್ಚಿರಲಿಲ್ಲ. ಹಾಗಾಗಿ ಅಕ್ಬರ್ ಎನ್ನುವ ವ್ಯಕ್ತಿಯ ಜೊತೆ ನಾನು ಒಡನಾಡಿದ್ದು ಕಡಿಮೆ. ಆದರೆ ಅವರ ಬರಹಗಳ ಜೊತೆ ಒಡನಾಟ ನಡೆಸಿದ್ದು ಜಾಸ್ತಿ.

ನಾನು ಆಗ ಸಂಪ್ರದಾಯವಾದಿ, ತೀರಾ ರಾಷ್ಟ್ರೀಯವಾದಿ, ಒಂದು ಹಂತದ ಮಟ್ಟಿಗೆ ಮುಚ್ಚಿದ ಮನಸ್ಸಿನ ಹಿಂದೂ ಆಗಿದ್ದೆ. ಅಕ್ಬರ್ ಅವರು ಧರ್ಮವನ್ನು ಮೀರಿ ನಿಂತಿದ್ದರು. ಆ ರೀತಿಯಲ್ಲಿ ಧರ್ಮವನ್ನು ಮೀರಿದ ಇನ್ನೊಬ್ಬ ಭಾರತೀಯನನ್ನು ನಾನು ಕಂಡಿಲ್ಲ. ಅವರ ವ್ಯಕ್ತಿತ್ವ ರೂಪಿಸಿದ್ದು ಅವರ ಧರ್ಮ ಆಗಿರಲಿಲ್ಲ. ಬದಲಿಗೆ, ಅವರ ಬುದ್ಧಿವಂತಿಕೆ, ಅವರು ಲೋಕವನ್ನು ನೋಡುವ ರೀತಿ, ಅವರ ಓದು ಮತ್ತು ಬರಹಗಳಾಗಿದ್ದವು.

ಭಾರತೀಯ ಅಸ್ಮಿತೆಯ ಅರ್ಥ ಏನು ಎಂಬುದಕ್ಕೆ ಅವರು ಹಲವರಲ್ಲಿ ಹೊಸ ಅರ್ಥ ಮೂಡಿಸಿದರು. ಭಾರತೀಯ ಅಸ್ಮಿತೆಯ ವ್ಯಾಖ್ಯೆಯನ್ನು ಅಕ್ಬರ್‌ ಇನ್ನಷ್ಟು ಹಿಗ್ಗಿಸಿದರು. ಇನ್ನಷ್ಟು ಉದಾರವಾದಿಯಾಗಿಸಿದರು, ಇನ್ನಷ್ಟು ಆಕರ್ಷಕಗೊಳಿಸಿದರು. ಈ ರೀತಿಯಲ್ಲಿ ಭಾರತೀಯ ಆಗಿರುವುದು ಒಳ್ಳೆಯದು ಎಂದು ನನಗೆ ಅನಿಸಿತು. ತಮ್ಮ ಅಸ್ಮಿತೆಯ ಬಗ್ಗೆ ಹೆಮ್ಮೆಪಡಲು ಪಾಕಿಸ್ತಾನ, ಚೀನಾ ಅಥವಾ ಭಾರತದಲ್ಲಿನ ಇತರರನ್ನು ದ್ವೇಷಿಸಬೇಕಾಗಿರಲಿಲ್ಲ.

ಆದರೆ, ಈ ರೀತಿ ಪ್ರಭಾವಕ್ಕೆ ಒಳಗಾದ ವ್ಯಕ್ತಿಗಳನ್ನು ಅಕ್ಬರ್‌ ಅವರು ಎರಡು ಬಾರಿ ನಿರಾಸೆಗೆ ನೂಕಿದ್ದಾರೆ (ನಾನು 'ವಂಚಿಸಿದ್ದಾರೆ' ಎಂಬ ಪದ ಬಳಸುವೆ). ರಾಜಕೀಯದ ವಿಚಾರದಲ್ಲಿ ಅಕ್ಬರ್ ಅವರನ್ನು ಯಾವಾಗಲೂ ಅವಕಾಶವಾದಿಯಂತೆ ಕಾಣಲಾಗುತ್ತಿತ್ತು. ಈಚೆಗಿನ ವರ್ಷಗಳಲ್ಲಿ ಅವರು ತೋರಿದ ಯೂ-ಟರ್ನ್‌, ಅದರ ಬೆನ್ನಲ್ಲೇ ಕಂಡುಬಂದ ಚಮಚಾಗಿರಿಯು ನೋಡುವವರಲ್ಲಿ ಹತಾಶೆ ಮೂಡಿಸುವಂತೆ ಇತ್ತು. ಆದರೆ, ರಾಜಕೀಯದಲ್ಲಿ ಪುಂಡಾಟಿಕೆ ಎಂಬುದು ಅಸಹಜವೇನೂ ಅಲ್ಲವಾದ ಕಾರಣ ಇವನ್ನೆಲ್ಲ ಕಂಡು ನಕ್ಕುಬಿಡಬಹುದಾಗಿತ್ತು. ಈಗ ಕುರ್ಚಿಯ ಹಿಂದೆ ಓಡುತ್ತಿರುವ ವ್ಯಕ್ತಿಗಿಂತ ಭಿನ್ನವಾದ ವ್ಯಕ್ತಿತ್ವ ಅವರದ್ದು ಎಂದು ನಮ್ಮಲ್ಲೇ ನಾವು ಹೇಳಿಕೊಳ್ಳಬಹುದಿತ್ತು.

ಆದರೆ, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದರು ಎನ್ನುವುದು ಬಹಿರಂಗವಾದ ನಂತರ ಅಕ್ಬರ್ ಅವರ ಪ್ರತಿಷ್ಠೆ ಹಾಗೂ ಅವರು ಪ್ರತಿಪಾದಿಸಿದ್ದೆಲ್ಲ ಚೂರಾದಂತೆ ಆಗಿದೆ. ಒಬ್ಬ ಲೇಖಕನಾಗಿ, ಚಿಂತಕನಾಗಿ ಅವರು ಹೊಂದಿದ್ದ ವಿಶ್ವಾಸಾರ್ಹತೆ ಕೂಡ ಕುಗ್ಗಿದೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಅವಕಾಶ ಕೊಡುವುದಕ್ಕಿಂತ ಅವರನ್ನು ಸ್ಥಾನದಿಂದ ಹೊರಹಾಕಲಾಗುತ್ತದೆ ಎಂಬುದು ನನ್ನ ನಿರೀಕ್ಷೆ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.