ADVERTISEMENT

ಇಂದಿರಾ ಕ್ಯಾಂಟಿನ್‌ನಲ್ಲಿ ಇಡ್ಲಿಗೆ ಹೆಚ್ಚಿದ ಬೇಡಿಕೆ

ಕಾರ್ಮಿಕ ವರ್ಗ, ಅಸಹಾಯಕರಿಗೆ ಅನುಕೂಲ– ಜನರಿಂದ ಸಂತಸ

​ಪ್ರಜಾವಾಣಿ ವಾರ್ತೆ
Published 28 ಮೇ 2018, 9:28 IST
Last Updated 28 ಮೇ 2018, 9:28 IST
ಇಂದಿರಾ ಕ್ಯಾಂಟೀನ್‌ ನಲ್ಲಿ ಭಾನುವಾರ ಬೆಳಿಗ್ಗೆ ಉಪಹಾರ ಸೇವಿಸುತ್ತಿರುವ ಜನರು
ಇಂದಿರಾ ಕ್ಯಾಂಟೀನ್‌ ನಲ್ಲಿ ಭಾನುವಾರ ಬೆಳಿಗ್ಗೆ ಉಪಹಾರ ಸೇವಿಸುತ್ತಿರುವ ಜನರು   

ರಾಮನಗರ : ಇಲ್ಲಿನ ಇಂದಿರಾ ಕ್ಯಾಂಟಿನ್‌ನಲ್ಲಿ ಬೆಳಗಿನ ಹೊತ್ತು ಇಡ್ಲಿ ಸಿಗುತ್ತಿಲ್ಲ. ಕೇವಲ ಬಗೆಬಗೆಯ ರೈಸ್ ಬಾತ್‌ಗಳು ಮಾತ್ರ ಸಿಗುತ್ತಿವೆ. ಇಡ್ಲಿ ಸಾಂಬಾರ್ ತಯಾರಿಕೆಗೆ ಬೇಕಾದ ಅಡುಗೆ ಪಾತ್ರೆಗಳೇ ಇನ್ನೂ ಅಳವಡಿಕೆಯಾಗಿಲ್ಲ.

ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತದೆ ಎಂದು ತರಾತುರಿಯಲ್ಲಿ ಮಾರ್ಚ್‌ 26ರಂದು ಉದ್ಘಾಟನೆಯಾದ ಇಂದಿರಾ ಕ್ಯಾಂಟೀನ್ ನಲ್ಲಿ ಅಗತ್ಯ ಸ್ಟೀಂ ಕುಕ್ಕರ್‌ಗಳು, ಗ್ರೈಂಡರ್ ಸೇರಿದಂತೆ ಅಗತ್ಯ ಅಡುಗೆ ಪಾತ್ರಗಳನ್ನು ಇನ್ನೂ ಅಳವಡಿಸಲಾಗಿಲ್ಲ.

ಬೆಳಗಿನ ಹೊತ್ತು ಇಡ್ಲಿ ಪ್ರಿಯವಾದ ಆಹಾರ. ಹೀಗಾಗಿ ಬೆಳಿಗ್ಗೆ ಕ್ಯಾಂಟಿನ್‌ಗೆ ಬರುವ ಎಲ್ಲ ಗ್ರಾಹಕರು ಇಡ್ಲಿ ಕೇಳುತ್ತಾರೆ. ಇಲ್ಲ ಎಂದಾಗ ಬೇಸರವಾಗುತ್ತಿದೆ ಎಂದು ಗ್ರಾಹಕರೊಬ್ಬರು ಪ್ರತಿಕ್ರಿಯಿಸಿದರು.

ADVERTISEMENT

ಕ್ಯಾಂಟಿನ್ ನಿರ್ಮಾಣವಾಗಿದ್ದರಿಂದ ಹಲವರಿಗೆ ಅನುಕೂಲವಾಗಿದೆ. ಪ್ರತಿ ದಿನ ಬೆಳಿಗ್ಗೆ 500 ರಿಂದ 550 ಮಂದಿ ಉಪಾಹಾರ ಸೇವಿಸುತ್ತಿದ್ದಾರೆ. ಮಧ್ಯಾಹ್ನ 520 ರಿಂದ 580 ರವರೆಗೆ ಹಾಗೂ ರಾತ್ರಿ 400ಕ್ಕೂ ಹೆಚ್ಚು ಜನರು ಊಟ ಮಾಡುತ್ತಿದ್ದಾರೆ. ಬೆಳಿಗ್ಗೆ ಹೊತ್ತು ₹5ಕ್ಕೆ ಉಪಾಹಾರ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ₹10ಕ್ಕೆ ಊಟ ದೊರೆಯುತ್ತಿದೆ.

ಕಾರ್ಮಿಕ ವರ್ಗಕ್ಕೆ ಅನುಕೂಲ: ಬಡ ಜನರಿಗೆ ಕನಿಷ್ಠ ದರದಲ್ಲಿ ಉಪಾಹಾರ, ಊಟ ನೀಡಬೇಕು ಎನ್ನುವುದು ಈ ಕ್ಯಾಂಟಿನ್‌ ನಿರ್ಮಾಣದ ಹಿಂದಿನ ಮುಖ್ಯ ಉದ್ದೇಶವಾಗಿದೆ. ಮುಖ್ಯವಾಗಿ ನಿರ್ಗತಿಕರು, ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ಇದರಿಂದ ಹೆಚ್ಚು ಅನುಕೂಲ ಆಗಿದೆ.

ಜನಸಂದಣಿ ಹೆಚ್ಚಾದಲ್ಲಿ ಟೋಕನ್‌ ವಿತರಣೆ ಮೂಲಕ ಮೊದಲು ಬಂದವರಿಗೆ ಆದ್ಯತೆ ಸಿಗುತ್ತಿದೆ. ಈಗ ಕ್ಯಾಂಟಿನ್ ನಿರ್ಮಾಣವಾಗಿರುವ ಸ್ಥಳವು ಜನಸಂದಣಿಯಿಂದ ಕೂಡಿದ್ದು, ಹತ್ತಿರದಲ್ಲಿಯೇ ರೈಲು ನಿಲ್ದಾಣ, ನಗರಸಭೆಯ ಕಚೇರಿಯೂ ಇದೆ. ಗುಣಮಟ್ಟದ ಆಹಾರ ದೊರೆಯುತ್ತಿರುವುದರಿಂದ ಇದು ಜನರಿಗೆ ಇಷ್ಟವಾಗಿದೆ.

ಜಿಲ್ಲೆಯಲ್ಲಿ ಒಟ್ಟು ಐದು ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಪೌರಾಡಳಿತ ಇಲಾಖೆಯು ಉದ್ದೇಶಿಸಿತ್ತು. ಈಗ ಮೂರು ತಾಲ್ಲೂಕುಗಳಲ್ಲಿ ಅವು ಉದ್ಘಾಟನೆಗೆ ಸಿದ್ದಗೊಂಡಿವೆ. ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಯುಕ್ತರು ಉದ್ಘಾಟನೆಗೆ ದಿನಾಂಕ ಮಾಡಬೇಕಾಗಿದೆ ಎಂದು ಮೇಲುಸ್ತುವಾರಿ ಅಧಿಕಾರಿ ಕೆ. ಉಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಮನಗರದಲ್ಲಿ ಇನ್ನೊಂದು ಕ್ಯಾಂಟಿನ್‌ ನಿರ್ಮಾಣಕ್ಕಾಗಿ ಹಳೆಯ ಬಸ್ ನಿಲ್ದಾಣ ಸಮೀಪ ಪಶು ವೈದ್ಯಕೀಯ ಇಲಾಖೆಯ ಸ್ಥಳವನ್ನು ಗುರುತಿಸಲಾಗಿತ್ತು, ಅದಕ್ಕೆ ರೈತ ಮುಖಂಡರಿಂದ ವಿರೋಧ ವ್ಯಕ್ತವಾಗಿದ್ದರಿಂದ ಬೇರೆ ಸ್ಥಳವನ್ನು ಗುರುತಿಸಲಾಗುತ್ತಿದೆ. ಗುರುತಿಸಿದ ಕೂಡಲೆ ಕ್ಯಾಂಟಿನ್ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

300 ಗ್ರಾಂ ರೈಸ್ ಬಾತ್‌ ಜತೆಗೆ 100 ಗ್ರಾಂ ಮೊಸರನ್ನ ಕೊಡಲು ಸೂಚಿಸಲಾಗಿದೆ. ಮೂರು ಇಡ್ಲಿ 165 ಗ್ರಾಂ ತೂಗಬೇಕು. ಸಿಬ್ಬಂದಿ ಕೊಡುತ್ತಿರುವ ಆಹಾರದ ತೂಕ ಸರಿಯಾಗಿರುವುದು ಅನುಮಾನವಾದರೆ ಲಭ್ಯವಿರುವ ವಿದ್ಯುನ್ಮಾನ ತೂಕ ಯಂತ್ರದಲ್ಲಿ ತೂಕ ಮಾಡಬಹುದು. ಇಡ್ಲಿಗೆ ಬೇಡಿಕೆ ಇದೆ. ಆದರೆ ಹಿಟ್ಟು ರುಬ್ಬಲು ಗ್ರೈಂಡರ್‌ ಬಂದಿಲ್ಲ, ಕುಕ್ಕರ್‌ ಕೂಡ ಇಲ್ಲ ಎಂದರು.

‘ರಾಜ್ಯದಲ್ಲಿ ಈಗ ಕಾಂಗ್ರೆಸ್–ಜೆಡಿಎಸ್ ಪಕ್ಷದ ಮೈತ್ರಿ ಸರ್ಕಾರ ರಚನೆಯಾಗಿದೆ. ಕ್ಯಾಂಟಿನ್‌ಗಳು ಇನ್ನೂ ಚೆನ್ನಾಗಿ ನಡೆಯುವಂತೆ ಮಾಡಬೇಕು. ಇವುಗಳಿದ ನಮ್ಮಂತಹ ಬಡವರಿಗೆ ಕಡಿಮೆ ಹಣದಲ್ಲಿ ಊಟ ದೊರೆಯುತ್ತಿದೆ’ ಎಂದು ಮೌಸೀನ್ ಪಾಷಾ ತಿಳಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲೂ ಇರಲಿ

ಇಂದಿರಾ ಕ್ಯಾಂಟಿನ್‌ ಅನ್ನು ನಗರ ಪ್ರದೇಶಕ್ಕೆ ಸೀಮಿತಗೊಳಿಸದೆ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಬೇಕು ಎಂದು ಹಿರಿಯರಾದ ಗುರುಶಾಂತಪ್ಪ ತಿಳಿಸಿದರು.

ಈಗ ಗ್ರಾಮೀಣ ಪ್ರದೇಶಗಳು ಎಂದರೆ ವಯಸ್ಸಾದವರು ಇರುವ ಪ್ರದೇಶ ಎಂಬಂತಾಗಿದೆ. ಇವರಲ್ಲಿ ಹಲವರು ಅಸಹಾಯಕರಾಗಿರುತ್ತಾರೆ. ಆದ್ದರಿಂದ ಕ್ಯಾಂಟಿನ್‌ಗಳನ್ನು ಹಳ್ಳಿಗಳಲ್ಲೂ ನಿರ್ಮಿಸಲು ಈಗಿನ ಸರ್ಕಾರ ಒತ್ತು ನೀಡಬೇಕು ಎಂದರು.

–ಎಸ್. ರುದ್ರೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.