ADVERTISEMENT

ವಿಶ್ಲೇಷಣೆ| ಪಥ್ಯವಾಗದ ಕೆಲವು ಸತ್ಯಗಳು

ಕಾರಣ ಏನೇ ಇರಲಿ, ಜನಗಣತಿಯ ವಿಳಂಬ ಗಂಭೀರವಾದ ವಿಷಯ

ವೇಣುಗೋಪಾಲ್‌ ಟಿ.ಎಸ್‌.
Published 19 ಮಾರ್ಚ್ 2023, 20:12 IST
Last Updated 19 ಮಾರ್ಚ್ 2023, 20:12 IST
   

‘ಕೆಲವೊಮ್ಮೆ ಹಳೆಯ ಮನೆಯ ರಿಪೇರಿಗಿಂತ ಹೊಸ ಮನೆ ಕಟ್ಟುವುದು ಒಳ್ಳೆಯದು’ ಎನ್ನುತ್ತಾ, 64 ವರ್ಷಗಳಿಂದ ಚಾಲ್ತಿಯಲ್ಲಿದ್ದ ಯೋಜನಾ ಆಯೋಗಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2014ರಲ್ಲಿ ತೆರೆಯೆಳೆದರು. ನೀತಿ ಆಯೋಗ ಹುಟ್ಟಿಕೊಂಡಿತು.

ವೇಣುಗೋಪಾಲ್‌ ಟಿ.ಎಸ್‌.

ಭಾರತದ ಆರ್ಥಿಕ ಅವನತಿಗೆ ವಸಾಹತುಶಾಹಿಗಳು ಮಾಡಿದ ಸಂಪನ್ಮೂಲದ ಲೂಟಿಯೇ ಕಾರಣ ಮತ್ತು ಸ್ವಾತಂತ್ರ್ಯ ಸಿಕ್ಕರಷ್ಟೇ ಇದರಿಂದ ಮುಕ್ತರಾಗುವುದಕ್ಕೆ ಸಾಧ್ಯ ಎಂದು ಅಂದಿನ ರಾಷ್ಟ್ರೀಯ ನಾಯಕರು ವಾದಿಸುತ್ತಿದ್ದರು. ಸ್ವಾಭಾವಿಕವಾಗಿಯೇ, ಸ್ವಾತಂತ್ರ್ಯ ಸಿಕ್ಕ ಕೂಡಲೇ ಈ ಹಾದಿಯಲ್ಲಿ ದೇಶದ ಆರ್ಥಿಕತೆ ಬೆಳೆಸಲು ಮೊದಲಾದರು. ಇದಕ್ಕೆ ವ್ಯವಸ್ಥಿತವಾಗಿ ಯೋಜನೆಗಳನ್ನು ರೂಪಿಸಬೇಕೆಂಬುದು ಅವರಿಗೆ ಮನವರಿಕೆಯಾಗಿತ್ತು. ಯೋಜನಾ ಆಯೋಗ ಅಸ್ತಿತ್ವಕ್ಕೆ ಬಂದಿತು. ಇದು ಸುಮಾರಾಗಿ ರಷ್ಯಾದ ಕೇಂದ್ರೀಕೃತ ಆರ್ಥಿಕ ಯೋಜನೆ ಹಾಗೂ ಪಶ್ಚಿಮದ ಉದಾರವಾದಿ ಪ್ರಜಾಸತ್ತೆಯ ಪರಿಕಲ್ಪನೆಗಳ ಮಿಶ್ರಣವಾಗಿತ್ತು.

ಯೋಜನೆಗಳನ್ನು ಯಶಸ್ವಿಯಾಗಿ ಯೋಜಿಸುವುದಕ್ಕೆ ಖಚಿತವಾದ ಅಂಕಿಅಂಶಗಳು ಅನಿವಾರ್ಯ ಅನ್ನುವುದು ನೆಹರೂ ಅವರಂತಹ ನಾಯಕರಿಗೆ ಸ್ಪಷ್ಟ ವಾಗಿತ್ತು. ಅದಕ್ಕಾಗಿ ಕೇಂದ್ರ ಸಾಂಖ್ಯಿಕ ಕಚೇರಿ, ರಾಷ್ಟ್ರೀಯ ಸ್ಯಾಂಪಲ್ ಸರ್ವೆಯಂತಹ ಸಂಸ್ಥೆಗಳನ್ನು ಹುಟ್ಟುಹಾಕಿದರು. ಅದರ ಹೊಣೆಯನ್ನು ಪಿ.ಸಿ.ಮಹಾಲನೋಬಿಸ್ ಅವರಿಗೆ ವಹಿಸಿದರು. ಇವು ಸಂಗ್ರಹಿಸಿದ ಅಂಕಿಅಂಶಗಳು ಯೋಜನೆಗಳನ್ನು ರೂಪಿಸಲು ಭದ್ರವಾದ ಬುನಾದಿಯನ್ನೊದಗಿಸಿದವು.

ADVERTISEMENT

ಮಹಾಲನೋಬಿಸ್ ಅವರ ನೇತೃತ್ವದಲ್ಲಿ ಹಲವು ಪ್ರಯೋಗಗಳು ನಡೆದವು. ಬೃಹತ್‌ ಜನಸಂಖ್ಯೆ
ಯುಳ್ಳ ಭಾರತದಲ್ಲಿ ಪ್ರತಿಯೊಬ್ಬರಿಂದಲೂ ಮಾಹಿತಿ ಸಂಗ್ರಹಿಸುವುದು ಕಷ್ಟ. ಜೊತೆಗೆ ಸಮಯ ಬೇಡುವ, ದುಬಾರಿ ಕೆಲಸ. ಹಾಗಾಗಿ ಸ್ಯಾಂಪಲ್ ಸಮೀಕ್ಷೆ ಅಂದರೆ, ಒಟ್ಟಾರೆ ಜನಸಂಖ್ಯೆಯಿಂದ ಒಂದು ನಿರ್ದಿಷ್ಟ ಸಂಖ್ಯೆಯ ಪ್ರಾತಿನಿಧಿಕ ವ್ಯಕ್ತಿಗಳ ಅಧ್ಯಯನ ಮಾಡಿ, ಅದನ್ನು ಇಡೀ ದೇಶಕ್ಕೆ ಅನ್ವಯಿಸಲಾಗುತ್ತದೆ. ಭಾರತ ಈ ಸಾಹಸಕ್ಕೆ ಕೈಹಾಕಿದಾಗ ಜನ ಅಚ್ಚರಿಗೊಂಡು, ಅನುಮಾನ ವ್ಯಕ್ತಪಡಿಸಿದರು. ಜಗತ್ತಿನಲ್ಲೇ ಇಷ್ಟೊಂದು ವ್ಯಾಪಕವಾದ, ಸಮಗ್ರವಾದ ಸಮೀಕ್ಷೆ ನಡೆದಿರಲಿಲ್ಲ. 5.60 ಲಕ್ಷ ಹಳ್ಳಿಗಳ ಪೈಕಿ 1,833 ಪ್ರಾತಿನಿಧಿಕ ಹಳ್ಳಿಗಳಲ್ಲಿ ಸಮೀಕ್ಷೆ ನಡೆಸಿ ಇಡೀ ದೇಶವನ್ನು ಕುರಿತ ಮಾಹಿತಿ ಪ್ರಕಟಿಸಲಾಯಿತು.

ಆದರೆ ಇದು ಕಾಣುವಷ್ಟು ಸಲೀಸಾಗಿರಲಿಲ್ಲ. ನುರಿತ ಸಿಬ್ಬಂದಿಯ ಕೊರತೆಯಿತ್ತು. ಕಾಡುಮೇಡುಗಳನ್ನು ಹಾದು, ಕಾಡುಪ್ರಾಣಿಗಳ, ಸಾಂಕ್ರಾಮಿಕ ರೋಗಗಳ ಅಪಾಯವನ್ನು ಮೀರಿ, ಅಪರಿಚಿತ ಭಾಷೆಯನ್ನಾಡುವ ಜನರಿಂದ ಮಾಹಿತಿ ಸಂಗ್ರಹಿಸಬೇಕಾಗುತ್ತಿತ್ತು. ಎಷ್ಟೋ ಬುಡಕಟ್ಟು ಜನರಿಗೆ ಹಣದ ಪರಿಚಯವೇ ಇರಲಿಲ್ಲ. ಆರ್ಥಿಕ ಬೆಳವಣಿಗೆ ಅಂದರೆ ನಗುತ್ತಿದ್ದರು. ಆದರೆ ಪ್ರಯೋಗ ಯಶಸ್ವಿಯಾಯಿತು. ಜಗತ್ತು ಮೆಚ್ಚಿದ್ದು ಮಾತ್ರವಲ್ಲ, ಅನುಸರಿಸಲು ಪ್ರಾರಂಭಿಸಿತು.

ಅಂಕಿಅಂಶ ಸಂಗ್ರಹಿಸುವ ಇನ್ನೊಂದು ಕ್ರಮ ಜನಗಣತಿ. ಹತ್ತು ವರ್ಷಕ್ಕೊಮ್ಮೆ ಪ್ರತೀ ಕುಟುಂಬದಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತದೆ. ಭಾರತದಲ್ಲಿ ಜನಗಣತಿ 1881ರಲ್ಲಿ ಪ್ರಾರಂಭವಾಗಿ, 2011ರವರೆಗೆ ನಿರಂತರವಾಗಿ ನಡೆದುಕೊಂಡು ಬಂದಿತ್ತು- ಎರಡು ಜಾಗತಿಕ ಯುದ್ಧಗಳು, ಚೀನೀ ಆಕ್ರಮಣದ ಸಂದರ್ಭದಲ್ಲೂ ನಿಂತಿರಲಿಲ್ಲ. ಆದರೆ 2021ರಲ್ಲಿ ಕೋವಿಡ್‍ನಿಂದ ಜನಗಣತಿಯನ್ನು ಮುಂದೂಡಿದರು. ಆದರೆ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಪಂಜಾಬ್, ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕೋವಿಡ್ ನಡುವೆಯೇ ಚುನಾವಣೆ ನಡೆಸಲಾಯಿತು. ಲಾಕ್‍ಡೌನ್ ತೆರವಾದ ಮೇಲೆ ಎಲ್ಲಾ ಸಾರ್ವಜನಿಕ ಚಟುವಟಿಕೆಗಳು ಪ್ರಾರಂಭವಾದವು. ನಿಂತದ್ದು ಜನಗಣತಿ ಮಾತ್ರ.

ಜನಗಣತಿ ಕಟ್ಟಿಕೊಡುವ ವಾಸ್ತವದಿಂದ ಎಷ್ಟೋ ನೀತಿಗಳು, ಶಾಸನಗಳು ರೂಪುಗೊಳ್ಳುತ್ತವೆ. ಉದಾಹರಣೆಗೆ, 1991ರ ಜನಗಣತಿಯಿಂದ ದೇಶದಲ್ಲಿ ಪ್ರತಿಕೂಲ ಲಿಂಗಾನುಪಾತ ಇರುವುದು ಸ್ಪಷ್ಟವಾಯಿತು. ಪರಿಣಾಮವಾಗಿ ಭ್ರೂಣಲಿಂಗ ಪರೀಕ್ಷೆ, ಹೆಣ್ಣುಭ್ರೂಣ ಹತ್ಯೆ ಅಪರಾಧವೆಂಬ ಶಾಸನ ಜಾರಿಯಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಅಂಕಿಅಂಶಗಳ ಕುರಿತಂತೆ ಅಸಡ್ಡೆ ವ್ಯಕ್ತವಾಗುತ್ತಿದೆ ಎಂಬ ಟೀಕೆ ವ್ಯಾಪಕವಾಗಿದೆ.

ಹಲವು ಪ್ರಮಖ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕೃತವಾದ ಅಂಕಿಅಂಶಗಳ ಕೊರತೆಯಿರುವುದು ನಿಜ. ಹಾಗಾಗಿ ಹೆಚ್ಚಿನ ಮಾಹಿತಿಗಳಿಗಾಗಿ 2011ರ ಜನ ಗಣತಿಯನ್ನೇ ಆಧರಿಸಲಾಗುತ್ತಿದೆ. ದೇಶದ ಜನಸಂಖ್ಯೆ, ಜೀವನಮಟ್ಟ, ಬಡತನದ ಪ್ರಮಾಣ, ವಲಸಿಗರ ಸ್ಥಿತಿಗತಿ, ವಿಭಿನ್ನ ಯೋಜನೆಗಳ ಫಲಾನುಭವಿಗಳ ಸಂಖ್ಯೆಯಂತಹ ಮಾಹಿತಿಗಳು ಇಲ್ಲದೇಹೋದರೆ ಸರ್ಕಾರದ ಯೋಜನೆಗಳು ಫಲಕಾರಿಯಾಗುವುದು ಕಷ್ಟ. ಹಲವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗು ತ್ತಾರೆ. ಉದಾಹರಣೆಗೆ, ಸಾರ್ವಜನಿಕ ಪಡಿತರ ಪದ್ಧತಿ
ಯನ್ನೇ ಗಮನಿಸೋಣ. 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಕಾರ, ದೇಶದ ಒಟ್ಟು ಜನಸಂಖ್ಯೆಯ ಶೇ 67ರಷ್ಟು ಜನ ಸಬ್ಸಿಡಿ ದರದಲ್ಲಿ ಆಹಾರಧಾನ್ಯಗಳನ್ನು ಪಡೆಯಬಹುದಿತ್ತು. 2011ರಲ್ಲಿ ಜನಸಂಖ್ಯೆ ಸುಮಾರು 121 ಕೋಟಿ ಇತ್ತು. ಅದರ ಶೇ 67ರಷ್ಟು ಅಂದರೆ, 80 ಕೋಟಿ ಜನ ಈ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ಆದರೆ ಒಂದು ಅಂದಾಜಿನ ಪ್ರಕಾರ, ಈಗ ಜನಸಂಖ್ಯೆ 137 ಕೋಟಿ ಆಗಿದೆ. ಅದರ ಶೇ 67 ಅಂದರೆ ಸುಮಾರು 92 ಕೋಟಿ ಜನರಿಗೆ ಪಡಿತರ ಸೌಲಭ್ಯ ತಲುಪಬೇಕಿತ್ತು. ಅಂದರೆ 12 ಕೋಟಿ ಜನ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹಾಗಿದ್ದೂ ಜನಗಣತಿಯನ್ನು ಹಲವು ಬಾರಿ ಮುಂದೂಡಿ, ಮತ್ತೆ ಪ್ರಾರಂಭಿಸಲು ಯಾವ ಸಿದ್ಧತೆಯನ್ನೂ ಮಾಡಿಕೊಳ್ಳದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಕೆಲವರು ಇದರ ಹಿಂದೆ ರಾಜಕೀಯವಿದೆ ಎನ್ನುತ್ತಾರೆ. ಸರ್ಕಾರ ಪ್ರಚಾರ ಮಾಡುತ್ತಿರುವಂತೆ ಕೆಲವು ಧಾರ್ಮಿಕ ಸಮುದಾಯಗಳ ಜನಸಂಖ್ಯೆ ಹೆಚ್ಚಾಗಿಲ್ಲದಿರ ಬಹುದು ಅಥವಾ ಸರ್ಕಾರ ಹೇಳುತ್ತಿರುವಷ್ಟು ಸಂಖ್ಯೆಯ ಜನರಿಗೆ ಯೋಜನೆಗಳ ಸೌಲಭ್ಯ ತಲುಪದಿರ ಬಹುದು. ಈ ಮುಜುಗರದಿಂದ ಪಾರಾಗಲು ಜನಗಣತಿ ನಡೆಸಿಲ್ಲವೇನೋ ಎಂಬ ಅನುಮಾನವೂ ವ್ಯಕ್ತವಾಗಿದೆ.

ಕಾರಣ ಏನೇ ಇರಲಿ, ಜನಗಣತಿಯ ವಿಳಂಬ ಗಂಭೀರವಾದ ವಿಷಯ. ಇದರಿಂದ, ದಿಢೀರನೆ ಎದು
ರಾಗುವ ಸಮಸ್ಯೆಯನ್ನು ಎದುರಿಸಲಾಗದೆ ಕಂಗಾಲಾಗಬೇಕಾಗುತ್ತದೆ. ಕೋವಿಡ್ ಸಮಯದಲ್ಲಿ ವಲಸೆ ಕಾರ್ಮಿಕರ ವಿಷಯದಲ್ಲಿ ಆಗಿದ್ದು ಇದೇ. ಸೂಕ್ತ ವ್ಯವಸ್ಥೆಯಿಲ್ಲದೆ ಸುಡುಬಿಸಿಲಿನಲ್ಲಿ ಜನ ಮಕ್ಕಳುಮರಿ
ಗಳನ್ನು ಹೊತ್ತು ನಡೆಯಬೇಕಾಯಿತು. ಸರ್ಕಾರದ ಬಳಿ ವಲಸಿಗರ ಬಗ್ಗೆ ಸೂಕ್ತ ಅಂಕಿಅಂಶಗಳು ಇಲ್ಲದಿದ್ದರಿಂದ, ಸೂಕ್ತ ವ್ಯವಸ್ಥೆ ಮಾಡುವುದಕ್ಕೆ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ವಲಸೆಯನ್ನು ತಡೆಯುವಲ್ಲಿ ಮನರೇಗಾ ಅಂತಹ ಕಾರ್ಯಕ್ರಮಗಳು ಎಷ್ಟು ಪರಿಣಾಮಕಾರಿಯಾಗಬಲ್ಲವು ಎಂದು ತಿಳಿಯುವುದಕ್ಕೂ ಇಂತಹ ಮಾಹಿತಿಗಳು ಬೇಕು.

ಜನಗಣತಿಯಷ್ಟೇ ಅಲ್ಲ, ಹಲವು ಸಮೀಕ್ಷೆಗಳನ್ನು ಸರ್ಕಾರ ಮುಂದೂಡುತ್ತಿದೆ. ಆಗಿರುವ ಕೆಲವು ಸಮೀಕ್ಷೆಗಳ ವರದಿಯನ್ನೂ ಪ್ರಕಟಿಸುತ್ತಿಲ್ಲ. ಇದರಿಂದ, ಇವನ್ನು ಅವಲಂಬಿಸಿದ ಇನ್ನಿತರ ಸೂಚ್ಯಂಕಗಳ ಲೆಕ್ಕಾಚಾರದಲ್ಲಿ ಎಡವಟ್ಟಾಗುತ್ತದೆ. ಉದಾಹರಣೆಗೆ, ಗ್ರಾಹಕರ ವೆಚ್ಚ ಸೂಚ್ಯಂಕವನ್ನು ಸರ್ಕಾರ ತಡೆಹಿಡಿದಿದೆ. ಇದರಿಂದ ಗ್ರಾಹಕರು ಬಳಸುತ್ತಿರುವ ವಸ್ತುಗಳ ಬಗ್ಗೆ ಮಾಹಿತಿ ಸಿಗುವುದಿಲ್ಲ. ಹಾಗಾಗಿ ಗ್ರಾಹಕರ ಬೆಲೆ ಸೂಚ್ಯಂಕವನ್ನು ಪರಿಷ್ಕರಿಸಲಾಗುವುದಿಲ್ಲ. ಇದರಿಂದ ಹಣದುಬ್ಬರ ತಡೆಯಲು ಸರ್ಕಾರ ಕೈಗೊಳ್ಳುವ ಕ್ರಮದಲ್ಲಿ ಏರುಪೇರಾಗಬಹುದು. ಪ್ರಕಟವಾಗುತ್ತಿರುವ ಅಂಕಿಅಂಶಗಳ ಗುಣಮಟ್ಟದ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ. ಒಂದು ಕಾಲದಲ್ಲಿ ಅತ್ಯಂತ ಮೆಚ್ಚುಗೆಯಿಂದ ನೋಡುತ್ತಿದ್ದ ನಮ್ಮ ಸಾಂಖ್ಯಿಕ ವ್ಯವಸ್ಥೆಯನ್ನು ಇಂದು ಅನುಮಾನದಿಂದ ನೋಡುವ ಸ್ಥಿತಿ ಬಂದಿದೆ. ಜಾಗತಿಕ ಸಂಸ್ಥೆಗಳ ಅಂಕಿಅಂಶಗಳನ್ನು ಸರ್ಕಾರ ಅಲ್ಲಗಳೆಯುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್‍ನಿಂದ ಐದು ಲಕ್ಷ ಜನ ಸತ್ತಿದ್ದಾರೆ ಅಂದಾಗ ಸರ್ಕಾರ ಅದನ್ನು ನಿರಾಕರಿಸಿತು.

ಉನ್ನತ ಗುಣಮಟ್ಟದ ದತ್ತಾಂಶ ಸಂಗ್ರಹಕ್ಕೆ ಪರ್ಯಾಯವೇ ಇಲ್ಲ. ನಿಖರವಾದ ಅಂಕಿಅಂಶಗಳು ಹೇಳುವ ಸತ್ಯ ಸರ್ಕಾರಕ್ಕೆ ಪಥ್ಯವಾಗದೇ ಇರಬಹುದು. ಆದರೆ ಅಂಕಿಅಂಶಗಳನ್ನು ನಿರ್ಲಕ್ಷಿಸುವುದರಿಂದ ನೀತಿ ರೂಪಿಸುವವರು ಕತ್ತಲಲ್ಲಿ ತಡಕಾಡಬೇಕಾಗುತ್ತದೆ. ದೇಶದ ಸಾಂಖ್ಯಿಕ ವ್ಯವಸ್ಥೆಯನ್ನು ಮತ್ತೆ ಬಲಪಡಿಸಬೇಕು. ವಿಶ್ವಾಸಾರ್ಹತೆಯನ್ನು ಮತ್ತೆ ತಂದುಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.