ADVERTISEMENT

ಗತಿಬಿಂಬ: ಎಂದೆಂದೂ ಮುಗಿಯದ ಕತೆ

ಬಸನಗೌಡ ಪಾಟೀಲ ಯತ್ನಾಳ, ಈಶ್ವರಪ್ಪ ಧ್ವನಿಯ ಹಿಂದೆ...?

ವೈ.ಗ.ಜಗದೀಶ್‌
Published 15 ಏಪ್ರಿಲ್ 2021, 19:30 IST
Last Updated 15 ಏಪ್ರಿಲ್ 2021, 19:30 IST
ಬಸನಗೌಡ ಪಾಟೀಲ ಯತ್ನಾಳ, ಈಶ್ವರಪ್ಪ ಧ್ವನಿಯ ಹಿಂದೆ...?
ಬಸನಗೌಡ ಪಾಟೀಲ ಯತ್ನಾಳ, ಈಶ್ವರಪ್ಪ ಧ್ವನಿಯ ಹಿಂದೆ...?   

ರಾಜ್ಯದಲ್ಲಿ ಅಡ್ಡಮಾರ್ಗದಿಂದ ಅಧಿಕಾರ ಹಿಡಿದ ಬಿಜೆಪಿಯಲ್ಲೀಗ ಭಿನ್ನಮತದ ಹೊಗೆ ಎದ್ದಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಹಿರಿಯ ಸಚಿವ ಕೆ.ಎಸ್‌.ಈಶ್ವರಪ್ಪ ರಾಜ್ಯಪಾಲರಿಗೆ ದೂರಿತ್ತಿದ್ದಾರೆ. ಮುಖ್ಯಮಂತ್ರಿ ಮತ್ತು ಅವರ ಮಗ ಬಿ.ವೈ.ವಿಜಯೇಂದ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಬಸನಗೌಡ ಪಾಟೀಲ ಯತ್ನಾಳ ಮುಲಾಜಿಲ್ಲದೇ ಹೇಳಿಕೊಂಡು ತಿರುಗುತ್ತಿದ್ದಾರೆ. ದಶಕದ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎದ್ದಿದ್ದ ಅಪಸ್ವರಗಳು ಮತ್ತೆ ಕೇಳಲಾರಂಭಿಸಿವೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಇದು ಸಾಮಾನ್ಯ ಎಂಬಷ್ಟರ ಮಟ್ಟಿಗೆ ವ್ಯಾಜ್ಯ ರಾಜಕಾರಣ ಕಾಣಿಸ ತೊಡಗಿದೆ. ಇದು ಬಿಜೆಪಿಯ ಜಾಯಮಾನವೇ ಅಥವಾ ಚಾರಿತ್ರ್ಯವೇ ಎಂಬ ಸಂಶಯವೂ ಮೊಳೆಯುತ್ತಿದೆ.

1989ರಿಂದ 1994ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌ನಲ್ಲಿ ಮೇಲಾಟದಿಂದಾಗಿ ಮೂವರು ಮುಖ್ಯಮಂತ್ರಿಗಳು ಆಗಿಹೋಗಿದ್ದರು. ಎಸ್‌.ಎಂ.ಕೃಷ್ಣ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದ ಅವಧಿಯಲ್ಲಿ ನಾಯಕತ್ವದ ಬಗ್ಗೆ ಬಹಿರಂಗ ಬಂಡಾಯ ಕಾಣಿಸಿಕೊಂಡಿದ್ದೇ ಇಲ್ಲ. ಸಂಪುಟ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ನಿರ್ಣಯ ಕೈಗೊಳ್ಳುವ ಜಾಣ್ಮೆ, ಕುಟುಂಬ ಸದಸ್ಯರ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲದಂತೆ ನೋಡಿಕೊಳ್ಳುವ ಚಾಣಾಕ್ಷತನಗಳೇ ಇವರ ಯಶಸ್ಸಿಗೆ ಕಾರಣವಾದವು. ಸಣ್ಣಪುಟ್ಟ ಅಸಮಾಧಾನ ಇದ್ದರೂ ಅದನ್ನು ಸಚಿವ ಸಂಪುಟ ಸಭೆಯಲ್ಲೋ ಮುಖ್ಯಮಂತ್ರಿ ಖಾಸಗಿ ಕೊಠಡಿಯಲ್ಲೋ ಕುಳಿತು ಬಗೆಹರಿಸಿಕೊಳ್ಳುವ ಔದಾರ್ಯವನ್ನು ತೋರಿಸಿದ್ದುಂಟು.

ADVERTISEMENT

ಪ್ರಜಾಸತ್ತೆಯ ಋಜುಮಾರ್ಗವಾದ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರ ಹಿಡಿದ ಕಾರಣಕ್ಕೆ ಕೃಷ್ಣ ಹಾಗೂ ಸಿದ್ದರಾಮಯ್ಯ ತಮ್ಮ ನಡೆಯಲ್ಲಿ ಜನತಂತ್ರದ ಆಶಯಗಳನ್ನು ಬಿಂಬಿಸಿಕೊಂಡಿದ್ದಿರಬಹುದು. ಆದರೆ, ಬಿಜೆಪಿಗೆ ಆ ದರ್ದಿಲ್ಲ; ಕರ್ನಾಟಕದಲ್ಲಿ ಬಿಜೆಪಿ ಎರಡು ಅವಧಿ ಅಧಿಕಾರ ಹಿಡಿದಿದ್ದು, ಉಳಿಸಿಕೊಂಡಿದ್ದು ‘ಆಪರೇಷನ್ ಕಮಲ’ದ ಮೂಲಕವೇ. 2008ರಲ್ಲಿ ಪಕ್ಷೇತರರಾಗಿ ಗೆದ್ದವರನ್ನು ಸೆಳೆದು ಅಧಿಕಾರ ಹಿಡಿದ ಯಡಿಯೂರಪ್ಪ, ಆಪರೇಷನ್ ಕಮಲವೆಂಬ ಹೀನ ಪದ್ಧತಿಯನ್ನು ದೇಶದಲ್ಲಿ ಹುಟ್ಟುಹಾಕಿದರು. ವಿವಿಧ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಬಿಜೆಪಿಯ ಈಗಿನ ರಾಷ್ಟ್ರ ನಾಯಕರು ಅದನ್ನೇ ಮಾದರಿಯಾಗಿ ಬಳಸಿ ಕೊಂಡಿದ್ದು ಈಗ ‘ಇತಿಹಾಸ’.

2018ರ ಚುನಾವಣೆಯಲ್ಲಿ ಬಿಜೆಪಿಗೆ ಸರಳ ಬಹುಮತ ಬರಲಿಲ್ಲ. ‘ಛಲ’ ಬಿಡದ ಯಡಿಯೂರಪ್ಪ ಮತ್ತೆ ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ‘ಆಪರೇಷನ್’ ಮಾಡಿ ಗದ್ದುಗೆ ಏರಿದರು. ಇದು ಜನಾದೇಶದಿಂದ ಪಡೆದ ಅಧಿಕಾರವಲ್ಲ. ಆಸ್ತಿಯೊಂದನ್ನು ಸಂಪಾದಿಸುವ ರೀತಿಯಲ್ಲಿ ಶಾಸಕರನ್ನು ಖರೀದಿಸಿ, ಅಧಿಕಾರ
ದಕ್ಕಿಸಿಕೊಂಡಿದ್ದು. ತಾನು ಸಂಪಾದಿಸಿದ ಆಸ್ತಿ ತಮ್ಮ ಮಕ್ಕಳು, ಮೊಮ್ಮಕ್ಕಳ ಪಾರುಪತ್ಯದಲ್ಲೇ ಇರಬೇಕೆಂಬ ವಂಶಪಾರಂಪರ್ಯ ಮನೋಧೋರಣೆಯು ಅಧಿಕಾರ ದಕ್ಕಿಸಿಕೊಂಡ ಯಡಿಯೂರಪ್ಪ ಅವರಿಗೆ ಇದ್ದೀತು. ಇದೇ ಕಾರಣಕ್ಕೆ ರಾಜ್ಯ ಸರ್ಕಾರವೀಗ ಉರಿವ ಕೆಂಡದ ಮೇಲೆ ನಿಂತಂತಿದೆ.

ಈಗಿನ ಅಸಹನೆಗಳು ದಶಕದ ಹಿಂದಿನ ಘಟನಾವಳಿಗಳನ್ನು ಕಣ್ಮುಂದೆ ತರುತ್ತವೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಅಧಿಕಾರ ನಿಯಂತ್ರಿಸುವ
ವ್ಯಕ್ತಿಗಳಷ್ಟೇ ಬದಲಾಗಿದ್ದಾರೆ. ಅಂದು ಶೋಭಾ ಕರಂದ್ಲಾಜೆ ಇದ್ದ ಜಾಗದಲ್ಲಿ ಇಂದು ವಿಜಯೇಂದ್ರ ಇದ್ದಾರೆ. ಎಲ್ಲವನ್ನೂ ತಮ್ಮ ಬೆರಳ ತುದಿಯಲ್ಲಿ ಕುಣಿಸುವುದನ್ನು ಕರಗತ ಮಾಡಿಕೊಂಡಿರುವ ವಿಜಯೇಂದ್ರ, ಎಲ್ಲರ ಕಣ್ಣನ್ನು ಕುಕ್ಕುವ ಮಟ್ಟಕ್ಕೆ ಬೆಳೆದಿದ್ದಾರೆ; ಬೆಳೆಯುತ್ತಿದ್ದಾರೆ.

‘2008ರಲ್ಲಿ ಅಧಿಕಾರ ದಕ್ಕಿಸಿಕೊಂಡಿದ್ದ ಯಡಿಯೂರಪ್ಪ, ತಾವು ಹೇಳಿದಂತೆಯೇ ಎಲ್ಲವೂ ನಡೆಯಬೇಕೆಂಬ ಧೋರಣೆ ಹೊಂದಿದ್ದರು. ಅದು ಎಷ್ಟರ ಮಟ್ಟಿಗೆ ಎಂದರೆ, ಸಚಿವ ಸಂಪುಟ ಸಭಾಂಗಣದಲ್ಲಿ ಮುಖ್ಯಮಂತ್ರಿ ಮಧ್ಯೆ ಕುಳಿತರೆ ಸುತ್ತ ಸಚಿವರು ಕುಳಿತು ಕೊಳ್ಳುವುದು ವಾಡಿಕೆ. ಮುಖ್ಯಮಂತ್ರಿ ಕುರ್ಚಿ ಎದುರು ಶೋಭಾ ಅವರಿಗೆ ಕುರ್ಚಿ ಇರುತ್ತಿತ್ತು. ಶೋಭಾಹಾಜರಾಗುವವರೆಗೆ ಸಚಿವ ಸಂಪುಟ ಸಭೆ ಆರಂಭವಾಗು ತ್ತಿರಲಿಲ್ಲ. ಸಭೆ ಆರಂಭವಾಗಿ ಕಾರ್ಯಸೂಚಿಯ ವಿಷಯ ಮಂಡನೆಯಾದಾಗ ಯಡಿಯೂರಪ್ಪ ಅವರು ಶೋಭಾ ಕಡೆ ನೋಡಿ, ಅವರು ತಲೆ ಅಲ್ಲಾಡಿಸಿದರೆ ವಿಷಯಕ್ಕೆ ಅನುಮೋದನೆ ದೊರಕಿದಂತೆ. ಅನೇಕ ವೇಳೆ ಚರ್ಚೆಯೇ ಇಲ್ಲದೆ ‘ಕಣ್ಸನ್ನೆ’ಯಲ್ಲೇ ಸಂಪುಟ ಸಭೆ ಮುಗಿದು ಹೋಗಿದ್ದುಂಟು’ ಎಂದು ಅಂದು ಸಚಿವರಾಗಿದ್ದವರು ಹೇಳುತ್ತಿದ್ದುದು ಉಂಟು.

2009ರಲ್ಲಿ ಬಂಡಾಯದ ಬಾವುಟ ಹಾರಿದಾಗ ಯಡಿಯೂರಪ್ಪನವರ ಮೇಲೆ ಯಾರಿಗೂ ಸಿಟ್ಟಿರಲಿಲ್ಲ; ಇದ್ದದ್ದೆಲ್ಲ ಶೋಭಾ ಕರಂದ್ಲಾಜೆ ಮತ್ತು ಅಂದು ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿ.ಪಿ. ಬಳಿಗಾರ್‌ ಮೇಲೆ. ಅದು ಎಲ್ಲಿಗೆ ಹೋಗಿ ನಿಂತಿತೆಂದರೆ, ಶೋಭಾ ಸಚಿವ ಸ್ಥಾನ ತ್ಯಜಿಸಬೇಕಾಯಿತು. ಬಳಿಗಾರ್‌ ಆ ಹುದ್ದೆಯಿಂದ ವರ್ಗ ಆಗಬೇಕಾಯಿತು.

ಈಗಲೂ ವಿಜಯೇಂದ್ರ ದರ್ಬಾರಿನ ವಿರುದ್ಧವೇ ಎಲ್ಲರ ಸಿಡಿಮಿಡಿ. ಯಾವುದಕ್ಕೂ ಅಂಜದೆ,
ಪಕ್ಷನಿಷ್ಠೆಯಲ್ಲಿ ಪ್ರಶ್ನಾತೀತರಾದ ಕೆ.ಎಸ್.ಈಶ್ವರಪ್ಪ ಈಗ ಧ್ವನಿ ಎತ್ತಿರುವುದು ಕೂಡ ಇದೇ ಮಾದರಿಯಲ್ಲಿ ಇದ್ದಂತಿದೆ. ಕಟ್ಟಾ ಹಿಂದುತ್ವವಾದಿಯಾಗಿರುವ ಹಾಗೂ ಬಿಜೆಪಿಯ ಒಳದನಿಯಂತೆ ಮಾತನಾಡುತ್ತಿರುವ ಯತ್ನಾಳ ಕೂಡ ನೇರವಾಗಿ ಹಾಯುತ್ತಿರುವುದು ವಿಜಯೇಂದ್ರ ವಿರುದ್ಧವೇ. ‘ನಾವೆಲ್ಲ ಪಕ್ಷ ಕಟ್ಟುವಾಗ ವಿಜಯೇಂದ್ರಗೆ ಚೆಡ್ಡಿ ಹಾಕಿಕೊಳ್ಳಲು ಬರುತ್ತಿರಲಿಲ್ಲ. ಈಗ ಅವರೆದುರು ನಿಂತು ಸರ್ ಎನ್ನಬೇಕೇ’ ಎಂದು ಯತ್ನಾಳ ಪ್ರಶ್ನಿಸಿರುವುದು ಇದಕ್ಕೆ ಸಾಕ್ಷಿ.

ಶೋಭಾ ಅಂದು ಎಲ್ಲ ನಿರ್ಧಾರದ ಸೂತ್ರ ಹಿಡಿದಿದ್ದರೆ ಇಂದು ವಿಜಯೇಂದ್ರ, ಮುಖ್ಯಮಂತ್ರಿಯ ಕುರ್ಚಿಯನ್ನೇ ತಮ್ಮ ಅಂಗೈಯಲ್ಲಿ ಆಡಿಸುತ್ತಿದ್ದಾರೆ ಎಂದು ಸಚಿವರೇ ಹೇಳುವುದುಂಟು. ಬಹಿರಂಗವಾಗಿ ಮಾತನಾಡಿದರೆ ತಮ್ಮ ಕೆಲಸಕ್ಕೆ ಕಲ್ಲು ಬೀಳುತ್ತದೆಯೋ ಎಂದು ಹೆದರಿ ಸುಮ್ಮನೆ ಕುಳಿತಿದ್ದಾರೆ. ಹೀಗಾಗಿಯೇ ಸಿ.ಟಿ.ರವಿಯಂತಹವರು ‘ಯಡಿಯೂರಪ್ಪ ಮಾಲೀಕರಲ್ಲ; ನಾಯಕ’ ಎಂದು ರೂಪಕದಲ್ಲಿ ಮಾತನಾಡುತ್ತಿದ್ದಾರೆ.

ದಶಕದ ಹಿಂದೆ ಬಿಜೆಪಿಯಲ್ಲಿ ಬಂಡಾಯ ಮೊಳಗಿದಾಗ ಪಕ್ಷದ ವರಿಷ್ಠರು ಇಷ್ಟು ಬಲಿಷ್ಠರಾಗಿರ
ಲಿಲ್ಲ. ಇಂದು ಅಮಿತ್ ಶಾ ಮುಂದೆ ನಿಂತು ಮಾತನಾಡುವುದಕ್ಕೆ ಮುಖ್ಯಮಂತ್ರಿಗಳೇ ಹೆದರುವ ಪರಿಸ್ಥಿತಿ ಇದೆ.ಅಷ್ಟರಮಟ್ಟಿಗೆ ಬಿಜೆಪಿ ಪ್ರಬಲವಾಗಿದೆ. ಇಂತಹ ಹೊತ್ತಿನಲ್ಲಿಯೂ ಭಿನ್ನಮತದ ಬೇಗೆ ಆ ಪಕ್ಷವನ್ನು ಸುಡಲಾರಂಭಿಸಿದೆ ಎಂದರೆ ಅದಕ್ಕೆ ವರಿಷ್ಠರ ಕುಮ್ಮಕ್ಕು ಇದೆ ಎಂದೇ ಭಾವಿಸಬೇಕಾಗುತ್ತದೆ.

ಆಡಳಿತ ಪಕ್ಷದ ನಾಯಕನ ಮೇಲೆ ವಿಶ್ವಾಸ ಇಲ್ಲವೆಂದಾಗ, ಆಡಳಿತ ಸೂತ್ರ ಮತ್ಯಾರದೋ ಹಿಡಿತ ದಲ್ಲಿದೆ ಎಂದಾಗ ಅಭಿವೃದ್ಧಿ ಎಂಬುದು ಕನಸಿನ ಮಾತಾ ಗುತ್ತದೆ. ಪ್ರಗತಿಪಥದಲ್ಲಿ ಸಾಗುತ್ತಿದ್ದ ರಾಜ್ಯ ಕೆಲವೇ ವರ್ಷ ಗಳಲ್ಲಿ ಹಿಮ್ಮುಖ ಚಲನೆಯತ್ತ ಹೊರಳಲಿದೆ ಎಂಬುದನ್ನು ಇತ್ತೀಚಿನ ಅಂಕಿ ಅಂಶಗಳೇ ಸಾಬೀತುಪಡಿಸುತ್ತವೆ. ಉದ್ಯೋಗ ಸೃಷ್ಟಿಯ ಸಾಧ್ಯತೆಯೇ ಕಡಿಮೆಯಾಗಿದ್ದು, ಕೃಷಿ ಕೂಡ ತೀವ್ರ ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ಅಭಿವೃದ್ಧಿಗೆ ಪಾರ್ಶ್ವವಾಯು ಬಡಿದಿದೆ.

ಒಂದು ವರ್ಷ ಕಾಡಿದ ಕೋವಿಡ್‌ನಿಂದಾಗಿ ಜನ ಕಂಗೆಟ್ಟು ಕುಳಿತಿದ್ದರು. ಯಥಾಸ್ಥಿತಿಗೆ ಜನಜೀವನ ಮರಳು ತ್ತಿದೆ ಎಂದು ನಿಟ್ಟುಸಿರು ಬಿಡುವ ಹೊತ್ತಿಗೆ ಎರಡನೇ ಅಲೆ ಅಟಕಾಯಿಸಿಕೊಂಡಿದೆ. ಇದೇನು ಅನಿರೀಕ್ಷಿತವಲ್ಲ. ಎರಡನೇ ಅಲೆ ಬಗ್ಗೆ ತಜ್ಞರು ಮುನ್ನೆಚ್ಚರಿಕೆ ನೀಡಿದ್ದರೂ ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಕೋವಿಡ್‌ ಪೀಡಿತರ ಸಂಖ್ಯೆ ಏಕಾಏಕಿ ಏರತೊಡಗಿದಾಗ ಸರ್ಕಾರ ಎಚ್ಚರಗೊಂಡಂತೆ ಆಡುತ್ತಿದೆ. ಯಾರದೋ ‘ಮರ್ಜಿ’ಗೆ ಬಿದ್ದು, ಆಯಕಟ್ಟಿನ ಹುದ್ದೆಯಲ್ಲಿದ್ದವರ ವರ್ಗಾವಣೆಗಳಿಂದಾಗಿ ಆಡಳಿತ ಅಂಕೆ ತಪ್ಪಿದಂತಿದೆ. ಸರ್ಕಾರದ ಗೊಂದಲ, ಕುಟುಂಬ ರಾಜಕಾರಣದ ಪರಿಣಾಮ ಜನರ ಮೇಲೆ ಆಗುತ್ತಿದೆ.

ವಿಧಾನಸಭೆ ಚುನಾವಣೆ ವೇಳೆ ಕರ್ನಾಟಕದಲ್ಲಿ 10 ಪರ್ಸೆಂಟ್ ಸರ್ಕಾರ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದರು. ‘ಈಗಿನದು 20 ಪರ್ಸೆಂಟ್ ಸರ್ಕಾರ’ ಎಂದು ಸಿದ್ದರಾಮಯ್ಯ ಹಂಗಿಸುತ್ತಿದ್ದಾರೆ. ತಮ್ಮ ಪಕ್ಷದ ನೇತೃತ್ವದ ಸರ್ಕಾರದ ಬಗ್ಗೆ ಬಂದಿರುವ ಟೀಕೆಗೆ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಿ, ಜನರಿಗೆ ಉತ್ತರ ದಾಯಿಯಾಗುವ ಹೊಣೆಯನ್ನು ಪ್ರಧಾನಿ ಮೋದಿ ಹೊರಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.