ADVERTISEMENT

ಗತಿಬಿಂಬ – ಭ್ರಷ್ಟಾಚಾರ ಮುಗಿಲು: ಜನ ದಿಗಿಲು

ಭೋಗದ ಬೆನ್ನು ಬಿದ್ದವರು ಬೋಗಿಯನ್ನೇ ಮಾರಲು ಅಣಿಯಾದರು

ವೈ.ಗ.ಜಗದೀಶ್‌
Published 15 ಜುಲೈ 2021, 20:01 IST
Last Updated 15 ಜುಲೈ 2021, 20:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಭ್ರಷ್ಟಾಚಾರಮುಕ್ತ, ಪಾರದರ್ಶಕ ಆಡಳಿತ ನೀಡುವ ಜತೆಗೆ ಅಭಿವೃದ್ಧಿಯ ಚಹರೆಯಲ್ಲಿ ದೇಶಕ್ಕೆ ಮಾದರಿಯಾಗುವ‌ ನವಕರ್ನಾಟಕ ನಿರ್ಮಾಣವೇ ನಮ್ಮ ಗುರಿ’ ಎಂದು ಕೂಗಿ ಹೇಳುತ್ತಿದ್ದ ಬಿಜೆಪಿ ‘ಮುಕುಟಮಣಿ’ಗಳು ರಾಜ್ಯದಲ್ಲಿ ಅಧಿಕಾರ ಹಿಡಿದು ಎರಡು ವರ್ಷ ಸಮೀಪಿಸುತ್ತಿದೆ. ‘ಡಬ್ಬಲ್ ಎಂಜಿನ್‌ ಸರ್ಕಾರ’ದ ಆಮಿಷ ಕರಗಿ ಹೋಗಿದೆ. ಎಂಜಿನ್‌ನಿಂದ ಬೋಗಿಗಳನ್ನು ಕಳಚಿ ಬಿಸಾಕಲಾಗಿದೆ. ಭೋಗದ ಬೆನ್ನು ಬಿದ್ದವರು ಬೋಗಿಯನ್ನೇ ಮಾರುವ ಸ್ಥಿತಿಗೆ ತಲುಪಿದ್ದು, ಇದೇ ರೀತಿ ಮುಂದುವರಿದರೆ ಹಳಿ ಮಾತ್ರವಲ್ಲ; ಹಳಿಯಡಿಯ ಜಲ್ಲಿಕಲ್ಲುಗಳೂ ಉಳಿಯಲಿಕ್ಕಿಲ್ಲ ಎಂಬ ಟೀಕೆಗಳು ಪರಿವಾರದ ‘ಗರ್ಭಗುಡಿ’ಯಿಂದಲೇ ಠೇಂಕರಿಸತೊಡಗಿವೆ.

ನಿಷ್ಕ್ರಿಯತೆ, ಅದಕ್ಷತೆಯ ಕಾರಣ ಕೊಟ್ಟು ಎರಡೇ ವರ್ಷಗಳಲ್ಲಿ ತಮ್ಮ ಸಂಪುಟ ಸದಸ್ಯರನ್ನು ಬದಲಿಸಿರುವ ಪ್ರಧಾನಿ ನರೇಂದ್ರ ಮೋದಿ, ಹೊಸ ಮುಖಗಳಿಗೆ ಅವಕಾಶ ಕೊಟ್ಟಿದ್ದಾರೆ. ಅವರದೇ ಮೂಗಳತೆಯಲ್ಲಿ ನಡೆಯುತ್ತಿರುವ ಕರ್ನಾಟಕ ಸರ್ಕಾರ ಮಾತ್ರ ತನ್ನೆಲ್ಲ ಕ್ರಿಯಾಶೀಲತೆ, ಹೊಸತನ, ಇಚ್ಛಾಶಕ್ತಿಯನ್ನು ಕಳೆದುಕೊಂಡು ಬಸವನಹುಳುವಿನಂತೆ ವರಕುತ್ತಿದೆ. ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸಚಿವ ಗಡಣದಲ್ಲಿ ಬಹುತೇಕರು ಆಡಳಿತಾತ್ಮಕವಾಗಿ ನಿಷ್ಕ್ರಿಯರು. ಅನೇಕರು ವಿಧಾನಸೌಧ–ವಿಕಾಸಸೌಧಗಳ ತಮ್ಮ ಕೊಠಡಿಯಲ್ಲೇ ಕಾಣಿಸಿಕೊಳ್ಳುತ್ತಿಲ್ಲ. ಅಭಿವೃದ್ಧಿಯ ವಿಷಯದಲ್ಲಿ ಬಹುತೇಕರ ಧೋರಣೆ ನಕಾರ. ಮೂರು ತಲೆಮಾರಿಗೆ ಆಗುವಷ್ಟು ಸಂಪಾದನೆಯಲ್ಲಿ ಸರ್ವಕಲೆಯನ್ನೂ ಸಾಕಾರಗೊಳಿಸಿ ಭಾಗಾಕಾರ–ಗುಣಾಕಾರದ ಲೆಕ್ಕದಲ್ಲಿ ಸಕ್ರಿಯರು.

ಬೊಟ್ಟು ಮಾಡಿ ತೋರುವಷ್ಟು ಭ್ರಷ್ಟಾಚಾರ ಪ್ರಕರಣಗಳು ಹೊರಬರದೇ ಇರಲು ಎರಡು ಪ್ರಮುಖ ಕಾರಣಗಳಿವೆ. ಭ್ರಷ್ಟರ ಹಲ್ಲು ಕಿತ್ತು, ಹೆಡೆಮುರಿ ಕಟ್ಟುತ್ತಿದ್ದ ಲೋಕಾಯುಕ್ತದ ಬೆನ್ನುಮೂಳೆ ಮುರಿದು, ಹಲ್ಲು ಕಿತ್ತ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಭ್ರಷ್ಟರ ವಿರುದ್ಧದ ದೊಡ್ಡ ಅಸ್ತ್ರವೊಂದನ್ನು ಚಾಮುಂಡಿ ತಪ್ಪಲಿಗೆ ಎಸೆದುಬಿಟ್ಟಿತು. ತಮ್ಮ ಮಾನಹಾನಿ ಮಾಡುವ ಸುದ್ದಿ ಪ್ರಕಟಿಸಬಾರದು ಎಂದು ತಡೆಯಾಜ್ಞೆ ಕೋರಿ ಕೋರ್ಟ್‌ಗೆ ಹೋದ ಸಚಿವರು, ಅಧಿಕಾರಿಗಳಿಗೆ ‘ರಕ್ಷಣಾ ಕವಚ’ ದೊರಕಿತು. ಹೀಗಾಗಿ, ಭ್ರಷ್ಟಾಚಾರದ ಪ್ರಕರಣಗಳು ಬಾಯಿಚಪಲದ ಚರ್ಚೆಗೆ ಸೀಮಿತವಾಗಿವೆ. ಯಾರ ವಿರುದ್ಧವೂ ಬರೆಯದಂತೆ ಮಾಧ್ಯಮಗಳನ್ನು ಕೈ–ಬಾಯಿ ಕಟ್ಟಿ ಕೂರಿಸಿದ ವಿಷಮ ಸನ್ನಿವೇಶ ಸೃಷ್ಟಿಯಾಗಿದೆ.

ADVERTISEMENT

ದಶಕದ ಹಿಂದೆ ರಾಜ್ಯದಲ್ಲಿ ಬಿಜೆಪಿಯು ಆಡಳಿತದ ಚುಕ್ಕಾಣಿ ಹಿಡಿದಿದ್ದಾಗ ಅಕ್ರಮ ಗಣಿಗಾರಿಕೆಯ ವಿಷವರ್ತುಲ ರಾಜ್ಯವನ್ನು ಹುರಿದು ಮುಕ್ಕಿತ್ತು. ಅದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನೂ ಬಿಜೆಪಿ ತೆತ್ತಿತು. ಈಗ ರಿಯಲ್ ಎಸ್ಟೇಟ್, ಔದ್ಯಮಿಕ ಭ್ರಷ್ಟತೆ ಹಾಗೂ ಕಾಮಗಾರಿ ಗುತ್ತಿಗೆಯ ಅಕ್ರಮವೇ ಸರ್ಕಾರಕ್ಕೆ ಮಸಿ ಮೆತ್ತುತ್ತಿದೆ. ಎಲ್ಲವೂ ಚೆಂದವಾಗಿ ನಡೆಯುತ್ತಿದ್ದಾಗ, ಜನರು ನಿರುಮ್ಮಳರಾಗಿ ದುಡಿದು ತಿನ್ನುವ ಪರಿಸ್ಥಿತಿ ಇದ್ದಾಗ ಮಾಧ್ಯಮದವರು ಭ್ರಷ್ಟಾಚಾರದ ಪ್ರಕರಣಗಳ ಬೆನ್ನು ಹತ್ತುತ್ತಿದ್ದರು. ಕೋವಿಡ್ ಸಂಕಟ ಹಾಗೂ ಜನಸಮುದಾಯವೇ ಆತಂಕದ ದಿನಗಳನ್ನು ಎದುರು ನೋಡುತ್ತಿದ್ದ ಹೊತ್ತಿನೊಳಗೆ ಆಡಳಿತಗಾರರ ನಡಾವಳಿಯ ಮೇಲೆ ಕಣ್ಣಿಡಲು ಸಾಧ್ಯವಾಗದು. ಸರ್ಕಾರದ ಚುಕ್ಕಾಣಿ ಹಿಡಿದವರು ಇಂತಹ ಕಷ್ಟಕಾಲವನ್ನು ಜನೋಪಯೋಗಿ ಕೆಲಸಕ್ಕೆ ಬಳಸಬೇಕಿತ್ತು. ಆದರೆ, ದುಡ್ಡಿನ ಕೊಪ್ಪರಿಗೆ ತುಂಬಿಸುವ ‘ಕಾಸಿನ ಕಾಯಕ’ದಲ್ಲಿ ತಲ್ಲೀನರಾದರು.

ಈ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಜತೆಗೆ, ಖಾಸಗಿ ಭೂಮಿಯ ಮಧ್ಯೆ ಇರುವ ಸರ್ಕಾರಿ ಖರಾಬು ಭೂಮಿಯನ್ನು ಮಾರ್ಗಸೂಚಿ ದರಕ್ಕೆ ಭೂಮಾಲೀಕರಿಗೆ ಬಿಟ್ಟುಕೊಡುವ ನಿರ್ಣಯ ತೆಗೆದುಕೊಳ್ಳಲಾಯಿತು. ಬೆಂಗಳೂರು ಒಂದರಲ್ಲೇ ಭೂಸುಧಾರಣೆ ವ್ಯಾಜ್ಯಕ್ಕೆ (ಕೃಷಿಕರಲ್ಲದವರು ಹಾಗೂ ಹೆಚ್ಚಿನ ಆದಾಯ ಇರುವವರು ಭೂಮಿ ಖರೀದಿಸಿದ ಪ್ರಕರಣ) ಒಳಪಟ್ಟ 25 ಸಾವಿರ ಎಕರೆಗೂ ಹೆಚ್ಚು ಭೂಮಿ ಈಗ ಶ್ರೀಮಂತರು, ಕಾರ್ಪೊರೇಟ್ ಉದ್ಯಮಿಗಳ ಪಾಲಾಗುತ್ತಿದೆ. ಇದನ್ನು ವಶಕ್ಕೆ ಪಡೆದು ಹರಾಜು ಹಾಕಿದ್ದರೆ ಬೊಕ್ಕಸಕ್ಕೆ ಕನಿಷ್ಠ ₹ 25 ಸಾವಿರ ಕೋಟಿ ಬರುತ್ತಿತ್ತು. ಖಾಸಗಿ ಭೂಮಿ ಮಧ್ಯೆ ಇದ್ದ ಸರ್ಕಾರ ಭೂಮಿ ಬಿಟ್ಟುಕೊಡುವ ನಿರ್ಣಯದ ಹಿಂದೆಯೂ ರಿಯಲ್ ಎಸ್ಟೇಟ್‌ ವ್ಯವಹಾರದ ಕಮಟು ವಾಸನೆ ಬಡಿಯುತ್ತಿದೆ. ಭೂಮಿಯಡಿ ಎಷ್ಟು ಪ್ರಮಾಣದ ಅಮೂಲ್ಯ ಅದಿರು ಇದೆ ಎಂದು ಅಂದಾಜನ್ನೂ ಮಾಡದೆ ಜಿಂದಾಲ್‌ ಕಂಪನಿಗೆ 3,667 ಎಕರೆಯನ್ನು ಬಿಟ್ಟುಕೊಡುವ ನಿರ್ಧಾರವನ್ನೂ ಮಾಡಲಾಯಿತು.

ಸಚಿವರ ಕರ್ಮಕಾಂಡ ಹೇಳಿ ಮುಗಿಸುವಂತಹದ್ದೇ ಅಲ್ಲ. ‘ಲ್ಯಾಬ್‌’ ಆರಂಭಿಸುವ ಪ್ರಸ್ತಾವ ಸರ್ಕಾರದ ಮುಂದೆ ಬಂದಿತ್ತು. ಗುತ್ತಿಗೆದಾರರನ್ನು ಖುದ್ದು ಕರೆಯಿಸಿದ ಪ್ರಭಾವಿಯೊಬ್ಬರು, ‘ಒಟ್ಟು ಬಂಡವಾಳದಲ್ಲಿ ಶೇಕಡ 40ರಷ್ಟು ಹೂಡಿಕೆ ಮಾಡುವೆ; ಶೇಕಡ 50ರಷ್ಟು ಪಾಲುದಾರಿಕೆ ಕೊಡಿ’ ಎಂದು ಷರತ್ತು ಒಡ್ಡಿದರು. ಇಲ್ಲಿ ಹೂಡಿಕೆ ಮಾಡಿದರೆ ಉದ್ಧಾರವಾಗುವುದು ಅಸಾಧ್ಯ ಎಂದರಿತ ಆ ಗುತ್ತಿಗೆದಾರ ಕಡಿಮೆ ‘ಪರ್ಸಂಟೇಜ್’ ನಡೆಯುತ್ತಿರುವ ಪಂಜಾಬ್‌, ಬಿಹಾರ, ಜಾರ್ಖಂಡ್ ಕಡೆ ಮುಖ ಮಾಡಿದರು. ಈ ಸರ್ಕಾರ ಅಸ್ತಿತ್ವಕ್ಕೆ ಬರಲು ನೆರವಾದ ಸಚಿವರೊಬ್ಬರ ಮುಂದೆ ₹ 5 ಕೋಟಿ ಮೊತ್ತದ ಯೋಜನೆಯ ಪ್ರಸ್ತಾಪ ಇತ್ತು. ಪರ್ಸಂಟೇಜ್ ವ್ಯವಹಾರ ಕೈಬಿಟ್ಟ ಅವರು ₹ 1.25 ಕೋಟಿ ಕೊಡಿ ಎಂದು ನೇರಾನೇರ ಕೇಳಿಬಿಟ್ಟದ್ದೂ ಉಂಟು.

ಹಿಂದೆಲ್ಲ ಬಹುತೇಕ ಸಚಿವರು ತಮ್ಮ ವ್ಯವಹಾರಕ್ಕೆ ಮಧ್ಯವರ್ತಿಗಳನ್ನು ಇಟ್ಟುಕೊಳ್ಳುತ್ತಿದ್ದುದು ರೂಢಿ. ಈಗಿನ ಗುತ್ತಿಗೆದಾರರಿಗೆ ನೇರವಾಗಿ ಕರೆ ಮಾಡುವ ಸಚಿವರು ಶೇ 10ರ‌ಷ್ಟು ಕಮಿಷನ್ ಕೇಳುವುದು ಮಾಮೂಲಿ ಎಂಬುದು ಗುತ್ತಿಗೆದಾರರ ಸಿಟ್ಟಿನ ನುಡಿ.

ಪಿ.ಎಂ ಕೇರ್ಸ್ ನಿಧಿಯಡಿ ಆಮ್ಲಜನಕ ತಯಾರಿಕಾ ಘಟಕಗಳ ಯೋಜನೆಯ ಪ್ರಸ್ತಾವ ಕೂಡ ಸಿದ್ಧವಾಗಿ, ಟೆಂಡರ್ ಕರೆಯಬೇಕಾಗಿತ್ತು. ಘಟಕ ಸ್ಥಾಪನೆಯಾಗಿದ್ದರೆ ಕೋವಿಡ್ ಸಾವಿನ ಸಂಖ್ಯೆ 36 ಸಾವಿರ ಮುಟ್ಟುತ್ತಿರಲಿಲ್ಲ. ಆದರೆ, ಪರ್ಸಂಟೇಜ್ ಕಾರಣಕ್ಕೆ ಯೋಜನೆ ಜಾರಿಯಾಗಲೇ ಇಲ್ಲ. ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಈ ಕಡತ ತರಿಸಿ, ವಿಚಾರಣೆ ನಡೆಸಿದರೆ ಆಮ್ಲಜನಕ ಸಿಗದೇ ಜೀವವನ್ನು ಬಲಿಕೊಟ್ಟವರ ಆತ್ಮಕ್ಕಾದರೂ ಶಾಂತಿ ಸಿಕ್ಕೀತು.

ಕೋವಿಡ್‌ನಿಂದ ಭೀಕರ ಸ್ಥಿತಿ ಇದ್ದಾಗ ರೆಮ್‌ಡಿಸಿವಿರ್ ಔಷಧಿಯ ಕೃತಕ ಕೊರತೆ ಸೃಷ್ಟಿಯಾಯಿತು. ಅದರ ಹಿಂದೆ ದೊಡ್ಡ ವ್ಯವಹಾರ ಜಾಲವೇ ಇತ್ತು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸಿಸಿಬಿಯನ್ನು ಹುರಿಗೊಳಿಸಿ ದಾಳಿ ನಡೆಸಿದ್ದರಿಂದಾಗಿ ಅಕ್ರಮ ಜಾಲ ತಣ್ಣಗಾಯಿತು. ಒಂದಿಷ್ಟು ಜನರ ಜೀವ ಉಳಿಯಿತು.

ಉದ್ಯಮದ ವ್ಯವಹಾರಕ್ಕೆ ರಾಜಕೀಯವನ್ನು ಬಳಸಿಕೊಂಡ, ರಾಜಕೀಯವನ್ನೇ ಉದ್ಯಮವಾಗಿ ಮಾಡಿಕೊಂಡ ಎರಡು ಬಗೆಯ ಜನ ಈ ಸರ್ಕಾರದಲ್ಲಿದ್ದಾರೆ. ಉದ್ಯಮದ ಕಾರಣಕ್ಕೆ ಸಚಿವಗಿರಿಯನ್ನು ಬಳಸಿಕೊಂಡವರು ಸುದ್ದಿವೀರರೂ ಆಗಿದ್ದು, ಈ ವಿಷಯದಲ್ಲಿ ಅವರ ನೈಪುಣ್ಯವೂ ಚೆನ್ನಾಗಿದೆ. ಹಾಗಾಗಿ, ಇವರ ಸದ್ದೇ ದೊಡ್ಡದಿದೆ. ಈ ನಾಜೂಕು ಗೊತ್ತಿಲ್ಲದೆ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರುವವರೂ ಇದ್ದಾರೆ. ಮಾಡಿದ ಕೆಲಸಕ್ಕೆ ಪ್ರಚಾರ ಪಡೆಯುವವರು ಕೆಲವರಿದ್ದಾರೆ. ಆದರೆ, ದುಡ್ಡನ್ನೇ ದೊಡ್ಡಪ್ಪ ಎಂದು ನಂಬಿ ಧನಜಪವನ್ನೇ ಮಾಡುವವರು ಕರ್ನಾಟಕಕ್ಕೆ ಮಾರಕ. ದುಡ್ಡು ಸಂಪಾದನೆಯನ್ನೇ ರಾಜಕೀಯವೆಂದು ನಂಬಿದವರು ಕೊನೆಯಲ್ಲಿ ಉಳಿಸಿಹೋಗುವುದೇನು ಎಂಬುದು ಅವರಿಗೆ ಕೂಡ ಗೊತ್ತಿರಲಿಕ್ಕಿಲ್ಲ. ಇದನ್ನು ಕಂಡಾಗಲೆಲ್ಲ ಬಸವಣ್ಣನವರ ವಚನವೊಂದು ನೆನಪಿಗೆ ಇಳಿಯುತ್ತದೆ.

‘ವ್ಯಾಧನೊಂದು ಮೊಲನ ತಂದರೆ ಸಲುವ ಹಾಗಕ್ಕೆ ಬಿಲಿವರಯ್ಯಾ/ನೆಲನಾಳ್ದನ ಹೆಣನೆಂದರೆ ಒಂದಡಕೆಗೆ ಕೊಂಬವರಿಲ್ಲ ನೋಡಯ್ಯಾ. ..’

ರಾಜತ್ವ ಕಳೆದುಕೊಂಡ ರಾಜನ ಶವಕ್ಕೆ ಮೊಲದ ಶವಕ್ಕೆ ಇದ್ದ ಬೆಲೆಯೂ ಇಲ್ಲ ಎಂಬುದು ಇದರ ಅರ್ಥ. ಇದು ಸಚಿವರಿಗೆ, ಶಾಸಕರಿಗೆ ಅರ್ಥವಾದರೆ ರಾಜ್ಯ ಉದ್ಧಾರವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.