ADVERTISEMENT

ಗತಿಬಿಂಬ: ಬಿಜೆಪಿಯಲ್ಲೂ ಇದೆ ಕುಟುಂಬ ರಾಜಕಾರಣ

ವಂಶವಾದಕ್ಕೆ ಉತ್ತೇಜನ ಇಲ್ಲವೆಂಬ ಪ್ರಧಾನಿ ಮೋದಿ ಮಾತಿಗೆ ಕಿಮ್ಮತ್ತಿಲ್ಲವೇ?

ವೈ.ಗ.ಜಗದೀಶ್‌
Published 16 ಮೇ 2022, 19:45 IST
Last Updated 16 ಮೇ 2022, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಂಶವಾದಕ್ಕೆ ಪ್ರೋತ್ಸಾಹ ನೀಡುವುದಿಲ್ಲ ಎಂದು ಮೋದಿಯವರು ಖುಲ್ಲಂಖುಲ್ಲಾ ಹೇಳಿದರೂ ಯಡಿಯೂರಪ್ಪ ಕುಟುಂಬ ಈ ನಿಯಮದಿಂದ ಅತೀತ ವಾಗಿಯೇ ಉಳಿಯಲಿದೆ.

‘ಕುಟುಂಬ ರಾಜಕಾರಣ ಹುಟ್ಟುಹಾಕಿದ್ದೇ ಕಾಂಗ್ರೆಸ್‌. ಇದರ ವಿರುದ್ಧ ನಾವು ಹೋರಾಡುತ್ತಿದ್ದೇವೆ. ವಂಶವಾದ ಪ್ರೋತ್ಸಾಹಿಸುತ್ತಲೇ ಇದ್ದರೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯವಿಲ್ಲ. ನಮ್ಮ ಪಕ್ಷದಲ್ಲಿ ಪರಿವಾರವಾದಕ್ಕೆ ಉತ್ತೇಜನ ಇಲ್ಲ...’

ಬಿಜೆಪಿಯ ಸಂಸದರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಮಾತಿದು.

ADVERTISEMENT

ಅದನ್ನೇ ಮತ್ತೊಂದು ರೂಪದಲ್ಲಿ ಪುನರುಚ್ಚರಿಸಿದ್ದ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌, ‘ಬದಲಾವಣೆಗೆ ಒಳಗಾಗುವ ಪಕ್ಷ ಉಳಿಯುತ್ತದೆ. ಬದಲಾವಣೆಗೆ ತಕ್ಕಂತೆ ಬಿಜೆಪಿ ಬದಲಾಗಿದೆ. ಆದರೆ, ಕಾಂಗ್ರೆಸ್‌ ಹಾಗೆಯೇ ಇದೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಯುವ ನಾಯಕರು ಯಾರು ಎಂದರೆ ಸೋನಿಯಾ ಗಾಂಧಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ... ಇಂತಹ ನಾಯಕರ ಪುತ್ರರೇ ಇದ್ದಾರೆ. ಜನ್ಮ ಪ್ರಮಾಣಪತ್ರ, ಮದುವೆ ಪ್ರಮಾಣಪತ್ರಗಳಿದ್ದರೆ ಕಾಂಗ್ರೆಸ್‌ನಲ್ಲಿ ನಾಯಕರಾಗಬಹುದು. ಬಿಜೆಪಿಯಲ್ಲಿ ಇಂತಹ ಉದಾಹರಣೆಗಳು ವಿರಳ. ನಮ್ಮಲ್ಲಿ ಕಾರ್ಯಕರ್ತರೇ ನಾಯಕರಾಗುವ ಅವಕಾಶ ಇದೆ’ ಎಂದಿದ್ದರು.

‘ಮೋದಿ ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು’ ಎಂದು ಪಕ್ಷದ ಕಾರ್ಯಕರ್ತರು ಬಯಸುತ್ತಾರೆ. ಕರ್ನಾಟಕದಲ್ಲಿ ಬಿಜೆಪಿಯೊಳಗಿರುವ ರಾಜಕಾರಣದ ವಂಶವೃಕ್ಷ ಮುಂದಿಟ್ಟುಕೊಂಡು ಪಕ್ಷದ ನಾಯಕರ ಮಾತುಗಳನ್ನು ಪುಟಕ್ಕಿಟ್ಟರೆ, ಪಕ್ಷಕ್ಕೆ ಅಂಟಿರುವ ಕಿಲುಬು ಕಣ್ಣಿಗೆ ಕುಕ್ಕುತ್ತದೆ. ಮೋದಿ–ಸಂತೋಷ್ ಮಾತನ್ನು ಜತೆಗಿಟ್ಟುಕೊಂಡು ಕರ್ನಾಟಕದ ರಾಜಕೀಯ ಗಮನಿಸಿದರೆ, ಅವರ ನುಡಿ–ನಡೆಗೆ ತಾಳಮೇಳವೇ ಇಲ್ಲ. ‘ಕಾಂಗ್ರೆಸ್ ಹಾಗೂ ವಿವಿಧ ಪ್ರಾದೇಶಿಕ ಪಕ್ಷಗಳು ಕುಟುಂಬ ರಾಜಕಾರಣವನ್ನೇ ಆಶ್ರಯಿಸಿವೆ. ನಮ್ಮ ಪಕ್ಷದಲ್ಲಿ ಇಂತಹ ಕುಟುಂಬ ರಾಜಕಾರಣಕ್ಕೆ ಬೆಂಬಲ ಇಲ್ಲ’ ಎಂದು ಮೋದಿಯವರು ಪ್ರವಚನ ನೀಡುತ್ತಲೇ ಇದ್ದಾರೆ.

ಮೋದಿ ಹೇಳುವುದರಲ್ಲಿ ಸತ್ಯ ಇದೆ. ಕಾಂಗ್ರೆಸ್‌ ಪಕ್ಷದ ತಾಯಿಬೇರೇ ಕುಟುಂಬದ ಮೇಲೆ ನಿಂತಿದೆ. ಕರ್ನಾಟಕದ ವಿಷಯಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವ ಕುಮಾರ್‌, ಎಂ.ಬಿ. ಪಾಟೀಲ, ರಾಮಲಿಂಗಾರೆಡ್ಡಿ, ಶಾಮನೂರು ಶಿವಶಂಕರಪ್ಪ ಸೇರಿದಂತೆ ಅನೇಕರು ತಮ್ಮ ಮಕ್ಕಳು ಅಥವಾ ಸೋದರರನ್ನು ಮುನ್ನೆಲೆಗೆ ತಂದವರು. ಜೆಡಿಎಸ್‌ ಬಗ್ಗೆ ಮಾತನಾಡುವಂತೆಯೇ ಇಲ್ಲ. ಕುಟುಂಬ ರಾಜಕಾರಣವೇ ಈ ಎರಡು ಪಕ್ಷಗಳಲ್ಲಿ ವಿಜೃಂಭಿಸುತ್ತಿದೆ ಎಂಬ ಕಾರಣಕ್ಕೆ ಕರ್ನಾಟಕದ ಜನ ಕಾಂಗ್ರೆಸ್‌, ಜೆಡಿಎಸ್‌ನತ್ತ ಒಲವನ್ನು ಕಡಿಮೆ ಮಾಡಿದ್ದರು. ಬಿಜೆಪಿಯಲ್ಲಿ ನೈಜ ಕಾರ್ಯಕರ್ತರಿಗೆ ನಾಯಕರಾಗುವ ಅವಕಾಶ ಸಿಗುತ್ತದೆ ಎಂದೇ ನಂಬಿದ್ದರು. ಈಗಿನ ರಾಜಕೀಯ ಕಾಲಾಳುಗಳನ್ನು ಲೆಕ್ಕ ಹಾಕಿದರೆ ಕಮಲ ಪಾಳಯದಲ್ಲೂ ಕುಟುಂಬ ರಾಜಕಾರಣದ ತಕಥೈ ಕುಣಿತ ಎದ್ದು ಕಾಣಿಸುವಂತಿದೆ.

ಲೋಕಸಭೆ ಚುನಾವಣೆ ವೇಳೆಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುವುದಿಲ್ಲ ಎಂಬ ‘ಘೋಷಣೆ’ ಯನ್ನೇನೊ ಬಿಜೆಪಿ ಮೊಳಗಿಸಿತು. ಕರ್ನಾಟಕದಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಕಟ್ಟಲು ದುಡಿದಿದ್ದ ದಿವಂಗತ ಎಚ್.ಎನ್.ಅನಂತಕುಮಾರ್ ಅವರ ವಿಷಯದಲ್ಲಿ ಮಾತ್ರ ಈ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಯಿತು. ಇದೇ ಕಾರಣ ಮುಂದೊಡ್ಡಿ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನಿರಾಕರಿಸಲಾಯಿತು. ಕುಟುಂಬ ಬಿಟ್ಟು ಕಾರ್ಯಕರ್ತರನ್ನು ಕಣಕ್ಕೆ ಇಳಿಸಿ ಗೆಲ್ಲಿಸಲಾಯಿತೇ ಎಂದರೆ, ಕಡೆಗೆ ಟಿಕೆಟ್ ಕೊಟ್ಟಿದ್ದು ಬಸವನಗುಡಿ ಶಾಸಕ ಎಲ್‌.ಎ. ರವಿ ಸುಬ್ರಹ್ಮಣ್ಯ ಅವರ ಅಣ್ಣನ ಮಗ ತೇಜಸ್ವಿ ಸೂರ್ಯ ಅವರಿಗೆ. ಈ ನಿಯಮ ಈಗ ಸಚಿವೆಯಾಗಿರುವ ಶಶಿಕಲಾ ಜೊಲ್ಲೆ ಅವರ ಪತಿ, ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಮಗ, ಸಂಸದ ಬಿ.ವೈ.ರಾಘವೇಂದ್ರ, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್‌ ಅವರ ತಂದೆ ತುಮಕೂರಿನ ಸಂಸದ ಜಿ.ಎಸ್‌.ಬಸವರಾಜು ಅವರ ವಿಷಯಕ್ಕೆ ಅನ್ವಯವಾಗಲೇ ಇಲ್ಲ. ಬಿಜೆಪಿಯ ದ್ವಂದ್ವ ನಿಲುವು ಇಲ್ಲಿ ಜಾಹೀರುಗೊಂಡಿತು.

ಈಗ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಪ್ರಮುಖರ ಸಮಿತಿ ಸಭೆ ಶಿಫಾರಸು ಮಾಡಿದೆ. ವಿಧಾನಸಭೆಯ ಉಪಚುನಾವಣೆಗಳಲ್ಲಿ ವಿಜಯೇಂದ್ರ ಪ್ರವೇಶವಾದರೆ ಸಾಕು ಗೆಲುವು ಶತಃಸಿದ್ಧ ಎಂಬ ವಾದ ಮುಂದಿಟ್ಟುಕೊಂಡು ‘ಕರ್ನಾಟಕದ ಚಾಣಕ್ಯ’ ಎಂಬ ಬಿರುದನ್ನು ಸ್ವಯಂ ವಿಜಯೇಂದ್ರಅಂಟಿಸಿಕೊಂಡಿದ್ದಾರೆ. ಅಂತಹ ಸಾಮರ್ಥ್ಯ ತಮಗಿದೆ ಎಂದು ಹೇಳಿಸಿಕೊಳ್ಳುವ ಅವರು ನೇರವಾಗಿ ಚುನಾವಣೆ ಎದುರಿಸುವ ಗೈರತ್ತು ತೋರಬೇಕಿತ್ತು. ಅದನ್ನು ಬಿಟ್ಟು ಹಿಂಬಾಗಿಲಿನಿಂದ ಶಾಸಕರಾಗಲು ಹೊರಟಿರುವುದು ಅವರ ಸಾಮರ್ಥ್ಯಕ್ಕೆ ತಕ್ಕ ನಡೆಯಲ್ಲ.

ವಂಶವಾದಕ್ಕೆ ಪ್ರೋತ್ಸಾಹ ನೀಡುವುದಿಲ್ಲ ಎಂದು ಮೋದಿಯವರು ಖುಲ್ಲಂಖುಲ್ಲಾ ಹೇಳಿದರೂ ಯಡಿಯೂರಪ್ಪ ಕುಟುಂಬ ಈ ನಿಯಮದಿಂದ ಅತೀತ ವಾಗಿಯೇ ಉಳಿಯಲಿದೆ. ಏಕೆಂದರೆ ಯಡಿಯೂರಪ್ಪ ಶಿಕಾರಿಪುರದ ಶಾಸಕರು, ಮಗ ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದರು. ಈಗ ವಿಜಯೇಂದ್ರ ಪರಿಷತ್ತಿನ ಸದಸ್ಯರಾದರೆ ಒಂದೇ ಕುಟುಂಬಕ್ಕೆ ಮೂರು ಮನೆಗಳಲ್ಲಿ ಜಾಗ ಕೊಟ್ಟಂತಾಗುತ್ತದೆ.

ಏರುವಯಸ್ಸಿನಲ್ಲಿರುವ ಯಡಿಯೂರಪ್ಪ ಅವರಿಗೆ ತಾವು ಗಟ್ಟಿಯಾಗಿರುವಾಗಲೇ ತಮ್ಮ ಮಗ ವಿಜಯೇಂದ್ರ ಅವರನ್ನು ಮಂತ್ರಿ ಮಾಡಲೇಬೇಕು ಎಂಬ ಹಟ ಬಂದಿದೆ. ‘ವಿಜಯೇಂದ್ರನನ್ನು ಮಂತ್ರಿ ಮಾಡದೇ ಇದ್ದರೆ 2023ರಲ್ಲಿ ನಡೆಯಬೇಕಾದ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರದ ಕಡೆ ಮುಖ ಹಾಕುವುದಿಲ್ಲ’ ಎಂದು ಯಡಿಯೂರಪ್ಪ ಅವರು ಅಮಿತ್‌ ಶಾ ಅವರ ಮುಂದೆ ಕಟ್ಟುನಿಟ್ಟಾಗಿ ಹೇಳಿದ್ದರಿಂದಲೇ ಈ ಬೆಳವಣಿಗೆ ನಡೆದಿದೆ ಎಂಬ ಮಾತುಗಳೂ ಇವೆ. ಇಂತಹ ಬೆದರಿಕೆಗೆ ಬಗ್ಗಿ ವಿಜಯೇಂದ್ರ ಅವರಿಗೆ ಮಣೆ ಹಾಕಿದ್ದೇ ಹೌದಾದರೆ ಬಿಜೆಪಿ ನಾಯಕರು ಅಷ್ಟು ದುರ್ಬಲರೇ ಎಂಬ ಪ್ರಶ್ನೆ ಎದುರಾಗುತ್ತದೆ. ಹಾಗಂತ, ಬಿಜೆಪಿಯಲ್ಲಿ ಯಡಿಯೂರಪ್ಪ ಅವರೊಬ್ಬರದ್ದೇ ವಂಶವಾದವಲ್ಲ; ಅನೇಕ ಕುಟುಂಬಗಳು ಬಿಜೆಪಿಯಲ್ಲಿ ವಿಜೃಂಭಿಸುತ್ತಾ, ವಂಶವಾದದಲ್ಲೇ ಕಮಲವನ್ನು ಹುದುಗಿಸಿಟ್ಟಿವೆ.

ಸಚಿವ ಮುರುಗೇಶ ನಿರಾಣಿ ಅವರ ತಮ್ಮ ಹಣಮಂತ ನಿರಾಣಿ, ಶಾಸಕ ಜಗದೀಶ ಶೆಟ್ಟರ್ ಅವರ ತಮ್ಮ ಪ್ರದೀಪ ಶೆಟ್ಟರ್, ಅಪ್ಪಚ್ಚು ರಂಜನ್ ಅವರ ಅಣ್ಣ ಸುಜಾ ಕುಶಾಲಪ್ಪ ವಿಧಾನ ಪರಿಷತ್ತಿನ ಸದಸ್ಯರು. ಸಚಿವೆ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಸಂಸದ. ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ವಿಧಾನಸಭೆಯಲ್ಲಿದ್ದಾರೆ. ಸಂಸದ ಉಮೇಶ ಜಾಧವ್ ಪುತ್ರ ಅವಿನಾಶ್ ಜಾಧವ್ ಶಾಸಕರು.

ವೈ.ಗ. ಜಗದೀಶ್‌

ಹಾವೇರಿ ಸಂಸದ ಶಿವಕುಮಾರ್ ಉದಾಸಿ ಅವರ ತಂದೆ ಸಿ.ಎಂ. ಉದಾಸಿ, ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರ ತಂದೆ ಚಂದ್ರಕಾಂತ ಬೆಲ್ಲದ ಶಾಸಕರಾಗಿದ್ದವರು. ವಿಧಾನಪರಿ
ಷತ್ತಿನ ಸಭಾಪತಿಯಾಗಿದ್ದ ಡಿ.ಎಚ್. ಶಂಕರಮೂರ್ತಿ ಅವರ ಮಗ ಡಿ.ಎಸ್. ಅರುಣ್‌ ವಿಧಾನಪರಿಷತ್ತಿನ ಸದಸ್ಯರು. ಸಚಿವ ಉಮೇಶ ಕತ್ತಿ ಅವರ ತಮ್ಮ ರಮೇಶ ಕತ್ತಿ ಒಮ್ಮೆ ಸಂಸದರಾಗಿದ್ದರು. ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಅಳಿಯ ಹರ್ಷವರ್ಧನ ನಂಜನಗೂಡಿನ ಶಾಸಕ.

ಇಲ್ಲಿ ಪ್ರಸ್ತಾಪಿಸಲೇಬೇಕಾದ ಇನ್ನೊಂದು ಅಂಶವೆಂದರೆ, ಬಳ್ಳಾರಿಯಲ್ಲಿ ಸಾಮ್ರಾಜ್ಯ ಕಟ್ಟಿದ ರೆಡ್ಡಿ ಸೋದರರ ದರ್ಬಾರ್. 2008ರ ವಿಧಾನಸಭೆ ಚುನಾವಣೆ ಹೊತ್ತಿಗೆ ಬಳ್ಳಾರಿಯನ್ನು ಕೇಂದ್ರೀಕರಿಸಿ ಸಾಮ್ರಾಜ್ಯ ಕಟ್ಟಿದ್ದ ಜಿ. ಜನಾರ್ದನ ರೆಡ್ಡಿ, ಅಂದು ಬಲಿಷ್ಠ ನಾಯಕರಾಗಿದ್ದ ಯಡಿಯೂರಪ್ಪ ಅವರನ್ನೇ ಅಲ್ಲಾಡಿಸುವ ಮಟ್ಟಕ್ಕೆ ಬೆಳೆದಿದ್ದರು. ಈಗಲೂ ಶಾಸಕರಾಗಿರುವ ಜಿ.ಕರುಣಾಕರ ರೆಡ್ಡಿ, ಜಿ. ಸೋಮಶೇಖರ ರೆಡ್ಡಿ ಆಗಲೂ ಗೆದ್ದಿದ್ದರು. ಜನಾರ್ದನ ರೆಡ್ಡಿ ಪರಿಷತ್ತಿನ ಸದಸ್ಯರಾಗಿದ್ದರು. ದೆಹಲಿ ಮಟ್ಟದಲ್ಲಿ ಪ್ರಭಾವ ಹೊಂದಿದ್ದ ಸುಷ್ಮಾ ಸ್ವರಾಜ್ ಕೃಪಾಶೀರ್ವಾದ ಇವರ ಮೇಲಿತ್ತು. ಬಿಜೆಪಿಯ ಬುಡಕ್ಕೆ ಕೈಯಿಡುವ ಆರ್ಥಿಕ ಶಕ್ತಿ ಹೊಂದಿದ್ದ ಜನಾರ್ದನ ರೆಡ್ಡಿ ಅವರ ಪ್ರಾಬಲ್ಯದ ಎದುರು ಬಿಜೆಪಿ ವರಿಷ್ಠರೇ ಹೈರಾಣಾಗಿದ್ದರು. ಗಣಿ ಹಗರಣ ಹೊರಗೆ ಬಾರದೇ ಇದ್ದರೆ, ಈ ಕುಟುಂಬವೇ ಕರ್ನಾಟಕವನ್ನು ತನ್ನ ಕೈವಶ ಮಾಡಿಕೊಳ್ಳುವ ಅಪಾಯವಿತ್ತು.

ಹೀಗೆ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ತನ್ನದೇ ಆದ ಪ್ರಭಾವವನ್ನು ಹೊಂದಿದೆ.ವಂಶವಾದಕ್ಕೆ ಆಸ್ಪದವೇ ಇಲ್ಲ ಎಂದುಮೋದಿ–ಸಂತೋಷ್‌ ಹೇಳುತ್ತಿರುವ ಹೊತ್ತಿನಲ್ಲಿ ಬಿಜೆಪಿಯಲ್ಲಿ ಅದು ಬೆಳೆಯುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.