ADVERTISEMENT

ಗತಿಬಿಂಬ: ‘ವಿಶ್ವಗುರು’ ಹೇಳಿದ್ದು ಯಾರಿಗೆ?

ಜನಹೋರಾಟದ ದಿಕ್ಕು ತಪ್ಪಿಸುವ ‘ಆಂದೋಲನಜೀವಿ’ಗಳು ಯಾರು ಎಂಬುದು ಚರ್ಚಾಸ್ಪದ

ವೈ.ಗ.ಜಗದೀಶ್‌
Published 16 ಫೆಬ್ರುವರಿ 2021, 19:30 IST
Last Updated 16 ಫೆಬ್ರುವರಿ 2021, 19:30 IST
   

ಅಣೆಕಟ್ಟೆಯಲ್ಲಿ ನೀರಿದ್ದರೆ ಎಡದಂಡೆ, ಬಲದಂಡೆ ಯವರು ನೀರಿನ ಪಾಲು ಕೇಳಬಹುದು. ನಾಲೆ ಕೊನೆಯ ತುದಿಯಲ್ಲಿದ್ದವರಿಗೆ ನೀರು ಸಿಗುತ್ತದೆಯೋ ಇಲ್ಲವೋ ಅಣೆಕಟ್ಟೆ ಆಜುಬಾಜಿನ‌ಲ್ಲಿರುವವರಿಗೆ ನೀರಿನ ತೊಂದರೆಯೇನೂ ಇಲ್ಲ. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ ತಳಹಂತದ ಭದ್ರತಾ ಸಿಬ್ಬಂದಿ, ಸಹಾಯಕರು, ಡಿಟಿಪಿ ಆಪರೇಟರ್‌ ಹುದ್ದೆಗಳನ್ನೆಲ್ಲ ಹೊರ ಗುತ್ತಿಗೆ ಕೊಟ್ಟಾಗಿದೆ. ಖಾಸಗೀಕರಣ ಹೆಚ್ಚಿದಂತೆ ಸರ್ಕಾರಿ ಉದ್ಯೋಗ ಮರೆಯಾಗುತ್ತಿದೆ; ಖಾಲಿ ಉಳಿದಿರುವ ಸರ್ಕಾರಿ ಹುದ್ದೆಗಳಿಗೂ ನೇಮಕಾತಿ ನಡೆಯುತ್ತಿಲ್ಲ. ಇಂತಹ ಹೊತ್ತಿನಲ್ಲಿ ಮೀಸಲಾತಿಯ ಹುಯಿಲು ಕರ್ನಾಟಕದಲ್ಲಿ ಎದ್ದಿದೆ.

ಮೀಸಲಾತಿ ಕೇಳುವುದು ತಪ್ಪಲ್ಲ; ಕುರುಬರು, ಲಿಂಗಾಯತ ಪಂಚಮಸಾಲಿ, ದೇವಾಂಗ, ಉಪ್ಪಾರ, ಮಾದಿಗರು ಹೀಗೆ ದುಡಿವ ಸಮುದಾಯದವರ ಮೀಸಲಾತಿ ಬೇಡಿಕೆ ನ್ಯಾಯಯುತ ಹಕ್ಕು. ಉದ್ಯೋಗ ಸೃಷ್ಟಿಗೆ ದಿಡ್ಡಿ ಬಾಗಿಲು ಹಾಕಿದ ಮೇಲೆ ಮೀಸಲಾತಿ ಕೇಳುವುದು ಯಾವುದಕ್ಕೆ? ಇದು ಇಲ್ಲದ ನೀರಿಗೆ ಪಾಲು ಕೇಳಿದಂತಲ್ಲವೇ?

ರಾಜಕೀಯವಾಗಿ ಪ್ರಬಲವಾಗಿರುವ ಲಿಂಗಾಯತ ಪಂಚಮಸಾಲಿ ಹಾಗೂ ಕುರುಬ ಸಮುದಾಯದವರು ಈಗ ಬೀದಿಗೆ ಇಳಿದಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವರು, ಶಾಸಕರು ಆಗಿರುವವರದ್ದೇ ಇದಕ್ಕೆ ನೇತೃತ್ವ. ಸರ್ಕಾರದ ಭಾಗಿದಾರರು ನಡೆಸು ತ್ತಿರುವ ಹೋರಾಟ ಯಾರ ವಿರುದ್ಧ? ಈ ಎರಡು ಹೋರಾಟಗಳ ಬಗ್ಗೆ ಮತ್ತೊಂದು ಆಯಾಮದ ಚರ್ಚೆಯೂ ಶುರುವಿಟ್ಟಿದೆ. ಇಬ್ಬರು ‘ಪ್ರಭಾವಿ’ಗಳ ಬಲ ಕುಗ್ಗಿಸಲು, ಆರ್‌ಎಸ್‌ಎಸ್‌ ಮೂಲದಿಂದ ಬಂದು ಬಿಜೆಪಿಯಲ್ಲಿ ಆಯಕಟ್ಟಿನ ಜಾಗದಲ್ಲಿರುವ ಕೆಲ ಪ್ರಮುಖರು ಈ ಹೋರಾಟವನ್ನು ಹಚ್ಚಿಕೊಟ್ಟಿದ್ದಾರೆ ಎಂಬ ಟೀಕೆಯೂ ಇದೆ.

ADVERTISEMENT

‘ಲಿಂಗಾಯತರ ಪ್ರಶ್ನಾತೀತ ನಾಯಕ ಎಂಬ ಬಿ.ಎಸ್‌.ಯಡಿಯೂರಪ್ಪನವರ ಹೆಗ್ಗಳಿಕೆ ಯನ್ನು ಮಸುಕುಗೊಳಿಸಿ, ಪರ್ಯಾಯ ನಾಯಕತ್ವ ಇದೆ ಎಂದು ತೋರಿಸುವುದು ಪಂಚಮಸಾಲಿ ಹೋರಾಟದ ಹಿಂದಿನ ಮರ್ಮ. ಯಡಿಯೂರಪ್ಪ ತಮ್ಮ ನಾಯಕತ್ವವನ್ನು ಪುತ್ರ ವಿಜಯೇಂದ್ರ ಅವರಿಗೆ ಹಸ್ತಾಂತರಿಸುವ ‘ರಾಜಶಾಹಿ’ ಪದ್ಧತಿಯ ವಿರುದ್ಧದ ಹೋರಾಟ ಇದು’ ಎಂಬ ವಿಮರ್ಶೆಯೂ ಇದೆ. ಯಡಿಯೂರಪ್ಪ ಜತೆ ಗುರುತಿಸಿಕೊಂಡಿರುವ ಪಂಚಮಸಾಲಿ ಅಲ್ಲದ ಲಿಂಗಾಯತ ನಾಯಕರು ಇದನ್ನು ಹೇಳಿಯೂ ಇದ್ದಾರೆ.

ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯನವರ ಬಗ್ಗೆ ಕುರುಬ ಸಮುದಾಯದಲ್ಲಿರುವ ವಿಶ್ವಾಸವನ್ನು ಕುಗ್ಗಿಸಿ, ಅದನ್ನು ಬಿಜೆಪಿ ಮತಬ್ಯಾಂಕ್ ಆಗಿ ಪರಿವರ್ತಿಸುವುದು ಕುರುಬ ಸಮುದಾಯದವರ ಮೀಸಲಾತಿಯ ಹೋರಾಟದ ಹಿಂದಿನ ತರ್ಕ ಎಂಬ ಚರ್ಚೆಯೂ ಇದೆ. ‘ನಮ್ಮ ಮೀಸಲಾತಿ ಬೇಡಿಕೆ ಈಡೇರಿದರೆ 60 ಲಕ್ಷ ಕುರುಬರು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುತ್ತಾರೆ ಎಂಬ ಭೀತಿ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ’ ಎಂಬ ಸಚಿವ ಕೆ.ಎಸ್.ಈಶ್ವರಪ್ಪನವರ ಮಾತುಗಳು ಏನನ್ನು ಧ್ವನಿಸುತ್ತಿವೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಈ ಹೋರಾಟಗಳು ಬಿರುಸುಗೊಳ್ಳುತ್ತಿರುವುದರ ಮಧ್ಯೆಯೇ ‘ವಿಶ್ವಗುರು’ ಎಂದು ಭಜಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಉರುಳಿಸಿದ ‘ಆಂದೋಲನ ಜೀವಿ’ ಎಂಬ ಪದ ಸಾಕಷ್ಟು ವಾಗ್ವಾದಕ್ಕೆ ಗುರಿಯಾಗಿದೆ. ರಾಜ್ಯಸಭೆಯಲ್ಲಿ ಮಾತನಾಡಿದ ಮೋದಿ, ‘ದೇಶದಲ್ಲಿ ಆಂದೋಲನಜೀವಿಗಳೆಂಬ ಹೊಸತಳಿ ಸೃಷ್ಟಿಯಾಗಿದೆ. ವೃತ್ತಿಪರ ಪ್ರತಿಭಟನಕಾರರಾಗಿರುವ ಇಂಥವರನ್ನು ಎಲ್ಲ ಪ್ರತಿಭಟನೆಗಳಲ್ಲೂ ಕಾಣಬಹುದಾಗಿದೆ. ಇಂಥ ಪರಾವಲಂಬಿ ಜೀವಿಗಳಿಗೆ ಪ್ರತಿಭಟನೆ ಎಂಬುದು ಹಬ್ಬವಿದ್ದಂತೆ’ ಎಂದು ಹಂಗಿಸಿದ್ದರು.

ದೇಶಕ್ಕೆ ಅನ್ನ ನೀಡುವ ರೈತರು ಮೂರು ತಿಂಗಳು ಗಳಿಂದ ವಯಸ್ಸು, ಚಳಿ, ಬಿಸಿಲು; ಅದೆಲ್ಲಕ್ಕಿಂತ ಇಡೀ ವರ್ಷ ಗಂಟೆ ಬಾರಿಸುತ್ತಾ ಮನೆಯಲ್ಲೇ ಎಲ್ಲರೂ ಕೂರು ವಂತೆ ಮಾಡಿದ ಕೋವಿಡ್‌ ಅನ್ನೂ ಲೆಕ್ಕಿಸದೆ ಹೋರಾಟಕ್ಕೆ ಕಾವು ಕೊಟ್ಟಿದ್ದಾರೆ. ರೈತರ ಸಮಸ್ಯೆ ಪರಿಹರಿಸುವ ಹೊಣೆ ಇರುವ ‘ಚೌಕಿದಾರ’, ದೇಶವಾಸಿಗಳನ್ನು ಹೀಗೆ ಒಂದೇ ಪದದಲ್ಲಿ ಹೊಡೆದುಹಾಕಲು ನೋಡಿದ್ದು ಐತಿಹಾಸಿಕ ಕ್ರೌರ್ಯ. ತಮ್ಮ ಸಹಚರ ಎಂಬಂತೆ ಮೋದಿ ಈವರೆಗೂ ಭಾವಿಸಿದ್ದ ಟ್ರಂಪ್ ಬೆಂಬಲಿಗರು ದುಂಡಾವರ್ತಿ ಮಾಡಿ ದಾಗ ಅವರನ್ನೇನೂ ವಿಶ್ವಗುರುಗಳು ಹೀಗಳೆಯಲಿಲ್ಲ; ಕಟುವಾಗಿ ಟೀಕಿಸಿದ್ದೂ ಕಾಣಿಸಲಿಲ್ಲ.

‘ಪಿತೂರಿ’ ಪ್ರಕರಣವೊಂದನ್ನು ಆರೋಪಿಸಿ ಜೈಲಿಗೆ ತಳ್ಳಲಾಗಿರುವ ತೆಲುಗಿನ ಕವಿ ವರವರರಾವ್‌, ‘ಅಪರಾಧವೇ ಅಧಿಕಾರವಾಗಿ ಜನರನ್ನು ಅಪರಾಧಿಗಳನ್ನಾಗಿಸಿ ಬೇಟೆಯಾಡುತ್ತಿದ್ದಾಗ ಬಾಯಿದ್ದೂ ಸುಮ್ಮನೆ ಕೂರುವವನೂ ಅಪರಾಧಿಯೇ’ ಎಂದು ಬರೆದಿದ್ದನ್ನು ನೆನಪಿಸಿದರೆ ಅದು ಅಪರಾಧವಾಗಲಿಕ್ಕಿಲ್ಲ.

ಪ್ರಧಾನಿಯಂಥ ಉನ್ನತ ಹುದ್ದೆಯಲ್ಲಿ ಇರುವವರು ‘ಆಂದೋಲನಜೀವಿ’ ಎಂದು ಯಾರನ್ನು ಉದ್ದೇಶಿಸಿ ಹೇಳಿದ್ದು ಎಂಬುದು ಚರ್ಚಾಸ್ಪದ. ಮಂಡಲ್ ವರದಿ ಜಾರಿಗೆ ಕೇಂದ್ರ ಸರ್ಕಾರ ಮುಂದಾದಾಗ ಮೇಲ್ವರ್ಗದವರನ್ನು ಎತ್ತಿಕಟ್ಟಿದ್ದು ಯಾರ ಪರ ಆಂದೋಲನಎಂದು ಈಗ ಮೀಸಲಾತಿಗಾಗಿ ಜನರನ್ನು ಹುರಿದುಂಬಿಸಿರುವವರೇ ಹೇಳಬೇಕು.

ಬಿಜೆಪಿ ನಾಯಕರಾದ ಎಲ್‌.ಕೆ.ಅಡ್ವಾಣಿ ಹಾಗೂ ಬಿ.ಎಸ್‌.ಯಡಿಯೂರಪ್ಪ ಜೀವನದುದ್ದಕ್ಕೂ ಹೋರಾಟವನ್ನೇ ನಡೆಸಿದವರು. ರಾಮಜನ್ಮಭೂಮಿಗಾಗಿ ಇಟ್ಟಿಗೆ, ದೀಪ, ಪಾದುಕೆ ಹೀಗೆ ಅನೇಕ ಯಾತ್ರೆ ಗಳನ್ನು ಎರಡು ದಶಕ ನಡೆಸಿದ ಅಡ್ವಾಣಿ, ಬಿಜೆಪಿಗೆ ರಾಷ್ಟ್ರವ್ಯಾಪಿ ಬುನಾದಿ ಹಾಕಿಕೊಟ್ಟರು. ರೈತರಿಗಾಗಿ ಹತ್ತಾರು ರೀತಿಯ ಪಾದಯಾತ್ರೆ ನಡೆಸಿ ಇಳಿವಯಸ್ಸಿನಲ್ಲಿ ಅಧಿಕಾರಕ್ಕೆ ಏರಿದವರು ಯಡಿಯೂರಪ್ಪ.

ವೈ.ಗ.ಜಗದೀಶ್

ಕರ್ನಾಟಕದ ವಿಷಯಕ್ಕೆ ಬಂದರೆ, ಬಿಜೆಪಿಗೆ ನೆಲೆಯೇ ಇರಲಿಲ್ಲ. ಹುಬ್ಬಳ್ಳಿಯ ಈದ್ಗಾ ಮೈದಾನ, ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿ ವಿವಾದಗಳನ್ನೇ ಮುಂದಿಟ್ಟು ಅದು ತಳವೂರಿತು. ಗೋಹತ್ಯೆ ವಿಷಯ ಕೆದಕಿ, ಕೋಮು ವೈಷಮ್ಯ ಬಿತ್ತಿ ಕರಾವಳಿಯಲ್ಲಿ ಬೇರೂರಿತು.

ಅಡ್ವಾಣಿ ರಥಯಾತ್ರೆ, ಈದ್ಗಾ ವಿವಾದಕ್ಕೆ ಸಂಬಂಧಿ ಸಿದ ಪ್ರಲ್ಹಾದ ಜೋಶಿ, ಅನಂತಕುಮಾರ ಹೆಗಡೆಯವರ ಹೋರಾಟ, ಬಾಬಾಬುಡನ್‌ಗಿರಿ ವಿವಾದಕ್ಕೆ ಸಂಬಂಧಿಸಿ ಸಿ.ಟಿ.ರವಿಯವರ ಚಳವಳಿ, ನಳಿನ್ ಕುಮಾರ್ ಕಟೀಲ್‌ ಅವರ ಕೋಮು ಆಧಾರಿತ ರಾಜಕಾರಣಗಳು ಜನರ ಕಷ್ಟಗಳನ್ನು ಮುಂದಿಟ್ಟು ನಡೆಸಿದ ಹೋರಾಟಗಳಲ್ಲ. ತಮ್ಮ ಸಂಕಟಗಳನ್ನು ಒಡಲುರಿಯಾಗಿಸಿ ಹೋರಾಟಕ್ಕೆ ಧುಮುಕಬಹುದಾದ ಜನರನ್ನು ಕೋಮು–ಧರ್ಮದ ಅಮಲಿನಲ್ಲಿ ಮುಳುಗಿಸಿ ದಿಕ್ಕುತಪ್ಪಿಸುವ ಹೋರಾಟಗಳೇ ಆಗಿದ್ದವು.ಅರ್ಥಾತ್‌; ಅಧಿಕಾರ ಹಿಡಿಯುವ ಏಕೈಕ ಅಪೇಕ್ಷೆಯಿಂದ ಜನರ ಭಾವನೆಗಳನ್ನೇ ಬಂಡವಾಳವಾಗಿಸಿಕೊಂಡ ಆಂದೋಲನ ಜೀವಿಗಳ ಪರಂಪರೆ ಇದು.

ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್ ಹೀಗೆ ಯಾವುದೇ ಪಕ್ಷದ ಪ್ರಭುತ್ವ ಇರಲಿ, ಜನರು ಹೋರಾಟಕ್ಕೆ ಇಳಿಯುವುದನ್ನು ಸಹಿಸದು. ಆರ್ಥಿಕ ಸಂಕಷ್ಟ, ನಿರುದ್ಯೋಗ, ಕೃಷಿ ಉತ್ಪನ್ನ ಗಳಿಗೆ ಬೆಲೆ ಇಲ್ಲದೇ ಇರುವುದು, ನಿತ್ಯ ಜೀವನವೇ ನರಕವಾಗಿರುವುದನ್ನು ಸಹಿಸದ ಜನಸಮುದಾಯದೊಳಗೆ ಹೋರಾಟದ ಜ್ವಾಲೆಯೊಂದು ತನ್ನಿಂತಾನೇ ಸ್ಫೋಟಗೊಳ್ಳುತ್ತದೆ. ಅದನ್ನು ದಿಕ್ಕುತಪ್ಪಿಸಲು ಧರ್ಮ, ಜಾತಿಯ ಸಂಗತಿಗಳನ್ನು ಮುಂಚೂಣಿಗೆ ತಂದು ಮೈ ಮರೆಯುವಂತೆ ಮಾಡುವುದು ಎಲ್ಲ ಕಾಲದ ಪ್ರಭುತ್ವಗಳು ಬಳಸಿಕೊಂಡ ಅಸ್ತ್ರಗಳು.

ರೈತರ ಹೋರಾಟ ಕೆಲ ದಿನದ ಆಟ ಎಂದು ಮೋದಿ ಅಂದುಕೊಂಡಿದ್ದಿರಬೇಕು. ಯಾವುದಕ್ಕೂ ಜಗ್ಗದ ರೈತರು ವಿಶ್ವದ ಗಮನ ಸೆಳೆಯುವಷ್ಟು ಬಲಿಷ್ಠಗೊಂಡಾಗ, ಹೀಗಳೆಯುವ ದಾರಿಯನ್ನು ಮೋದಿ ಹುಡುಕಿದರೇ?

‘ಕೃಷಿಮೊದಲು ಸರ್ವಕ್ಕೆ ಕೃಷಿಯಿಂ/ಪಸರಿಸುವುದಾ ಕೃಷಿಯನುದ್ಯೋ/ಗಿಸುವ ಜನವನು ಪಾಲಿಸುವುದಾ ಜನಪದದ ಜನದಿ/ವಸು ತೆರಳುವುದು ವಸುವಿನಿಂ ಸಾ/ಧಿಸುವಡಾವುದಸಾಧ್ಯವದರಿಂ/ ಕೃಷಿ ವಿಹೀನನ ದೇಶವದು ದುರ್ದೇಶ ಕೇಳೆಂದ’ ಎಂದು ಕವಿ ಕುಮಾರ ವ್ಯಾಸ ‘ಸಭಾಪರ್ವ’ದಲ್ಲಿ ನಾರದನಿಂದ ಯುಧಿಷ್ಠಿರನಿಗೆ ಹೇಳಿಸುತ್ತಾನೆ. ‘ದೇಶಕ್ಕೆ ಕೃಷಿಯೇ ಮುಖ್ಯವಾಗಿದ್ದು ದೇಶವು ಕೃಷಿಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಕೃಷಿಯು ಇಲ್ಲದ ದೇಶ ದುರ್ದೇಶ’ವಾಗುತ್ತದೆ ಎಂಬುದು ಇದರ ತಾತ್ಪರ್ಯ.

ಇವತ್ತು ದೇಶ ಆಳುತ್ತಿರುವ ‘ಧರ್ಮ’ರಾಯರಿಗೆ ಹೀಗೆ ತಿಳಿ ಹೇಳಬೇಕಾದವರು ಯಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.