ADVERTISEMENT

ಬಿಜೆಪಿ ಗೆಲ್ಲಿಸಲು ಜೆಡಿಎಸ್‌ ಹಿಂಬಾಗಿಲ ರಾಜಕೀಯ: ರಾಹುಲ್ ಗಾಂಧಿ ಆರೋಪ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 14:41 IST
Last Updated 21 ಮಾರ್ಚ್ 2018, 14:41 IST
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)   

ಹಾಸನ: ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಜೆಡಿಎಸ್‌ ಹಿಂಬಾಗಿಲ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು.

ಕಾಂಗ್ರೆಸ್‌ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್ ಮತ್ತು ಬಿಜೆಪಿಯವರು ತಂಡವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜೆಡಿಎಸ್‌ನವರು ಪರೋಕ್ಷ ‌ಸಹಾಯ ಮಾಡುತ್ತಿದ್ದಾರೆ. ಹಿಂಬಾಗಿಲ‌ ರಾಜಕೀಯ ಮಾಡಿದರೆ ಜನರಿಗೆ ಗೊತ್ತಾಗಲಾರದು ಅಂತ ಜೆಡಿಎಸ್‌ನವರು ಅಂದುಕೊಂಡಿದ್ದಾರೆ. ರಾಜ್ಯದಲ್ಲಿ ಯಾರು ಏನೇ ಮಾಡಿದರೂ ‌ಗೆಲ್ಲುವುದು ಕಾಂಗ್ರೆಸ್ ಪಕ್ಷವೇ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಆರ್‌ಎಸ್‌ಎಸ್‌ನ ತಂಡಗಳೇ ಆಗಲಿ ಇನ್ಯಾರೇ ಆಗಲಿ, ಯಾರೇ ಬಂದರೂ‌ ನಮ್ಮ ಗೆಲುವು ತಡೆಯಲು ಸಾದ್ಯವಿಲ್ಲ. ದಲಿತರು, ಆದಿವಾಸಿಗಳು, ಮಹಿಳೆಯರು, ವಿದ್ಯಾರ್ಥಿಗಳ ಏಳಿಗೆ ಕಾಂಗ್ರೆಸ್ ನಿಂದ ಮಾತ್ರ ಸಾದ್ಯ’ ಎಂದು ಅವರು ಹೇಳಿದರು.

ADVERTISEMENT

‘ಬಡವರಿಗೆ ಯಾವ ರೀತಿ ಸಹಾಯ ಮಾಡಬೇಕು ಎಂದು ಕಾಂಗ್ರೆಸ್ ನಾಯಕರಿಗೆ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಏನೇ ಹೊಂದಾಣಿಕೆ ಮಾಡಿದರೂ ನಮ್ಮ ಗೆಲುವು ನಿಶ್ಚಿತ’ ಎಂದು ರಾಹುಲ್ ಹೇಳಿದರು.

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ: ಕಪ್ಪು‌ ಹಣವನ್ನ‌ ಬಿಳಿ ಮಾಡಲು‌ ಹೋಗಿ ಪ್ರಧಾನಿ ನರೇಂದ್ರ ಮೋದಿ‌ ಜನರಿಗೆ ಸಂಕಷ್ಟ ತಂದಿಟ್ಟರು. ಮೋದಿ ಸಹಾಯದಿಂದ‌ ಉದ್ಯಮಿ ನೀರವ್ ಮೋದಿ ಸೇರಿದಂತೆ ಹಲವರು ಲಕ್ಷಾಂತರ ಕೋಟಿ ರೂಪಾಯಿ ಹಣ ಲೂಟಿ ಮಾಡಿ ವಿದೇಶಕ್ಕೆ ತೆರಳಿದ್ದಾರೆ ಎಂದು ರಾಹುಲ್ ಆರೋಪಿಸಿದರು.

‘ಕರ್ನಾಟಕದ ಯಾವುದೇ ಮೂಲೆಯಲ್ಲಿ ಯಾರಿಗೇ ತೊಂದರೆಯಾದರೂ ಯಾವುದೇ‌ ಕ್ಷಣದಲ್ಲಿ ಬರಲು ನಾನು ಸಿದ್ದ. ನನ್ನ ಅಗತ್ಯ ನಿಮಗಿದೆ ಎನಿಸಿದರೆ ಯಾವುದೇ ಕ್ಷಣದಲ್ಲಿ ಹಾಜರಿರಲು ಸಿದ್ಧ’ ಎಂದು ಅವರು ಆಶ್ವಾಸನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.