ADVERTISEMENT

ಪಾಳುಬಿದ್ದಿದೆ ಐತಿಹಾಸಿಕ ಮೈಷುಗರ್‌ ಈಜುಕೊಳ

ಯುವಕರು, ಮಕ್ಕಳು, ಮಹಿಳೆಯರ ಮೆಚ್ಚಿನ ತಾಣ ಭೂತಬಂಗಲೆಯಂತಿದೆ, ಹಸಿರಾಗಿವೆ ನೂರಾರು ನೆನಪುಗಳು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 10:50 IST
Last Updated 9 ಏಪ್ರಿಲ್ 2018, 10:50 IST
ಮಂಡ್ಯದ ಮೈಷುಗರ್‌ ಕಾರ್ಖಾನೆ ಸಮೀಪ ಇರುವ ಈಜುಕೊಳ ಪಾಳುಬಿದ್ದಿರುವುದು
ಮಂಡ್ಯದ ಮೈಷುಗರ್‌ ಕಾರ್ಖಾನೆ ಸಮೀಪ ಇರುವ ಈಜುಕೊಳ ಪಾಳುಬಿದ್ದಿರುವುದು   

ಮಂಡ್ಯ: ಯುವಕರು, ಮಕ್ಕಳು ಹಾಗೂ ಮಹಿಳೆಯರಿಗೆ ಬಹಳ ಅಚ್ಚುಮೆಚ್ಚು ಎನಿಸಿದ್ದ ಐತಿಹಾಸಿಕ ‘ಮೈಷುಗರ್‌ ಈಜುಕೊಳ’ ಈಗ ಪಾಳು ಬಿದ್ದಿದೆ. ಅಸಂಖ್ಯಾತ ಮಕ್ಕಳಿಗೆ ಈಜು ಕಲಿಸಿದ್ದ ಕೊಳದ ಕಟ್ಟಡ ಭೂತಬಂಗಲೆಯಂತೆ ಕಾಣುತ್ತಿದೆ.

ಮೈಷುಗರ್‌ ಕಾರ್ಖಾನೆಯ ಆವರಣದಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ವಸತಿ ಗೃಹ, ಶಾಲೆ, ಕಲ್ಯಾಣ ಮಂಟಪ, ಕ್ರೀಡಾ ಸಂಕೀರ್ಣ, ಸಭಾಂಗಣ ಎಲ್ಲವೂ ಇದ್ದವು. ಕಾರ್ಖಾನೆಯ ಸ್ವಲ್ಪ ದೂರದಲ್ಲಿ ಈಜುಕೊಳವೂ ಇತ್ತು. ಈ ಕೊಳದಲ್ಲಿ ಕಾರ್ಖಾನೆಯ ಕಾರ್ಮಿಕರು, ನಗರದ ಸಾರ್ವಜನಿಕರು ಸೇರಿ ಸುತ್ತಮುತ್ತಲ ಹಳ್ಳಿಗಳ ಯುವಕರೂ ಈಜುತ್ತಿದ್ದರು. ಎರಡು ಎಕರೆ ಪ್ರದೇಶದಲ್ಲಿ ಅರಳಿ ನಿಂತಿದ್ದ ಕೊಳದ ಆವರಣ ಉದ್ಯಾನವೂ ಆಗಿತ್ತು. ನೂರಕ್ಕೂ ಹೆಚ್ಚು ಮರಗಳ ನಡುವೆ ಈಜುಕೊಳ ಅರಳಿ ನಿಂತಿತ್ತು. ಮುಖ್ಯರಸ್ತೆಯಿಂದ ಕೊಳದ ಕಟ್ಟಡದವರೆಗೆ ಮರದ ಸಾಲುಗಳಿದ್ದವು. ಕಲ್ಲಿನ ಕುರ್ಚಿಗಳು ಇದ್ದವು. ಸಾರ್ವಜನಿಕರು ಆವರಣದ ಸುತ್ತ ವಾಯುವಿಹಾರ ಮಾಡುತ್ತಿದ್ದರು.

ಆದರೆ ಈಗ ಈಜುಕೊಳ ಪಳಿಯುಳಿಕೆಯಂತಾಗಿದೆ. ಮರಗಳು ಈಗಲೂ ಇವೆ, ಆದರೆ ಹಸಿರು ವಾತಾವರಣ ಇಲ್ಲ. ಗಿಡಗಂಟಿ, ಮುಳ್ಳಿನ ಗಿಡಗಳು ಬೆಳೆದುಕೊಂಡಿವೆ. ಕೊಳದ ಆವರಣದಲ್ಲಿರುವ ಗೇಟ್‌ ತುಂಬೆಲ್ಲಾ ಬಳ್ಳಿಗಳು ಹಬ್ಬಿವೆ. ಗೇಟ್‌ನಲ್ಲಿ ಈಗಲೂ ಕೊಳದ ಸಮಯ ಫಲಕ ಹಾಗೆಯೇ ಇದೆ. ‘ಬೆಳಿಗ್ಗೆ 6ರಿಂದ 8ಗಂಟೆಯವರೆಗೆ ಎರಡು ಬ್ಯಾಚ್‌’ ಎಂಬ ಸಾಲುಗಳು ಇವೆ. ‘ಹೃದಯ ಸಮಸ್ಯೆ, ಚರ್ಮ ರೋಗ, ಮೂರ್ಛೆ ರೋಗವುಳ್ಳವರಿಗೆ ಪ್ರವೇಶವಿಲ್ಲ’ ಎಂಬ ಬೋರ್ಡ್‌ ಈಗಲೂ ಜೀವಂತವಾಗಿದ್ದು ಈಜುಕೊಳದ ಪರಂಪರೆಯನ್ನು ಸಾರಿ ಹೇಳುತ್ತದೆ. ಆದರೆ ಕೊಳದ ಆವರಣ ಹಾವು, ಹಲ್ಲಿಗಳ ವಾಸಸ್ಥಾನವಾಗಿದ್ದು ಕೊಳದ ಟ್ರ್ಯಾಕ್‌ಗಳು ನೀರಿಲ್ಲದೆ ಒಣಗಿ ನಿಂತಿದೆ. ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ.

ADVERTISEMENT

ನೂರಾರು ನೆನಪುಗಳು: ಈಜುಕೊಳದ ಅಂಗಳದಲ್ಲಿ ನೂರಾರು ನೆನಪುಗಳು ಇನ್ನೂ ಹಸಿರಾಗಿವೆ. ಅದೇ ಈಜುಕೊಳದಲ್ಲಿ ಈಜು ಕಲಿತವರು ನಗರದಲ್ಲಿ ಹಲವರಿದ್ದಾರೆ. ‘ಮಂಡ್ಯದಲ್ಲಿ ಇದು ಏಕೈಕ ಈಜುಕೊಳವಾಗಿತ್ತು. 4 ಅಡಿಯಿಂದ 12 ಅಡಿ ಆಳದವರೆಗೆ ಕೊಳವಿತ್ತು. ಮಹಿಳೆಯರಿಗೆ ಪ್ರತ್ಯೇಕ ಬ್ಯಾಚ್‌ ಇತ್ತು. ಕಾರ್ಖಾನೆ ಕಾರ್ಮಿಕರಿಗೆ ಈಜುಕೊಳ ಪ್ರವೇಶ ಉಚಿತವಾಗಿತ್ತು. ಹೊರಗಿನವರಿಗೆ ಗಂಟೆಗೆ ₹ 5 ದರ ನಿಗದಿ ಮಾಡಲಾಗಿತ್ತು. ಮೈಷುಗರ್‌ ಕಾರ್ಖಾನೆ ರೋಗಗ್ರಸ್ತವಾದ ನಂತರ ಆವರಣದಲ್ಲಿ ಇದ್ದ ಎಲ್ಲಾ ಚಟುವಟಿಕೆ ಕೇಂದ್ರಗಳಿಗೆ ಬ್ರೇಕ್‌ ಬಿತ್ತು. ಮೊದಲು ಇಲ್ಲಿ ಮಹಿಳೆಯರಿಗೆ, ಪುರುಷರ ಪ್ರತ್ಯೇಕ ಕ್ಲಬ್‌ಗಳಿದ್ದವು. ನಾವು 5 ಸಾವಿರ ಕಾರ್ಮಿಕರು ಇದ್ದೆವು. ಈಗ ಕಾರ್ಮಿಕರ ಸಂಖ್ಯೆ 230ಕ್ಕಿಳಿದಿದೆ. ಮೈಷುಗರ್‌ ಕಾರ್ಖಾನೆ ಈಗ ಇತಿಹಾಸದ ಗರ್ಭ ಸೇರುವ ಎಲ್ಲಾ ಲಕ್ಷಣಗಳಿವೆ’ ಎಂದು ಕಾರ್ಖಾನೆಯ ನಿವೃತ್ತ ಕಾರ್ಮಿಕ ಕುಮಾರಸ್ವಾಮಿ ಹೇಳಿದರು.

ಪಿಇಟಿ ಈಜುಕೊಳ ಕಾರಣ: ಜನತಾ ಶಿಕ್ಷಣ ಸಂಸ್ಥೆ ವತಿಯಿಂದ ನಗರದಲ್ಲಿ ಹೈಟೆಕ್‌ ಈಜುಕೊಳ ನಿರ್ಮಾಣವಾದ ನಂತರ ಮೈಷುಗರ್‌ ಈಜುಕೊಳ ಬೇಡಿಕೆ ಕಳೆದುಕೊಂಡಿತು ಎಂದು ಕೆಲವರು ಹೇಳುತ್ತಾರೆ. 21 ಮೀ ಅಗಲ, 25 ಮೀ ಉದ್ದದ ಈಜುಕೊಳವನ್ನು ಪಿಇಟಿ ಕ್ರೀಡಾ ಸಮುಚ್ಛಯದ ಆವರಣದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ 8 ಟ್ರ್ಯಾಕ್‌ಗಳಿವೆ. 1999ರಲ್ಲಿ ಪಿಇಟಿ ಈಜುಕೊಳ ನಿರ್ಮಾಣವಾದ ನಂತರ ಮೈಷುಗರ್‌ ಈಜುಕೊಳ ತನ್ನ ಬೇಡಿಕೆ ಕಳೆದಕೊಂಡಿತು. ನಂತರವೂ ಕೆಲ ಕಾಲ ನಡೆಯಿತಾದರೂ 2012ರಲ್ಲಿ ಸಂಪೂರ್ಣವಾಗಿ ಕಾರ್ಯ ನಿಲ್ಲಿಸಿತು.

‘ಕಾರ್ಖಾನೆ ಸರಿಯಾಗಿ ನಡೆದಿದ್ದರೆ ಈಜುಕೊಳವೂ ನಡೆಯುತ್ತಿತ್ತು. ಜೊತೆಗೆ ಈಜುಕೊಳದಲ್ಲಿ ಸೂಕ್ತ ಕೋಚ್ ಇರಲಿಲ್ಲ. ನಿರ್ವಹಣೆಯ ಕೊರತೆಯಿಂದ ಕೊಳದ ಬಾಗಿಲು ಮುಚ್ಚುವಂತಾಯಿತು. ಕೋಚ್‌ ಇದ್ದರೆ ಕೊಳ ನಿಲ್ಲುತ್ತಿರಲಿಲ್ಲ. ಹಣ ಕೊಟ್ಟು ಬಂದವರು ಮನಸ್ಸಿಗೆ ಬಂದಂತೆ ಈಜಿಕೊಂಡು ಹೋಗುತ್ತಿದ್ದರು. ಮಕ್ಕಳಿಗೆ ಬೇಸಿಗೆ ಶಿಬಿರ, ಈಜು ಟೂರ್ನ ಮೆಂಟ್‌ಗಳು ನಡೆಯುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಈಜುಕೊಳ ನಿಲ್ಲುವಂತಾಯಿತು’ ಎಂದು ಕಾರ್ಮಿಕ ರಾದ ವೆಂಕಟೇಶ್‌ ತಿಳಿಸಿದರು.

ಕೋಲ್ಮನ್‌ ಕನಸಿನ ಕ್ಯಾಂಪಸ್‌

ಬ್ರಿಟಿಷ್‌ ಸರ್ಕಾರದ ಅವಧಿಯಲ್ಲಿ ಲೆಸ್ಲಿ ಕೋಲ್ಮನ್‌ ಅವರು ಮೈಷುಗರ್‌ ಕಾರ್ಖಾನೆ ಸ್ಥಾಪನೆಗೆ ಕಾರಣಕರ್ತರಾದರು. ಅವರು ಕಾರ್ಖಾನೆಯನ್ನು ಮಾತ್ರ ಕಟ್ಟಲಿಲ್ಲ. ಕಾರ್ಖಾನೆ ಆವರಣದಲ್ಲಿ ಕಾರ್ಮಿಕರಿಗೆ ಅವಶ್ಯವಾಗಿ ಬೇಕಾದ ಮೂಲಸೌಲಭ್ಯಗಳನ್ನೂ ಒದಗಿಸಿದರು. ಕಾರ್ಖಾನೆ ಆವರಣದಲ್ಲಿ ಈಗಲೂ ಜೀವಂತವಾಗಿರುವ ಕಟ್ಟಡಗಳು ಕೋಲ್ಮನ್‌ ಅವರ ಕನಸಿನ ಕೂಸಾಗಿದ್ದವು. ಈಜುಕೊಳವೂ ಅವರ ಕಲ್ಪನೆಯಲ್ಲೇ ಅರಳಿತ್ತು. ‘ಈಜುಕೊಳವನ್ನು ಲಿಂಗೇಗೌಡ ಎಂಬ ಕಾರ್ಮಿಕರು ನಿರ್ವಹಣೆ ಮಾಡುತ್ತಿದ್ದರು. ಅವರು ಇದ್ದಾಗ ಕೊಳ ಬಹಳ ಚೆನ್ನಾಗಿ ನಡೆಯಿತು. ಆದರೆ ಅವರು ನಿವೃತ್ತರಾದ ನಂತರ ಕಾರ್ಖಾನೆ ಅಧಿಕಾರಿಗಳು ಬೇರೆ ಯಾವ ಕಾರ್ಮಿಕರನ್ನೂ ಈಜುಕೊಳ ನಿರ್ವಹಣೆಗೆ ನೇಮಕ ಮಾಡಲಿಲ್ಲ. ಹೀಗಾಗಿ ಕೊಳ ನಿಂತು ಹೋಯಿತು’ ಕಾರ್ಮಿಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.