ADVERTISEMENT

ಅಂತಿಮ ಆದೇಶಕ್ಕೆ ಬದ್ಧವಾಗಿರಲು ಆದೇಶ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST

ಬೆಂಗಳೂರು: ‘ಮೈಸೂರಿನ ಎಚ್‌.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದರಾಜು ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಜು ಪಡೆಯುವ ಯಾವುದೇ ಸೌಲಭ್ಯ ರಿಟ್‌ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಸಿದ್ದರಾಜು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ ಈ ಮಧ್ಯಂತರ ಆದೇಶ ನೀಡಿದೆ.

ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಜೂನ್‌ ಎರಡನೇ ವಾರಕ್ಕೆ ಮುಂದೂಡಿದೆ.

ADVERTISEMENT

ಪ್ರಕರಣವೇನು?: ‘ಹಿಂದುಳಿದ ವರ್ಗ ಬೆಸ್ತ (ಗಂಗಾ ಮತಸ್ಥರು) ಸಮುದಾಯಕ್ಕೆ ಸೇರಿರುವ ಸಿದ್ದರಾಜು, ಪರಿಶಿಷ್ಟ ಪಂಗಡದ ನಾಯಕ ಜಾತಿಗೆ ಸೇರಿರುವುದಾಗಿ ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ’ ಎಂದು ಆರೋಪಿಸಿ ಎಚ್‌.ಎಸ್.ಸುಭಾಷ್ ಎಂಬುವರು 2014ರಲ್ಲಿ ದೂರು ನೀಡಿದ್ದರು.

ಈ ದೂರನ್ನು ಪರಿಶೀಲನೆ ನಡೆಸಿದ್ದ ಮೈಸೂರು ನಾಗರಿಕ ಜಿಲ್ಲಾ ಜಾರಿ ನಿರ್ದೇಶನಾಲಯ ತನಿಖೆ ನಡೆಸಿ ಇದರ ವರದಿಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆ ಹೊಂದಿದ ಜಾತಿ ಪರಿಶೀಲನಾ ಸಮಿತಿಗೆ ನೀಡಿತ್ತು. ವಿಚಾರಣೆ ಬಳಿಕ ಸಮಿತಿಯು, ‘ಸಿದ್ದರಾಜು ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ’ ಎಂದು ನಿರ್ಧರಿಸಿ ಈ ಕುರಿತಂತೆ ಸಂಬಂಧಿಸಿದ ತಹಶೀಲ್ದಾರ್‌ಗೆ ಕ್ರಮ ಕೈಗೊಳ್ಳಲು ನಿರ್ದೇಶಿಸಿತ್ತು.

ಈ ನಿರ್ದೇಶನದ ಮೇರೆಗೆ ಮೈಸೂರು ತಹಶೀಲ್ದಾರ್ 2018ರ ಮಾರ್ಚ್‌ 15ರಂದು ಸಿದ್ದರಾಜು ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿ ಆದೇಶಿಸಿದ್ದರು. ಇದನ್ನು ಸಿದ್ದರಾಜು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ ತಹಶೀಲ್ದಾರ್‌ ಆದೇಶಕ್ಕೆ ತಡೆ ನೀಡಿ, ಸಿದ್ದರಾಜು ಅವರಿಗೆ ಹೊಸದಾಗಿ ಜಾತಿ ಪ್ರಮಾಣ ಪತ್ರ ಕೊಡಲು ನಿರ್ದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.