ADVERTISEMENT

ನಟಿ ಸಿಂಧೂ ಮೆನನ್ ಅಣ್ಣ ಸೆರೆ

ಬ್ಯಾಂಕ್ ಆಫ್ ಬರೋಡಾಗೆ ₹36.78 ಲಕ್ಷ ವಂಚನೆ ಆರೋಪ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 19:32 IST
Last Updated 10 ಮಾರ್ಚ್ 2018, 19:32 IST

ಬೆಂಗಳೂರು: ನಕಲಿ ದಾಖಲೆ ನೀಡಿ ಸಾಲ ಪಡೆದ ಆರೋ‍ಪದಡಿ ನಟಿ ಸಿಂಧೂ ಮೆನನ್ ಅಣ್ಣ ಕೆ.ವಿ.ಮನೋಜ್ ಹಾಗೂ ಅವರ ಸ್ನೇಹಿತೆ ಎಸ್.ನಾಗಶ್ರೀ ಅವರನ್ನು ಆರ್‌ಎಂಸಿ ಯಾರ್ಡ್‌ ಪೊಲೀಸರು ಬಂಧಿಸಿದ್ದಾರೆ.

ಮಲ್ಲೇಶ್ವರ ನಿವಾಸಿ ಮನೋಜ್, ಎಂ.ಎಸ್.ರಾಮಯ್ಯ ಆಸ್ಪತ್ರೆ ಬಳಿ ‘ಮಗ್‌ ಶಾಟ್’ ಎಂಬ ಪಬ್‌ ನಡೆಸುತ್ತಿದ್ದಾರೆ. ಅದೇ ಪಬ್‌ಗೆ ನಿತ್ಯವೂ ಬರುತ್ತಿದ್ದ ನಾಗಶ್ರೀ, ಮನೋಜ್‌ರನ್ನು ಪರಿಚಯ ಮಾಡಿಕೊಂಡಿದ್ದರು. ನಂತರ ಸ್ನೇಹವಾಗಿ ಅವರಿಬ್ಬರ ನಡುವೆ ಸಲುಗೆ ಸಹ ಬೆಳೆದಿತ್ತು.

ಅವರಿಬ್ಬರು ಸೇರಿಕೊಂಡು ‘ಜೂಬಿಲೆಂಟ್ ಮೋಟರ್ಸ್‌’ ಹೆಸರಿನ ಕಂಪನಿ ಹುಟ್ಟುಹಾಕಿದ್ದರು. ಅದಕ್ಕೆ ಯಾವುದೇ ಕಚೇರಿಯೂ ಇರಲಿಲ್ಲ. ನೋಂದಣಿ ಕಚೇರಿಯಲ್ಲೂ ಅದು ನೋಂದಣಿ ಆಗಿರಲಿಲ್ಲ. ಅದೇ ಕಂಪನಿ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಆರೋಪಿಗಳು, ಕಾರು ಖರೀದಿಸಲು ಸಾಲ ನೀಡುವಂತೆ ಯಶವಂತಪುರದ ಎಪಿಎಂಸಿ ಯಾರ್ಡ್‌ ಬಳಿಯ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ನಡೆಸಿದ್ದ ಬ್ಯಾಂಕ್‌ ಅಧಿಕಾರಿಗಳು, ₹36.78 ಲಕ್ಷ ಸಾಲ ಮಂಜೂರು ಮಾಡಿದ್ದರು.

ADVERTISEMENT

ನಕಲಿ ಖರೀದಿ ಪಟ್ಟಿ ಸಲ್ಲಿಕೆ: ಹಣ ಕೈ ಸೇರಿದನಂತರ, ಆರೋಪಿಗಳು ಯಾವುದೇ ಕಾರು ಖರೀದಿಸಿರಲಿಲ್ಲ. ಸಾಲದ ಕಂತನ್ನೂ ತುಂಬುತ್ತಿರಲಿಲ್ಲ. ಆ ಬಗ್ಗೆ ತನಿಖೆ ನಡೆಸಿದ್ದ ಅಧಿಕಾರಿಗಳು, ಅವರಿಬ್ಬರು ನಕಲಿ ದಾಖಲೆ ಕೊಟ್ಟು ಸಾಲ ಪಡೆದ ಸಂಗತಿಯನ್ನು ಪತ್ತೆ ಹಚ್ಚಿದ್ದರು. ವಂಚನೆ ಆರೋಪದಡಿ ಮನೋಜ್, ನಾಗಶ್ರೀ ಹಾಗೂ ವಂಚನೆಗೆ ಸಹಕರಿಸಿದ್ದ ಆರೋಪದಡಿ ಸಿಂಧೂ ಮೆನನ್ ಮತ್ತು ಅವರ ಅಕ್ಕ ಸುಧಾ ರಾಜಶೇಖರ್ ವಿರುದ್ಧ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಎನ್.ರಮೇಶ್, ಆರ್‌ಎಂಸಿ ಯಾರ್ಡ್‌ ಠಾಣೆಗೆ ದೂರು ನೀಡಿದ್ದರು.

‘ಆಡಿ ಕಾರು ಖರೀದಿಸುವುದಾಗಿ ಆರೋಪಿಗಳು ಹೇಳಿದ್ದರು. ಕಾರಿನ ದರ ಪಟ್ಟಿಯನ್ನು ನೀಡುವಂತೆ ಬ್ಯಾಂಕ್‌ ಅಧಿಕಾರಿಗಳು ಕೇಳಿದ್ದರು. ಆಗ ಆರೋಪಿಗಳು, ಆಡಿ ಕಂಪನಿಯ ಹೆಸರಿನಲ್ಲಿ ನಕಲಿ ಪಟ್ಟಿ ಸೃಷ್ಟಿಸಿ ಬ್ಯಾಂಕಿಗೆ ನೀಡಿದ್ದರು’ ಎಂದು  ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಂಪನಿಯ ವಿಳಾಸ ಪರಿಶೀಲನೆಗೆ ಬ್ಯಾಂಕ್‌ ಅಧಿಕಾರಿಗಳು ಹೋದಾಗ, ಎಂ.ಜಿ.ರಸ್ತೆ ಬಳಿಯ ಯಾವುದೋ ಕಟ್ಟಡ ತೋರಿಸಿ ತಮ್ಮದೇ ಕಚೇರಿ ಎಂದು ಹೇಳಿದ್ದರು. ಅದು ನಿಜವೆಂದು ತಿಳಿದು ಅಧಿಕಾರಿಗಳು ಸಾಲ ಮಂಜೂರಾತಿಗೆ ಶಿಫಾರಸು ಮಾಡಿದ್ದರು’ ಎಂದು ಅವರು ಮಾಹಿತಿ ನೀಡಿದರು.

‘ಕಾರಿನ ಚಿತ್ರ, ತೆರಿಗೆ ರಶೀದಿ ಹಾಗೂ ಕಾರಿನ ಮೂಲ ದಾಖಲೆಗಳನ್ನು ಬ್ಯಾಂಕಿಗೆ ನೀಡಬೇಕು ಎಂದು ಸಿಬ್ಬಂದಿ ಆರೋಪಿಗೆ ಸೂಚಿಸಿದ್ದರು. ಆದರೆ, ಅವುಗಳನ್ನು ನೀಡದೆ ಸತಾಯಿಸುತ್ತಿದ್ದರು. ಆ ಬಗ್ಗೆ ಕೇಳಿದಾಗಲೆಲ್ಲ ಒಂದೊಂದು ಕಥೆ ಕಟ್ಟಿ ನುಣುಚಿಕೊಳ್ಳುತ್ತಿದ್ದರು’ ಎಂದು ವಿವರಿಸಿದರು.

**

ಸಿಂಧೂ ಖಾತೆಗೆ ₹15 ಲಕ್ಷ ವರ್ಗಾವಣೆ

‘ಕಾರು ಖರೀದಿಸುವುದಾಗಿ ಮನೋಜ್‌, ನಟಿ ಸಿಂಧೂ ಬಳಿ ₹10 ಲಕ್ಷ ಪಡೆದಿದ್ದರು. ಬ್ಯಾಂಕ್‌ನಿಂದ ಸಾಲ ಪಡೆದ ಹಣದಲ್ಲೇ ಆರೋಪಿ, ₹15 ಲಕ್ಷವನ್ನು ಸಿಂಧೂ ಖಾತೆಗೆ ವರ್ಗಾವಣೆ ಮಾಡಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ನಾಗಶ್ರೀ ಅವರಿಗೆ ₹ 15 ಲಕ್ಷ, ಅಕ್ಕ ಸುಧಾ ಅವರಿಗೆ ₹1.78 ಲಕ್ಷ ನೀಡಿದ್ದೇನೆ. ₹ 5 ಲಕ್ಷವನ್ನು ಸ್ವಂತ ಖರ್ಚಿಗೆ ಬಳಸಿಕೊಂಡಿದ್ದೇನೆ’ ಎಂದು ಆರೋಪಿ ಹೇಳಿಕೊಂಡಿದ್ದಾನೆ’ ‘ಸಿಂಧೂ ಮೆನನ್ ಸದ್ಯ ಬ್ರಿಟನ್‌ನಲ್ಲಿ ಇದ್ದಾರೆ. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಿದ್ದೇವೆ’ ಎಂದರು.

**

ವಿಜಯಾ ಬ್ಯಾಂಕಿಗೆ ₹ 95 ಲಕ್ಷ ವಂಚನೆ

‘ಮನೋಜ್ ಹಾಗೂ ನಾಗಶ್ರೀ, ನಕಲಿ ದಾಖಲೆಗಳನ್ನು ನೀಡಿ ಇನ್‌ಫೆಂಟ್ರಿ ರಸ್ತೆ ಬಳಿ ಇರುವ ವಿಜಯಾ ಬ್ಯಾಂಕಿಗೆ ₹95 ಲಕ್ಷ ವಂಚನೆ ಮಾಡಿರುವ ಬಗ್ಗೆಯೂ ಮಾಹಿತಿ ಇದೆ’ ಎಂದು ಪೊಲೀಸರು ತಿಳಿಸಿದರು.

‘ನವನೀತ್ ಮೋಟರ್ಸ್‌ ವರ್ಕ್ಸ್‌’ ಎಂಬ ಕಂಪನಿ ಹೊಂದಿದ್ದ ಮನೋಜ್, ‘ನವನೀತ್ ಮೋಟರ್ಸ್‌ ಕಂಪನಿ (ಬಿಎಂಡಬ್ಲ್ಯು ಕಾರು ಮಾರಾಟ ಕಂಪನಿ)’ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಅವುಗಳನ್ನು ವಿಜಯಾ ಬ್ಯಾಂಕ್‌ಗೆ ಸಲ್ಲಿಸಿ ವ್ಯಾಪಾರ ಉದ್ದೇಶಕ್ಕೆ ₹60 ಲಕ್ಷ ಹಾಗೂ ಬಿಎಂಡಬ್ಲ್ಯು ಕಾರು ಖರೀದಿಗೆ ₹ 35 ಲಕ್ಷ ಸಾಲ ಪಡೆದಿದ್ದರು. ಆ ಬಗ್ಗೆಯೂ ದೂರು ದಾಖಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.