ADVERTISEMENT

ನಿಯಮ ಉಲ್ಲಂಘನೆ ಪತ್ತೆಗೆ ಹೊಸ ವಿಧಾನ

ಸಂಚಾರ ಉಲ್ಲಂಘಿಸಿದರೆ ದಂಡ: ಚಳ್ಳಕೆರೆ ಪಿಎಸ್ಐ ಸತೀಶ್ ನಾಯ್ಕ ಎಚ್ಚರಷ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 11:06 IST
Last Updated 18 ಜೂನ್ 2018, 11:06 IST
ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಭಾನುವಾರ ನಡೆದ ಸಂಚಾರ ನಿಯಮ ಉಲ್ಲಂಘನೆ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್ಐ ಸತೀಶ್ ನಾಯಕ ಮಾಹಿತಿ ನೀಡಿದರು.
ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಭಾನುವಾರ ನಡೆದ ಸಂಚಾರ ನಿಯಮ ಉಲ್ಲಂಘನೆ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್ಐ ಸತೀಶ್ ನಾಯಕ ಮಾಹಿತಿ ನೀಡಿದರು.   

ಚಳ್ಳಕೆರೆ: ಸಂಚಾರ ನಿಯಮ ಉಲ್ಲಂಘನೆ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಿಎಸ್ಐ ಸತೀಶ್ ನಾಯ್ಕ ತಿಳಿಸಿದರು.

ನಗರದ ಪೊಲೀಸ್ ಠಾಣೆಯಲ್ಲಿ ಭಾನುವಾರ ನಡೆದ ಸಂಚಾರ ನಿಯಮ ಉಲ್ಲಂಘನೆ ತಡೆ ಜಾಗೃತಿ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

‘ದ್ವಿಚಕ್ರ ವಾಹನ ಸವಾರರು ಪೊಲೀಸರ ಕಣ್ತಪ್ಪಿಸಿ ನಿಯಮಗಳನ್ನು ಉಲ್ಲಂಘನೆ ಮಾಡುವ ಕೆಲಸಕ್ಕೆ ಇನ್ನು ಮುಂದೆ ಕಡಿವಾಣ ಬೀಳಲಿದೆ. ಹೆಲ್ಮೆಟ್ ಧರಿಸದಿರುವುದು, ಮೂವರು ಬೈಕ್ ಸವಾರಿ ಮಾಡುವುದು ಸೇರಿದಂತೆ ಹಲವು ಉಲ್ಲಂಘನೆಗಳಲ್ಲಿ ಭಾಗಿಯಾಗುವ ವಾಹನ ಮಾಲೀಕರ ಪೂರ್ಣ ಮಾಹಿತಿಯನ್ನು ಪಡೆಯುವ ನೂತನ ಯಂತ್ರ ಪೊಲೀಸ್ ಇಲಾಖೆಯಲ್ಲಿ ಬಳಕೆಯಾಗುತ್ತಿದೆ’ ಎಂದು ತಿಳಿಸಿದರು.

‘ಸ್ಮಾರ್ಟ್ ಫಂಕ್ಷನ್ ಡಿವೈಸ್’ ಯಂತ್ರದಿಂದ ಪ್ರತಿ ದ್ವಿಚಕ್ರ ವಾಹನದ ಪರಿಪೂರ್ಣ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಲು ಅವಕಾಶವಿದೆ. ಬೈಕ್ ಸವಾರರು ಅತಿ ವೇಗದ ಚಾಲನೆ ಮಾಡಿ, ಸಂಚಾರ ನಿಯಮ ಉಲ್ಲಂಘಿಸಿ ತಪ್ಪಿಸಿಕೊಳ್ಳುವಂತಿಲ್ಲ. ನಿಯಮ ಉಲ್ಲಂಘಿಸಿದವರ ಬೈಕ್ ಪರವಾನಗಿ ನಂಬರ್ ಯಂತ್ರದಲ್ಲಿ ನಮೂದಿಸಿದ ಕೂಡಲೇ ಬೈಕ್ ಮಾಲೀಕರ ಪರಿಪೂರ್ಣ ವಿವರ ಪಡೆಯಬಹುದಾಗಿದೆ’ ಎಂದರು.

‘ದ್ವಿಚಕ್ರ ವಾಹನ ಸವಾರರ ವಿಳಾಸ ಸೇರಿ ಎಲ್ಲ ವಿವರಗಳು ಇದರಲ್ಲಿ ಲಭ್ಯವಾಗಲಿದ್ದು, ನಂತರ ಸ್ಥಳದಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಕೃತ್ಯವನ್ನು ದಾಖಲಿಸಿದರೆ ದಂಡ ಶುಲ್ಕವಿರುವ ರಶೀದಿ ಹೊರಬರುತ್ತದೆ. ಇದರಿಂದ ಇಲಾಖೆಯಲ್ಲಿ ಪಾರದರ್ಶಕ ಕೆಲಸ ನಿರ್ವಹಿಸಲು ಅನುಕೂಲ ವಾಗುತ್ತದೆ. ಜತೆಗೆ ವಾಹನ ಸವಾರರಲ್ಲಿ ಸಹ ಜಾಗೃತಿ ಮೂಡಿಸಿದಂತಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.