ADVERTISEMENT

ಪ್ರಶ್ನೋತ್ತರ

ಯು.ಪಿ.ಪುರಾಣಿಕ್
Published 15 ಮೇ 2018, 19:30 IST
Last Updated 15 ಮೇ 2018, 19:30 IST
ಯು.ಪಿ. ಪುರಾಣಿಕ್
ಯು.ಪಿ. ಪುರಾಣಿಕ್   

ಪಂಚಾಕ್ಷರಿ. ತೋರಣಗಲ್

ನಾನು ನನ್ನ ಗೆಳೆಯನಿಗೆ ₹ 2 ಲಕ್ಷ  ಸಾಲವಾಗಿ ಕೊಟ್ಟಿದ್ದೆ. ON LINEನಲ್ಲಿ ಹಣ ವರ್ಗಾಯಿಸಿದ್ದೆ. ಆತ ₹ 1 ಲಕ್ಷದಂತೆ ಎರಡು ಚೆಕ್ ಕೊಟ್ಟಿದ್ದಾನೆ. ದುರ್ದೈವವಶಾತ್ ಆತ ಪ್ರಾಣ  ಕಳೆದುಕೊಂಡ. ಆತನಿಗೆ ನಮ್ಮ ಆಫೀಸಿನಿಂದ ₹ 10 ಲಕ್ಷ ಬರಲಿದೆ. ಈ ಹಣ ಆತನ ತಾಯಿಗೆ ಕೊಡುತ್ತಾರೆ. ನಾನು ಕಾನೂನಿನಂತೆ ವ್ಯಾಜ್ಯ ಹೂಡಬಹುದೇ ತಿಳಿಸಿರಿ.

ಉತ್ತರ: ನೀವು ON LINE ನಲ್ಲಿ ನಿಮ್ಮ ಗೆಳೆಯನಿಗೆ ₹ 2 ಲಕ್ಷ ವರ್ಗಾವಣೆ ಮಾಡಿರುವುದಕ್ಕೆ ಪುರಾವೆ ಪಡೆದು, ನೀವು ನಿಮ್ಮ ಗೆಳೆಯನಿಂದ ಪಡೆದ ಚೆಕ್ ನ್ಯಾಯಾಲಯದ ಮುಖಾಂತರ, ವಾರಸುದಾರರಿಂದ ವಸೂಲಾತಿ ಮಾಡಲು ಅವಕಾಶವಿದೆ.

ADVERTISEMENT

ಆದರೆ ಈ ಮಾರ್ಗ ಎಷ್ಟರ ಮಟ್ಟಿಗೆ ಯಶಸ್ಸು ಆಗುತ್ತದೆ ಎಂದು ಹೇಳಲಾರೆ. ಇದೇ ವೇಳೆ ನಿಮ್ಮ ಆಫೀಸಿನವರು ನಿಮ್ಮ ಗೆಳೆಯನ ಮರಣದ ಕಾರಣ, ಆತನ ತಾಯಿಗೆ ಕೊಡುವ ₹ 10 ಲಕ್ಷದಲ್ಲಿ ನಿಮಗೆ ₹ 2 ಲಕ್ಷ ಕೊಡಲು ಅರ್ಜಿ ಸಲ್ಲಿಸುವಂತಿಲ್ಲ. ನಿಮ್ಮ ಖಾಸಗಿ ವ್ಯವಹಾರಕ್ಕೂ, ಆಫೀಸಿಗೂ ಯಾವುದೇ ಸಂಬಂಧ ಇರುವುದಿಲ್ಲ.

**

ಪಿ.ಬಿ. ಮಧು, ಚಿತ್ರದುರ್ಗ

ನಾನು ಸರ್ಕಾರಿ ನೌಕರ. ವಾರ್ಷಿಕವಾಗಿ ₹ 5,16,060 ಸಂಬಳ ಬರುತ್ತದೆ. ಇದರಲ್ಲಿ KGID, LIC, PPF ಹಾಗೂ SBI, LIFE ಹೀಗೆ ವಾರ್ಷಿಕವಾಗಿ ₹ 2,57,020 ಕಟ್ಟುತ್ತೇನೆ. ನನ್ನ ಹೆಸರಿಗೆ 1.30 ಎಕರೆ ತೋಟ, ಒಂದು ಎಕರೆ ಹೊಲ ಇದ್ದು, ವಾರ್ಷಿಕ ₹ 4 ಲಕ್ಷ ಆದಾಯವಿದೆ. ನಾನು ತೆರಿಗೆ ಕೊಡಬೇಕಾಗುತ್ತದೆಯೇ ತಿಳಿಸಿರಿ.

ಉತ್ತರ: ನೀವು ಸಂಬಳದಲ್ಲಿ ನಿಮಗಿರುವ ಮಿತಿ ₹ 2.50 ಲಕ್ಷ ಹಾಗೂ KGID, LIC, PPF – SBI, LIFEಗೆ ಕಟ್ಟುವ ಮೊತ್ತದಲ್ಲಿ ಗರಿಷ್ಠ ₹ 1.50 ಲಕ್ಷ (ಸೆಕ್ಷನ್ 80C) ಕಳೆದು ಉಳಿದ ಹಣಕ್ಕೆ ತೆರಿಗೆ ಕೊಡಬೇಕಾಗುತ್ತದೆ ಹಾಗೂ ರಿಟರ್ನ್ ತುಂಬಬೇಕಾಗುತ್ತದೆ.

ಇದೇ ವೇಳೆ ನೀವು ಕೃಷಿ ಉತ್ಪನ್ನದಿಂದ ಪಡೆಯುವ ಹಣ (ಇಲ್ಲಿ ಮಿತಿ ಇಲ್ಲ) ಆದಾಯ ತೆರಿಗೆ ಸೆಕ್ಷನ್ 10 (1) ಆಧಾರದ ಮೇಲೆ ಸಂಪೂರ್ಣ ವಿನಾಯಿತಿ ಪಡೆಯಬಹುದು. ನೀವು ಸಂಬಳದಲ್ಲಿ ಸಂಪೂರ್ಣ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಿಲ್ಲ. ಇಲ್ಲಿ ವಿವರಿಸಿದಂತೆ ತೆರಿಗೆ ಪಾವತಿಸಿ ಜುಲೈ 31ರೊಳಗೆ ತೆರಿಗೆ ರಿಟರ್ನ್ ತುಂಬಿ ನಿಶ್ಚಿಂತರಾಗಿರಿ.

**

ಸುಬ್ರಮಣ್ಯರಾಜು, ಬೆಂಗಳೂರು

ನಾನು ನಿವೃತ್ತ ನೌಕರ. ತಿಂಗಳ ಪಿಂಚಣಿ ₹ 53,000. ನನ್ನ ಮಗಳು Software Engineer. ಅವಳು M.S. ವಿದೇಶದಲ್ಲಿ ಮಾಡಬೇಕೆಂದಿದ್ದಾಳೆ. ಫೀಸು ಸುಮಾರು ₹ 26 ಲಕ್ಷ. ಉಳಿದ ಖರ್ಚು ಎಷ್ಟು ಬರಬಹುದು ಎಂಬುದು ತಿಳಿದಿಲ್ಲ. ಬ್ಯಾಂಕಿನಲ್ಲಿ ಫೀಸು ತುಂಬುವಷ್ಟು ಮಾತ್ರ ಸಾಲ ದೊರೆಯುತ್ತಿದೆಯೇ, ಉಳಿದ ಖರ್ಚಿಗೂ ಕೊಡಬಹುದೇ ತಿಳಿಸಿರಿ.

ಸಾಲದ ಬಡ್ಡಿ ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತಿದೆಯೇ, ಏನು ಖಾತರಿ ಕೊಡಬೇಕು (ನಿವೇಶನ, ಕಟ್ಟಿದ ಮನೆ) EMI ಎಷ್ಟು ಬರಬಹುದು ಹಾಗೂ ಇನ್ನೂ ಈ ವಿಚಾರದಲ್ಲಿ ತಿಳಿದುಕೊಳ್ಳುವ ಮಾಹಿತಿ ಇದ್ದರೆ ತಿಳಿಸಿರಿ. ನಾನು ನಿಮ್ಮ ‍ಪ್ರಶ್ನೋತ್ತರ ತಪ್ಪದೇ ಓದುತ್ತೇನೆ.

ಉತ್ತರ: ವಿದೇಶದಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ಬಹಳಷ್ಟು ಬ್ಯಾಂಕುಗಳು ಸಾಲ ಕೊಡುತ್ತವೆ. ಇವುಗಳಲ್ಲಿ State Bank Of India ಮುಂಚೂಣಿಯಲ್ಲಿದೆ.

ನಿಮ್ಮ ಮಗಳ M.S. ಅಥವಾ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಫೀಸು, ಹಾಸ್ಟೆಲ್ ಖರ್ಚು, ಪುಸ್ತಕ, ಉಪಕರಣ ಹಾಗೂ ವಿಮಾನದ ಖರ್ಚು ಎಲ್ಲವೂ ಈ ಶಿಕ್ಷಣ ಸಾಲದಲ್ಲಿ ಅಡಕವಾಗಿದೆ (It is a Package) ಬಡ್ಡಿ ದರ ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ. ಪ್ರಾಯಶಃ ಶೇ 10.5 ಬಡ್ಡಿದರ ಇರಬಹುದು.

ಮರುಪಾವತಿಯು ಕೋರ್ಸು ಮುಗಿದ ಆರು ತಿಂಗಳು ಅಥವಾ ಕೆಲಸಕ್ಕೆ ಸೇರಿದ ತಕ್ಷಣ ಪ್ರಾರಂಭವಾಗುತ್ತದೆ. EMI ಸಾಲದ ಮೊತ್ತಕ್ಕನುಗುಣವಾಗಿರುತ್ತದೆ. ಸಾಲ ತೀರಿಸಲು 80–120 ತಿಂಗಳು ಅವಧಿ ಸಿಗಬಹುದು. ಆಧಾರಕ್ಕೆ ಪಟ್ಟಣದ ಸ್ಥಿರ ಆಸ್ತಿ (urban property) ಕೊಡಬೇಕಾಗುತ್ತದೆ. ನೀವು ಸಾಲಕ್ಕೆ ಜಾಮೀನು ಹಾಕಬೇಕಾಗುತ್ತದೆ. ಸಾಲದ ಮೊತ್ತಕ್ಕೆ Term Insurance ನಿಮ್ಮ ಮಗಳ ಹೆಸರಿನಲ್ಲಿ ಮಾಡಬೇಕಾಗುತ್ತದೆ. ನಿಮ್ಮ ಮಗಳಿಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

**

ಡಿ.ಎಂ. ದಕ್ಷಿಣಾ ಮೂರ್ತಿ, ಬೆಂಗಳೂರು

ಬ್ಯಾಂಕಿನಲ್ಲಿ ವೈಯಕ್ತಿಕ ಸಾಲ ಪಡೆದು, ನಿವೇಶನ ಖರೀದಿಸಿ, ನಂತರ ಈ ನಿವೇಶನಕ್ಕಿಂತ ಮೊದಲು ಖರೀದಿಸಿದ ನಿವೇಶನವನ್ನು ಮಾರಿಬಂದ ಹಣದಿಂದ ಮೇಲೆ ತಿಳಿಸಿರುವ ಸಾಲವನ್ನು ಆರು ತಿಂಗಳೊಳಗೆ ತೀರಿಸಿದರೂ, ಕ್ಯಾಪಿಟಲ್‌ಗೇನ್ ಟ್ಯಾಕ್ಸ್ ಬರುತ್ತದೆಯೇ?

ಉತ್ತರ: ನಿಮ್ಮ ಪ್ರಶ್ನೆಯು, ಅಲ್ಪಾವಧಿ ಲಾಭಕ್ಕೂ ಬಂಡವಾಳವೃದ್ಧಿ ತೆರಿಗೆ ಇದೆಯೇ ಎಂಬಂತಿದೆ. ಏನೇ ಇರಲಿ ಸ್ಥಿರ ಆಸ್ತಿ ಕೊಂಡು ಮಾರಾಟ ಮಾಡಿ ಬರುವ ಲಾಭಕ್ಕೆ ಅಲ್ಪಾವಧಿ ಅಥವಾ ದೀರ್ಘಾವಧಿ ಎನ್ನುವ ವಿಚಾರವಿಲ್ಲದೆ ಕ್ಯಾಪಿಟಲ್‌ಗೇನ್ ಟ್ಯಾಕ್ಸ್ ಬರುತ್ತದೆ. ಇಲ್ಲಿ ಸಾಲ ಪಡೆಯುವುದಾಗಲಿ, ತೀರಿಸುವುದಾಗಲಿ ಇವುಗಳನ್ನು ಪರಿಗಣಿಸುವುದಿಲ್ಲ.

**

ನಾರಾಯಣ ಸ್ವಾಮಿ, ಶಿವಮೊಗ್ಗ

ಸೆಕ್ಷನ್ 80C ಅಡಿಯಲ್ಲಿ ಗರಿಷ್ಠ  ₹ 1.50 ಲಕ್ಷ ಹೂಡಿಕೆ ಮಾಡದೆ ಸೆಕ್ಷನ್ 80CCD (1B) ಅಡಿಯಲ್ಲಿ ಪ್ರತ್ಯೇಕವಾಗಿ ₹ 50,000 ತುಂಬಿ ಇಲ್ಲಿ ದೊರೆಯುವ ವಿನಾಯಿತಿ ಪಡೆಯಬಹುದೇ?

ಉತ್ತರ: ಸೆಕ್ಷನ್ 80C ಅಡಿಯಲ್ಲಿ ಗರಿಷ್ಠ ₹ 1.50 ಲಕ್ಷ ಹೂಡದೇ ಕೂಡಾ ಸೆಕ್ಷನ್ 80CCD (1B) ಆಧಾರದ ಮೇಲೆ ಪ್ರತ್ಯೇಕವಾಗಿ ಹಣ ಹೂಡಿ ತೆರಿಗೆ ವಿನಾಯಿತಿ ಪಡೆಯಬಹುದು. 80CCD (1B) ನ್ಯಾಷನಲ್ ಪೆನ್ಷನ್ ಸ್ಕೀಮ್ ಆಗಿದ್ದು, ಪಿಂಚಣಿ ಅವಕಾಶದಿಂದ ವಂಚಿತರಾದವರಿಗೆ ಜೀವನದ ಸಂಜೆಯಲ್ಲಿ ಎಷ್ಟಾದರಷ್ಟು ಆದಾಯ ಬರಲಿ ಎಂದು ಕೇಂದ್ರ ಸರ್ಕಾರವು ಈ ಯೋಜನೆ ಜಾರಿಗೆ ತಂದಿದೆ. ಜೊತೆಗೆ ತೆರಿಗೆ ವಿನಾಯಿತಿ ಕೂಡಾ ಇರುವುದರಿಂದ ಯುವ ಜನಾಂಗಕ್ಕೆ ಇದೊಂದು ಉತ್ತಮ ಅವಕಾಶ.

**

ರವಿಕುಮಾರ್ ಪಾಟೀಲ್

ನಿಮ್ಮ ಸಲಹೆಯಿಂದ ಪ್ರೇರಿತನಾಗಿ ₹ 8,000 ಆರ್.ಡಿ. ಮಾಡಿರುತ್ತೇನೆ. ಒಂದು ವರ್ಷ ಕಳೆದು ₹ 99,600 ಬಂದಿದೆ. ಸದ್ಯಕ್ಕೆ ಈ ದುಡ್ಡಿನ ಅವಶ್ಯಕತೆ ಇಲ್ಲ. ಹೇಗೆ ಲಾಭದಾಯಕವಾದ ಹೂಡಿಕೆ ಮಾಡಬಹುದು?

ಉತ್ತರ: ನೀವು ₹ 8000 ಆರ್.ಡಿ. ಒಂದು ವರ್ಷಕ್ಕೆ ಮಾಡಿ ಸಮೀಪದಲ್ಲಿ ₹ 1 ಲಕ್ಷ ಪಡೆದಿರುವುದು ನನಗೆ ಖುಷಿ ತಂದಿದೆ. ನಿಮ್ಮ ಹಾಗೆ ನಮ್ಮ ಯುವ ಜನಾಂಗ ಉಳಿತಾಯದ ಪಾಠ ಕಲಿಯಬೇಕು, ಜೀವನದ ಕೊನೆಯಲ್ಲಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಬಾರದು ಎನ್ನುವುದೇ ಈ ಪ್ರಶ್ನೋತ್ತರದ ಮುಖ್ಯ ಉದ್ದೇಶ. ನಿಮಗೆ ಅಭಿನಂದನೆಗಳು.

ಈಗ ಬಂದಿರುವ ₹ 99,600ಗೆ ₹ 400 ಸೇರಿಸಿ ಅದೇ ಬ್ಯಾಂಕಿನಲ್ಲಿ ಕನಿಷ್ಠ ಎರಡು ವರ್ಷಗಳಲ್ಲಿ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿರಿ ಹಾಗೂ ಸಾಧ್ಯವಾದರೆ ₹ 10,000 ಆರ್.ಡಿ. ಎರಡು ವರ್ಷಗಳಿಗೆ ಮಾಡಿರಿ. ಇವೆರಡರಿಂದ ₹ 3.5 ಲಕ್ಷಕ್ಕೂ ಹೆಚ್ಚಿನ ಮೊತ್ತ ಬರೇ ಎರಡು ವರ್ಷಗಳಲ್ಲಿ ಪಡೆಯಬಹುದು. ಉಳಿತಾಯದ ಗೀಳು, ತುಂಬಿದ ಬಾಳು ಎನ್ನುವುದನ್ನು ಮರೆಯುವಂತಿಲ್ಲ. ನಿಮಗೆ ಶುಭ ಕೋರುತ್ತೇನೆ. ಇದೇ ವೇಳೆ ಊಹಾಪೋಹಗಳಿಂದ ಕೂಡಿದ (Speculative) ಹೂಡಿಕೆಯಲ್ಲಿ ಇರಿಸಿ ಅಥವಾ ಅಭದ್ರವಾದ ಹೂಡಿಕೆಯಲ್ಲಿ ತೊಡಗಿಸಿ ಕಷ್ಟಪಟ್ಟು ಕೂಡಿಟ್ಟ ಹಣ ಕಳೆದುಕೊಳ್ಳಬೇಡಿ.

**

ಪ್ರಶಾಂತ್. ಕೆ.ಎಸ್. ದುಬೈ (UAE)

ನಾನು ಮೂಲತಃ ಶಿವಮೊಗ್ಗದವನು, ಸದ್ಯ ದುಬೈಯಲ್ಲಿ ಕೆಲಸ. ಸಿವಿಲ್ ಎಂಜಿನಿಯರ್. ವೇತನವು ಭಾರತದ ರೂಪಾಯಿ ಲೆಕ್ಕದಲ್ಲಿ  ₹ 61,000 ಸಿಗುತ್ತದೆ. ಜೀವನ ಆನಂದ ವಾರ್ಷಿಕ ₹ 7000 ಬಿಟ್ಟು ಏನೂ ಉಳಿಸಲಿಲ್ಲ. ಇಲ್ಲಿಗೆ ಬಂದು ಎಂಟು ತಿಂಗಳಾಗಿದೆ. ನನ್ನ ಖರ್ಚು ಕಳೆದು ₹ 20,000 ಉಳಿಸಲು ಉಪಾಯ ತಿಳಿಸಿರಿ, ನಾನು ಅವಿವಾಹಿತ.

ಉತ್ತರ: ಪರರಾಷ್ಟ್ರದಲ್ಲಿದ್ದು ಇಂಟರ್‌ನೆಟ್‌ ಮುಖಾಂತರ ಪ್ರಜಾವಾಣಿ ಓದಿ ಪ್ರಶ್ನೆ ಕೇಳಿರುವುದಕ್ಕೆ ಧನ್ಯವಾದಗಳು. ನೀವು ಭಾರತದಲ್ಲಿ (ಶಿವಮೊಗ್ಗದಲ್ಲಿ) SBI ನಲ್ಲಿ NRE A/C ಪ್ರಾರಂಭಿಸಿ ಈ ಖಾತೆಗೆ ದುಬೈಯಿಂದ ₹ 20,000 ಕಳಿಸಿರಿ ಹಾಗೂ ₹ 20,000 ನಿಮ್ಮ ಹೆಸರಿನಲ್ಲಿ ಒಂದು ವರ್ಷದ ಅವಧಿ ಠೇವಣಿ ಮಾಡಲು ತಿಳಿಸಿರಿ. ಈ ಪ್ರತಿಕ್ರಿಯೆ ನಿರಂತರವಾಗಿರಲಿ. ಮದುವೆ ಖರ್ಚಿಗೆ ಬೇಕಾದಲ್ಲಿ ಈ ಹಣ ಪಡೆಯರಿ. ಅನಿವಾಸಿ ಭಾರತೀಯರಿಗೆ, ಭಾರತದಲ್ಲಿ ಠೇವಣಿ ಮೇಲೆ ಬರುವ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ.

**

ಲಕ್ಷ್ಮೀಕಾಂತ್ ಆಚಾರ್, ರಾಯಚೂರು

ಜಮೀನು ಮಾರಾಟ ಮಾಡಿ ಬಂದ ಹಣ ₹ 30 ಲಕ್ಷವನ್ನು ವಿಪ್ರ ಸೌಹಾ‌ರ್ದ ಸೊಸೈಟಿಯಲ್ಲಿ ಠೇವಣಿಯಾಗಿ ಇರಿಸಿದ್ದೇನೆ. ಇಲ್ಲಿ ಬರುವ ಬಡ್ಡಿಯಿಂದ ವಿಶ್ರಾಂತ ಜೀವನ ನಡೆಸುತ್ತಿದ್ದೇನೆ. ನಾನು ಇದುವರೆಗೆ ಏನೂ ತೆರಿಗೆ ಕಟ್ಟಲಿಲ್ಲ. ನಾನು ಠೇವಣಿ ಅವಧಿ ಮುಗಿಯುವಾಗ ತೆರಿಗೆ ಕಟ್ಟಬೇಕಾ ಹಾಗೂ  ಇಲ್ಲಿವರೆಗೆ ತೆರಿಗೆ ಕಟ್ಟದಿರುವುದಕ್ಕೆ ದಂಡ ವಿಧಿಸುತ್ತಾರಾ. ಆದಾಯವನ್ನು ಘೋಷಿಸದಿರುವುದು ಅಪರಾಧವೆ. ಇದ್ದರೆ ಇದಕ್ಕೆ ದಂಡ ಅಥವಾ ಶಿಕ್ಷೆ ಏನು?

ಉತ್ತರ: ನಿಮ್ಮ ಜಮೀನು ಕೃಷಿ ಜಮೀನಾದಲ್ಲಿ ಜಮೀನು ಮಾರಾಟ ಮಾಡಿ ಬಂದ ಹಣ ಅಥವಾ ಲಾಭಕ್ಕೆ ಸೆಕ್ಷನ್ 48 ಕ್ಯಾಪಿಟನ್ ಗೇನ್ ಟ್ಯಾಕ್ಸ್‌ನಿಂದ ಸಂಪೂರ್ಣ ವಿನಾಯಿತಿ ಇದೆ. ನೀವು ಹಿರಿಯ ನಾಗರಿಕರೆಂದು ಭಾವಿಸುತ್ತೇನೆ.

ನಿಮಗೆ ವಾರ್ಷಿಕ ಠೇವಣಿ ಮೇಲಿನ ಬಡ್ಡಿ ₹ 3 ಲಕ್ಷಗಳ ತನಕ (ಇತರರಿಗೆ ₹ 2.50 ಲಕ್ಷ ತನಕ) ಆದಾಯ ತೆರಿಗೆ ಬರುವುದಿಲ್ಲ ಹಾಗೂ ಆದಾಯ ಘೋಷಿಸುವ (Return File) ಅವಶ್ಯವಿಲ್ಲ. ಒಟ್ಟಿನಲ್ಲಿ ನೀವು ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ಧೈರ್ಯವಾಗಿ ನಿಶ್ಚಿಂತೆಯಿಂದ ತೆರಿಗೆ ಭಯದಿಂದ ಒಮ್ಮೆಲೇ ಹೊರಬಂದು ಸಾತ್ವಿಕ ಜೀವನ ನಡೆಸಿರಿ.

**

ಕೆ. ಕಿಟ್ಟಿ, ಸಾಗರ

ಪ್ರಜಾವಾಣಿಯಲ್ಲಿ ನಿಮ್ಮ ಸಲಹೆ ಓದುತ್ತಿದ್ದು, ನನಗೆ ಕೂಡಾ ₹ 80,000 ಒಂದೇ ಕಂತಿನಲ್ಲಿ ತಕ್ಷಣ ಹಣ ಹೂಡಲು ಉತ್ತಮ ಮಾರ್ಗ ತಿಳಿಸಿರಿ?

ಉತ್ತರ: ಮ್ಯೂಚುವಲ್ ಫಂಡ್ ಹಾಗೂ ಷೇರು ಮಾರುಕಟ್ಟೆಯಲ್ಲಿ ಸದ್ಯದ ಏರಿಳಿತ ಸಂದರ್ಭದಲ್ಲಿ ಭದ್ರತೆ ದ್ರವ್ಯತೆ ಹಾಗೂ ಖಚಿತ ವರಮಾನ ಪರಿಗಣಿಸಿ, ಬ್ಯಾಂಕಿನಲ್ಲಿ ಅವಧಿ ಠೇವಣಿ ಮಾಡುವುದೇ ಲೇಸು. ಉಳಿತಾಯ ಖಾತೆಯಲ್ಲಿದ್ದಲ್ಲಿ,  ಆ ಹಣ ಅವಧಿ ಠೇವಣಿಗೆ ವರ್ಗಾಯಿಸಿರಿ. ಅವಧಿ ಠೇವಣಿಯದರೂ, ಅವಶ್ಯವಿದ್ದಾಗ ಅವಧಿಗೆ ಮುನ್ನ ಪಡೆಯುವ ಹಕ್ಕು ನಿಮಗಿದೆ.

**

ದಿವ್ಯಾ, ಮೈಸೂರು

ನಾನು ಸ್ನಾತಕ್ಕೋತ್ತರ ಪದವಿ ಪಡೆಯಲು ಜರ್ಮನಿಗೆ ಹೋಗಬೇಕೆಂದಿದ್ದೇನೆ. ಮೈಸೂರಿನಲ್ಲಿರುವ ಯಾವ ಬ್ಯಾಂಕು ನನಗೆ ಕಡಿಮೆ ಬಡ್ಡಿದರ
ದಲ್ಲಿ ಸಾಲ ಕೊಡಬಹುದು ಹಾಗೂ ಸಾಲ ಪಡೆಯಲು ಬ್ಯಾಂಕಿಗೆ ಕೊಡಬೇಕಾದ ದಾಖಲೆ – ಆಧಾರ ಇವುಗಳ ಬಗ್ಗೆ ಆದಷ್ಟು ಬೇಗ ಸಲಹೆ ನೀಡಿ.

ಉತ್ತರ: ಶಿಕ್ಷಣ ಸಾಲದಲ್ಲಿ ದೇಶಿ ಹಾಗೂ ವಿದೇಶಿ ಎಂಬುದಾಗಿ ಎರಡು ಬಗೆಗಳಿವೆ. ನೀವು ಜರ್ಮನಿಯಲ್ಲಿ ಓದಲು ಪಡೆಯುವ ಶಿಕ್ಷಣ ಸಾಲ, ಭಾರತ ಸರ್ಕಾರ ಸಾದರ ‍ಪಡಿಸಿದ ಮಾದರಿ ಶಿಕ್ಷಣ ಸಾಲದ (Model education scheme) ವ್ಯಾಪ್ತಿ ಒಳಗೆ ಬರುವುದಿಲ್ಲ ಹಾಗೂ ಅನುದಾನಿತ ಬಡ್ಡಿ (Interest Subsidy) ಕೂಡಾ ದೊರೆಯುವುದಿಲ್ಲ.

ಶಿಕ್ಷಣ ಸಾಲದ ಬಡ್ಡಿ ಶೇ 10.5 ಇರಬಹುದು. ಬಡ್ಡಿದರ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ವ್ಯತ್ಯಾಸವಾಗುತ್ತದೆ. ನನಗೆ ತಿಳಿದಂತೆ ವಿದೇಶಿ ಶಿಕ್ಷಣ ಸಾಲ ಸುಲಭವಾಗಿ ಪಡೆಯಲು ನೀವು ಮೈಸೂರಿನಲ್ಲಿ State Bank of India ದಲ್ಲಿ ವಿಚಾರಿಸಿ.

ನೀವು ಈಗಾಗಲೇ ಹೊಂದಿರುವ ಪದವಿ ಪ್ರಮಾಣಪತ್ರ, ಮಾರ್ಕ್ಸ್‌ ಕಾರ್ಡ್‌, ಕಾಲೇಜಿನಿಂದ Conduct certificate, ಜರ್ಮನಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆಯಲು ಬಂದಿರುವ ಪರವಾನಗಿ ಪತ್ರ ಇವೆಲ್ಲವನ್ನೂ ಬ್ಯಾಂಕ್‌ಗೆ ಒದಗಿಸಬೇಕು. ಜತೆಗೆ ಸಾಲದ ಮೊತ್ತಕ್ಕನುಗುಣವಾಗಿ ಸ್ಥಿರ ಆಸ್ತಿ ಅಡಮಾನ ಮಾಡಿಕೊಡಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.