ADVERTISEMENT

ಕೈತಪ್ಪಿದ ಕಾಂಗ್ರೆಸ್‌ ಟಿಕೆಟ್‌: ಭುಗಿಲೆದ್ದ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 6:57 IST
Last Updated 16 ಏಪ್ರಿಲ್ 2018, 6:57 IST

ಚಿಕ್ಕಮಗಳೂರು: ಅಭ್ಯರ್ಥಿ ಗಳ ಪಟ್ಟಿ ಯನ್ನು ಕಾಂಗ್ರೆಸ್‌ ಹೈಕಮಾಂಡ್‌ ಅಖೈರುಗೊಳಿಸಿದ ಬೆನ್ನಲ್ಲೇ, ಟಿಕೆಟ್‌ ಕೈತಪ್ಪಿದ ಜಿಲ್ಲೆಯ ವಿವಿಧ ಕ್ಷೇತ್ರಗಳ ಪ್ರಬಲ ಆಕಾಂಕ್ಷಿಗಳಲ್ಲಿ ಅಸಮಾಧಾನದ ಅಲೆ ಭುಗಿಲೆದ್ದಿದೆ.

ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌.ಶಂಕರ್‌ ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂಬ ಸುಳಿವಿನಿಂದಾಗಿ ಕ್ಷೇತ್ರದ ಪ್ರಬಲ ಆಕಾಂಕ್ಷಿಗಳಲ್ಲೊಬ್ಬರಾದ ವಿಧಾನ ಪರಿಷತ್‌ ಮಾಜಿ ಸದಸ್ಯೆ ಎ.ವಿ.ಗಾಯತ್ರಿಶಾಂತೇಗೌಡ ಪಾಳಯದಲ್ಲಿ ಅಸಮಾಧಾನದ ಕಿಡಿ ಹೊತ್ತಿಕೊಂಡಿದೆ. ತರೀಕೆರೆ ಕ್ಷೇತ್ರದಲ್ಲಿಯೂ ಹಾಲಿ ಶಾಸಕ ಜಿ.ಎಚ್‌.ಶ್ರೀನಿವಾಸ್‌ ಅವರಿಗೆ ಟಿಕೆಟ್‌  ಕೈತಪ್ಪುವ ಸುಳಿವಿನಿಂದ ಬಂಡಾಯದ ಭೀತಿ ಎದುರಾಗಿದೆ.

ಗಾಯತ್ರಿ ಶಾಂತೇಗೌಡ ಅವರ ನೂರಾರು ಬೆಂಬಲಿಗರು ನಗರ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಭಾನುವಾರ ಸಂಜೆ ಪ್ರತಿಭಟನೆ ನಡೆಸಿದರು. ಟೈರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಹೈಕಮಾಂಡ್‌ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು, ಗಾಯತ್ರಿ ಅವರಿಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಗಾಯತ್ರಿ ಶಾಂತೇಗೌಡ ‘ಪ್ರಜಾ ವಾಣಿ’ಯೊಂದಿಗೆ ಮಾತನಾಡಿ, ‘ಬಹಳಷ್ಟು ವರ್ಷಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇನೆ. ಈಗ ಪಕ್ಷವು ಬೇರೊಬ್ಬರಿಗೆ ಮಣೆ ಹಾಕುವುದು ಎಷ್ಟು ಸರಿ? ಬೆಂಬಲಿಗರು, ಕಾರ್ಯಕರ್ತರೇ ನನ್ನ ಜೀವಾಳ. ಅವರೊಂದಿಗೆ ಚರ್ಚಿಸಿ ಮುಂದಿನ ನಡೆ ನಿರ್ಧರಿಸುತ್ತೇನೆ’ ಎಂದರು.

ತರೀಕೆರೆ ಕ್ಷೇತ್ರದ ಪ್ರಬಲ ಆಕಾಂಕ್ಷಿ, ಶಾಸಕ ಜಿ.ಎಚ್‌.ಶ್ರೀನಿವಾಸ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಪಕ್ಷದವರು ಯಾಕೆ ಪರಿಗಣಿಸಿಲ್ಲ ಎಂಬುದು ತಿಳಿಯುತ್ತಿಲ್ಲ. ಟಿಕೆಟ್‌ ಕೈತಪ್ಪುವ ಸುಳಿವು ಸಿಕ್ಕಿ ಬೆಂಬಲಿಗರು, ಕಾರ್ಯಕರ್ತರಿಗೆ ಬೇಸರವಾಗಿದೆ. ಬಂಡಾಯವಾಗಿ ಸ್ಪರ್ಧಿಸುವಂತೆ ಕೆಲವರು ಇಂಗಿತ ವ್ಯಕ್ತಪಡಿಸಿದ್ದಾರೆ. ಎಲ್ಲರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.