ADVERTISEMENT

ಬಂದೂಕಿನ ‘ಬಲ’ ಕುಗ್ಗಿಸಲು ಕೈಜೋಡಿಸೋಣ

ವೋಟು ಕೊಟ್ಟರೆ ಗನ್ ಲೈಸೆನ್ಸ್ ಕೊಡಿಸುತ್ತೇವೆ ಎನ್ನುವ ರಾಜಕಾರಣಕ್ಕೆ ಏನನ್ನಬೇಕು?

ರೇಣುಕಾ ನಿಡಗುಂದಿ
Published 25 ಏಪ್ರಿಲ್ 2019, 20:30 IST
Last Updated 25 ಏಪ್ರಿಲ್ 2019, 20:30 IST
   

ನಾವು ಕೆಲಸ ಮಾಡುವ ಕಾರ್ಖಾನೆ, ದೆಹಲಿ ಹೊರವಲಯ ದಲ್ಲಿದೆ. ದಾದ್ರಿಯಿಂದ ಇಲ್ಲಿಗೆ ಕೆಲಸಕ್ಕೆ ಬರುವ ನಮ್ಮ ಸಿಬ್ಬಂದಿಯೊಬ್ಬರು ಕಳೆದ ತಿಂಗಳು ತಮ್ಮ ಪತ್ನಿಯನ್ನು ಯಾವುದೋ ಪರೀಕ್ಷೆಗೆಂದು ಸೂರಜ್‌ಪುರದ ಸರ್ಕಾರಿ ಶಾಲೆಗೆ ಡ್ರಾಪ್ ಮಾಡಿ, ಬೈಕನ್ನು ಅಲ್ಲಿಯೇ ಯಾರದ್ದೋ ಮನೆ ಹತ್ತಿರ ನಿಲ್ಲಿಸಿದ್ದರಂತೆ. ಕಿರಿದಾದ ಗಲ್ಲಿಯಲ್ಲಿ ಪರೀಕ್ಷಾರ್ಥಿಗಳ ಗದ್ದಲ, ಬೈಕು–ಕಾರುಗಳ ಗೊಂದಲದಲ್ಲಿ ಯಾವುದೋ ಗಾಡಿ ಯಾವುದಕ್ಕೋ ತಾಕಿ, ಆಕ್ರೋಶದ ಕಿಡಿ ಸಿಡಿಯಿತು. ಅವರು ಮುಸ್ಲಿಂ– ಇವರು ಹಿಂದೂ ಎಂದು ಮನೆಗಳಿಂದ ಕತ್ತಿ, ತಲ್ವಾರ್‌, ಕೋವಿಗಳು ಹೊರಬಂದು– ‘ಹೊಡಿ ಬಡಿ’, ‘ಮಾರ್ ದೋ ಸಾಲೇ ಕೋ’ ಎಂದು ದೊಡ್ಡ ಗಲಭೆಯೇ ಆಯ್ತಂತೆ...

ಹೊಸ ವರ್ಷದ ಸಂತಸ ಕೂಟದಲ್ಲಿ ಗೋರಖ್‌ಪುರದಲ್ಲಿ ಜೆಡಿಯು ಶಾಸಕ ರಾಜು ಸಿಂಗ್ ಗುಂಡು ಹಾರಿಸಿದಾಗ, ಅದು ಅತಿಥಿಯೊಬ್ಬರಿಗೆ ತಾಕಿ ಆಕೆ ಸ್ಥಳದಲ್ಲಿಯೇ ಮೃತಪಟ್ಟರೆಂಬುದು ರಾಷ್ಟ್ರಮಟ್ಟದ ಸುದ್ದಿಯಾಯಿತು. ಅದು ಕ್ರಮೇಣ ತಣ್ಣಗಾಗಿ, ಆತ ‘ಏನೂ ಆಗೇ ಇಲ್ಲ’ ಎಂಬಂತೆ ಈಗ ಆರಾಮವಾಗಿ ಓಡಾಡಿಕೊಂಡಿರಬಹುದು. ಮೀರಠ್‌ನ ಒಬ್ಬ ಯುವಕ ಜನವರಿಯಲ್ಲಿ, ಕೇಕ್ ಕತ್ತರಿಸುವ ಬದಲು, ಬಂದೂಕಿನಿಂದ ಕೇಕ್ ಹಾರಿಸಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ವಿಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿತ್ತು. ಜಾಟ್, ಗುಜ್ಜರ್ ಸಮುದಾಯದ ಜಮೀನ್ದಾರರ ಮದುವೆಗಳಲ್ಲಿ ಕೋವಿಯಿಂದ ಗಾಳಿಯಲ್ಲಿ ಗುಂಡು ಹಾರಿಸುವುದು ಪ್ರತಿಷ್ಠೆಯ ಸಂಕೇತ. ಅಂಥ ಶುಭ ಕಾರ್ಯಗಳಲ್ಲಿ ಮದು ಮಕ್ಕಳೇ ಗುಂಡಿಗೆ ಬಲಿಯಾದ ಉದಾಹರಣೆಗಳಿವೆ.

ಇತ್ತೀಚೆಗೊಮ್ಮೆ ನಾನು ಆಟೊದಲ್ಲಿ ಬರುತ್ತಿದ್ದಾಗ, ನನ್ನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಫೋನ್‌ನಲ್ಲಿ ಯಾರೊಂದಿಗೋ ಮಾತಾಡುತ್ತಿದ್ದ- ‘ಸಾಬ್... ನಿಜ ಹೇಳ್ತಿದ್ದೀನಿ. ನಿಮ್ಮ ಮುಖ ನೋಡಿ ನಾನು ಅವನನ್ನು ಬಿಟ್ಟಿದ್ದೇನೆ (ಜೀವಸಹಿತ), ಇಲ್ಲದಿದ್ದರೆ ಅವನ ಕತೆ ಮುಗಿಸುತ್ತಿದ್ದೆ’ ಎಂದು ಹಿಂದಿಯಲ್ಲಿ ಅರಚುತ್ತಿದ್ದ. ಆರೇಳು ನಿಮಿಷದ ಸಂಭಾಷಣೆ. ‘ದಿಲ್ಲಿ, ಗಾಜಿಯಾಬಾದ್, ಗುರುಗ್ರಾಮ್ ಎಲ್ಲೇ ಸಿಕ್ಕರೂ ಅವನನ್ನು ಬಿಡಲ್ಲ’ ಎನ್ನುತ್ತಿದ್ದ. ಪಕ್ಕದಲ್ಲೇ ಕುಳಿತಿದ್ದೆ. ಕೆಟ್ಟ ಧೈರ್ಯ ಮೈಹೊಕ್ಕಿತು. ‘ಯಾಕಪ್ಪಾ, ಕೊಲ್ಲುವ ಮಾತು? ಆ ಮನುಷ್ಯನೊಡನೆ ಮಾತಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಲ್ಲ’ ಎಂದೆ. ಅವ ಒಮ್ಮೆ ಕೆಕ್ಕರಿಸಿ ನೋಡಿದ. ಯಾರಿಗೆ ಗೊತ್ತು, ಪಿತ್ಥ ಕೆರಳಿ ನನ್ನ ಮೇಲೇ ಗುಂಡು ಹಾರಿಸಿಬಿಡಬಹುದಿತ್ತಲ್ಲ ಅಂತ ಆ ಬಳಿಕ ಅನಿಸಿತು. ಯಾರನ್ನೂ ನಂಬದಂಥ ದಿನಮಾನಗಳು. ಯಾರ ಕಿಸೆಯಲ್ಲಿ ಪಿಸ್ತೂಲು ಇದೆಯೋ, ಅದು ಯಾವ ಕಾರಣಕ್ಕೆ ಯಾರ ಪ್ರಾಣ ತೆಗೆಯುತ್ತದೋ?!

ADVERTISEMENT

ದೆಹಲಿ, ಉತ್ತರಪ್ರದೇಶದ ಸುತ್ತಮುತ್ತಲೂ ನೆತ್ತರು ಹೆಪ್ಪುಗಟ್ಟಿಸುವ ಗುಂಡಿನ ಹಲ್ಲೆಗಳು ನಡೆಯುತ್ತಲೇ ಇರುತ್ತವೆ. ಸಿಗರೇಟು ಸೇದಿ ಅಂಗಡಿಯವನಿಗೆ ಹಣ ಕೊಟ್ಟಿಲ್ಲದ್ದಕ್ಕೆ ಗುಂಡು, ಯಾರೋ ಐವತ್ತು ರೂಪಾಯಿ ಸಾಲ ಪಡೆದು ತೀರಿಸಿಲ್ಲವೆಂದು ಗುಂಡು, ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಗುಂಡು, ಮದುವೆಗೆ ಒಪ್ಪದಿದ್ದವಳ ಪ್ರಿಯಕರನಿಗೆ ಗುಂಡು... ಹೀಗೆ ಸಿಟ್ಟಿಗೆ, ಸೇಡಿಗೆ, ಸೊಕ್ಕಿಗೆ ಗುಂಡುಗಳು ಹಾರುತ್ತವೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ತಡರಾತ್ರಿವರೆಗೂ ಕೆಲಸ ಮಾಡಿ ಹೊರಟವರನ್ನು ನೋಯಿಡಾ ಎಕ್ಸ್‌ಪ್ರೆಸ್‍ ಹೆದ್ದಾರಿಯಲ್ಲಿ ನಿಲ್ಲಿಸಿ, ಬಂದೂಕಿನಿಂದ ಬೆದರಿಸಿ ಲ್ಯಾಪ್‌ಟಾಪ್, ಕ್ರೆಡಿಟ್‌ ಕಾರ್ಡ್ ಇತ್ಯಾದಿ ಗಳನ್ನು ದೋಚುವ ಕಳ್ಳರ ಗ್ಯಾಂಗ್‍ ಮೊನ್ನೆ ಮುಗಿದ ಚಳಿಗಾಲದಲ್ಲಿ ಭಯ ಹುಟ್ಟಿಸಿತ್ತು.

ದಕ್ಷಿಣ ಏಷ್ಯಾ ಪತ್ರಕರ್ತರ ಸಂಘದ 2010ರ ಪ್ರಾಜೆಕ್ಟ್‌ ರಿಪೋರ್ಟ್‌ ಪ್ರಕಾರ, ದೇಶದಾದ್ಯಂತ ಸುಮಾರು 4 ಕೋಟಿ ಬಂದೂಕುಗಳಿವೆ. ಅವುಗಳಲ್ಲಿ 55 ಲಕ್ಷ ಮಾತ್ರ ಪರವಾನಗಿ ಉಳ್ಳವಾಗಿವೆ. ದೇಶದಲ್ಲಿ 33.69 ಲಕ್ಷ ಜನರು ಗನ್‌ ಲೈಸೆನ್ಸ್ ಪಡೆದಿದ್ದಾರೆ. ಅವರಲ್ಲಿ ಕರ್ನಾಟಕದವರೇ 1.13 ಲಕ್ಷ ಮಂದಿ ಇದ್ದಾರೆ. ಅತಿಹೆಚ್ಚು ಗನ್ ಲೈಸೆನ್ಸ್ ಹೊಂದಿರುವ ವ್ಯಕ್ತಿಗಳು ನೆಲೆಸಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಏಳನೇ ಸ್ಥಾನದಲ್ಲಿದೆ. ಕಲಬುರ್ಗಿ ಜಿಲ್ಲೆಯ 150 ಮನೆಗಳಿರುವ ಒಂದೂರಿನಲ್ಲಿ ಸುಮಾರು 120 ಮನೆಗಳಲ್ಲಿ ಬಂದೂಕಿದ್ದುದನ್ನು ಪತ್ರಿಕೆಯೊಂದು ವರದಿ ಮಾಡಿದೆ. ನಮ್ಮ ದೇಶದಲ್ಲಿ ಗನ್ ನಿಯಂತ್ರಣ ಕಾನೂನು ಇದ್ದರೂ ದಿನೇ ದಿನೇ ಬಂದೂಕು ಅಪರಾಧಗಳು ಹೆಚ್ಚುತ್ತಲಿವೆ. ಇದು ಭಾರತದಲ್ಲಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಉಲ್ಬಣಿಸಿರುವ ಗನ್ ಭಯೋತ್ಪಾದನೆ! 2017ರ ಬಿಬಿಸಿ ಸಮೀಕ್ಷೆಯ ಪ್ರಕಾರ, ಸುಮಾರು ಶೇ 40ರಷ್ಟು ಅಮೆರಿಕನ್ನರು ಗನ್ ಹೊಂದಿದ್ದಾರಂತೆ. ಬಂದೂಕಿನ ನರಹತ್ಯೆಗಳು ಅಮೆರಿಕದಂಥ ಅಭಿವೃದ್ಧಿ ಹೊಂದಿದ ದೇಶಗಳನ್ನೂ ಕಂಗೆಡಿಸಿವೆ.

ನಮ್ಮಲ್ಲಿ ‘ಕಟ್ಟಾ’ ಎಂದು ಕರೆಯುವ ಕಂಟ್ರಿ ಮೇಡ್ ಪಿಸ್ತೂಲಿನಿಂದ ಹಿಡಿದು ಅಮೆರಿಕದ ನಾಜೂಕಿನ M16, ಇಸ್ರೇಲಿನ Uziವರೆಗಿನ ಶಸ್ತ್ರಗಳಿವೆ ಎನ್ನುತ್ತಾರೆ ಕಂಟ್ರೋಲ್‌ ಆರ್ಮ್ಸ್ ಫೌಂಡೇಷನ್‌ ಆಫ್‌ ಇಂಡಿಯಾದಮುಖ್ಯಸ್ಥೆ ಬಿನಾಲಕ್ಷ್ಮಿ ನೇಪ್ರಾಮ್. ಉತ್ತರ ಪ್ರದೇಶದಂಥ ರಾಜ್ಯದಲ್ಲಿ ಬಂದೂಕಿನ ಅಂಗಡಿಗಳು ಅಣಬೆಗಳಂತೆ ತಲೆಯೆತ್ತುತ್ತಿವೆ ಎನ್ನುತ್ತಾರೆ ಅವರು. ಇತ್ತೀಚಿನ ದಶಕದಲ್ಲಿ ದೆಹಲಿಯ ರಾಷ್ಟ್ರೀಯ ವಲಯದಲ್ಲಿ (ಎನ್‌ಸಿಆರ್‌) ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ಉದ್ದಿಮೆ, ಕಾರ್ಖಾನೆಗಳು, ಮಾಲ್ ಸಂಸ್ಕೃತಿ, ನಗರೀಕರಣ, ಪಬ್ಬು-ಕ್ಲಬ್ಬು ಇವೆಲ್ಲವೂ ಸಾಮಾಜಿಕ ಚಿತ್ರಣವನ್ನೇ ಬದಲಾಯಿಸಿಬಿಟ್ಟಿವೆ. ಅದರ ಜೊತೆ ಜಾತಿವಾದ, ಕೋಮುವಾದ ಹಾಗೂ ಕುಟುಂಬ ಮರ್ಯಾದೆಯನ್ನು ತಮ್ಮ ಪ್ರತಿಷ್ಠೆಯನ್ನಾಗಿಸಿಕೊಂಡ ಕೃಷಿ ಪ್ರಧಾನ ಉತ್ತರಪ್ರದೇಶ, ಹರಿಯಾಣದ ಜಮೀನುದಾರರು ಇದ್ದಾರೆ. ತಮ್ಮ ಜಮೀನುಗಳನ್ನು ನಗರೀಕರಣದ ಕೊಡು–ಕೊಳ್ಳುವಿಕೆಯಲ್ಲಿ ಮಾರಿಕೊಂಡು ಅಪಾರವಾದ ಸಂಪತ್ತನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಅವರಲ್ಲಿ ಕೆಲವರು ರಾಜಕಾರಣ, ರಿಯಲ್ ಎಸ್ಟೇಟ್ ಉದ್ಯಮದೊಂದಿಗೆ ತಳಕು ಹಾಕಿಕೊಂಡಿರುವ ಎಲ್ಲ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗೀದಾರರಾಗಿದ್ದಾರೆ ಎಂಬ ಮಾತಿದೆ. ದೇಶದ ಜನಸಂಖ್ಯೆಯಲ್ಲಿ ಸರಿಸುಮಾರು ಶೇ 15ರಷ್ಟು ಪಾಲು ಹೊಂದಿರುವ ಉತ್ತರಪ್ರದೇಶದಲ್ಲಿ ಶೇ 50ರಷ್ಟು ಅಸಹಜ ಸಾವುಗಳು ಬಂದೂಕುಗಳಿಗೆ ಸಂಬಂಧಿಸಿದವಾಗಿವೆ ಎಂಬ ಅಂಶವನ್ನು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ ದತ್ತಾಂಶ ಹೊರಗೆಡಹಿದೆ.

ಕಬ್ಬು ಬೆಳೆಯುವ ಉತ್ತರಪ್ರದೇಶವು ಹಾವಿನ ಹುತ್ತವಾಗಿದೆ. ಕೆಳವರ್ಗದ ಅನಕ್ಷರಸ್ಥರು, ನಿರುದ್ಯೋಗಿಗಳು, ಕಡಿಮೆ ವೇತನ ಪಡೆಯುವವರು ನಿರ್ಗತಿಕರಾಗಿಯೇ ಉಳಿದಿದ್ದಾರೆ. ವಿದ್ಯೆ– ವಿವೇಕರಹಿತ ಪಾಳೆಗಾರರು ಕುಬೇರರಂತೆ ವರ್ತಿಸತೊಡಗಿದ್ದಾರೆ. ಕಾನೂನು, ಪೊಲೀಸು, ಶಾಸಕಾಂಗ, ನ್ಯಾಯಾಂಗಗಳೆಲ್ಲವೂ ತಮ್ಮ ಕಬ್ಬಿಣದ ತಿಜೋರಿಗಳ ಗಂಟು ಎಂದು ಭಾವಿಸುತ್ತ ಅರಾಜಕತೆಯನ್ನು ಅವರು ಪೋಷಿಸುತ್ತಿದ್ದಾರೆ. ದುಡ್ಡಿದ್ದವರು ಶೋಕಿಗಾಗಿ, ಪ್ರತಿಷ್ಠೆಗಾಗಿ, ಸ್ವರಕ್ಷಣೆಗಾಗಿ ಬಂದೂಕಿನ ಲೈಸೆನ್ಸ್ ಪಡೆದು ಈರ್ಷ್ಯೆ, ಸೇಡಿಗೆ ಬಳಕೆ ಮಾಡಿಕೊಳ್ಳು ತ್ತಿದ್ದಾರೆ. ಇತ್ತ ಬಡತನ, ಆರ್ಥಿಕ ಅಸಮಾನತೆ, ಪಾಳೆಗಾರಿಕೆ, ಶ್ರೇಣೀಕೃತ ಜಾತಿವಾದದ ಕೊಳೆತ ವ್ಯವಸ್ಥೆಯಿಂದ ರೊಚ್ಚಿಗೆದ್ದವರು ಸಹ ಬಂದೂಕನ್ನು ಹಿಡಿಯುತ್ತಿದ್ದಾರೆ.

ಪುಢಾರಿಗಳೊಂದಿಗೆ ಗುರುತಿಸಿಕೊಳ್ಳುವ, ಸೆಲೆಬ್ರಿಟಿಯಾಗುವ ಕನಸು ಹೊತ್ತ ಉದ್ಯೋಗವಿರದ ಯುವಕರನ್ನು ಮತಾಂಧರು ದಾರಿ ತಪ್ಪಿಸುತ್ತಿದ್ದಾರೆ. ಅತ್ತ ಕಾಶ್ಮೀರದ ಕಣಿವೆಯಲ್ಲಿನ ಭಯೋತ್ಪಾದನೆಗೆ ಲೆಕ್ಕವಿರದಷ್ಟು ಜೀವಗಳು ಬಲಿಯಾಗುತ್ತಿವೆ.ಯುವಕರ ಕೈಗಳು ಬಂದೂಕನ್ನು ಎತ್ತಿಕೊಳ್ಳುತ್ತಿವೆ. ವೋಟು ಕೊಟ್ಟರೆ ಗನ್ ಲೈಸೆನ್ಸ್ ಕೊಡಿಸುತ್ತೇವೆ ಎಂದು ಆಮಿಷವೊಡ್ಡುವ ರಾಜಕಾರಣವನ್ನು ಏನೆಂದು ಭಾವಿಸುವುದು? ಬಂದೂಕಿನ ಬದಲು ಆ ಕೈಗಳಿಗೆ ಉದ್ಯೋಗ ಕೊಡಿ, ಪುಸ್ತಕಕೊಡಿ ಎಂದು ತಿಳಿಹೇಳುವ ಧೈರ್ಯ ಯಾರಲ್ಲೂ ಉಳಿದಿಲ್ಲ.

ಗುಂಡಿನ ಸದ್ದು ಗಾಳಿಯನು ಮಲಿನಗೊಳಿಸದಿರಲಿ. ಬಂದೂಕುಗಳನ್ನು ಕಡಲಿಗೆಸೆದು ಬಿಡಿ, ಅವು ನಾವೆಗಳಾಗಲಿ. ನೆಲದಲ್ಲಿ ಹುಗಿದುಬಿಡಿ, ನೆರಳು ನೀಡುವ ಮರಗಳಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.