ADVERTISEMENT

ಷೇರು ಮಾತು| ಷೇರುಪೇಟೆಯಲ್ಲಿ ಎಷ್ಟು ಹಣ ಹೂಡಬೇಕು?

ಶರತ್ ಎಂ.ಎಸ್.
Published 19 ಏಪ್ರಿಲ್ 2021, 19:30 IST
Last Updated 19 ಏಪ್ರಿಲ್ 2021, 19:30 IST
ಪ್ರಾತಿನಿಧಿಕ ಚಿತ್ರ (Getty Images)
ಪ್ರಾತಿನಿಧಿಕ ಚಿತ್ರ (Getty Images)   

ಷೇರು ಮಾರುಕಟ್ಟೆಯಲ್ಲಿ ನಾವು ಎಷ್ಟು ಹಣ ತೊಡಗಿಸಬೇಕು? ಇದೊಂದು ಮಿಲಿಯನ್ ಡಾಲರ್ ಪ್ರಶ್ನೆ! ಇಂತಹ ಪ್ರಶ್ನೆಗೆ ನೀವೇ ಉತ್ತರ ಕಂಡುಕೊಳ್ಳುವುದು ಹೇಗೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ಷೇರು ಹೂಡಿಕೆ ಮತ್ತು ಆರ್ಥಿಕ ಸ್ಥಿತಿಗತಿ: ರಾಜ್, ರವಿ ಮತ್ತು ರೋಹಿತ್ ಸ್ನೇಹಿತರು. ರಾಜ್ ಶ್ರೀಮಂತ, ರವಿ ಮಧ್ಯಮ ವರ್ಗದವ ಮತ್ತು ರೋಹಿತ್ ಬಡ ಕುಟುಂಬಕ್ಕೆ ಸೇರಿದವ. ‘ಷೇರು ಮಾರುಕಟ್ಟೆಯಲ್ಲಿ ಎಷ್ಟು ಹೂಡಿಕೆ ಮಾಡಬೇಕು’ ಎಂದು ಈ ಮೂವರೂ ಕೇಳಿದರೆ ಒಂದೇ ಉತ್ತರ ನೀಡಲು ಸಾಧ್ಯವಿಲ್ಲ. ಈ ಮೂವರ ಆರ್ಥಿಕ ಹಿನ್ನೆಲೆ ಬೇರೆಯೇ ಆಗಿದೆ. ರಾಜ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟ ಅನುಭವಿಸಿದರೆ ಆತನ ಬದುಕಿಗೆ ಯಾವುದೇ ತೊಂದರೆ ಇಲ್ಲ. ಏಕೆಂದರೆ ಆತನ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ರವಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟ ಅನುಭವಿಸಿದರೆ ಕೊಂಚ ತೊಂದರೆ ಆಗುತ್ತದೆ. ಆದರೆ ಒಂದಷ್ಟು ಸಮಯದ ಬಳಿಕ ರವಿ ಆರ್ಥಿಕ ನಷ್ಟದಿಂದ ಚೇತರಿಸಿಕೊಂಡು ಮತ್ತೆ ಷೇರು ಮಾರುಕಟ್ಟೆ ಹೂಡಿಕೆಗೆ ಹಿಂದಿರುಗುವ ಸಾಧ್ಯತೆ ಇರುತ್ತದೆ.

ರೋಹಿತ್‌ನ ಆರ್ಥಿಕ ಹಿನ್ನೆಲೆ ಚೆನ್ನಾಗಿಲ್ಲ. ಆತ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟ ಅನುಭವಿಸಿದರೆ ಚೇತರಿಸಿಕೊಳ್ಳುವುದು ಕಷ್ಟ. ಷೇರು ಮಾರುಕಟ್ಟೆ ವಿಚಾರದಲ್ಲಿ ಎಲ್ಲರಿಗೂ ಒಪ್ಪುವ ಒಂದು ಹೂಡಿಕೆ ಯೋಜನೆ ಇಲ್ಲ ಎನ್ನುವುದಕ್ಕೆ ಮೇಲಿನ ಉದಾಹರಣೆ. ನಿಮ್ಮ ಹಣಕಾಸಿನ ಸ್ಥಿತಿಗತಿ ಮನಗಂಡು ಷೇರು ಮಾರುಕಟ್ಟೆಯಲ್ಲಿ ಎಷ್ಟು ಹೂಡಬೇಕು ಎನ್ನುವುದನ್ನು ನೀವೇ ಗೊತ್ತುಮಾಡಿಕೊಳ್ಳಬೇಕು. ಸರಳವಾಗಿ ಹೇಳುವುದಾದರೆ ಹೆಚ್ಚು ರಿಸ್ಕ್ ಇದ್ದಲ್ಲಿ ಹೆಚ್ಚು ಗಳಿಕೆ ಸಾಧ್ಯತೆ ಇರುತ್ತದೆ, ಕಡಿಮೆ ರಿಸ್ಕ್ ಇದ್ದರೆ ಲಾಭಾಂಶ ಗಳಿಕೆಯ ಪ್ರಮಾಣವೂ ಕಡಿಮೆ ಇರುತ್ತದೆ. ಹಾಗಾದರೆ ಷೇರು ಹೂಡಿಕೆಗೆ ನಮಗೊಂದು ವೈಜ್ಞಾನಿಕ ಅಂದಾಜಿಲ್ಲವೇ? ಅದಕ್ಕೆ ಉತ್ತರ ಹಣಕಾಸು ಯೋಜನೆ ರೂಪಿಸಲು ನೆರವಾಗುವ ‘ಪಿರಮಿಡ್ ಲೆಕ್ಕಾಚಾರ’.

ADVERTISEMENT

ಏನಿದು ಪಿರಮಿಡ್ ಲೆಕ್ಕಾಚಾರ?

ಈ ಚಿತ್ರ ಗಮನಿಸಿ, ಪಿರಮಿಡ್‌ನ ಕೆಳಭಾಗದಲ್ಲಿರುವ ಹೂಡಿಕೆಗಳಲ್ಲಿ ರಿಸ್ಕ್ ಕಡಿಮೆ ಇರುತ್ತದೆ. ಮಧ್ಯ ಭಾಗದಲ್ಲಿರುವ ಹೂಡಿಕೆಗಳಲ್ಲಿ ಮಧ್ಯಮ ಪ್ರಮಾಣದ ರಿಸ್ಕ್ ಇರುತ್ತದೆ. ಮೇಲ್ಭಾಗದಲ್ಲಿ ಸೂಚಿಸಿರುವ ಹೂಡಿಕೆಗಳಲ್ಲಿ ಹೆಚ್ಚು ರಿಸ್ಕ್ ಇರುತ್ತದೆ. ನಮ್ಮ ಮೇಲಿನ ಉದಾಹರಣೆ ಗಣನೆಗೆ ತೆಗೆದುಕೊಂಡರೆ ಶ್ರೀಮಂತ ಹಿನ್ನೆಲೆಯ ರಾಜ್, ಪಿರಮಿಡ್‌ನ ಮೇಲ್ಭಾಗದ ಯೋಜನೆಗಳಲ್ಲಿ ತನ್ನ ಉಳಿತಾಯದ ಶೇಕಡ 80ರಷ್ಟು, ಮಧ್ಯ ಭಾಗದ ಯೋಜನೆಗಳಲ್ಲಿ ಶೇ 10ರಷ್ಟು, ಕೆಳಭಾಗದ ಯೋಜನೆಗಳಲ್ಲಿ ಶೇ 10ರಷ್ಟು ಹಣ ತೊಡಗಿಸಬಹುದು.

ಮಧ್ಯಮ ವರ್ಗದ ರವಿ ಪಿರಮಿಡ್‌ನ ಮಧ್ಯ ಭಾಗದ ಹೂಡಿಕೆಗಳಲ್ಲಿ ಶೇ 80ರಷ್ಟು, ಶೇ 10ರಷ್ಟನ್ನು ಮೇಲ್ಭಾಗದ ಯೋಜನೆಗಳಲ್ಲಿ, ಶೇ 10ರಷ್ಟನ್ನು ತಳ ಭಾಗದಲ್ಲಿರುವ ಹೂಡಿಕೆ ಯೋಜನೆಗಳಲ್ಲಿ ತೊಡಗಿಸಬಹುದು. ಬಡ ಹಿನ್ನೆಲೆಯ ರೋಹಿತ್, ಪಿರಮಿಡ್‌ನ ತಳಭಾಗದ ಯೋಜನೆಗಳಲ್ಲಿ ಶೇ 90ರಷ್ಟು, ಶೇ 10ರಷ್ಟನ್ನು ಮೇಲ್ಭಾಗದಲ್ಲಿ ಅಥವಾ ಮಧ್ಯ ಭಾಗದಲ್ಲಿ ಸೂಚಿಸಿರುವ ಹೂಡಿಕೆ
ಗಳಲ್ಲಿ ತೊಡಗಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.