ADVERTISEMENT

ಸುಳ್ಳುಗಳ ರಣತಂತ್ರ ಮತ್ತು ಗಣತಂತ್ರ

ಬಿಕ್ಕಟ್ಟನ್ನೇ ದಿವ್ಯಸ್ಥಿತಿ ಎಂಬಂತೆ ಭ್ರಮಿಸುವ ಮನಃಸ್ಥಿತಿ ಏನನ್ನು ಸೂಚಿಸುತ್ತದೆ?

ನಾರಾಯಣ ಎ
Published 25 ಜನವರಿ 2021, 19:30 IST
Last Updated 25 ಜನವರಿ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ವಾಸ್ತವವಾಗಿ (ಭಾರತದ ಸಂವಿಧಾನದ) ಪೀಠಿಕೆ ಶುರುವಾಗುವುದು ಅಕ್ಷರಗಳ ಮೂಲಕವಲ್ಲ. ಅಶೋಕ ಚಕ್ರದ ಮೂಲಕ. ಅಶೋಕ ಎಂದರೆ ದುಃಖರಾಹಿತ್ಯ... ಅಶೋಕ ಚಕ್ರದಡಿ ‘ಸತ್ಯಮೇವ ಜಯತೆ’ ಎಂಬ ಮಂಡೂಕೋಪನಿಷತ್ತಿನ ವಾಕ್ಯವಿದೆ...’

ಹೀಗೆ ಸಂವಿಧಾನದ ಆರಂಭದ ಚಿತ್ರಣವನ್ನು ಹೋದವರ್ಷ ಗಣರಾಜ್ಯದ ಸಂದರ್ಭದಲ್ಲಿ ರಹಮತ್ ತರೀಕೆರೆಯವರು ‘ಪ್ರಜಾವಾಣಿ’ಗೆ ಬರೆದ ಲೇಖನದಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದರು.

ಹೌದು. ಸಂವಿಧಾನವೊಂದು ಸತ್ಯಮೇವ ಜಯತೆ ಅಂತ ಸಾರುತ್ತಲೇ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಒಂದು ಸರಳಸತ್ಯದ ಒಳನೋಟ ಇದೆ: ಸತ್ಯ ಇಲ್ಲದಲ್ಲಿ ನಂಬಿಕೆ (trust) ಇರುವುದಿಲ್ಲ. ನಂಬಿಕೆಯ ಜತೆಗಿನ ನಂಟು ಕಳೆದುಕೊಂಡ ಸಮಾಜದಲ್ಲಿ ಸಂವಿಧಾನಕ್ಕೆ ಏನೂ ಮಾಡಲಾಗುವುದಿಲ್ಲ ಎಂಬುದೇ ಆ ಸತ್ಯ.

ADVERTISEMENT

* * *

ನಮಗೆ ಒಪ್ಪಿಗೆಯಾಗದ ಸಿದ್ಧಾಂತಗಳನ್ನು ಪ್ರತಿಪಾದಿ ಸುವವರೇ ಆಗಿದ್ದರೂ ಅವರು ಸತ್ಯವನ್ನು ಹೇಳುತ್ತಿದ್ದರೆ ಅದನ್ನು ಗೌರವಿಸಬೇಕು. ನಮಗೆ ಅತಿ ಆಪ್ತವಾದ ಸೈದ್ಧಾಂತಿಕ ಬದ್ಧತೆಯನ್ನು ಹೊಂದಿರುವವರಾದರೂ ಅವರು ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದಾದರೆ ಅದನ್ನು ಖಂಡಿಸಬೇಕು. ಬಹಿರಂಗವಾಗಿ ಖಂಡಿಸಲಾಗದೆ ಹೋದರೂ ಅಂತರಂಗದಲ್ಲಾದರೂ ಅದರ ಬಗ್ಗೆ ಅಸಹ್ಯಜುಗುಪ್ಸೆ ಮೂಡಬೇಕು. ನಾಗರಿಕತೆಯ ಸೋಂಕನ್ನು ಕಿಂಚಿತ್ ಆದರೂ ತಗುಲಿಸಿಕೊಂಡವರಿಗೆ ಇರಬೇಕಾದ ಕನಿಷ್ಠ ಗುಣಲಕ್ಷಣ ಇದು. ಅದು ಬಿಟ್ಟು, ಸುಳ್ಳುಗಳ ಸೌಧ ಕಟ್ಟುವವರನ್ನು, ಮಿಥ್ಯೆಗಳ ಮಾಯಾಲೋಕ ನಿರ್ಮಿಸುವವರನ್ನು ಧರ್ಮರಕ್ಷಕರೆಂದೂ ದೇಶಪ್ರೇಮಿಗಳೆಂದೂ ಒಪ್ಪಿಕೊಳ್ಳುವ ಹಂತವನ್ನು ಯಾವುದಾದರೂ ಧರ್ಮ ಅಥವಾ ದೇಶ ತಲುಪಿದೆ ಎಂದಾದರೆ, ಅದು ಮಹಾನ್ ಬಿಕ್ಕಟ್ಟೊಂದನ್ನು ಎದುರಿಸುತ್ತಿದೆ ಎಂದು ಲೆಕ್ಕ.

ಇದು ಅಂತಿಂತಹ ಬಿಕ್ಕಟ್ಟಲ್ಲ. ನಾಗರಿಕತೆಯ ಬಿಕ್ಕಟ್ಟು. ಇದನ್ನು ಇನ್ನಷ್ಟು ತೀವ್ರಗೊಳಿಸುವ ಒಂದು ವಿಚಾರ ಇದೆ. ಅದು ಏನೆಂದರೆ, ಈ ಬಿಕ್ಕಟ್ಟನ್ನು ಎದುರಿಸುತ್ತಿರುವ ದೇಶ ಮತ್ತು ಧರ್ಮದ ಮಂದಿ ಅದನ್ನು ಬಿಕ್ಕಟ್ಟು ಎಂದು ಭಾವಿಸುವುದಿಲ್ಲ. ಅದರ ಬದಲಿಗೆ ಬಿಕ್ಕಟ್ಟನ್ನೇ ಒಂದು ದಿವ್ಯ ಸ್ಥಿತಿ ಎಂಬಂತೆ ಭ್ರಮಿಸುತ್ತಿರುತ್ತಾರೆ. ಬಿಕ್ಕಟ್ಟಿನ ಮೂರ್ತರೂಪಗಳಂತೆ ಏಳುವ ಪ್ರತಿಮೆಗಳನ್ನು-ಸೌಧಗಳನ್ನು ಕಟ್ಟುವ ಕೆಲಸವನ್ನು ತಮ್ಮ ಜನ್ಮ ಪಾವನಗೊಳಿಸುವ ಪವಿತ್ರ ಕಾಯಕಗಳು ಎಂಬಂತೆ ಮಾಡುತ್ತಿರುತ್ತಾರೆ.
ವಿವೇಕದಿಂದ ಎಚ್ಚರಿಸಿದವರನ್ನು ವೈರಿಗಳಂತೆ ನೋಡುತ್ತಿರುತ್ತಾರೆ. ಯಾವುದು ಸುಳ್ಳು, ಯಾವುದು ಸತ್ಯ ಎಂದು ತಿಳಿದುಕೊಳ್ಳುವ ಮನುಷ್ಯ ಸಹಜ ತಿಳಿವಳಿಕೆ ಇವರಲ್ಲಿ ಉಳಿದಿರುವುದಿಲ್ಲ. ಈ ತಿಳಿವಳಿಕೆಯನ್ನು ತೊಡೆದುಹಾಕಲು ಒಂದಷ್ಟು ಮಂದಿ ದಶಕಗಳ ಕಾಲ ದುಡಿದಿರುತ್ತಾರೆ. ಸುಮಾರು ಎಪ್ಪತ್ತು ವರ್ಷಗಳ ಕಾಲ ಛಲಬಿಡದೆ ಪ್ರಯತ್ನಿಸಿದರೆ ಎಂತಹ ಸುಳ್ಳುಗಳನ್ನಾದರೂ ಮನುಷ್ಯನ ಜೀವಕೋಶದಲ್ಲಿ ಪ್ರತಿಷ್ಠಾಪಿಸಿಬಿಡಬಹುದು ಎಂಬ ಸತ್ಯ ಮುಂದೊಂದು ದಿನ ಜ್ಞಾನಗ್ರಹಣ- ವಿಜ್ಞಾನದ (Cogntive science) ವಿದ್ಯಾರ್ಥಿಗಳಿಗೆ ಕುತೂಹಲಭರಿತ ಸಂಶೋಧನಾ ವಿಷಯವಾದೀತು.

ಹೀಗೆ ಹೇಳಿದಾಗ ಒಂದು ಪ್ರಶ್ನೆ ಬರುತ್ತದೆ. ಅಧಿಕಾರ ರಾಜಕೀಯದ ಉದ್ಯಮದಲ್ಲಿ ತೊಡಗಿರುವ ಎಲ್ಲರೂ ಸುಳ್ಳು ಹೇಳುತ್ತಾರಲ್ಲವೇ? ಮಹಾಭಾರತ ಬರೆದ ಬುದ್ಧಿವಂತ ಅಂತಹ ಧರ್ಮರಾಜನ ಪಾತ್ರದ ನಾಲಗೆಯಿಂದಲೂ ಸುಳ್ಳು ಹೇಳಿಸಿದ್ದು, ಸುಳ್ಳು ಹೇಳದೆ ಅಧಿಕಾರ ಸ್ಥಾಪನೆ ಅಸಾಧ್ಯ ಎಂಬ ಸತ್ಯವನ್ನು ತಿಳಿ ಹೇಳುವುದಕ್ಕೆ ಅಲ್ಲವೇ? ಇರಬಹುದು. ಸದ್ಯಕ್ಕೆ ಹರಿಶ್ಚಂದ್ರನ ಕತೆ ಬರೆದಾತನನ್ನು ಮರೆತುಬಿಡೋಣ. ಸುಳ್ಳಿನ ಅನಿವಾರ್ಯದ ಬಗ್ಗೆ ಹೇಳಬಹುದಾದ ಸತ್ಯ ಇಷ್ಟು: ಸುಳ್ಳು ಹೇಳುವುದು ಬೇರೆ- ಸುಳ್ಳನ್ನು ಪ್ರತಿಪಾದಿ ಸುವುದು ಬೇರೆ; ಸುಳ್ಳು ಹೇಳುವುದು ಬೇರೆ- ಸುಳ್ಳನ್ನೇ ಅವಲಂಬಿಸಿ ರಾಜಕೀಯ ನಡೆಸುವುದು ಬೇರೆ; ಸುಳ್ಳು ಹೇಳುವುದು ಬೇರೆ- ಸುಳ್ಳಿನ ಬಗ್ಗೆ ಮನುಷ್ಯರಾದವರಿಗೆ ಸಹಜವಾಗಿಯೇ ಇರಬೇಕಾದ ಕನಿಷ್ಠ ಅಂಜಿಕೆ-ಅಳುಕು-ನಾಚಿಕೆ ಇತ್ಯಾದಿಗಳೆಲ್ಲಾ ಕಳೆದೇ ಹೋಗುವುದು ಬೇರೆ; ಸುಳ್ಳು ಹೇಳುವುದು ಬೇರೆ- ಸುಳ್ಳಿನ ಸುತ್ತ ಒಂದು ಸಂಸ್ಕೃತಿಯನ್ನೇ ಕಟ್ಟುವುದು ಬೇರೆ; ಸುಳ್ಳು ಹೇಳುವುದು ಬೇರೆ- ಸುಳ್ಳು ಹೇಳುವವರಲ್ಲಿ ದೇಶಭಕ್ತಿಯನ್ನು ಮತ್ತು ಭಾವಿ ನಾಯಕತ್ವವನ್ನು ಗುರುತಿಸುವುದು ಬೇರೆ. ಈ ವ್ಯತ್ಯಾಸಗಳೆಲ್ಲಾ ಮರೆಯಾಗುತ್ತಿವೆ ಎನ್ನುವ ವಿಚಾರ ಒಂದು ಸಮಾಜವನ್ನು ಎಷ್ಟು ತೀವ್ರವಾಗಿ ಕಾಡಬೇಕಿತ್ತೋ ಅಷ್ಟು ತೀವ್ರವಾಗಿ ಕಾಡುತ್ತಿಲ್ಲ ಎಂದಾದರೆ, ಅದು ಆ ಸಮಾಜ ತನ್ನ ಸೂಕ್ಷ್ಮ ಸಂವೇದನೆಗಳನ್ನೆಲ್ಲಾ ಕಳೆದುಕೊಳ್ಳುತ್ತಿರುವುದರ ದ್ಯೋತಕ.

ಕನಿಷ್ಠ ಮಾನವ ಸಂವೇದನೆ ಕಳೆದುಕೊಂಡ ಸಮಾಜದಲ್ಲಿ ಸಂವಿಧಾನ ಎನ್ನುವುದು ಆಟಕ್ಕೆ ಮಾತ್ರ ಇರುತ್ತದೆ; ಲೆಕ್ಕಕ್ಕೆ ಇರುವುದಿಲ್ಲ. ಸುಳ್ಳುಗಳನ್ನು ಕೆಲವೊಮ್ಮೆ ಜನ ಒಪ್ಪುತ್ತಾರೆ. ಸುಳ್ಳುಗಳಿಗೆ ತಲೆದೂಗುತ್ತಾರೆ. ಆಗ ಸುಳ್ಳು ಹೇಳುವವನಿಗೆ ತಾನು ಹೇಳುವ ಸುಳ್ಳುಗಳೆಲ್ಲ ಸುಂದರವಾಗಿ ಕಾಣಿಸುತ್ತವೆ. ಸುಳ್ಳನ್ನು ಮೀರಿದ ಅಸ್ತ್ರವೇ ಇಲ್ಲ ಅಂತ ಅನ್ನಿಸತೊಡಗುತ್ತದೆ. ಒಂದು ಸುಳ್ಳನ್ನು ಅರಗಿಸಿಕೊಳ್ಳಲು ಮತ್ತೊಂದು ಸುಳ್ಳು ಹೇಳಬೇಕಾಗುತ್ತದೆ. ಕೊನೆಗೆ ಸುಳ್ಳಿನ ಅವಶ್ಯಕತೆ ಗಳನ್ನು ತನ್ನೊಬ್ಬನಿಂದಲೇ ನಿಭಾಯಿಸಲಾಗುವುದಿಲ್ಲ ಎಂದಾಗ ಸುಳ್ಳುಗಳನ್ನು ಕೈಗಾರಿಕೋಪಾದಿಯಲ್ಲಿ ಸೃಷ್ಟಿಸಲು ಒಂದು ಸೈನ್ಯವನ್ನೇ ಪೋಷಿಸಬೇಕಾಗುತ್ತದೆ. ಆಧುನಿಕ ತಂತ್ರಜ್ಞಾನವು ಸುಳ್ಳುಗಳ ಅಸ್ತ್ರಗಳಿಗೆ ಅದ್ಭುತ ಉಡಾವಣಾ ವೇದಿಕೆಗಳನ್ನು ಒದಗಿಸುತ್ತದೆ. ರಾಯಭಾರ, ಸಾರ್ವಜನಿಕ ಸಂಪರ್ಕ ಮುಂತಾದ ಉದ್ಯೋಗಗಳಲ್ಲಿ ತೊಡಗಿದವರು ಸತ್ಯ ಮತ್ತು ಸುಳ್ಳುಗಳ ನಡುವೆ ನಾಜೂಕಾಗಿ ವ್ಯವಹರಿಸಬೇಕಾಗುತ್ತದೆ. ಆದರೆ ನಿಜವಾದ ನಾಯಕನಿಗೆ ತನ್ನ ಸಾಮರ್ಥ್ಯದ ಬಗ್ಗೆ, ತನ್ನ ವರ್ಚಸ್ಸಿನ ಬಗ್ಗೆ ಮತ್ತು ತನ್ನ ಜನಪ್ರಿಯತೆಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಅಗತ್ಯ ಇರುವುದಿಲ್ಲ. ಟೈರು ಸುಟ್ಟಾಗ ಏಳುವ ಹೊಗೆಯೋಪಾದಿಯಲ್ಲಿ ತನ್ನ ಬಗ್ಗೆ ಹಬ್ಬುವ ಸುಳ್ಳು ಸುದ್ದಿಗಳನ್ನು ನಿಜವಾದ ನಾಯಕ ಗಮನಿಸಿಯೂ ಗಮನಿಸದಂತಿರುವುದಿಲ್ಲ. ಸುಳ್ಳಿನ ಮೆಟ್ಟಿಲುಗಳನ್ನು ಬಳಸಿ ಅಧಿಕಾರಕ್ಕೇರಿದ ನಾಯಕನಲ್ಲಿ ಭಾಗ್ಯವಿಧಾತನನ್ನು ಕಾಣುವವರು ಸಂವಿಧಾನವನ್ನು ಒಪ್ಪುತ್ತೇವೆ ಅಥವಾ ಗೌರವಿಸುತ್ತೇವೆ ಎಂದರೆ ಅದು ಅವರು ನಂಬುವ ಸುಳ್ಳಿನ ಮತ್ತೊಂದು ಅಭಿವ್ಯಕ್ತಿ.

ಅಮೆರಿಕದ ಜನ ನಾಲ್ಕು ವರ್ಷ ಅಸತ್ಯವೇ ಮೂರ್ತಿವೆತ್ತ ನಾಯಕತ್ವವೊಂದನ್ನು ಒಪ್ಪಿಕೊಂಡಂತೆ ಕಂಡರೂ ಆ ದೇಶದಲ್ಲಿ ಸತ್ಯ ಮತ್ತು ಅಸತ್ಯಗಳನ್ನು ಪ್ರತ್ಯೇಕಿಸುವ ಸಂವೇದನೆ ದೊಡ್ಡ ಮಟ್ಟಿಗೆ ನಷ್ಟವಾಗಲಿಲ್ಲ. ಆದಕಾರಣ ಅಲ್ಲಿನ ಮಾಧ್ಯಮಗಳು ಈ ಅವಧಿಯುದ್ದಕ್ಕೂ ಅಸತ್ಯದ ಸುತ್ತ ಎದ್ದು ನಿಂತ ನಾಯಕತ್ವವನ್ನು ಪ್ರಶ್ನಿಸದೇ ಇರುವ ತಪ್ಪು ಮಾಡಲಿಲ್ಲ. ಕೊನೆಗೂ ನವೆಂಬರ್‌ನಲ್ಲಿ ಅಲ್ಲಿನ ಚುನಾವಣಾ ಫಲಿತಾಂಶ ಬಂದಾಗ ಜಗತ್ತಿ ನಾದ್ಯಂತ ಸತ್ಯವನ್ನು ಗೌರವಿಸುವ ಮನಸ್ಸುಗಳು ನಿಟ್ಟುಸಿರಿಟ್ಟವು. ಸೋತು ಮನೆ ಸೇರಿದ ಡೊನಾಲ್ಡ್ ಟ್ರಂಪ್ ತಮ್ಮ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು 30,573 ಸುಳ್ಳುಗಳನ್ನು ಹೇಳಿದ್ದಾಗಿ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ವರದಿ ಮಾಡಿದೆ. ಟ್ರಂಪ್ ತನ್ನ ಅಧ್ಯಕ್ಷಗಿರಿಯ ಮೊದಲ ವರ್ಷದಲ್ಲಿ ದಿನವೊಂದಕ್ಕೆ ಸರಾಸರಿ ಆರು ಸುಳ್ಳುಗಳನ್ನು, ಎರಡನೆಯ ವರ್ಷದಲ್ಲಿ 16 ಸುಳ್ಳುಗಳನ್ನು, ಮೂರನೆಯ ವರ್ಷಕ್ಕೆ 22 ಸುಳ್ಳುಗಳನ್ನು ಮತ್ತು ಕೊನೆಯ ವರ್ಷದಲ್ಲಿ 39 ಸುಳ್ಳುಗಳನ್ನು ಹೇಳುತ್ತಿದ್ದರು ಎಂದು ಪತ್ರಿಕೆ ಅಲ್ಲಿನ ಜನರಿಗೆ ಲೆಕ್ಕಪತ್ರ ಒಪ್ಪಿಸಿತು. ಸೋತ ನಂತರವೂ ‘ನನ್ನ ಸೋಲೇ ಒಂದು ಸುಳ್ಳು’ ಅಂತ ಟ್ರಂಪ್ ತನ್ನ ಬೆಂಬಲಿಗರನ್ನು ಹಿಂಸಾಕೃತ್ಯಕ್ಕೆ ಪ್ರೇರೇಪಿಸತೊಡಗಿದಾಗ ಸಮಕಾಲೀನ ತತ್ವಶಾಸ್ತ್ರಜ್ಞ ಮತ್ತು ಬರಹಗಾರ ಸ್ಯಾಮ್ಯುಯೆಲ್ ಬೆಂಜಮಿನ್ ಹ್ಯಾರಿಸ್ ಹತಾಶೆಯಿಂದ ಅಮೆರಿಕ ಈಗ ಸುಳ್ಳುಗಳ ಗಣರಾಜ್ಯ (Republic of Lies) ಆಗಿಬಿಟ್ಟಿದೆಯೇನೋ ಅಂತ ಪ್ರಶ್ನಿಸಿದರು. ಆದರೆ ಅಮೆರಿಕದ ಸುಳ್ಳಿನ ಮಾದರಿಗೆ ನಮಸ್ತೆ ಅಂತ ಹೇಳಿದ ನಾಯಕರನ್ನು ಹೊಂದಿದ ಕೆಲವು ಗಣತಂತ್ರ ದೇಶಗಳಲ್ಲಿ ಸುಳ್ಳುಗಳ ಲೆಕ್ಕ ಇಡಬೇಕಾದ ಪತ್ರಿಕೆಗಳೇ ಸುಳ್ಳುಗಳ ಉದ್ಯಮದಲ್ಲಿ ಪಾಲುದಾರಿಕೆ ಪಡೆದದ್ದು, ನ್ಯಾಯದೇವತೆ ಕಣ್ಣಿಗೆ ಕಟ್ಟಿದ ಬಟ್ಟೆಯೆಡೆಯಿಂದಲೇ ಕಣ್ಣುಮುಚ್ಚಾಲೆ ಯಾಡಿದ್ದು, ಅಧಿಕೃತ ಅಂಕೆ-ಸಂಖ್ಯೆ-ಸಮೀಕ್ಷೆ
ಗಳೆಲ್ಲಾ ವಿಶ್ವಾಸಾರ್ಹತೆ ಕಳೆದುಕೊಂಡದ್ದು ಮುಂತಾದ ವಿದ್ಯಮಾನಗಳೆಲ್ಲವೂ ಸಂವಿಧಾನದ ಆವರಣ ದೊಳಗಿಂದಲೇ ಸಹ್ಯವೆನಿಸಲ್ಪಟ್ಟವು!

* * *

ಸುಳ್ಳುಗಳ ಭಾರದಿಂದಾಗಿ ಗಣತಂತ್ರಕ್ಕೆ ಗ್ಲಾನಿಯಾದಾಗ ಸತ್ಯದ ಮಹತ್ವವನ್ನು ಸಾರುವುದಕ್ಕಾಗಿ, ಕುಸಿದುಹೋಗಿರುವ ನಂಬಿಕೆಗಳ ಮರು-ಸಂಸ್ಥಾಪನಾರ್ಥ
ವಾಗಿ, ಕೆಲವೆಡೆ ಪರ್ಯಾಯ ಪಥಸಂಚಲನಗಳು ಸಂಭವಿಸುತ್ತವೆ. ‘ಸತ್ಯಮೇವ ಜಯತೆ’ ಎಂಬ ಉದ್ಘೋಷ ಭಾರತದ ಸಂವಿಧಾನದ ಪೀಠಿಕೆಗೆ ಪೀಠಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.