ADVERTISEMENT

ವಿಶ್ಲೇಷಣೆ| ಚುನಾವಣೆಯ ಎದುರು ಲೋಹಿಯಾ ಧ್ಯಾನ

ರಾಜಕಾರಣಕ್ಕೆ ಘನತೆ ತಂದ ಲೋಹಿಯಾ ಚಿಂತನೆಗಳು ಈ ಕಾಲಕ್ಕೂ ಸ್ಫೂರ್ತಿಯಾಗಲಿ!

ನಟರಾಜ ಹುಳಿಯಾರ್
Published 23 ಮಾರ್ಚ್ 2023, 22:35 IST
Last Updated 23 ಮಾರ್ಚ್ 2023, 22:35 IST
.
.   

ಚುನಾವಣೆಯ ಗಡಿಬಿಡಿಯಲ್ಲಿ ಮುಳುಗಿರುವ ಕರ್ನಾಟಕದ ಜನ, ಲೋಹಿಯಾ ಹುಟ್ಟುಹಬ್ಬದ (23 ಮಾರ್ಚ್ 1910) ನೆಪದಲ್ಲಾದರೂ ಅವರ ಸಮಾಜವಾದಿ ರಾಜಕಾರಣವನ್ನು ನೆನೆಯಬೇಕಾದ ಅಗತ್ಯವಿದೆ. ರಾಜಕಾರಣ ಎಷ್ಟೇ ಕೆಟ್ಟರೂ ಅದನ್ನು ರಿಪೇರಿ ಮಾಡುವ ಹೊಸ ನಾಯಕರು, ಜನಸಾಮಾನ್ಯರು ತಯಾರಾಗುತ್ತಲೇ ಇರುತ್ತಾರೆ ಎಂಬ ಡಾ. ರಾಮಮನೋಹರ ಲೋಹಿಯಾ ಅವರ ನಂಬಿಕೆ, ಇಚ್ಛಾಶಕ್ತಿಗಳನ್ನು ಈಗ ಮತ್ತೆ ಹಬ್ಬಿಸಲೇಬೇಕಾದ ಜರೂರಿದೆ.

ನಟರಾಜ್‌ ಹುಳಿಯಾರ್‌

ಇಂಥ ಬದ್ಧತೆಯಿಂದ ಕಾರ್ಯಕರ್ತರನ್ನು ಅಣಿಗೊಳಿಸುತ್ತಿದ್ದ ಲೋಹಿಯಾ, ಸಮಾಜವಾದಿ ಪಕ್ಷದ ನಿಜವಾದ ಬೆನ್ನೆಲುಬು ಕಾರ್ಯಕರ್ತರು ಎಂದು ನಂಬಿ ಅವರನ್ನು ಸಮಾನವಾಗಿ ಕಾಣುತ್ತಿದ್ದರು. ಅವರನ್ನು ತಾತ್ವಿಕವಾಗಿ ಅಣಿ ಮಾಡುತ್ತಿದ್ದರು. ಹೊಟ್ಟೆ ತುಂಬಿದ ಜನ ಸಿನಿಕರಾಗಿ ಮಾತಾಡಬಹುದು, ಆದರೆ ನಿತ್ಯ ಹೊಟ್ಟೆಬಟ್ಟೆಗೆ ಪರದಾ ಡುವ ಜನ ಇಲ್ಲಿ ಏನಾದರೂ ಬದಲಾವಣೆ ಆದೀತೆಂದು ಪ್ರತೀ ಚುನಾವಣೆಯಲ್ಲೂ ಕಾಯುತ್ತಿರುತ್ತಾರೆ, ಅಂಥ ಜನರಲ್ಲಿ ಸರಿಯಾದ ರಾಜಕೀಯ ಪ್ರಜ್ಞೆಯನ್ನು ಹರಿತಗೊಳಿಸಿದರೆ ಅವರೇ ರಾಜಕೀಯ ಬದಲಾವಣೆ ತರುತ್ತಾರೆ ಎಂದು ಲೋಹಿಯಾ ನಂಬಿದ್ದರು.

ಚುನಾವಣಾ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿಕೊಳ್ಳುವ ಈ ಕಾಲದ ಬಹುತೇಕ ರಾಜಕೀಯ ಪಕ್ಷಗಳಿಗೆ ಲೋಹಿಯಾ ಥರದವರು ರೂಪಿಸುತ್ತಿದ್ದ ಚುನಾವಣಾ ಪ್ರಣಾಳಿಕೆಗಳಿಗೆ ಇರುತ್ತಿದ್ದ ದೇಶನಿರ್ಮಾಣದ ಸಮಗ್ರ ಗುರಿಯ ಅರಿವೇ ಇರುವಂತಿಲ್ಲ. ಪ್ರಣಾಳಿಕೆ ಎನ್ನುವುದು ಸಂತೆಯ ಹೊತ್ತಿಗೆ ನೇಯ್ದ ಕಾರ್ಯಕ್ರಮ, ಭರವಸೆಗಳ ಪಟ್ಟಿಯಲ್ಲ; ಅದು ಸಮಾಜವನ್ನು ಆರೋಗ್ಯಕರವಾಗಿ ಮರುರೂಪಿಸಲು ಜವಾಬ್ದಾರಿಯುತ ರಾಜಕೀಯ ಪಕ್ಷವೊಂದು ಕೊಡುವ ವಾಗ್ದಾನ ಎಂದು ಲೋಹಿಯಾ ನಂಬಿದ್ದರು. ಚುನಾವಣಾ ಪ್ರಣಾಳಿಕೆ ಎನ್ನುವುದು ರಾಜಕೀಯ ಪಕ್ಷವೊಂದು ಸಮುದಾಯದ ಕನಸನ್ನು ಸಾಮೂಹಿಕವಾಗಿ ಮಂಡಿಸುವ ದಾಖಲೆಯೆಂಬ ಸ್ಪಷ್ಟತೆ ಸಮಾಜವಾದಿ ಪಕ್ಷಕ್ಕಿತ್ತು. ಮುಂದೆ ಬಂದ ರಾಜಕೀಯ ಪಕ್ಷಗಳಿಗೆ ಈ ಪ್ರಣಾಳಿಕೆಗಳೇ ಕೈಮರ ಗಳಂತಿದ್ದವು. ಈ ಪ್ರಣಾಳಿಕೆಗಳಲ್ಲಿದ್ದ ಭೂ ಹಂಚಿಕೆ, ಭಾಷಾ ನೀತಿ, ಲಿಂಗ ಸಮಾನತೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ, ಜಾತ್ಯತೀತ ರಾಷ್ಟ್ರೀಯತೆ, ಭೂ ಕಂದಾಯ ರದ್ದತಿ, ರೈತಪರ ನೀತಿಯಂತಹ ಅನೇಕ ಅಂಶಗಳು ಮುಂದೆ ವಿವಿಧ ಪಕ್ಷಗಳ ಸರ್ಕಾರಗಳಲ್ಲಿ ಜಾರಿಗೆ ಬಂದಿರುವುದನ್ನು ಮರೆಯಬಾರದು. ಹಿಂದುಳಿದ ವರ್ಗಗಳ ರಾಜಕೀಯ ಕುರಿತು ಸಮಾಜವಾದಿ ಪಕ್ಷ ಮಾಡಿದ ಪ್ರಯೋಗಗಳನ್ನು ಹಿಂದಿನ ದಶಕಗಳ ವಿವಿಧ ರಾಜಕೀಯ ಪಕ್ಷಗಳು ಅನುಕರಿಸಿವೆ, ಕೆಲವು ತತ್ವಹೀನ ಪಕ್ಷಗಳು ಅಂಥ ಪ್ರಯೋಗಗಳನ್ನು ವಿಕೃತಗೊಳಿಸಿವೆ.

ADVERTISEMENT

ಲೋಹಿಯಾರ ನಿತ್ಯದ ರಾಜಕಾರಣ ಹಾಗೂ ಚುನಾವಣಾ ರಾಜಕಾರಣಗಳು ಸ್ವಾತಂತ್ರ್ಯ ಚಳವಳಿಯ ಕಾಲದ ಆದರ್ಶವನ್ನು, ಅದೇ ಆಗ ರೂಪುಗೊಳ್ಳುತ್ತಿದ್ದ ದೇಶವೊಂದರ ಮುನ್ನೋಟಗಳನ್ನು ಮುಂದಿನ ಕಾಲಘಟ್ಟಗಳಲ್ಲಿ ವಿಸ್ತರಿಸಿದ ರೀತಿ ಆದರ್ಶಪ್ರಾಯವಾದುದು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದ ಪಕ್ಷವಾಗಲೀ ಸ್ವಾತಂತ್ರ್ಯ ಚಳವಳಿಯಲ್ಲಿ ಎಂದೂ ಭಾಗಿಯಾಗದ ಪಕ್ಷಗಳಾಗಲೀ ಇವತ್ತು ಕೊಡುತ್ತಿರುವ ಚುನಾವಣಾ ಪ್ರಣಾಳಿಕೆಗಳನ್ನು ಗಮನಿಸಿ: ಈ ಪಕ್ಷಗಳಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೋಟ್ಯಂತರ ಮಹನೀಯರು, ಮಹಿಳೆಯರ ಕನಸುಗಳಾಗಲೀ ಸ್ವಾತಂತ್ರ್ಯ ಹೋರಾಟದ ಮೂಲ ಆಶಯಗಳಾಗಲೀ ನೆನಪೇ ಇಲ್ಲದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಚುನಾವಣಾ ಕಾಲದಲ್ಲಿ ಲೋಹಿಯಾ ಥರದವರು ಮಾಡುತ್ತಿದ್ದ ಭಾಷಣಗಳಲ್ಲಿದ್ದ ಆರೋಗ್ಯ ಹಾಗೂ ಘನತೆಯನ್ನು ಗಮನಿಸಿ: ಲೋಹಿಯಾ ಹಾಗೂ ಅವರ ಪ್ರಿಯ ರಾಜಕೀಯ ಸಂಗಾತಿಯಾಗಿದ್ದ ಶಾಂತವೇರಿ ಗೋಪಾಲಗೌಡರು ತಮ್ಮ ಚುನಾವಣಾ ಭಾಷಣಗಳಲ್ಲಿ ಜನರ ಅವಿವೇಕ, ಅಜ್ಞಾನಗಳನ್ನು ತೊಡೆಯಲೆತ್ನಿಸುತ್ತಿದ್ದರು. ಆಳವಾಗಿ ಯೋಚಿಸಿ, ಜವಾಬ್ದಾರಿಯಿಂದ ಮಾತಾಡುತ್ತಿದ್ದ ಅವರು ದೇಶದ, ರಾಜ್ಯದ ಆರ್ಥಿಕ, ಸಾಮಾಜಿಕ ಸವಾಲುಗಳು, ಸಂಪನ್ಮೂಲಗಳನ್ನು ಸರ್ಕಾರಗಳು ಬಳಸಬೇಕಾದ ರೀತಿ, ರಾಜ್ಯದ ಮುಂದಿನ ದಿಕ್ಕು ಮುಂತಾದವನ್ನು ವಿವರವಿವರವಾಗಿ ಜನರ ಮುಂದಿಡುತ್ತಿದ್ದರು. ಚುನಾವಣಾ ಭಾಷಣಗಳು ಜನರಿಗೆ ನಿಜವಾದ ರಾಜಕೀಯ ಶಿಕ್ಷಣ ನೀಡುವ ಸಾಧನಗಳಾಗಿದ್ದವು. ಅವರ ಸಭಿಕರು ದುಡ್ಡು ಕೊಟ್ಟು ಎಳೆದುಕೊಂಡು ಬಂದ ಅಸಹಾಯಕ ಮತದಾರರಾಗಿರಲಿಲ್ಲ. ತಮ್ಮ ನಾಯಕರು ಮಾತಾಡುವುದನ್ನು ಕೇಳಿಸಿಕೊಂಡು ನಿಜಕ್ಕೂ ಸ್ಫೂರ್ತಿಗೊಳ್ಳಲು ಕಾತರರಾಗಿದ್ದ ಜನರಾಗಿದ್ದರು. ಈ ಚಿತ್ರಗಳ ಹಿನ್ನೆಲೆಯಲ್ಲಿ ಇವತ್ತಿನ ಚುನಾವಣೆಗಳ ತಿರುಚು ಮುಖಗಳ, ವಿಷ ಕಾರುವ, ಹುಸಿ ವೀರಾವೇಶದ ಆವುಟಗಳನ್ನು ನೋಡಿದರೆ ನಾವೀಗ ಆ ಭಾರತದಲ್ಲಿಲ್ಲವೇನೋ ಅನ್ನಿಸತೊಡಗುತ್ತದೆ!

ಚುನಾವಣೆಯ ಸೋಲು, ಗೆಲುವುಗಳನ್ನು ಲೋಹಿಯಾ ನೋಡುವ ರೀತಿಯೂ ಭಿನ್ನವಾಗಿತ್ತು. ಈ ಕಾಲದ ಅನೇಕ ನಾಯಕರಂತೆ ಚುನಾವಣೆ ಸೋತ ನಂತರ ಮುಂದಿನ ಐದು ವರ್ಷ ಅವರು ಕಣ್ಮರೆಯಾಗುತ್ತಿರಲಿಲ್ಲ. ಎಲ್ಲರಂತೆ ಅವರು ಕೂಡ ಸೋಲಿನಿಂದ ಕುಗ್ಗಿದರೂ ಸೋಲನ್ನು ತಾತ್ವಿಕವಾಗಿ ಸ್ವೀಕರಿಸಿ, ಮುಂದಿನ ರಾಜಕಾರಣದ ಹೆಜ್ಜೆಗಳನ್ನು ವಿವರಿಸಿಕೊಳ್ಳುತ್ತಿದ್ದರು. ವಿರೋಧ ಪಕ್ಷವೊಂದು ಪಾರ್ಲಿಮೆಂಟ್ ಅಥವಾ ವಿಧಾನಸಭೆಯೊಳಗೆ ಮಾತ್ರವೇ ಕೆಲಸ ಮಾಡಬೇಕೆಂದಿಲ್ಲ; ಈ ಸಂಸ್ಥೆಗಳ ಹೊರಗೇ ತಮ್ಮ ಕೆಲಸ ಹೆಚ್ಚು ಇದೆ ಎಂದು ತಿಳಿದು ಮುಂದಿನ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುತ್ತಿದ್ದರು. ನೆಹರೂ ವಿರುದ್ಧ ನಿಂತು ಸೋತರೂ, ನೆಹರೂ ಆಡಳಿತದ ವಿರುದ್ಧ ಜನಾಭಿಪ್ರಾಯ ರೂಪಿಸಿದ ನೆಮ್ಮದಿಯಲ್ಲಿದ್ದವರು ಲೋಹಿಯಾ!

ನೆಹರೂ ಪಡೆದ 1,18,931 ಮತಗಳ ಎದುರು ಲೋಹಿಯಾ ಪಡೆದ 54,360 ವೋಟುಗಳು ಸರ್ಕಾರದ ನೀತಿಗಳ ಬಗ್ಗೆ ಸ್ಪಷ್ಟ ಭಿನ್ನಮತವುಳ್ಳ ಜನರ ವೋಟುಗಳಾಗಿದ್ದವು. ತಮ್ಮ ಪಕ್ಷ ಅಂಥ ಭಿನ್ನಮತವನ್ನು ರೂಪಿಸುವ ಸಮರ್ಥ ಸಾಧನವಾಗಿದ್ದು ಹಾಗೂ ಜನ ತಮ್ಮ ಸಮಾಜವಾದಿ ಚಿಂತನೆಯನ್ನು ಒಪ್ಪಿ ಕೂಡ ಮತ ಹಾಕಿದ್ದು ಲೋಹಿಯಾರ ಮುಂದಿನ ರಾಜಕೀಯ ಹಾದಿಯ ದಿಕ್ಕುಗಳನ್ನು ತೋರಿಸುತ್ತಿದ್ದವು. ಮುಂದೆ ಎರಡು ಸಲ ಚುನಾವಣೆ ಗೆದ್ದಾಗ ಲೋಕಸಭೆಯಲ್ಲಿ ಅವರು ಮಂಡಿಸಿದ ವಿಚಾರಗಳು ಇವತ್ತಿಗೂ ಯಾವುದೇ ಶಾಸಕ, ಲೋಕಸಭಾ ಸದಸ್ಯರಿಗೆ ಅದ್ಭುತ ಕೈಪಿಡಿಗಳಂತಿವೆ.

ಲೋಹಿಯಾ ಸಮಾಜವಾದ ಕರ್ನಾಟಕದ ರಾಜಕಾರಣಕ್ಕೆ ಕೊಟ್ಟ ಪ್ರೇರಣೆಗಳು ಅತ್ಯಂತ ಆರೋಗ್ಯಕರವಾದವು. ಸಮಾಜವಾದಿ ಪಕ್ಷದ ‘ಕಿಸಾನ್ ಮಹಾಸಭಾ’ದ ‘ಉಳುವವನೇ ಹೊಲದೊಡೆಯ’ ಘೋಷಣೆ ಕರ್ನಾಟಕದಲ್ಲಿ ಶಾಂತವೇರಿ ಗೋಪಾಲಗೌಡರ ಮೂಲಕ ವಿಧಾನಸಭೆಯಲ್ಲಿ ಮತ್ತೆ ಮತ್ತೆ ಮೊಳಗಿತು. ವಿವಿಧ ಘಟ್ಟಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದ ಎಸ್‌.ಬಂಗಾರಪ್ಪ, ಜೆ.ಎಚ್.ಪಟೇಲ್ ಸಮಾಜವಾದಿ ಪಕ್ಷದಿಂದ ಬಂದವರು. ಸಿದ್ದರಾಮಯ್ಯನವರು ಸಮಾಜ ವಾದಿ ಚಿಂತನೆಯಿಂದ ರೂಪುಗೊಂಡವರು. ದೇವರಾಜ ಅರಸು ಸಮಾಜವಾದವನ್ನು ಚೆನ್ನಾಗಿ ಗ್ರಹಿಸಿದವರು, ಸಮಾಜವಾದ ಸ್ಪರ್ಶಿಸಿದ ಈ ಎಲ್ಲರೂ ಬಗೆಬಗೆಯಲ್ಲಿ ರಾಜ್ಯದ ಆರೋಗ್ಯ ಕಾಪಾಡಿದ್ದಾರೆ, ಜನರ ಮನಸ್ಸನ್ನು ಬೆಸೆಯುವ ರಾಜಕಾರಣವನ್ನೇ ಮಾಡಿದ್ದಾರೆ. ಈ ಅಂಶ ಲೋಹಿಯಾ ಹಾಗೂ ಆನಂತರ ಜೆ.ಪಿ. ರೂಪಿಸಿದ ಸಮಾಜವಾದಿ ಚಿಂತನೆ ಕರ್ನಾಟಕದ ರಾಜಕಾರಣದ ಮೇಲೆ ಬೀರಿರುವ ಅದ್ಭುತ ಪ್ರಭಾವವನ್ನು ಹೇಳುತ್ತದೆ.

1967ರ ಅಕ್ಟೋಬರ್‌ನಲ್ಲಿ ತೀರಿಕೊಳ್ಳುವ ಕೆಲವು ದಿನ ಮೊದಲು ಆಸ್ಪತ್ರೆಯಲ್ಲಿ ಮಲಗಿದ್ದ ಲೋಹಿಯಾ ಇದ್ದಕ್ಕಿದ್ದಂತೆ ಗೆಳತಿ ರಮಾಮಿತ್ರರನ್ನು ಕೇಳಿದರು: ‘ಇಳಾ ರಾಣಿ! ನಿಜ ಹೇಳು, ಈ ದೇಶದಲ್ಲಿ ಒಳ್ಳೆಯದೇನಾದರೂ ನಡೀತಾ ಇದೆಯಾ? ಹಿಂದೂ- ಮುಸ್ಲಿಂ ಏಕತೆಯ ಬಗ್ಗೆ ಏನಾದರೂ ಪ್ರಯತ್ನ ನಡೀತಾ ಇದೆಯಾ? ಬಡ ರೈತರ ಕಷ್ಟದ ಬಗ್ಗೆ ಯಾರಾದ್ರೂ ಯೋಚನೆ ಮಾಡ್ತಿದಾರಾ?’ ಚಣ ಬಿಟ್ಟು ವ್ಯಗ್ರರಾಗಿ ಲೋಹಿಯಾ ಹೇಳಿದ ಮಾತು: ‘ಈ ದೇಶದಲ್ಲಿ ವಸ್ತುಗಳನ್ನ ರಕ್ಷಣೆ ಮಾಡ್ತಾರೆ, ಆದರೆ ಜನ ಹುಳುಗಳ ಥರಾ ಸಾಯ್ತಾ ಇದ್ರೂ ಅವರನ್ನ ಯಾರೂ ಕೇರ್ ಮಾಡೋರಿಲ್ಲ’.

ಕರ್ನಾಟಕದ ರಾಜಕಾರಣ, ಸಂಸ್ಕೃತಿ ಚಿಂತನೆ, ದಲಿತ ಚಳವಳಿ, ರೈತ ಚಳವಳಿಗಳಿಗೆ ಹಲ ಬಗೆಯ ಪ್ರೇರಣೆ ನೀಡಿರುವ ಲೋಹಿಯಾರ ಈ ಕಾಳಜಿಯ ಪ್ರಶ್ನೆಗಳನ್ನು ನಾಡಿನ ಪ್ರಜ್ಞಾವಂತರು ಮತ್ತೆ ಕೇಳುವಂತಾಗಲಿ. 1967ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ರೂಪುಗೊಳ್ಳತೊಡಗಿದ್ದಾಗ ಲೋಹಿಯಾ ಬರೆದ ಸಾಲುಗಳಿವು: ‘ಬದಲಾವಣೆಯ ಗಾಳಿ ಬೀಸುತ್ತಿದೆ. ಆದರೆ ಬದಲಾವಣೆಯ ದಿಕ್ಕು ಇನ್ನೂ ನಿರ್ಧಾರವಾಗಿಲ್ಲ… ಬದಲಾವಣೆಯ ಗಾಳಿಯನ್ನು ಯಾವುದೂ ತಡೆಯಲಾಗದು’. ಲೋಹಿಯಾ ಮಾತು ಹತ್ತು ವರ್ಷಗಳ ನಂತರ ನಿಜವಾಯಿತು. ಅದೇ ಮಾತು ಈಗ ಬದಲಾದ ರಾಜಕೀಯ ಚಿತ್ರಗಳ ಕಾಲದಲ್ಲೂ ಮರು ದನಿಸುವಂತಾಗಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.