ADVERTISEMENT

ಸಂದೀಪ್ ಶಾಸ್ತ್ರಿ ಲೇಖನ | ವಿಧಾನಸಭೆ: ಅರ್ಧಹಾದಿಯಲ್ಲಿ ಕಂಡಿದ್ದು...

ಕರ್ನಾಟಕ ರಾಜಕೀಯದ ಹಾದಿಯನ್ನು ರೂಪಿಸುವಲ್ಲಿ ಮುಂದಿನ ಎರಡು ವರ್ಷಗಳು ಮಹತ್ವದ್ದಾಗಿರುತ್ತವೆ

ಪ್ರೊ. ಸಂದೀಪ್ ಶಾಸ್ತ್ರಿ
Published 8 ಮಾರ್ಚ್ 2021, 21:01 IST
Last Updated 8 ಮಾರ್ಚ್ 2021, 21:01 IST
   

ಕರ್ನಾಟಕ ವಿಧಾನಸಭೆಯು ಹಾಲಿ ಅವಧಿಯ 60 ತಿಂಗಳುಗಳ ಪೈಕಿ 33 ತಿಂಗಳುಗಳನ್ನು ಫೆಬ್ರುವರಿಯಲ್ಲಿ ಪೂರ್ಣಗೊಳಿಸಿದೆ. ಹಾಲಿ ಅವಧಿಯಲ್ಲಿ ಇನ್ನುಳಿದಿರುವುದು 27 ತಿಂಗಳುಗಳು ಮಾತ್ರ. 2018ರಲ್ಲಿ ರಚನೆಯಾದ ಈಗಿನ ವಿಧಾನಸಭೆಯು ತನ್ನ ಅರ್ಧದಷ್ಟು ಅವಧಿಯಲ್ಲಿ ಕಂಡಿರುವ ಏಳುಬೀಳುಗಳನ್ನು ಗಮನಿಸುವುದು ಈ ಸಂದರ್ಭದಲ್ಲಿ ಆಸಕ್ತಿಕರ ಅನ್ನಿಸಬಹುದು.

ಈ ವಿಧಾನಸಭೆಯು ಮೂವರು ಮುಖ್ಯಮಂತ್ರಿಗಳನ್ನು ಕಂಡಿದೆ. ಈ ಅವಧಿಯಲ್ಲಿ ವಿಧಾನಸಭೆಯ 21 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ, ಮೂರು ಕ್ಷೇತ್ರಗಳು ಈಗಲೂ ಖಾಲಿ ಇದ್ದು ಉಪಚುನಾವಣೆ ನಡೆಯಬೇಕಿದೆ. ನಡೆದಿರುವ ಉಪಚುನಾವಣೆಗಳು ರಾಜ್ಯದ ರಾಜಕೀಯದಲ್ಲಿ ದೂರಗಾಮಿ ಪರಿವರ್ತನೆ ಗಳನ್ನು ತಂದಿವೆ. ವಿಧಾನಸಭೆಯ ಸಮೀಕರಣದ ಬದ ಲಾವಣೆಗಳ ಮೂಲಕ, 33 ತಿಂಗಳ ಅವಧಿಯಲ್ಲಿನ ಕಠಿಣ ಸನ್ನಿವೇಶಗಳ ಪರಿಶೀಲನೆ ನಡೆಸಬಹುದು.

ಕಳೆದ ಎಂಟು ವಿಧಾನಸಭೆಗಳನ್ನು (1985ರ ನಂತರದ 35 ವರ್ಷಗಳ ಅವಧಿ) ಗಮನಿಸಿದರೆ, ಎರಡು ಅವಧಿಗಳಲ್ಲಿ ಮಾತ್ರ (1999ರಿಂದ 2004 ಹಾಗೂ 2013ರಿಂದ 2018) ಮುಖ್ಯಮಂತ್ರಿಗಳು ಪೂರ್ಣ ಅವಧಿಯನ್ನು ಪೂರೈಸಿದ್ದು ಕಂಡುಬರುತ್ತದೆ (ಎಸ್.ಎಂ.ಕೃಷ್ಣ ಹಾಗೂ ಸಿದ್ದರಾಮಯ್ಯ). ಎರಡು ಬಾರಿ ಒಂದೇ ಅವಧಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳು ಆಗಿಹೋಗಿದ್ದಾರೆ (ರಾಮಕೃಷ್ಣ ಹೆಗಡೆ ಮತ್ತು ಎಸ್.ಆರ್. ಬೊಮ್ಮಾಯಿ– 1985–89; ಎಚ್.ಡಿ. ದೇವೇಗೌಡ ಮತ್ತು ಜೆ.ಎಚ್. ಪಟೇಲ್ 1994–99). ವಿಧಾನಸಭೆಯ ನಾಲ್ಕು ಅವಧಿಗಳಲ್ಲಿ ಪ್ರತೀ ಬಾರಿಯೂ ತಲಾ ಮೂವರು ಮುಖ್ಯಮಂತ್ರಿಗಳನ್ನು ರಾಜ್ಯ ಕಂಡಿದೆ (ವೀರೇಂದ್ರ ಪಾಟೀಲ, ಎಸ್. ಬಂಗಾರಪ್ಪ, ವೀರಪ್ಪ ಮೊಯಿಲಿ 1989–94; ಎನ್. ಧರ್ಮಸಿಂಗ್ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ 2004–2007; ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ ಶೆಟ್ಟರ್ 2008 –13; 2018ರಿಂದ ಇದುವರೆಗೆ ಯಡಿಯೂರಪ್ಪ ಅವರು ಎರಡು ಬಾರಿ, ಕುಮಾರಸ್ವಾಮಿ ಒಂದು ಬಾರಿ ಮುಖ್ಯಮಂತ್ರಿಯಾಗಿದ್ದಾರೆ).

ADVERTISEMENT

ರಾಜ್ಯ ಸರ್ಕಾರದ ನಾಯಕತ್ವ ಬದಲಾಗುತ್ತದೆ ಎಂಬ ಬಲವಾದ ಗಾಳಿಸುದ್ದಿಗಳಿಗೆ ಬೆಲೆ ಕೊಡುವುದೇ ಆದಲ್ಲಿ, ಈ ವಿಧಾನಸಭೆಯು ಹಿಂದಿನ ದಾಖಲೆಗಳನ್ನು ಮುರಿಯುವ ಸಾಧ್ಯತೆಯೂ ಇದೆ. ಮುಖ್ಯಮಂತ್ರಿಗಳ ಅಧಿಕಾರಾವಧಿಯು ಕರ್ನಾಟಕದಲ್ಲಿ ಸ್ಥಿರವಾಗಿದ್ದುದು ಕಡಿಮೆಯೇ. ಮುಖ್ಯಮಂತ್ರಿ ಬದಲಾಗಿದ್ದಕ್ಕೆ ಕಾರಣ ಆಡಳಿತಾರೂಢ ಪಕ್ಷವು ಬಹುಮತ ಕಳೆದುಕೊಂಡಿದ್ದಷ್ಟೇ ಅಲ್ಲ. ಬಹುತೇಕ ಸಂದರ್ಭಗಳಲ್ಲಿ ಇದಕ್ಕೆ ಕಾರಣ ಆಳುವ ಪಕ್ಷದ ಆಂತರಿಕ ಬದಲಾವಣೆಗಳು. ಕಳೆದ ಮೂರೂವರೆ ದಶಕಗಳ ಅವಧಿಯಲ್ಲಿ ಯಾವ ನಾಯಕನೂ ವಿಧಾನ ಸಭಾ ಚುನಾವಣೆ ನಂತರ ಅಧಿಕಾರದಲ್ಲಿ ಉಳಿದುಕೊಂಡಿ ದ್ದಿಲ್ಲ, ಇಬ್ಬರು ಮಾತ್ರ ಅಧಿಕಾರದ ಪೂರ್ಣ ಅವಧಿ ಯನ್ನು ಪೂರೈಸಿದ್ದಾರೆ. ಈ ರಾಜಕೀಯ ಅಸ್ಥಿರತೆಯು ಆಡಳಿತದಲ್ಲಿ ಮತ್ತೆ ಮತ್ತೆ ಪ್ರತಿಫಲಿತವಾಗಿದೆ.

ರಾಜಕೀಯ ಪಕ್ಷಗಳ ಅದೃಷ್ಟ ಬದಲಾಗಿದ್ದು ಉಪ ಚುನಾವಣೆಗಳಲ್ಲಿ ಕೂಡ ಕಾಣಿಸಿದೆ. ಈಗಿನ ವಿಧಾನಸಭೆಗೆ 21 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಮೊದಲು ಗೆದ್ದಿದ್ದ ಪಕ್ಷದ ಬದಲು ಇನ್ನೊಂದು ಪಕ್ಷದ ಅಭ್ಯರ್ಥಿ ಗೆಲುವು ಕಂಡ 17 ಕ್ಷೇತ್ರಗಳ ಪೈಕಿ, ಬಿಜೆಪಿ 15ರಲ್ಲಿ ಜಯ ಸಾಧಿಸಿದೆ. ಇದರ ಪರಿಣಾಮವಾಗಿ ಬಿಜೆಪಿಯು 2018ರಲ್ಲಿ ಗೆದ್ದಿದ್ದ 104 ಸ್ಥಾನಗಳನ್ನು ಈಗ 119ಕ್ಕೆ ಹೆಚ್ಚಿಸಿಕೊಂಡಿದೆ. 80 ಸ್ಥಾನ ಹೊಂದಿದ್ದ ಕಾಂಗ್ರೆಸ್ ಈಗ 67ಕ್ಕೆ, 37 ಸ್ಥಾನ ಹೊಂದಿದ್ದ ಜೆಡಿಎಸ್ ಈಗ 32ಕ್ಕೆ ಕುಸಿದಿವೆ. ಉಪಚುನಾವಣೆಗಳು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಒಂದಿಷ್ಟು ಸ್ಥಿರತೆ ತಂದುಕೊಟ್ಟಿವೆ. ಕಾಂಗ್ರೆಸ್, ಜೆಡಿಎಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿಯಿಂದ ಪುನಃ ಸ್ಪರ್ಧಿಸಿದಾಗ ಜನ ಅವರನ್ನು ಮತ್ತೆ ಆಯ್ಕೆ ಮಾಡಿದ್ದಕ್ಕೆ ಕಾರಣ ರಾಜಕೀಯ ಸ್ಥಿರತೆಯನ್ನು ತಂದುಕೊಡುವುದಾಗಿತ್ತೇ ವಿನಾ ಪಕ್ಷಾಂತರವನ್ನು ಬೆಂಬಲಿಸಿ ಜನ ಮತ ಚಲಾಯಿಸಿದ್ದರು ಎನ್ನಲಾಗದು.

ಯಡಿಯೂರಪ್ಪ ನೇತೃತ್ವದ 32 ಸದಸ್ಯರ ಸಂಪುಟದಲ್ಲಿನ 11 ಜನ ಸದಸ್ಯರು ಹಾಲಿ ವಿಧಾನಸಭಾ ಅವಧಿಯಲ್ಲೇ ತಮ್ಮ ರಾಜಕೀಯ ನಿಷ್ಠೆಯನ್ನು ಬದಲಾಯಿ ಸಿದವರು ಎಂಬುದನ್ನು ಗಮನಿಸಬೇಕು. ಸಂಪುಟ ಸದಸ್ಯ ರಾದ ಪ್ರತೀ ಹತ್ತು ಜನರ ಪೈಕಿ ಸರಿಸುಮಾರು ನಾಲ್ಕು ಜನ 2018ರಲ್ಲಿ ಕಾಂಗ್ರೆಸ್, ಜೆಡಿಎಸ್‌ ಅಭ್ಯರ್ಥಿಗಳಾಗಿ ಅಥವಾ ಸ್ವತಂತ್ರವಾಗಿ ಜಯ ಸಾಧಿಸಿ, ಈಗ ರಾಜಕೀಯ ನಿಷ್ಠೆ ಬದಲಾಯಿಸಿದ್ದಾರೆ ಎಂದರೆ, ವಿಧಾನಸಭೆಯ ಸಮೀಕರಣದಲ್ಲಿ ಆಗಿರುವ ನಾಟಕೀಯ ಬದಲಾವಣೆಗಳನ್ನು ಅದು ತೋರಿಸುತ್ತದೆ. ಅಧಿಕಾರಕ್ಕೆ ಬರಲು ಹಾಗೂ ಅಧಿಕಾರವನ್ನು ಉಳಿಸಿಕೊಳ್ಳಲು ಆಳುವ ಪಕ್ಷಕ್ಕೆ ಬೇರೆ ರಾಜಕೀಯ ಪಕ್ಷಗಳ ವ್ಯಕ್ತಿಗಳನ್ನು ಸೇರಿಸಿಕೊಳ್ಳುವುದು ಅಗತ್ಯವಾಗಿತ್ತು ಎಂಬುದನ್ನು ಕೂಡ ಇದು ಸೂಚಿಸುತ್ತಿದೆ. ಈಗ ಸಚಿವರಾಗಿರುವ ಇಬ್ಬರ ಪೈಕಿ ಒಬ್ಬರು ಉಪಚುನಾವಣೆಯಲ್ಲಿ ಸೋತರೂ, ಅವರನ್ನು ಸಚಿವರ ನ್ನಾಗಿಸುವ ಮೊದಲು ವಿಧಾನ ಪರಿಷತ್ ಸದಸ್ಯರನ್ನಾಗಿ ಸಿದ್ದು, ಇನ್ನೊಬ್ಬರು ಹಾಲಿ ಸಚಿವರು ಉಪಚುನಾವಣೆ ಎದುರಿಸುವ ಗೊಡವೆಯೇ ಬೇಡವೆಂದಾಗ ಅವರನ್ನು ಪರಿಷತ್ತಿನ ಸದಸ್ಯರನ್ನಾಗಿಸಿದ್ದು ತಮ್ಮ ಪಕ್ಷದವ
ರಲ್ಲದ ವ್ಯಕ್ತಿಗಳಿಗೆ ಜಾಗ ಕೊಡುವುದರ ಹಿಂದಿನ ಹತಾಶೆ ಕಾಣಿಸುತ್ತದೆ. ಸರ್ಕಾರವನ್ನು ಮುನ್ನಡೆಸುವ ಸಂದರ್ಭದಲ್ಲಿ ಎದುರಾಗುವ ಅನಿವಾರ್ಯ ಒತ್ತಡಗಳು, ಕಾಲೆಳೆಯುವಿಕೆಗಳು ಎದ್ದು ಕಾಣುತ್ತಿವೆ.

-ಪ್ರೊ. ಸಂದೀಪ್ ಶಾಸ್ತ್ರಿ

ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗಳ ನಡುವೆ ನಡೆಯುವ ರಾಜಕೀಯ ಬದಲಾವಣೆಗಳು ರಾಜ್ಯದಲ್ಲಿ ಅಸ್ಥಿರತೆಗೆ ಕಾರಣವಾಗಿವೆ. ಸರ್ಕಾರಗಳಿಗೆ ಆಡಳಿತದ ಮೇಲೆ ಗಮನ ಕೇಂದ್ರೀಕರಿ ಸುವುದು ಕಷ್ಟವಾಗುವಂತೆ ಮಾಡಿವೆ. 1985ರ ನಂತರ ಯಾವ ರಾಜಕೀಯ ಪಕ್ಷಕ್ಕೂ ಅಧಿಕಾರವನ್ನು ಉಳಿಸಿ ಕೊಳ್ಳಲು ಆಗದಿದ್ದುದು ಏಕೆ ಎಂಬುದನ್ನು ಇದು ವಿವರಿಸುತ್ತದೆ. ಕಳೆದ ಮೂರು ದಶಕಗಳ ಅವಧಿಯಲ್ಲಿ ಬಹುತೇಕ ವಿಧಾನಸಭೆಗಳು ಇಬ್ಬರು ಅಥವಾ ಮೂವರು ಮುಖ್ಯಮಂತ್ರಿಗಳನ್ನು ಕಂಡಿದ್ದರ ಕಾರಣದಿಂದಾಗಿ, ಯೋಜನೆಗಳಿಗೆ ನೀಡುವ ಆದ್ಯತೆಯಲ್ಲಿ ನಿರಂತರತೆ ಕಾಯ್ದುಕೊಳ್ಳಲು ಹೆಚ್ಚು ಅವಕಾಶ ಸಿಕ್ಕಿಲ್ಲ, ಆಡಳಿತಾತ್ಮಕ ಸ್ಪಷ್ಟತೆ ಕೂಡ ಒಂದೇ ಬಗೆಯಲ್ಲಿ ಇರಲಿಲ್ಲ.

ಇದಕ್ಕೆ ಮುಖ್ಯ ಕಾರಣ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಆಂತರಿಕ ರಾಜಕೀಯದಲ್ಲಿನ ಬದಲಾವಣೆಗಳು. ರಾಜಕೀಯ ಶಕ್ತಿಯಾಗಿ ಜೆಡಿಎಸ್‌ ಕುಂದಿದೆ, ಈಚಿನ ವರ್ಷಗಳಲ್ಲಿ ಅದು ಇತರ ಎರಡು ಪಕ್ಷಗಳ ಪೈಕಿ ಯಾವುದಾದರೊಂದು ಪಕ್ಷದ ಹೆಗಲ ಮೇಲೆ ಕುಳಿತು ಅಧಿಕಾರದತ್ತ ನೋಟ ಹರಿಸಲು ಸಾಧ್ಯವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿನ ಹೈಕಮಾಂಡ್ ಸಂಸ್ಕೃತಿ ಹಾಗೂ 2014ರ ಲೋಕಸಭಾ ಚುನಾವಣೆಯ ಸೋಲಿನ ನಂತರ ಆ ಪಕ್ಷದಲ್ಲಿನ ಬದಲಾವಣೆಗಳ ಕಾರಣದಿಂದಾಗಿ, ಪಕ್ಷದ ರಾಜ್ಯ ಘಟಕವು ಬಣಗಳಿಂದ ತುಂಬಿಹೋಗಿದೆ, ಒಗ್ಗಟ್ಟಿನ ಕೊರತೆ ಕಾಡುತ್ತಿದೆ. ವಿಂಧ್ಯ ಪರ್ವತದ ದಕ್ಷಿಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಕರ್ನಾಟಕದಲ್ಲಿ ಮಾತ್ರ. 2008–13ರಲ್ಲಿ ಹಾಗೂ ಈಗಿನ ಅವಧಿಯಲ್ಲಿ ಪಕ್ಷವು ಅಧಿಕಾರ ಹಿಡಿಯಲು ಹೆಚ್ಚಾಗಿ ನಂಬಿಕೊಂಡಿದ್ದು, ಚುನಾವಣೆಯ ನಂತರ ತನ್ನ ಕಡೆ ಬಂದವರನ್ನು. ಇದು ತನ್ನದೇ ಆದ ರಾಜಕೀಯ ಅಸ್ಥಿರತೆ, ಒತ್ತಡಗಳನ್ನು ಸೃಷ್ಟಿಸಿದೆ.

ಇಡೀ ಪ್ರಕ್ರಿಯೆಯಲ್ಲಿ ಕರ್ನಾಟಕದ ಮತದಾರನಿಗೆ ಮೋಸ ಆಗಿದೆ. ಮತದಾರನ ಪ್ರತಿಕ್ರಿಯೆಗಳು ನಂತರದ ವಿಧಾನಸಭಾ ಚುನಾವಣೆಗಳಲ್ಲಿ ಕಂಡುಬಂದಿವೆ. ಬಿಜೆಪಿಯು 2023ರ ಮೊದಲೇ ತನ್ನ ಹಾದಿಯನ್ನು ಸರಿ ಪಡಿಸಿಕೊಳ್ಳಲಿದೆಯೇ? ಮುಂದಿನ ಬಾರಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳು ತ್ತಿದೆಯೇ? ಮುಂದಿನ ಎರಡು ವರ್ಷಗಳು ಕರ್ನಾಟಕ ರಾಜಕೀಯದ ಹಾದಿಯನ್ನು ರೂಪಿಸುವಲ್ಲಿ ಮಹತ್ವದ್ದಾಗಿರುವಂತೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.