ADVERTISEMENT

ಜನರಾಜಕಾರಣ | ‘ನಾವು’, ‘ಅವರು’ ಹಾಗೂ ‘ನಾವೆಲ್ಲರೂ’...

ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೆ ಇರಿಸಬೇಕಾದ ಸಮಯ ಇದು

ಪ್ರೊ. ಸಂದೀಪ್ ಶಾಸ್ತ್ರಿ
Published 21 ಜೂನ್ 2021, 19:55 IST
Last Updated 21 ಜೂನ್ 2021, 19:55 IST
‘ನಾವು’, ‘ಅವರು’ ಹಾಗೂ ‘ನಾವೆಲ್ಲರೂ’...
‘ನಾವು’, ‘ಅವರು’ ಹಾಗೂ ‘ನಾವೆಲ್ಲರೂ’...   

21ನೆಯ ಶತಮಾನವು ಮಹತ್ವದ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ಕೋವಿಡ್ ಸಾಂಕ್ರಾಮಿಕವು ಒಂದೂವರೆ ವರ್ಷದಲ್ಲಿ ನಮ್ಮ ಜೀವನವನ್ನು ಯೋಚಿಸಲೂ ಆಗದಿದ್ದಂತಹ ರೀತಿಯಲ್ಲಿ ಬದಲಾಯಿಸಿದೆ. ಹೆಚ್ಚಿನ ‘ಭಾವನಾತ್ಮಕ ಬೆಸುಗೆ’ಯನ್ನು ಬಯಸುತ್ತಲೇ ನಾವು ‘ದೈಹಿಕ ಅಂತರವನ್ನು’ ಕೇಳುತ್ತಿದ್ದೇವೆ. ಜನ ಇನ್ನೊಬ್ಬರಿಗೆ ಸಹಾಯ ಮಾಡುತ್ತಿರುವ ಸುದ್ದಿಗಳನ್ನು ಹಂಚಿಕೊಳ್ಳುತ್ತಿ ದ್ದೇವೆ. ಬಿಕ್ಕಟ್ಟಿನ ಈ ಸಂದರ್ಭದಲ್ಲಿಯೂ ದುರಾಸೆ ಹಾಗೂ ಸ್ವಾರ್ಥವನ್ನು ಬಹಿರಂಗವಾಗಿ ತೋರಿಸಿಕೊಳ್ಳುತ್ತಿರುವವರ ಕಥೆಗಳನ್ನು ಓದುತ್ತಿದ್ದೇವೆ, ಕೇಳುತ್ತಿದ್ದೇವೆ. ಸಮಾಜದಲ್ಲಿ ಧ್ರುವೀಕರಣವು ಇನ್ನಷ್ಟು ತೀಕ್ಷ್ಣವಾಗುತ್ತಿರುವುದನ್ನೂ ನೋಡುತ್ತಿದ್ದೇವೆ. ನಮ್ಮ ನೆರೆಹೊರೆಯಲ್ಲಿ, ಸಮಾಜದಲ್ಲಿ ‘ನಾವು’ ಮತ್ತು ‘ಅವರು’ ಎಂಬ ಭೇದ ಮೂಡಿದೆ. ಎಲ್ಲ ಸಂದರ್ಭಗಳಲ್ಲಿಯೂ ನಮ್ಮ ಚರ್ಚೆಯು ‘ಅವರ’ ಬಗ್ಗೆಯೇ ಇರುತ್ತದೆ.

ಸಾರ್ವಜನಿಕ ವೇದಿಕೆಗಳಲ್ಲಿ ಯಾವುದಾದರೂ ವಿಷಯದ ಬಗ್ಗೆ ಚರ್ಚೆಗಳು ಆರಂಭವಾದಾಗ, ಬಹು ತೇಕರು ಒಂದು ತೀರ್ಮಾನಕ್ಕೆ ಬಂದ ನಂತರವೇ ತಮ್ಮ ವಿಶ್ಲೇಷಣೆ ಆರಂಭಿಸುತ್ತಾರೆ. ತೀರ್ಮಾನಕ್ಕೆ ಬಂದು, ನಂತರ ಅದಕ್ಕೆ ಆಧಾರಗಳನ್ನು ಹುಡುಕಲು ಯತ್ನಿಸುತ್ತಾರೆ. ನಿಜವಾದ ಒಳಿತು, ಕೆಡುಕುಗಳ ಆಧಾರದಲ್ಲಿ ಚರ್ಚೆಗಳು ನಡೆಯುವುದಿಲ್ಲ. ತಾವು ಬಯಸಿದ ನಿಲುವು ಸಮರ್ಥಿಸು ವುದಕ್ಕಾಗಿ ಒಳಿತು, ಕೆಡುಕುಗಳನ್ನು ಅನ್ವೇಷಿಸಲಾಗು ತ್ತದೆ. ನಾವು ನಂಬಿರುವುದನ್ನು ಬೆಂಬಲಿಸುವವರು ಹಾಗೂ ನಮ್ಮ ನಂಬಿಕೆಗಳ ವಿರುದ್ಧ ಇರುವವರ ನಡುವಿನ ಅಂತರವು ಎದ್ದು ಕಾಣುವಂತೆ ಆಗುತ್ತಿದೆ. ಒಮ್ಮತ ಸಾಧಿಸುವ ಅವಕಾಶಗಳು ತೀರಾ ಅಪರೂಪ ಆಗುತ್ತಿವೆ. ‘ನಾವು’ ಮತ್ತು ‘ಅವರು’ ಎಂಬ ಭೇದವು ಎಂದಾದರೂ ‘ನಾವೆಲ್ಲರೂ’ ಎಂದು ಆಗಬಹುದೇ?

‘ನಮ್ಮ ದೃಷ್ಟಿಕೋನವನ್ನು ವೈಭವೀಕರಿಸುವ’ ಹಾಗೂ ‘ಎದುರು ಪಕ್ಷದವರ ದೃಷ್ಟಿಕೋನವನ್ನು ಕೆಟ್ಟದ್ದೆಂದು ಬಿಂಬಿಸುವ’ ಪ್ರವೃತ್ತಿಯು ಕಳೆದ ಕೆಲವು ವರ್ಷಗಳಲ್ಲಿ ಕಂಡುಬಂದಿದೆ. ಅಪರಿಚಿತರಾಗಿಯೇ ಉಳಿದುಕೊಳ್ಳುವ ಅವಕಾಶ ನೀಡಿರುವ ಸಾಮಾಜಿಕ ಜಾಲತಾಣಗಳು ಇಂತಹ ಪ್ರವೃತ್ತಿಗೆ ತುಪ್ಪ ಸುರಿಯುತ್ತಿವೆ. ವಿಷಯಗಳನ್ನು ಎರಡು ವಿರುದ್ಧ ನೆಲೆಗಳಲ್ಲಿ ಹೇಗೆ ಜೋಡಿಸಲಾಗು ತ್ತದೆ ಎಂದರೆ, ‘ಅವರು’ ಹೇಳುವ ಎಲ್ಲವನ್ನೂ ಉಗ್ರವಾಗಿ ವಿರೋಧಿಸಬೇಕು, ‘ನಾವು’ ಪ್ರತಿಪಾದಿಸುವ ಎಲ್ಲವನ್ನೂ ಭಾವುಕವಾಗಿ ಸಮರ್ಥಿಸಿಕೊಳ್ಳಬೇಕು ಎಂಬ ಧೋರಣೆ ಬೆಳೆದಿದೆ. ವಿರೋಧಿಗಳ ದೃಷ್ಟಿಕೋನವನ್ನು ಟೀಕಿಸಲು, ತಮ್ಮ ತೀರ್ಮಾನವನ್ನು ಒತ್ತಿಹೇಳಲು ಕೆಲವು ಆಧಾರಗಳನ್ನು ಮಾತ್ರ (ಹಲವು ಬಾರಿ ಅವುಗಳನ್ನು ತಿರುಚಿ) ಬಳಸಿಕೊಳ್ಳಲಾಗುತ್ತದೆ.

ADVERTISEMENT

ಈ ಬಗೆಯಲ್ಲಿ, ನಿಜವಾದ ಸುದ್ದಿ, ಅರ್ಧ ಸತ್ಯವನ್ನು ಹೊಂದಿರುವ ಸುದ್ದಿ, ಸುಳ್ಳು ಸುದ್ದಿಗಳ ರೂಪದಲ್ಲಿ ಇರುವ ಮಾಹಿತಿ ಸ್ಫೋಟವು ಸಾಮಾಜಿಕ ಜಾಲತಾಣಗಳಲ್ಲಿ ಜಲಪಾತದಂತೆ ಧುಮ್ಮಿಕ್ಕುತ್ತದೆ. ‘ಸತ್ಯ’ವೆಂದು ಹೇಳಲಾಗುವ ಎಲ್ಲ ವಿಷಯಗಳ ಬಗ್ಗೆಯೂ ‘ಪ್ರತಿಸತ್ಯ’ ಸಿದ್ಧವಾಗಿರುತ್ತದೆ. ‘ಅಧಿಕೃತ’ ಎಂದು ಹೇಳಲಾಗುವ ಎಲ್ಲ ಮಾಹಿತಿಗೂ ವಿರುದ್ಧವಾಗಿ ಇನ್ನೊಂದು ‘ಮಾಹಿತಿ’ ಇರುತ್ತದೆ. ‘ಸುಳ್ಳು’ ಎಂಬುದು ಸಾಮಾನ್ಯವಾಗಿ ‘ಅಧಿಕೃತ’ ಎಂಬ ಮುಖವಾಡ ಹೊತ್ತಿರುತ್ತದೆ. ‘ಅಧಿಕೃತ’ವು ‘ತಿರುಚಲ್ಪಟ್ಟಿದ್ದು’ ಎಂಬ ಮಟ್ಟಕ್ಕೆ ಇಳಿದಿರುತ್ತದೆ. ಈ ಅಂಶವನ್ನು ವಿವರಿಸಲು ಎರಡು ಉದಾಹರಣೆಗಳನ್ನು ನೀಡಬಹುದು.

ಪ್ರೊ. ಸಂದೀಪ್ ಶಾಸ್ತ್ರಿ

ಕೋವಿಡ್ ಸಾಂಕ್ರಾಮಿಕವು ಒಂದೂವರೆ ವರ್ಷದಲ್ಲಿ ನೋವು ತಂದಿತ್ತಿದೆ. ಇಂತಹ ಬಿಕ್ಕಟ್ಟನ್ನು ನಿಭಾಯಿಸಲು ಅಧಿಕಾರದಲ್ಲಿ ಇರುವವರ, ಸಾಮಾಜಿಕ ಸಂಘಟನೆಗಳ, ಸಮುದಾಯಗಳ ಹಾಗೂ ಪ್ರಜೆಗಳ ನಡುವೆ ಸಹಕಾರ ಬೇಕು. ಸಾಂಕ್ರಾಮಿಕ ಹರಡಿರುವಾಗ ದೋಷಾರೋಪ ಹೊರಿಸುತ್ತ ಕೂರಲು ಆಗುವುದಿಲ್ಲ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೆ ಇರಿಸಬೇಕಾದ ಸಮಯವಿದು. ಇದು ಕೇಂದ್ರ ಸರ್ಕಾರವೋ ರಾಜ್ಯ ಸರ್ಕಾರವೋ ಎಂಬ ವಿಚಾರ ಅಲ್ಲ. ಬದಲಿಗೆ, ಇದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಎಂಬ ವಿಚಾರ. ಆದರೆ, ಸಾಂಕ್ರಾಮಿಕವನ್ನು ಸರ್ಕಾರಗಳು ನಿಭಾಯಿಸಿದ ಬಗೆಯನ್ನು ವಿವರಿಸುವ ಬರಹಗಳು, ಅಭಿಪ್ರಾಯಗಳು ಲೋಪವನ್ನು ಯಾವುದಾದರೂ ಒಂದು ಹಂತದ ಸರ್ಕಾರದ ತಲೆಗೆ ಕಟ್ಟುವ ಯತ್ನ ನಡೆಸಿವೆ. ಸಾಕಷ್ಟು ಸಮಯ ನೀಡದೆಯೇ ಲಾಕ್‌ಡೌನ್‌ ಘೋಷಿಸಬೇಕಿತ್ತೇ? ಲಾಕ್‌ಡೌನ್‌ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಹೊಣೆಯನ್ನು ರಾಜ್ಯ ಸರ್ಕಾರಗಳಿಗೆ ನೀಡಬೇಕಿತ್ತೇ? ನಾವು ಅಗತ್ಯ ಪ್ರಮಾಣದ ಲಸಿಕೆಯನ್ನು ಖರೀದಿಸುವುದು ಹೇಗೆ? ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ನೀಡಬೇಕೇ? ಇಂತಹ ಮುಖ್ಯ ವಿಷಯಗಳನ್ನು ಒಳಿತು–ಕೆಡುಕುಗಳನ್ನು ಆಧರಿಸಿ ತೀರ್ಮಾನಿಸಬೇಕು. ಆದರೆ, ನಾವು ರಾಜಕೀಯವಾಗಿ ಯಾವ ನಿಲುವು ಹೊಂದಿದ್ದೇವೆ ಎಂಬುದನ್ನು ಆಧರಿಸಿ ಇಂತಹ ವಿಷಯಗಳ ಬಗ್ಗೆ ತೀರ್ಮಾನ ಹೇಳುತ್ತಿದ್ದೇವೆ.

‘ನಾವು’ ಮತ್ತು ‘ಅವರು’ ಎಂಬ ಈ ಆರೋಪ–ಪ್ರತ್ಯಾರೋಪಗಳ ಆಟದಲ್ಲಿ ಗಮನ ಇರುವುದು ಪರಿಹಾರದ ಕಡೆಗೂ ಅಲ್ಲ, ಎಲ್ಲರೂ ಒಟ್ಟಾಗಿ ಸಮಸ್ಯೆ ಯನ್ನು ನಿಭಾಯಿಸಬೇಕು ಎಂಬ ಕಡೆಗೂ ಅಲ್ಲ. ಬದಲಿಗೆ, ದೋಷವನ್ನು ಯಾರ ಮೇಲೆ ಹೊರಿಸಬೇಕು ಎಂಬ ಬಗ್ಗೆಯೇ ಗಮನ ಇದೆ. ಕೋವಿಡ್ ಎರಡನೆಯ ಅಲೆಯ ಸಂದರ್ಭದಲ್ಲಿ, ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಾಗ, ಸಂಬಂಧಪಟ್ಟ ಎಲ್ಲರನ್ನೂ ತೊಡಗಿಸಿಕೊಂಡು ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕಿತ್ತು. ಆದರೆ, ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರದಲ್ಲಿ ಇದೆ ಎಂಬ ಸಂಗತಿಯೇ ಹೆಚ್ಚಿನ ಗಮನ ಸೆಳೆದುಕೊಳ್ಳುತ್ತಿತ್ತು.ಸಾಂಕ್ರಾಮಿಕವನ್ನು ನಿಭಾಯಿಸಲು ಬೇರೆ ಬೇರೆ ಸರ್ಕಾರ ಗಳ ನಡುವೆ ಸಹಕಾರ ಅಗತ್ಯ. ಒಬ್ಬರು ಇನ್ನೊಬ್ಬರ ಕಡೆ ಬೊಟ್ಟು ಮಾಡುವುದರಿಂದ ಹೆಚ್ಚಿನ ಪ್ರಯೋಜನ ಇರುವುದಿಲ್ಲ.

ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗೆ ತುರುಸಿನ ಹಣಾಹಣಿಯ ಚುನಾವಣೆಗಳು ನಡೆದವು. ಚುನಾವಣೆ ಸಂದರ್ಭದಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳ ನಡುವೆ ಆರೋಪ ಗಳನ್ನು ಹಾಗೂ ಪ್ರತ್ಯಾರೋಪಗಳನ್ನು ಮಾಡಲಾಯಿತು. ಇಂಥವು ಎಲ್ಲ ಚುನಾವಣೆಗಳಲ್ಲಿಯೂ ಆಗುತ್ತವೆ. ಆದರೆ, ಸಾಂಕ್ರಾಮಿಕದ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಒಟ್ಟಾಗಿ ಕೆಲವು ನಿಯಮಗಳನ್ನು ಪಾಲಿಸುತ್ತವೆ ಎಂದು ಸಾರ್ವಜನಿಕರಲ್ಲಿ ಹಲವರು ಆಶಿಸಿದ್ದರು. ಕೋವಿಡ್‌ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮ ಗಳನ್ನು ರಾಜಕೀಯ ಪಕ್ಷಗಳು ಅನುಸರಿಸುತ್ತವೆ ಎಂಬುದು ಬಹಳ ಸಾಮಾನ್ಯವಾದ ನಿರೀಕ್ಷೆ ಆಗಿತ್ತು. ಮತಗಳನ್ನು ಗಳಿಸುವ ಭರದಲ್ಲಿ ಈ ನಿಯಮಗಳನ್ನು ಬಹುತೇಕ ಸಂದರ್ಭದಲ್ಲಿ ಉಪೇಕ್ಷಿಸಲಾಯಿತು ಹಾಗೂ ಇನ್ನು ಹಲವು ಸಂದರ್ಭಗಳಲ್ಲಿ ರಾಜಾರೋಷವಾಗಿ ಉಲ್ಲಂಘಿಸಲಾಯಿತು.

ಪ್ರಜೆಗಳ ಆರೋಗ್ಯ, ಅವರ ಸುರಕ್ಷತೆಯ ಬಗ್ಗೆ ಗಮನ ನೀಡುವ ಬದಲು ನಿಯಮ ಉಲ್ಲಂಘನೆಗೆ ಕಾರಣ ಯಾರು ಎಂಬ ಬಗ್ಗೆ ಹೆಚ್ಚಿನ ಗಮನ ನೀಡಲಾಯಿತು. ಬಹಳ ಸಂದರ್ಭಗಳಲ್ಲಿ, ‘ಅವರು ಇದೇ ರೀತಿ ಮಾಡಿ ದ್ದಾರೆ, ಹಾಗಾಗಿ ನಾವು ಮಾಡಿದ್ದು ಕೂಡ ಸರಿ’ ಎಂಬ ಸಮರ್ಥನೆಗಳನ್ನು ನೀಡಲಾಯಿತು. ಹಾಗಾಗಿ ಒಂದು ತಪ್ಪನ್ನು ಇನ್ನೊಂದು ತಪ್ಪಿನ ಮೂಲಕ ಸರಿಪಡಿಸಲಾಯಿತು! ಕೆಲಸಗಳನ್ನು ಸರಿಯಾಗಿ ಮಾಡುವುದು ಹೇಗೆ ಎಂಬುದರ ಕಡೆ ಗಮನ ನೀಡುವ ಬದಲು ರಾಜಕೀಯ ಪಕ್ಷಗಳು, ಎದುರಾಳಿಗಳು ಮಾಡಿದ್ದನ್ನು ಗಮನಿಸಿ ತಾವು ತಪ್ಪು ಮಾಡುವುದನ್ನು ಸಮರ್ಥಿಸಿಕೊಂಡವು.

ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದನ್ನು ಹೇಳುವುದರ ಬದಲು ಕೆಲವು ತಪ್ಪುಗಳನ್ನು ಮಾತ್ರ ಆಯ್ದು ಹೇಳುವುದು ನಡೆಯಿತು. ‘ನಮ್ಮ ತಪ್ಪುಗಳ ಬಗ್ಗೆ ಮಾತ್ರ ಏಕೆ ಮಾತನಾಡುತ್ತಿದ್ದೀರಿ? ಅವರೂ ಇದೇ ತಪ್ಪು ಮಾಡಿದ್ದಾರೆ. ಆದರೆ ಆ ತಪ್ಪು ನಿಮಗೆ ಸರಿಕಾಣುತ್ತಿದೆ’ ಎಂಬ ರೀತಿಯಲ್ಲಿ ಚರ್ಚೆಗಳು ನಡೆದವು.

ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ವಿಚಾರಗಳಿಗೆ ಮರಳೋಣ. ‘ನಾವು’ ಹಾಗೂ ‘ಅವರು’ ಎಂಬ ವ್ಯಾಖ್ಯಾನಗಳಿಂದ ದೂರ ಸರಿಯಬೇಕಿರುವ ಸಮಯ ಇದು. ‘ನಾವೆಲ್ಲರೂ’ ಎಂಬುದರ ಬಗ್ಗೆ ಗಮನಹರಿಸ ಬೇಕಿದೆ. ನಮ್ಮೆದುರಿನ ಸವಾಲು ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಹೆಚ್ಚು ಮುಖ್ಯವೋ ಅಥವಾ ದೋಷವನ್ನು ಯಾರದ್ದಾದರೂ ಒಬ್ಬರ ಮೇಲೆ ಹೊರಿಸುವುದು ಹೆಚ್ಚು ಮುಖ್ಯವೋ?

ಸತ್ಯವು ಯಾವುದೋ ಒಂದು ಧ್ರುವದಲ್ಲಿ ನಿಂತಿರುವುದಿಲ್ಲ. ಅದು ಎರಡು ಧ್ರುವಗಳ ನಡುವೆ ಹರಡಿಕೊಂಡಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.