ADVERTISEMENT

ಸಮಬಲರ ನಡುವಿನ ಪೈಪೋಟಿ

ತೇರದಾಳ: ಕಾಂಗ್ರೆಸ್, ಬಿಜೆಪಿ ನಾಗಲೋಟಕ್ಕೆ ತಡೆ ಹಾಕಿದ ಜೆಡಿಎಸ್

​ಪ್ರಜಾವಾಣಿ ವಾರ್ತೆ
Published 5 ಮೇ 2018, 9:01 IST
Last Updated 5 ಮೇ 2018, 9:01 IST
ಸಮಬಲರ ನಡುವಿನ ಪೈಪೋಟಿ
ಸಮಬಲರ ನಡುವಿನ ಪೈಪೋಟಿ   

ಬಾಗಲಕೋಟೆ: ಕ್ಷೇತ್ರ ಪುನರ್ವಿಂಗಡೆಯ ನಂತರ ಇದೀಗ ಮೂರನೇ ಚುನಾವಣೆಗೆ ತೇರದಾಳ ವಿಧಾನಸಭಾ ಕ್ಷೇತ್ರ ಸಿದ್ಧವಾಗಿದೆ. ಜಿಲ್ಲೆಯ ಅತ್ಯಂತ ಪುಟ್ಟ ಕ್ಷೇತ್ರ ಎಂಬ ಶ್ರೇಯ ತೇರದಾಳಕ್ಕಿದೆ. ಕಣದಲ್ಲಿ 13 ಅಭ್ಯರ್ಥಿಗಳು ಇದ್ದರೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ತ್ರಿಕೋನ ಪೈಪೋಟಿ.

ಕಾಂಗ್ರೆಸ್‌ನಿಂದ ಸಚಿವೆ ಉಮಾಶ್ರೀ, ಬಿಜೆಪಿಯಿಂದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಸವದಿ ಹಾಗೂ ಜೆಡಿಎಸ್‌ನಿಂದ ಬಸವರಾಜ ಕೊಣ್ಣೂರ ಸ್ಪರ್ಧಿಗಳು. ಮೇಲ್ನೋಟಕ್ಕೆ ಕಾಂಗ್ರೆಸ್–ಬಿಜೆಪಿ ನಡುವೆ ನೇರ ಹಣಾಹಣಿ ಎನಿಸಿದರೂ, ಇಬ್ಬರು ಹೊರಗಿನವರ ನಡುವೆ ‘ಸ್ಥಳೀಯ’ ಎಂಬ ನೆಲೆಯಲ್ಲಿ ಮತ ಕೇಳುತ್ತಿರುವ ಬಸವರಾಜ ಕೊಣ್ಣೂರ ಕೂಡ ದಾಪುಗಾಲು ಇಡುತ್ತಿರುವುದು ಬಿಜೆಪಿ–ಕಾಂಗ್ರೆಸ್ ಅಭ್ಯರ್ಥಿಗಳ ನಿದ್ರೆಗೆಡಿಸಿದೆ.

ಕಳೆದ ಚುನಾವಣೆಯಲ್ಲಿ ಕೆಜೆಪಿಯೊಂದಿಗಿನ ದಾಯಾದಿ ಕಲಹ ಬಿಜೆಪಿಗೆ ಮುಳುವಾಗಿತ್ತು. ಕೆಜೆಪಿಯ ಬಸವರಾಜ ಬಾಳೆಕಾಯಿ ಪಡೆದ 5,558 ಮತಗಳು ಬಿಜೆಪಿಯ ಸಿದ್ದು ಸವದಿ ಸೋಲಿಗೆ ಹಾದಿಯಾಗಿ, ಉಮಾಶ್ರೀ 2,599 ಮತಗಳ ಅಂತರದ ಗೆಲುವು ಪಡೆದಿದ್ದರು.

2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಸೋಲು ಅನುಭವಿಸಿದರೂ ಕ್ಷೇತ್ರದಲ್ಲಿ ಇದ್ದು ಮನೆ ಮಾಡಿ, ಸ್ಥಳೀಯರ ನೆರವಿಗೆ ನಿಂತದ್ದು ಉಮಾಶ್ರೀ ಪರ ಕಳೆದ ಚುನಾವಣೆಯಲ್ಲಿ ಅನುಕಂಪದ ಅಲೆಯನ್ನು ಸೃಷ್ಟಿಸಿತ್ತು. ಸಚಿವೆ ಸ್ಥಾನವೂ ನಂತರ ಅವರಿಗೆ ನಿರಾಯಾಸವಾಗಿ ಒಲಿದುಬಂದಿತ್ತು.

ತಾನು ಸಂಕಷ್ಟದಲ್ಲಿದ್ದಾಗ ನಮ್ಮ ಅಳಲಿಗೂ ದನಿಯಾಗುತ್ತಿದ್ದ ಮನೆ ಮಗಳು, ಅಧಿಕಾರ ಬಂದ ನಂತರ ‘ಅತಿಥಿ’ಯಾಗಿ ಬದಲಾದಳು ಎಂಬುದು ಸ್ಥಳೀಯರ ದೂರು. ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡಿರುವ ‘ಅಭಿವೃದ್ಧಿ’ಯ ಪಟ್ಟಿ ಹಿಡಿದು ಮನೆ ಮನೆಗೆ ಎಡತಾಕುತ್ತಿರುವ ಸಾಕವ್ವ, ಮತ್ತೊಂದು ಅವಧಿಗೆ ಮತದಾರರ ಮನಗೆಲ್ಲುವ ಪ್ರಯತ್ನ ನಡೆಸಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕೆಜೆಪಿಯ ಬಸವರಾಜ ಬಾಳೆಕಾಯಿ ಪಡೆದಿದ್ದ ಮತಗಳ ಜೊತೆಗೆ ಬಿಎಸ್‌ಆರ್ ಕಾಂಗ್ರೆಸ್‌ನ ರಮೇಶ ಕೆಸರಗೊಪ್ಪ ಪಡೆದಿದ್ದ 1005 ಮತಗಳೂ ತಮ್ಮದೇ ಕಾಣ್ಕೆ ನೀಡಿದ್ದವು.

ಆಗಿನ ದಾಯಾದಿ ಕದನ ಈಗಿಲ್ಲದಿದ್ದರೂ ಬಸವರಾಜ ಬಾಳೆಕಾಯಿ, ಜೆಡಿಎಸ್‌ ಅಭ್ಯರ್ಥಿ ಬಸವರಾಜ ಕೊಣ್ಣೂರ ಪರ ಪ್ರಚಾರಕ್ಕೆ ನಿಂತಿದ್ದಾರೆ. ಜೊತೆಗೆ ರಾಷ್ಟ್ರೀಯ ಪಕ್ಷಗಳು ತೇರದಾಳ ತಾಲ್ಲೂಕು ರಚನೆ ವಿಷಯದಲ್ಲಿ ಸ್ಥಳೀಯರಿಗೆ ಅನ್ಯಾಯ ಮಾಡಿವೆ ಎಂದು ಆರೋಪಿಸಿರುವ ತೇರದಾಳ ತಾಲ್ಲೂಕು ಹೋರಾಟ ಸಮಿತಿ ಜೆಡಿಎಸ್‌ಗೆ ಬೆಂಬಲ ನೀಡಿ ಪ್ರಚಾರಕ್ಕೂ ಮುಂದಾಗಿದೆ. ಬಾಳಿಕಾಯಿ ಸಮಿತಿಯ ಪ್ರಧಾನ ಕಾರ್ಯದರ್ಶಿ. ಕ್ಷೇತ್ರದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಮ್ಮದೇ ಪ್ರಭಾವ ಹೊಂದಿದ್ದಾರೆ. ಹಾಗಾಗಿ ‘ಹಿಂದುತ್ವ’ ನೆಚ್ಚಿಕೊಂಡು ಶಿವಸೇನೆಯಿಂದ ಬನಹಟ್ಟಿಯ ಬಸವರಾಜ ಗಾಯಕವಾಡ ಕಣಕ್ಕಿಳಿದಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು, ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಎಂಬ ಸಂದೇಶದೊಂದಿಗೆ ಸಿದ್ದು ಸವದಿ ಮತಯಾಚಿಸುತ್ತಿದ್ದಾರೆ.

ನೇಕಾರರಲ್ಲಿ ಒಡಕು: ಕಳೆದ ಬಾರಿ ಉಮಾಶ್ರೀ ಬೆನ್ನಿಗೆ ನಿಂತಿದ್ದ ನೇಕಾರರ ಒಕ್ಕೂಟದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಒಡಕು ಕಾಣಿಸಿಕೊಂಡಿದೆ. ವೀರಶೈವ–ಲಿಂಗಾಯತ ನೇಕಾರರ ಸಂಘಟನೆ ಅಸ್ತಿತ್ವಕ್ಕೆ
ಬಂದಿದೆ. ಇದು ನೇಕಾರರ ಮತಗಳ ಹಂಚಿಕೆಗೆ ಹಾದಿಯಾಗಲಿದೆ ಎನ್ನಲಾಗುತ್ತಿದೆ.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಅವಧಿಯ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರಕ್ಕೆ ಇಳಿದಿರುವ ಬಸವರಾಜ ಕೊಣ್ಣೂರ, ಉಮಾಶ್ರೀ ಹಾಗೂ ಸಿದ್ದು ಸವದಿ ಇಬ್ಬರೂ ಕ್ಷೇತ್ರದಿಂದ ಹೊರಗಿನವರು. ನಾನು ‘ಸ್ಥಳೀಯ’ ಎಂದು ಪ್ರಜ್ಞಾಪೂರ್ವಕವಾಗಿ ಪ್ರಚಾರ ನಡೆಸಿದ್ದಾರೆ. ಕ್ಷೇತ್ರದಲ್ಲಿ ನೇಕಾರರು, ಲಿಂಗಾಯತ ಪಂಚಮಸಾಲಿ, ಕುರುಬ ಸಮುದಾಯ ಗಣನೀಯವಾಗಿದೆ. ಕ್ರಮವಾಗಿ ಅದೇ ಸಮುದಾಯಕ್ಕೆ ಸೇರಿದ ಉಮಾಶ್ರೀ, ಸಿದ್ದು ಸವದಿ, ಬಸವರಾಜ ಕೊಣ್ಣೂರ,ಕಣದಲ್ಲಿ ಮುಖಾಮುಖಿಯಾಗಿದ್ದಾರೆ. ಜಿದ್ದಾಜಿದ್ದಿಯ ಹೋರಾಟದಲ್ಲಿ ಮೂವರ ಪೈಕಿ ಯಾರೇ ಗೆದ್ದರೂ ಅದು ಅಲ್ಪ ಅಂತರ ಮಾತ್ರ. ಹಾಗಾಗಿ ತೇರದಾಳ ಸಮಬಲರ ಹೋರಾಟಕ್ಕೆ ವೇದಿಕೆ ಒದಗಿಸಿದೆ.

ಒಟ್ಟು ಮತದಾರರು
2,16,303

ಪುರುಷರು: 1,08,757
ಮಹಿಳೆಯರು: 1,07,757
ಇತರೆ: 09

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.