ADVERTISEMENT

ರಘುನಾಥ ಚ.ಹ. ಲೇಖನ: ಇಳಿಸಲಾಗದ ಶಿಲುಬೆಗಳ ‘ಗೊಲ್ಗೊಥಾ’

ಮರಣವೃಕ್ಷದೊಳಗಣ ಅಮೃತಫಲವ ಕಾಣಿಸಿದ ಗೋವಿಂದ ಪೈ ‘ಕ್ರಿಸ್ತಕಾವ್ಯ’

ಚ.ಹ.ರಘುನಾಥ
Published 22 ಡಿಸೆಂಬರ್ 2020, 20:22 IST
Last Updated 22 ಡಿಸೆಂಬರ್ 2020, 20:22 IST
   

ಗೋವಿಂದ ಪೈ ಅವರ ‘ಗೊಲ್ಗೊಥಾ’ ಕನ್ನಡ ಕಾವ್ಯಪರಂಪರೆಯಲ್ಲಿ ಅಪರೂಪವೂ ಅಪೂರ್ವವೂ ಆದ ಕವಿತೆ. ತೊಂಬತ್ತು ವರ್ಷಗಳ ಹಿಂದೆ (1931ರಲ್ಲಿ) ರಚನೆಯಾದ, ಕನ್ನಡದ ಅತ್ಯುತ್ತಮ ಕವಿತೆಗಳಲ್ಲಿ ಒಂದಾದ, ‘ಗೊಲ್ಗೊಥಾ’ ಕ್ರಿಸ್ತನ ಕೊನೆಯ ದಿನದ ಘಟನೆಗಳ ನಿರೂಪಣೆ. 377 ಸಾಲುಗಳ ‘ಗೊಲ್ಗೊಥಾ’ವನ್ನು ಪೈ ಅವರು ಕವಿತೆ ಎಂದು ಕರೆದಿದ್ದರೂ ಕನ್ನಡ ಸಾಹಿತ್ಯ ಅದನ್ನು ಖಂಡಕಾವ್ಯ ಎಂದೇ ಗುರ್ತಿಸಿದೆ. ಕಾವ್ಯದ ಮೂಲಕ ಮಾನವೀಯತೆಯ ಸುಧೆಯನ್ನು ಅರಸುವವರ ಪಾಲಿಗಿದು ಮಹಾಕಾವ್ಯವೂ ಹೌದು.

ಕ್ರಿಸ್ತನ ಕಥನದಾಚೆಗೂ ‘ಗೊಲ್ಗೊಥಾ’ ಕಾವ್ಯಕ್ಕೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಿಶೇಷ ಮಹತ್ವವಿದೆ. ಕವಿಯೊಬ್ಬನ ಲೋಕದೃಷ್ಟಿ ಹೇಗಿರಬೇಕು ಎನ್ನುವುದಕ್ಕೆ ‘ಗೊಲ್ಗೊಥಾ’ ಅತ್ಯುತ್ತಮ ಉದಾಹರಣೆ. ಬಹುಶಃ, ಪೈ ಅವರಿಗಿಂತಲೂ ಮೊದಲು ತನ್ನದಲ್ಲದ ಧರ್ಮದ ಕಥನವೊಂದಕ್ಕೆ ಕನ್ನಡ ಕವಿಸಂವೇದನೆ ಇಷ್ಟು ಪರಿಣಾಮಕಾರಿಯಾಗಿ ತೆರೆದುಕೊಂಡಂತಿಲ್ಲ. ಪೈ ಅವರಿಗೂ ಮೊದಲು ಕ್ರಿಸ್ತನ ಬದುಕನ್ನು ಕಿಟ್ಟೆಲ್‌ ಅವರು ‘ಕಥಾಮಾಲೆ’ ಹೆಸರಿನಲ್ಲಿ ಭಾಮಿನಿ ಷಟ್ಪದಿಯಲ್ಲಿ ಕಟ್ಟಿಕೊಟ್ಟಿದ್ದರೂ (ಕಸಾಪ ಪ್ರಕಟಣೆ, ಸಂ: ಎ.ವಿ.ನಾವಡ), ಆ ಕಾವ್ಯ ಮತ್ತು ಕವಿಯ ಉದ್ದೇಶಗಳೇ ಬೇರೆ.

ಪೈ ಅವರ ಕಣ್ಣಿಗೆ ಕ್ರಿಸ್ತನದು ಧಾರ್ಮಿಕ ಕಥೆಯಲ್ಲ; ಅದು ಜನಸಾಮಾನ್ಯರ ಬದುಕಿಗೆ ಬೆಳದಿಂಗಳನ್ನು ತಂದ ಮಾನವೀಯತೆಯ ಹರಿಕಾರನೊಬ್ಬನ ಬದುಕು. ಅಸಾಮಾನ್ಯ ನಾಯಕನ ದುರಂತ ಅಂತ್ಯದ ಮೂಲಕ, ಈ ಜಗತ್ತಿಗೆ ಬೇಕಾದುದೇನು ಎನ್ನುವ ಬಹುಮುಖ್ಯ ಪ್ರಶ್ನೆಯನ್ನು ಕವಿ ನಮ್ಮ ಮುಂದಿಡುತ್ತಾರೆ. ಒಳಿತು ಕೆಡುಕುಗಳ ಸಂಘರ್ಷದಲ್ಲಿ, ಕೇಡು ಮೇಲುಗೈ ಸಾಧಿಸಿದರೂ ನಮ್ಮ ಆಯ್ಕೆ ಯಾವುದಾಗಿರಬೇಕು ಎನ್ನುವ ವಿವೇಕ–ವಿಮರ್ಶಾ ಪ್ರಜ್ಞೆಯನ್ನು ನಮ್ಮೊಳಗೆ ಉದ್ದೀಪಿಸುತ್ತಾರೆ. ಕನ್ನಡದ ಮೊದಲ ‘ರಾಷ್ಟ್ರಕವಿ’ ಎನ್ನುವ ಗೌರವ ಗೋವಿಂದ ಪೈಗಳಿಗೆ ಸಂದುದು ಯಾತಕ್ಕೆ ಎನ್ನುವುದಕ್ಕೆ ‘ಗೊಲ್ಗೊಥಾ’ ಉತ್ತರರೂಪದಲ್ಲಿದೆ.

ADVERTISEMENT

‘ಗೊಲ್ಗೊಥಾ’ ಆರಂಭವಾಗುವುದು, ನಡೆಯಲಿರುವ ದುರಂತಕ್ಕೆ ಹೇಸಿ ಚಂದ್ರ ಮರೆಗೆ ಸರಿಯುವ ಹಾಗೂ ತಾನು ಏನೆಲ್ಲಕ್ಕೆ ಸಾಕ್ಷಿಯಾಗಬೇಕಿದೆ ಎನ್ನುವ ಸಂಕಟದೊಂದಿಗೆ ಸೂರ್ಯ ಉದಯಿಸುವ ಸಂಧಿಕಾಲದ ಚಿತ್ರಣದೊಂದಿಗೆ. ಯೇಸುವನ್ನು ವಿಚಾರಣೆಗೆ ಕರೆತರಲಾಗಿದೆ. ನ್ಯಾಯಪೀಠದಲ್ಲಿ ಕುಳಿತಿರುವ ಪಿಲಾತನಿಗೆ, ತನ್ನ ಮುಂದೆ ನಿಂತ ವ್ಯಕ್ತಿ ಬಡ ಬಡಗಿಯಾಗಿಯೂ ಯೌವನವನ್ನು ವ್ಯರ್ಥ ಮಾಡಿಕೊಂಡ ಮರಳುಗಾಡಿನ ಒಂಟೆಯಂತೆಯೂ ಕಾಣಿಸುತ್ತಾನೆ. ತನ್ನ ಕುರ್ಚಿ ಉಳಿದರೆ ಸಾಕೆಂದು ಯೋಚಿಸುವ ಅವನಿಗೇನು ಗೊತ್ತು, ಸಂಕಷ್ಟಪರಂಪರೆಯಿಂದ ಅಮೃತತ್ವದ ಕಡೆಗೆ ಜನಸಾಮಾನ್ಯರನ್ನು ಸಾಗಿಸುವ ಒಂಟೆ ಕ್ರಿಸ್ತನೆನ್ನುವುದು. ಪಿಲಾತ ಸ್ವಭಾವತಃ ದುಷ್ಟನೇನೂ ಅಲ್ಲ. ಧರ್ಮದ್ರೋಹ, ರಾಜ್ಯದ್ರೋಹದ ಆರೋಪಗಳಿಗೆ ಗುರಿಯಾಗಿ, ‘ಸತ್ಯವೆನ್ನಯ ರಾಜ್ಯ/ ಸತ್ಯವನ್ನೀಡೇರಿಸುವ ರಾಜ ನಾಂ’ ಎನ್ನುವ ಯೇಸುವಿನ ಮಾತಿನಲ್ಲಿ ಅವನಿಗೆ ತಪ್ಪೇನೂ ಕಾಣುವುದಿಲ್ಲ. ಚಾವಟಿಯೇಟಿನ ಶಿಕ್ಷೆ ವಿಧಿಸಿ ಆರೋಪಿಯನ್ನು ಬಂಧಮುಕ್ತಗೊಳಿಸಬಹುದು ಎಂದಾತ ಯೋಚಿಸುತ್ತಾನೆ. ಆದರೆ, ಗುಂಪು ಹಟ ಸಡಿಲಿಸುವುದಿಲ್ಲ. ‘ರಾಜದ್ರೋಹಿಗೆ ದಂಡನೆ ನೀಡದಿದ್ದರೆ ಸ್ವತಃ ನೀನೇ ರಾಜದ್ರೋಹಿಯಾಗುವೆ’ ಎಂದು ನೆರೆದವರು ಎಚ್ಚರಿಸುತ್ತಾರೆ. ಆ ಎಚ್ಚರಿಕೆಗೆ ಪಿಲಾತ ಮಣಿಯುತ್ತಾನೆ. ಚಕ್ರವರ್ತಿ ಕೈಸರ್‌ಗೆ ತನ್ನ ವಿರುದ್ಧ ದೂರು ಹೋದೀತೆಂದು ಅಳುಕಿ, ಯೇಸುವಿಗೆ ಮರಣದಂಡನೆಯ ಶಿಕ್ಷೆ ವಿಧಿಸುತ್ತಾನೆ. ಜ್ಞಾನವೃಕ್ಷವನ್ನು ಆವರಿಸಿ ಕುಳಿತಿದ್ದರೂ ಅದರ ಫಲವನ್ನು ಮೆಲ್ಲಲಾರದ ಸ್ಥಿತಿ ಅವನದು.

ಮುಂದಿನದು ಯೇಸುವನ್ನು ದಂಡಿಸುವ ಅಮಾನುಷ ಕ್ರೌರ್ಯದ ಕಥನ. ಮನುಷ್ಯರ ಸಂಕಟಗಳನ್ನು ಶಿರದ ಮೇಲೆ ಧರಿಸಿದ ಪ್ರಭುವಿನ ಮುಡಿಗೆ ಮುಳ್ಳುಗಳ ಕಿರೀಟಧಾರಣೆ. ರಕ್ತ ಸುರಿಯುವುದು ತಿಳಿಯದಿರಲೆಂದು ಮೈಗೆ ಕೆಂಪು ಬಟ್ಟೆ. ಶಾಂತಿದೂತನ ಮುಖಕ್ಕೆ ಉಗುಳಿನ ಅಭಿಷೇಕ. ದೇಹಕ್ಕೆ ಬೆತ್ತದಸೇವೆ. ನೋವು, ಅವಮಾನಗಳನ್ನು ಮೀರಿದವನು ಯೇಸು. ಸಾವಿರ ಚೇಳುಗಳು ಒಮ್ಮೆಗೇ ಕಚ್ಚಿದಂತೆ ಬಾಧೆಯಾದರೂ ಪ್ರಸವವೇದನೆಯನ್ನು ಸಹಿಸಿಕೊಳ್ಳುವ ತಾಯಿಯಂತೆ ನೋವನ್ನು ನುಂಗಿಕೊಳ್ಳುತ್ತಾನೆ. ಕವಿಯ ಕಣ್ಣಿಗೆ, ಕ್ರಿಸ್ತನ ದೇಹದಿಂದ ಸುರಿಯುವ ನೆತ್ತರು ಅರುಣೋದಯದಂತೆ ಕಾಣಿಸುತ್ತದೆ; ಕುಲುಮೆಯಲ್ಲಿ ಪುಟಗೊಂಡ ಚಿನ್ನದಂತೆ ಕ್ರಿಸ್ತ ಕಂಗೊಳಿಸುತ್ತಾನೆ. ನೋವಿನ ನಡುವೆಯೂ ಕ್ರಿಸ್ತನ ಮಾತೃಮನಸು ರಾಡಿಯಾಗುವುದಿಲ್ಲ. ‘ಕ್ಷಮಿಸನವರೆಲೆ ತಂದೆ; ತಾವೇನನೆಸಗಿದಪೆವೆಂದರಿಯರಿವರು’ ಎನ್ನುತ್ತದೆ ಕ್ರಿಸ್ತಹೃದಯ.

ಯೇಸುವಿನ ಸ್ಥಿತಿ ಕಂಡು ಮರುಗುವವರೂ ಗೊಲ್ಗೊಥಾದಲ್ಲಿದ್ದಾರೆ; ವಿಶೇಷವಾಗಿ ಹೆಣ್ಣುಮಕ್ಕಳು. ತನ್ನ ದೇಹದಿಂದ ರಕ್ತ ಸುರಿಯುತ್ತಿದ್ದರೂ ನೆರವಿಯ ಕಣ್ಣೀರಿಗೆ ಯೇಸು ಮಿಡಿಯುತ್ತಾನೆ. ನನಗಾಗಿ ಅಳಬೇಡಿ. ನಿಮಗಾಗಿ, ನಿಮ್ಮ ಮಕ್ಕಳಿಗಾಗಿ ದುಃಖಿಸಿ. ಮುಂದಿನ ದಿನಗಳು ಮತ್ತಷ್ಟು ಘೋರವಾಗಿರಲಿವೆ ಎಂದು ಎಚ್ಚರಿಸುತ್ತಾನೆ.

ರಘುನಾಥ ಚ.ಹ.

ಗೊಲ್ಗೊಥಾ ದಿಬ್ಬದ ಮೇಲೆ ಕ್ರಿಸ್ತನೆಂಬ ಸೂರ್ಯ ಅಸ್ತಮಿಸಿದ್ದಾನೆ. ಇದೆಲ್ಲವನ್ನು ನೋಡಲಾರೆ ಎನ್ನುವಂತೆ ಸೂರ್ಯ ಮರೆಯಾಗುತ್ತಾನೆ. ಹಗಲದೀಪ ಆರಿಹೋದ ಆತಂಕ. ಕತ್ತಲೆಯ ಮಳೆ ಸುರಿದಂತೆ ಭಾಸ. ಕ್ರಿಸ್ತ ಪ್ರಸ್ಥಾನದ ಗೊಲ್ಗೊಥಾ ನಿರೂಪಣೆಗಾಗಿ ಕವಿಯ ಪಾಲಿಗೆ ಓದುಗರ ಹೃದಯವೇ ರಂಗಮಂಟಪವಾಗಿ ಒದಗಿಬಂದಿದೆ.

ಗೊಲ್ಗೊಥಾ ಎನ್ನುವುದೊಂದು ದಿಬ್ಬ, ಜೆರುಸಲೇಂ ನಗರದ ಹೊರಭಾಗದಲ್ಲಿನ ದಿನ್ನೆಯಂಥ ಪ್ರದೇಶ. ಅಲ್ಲಿ ಕ್ರಿಸ್ತನನ್ನು ಕೈಕಾಲುಗಳಿಗೆ ಮೊಳೆ ಬಡಿದು ಶಿಲುಬೆಗೆ ತೂಗುಹಾಕಿದಾಗ ಆತ ಕಾಣಿಸುವುದು ಹೀಗೆ– ಹದ್ದು ಹಿಡಿದ ಹಕ್ಕಿಯಂತೆ; ಪಡುವಣದಿ ಬಿಳಿಯ ಬಿದಿಗೆಯ ತಿಂಗಳಂತೆ; ಬಿಲ್ಲಿಗೆ ತೊಟ್ಟ ಸರಳಂತೆ. ಉಹ್ಞುಂ, ಕವಿಗೆ ಎಷ್ಟು ಬಿಕ್ಕಿದರೂ ಬಣ್ಣಿಸಿದರೂ ತೃಪ್ತಿಯಿಲ್ಲ. ಕವಿದರ್ಶನ ತುತ್ತತುದಿಗೇರುವುದು– ‘ಮರಣವೃಕ್ಷದೊಳಮೃತ ಫಲದಂತೆ’ ಎಂಬ ಉದ್ಗಾರದೊಂದಿಗೆ.

ಮರಣವೃಕ್ಷದಲ್ಲಿನ ಅಮೃತಫಲ. ಎಂಥ ಅದ್ಭುತ ಮಾತು. ಕನ್ನಡ ಕಾವ್ಯದ ಅಪೂರ್ವ ಮಾತುಗಳಲ್ಲೊಂದು. ಯಾವುದು ಆ ಮರಣವೃಕ್ಷ. ಅದು ಈ ಜಗತ್ತಿನ ಸಮಸ್ತ ಅಜ್ಞಾನ, ಅಧರ್ಮ, ಅಮಾನವೀಯತೆಯ ಮೊತ್ತ. ಅಂಥ ವೃಕ್ಷದಲ್ಲೂ ಅಮೃತಫಲ ಮೂಡಿದೆ, ಕ್ರಿಸ್ತನ ರೂಪದಲ್ಲಿ. ಕ್ರಿಸ್ತನನ್ನು ಇದಕ್ಕಿಂತಲೂ ಅದ್ಭುತವಾಗಿ ಕಟ್ಟಿಕೊಡುವುದು ಅಸಾಧ್ಯ. ಕ್ರಿಸ್ತನಷ್ಟೇ ಅಲ್ಲ; ಬುದ್ಧ, ಬಸವ, ಗಾಂಧಿಯೂ ಅಮೃತಫಲಗಳೇ. (ಬುದ್ಧ, ಗಾಂಧಿ ಹಾಗೂ ಕೃಷ್ಣನ ಕೊನೆಯ ದಿನಗಳ ಬಗ್ಗೆಯೂ ಗೋವಿಂದ ಪೈ ಕಾವ್ಯ ರಚಿಸಿದ್ದಾರೆ.) ವಿಪರ್ಯಾಸವೆಂದರೆ,ಈ ಅಮೃತಫಲಗಳ ಆಯಸ್ಸು ಕಡಿಮೆ. ಶಾಶ್ವತವಾಗಿ ಉಳಿದಿರುವುದು ಮರಣವೃಕ್ಷವೇ.

ಇಹಕೂ ಪರಕೂ ನಡುವಿನ ಏಣಿಯಂತೆ ಕ್ರಿಸ್ತನನ್ನು ಕಂಡವರು, ‘ಲೋಕವಿವನ ಮನೆ/ ಲೋಕದುದ್ಧಾರಣನೆ ಮನೆವಾರ್ತೆ’ ಎಂದು ನಂಬಿದವರು ಗೋವಿಂದ ಪೈ. ಕ್ರಿಸ್ತನ ಜೀವನದಂತೆ ಮರಣವೂ ಮನುಷ್ಯಪ್ರೇಮದ ಔನ್ನತ್ಯವನ್ನು ಸಾರುವ ಸಂದರ್ಭದ ರೂಪದಲ್ಲಿ ಅವರಿಗೆ ಕಂಡಿರುವುದರ ಪ್ರತಿಫಲ ‘ಗೊಲ್ಗೊಥಾ’.

ತೊಂಬತ್ತು ವರ್ಷಗಳ ನಂತರವೂ ‘ಗೊಲ್ಗೊಥಾ’ವನ್ನು ನಾವು ನೆನಪಿಸಿಕೊಳ್ಳಲಿಕ್ಕೆ ಎರಡು ಕಾರಣಗಳಿವೆ. ಒಂದು, ಕ್ರಿಸ್ತನ ನೆತ್ತರಿಂದ ತೋಯ್ದ ಶಿಲುಬೆಗಳನ್ನು ಜನಸಾಮಾನ್ಯರು ಈಗ ದಿನವೂ ಹೊತ್ತು ಬದುಕುತ್ತಿರುವುದು. ‘ನನ್ನ ಕುರಿಮಂದೆಗಾಗಿ ನನ್ನ ಪ್ರಾಣವನ್ನೀಯುವ ನಿಷ್ಠಾವಂತ ಕುರುಬ ನಾನು’ ಎನ್ನುವಂಥ ನಾಯಕರ ಗೈರುಹಾಜರಿಯಲ್ಲಿ, ಶಿಲುಬೆಗಳನ್ನು ಸೃಷ್ಟಿಸುವ ಕೆಲಸವನ್ನು ಬಹುತೇಕ ಜನನಾಯಕರು ವಹಿಸಿಕೊಂಡಿರುವ ವರ್ತಮಾನದಲ್ಲಿ, ‘ಗೊಲ್ಗೊಥಾ’ ಕಥನ ನಮ್ಮೆಲ್ಲರ ಬದುಕಿನ ಚಿತ್ರಣವೇ ಅನ್ನಿಸುತ್ತದೆ.

‘ಗೊಲ್ಗೊಥಾ’ದ ನೆನಪಿಗೆ ಮತ್ತೊಂದು ಕಾರಣ– ವರ್ತಮಾನದ ದಂದುಗಗಳಿಗೆ ಈ ಹೊತ್ತಿನ ಕನ್ನಡ ಸಾಹಿತ್ಯ ಹೆಚ್ಚೂಕಡಿಮೆ ಕುರುಡು, ಕಿವುಡಾಗಿರುವಾಗ, ಕವಿಯ–ಲೇಖಕನ ಪ್ರಜ್ಞೆ ಯಾವುದಾಗಿರಬೇಕು ಹಾಗೂ ಬರಹಗಾರನೊಬ್ಬ ಧರ್ಮನಿರಪೇಕ್ಷ ಆಗುವುದು ಹೇಗೆ ಎನ್ನುವುದರ ಮಾದರಿಯಾಗಿಯೂ ಗೋವಿಂದ ಪೈಗಳ ಕಾವ್ಯವನ್ನು ನೋಡಬೇಕಾಗಿದೆ.

ಮುಂದಿನ ದಿನಗಳು ಮತ್ತಷ್ಟು ಘೋರವಾಗಿರಲಿವೆ ಎನ್ನುವ ಕ್ರಿಸ್ತನ ಮಾತು ನಿಜವಾದ ಸಂದರ್ಭವನ್ನು ಇಂದು ಕಾಣುತ್ತಿದ್ದೇವೆ. ಕಾವ್ಯಸ್ವಾತಂತ್ರ್ಯ ಬಳಸಿಕೊಂಡು ಗೋವಿಂದ ಪೈಗಳು ಕ್ರಿಸ್ತನ ದೇಹವನ್ನು ಗೋರಿಗೆ ಸೇರಿಸದೆ ಶಿಲುಬೆಯಲ್ಲೇ ಉಳಿಸಿದರು. ಬಹುಶಃ ಅವರು, ಶಿಲುಬೆಗಳಿಂದ ಜನಸಾಮಾನ್ಯರಿಗೆ ಬಿಡುಗಡೆಯಿಲ್ಲ ಎನ್ನುವುದನ್ನು ಮನಗಂಡಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.