ADVERTISEMENT

ಸಿನಿಮಾ ಮಾಯೆ; ಪ್ರೇಕ್ಷಕರಿಗೂ ಅಮಲು!

ಭಾಷೆಯ ಟ್ರಂಪ್‌ ಕಾರ್ಡ್‌ ಬಳಕೆ; ಕನ್ನಡ ಸಂವೇದನೆ – ವಿಮರ್ಶೆಗೆ ಬೆನ್ನು

ಚ.ಹ.ರಘುನಾಥ
Published 3 ಸೆಪ್ಟೆಂಬರ್ 2020, 20:30 IST
Last Updated 3 ಸೆಪ್ಟೆಂಬರ್ 2020, 20:30 IST
   

ಕನ್ನಡ ಚಿತ್ರರಂಗವನ್ನು ಬಾಲಿವುಡ್‌–ಹಾಲಿವುಡ್‌ ರೇಂಜಿಗೆ ಕೊಂಡೊಯ್ಯುತ್ತೇವೆ ಎಂದು ಕನ್ನಡ ಚಿತ್ರರಂಗದ ಕೆಲವು ನಿರ್ಮಾಪಕ–ನಿರ್ದೇಶಕರು ಆಗಾಗ ಕಾಲರ್‌ ತಿರುಗಿಸಿಕೊಂಡು ಸುದ್ದಿಯಾಗುತ್ತಾರೆ. ಆ ವಿಸ್ತರಣೆಯ ಭಾಗವಾಗಿ, ಪ್ರಸ್ತುತ ಚಿತ್ರೋದ್ಯಮದಲ್ಲಿ
ಚಂಡಮಾರುತದಂತೆ ಕಾಣಿಸಿಕೊಂಡಿರುವ ಡ್ರಗ್ಸ್‌ ಮಾಫಿಯಾ ನಂಟನ್ನು ನೋಡಬಹುದೆ?

ಚಿತ್ರರಂಗದ ಕೆಲವರು ಡ್ರಗ್ಸ್‌ ಬಳಸುತ್ತಿರಬಹುದು ಎನ್ನುವ ಸಾಧ್ಯತೆಯೇ ಕೆಲವರಿಗೆ ಪರಮಾಶ್ಚರ್ಯದಂತೆ ಕಾಣಿಸುತ್ತಿದೆ. ಡ್ರಗ್ಸ್‌ ಮಾಫಿಯಾದ ಜೊತೆಗೆ ಕನ್ನಡ ಚಿತ್ರರಂಗವನ್ನು ಸೇರಿಸಿ ಮಾತನಾಡುವುದು ಕೆಲವರಿಗೆ ಷಡ್ಯಂತ್ರದಂತೆ ಕಾಣಿಸಿದೆ. ನಿಜವಾದ ಸೋಜಿಗ ಮತ್ತೊಂದಿದೆ. ಕನಿಷ್ಠ ಎರಡು ದಶಕಗಳಿಂದ, ಸಿನಿಮಾಗಳ ಹೆಸರಿನಲ್ಲಿ ಚಿತ್ರೋದ್ಯಮವು ಸಮಾಜಕ್ಕೆ ನೀಡುತ್ತಿರುವ ಅಮಲಿನ ಬಗ್ಗೆ ಸಮಾಜ ಮೌನವಾಗಿರುವ ಅಚ್ಚರಿಯದು. ಕಳೆದ ಎರಡು– ಮೂರು ವರ್ಷಗಳಲ್ಲಿ ತೆರೆಕಂಡ ಸಿನಿಮಾಗಳ ಪಟ್ಟಿಯನ್ನು ನೋಡಿದರೆ ಅದರಲ್ಲಿ ತಿಳಿಯೆಷ್ಟು ಅಮಲೆಷ್ಟು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಕಷ್ಟಪಡಬೇಕಾಗಿಲ್ಲ.

ಮನುಷ್ಯನ ಬದುಕು ಹೆಚ್ಚು ಸೂಕ್ಷ್ಮವಾಗಿರುವ, ಮನುಷ್ಯ ಸಂಬಂಧಗಳು ಹಾಗೂ ಮೌಲ್ಯಗಳ ವ್ಯಾಖ್ಯಾನವೇ ಬದಲಾಗಿರುವ ಸಂದರ್ಭದಲ್ಲಿ ಸಿನಿಮಾ ಮಾಧ್ಯಮದ ಸ್ವರೂಪವೇ ಬದಲಾಗಿದೆ. ನೆರೆಯ ಮಲಯಾಳಂ ಚಿತ್ರರಂಗ ಮನುಷ್ಯಲೋಕದ ಸಣ್ಣಪುಟ್ಟ ಸೂಕ್ಷ್ಮಗಳನ್ನು ಅದ್ಭುತವಾಗಿ ಚಿತ್ರಿಸುತ್ತಿದ್ದರೆ, ದಲಿತ ಜಗತ್ತಿನ ತವಕ ತಲ್ಲಣಗಳನ್ನು ಮುಖ್ಯವಾಹಿನಿ ಸಿನಿಮಾಗಳಲ್ಲಿ ಚಿತ್ರಿಸುವ ಸಾಹಸವನ್ನು ತಮಿಳು ಚಿತ್ರರಂಗ ಮಾಡುತ್ತಿದೆ. ಕನ್ನಡ ಚಿತ್ರೋದ್ಯಮ ಮಾತ್ರ ರೌಡಿಸಂ, ಪ್ರೇಮಕಥೆ ಇಲ್ಲವೇ ದೆವ್ವಭೂತಗಳ ಗ್ರಾಫಿಕ್ಸ್‌ನ ಟ್ರ್ಯಾಕ್‌ನಲ್ಲಿ ಗಿರಕಿ ಹೊಡೆಯುತ್ತಿದೆ.

ADVERTISEMENT

ಹೊಸ ಸಹಸ್ರಮಾನದ ಮೊದಲ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಸಂಖ್ಯಾ ಉಬ್ಬರ ಕಾಣಿಸಿಕೊಂಡಿತಷ್ಟೆ; ಅದರ ಭಾಗವಾಗಿ ಹಿಂಸೆಯ ಪ್ರಮಾಣ ಹೆಚ್ಚಾಗಿದೆ ಎನ್ನುವುದನ್ನು ಪ್ರಾದೇಶಿಕ ‘ಸೆನ್ಸಾರ್ ಮಂಡಳಿ’ಯ ಅಂಕಿಅಂಶಗಳು ಕೂಡ ಸಮರ್ಥಿಸುತ್ತವೆ. 2009ರ ಜೂನ್‌ನಲ್ಲಿ ಅಂದಿನ ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಎ. ಚಂದ್ರಶೇಖರ್, ‘ಕ್ರೌರ್ಯ ಮತ್ತು ಅಪರಾಧದ ಹಿನ್ನೆಲೆ ಇರುವಂಥ ಚಲನಚಿತ್ರಗಳ ಪ್ರಮಾಣ ಕನ್ನಡದಲ್ಲಿ ಅತಿ ಹೆಚ್ಚಷ್ಟೇ ಅಲ್ಲ, ಅದು ವರ್ಷದಿಂದ ವರ್ಷಕ್ಕೆ ಭಯಾನಕ ರೀತಿಯಲ್ಲಿ ಏರುತ್ತಲೇ ಇದೆ’ ಎಂದು ಹೇಳಿದ್ದರು. ಆ ಏರಿಕೆ ಈಗಲೂ ಇಳಿಮುಖವಾಗಿಯೇನೂ ಇಲ್ಲ.

ಆತ್ಮವಿಮರ್ಶೆಯ ಕೊರತೆ, ಪರಂಪರೆಯ ಬಗೆಗಿನ ಅವಜ್ಞೆ ಹಾಗೂ ಅಹಂಕಾರ–ಉಡಾಫೆಯ ನಡವಳಿಕೆಯು ಸಮಕಾಲೀನ ಚಿತ್ರರಂಗವನ್ನು ಬಾಧಿಸುತ್ತಿರುವ ಸಂಗತಿಗಳು. ಡ್ರಗ್ಸ್‌ ವ್ಯವಹಾರದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದರೆ– ‘ನನ್ನ ಕಣ್ಣಿಗೆ ನೀವೇ ಡ್ರಗ್‌ ಪೆಡ್ಲರ್‌ ರೀತಿ ಕಾಣಿಸುತ್ತಿದ್ದೀರಿ’ ಎಂದು ತಾರಾವರ್ಚಸ್ಸಿನ ನಟರೊಬ್ಬರು ತಮಾಷೆ ಮಾಡುತ್ತಾರೆ. ಸತ್ತವರ ಬಗ್ಗೆ ಒಳ್ಳೆಯದನ್ನೇ ಮಾತನಾಡಬೇಕು ಎಂದು ಅಪ್ಪಣೆ ಕೊಡಿಸುತ್ತಾರೆ. ಇದು ಉಡಾಫೆಯ ಮಾತಾಯಿತು. ಆತ್ಮವಿಮರ್ಶೆಯ ಕೊರತೆಯ ಉದಾಹರಣೆ ರೂಪದಲ್ಲಿ ಪ್ರಸಕ್ತ ಡ್ರಗ್ಸ್‌ ಮಾಫಿಯಾದೊಂದಿಗಿನ ನಂಟಿನ ಆರೋಪದ ಪ್ರಸಂಗವನ್ನು ನೋಡಬಹುದು. ಈಗಷ್ಟೇ ಅಲ್ಲ, ತನ್ನ ಕೊರತೆ–ಕೊಳಕಿನ ಬಗೆಗಿನ ಯಾವ ಟೀಕೆಯನ್ನೂ ಚಿತ್ರೋದ್ಯಮ ಸಾವಧಾನದಿಂದ ನೋಡಿರುವುದು ಅಪರೂಪ. ಎರಡು ವರ್ಷಗಳ ಹಿಂದೆ ಕೇಳಿಬಂದ ‘ಮೀ ಟು’ ಪ್ರಕರಣದ ಸಂದರ್ಭದಲ್ಲೂ ಉದ್ಯಮದ ಮಂದಿ ಮರ್ಯಾದಾ ಪುರುಷೋತ್ತಮರಂತೆ ಬೆಚ್ಚಿಬಿದ್ದಿದ್ದರು. ಲೈಂಗಿಕ ಕಿರುಕುಳಗಳ ಬಗ್ಗೆ ಮಾತನಾಡಲು ಮುಂದಾದ ಹೆಣ್ಣುಮಕ್ಕಳ ಬಾಯಿ ಮುಚ್ಚಿಸಿದ್ದರು. ಈಗ ಡ್ರಗ್ಸ್‌ ವಿಷಯದಲ್ಲೂ ತಾವು ತಪ್ಪು ಮಾಡಬಹುದಾದ ಮನುಷ್ಯ ಮಾತ್ರರಲ್ಲ ಎನ್ನುವಂತೆ ಚಿತ್ರೋದ್ಯಮ ವರ್ತಿಸುತ್ತಿದೆ.

ಪರಂಪರೆಯ ಬಗೆಗಿನ ಅವಜ್ಞೆಯ ರೂಪದಲ್ಲಿ ಪ್ರಸಕ್ತ ತೆರೆಕಾಣುತ್ತಿರುವ ಸಿನಿಮಾಗಳನ್ನು ಗಮನಿಸಬಹುದು. ಕನ್ನಡ ನಾಡು–ನುಡಿಗೆ ಕನ್ನಡ ಸಿನಿಮಾದ ಕೊಡುಗೆಯೇನು ಎನ್ನುವ ಪ್ರಶ್ನೆಯನ್ನು ಕಳೆದೆರಡು ದಶಕಗಳ ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಕೇಳಿಕೊಂಡರೆ, ದೊರೆಯುವ ಉತ್ತರ ನಿರಾಶಾದಾಯಕವಾದುದು. ರಾಜ್‌ಕುಮಾರ್‌ ಕಾಲಘಟ್ಟದ ಚಿತ್ರರಂಗ, ಕನ್ನಡದ ಜನಸಾಮಾನ್ಯರಿಗೆ ಮಯೂರ, ಪುಲಿಕೇಶಿ, ಕಂಠೀರವ, ಕನಕದಾಸ, ಕೃಷ್ಣದೇವರಾಯರಂಥ ಚಾರಿತ್ರಿಕ ನಾಯಕರನ್ನು ಪರಿಚಯಿಸಿತು. ಆದರೆ, ಇವತ್ತಿನ ಚಿತ್ರರಂಗ ಕಳ್ಳ ಪೊಲೀಸ್‌ ಕಥೆಗಳನ್ನು ಹೇಳಲಿಕ್ಕೆ ಮದಕರಿನಾಯಕ, ಕೆಂಪೇಗೌಡರ ಹೆಸರನ್ನು ಬಳಸಿಕೊಂಡಿದೆ. ‘ಕುರುಕ್ಷೇತ್ರ’ ಎಂದರೆ ಸಹೃದಯರ ನೆನಪಿಗೆ ಬರುತ್ತಿದ್ದುದು ಬಿ. ಪುಟ್ಟಸ್ವಾಮಯ್ಯನವರು. ಈಗ ಕುರುಕ್ಷೇತ್ರದ ಜೊತೆಗೆ ಚಿತ್ರದ ನಿರ್ಮಾಪಕರ ಹೆಸರು ತಳಕು ಹಾಕಿಕೊಂಡಿದೆ.

ಸಂಸಾರವಂದಿಗರು ಚಿತ್ರಮಂದಿರಗಳತ್ತ ಮುಖ ಮಾಡದಿರುವಂತಾಗಲು ಏನು ಕಾರಣ ಎನ್ನುವುದನ್ನು ಸಿನಿಮಾ ವಯ್ಯಾಕರಣಿಗಳು ಎಂದಾದರೂ ಯೋಚಿಸಿದ್ದಾರೆಯೇ? ಮಾತೆತ್ತಿದರೆ ‘ಕನ್ನಡ ಸಿನಿಮಾ’ ಎಂದು ಭಾವಾವೇಶದಿಂದ ಮಾತನಾಡುವವರು, ಕಳೆದ ಹತ್ತು ವರ್ಷಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರು ಹೆಮ್ಮೆಪಡಬಹುದಾದ ಎಷ್ಟು ಸಿನಿಮಾಗಳನ್ನು ರೂಪಿಸಿದ್ದಾರೆ? ಕನ್ನಡ ಮಣ್ಣಿನ ಘಮ, ಕನ್ನಡ ಸಂಸ್ಕೃತಿಯ ಸೊಗಡಿರುವ ಎಷ್ಟು ಮುಖ್ಯವಾಹಿನಿ ಸಿನಿಮಾಗಳು ತೆರೆಕಂಡಿವೆ? ಇಂದಿನ ವ್ಯಾಪಾರಿ ಚಿತ್ರಗಳಲ್ಲಿ ಕನ್ನಡದ ‘ಸೌಂಡು’ ಹೊರತುಪಡಿಸಿದರೆ ಉಳಿದಂತೆ ಕನ್ನಡತನವನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕಾಗಿದೆ.

ರಾಮ್‌ ರೆಡ್ಡಿ (‘ತಿಥಿ’), ಸತ್ಯಪ್ರಕಾಶ್‌ (‘ರಾಮಾ ರಾಮಾ ರೇ’), ಜಯತೀರ್ಥ (‘ಒಲವೇ ಮಂದಾರ’, ‘ಬೆಲ್‌ ಬಾಟಂ’) ಅವರಂಥ ವಿರಳ
ಉದಾಹರಣೆಗಳನ್ನು ಹೊರತುಪಡಿಸಿದರೆ, ಕನ್ನಡಪ್ರಜ್ಞೆಯನ್ನು ತಮ್ಮ ಸಿನಿಮಾದ ಭಾಗವಾಗಿಸಿಕೊಳ್ಳುವ ಅಗತ್ಯದ ಬಗ್ಗೆ ಯೋಚಿಸುವ ನಿರ್ದೇಶಕರ ಹೆಸರುಗಳೂ ತಕ್ಷಣಕ್ಕೆ ನೆನಪಾಗುವುದಿಲ್ಲ. ಬಹುತೇಕ ಚಿತ್ರನಿರ್ಮಾತೃಗಳು ತಾರಾ ವರ್ಚಸ್ಸಿನ ನಾಯಕ ನಟರ ಅಭಿಮಾನಿಗಳಿಗಾಗಿ ಸಿನಿಮಾಗಳನ್ನು ತಯಾರಿಸುತ್ತಿದ್ದಾರೆಯೇ ಹೊರತು, ಕನ್ನಡ ಪ್ರೇಕ್ಷಕರಿಗಲ್ಲ. ಆ ಕಾರಣದಿಂದಲೇ ಅವರ ಸಿನಿಮಾಗಳ ಭಾಗವಾಗಿ ‘ಕನ್ನಡತನ’ ಮೂಡುತ್ತಿಲ್ಲ. ಸಿನಿಮಾಗಳನ್ನು ಸರಕಿನಂತೆ, ಸಿನಿಮಾ ನಿರ್ಮಾಣವನ್ನು ವ್ಯಾಪಾರದಂತೆ ಭಾವಿಸುತ್ತಿರುವವರಿಗೆ ಉದ್ಯಮದ ಕಲೆಯ ಸ್ವರೂಪ ನಗಣ್ಯವಾಗಿದೆ. ಇಂಥವರಿಗೆ ಡ್ರಗ್ಸ್‌ ಕೂಡ ಒಂದು ವ್ಯಾಪಾರವಾಗಿ, ಫನ್‌ ಆಗಿ ಕಾಣಿಸಿದರೆ ಅಚ್ಚರಿಯೇನಿಲ್ಲ.

‘ಕನ್ನಡ ಚಿತ್ರೋದ್ಯಮಕ್ಕೆ ಮಸಿ ಹಚ್ಚಬೇಡಿ’, ‘ಯಾರೋ ಒಬ್ಬರು ಮಾಡಿರಬಹುದಾದ ತಪ್ಪಿಗೆ ಇಡೀ ಚಿತ್ರೋದ್ಯಮಕ್ಕೆ ಅವಮಾನ ಮಾಡಬೇಡಿ’ ಎಂದು ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಕೇಂದ್ರಿತ ಚಿತ್ರರಂಗ ವಾದಿಸುತ್ತಿದೆ. ಇವರ ಮಾತುಗಳನ್ನು ಎರಡು ರೀತಿಯಲ್ಲಿ ಗ್ರಹಿಸಬಹುದು: ಒಂದು, ಚಿತ್ರೋದ್ಯಮದ ಬಾಲವಾಡಿಯಲ್ಲಿ ಡ್ರಗ್ಸ್‌ ತೆಗೆದುಕೊಳ್ಳುವಂತಹ ವಯಸ್ಕರು ಯಾರೂ ಇಲ್ಲವೆನ್ನುವ ಅಮಾಯಕತೆ. ಮತ್ತೊಂದು, ಚಿತ್ರರಂಗ ನಮಗೆ ಸೇರಿದ್ದು, ಅದರ ವ್ಯವಹಾರಗಳಲ್ಲಿ ಮೂಗು ತೂರಿಸಬೇಡಿ ಎನ್ನುವರ್ಥದ ಸಿಡಿಮಿಡಿ. ಸಿನಿಮಾಗಳ ಮೂಲಕ ಭ್ರಮಾತ್ಮಕ ಜಗತ್ತನ್ನು ಸೃಷ್ಟಿಸುವವರೇ ಭ್ರಮೆಗಳಲ್ಲಿ ಜೀವಿಸುತ್ತಿರುವುದಕ್ಕೆ ಈ ಮಾತುಗಳು ಉದಾಹರಣೆಯಂತಿವೆ.

ಚಿತ್ರೋದ್ಯಮಕ್ಕೆ ಕಳಂಕ ತರಬೇಡಿ ಎಂದು ಮಾತನಾಡುತ್ತಿರುವ ಸಿನಿಮಾ ಮಂದಿ, ಚಿತ್ರೋದ್ಯಮ ತಮ್ಮದು ಎಂದು ಭಾವಿಸಿದಂತಿದೆ. ಸಿನಿಮಾಗಳ ನಿರ್ಮಾಣ ಮಾಡಿದ ಮಾತ್ರಕ್ಕೆ ಯಾರಿಗೂ ಚಿತ್ರರಂಗದ ಮೇಲಿನ ಹಕ್ಕು ಒದಗುವುದಿಲ್ಲ. ಚಿತ್ರರಂಗ ನಮ್ಮದು ಎಂದು ಹೇಳುವ ಹಕ್ಕಿರುವುದು ಪ್ರೇಕ್ಷಕರಿಗೆ. ನಿರ್ಮಾಪಕ–ನಿರ್ದೇಶಕರ ಪಾಲಿಗೆ ಸಿನಿಮಾ ವ್ಯಾಪಾರವಾದರೆ, ಪ್ರೇಕ್ಷಕರ ಪಾಲಿಗದು ಅಭಿಮಾನದ ಸಂಗತಿ. ಆ ನೆಲೆಗಟ್ಟಿನಲ್ಲಿ ರಾಜ್‌ಕುಮಾರ್‌ ಅವರು ಉದ್ಗರಿಸುತ್ತಿದ್ದ ‘ಅಭಿಮಾನಿ ದೇವರುಗಳೇ’ ಎನ್ನುವ ಹೇಳಿಕೆಗೆ ವಿಶೇಷ ಅರ್ಥವಿದೆ. ಆ ಅಭಿಮಾನಿ ದೇವರುಗಳು ‘ತಮ್ಮ ಚಿತ್ರರಂಗ’ ಸ್ವಚ್ಛವಾಗಿರಬೇಕೆಂದು ಬಯಸಿದರೆ ಅದನ್ನು ಹಸ್ತಕ್ಷೇಪವೆಂದು ಹೇಳುವ ಹಕ್ಕು ಯಾರಿಗೂ ಇಲ್ಲ.

ಕನ್ನಡದ ಕೆಲವು ಕಲಾವಿದರು ಹಾಗೂ ತಂತ್ರಜ್ಞರು ದಂತಗೋಪುರಗಳಲ್ಲಿರುವುದಕ್ಕೆ ಅವರ ಮಾತುಗಳೇ ಉದಾಹರಣೆಯಂತಿವೆ. ನಿರ್ಮಾಪಕರೊಬ್ಬರು ಕನ್ನಡ ಚಿತ್ರೋದ್ಯಮವನ್ನು ದೇವಸ್ಥಾನ ಎನ್ನುತ್ತಾರೆ. ಯುವ ನಟಿಯ ಕಣ್ಣಿಗೆ ಗಾಂಜಾ ಗಿಡ ತುಳಸಿ ಗಿಡದಂತೆ ಕಾಣುತ್ತದೆ. ಗಾಂಜಾ ಬಳಕೆಯನ್ನು ಕಾನೂನುಬದ್ಧಗೊಳಿಸಬೇಕು ಎನ್ನುವುದು ಯುವನಟನೊಬ್ಬನ ವಾದ. ಈ ಹೋಲಿಕೆಗಳೇ ಚಿತ್ರೋದ್ಯಮದ ‘ಮಂದಿರ’ದ ಸ್ವರೂಪ ಯಾವ ಬಗೆಯದೆನ್ನುವುದನ್ನು ಸೂಚಿಸುವಂತಿವೆ. ವ್ಯಕ್ತಿಯಾದರೂ ಸಮಷ್ಟಿಯಾದರೂ ವಿಮರ್ಶೆಗೆ ಬೆನ್ನುಹಾಕಿದರೆ ರೋಗಪೀಡನೆಗೊಳಗಾಗುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.