ADVERTISEMENT

ಭಾರತಕ್ಕೆ ರಾಷ್ಟ್ರೀಯ ಭದ್ರತಾ ‘ಚಕ್ರವರ್ತಿ’?

ಶೇಖರ್ ಗುಪ್ತ
Published 13 ಅಕ್ಟೋಬರ್ 2018, 20:00 IST
Last Updated 13 ಅಕ್ಟೋಬರ್ 2018, 20:00 IST

ನಮ್ಮ ರಾಷ್ಟ್ರದ ಸುವ್ಯವಸ್ಥಿತ ಆಡಳಿತ ಸಂರಚನೆಯನ್ನು, ಅದರಲ್ಲೂ ನಮ್ಮ ಸಂಪ್ರದಾಯನಿಷ್ಠ ರಕ್ಷಣಾ ಅಧಿಕಾರಶಾಹಿಯನ್ನು ಭೂಗ್ರಹದ ರಚನೆಗೆ ಹೋಲಿಸಬಹುದು. ಭೂಮಿಯನ್ನು ಬಗೆಬಗೆಯ ಪದರಗಳು ಸೇರಿ ರೂಪಿಸಿದ್ದು, ಈ ಕ್ರಿಯಾಶೀಲ ಪದರಗಳು ಸದಾಚಲನೆಯಲ್ಲಿವೆ.

ಆದರೆ ಈ ಚಲನೆ ಎಷ್ಟು ಮಂದಗತಿಯಲ್ಲಿದೆ ಎಂದರೆ, ಈ ಪದರಗಳು ಚಲನೆಯಲ್ಲಿವೆ ಎಂಬುದು ಯಾರ ಗಮನಕ್ಕೂ ಬರುವುದೇ ಇಲ್ಲ. ಭೂತಳದ ಪದರಗಳು ಸ್ಥಳಾಂತರಗೊಂಡಾಗ ಈ ಪದರಗಳು ಹಠಾತ್ತನೆ ಸರಿದು ಚಲಿಸುತ್ತವೆ.

ಈಗ ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರೋರಾತ್ರಿ ಕೇವಲ ಅಧಿಸೂಚನೆ ಹೊರಡಿಸುವ ಮೂಲಕ ಇಂತಹ ಬದಲಾವಣೆ ಮಾಡಿ
ದ್ದಾರೆ. ಇದು ರಾಷ್ಟ್ರೀಯ ಭದ್ರತಾ ಸಂರಚನೆಗೆ ಸಂಪೂರ್ಣ ಹೊಸ ಚಹರೆಯನ್ನೇ ನೀಡಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌
ಕುಮಾರ್ ದೋಭಾಲ್ ಅವರ ನೇತೃತ್ವದಲ್ಲಿ ಹೊಸ ರೂಪ ನೀಡಲಾಗಿರುವ ಕಾರ್ಯತಂತ್ರ ನೀತಿ ಪಡೆ ಇದಾಗಿದೆ.

ADVERTISEMENT

18 ಸದಸ್ಯರನ್ನು ಒಳಗೊಂಡ ತಂಡ ಇದು. ನಿರೀಕ್ಷೆಯಂತೆ, ಸೇನಾಪಡೆಯ ಮೂರೂ ವಿಭಾಗಗಳ (ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ) ಮುಖ್ಯಸ್ಥರು, ಎರಡು ಗುಪ್ತದಳಗಳ (ಐಬಿ ಮತ್ತು ರಾ) ಮುಖ್ಯಸ್ಥರು, ರಕ್ಷಣಾ-ಗೃಹ- ಹಣಕಾಸು ಮತ್ತು ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿಗಳು ಇದರಲ್ಲಿದ್ದಾರೆ.

ಇದಲ್ಲದೆ ಕೆಲವು ಅಚ್ಚರಿಯ ಸೇರ್ಪಡೆಗಳೂ ಇವೆ: ಆರ್‌ಬಿಐ ಗವರ್ನರ್, ನೀತಿ ಆಯೋಗದ ಉಪಾಧ್ಯಕ್ಷರು, ಕಂದಾಯ ಇಲಾಖೆ ಕಾರ್ಯದರ್ಶಿ ಹಾಗೂ ಎಲ್ಲಕ್ಕಿಂತ ಗಮನಾರ್ಹ ಸಂಗತಿಯೆಂದರೆ, ರಾಷ್ಟ್ರದ ಅತ್ಯಂತ ಹಿರಿಯ ನಾಗರಿಕ ಸೇವಕರಾದ ಸಂಪುಟ ಕಾರ್ಯದರ್ಶಿ ಇದರಲ್ಲಿ ಸೇರಿದ್ದಾರೆ. ಇಲ್ಲಿ ಹೇಳಬೇಕಾದ ಮತ್ತೊಂದು ವಿಷಯವೆಂದರೆ, ನಮ್ಮಲ್ಲಿ ಸಂಪುಟ ಕಾರ್ಯದರ್ಶಿ ಹುದ್ದೆ ಸಾಂವಿಧಾನಿಕ ಸ್ಥಾನಮಾನ ಹೊಂದಿದೆ. ಆದರೆ, ಎನ್ಎಸ್ಎ (ರಾಷ್ಟ್ರೀಯ ಭದ್ರತಾ ಸಲಹೆಗಾರ) ಹುದ್ದೆ ಸಾಂವಿಧಾನಿಕ ಸ್ಥಾನಮಾನ ಹೊಂದಿಲ್ಲ.

ಪ್ರಧಾನಿ ಹೊರಡಿಸಿರುವ ಸಂಕ್ಷಿಪ್ತ ಅಧಿಸೂಚನೆಯಲ್ಲಿ ಇನ್ನೂ ಮೂರು ಆಸಕ್ತಿದಾಯಕ ಅಂಶಗಳಿವೆ. ಮೊದಲನೆಯದು, ರಾಷ್ಟ್ರೀಯ ಭದ್ರತಾ ಸಲಹೆಗಾರರು ಎಸ್‌ಪಿಜಿ ಸಭೆಗೆ ಹಾಜರಾಗುವಂತೆ ಇತರ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಆದೇಶಿಸಬಹುದು. ಎರಡನೆಯದು, ಎಸ್‌ಪಿಜಿ ನಿರ್ಣಯಗಳನ್ನು ಕೇಂದ್ರ ಸರ್ಕಾರದ ಸಚಿವಾಲಯಗಳು/ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು ಕಾರ್ಯಾನುಷ್ಠಾನಗೊಳಿಸುವಂತೆ ಸಂಪುಟ ಕಾರ್ಯದರ್ಶಿ ಸಂಚಾಲಕತ್ವ ವಹಿಸುವರು. ಮೂರನೆಯದಾಗಿ, ಈ ಅಧಿಸೂಚನೆಗೆ ಪ್ರಧಾನಮಂತ್ರಿ ಕಚೇರಿಯ ಯಾವುದೇ ಅಧಿಕಾರಿಯಾಗಲಿ ಅಥವಾ ಸಂಪುಟ ಕಾರ್ಯದರ್ಶಿಯಾಗಲಿ ಸಹಿ ಹಾಕುವುದಿಲ್ಲ; ಬದಲಾಗಿ, ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿನ ಜಂಟಿ ಕಾರ್ಯದರ್ಶಿಗೆ ಈ ಅಧಿಕಾರ ನೀಡಲಾಗಿದೆ.

ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ, ಎಸ್‌ಪಿಜಿಯನ್ನು ಮೊದಲಿಗೆ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ 1999ರ ಏಪ್ರಿಲ್‌ನಲ್ಲಿ ಸ್ಥಾಪಿಸಲಾಯಿತು. ವ್ಯತ್ಯಾಸವೇನೆಂದರೆ, ಆಗ ಸಂಪುಟ ಕಾರ್ಯದರ್ಶಿಯು ಅದರ ಮುಖ್ಯಸ್ಥರಾಗಿದ್ದರು. ಸಂಪುಟ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಪಡೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ವಿಶೇಷ ಆಹ್ವಾನಿತರಾಗಿ ಭಾಗಿಯಾಗುತ್ತಿದ್ದರು. ಈಗ ಅಧಿಸೂಚನೆಯು ಎನ್‌ಎಸ್‌ಎ ಕಾರ್ಯಾಚರಣೆಯನ್ನು ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯಕ್ಕೆ (ಎನ್‌ಎಸ್‌ಸಿಎಸ್) ವರ್ಗಾಯಿಸಿದೆ. ಮುಂಚೆ ಪಡೆಯ ಮುಖ್ಯಸ್ಥರಾಗಿದ್ದ ಸಂಪುಟ ಕಾರ್ಯದರ್ಶಿಯು ಈಗ ಅದರ ಸದಸ್ಯರಲ್ಲಿ ಒಬ್ಬರಾಗಿದ್ದು, ನಿರ್ಣಯಗಳ ಕಾರ್ಯಾನುಷ್ಠಾನದ ಹೊಣೆ ಹೊತ್ತವರಾಗಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರರು (ಎನ್ಎಸ್ಎ) ಪಡೆಯ ಹೊಸ ಮುಖ್ಯಸ್ಥರಾಗಿದ್ದಾರೆ.

ಇದರಿಂದಾಗಿ, ‘ಸಚಿವ ಸಂಪುಟದ ಗುಮಾಸ್ತರು ಇದೀಗ ಎನ್‌ಎಸ್‌ಸಿಎಸ್ ಗುಮಾಸ್ತರಾಗಿದ್ದಾರೆ’ ಎಂದು ಬರೆಯುವಂತೆ ಇದು ಕೆಣಕುತ್ತಿದೆ. ಇದು ಕೇವಲ ಅಧಿಕಾರಶಾಹಿಯ ಸಾಮಾನ್ಯ ಆದೇಶ ಅಥವಾ ಆಂತರಿಕ ಸೇವಾ ಶ್ರೇಣಿಗೆ ಸಂಬಂಧಪಟ್ಟ ವಿಷಯವಾಗದೆ, ತೀವ್ರ ಚರ್ಚೆಗೆ ಎಡೆ ಮಾಡಿಕೊಡುವ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳನ್ನು ಎತ್ತಿದೆ.

ರಾಷ್ಟ್ರೀಯ ಭದ್ರತಾ ನಿರ್ಣಯಗಳ ಕಾನೂನುಬದ್ಧ ಅಧಿಕಾರವನ್ನು ಸಂಪುಟ ಸಚಿವಾಲಯದಿಂದ ಎನ್ಎಸ್‌ಸಿಎಸ್‌ಗೆ ವಿಧಿವತ್ತಾಗಿ ವರ್ಗಾಯಿಸಿರುವುದು ಈಗ ಮಾಡಿರುವ ಬದಲಾವಣೆಗಳಲ್ಲಿ ಬಲು ಮುಖ್ಯವಾಗಿದೆ. ಕಾಕತಾಳೀಯವೆಂದರೆ, ರಾ ಗುಪ್ತದಳ ಕೂಡ ಸಂಪುಟ ಸಚಿವಾಲಯದಲ್ಲೇ ಕಾರ್ಯ ನಿರ್ವಹಿಸುತ್ತಿದ್ದು ಅದರ ಬಜೆಟ್ ಸಹ ಇಲ್ಲೇ ನಿಗದಿಯಾಗುತ್ತದೆ. ಎಸ್‌ಪಿಜಿ ನಿರ್ಣಯಗಳನ್ನು ಈಗಲೂ ಸಂಪುಟ ಸಚಿವಾಲಯವೇ ಅನುಷ್ಠಾನಗೊಳಿಸುವುದರಿಂದ ತಾಂತ್ರಿಕವಾಗಿ ಇದು ಯಥಾಸ್ಥಿತಿ ಕಾಯ್ದುಕೊಂಡಿರುವಂತೆ ತೋರುತ್ತದೆ. ಆದರೆ, ಅಧಿಕಾರ ಅವರಿಗಾಗಲೀ ಅಥವಾ ಸಂಪುಟಕ್ಕಾಗಲೀ ಇರುವುದಿಲ್ಲ.

ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಧಾನಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರು ಪ್ರಮುಖ ಸಲಹೆಗಾರರಾದ್ದರಿಂದ, ಅವರು (ಪ್ರಧಾನಿಯವರು) ನಿಯುಕ್ತಿಗೊಳಿಸಿದ ಅಧಿಕಾರದ ಬಲದಿಂದಾಗಿ ಎನ್‌ಎಸ್‌ಎಯವರೇ ನಿರ್ಣಯ ಕೈಗೊಳ್ಳುವುದು ಸೂಕ್ತ ಎಂಬ ತರ್ಕ ಮಂಡಿಸಬಹುದು. ಆದರೆ, ಯಾವುದೇ ಬದಲಾವಣೆಯನ್ನು ಬಡಪೆಟ್ಟಿಗೆ ಒಪ್ಪದ ರೈಸಿನಾ ಹಿಲ್‌ನ ಅಧಿಕಾರ ಸಂರಚನೆಯು ಇದಕ್ಕೆ ಹೊಂದಿಕೊಳ್ಳುತ್ತದೆ ಎಂಬ ಬಗ್ಗೆ ನನಗೆ ಅನುಮಾನಗಳಿವೆ.

ಪ್ರಧಾನಿಯವರು ಮಾಡಿರುವ ಬದಲಾವಣೆಯು ಈ ಕೆಳಗಿನ ಚರ್ಚಾಸ್ಪದ ವಿಷಯಗಳನ್ನು ಹುಟ್ಟುಹಾಕಿದೆ:

1) ಇದು ಗೃಹ, ರಕ್ಷಣೆ ಮತ್ತು ಹಣಕಾಸು ಮಂತ್ರಿಗಳ ಅಳಿದುಳಿದ ಅಧಿಕಾರವನ್ನು ದುರ್ಬಲಗೊಳಿಸುವುದಿಲ್ಲವೇ?

ಈ ಇಲಾಖೆಗಳ ಅಧಿಕಾರಿಗಳು ಮತ್ತು ಸೇನಾ ಮುಖ್ಯಸ್ಥರು ಬಂದು ನಿರ್ಣಯಗಳನ್ನು
ತಿಳಿಸುವ ಕಾರ್ಯಕ್ಕೆ ಸೀಮಿತಗೊಂಡರೆ, ಸಂಪುಟ ಕಾರ್ಯದರ್ಶಿ ಅವುಗಳ ಅನುಷ್ಠಾನವನ್ನು ಖಾತ್ರಿಪಡಿಸುವುದಕ್ಕೆ ಸೀಮಿತವಾಗುತ್ತಾರೆ.

2) ಈ ಬದಲಾವಣೆಯು ರಕ್ಷಣೆಗೆ ಸಂಬಂಧಿಸಿದ ಸಂಪುಟ ಸಮಿತಿಗೆ (ಸಿಸಿಎಸ್) ಯಾವ ಕೆಲಸ ಉಳಿಸುತ್ತದೆ?

ಸಾಮೂಹಿಕ ಹೊಣೆಗಾರಿಕೆಯು ಸಂಪುಟ ಆಡಳಿತ ವ್ಯವಸ್ಥೆಯ ಮೂಲಾಧಾರವಾಗಿದೆ. ಮಹತ್ವದ ವಿಷಯಗಳಿಗೆ ಸಂಬಂಧಿಸಿದಂತೆ ಸಿಸಿಎಸ್ ಸದಸ್ಯರ ಅಭಿಪ್ರಾಯವನ್ನು ಪರಿಗಣಿಸಿ, ನಂತರ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ; ಇದರಲ್ಲಿ ಪ್ರಧಾನಿಯವರ ಧ್ವನಿಗೆ ಪ್ರಾಧಾನ್ಯವಿರುತ್ತದೆ ಎಂಬುದು ನಿಜ. ಸಿಸಿಎಸ್‌ನಲ್ಲಿ ಚರ್ಚೆ ಮತ್ತು ಅಭಿಪ್ರಾಯ ಭೇದ ಸಹಜ ಹಾಗೂ ಇಂತಹ ವಾತಾವರಣ ಆರೋಗ್ಯಕರ ಕೂಡ. ಈಗ ಯಾವುದೇ ನಿರ್ಣಯ ಅಥವಾ ನೀತಿಯು ಪ್ರಧಾನಿಯವರ ಬಿಗಿ ಮುಷ್ಟಿಯಲ್ಲಿರುವ ಉನ್ನತ ಅಧಿಕಾರಿಗಳು, ಸೇನಾ ಮುಖ್ಯಸ್ಥರನ್ನು ಒಳಗೊಂಡ ಎಸ್‌ಪಿಜಿಯಿಂದ ಬಂದರೆ ಅಂತಹ ಆರೋಗ್ಯಕರ ವಾತಾವರಣ ಸಾಧ್ಯವೇ? ಇದನ್ನು ಇನ್ನೊಂದು ರೀತಿಯಲ್ಲಿ ಹೀಗೆ ಯೋಚಿಸಿ: ಪ್ರಧಾನಿಯವರ ಮನಸ್ಸಿನಲ್ಲಿ ಏನಿದೆ ಎಂಬುದು ಮೊದಲೇ ಗೊತ್ತಿರುವುದರಿಂದ ಇನ್ನು ಚರ್ಚೆಯಾದರೂ ಎಲ್ಲಿ ನಡೆಯುತ್ತದೆ? ಇತರ ನಾಲ್ವರು ದೊಡ್ಡಣ್ಣಂದಿರು (ಬಿಗ್- 4) ಗೃಹ, ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರ ಸಚಿವರು) ಕೇವಲ ರಬ್ಬರ್ ಸ್ಟ್ಯಾಂಪ್ ಆಗುವುದಿಲ್ಲವೇ?

3) ಇದು ಸದ್ಯದಲ್ಲೇ ಆಗುವಂಥದ್ದಲ್ಲ. ಹೀಗಾಗಿ, ಇದು ಈ ಸಂದರ್ಭದಲ್ಲಿ ಅಷ್ಟು ಮುಖ್ಯವಲ್ಲ. ಆದರೆ, ಇದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಿಗೆ ಸೇರಿದ ಸಂಸ್ಥೆಯ ಕುರಿತಾದ ಯಾವುದೇ ಬಗೆಯ ಚರ್ಚೆಯನ್ನು ದಮನಿಸುತ್ತದೆ.

ಹೀಗೆ ಚರ್ಚೆ ಮುಂದುವರಿಸುತ್ತಾ ಹೋಗಬಹುದು. ಪ್ರಬಲ ಪ್ರಧಾನ ಮಂತ್ರಿಯ ನೇತೃತ್ವದಲ್ಲಿ, ನಿರ್ಣಯಗಳು ಕೆಳ ಹಂತದಿಂದ ರೂಪು ಪಡೆದು ಮೇಲ್ಮುಖವಾಗಿ ಚಲಿಸುವ ಬದಲು ಮೇಲಿನಿಂದ ಕೆಳಕ್ಕೆ ಚಲಿಸುತ್ತವೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಹೀಗಾಗಿದ್ದನ್ನು ನಾವೆಲ್ಲಾ ನೋಡಿದ್ದೇವೆ. ಆದರೆ, ಪ್ರಧಾನ ಮಂತ್ರಿಯಲ್ಲೇ ಎಲ್ಲಾ ಅಧಿಕಾರ ಕೇಂದ್ರೀಕೃತಗೊಳ್ಳುವುದು, ಸಾಂಪ್ರದಾಯಿಕ ಸಂರಚನೆಯನ್ನು ಮೂಲೆಗುಂಪು ಮಾಡುವುದು, ನಿಯಂತ್ರಣ ಮತ್ತು ಸಮತೋಲನಕ್ಕಾಗಿ ಇರುವ ಹಂತಗಳನ್ನು ನಾಶಗೊಳಿಸುವುದು ದಾರ್ಷ್ಟ್ಯ ಎನ್ನಿಸಿಕೊಳ್ಳುತ್ತದೆ.

ರಫೇಲ್ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಏನು ಕೇಳಿದೆ ಎಂಬುದರ ಬಗ್ಗೆ ಒಂದು ಕ್ಷಣ ಯೋಚಿಸಿ. ನಿಗದಿತ ವಿಧಿವತ್ತುಗಳನ್ನು ಅನುಸರಿಸಲಾಗಿದೆಯೇ ಅಥವಾ ಸದುದ್ದೇಶವೇ ಇದ್ದರೂ ಪ್ರಧಾನಿಯೇ ಈ ನಿರ್ಧಾರ ಕೈಗೊಂಡು ಘೋಷಿಸಿದ ನಂತರ ಔಪಚಾರಿಕ ವಿಧಿಗಳನ್ನು ಪೂರೈಸುವ ಸಲುವಾಗಿ ಕೆಳಹಂತಕ್ಕೆ ಕಳುಹಿಸಲಾಗಿದೆಯೇ ಎಂದು ಅದು ಕೇಳಿದೆ. ಇದು ಯುಕ್ತ ನಡಾವಳಿಗೆ ಸಂಬಂಧಪಟ್ಟ ವಿಷಯ. ಓಬೀರಾಯನ ಕಾಲದ, ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಗೊಳ್ಳುತ್ತಿರುವ ಅಧಿಕಾರಶಾಹಿ ಸ್ವರೂಪವು ಉಸಿರುಗಟ್ಟಿಸುವಂತಿದ್ದು, ಬದಲಾವಣೆ ಅಗತ್ಯವೆಂಬುದು ನಿಜವೇನೋ ಹೌದು. ಹೀಗೆಂದ ಮಾತ್ರಕ್ಕೆ, ಬಹು ಪದರಗಳ ಸಾಂವಿಧಾನಿಕ ವ್ಯವಸ್ಥೆಯು ಮೇಲಿನಿಂದ ಕೆಳಮುಖವಾಗಿ ಚಲಿಸುವ ಕೈಗೊಂಬೆಯಾಗಬೇಕೆಂದು ಅರ್ಥವಲ್ಲ.

ಅಧಿಕಾರಶಾಹಿ ವ್ಯವಸ್ಥೆಯಲ್ಲಿರುವ ‘ಜಾತಿ’ ಶ್ರೇಣೀಕರಣದ (ಇದು ನನ್ನ ಮಾತಲ್ಲ. ಐಪಿಎಸ್ ಅಸೋಸಿಯೇಷನ್ ಸರ್ಕಾರಕ್ಕೆ ಸಲ್ಲಿಸಿರುವ ತನ್ನ ಒಂದು ಮನವಿಯಲ್ಲೇ ಹೀಗೆ ಹೇಳಿದೆ) ಸವಾಲನ್ನು ಪರಿಹರಿಸಿ ಪ್ರತಿಭೆಯ ಆಧಾರದ ಮೇಲೆ ಪುನರ್‌ರಚಿಸುವ ಅಗತ್ಯವಿದೆ. ಇದು ಕೇವಲ ಐಎಎಸ್‌ಗೆ ಸಂಬಂಧಿಸಿದ್ದಾಗಿರದೆ ಯಾವುದೇ ಬಗೆಯ ಸೇವಾ ದಕ್ಷತೆಯ ಸುಧಾರಣೆಗೆ ಸಂಬಂಧಪಟ್ಟಿದ್ದಾಗಿದೆ. ಮತ್ತೊಂದು ಸಂಗತಿಯೆಂದರೆ, ಮೋದಿ ನೇತೃತ್ವದ ಸರ್ಕಾರಕ್ಕೆ ಯಾವುದೇ ಐಪಿಎಸ್ ಅಧಿಕಾರಿಯನ್ನಾಗಲೀ ಸೇವೆಯಿಂದ ನಿವೃತ್ತಿಗೊಂಡ ಬಳಿಕ ಬಿಡುಗಡೆಗೊಳಿಸಲು ಇಷ್ಟವಿಲ್ಲ ಎನ್ನಿಸುತ್ತದೆ. ಐಎಎಸ್ ಮತ್ತು ಐಎಫ್ಎಸ್ ಅಧಿಕಾರಿಗಳು ನಿವೃತ್ತರಾಗಿ ಮನೆಗೆ ಅಥವಾ ಕಾರ್ಪೊರೇಟ್ ಆಡಳಿತ ಮಂಡಳಿ ಸೇರುತ್ತಿದ್ದರೆ, ಬಹುತೇಕ ಐಪಿಎಸ್ ಅಧಿಕಾರಿಗಳು ಮಾತ್ರ ನಿವೃತ್ತಿಗೊಂಡ ನಂತರ ಸರ್ಕಾರದಲ್ಲಿ ಮರುನೇಮಕಗೊಳ್ಳುತ್ತಿದ್ದಾರೆ.

ಅಂತಹ ಪಟ್ಟಿಯೊಂದನ್ನು ಉದಾಹರಣೆಗಾಗಿ ಇಲ್ಲಿ ನೋಡೋಣ: ‘ರಾ’ದ ಮಾಜಿ ಮುಖ್ಯಸ್ಥ ರಾಜಿಂದರ್ ಖನ್ನಾ ಈಗ ಉಪ ರಾಷ್ಟ್ರೀಯ ಸಲಹೆಗಾರರು. ಇದಕ್ಕೆ ಮುನ್ನ, ಎನ್‌ಡಿಎ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಲೋಕ್ ಜೋಷಿ ಅವರನ್ನು ಎನ್‌ಟಿಆರ್‌ಒ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. 65 ವರ್ಷವಾದ ಮೇಲೆ ಅವರು ಈಗ ನಿವೃತ್ತಿಗೊಂಡಿದ್ದಾರೆ. ಅವರ ಸ್ಥಾನಕ್ಕೆ ಇಂಟೆಲಿಜೆನ್ಸ್ ಬ್ಯೂರೊದ (ಐಬಿ) ಮಾಜಿ ವಿಶೇಷ ನಿರ್ದೇಶಕ ಸತೀಶ್ ಝಾ ಅವರನ್ನು ನೇಮಿಸಲಾಗಿದೆ.

ಇದಕ್ಕೆ ಮುನ್ನ ಅವರನ್ನು ನಿವೃತ್ತಿ ನಂತರ ಎನ್‌ಟಿಆರ್‌ಒ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. ಬೇಹುಗಾರಿಕಾ ದಳದ (ಐಬಿ) ಮಾಜಿ ಮುಖ್ಯಸ್ಥ ದಿನೇಶ್ವರ್ ಶರ್ಮಾ ಅವರನ್ನು ಜಮ್ಮು ಕಾಶ್ಮೀರದ ಸಂಧಾನಕಾರರನ್ನಾಗಿ ನೇಮಿಸಲಾಗಿದೆ. ಐಬಿ ಸೇವೆಯಲ್ಲಿದ್ದು ನಿವೃತ್ತರಾದ ಆರ್.ಎನ್. ರವಿ ಅವರು ನಾಗಾಲ್ಯಾಂಡ್‌ಗೆ ಸಂಧಾನಕಾರರಾಗಿ ನೇಮಕಗೊಂಡಿದ್ದಾರೆ; ಜೊತೆಗೆ, ಅವರು ಈಗ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರೂ ಆಗಿದ್ದಾರೆ. ‘ರಾ’ದ ನಿವೃತ್ತ ಅಧಿಕಾರಿ ಅಮಿತಾಭ್ (ಟೋನಿ) ಮಾಥುರ್ ಅವರು ಟಿಬೆಟನ್ ವಿದ್ಯಮಾನಗಳ ಸಲಹೆಗಾರರಾಗಿದ್ದಾರೆ. ‘ರಾ’ದಲ್ಲಿ ಎರಡನೇ ಉನ್ನತ ಅಧಿಕಾರಿಯಾಗಿ ನಿವೃತ್ತರಾದ ಎ.ಬಿ. ಮಾಥುರ್ ಅವರನ್ನು ಮೊದಲು
ಎನ್‌ಎಸ್‌ಸಿಎಸ್‌ಗೆ ನೇಮಿಸಿ ಇದೀಗ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಗೆ (ಎನ್‌ಎಸ್‌ಎಬಿ) ನೇಮಿಸಲಾಗಿದೆ. ಇವರ ಜೊತೆಗೆ, ಕರ್ನಲ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯಕ್ಕೆ, ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮಾಜಿ ಮುಖ್ಯಸ್ಥ ಶರದ್ ಕುಮಾರ್ ಅವರನ್ನು ವಿಚಕ್ಷಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ಈ ಮೇಲೆ ಹೆಸರಿಸಿದವರೆಲ್ಲರೂ ನಿವೃತ್ತ ಐಪಿಎಸ್ ಅಧಿಕಾರಿಗಳು.

ಇದೇ ವೇಳೆ, ಎನ್ಎಸ್‌ಸಿಎಸ್ ಬಜೆಟ್ ಏರಿಕೆಯಾಗುತ್ತಿದೆ. ಇದು 2016-17ರಲ್ಲಿ 81 ಕೋಟಿ ರೂಪಾಯಿ ಇದ್ದುದು 2018-19ರಲ್ಲಿ 333 ಕೋಟಿ ರೂಪಾಯಿಯಾಗಿದೆ. ಕೇಂದ್ರ ಲ್ಯುಟೆನ್ಸ್ ಪ್ರದೇಶದಲ್ಲಿ ಎನ್‌ಎಸ್‌ಸಿಎಸ್ ಕಚೇರಿ ಇರುವ ಸರ್ದಾರ್ ಪಟೇಲ್ ಭವನದಲ್ಲಿದ್ದ ಇತರ ಕಚೇರಿಗಳನ್ನು ಬೇರೆ ಕಡೆಗಳಿಗೆ ಸ್ಥಳಾಂತರಿಸಲಾಗಿದೆ. ಒಟ್ಟಾರೆ, ಹೊಸ ಸಾಮ್ರಾಜ್ಯವನ್ನೇ ಕಟ್ಟಲಾಗಿದೆ.

ಈ ನಡುವೆ, ಇದರ ಬಗ್ಗೆ ಕಳೆದ ವಾರ ನಾನು ಮಾಡಿದ ಟ್ವೀಟ್ ಒಂದಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರದ ಸಮರ್ಥನೆಕಾರರು ಹಾಗೂ ದೋಭಾಲ್ ಅವರ ಅಭಿಮಾನಿಗಳಿಂದ ಮಾತ್ರವಲ್ಲ ಐಪಿಎಸ್ ಅಸೋಸಿಯೇಷನ್‌ ನಿಂದಲೂ ರೋಷಾವೇಶದ ಪ್ರತಿಕ್ರಿಯೆಗಳು ಬಂದಿವೆ. ಪೊಲೀಸ್ ಕಾನ್‌ಸ್ಟೆಬಲ್‌ಗಳಾಗಿದ್ದವರು ಗೃಹ ಸಚಿವ (ಸುಶೀಲ್‌ಕುಮಾರ್ ಶಿಂಧೆ) ಮತ್ತು ಉಪ ರಾಷ್ಟ್ರಪತಿ (ಭೈರೋನ್ ಸಿಂಗ್ ಶೆಖಾವತ್) ಹುದ್ದೆಗಳಿಗೆ ಏರಿದ ಉದಾಹರಣೆಗಳಿರುವ ಈ ರಾಷ್ಟ್ರದಲ್ಲಿ, ಉನ್ನತ ಸ್ಥಾನದಲ್ಲಿದ್ದ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ಸರ್ವಪ್ರಬಲ ಭದ್ರತಾ ಪಡೆಯ ಮುಖ್ಯಸ್ಥರಾಗುವುದರಿಂದ ನನಗೇನೂ ತೊಂದರೆ ಇಲ್ಲ. ಅದೂ ಅಲ್ಲದೆ, ಅವರ ಬಗ್ಗೆ ಹೊಗಳಿಕೆಗಲ್ಲದೆ ವಾಸ್ತವದಿಂದ ಕೂಡಿದ ಮೆಚ್ಚುಗೆಯ ಅಭಿಪ್ರಾಯಗಳನ್ನು ಈ ಹಿಂದೆಯೇ ನಾನು ಪ್ರಕಟಿಸಿದ್ದೇನೆ ಕೂಡ. ಆದರೆ ಬಹು ಸ್ತರಗಳಿರುವ, 134 ಕೋಟಿ ಜನರಿರುವ ಪರಮಾಣು ಸಶಸ್ತ್ರ ರಾಷ್ಟ್ರದಲ್ಲಿ ಏಕಮಾತ್ರ ವ್ಯಕ್ತಿಯು ‘ಸರ್ವಪ್ರಬಲ’ ಆಗುವುದು ಔಚಿತ್ಯಪೂರ್ಣವೇ ಎಂಬುದು ನನ್ನ ಪ್ರಕಾರ ಒಂದು ಒಳ್ಳೆಯ ಪ್ರಶ್ನೆಯೇ ಆಗಿದೆ.

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.