ADVERTISEMENT

ಇಷ್ಟಾಪೂರ್ತ ಎಂಬ ಸಮಾಜಯಜ್ಞ

ಎಸ್.ಸೂರ್ಯಪ್ರಕಾಶ ಪಂಡಿತ್
Published 31 ಆಗಸ್ಟ್ 2018, 19:30 IST
Last Updated 31 ಆಗಸ್ಟ್ 2018, 19:30 IST
   

ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ

ಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಕೆಯ್ ನಂಬಿದ–|

ರ್ಗೆರೆವಟ್ಟಾಗಿರು, ಶಿಷ್ಟರಂ ಪೊರೆ ಎನುತ್ತಿಂತೆಲ್ಲಮಂ ಪಿಂತೆ ತಾ

ADVERTISEMENT

ನೆರೆದಳ್ ಪಾಲೆರೆವೆಂದು ತೊಟ್ಟು ಕಿವಿಯೊಳ್ ಲಕ್ಷ್ಮೀಧರಾಮಾತ್ಯನಾ ||

ಈ ಪದ್ಯವನ್ನು ನಾವು ಕೇಳಿದ್ದೇವೆ; ಕರ್ನಾಟಕ ಸಂಸ್ಕೃತಿಯ ಹಿರಿಮೆ ಇದರಲ್ಲಿ ಪ್ರಕಟವಾಗಿದೆ ಎಂದೂ ಸಂಭ್ರಮಿಸುತ್ತೇವೆ. ಇದು ಶಾಸನವೊಂದರ ಪದ್ಯ; ಹಂಪೆಯಲ್ಲಿರುವುದು. ಇದರ ಕಾಲ ಸು. ಕ್ರಿ. ಶ. 1411. ಪ್ರೌಢಪ್ರತಾಪದೇವರಾಯನ ಮಂತ್ರಿಯಾಗಿದ್ದವನು ಲಕ್ಷ್ಮೀಧರಾಮಾತ್ಯ; ಅವನು ಮಹಾಗಣಪತಿಯನ್ನು ಪ್ರತಿಷ್ಠಾಪಿಸಿ, ಅದಕ್ಕೆ ದತ್ತಿಗಳನ್ನು ಬಿಟ್ಟ ಸಂದರ್ಭದಲ್ಲಿ ರಚನೆಯಾದ ಶಾಸನವಿದು. ಇದರ ಅರ್ಥ ತುಂಬ ಉದಾತ್ತವಾಗಿದೆ:

ಲಕ್ಷ್ಮೀಧರ ಇನ್ನೂ ಹಾಲುಗೂಸು; ಆಗ ಹಾಲನ್ನು ಕುಡಿಸುತ್ತ ಅವನ ತಾಯಿ ಅವನಿಗೆ ಕಿವಿಯಲ್ಲಿ ಹೇಳಿದ ಮಾತುಗಳಿವು: ‘ಕೆರೆಯನ್ನು ಕಟ್ಟಿಸು, ಬಾವಿಯನ್ನು ತೋಡಿಸು, ದೇವಾಲಯಗಳನ್ನು ನಿರ್ಮಿಸು, ಬಂಧನಕ್ಕೆ ಸಿಕ್ಕ ಅನಾಥರನ್ನು ಬಿಡಿಸು, ಸ್ನೇಹಿತರಿಗೆ ಸಹಾಯಕನಾಗು, ನಂಬಿದವರಿಗೆ ಆಶ್ರಯದಾತನಾಗು, ಸತ್ಪುಷರನ್ನು ರಕ್ಷಿಸು.’ ಲಕ್ಷ್ಮೀಧರನ ತಾಯಿ ಹಾಡುತ್ತಿದ್ದ ಜೋಗುಳವಿದು! ಲಕ್ಷ್ಮೀಧರ ಆ ಜೋಗುಳಕ್ಕೆ ಎಳವೆಯಲ್ಲಿ ನಿದ್ರೆ ಮಾಡಿರಬಹುದು; ಆದರೆ ಅವನು ಪ್ರೌಢನಾದಾಗ ಜಗತ್ತನ್ನು ಕಣ್ಣುಬಿಟ್ಟು ನೋಡಿದ್ದಾನೆ; ಜಗದ ಅಳುವನ್ನು ನಿಲ್ಲಿಸಬಲ್ಲ ಜೀವಂತ ಸ್ಮಾರಕಗಳನ್ನು ನಿಲ್ಲಿಸಿದ್ದಾನೆ ಎನ್ನುವುದಕ್ಕೆ ಮೇಲಣ ಪದ್ಯ ಸಾಕ್ಷ್ಯವಾಗಿದೆ.

ಹಾಲುಣಿಸುವಾಗ, ಎಂದರೆ ಆಹಾರವನ್ನು ನೀಡುತ್ತ, ಲೋಕೋತ್ತರ ಗುಣಗಳನ್ನು ಬೋಧಿಸಿರುವುದು ಮನನೀಯವಾಗಿದೆ. ಮಾತು ಕೂಡ ನಮಗೆ ಬೇಕಾದ ಆಹಾರವೇ. ಹಾಲು–ಅನ್ನಗಳು ನಮ್ಮ ಭೌತಿಕ ಶರೀರದ ಬೆಳವಣಿಗೆಗೆ ಬೇಕು; ಮಾತು ನಮ್ಮ ಆಂತರಿಕ ಬೆಳವಣಿಗೆಗೆ ಆಹಾರವಾಗಿ ಬೇಕು. ಕುಮಾರವ್ಯಾಸನ ಮಾತೊಂದು ಇಲ್ಲಿ ನೆನಪಾಗುತ್ತದೆ. ‘ನುಡಿಗಳ ಕಾಳಕೂಟವ ಬಡಿಸುವೆನು ಕಿವಿಯಾರೆ ಸವಿಯೆಂದ’. ನುಡಿಗಳನ್ನು ತಿನ್ನುವ ಆಹಾರವಾಗಿ ಕಾಣಿಸಿದ್ದಾನೆ ಅವನು; ಆ ಸಂದರ್ಭದಲ್ಲಿ ಅವನು ವಿಷಾಹಾರ ಎನ್ನುತ್ತಿದ್ದಾನೆಯೆನ್ನಿ! ಆದರೆ ನಾವಿಲ್ಲಿ ಗಮನಿಸಬೇಕಾದ್ದು ಮಾತು ಕೂಡ ಭಕ್ಷಾರ್ಹವಾದುದು ಎನ್ನುವುದನ್ನಷ್ಟೆ. ಈ ಊಟವನ್ನು ನಾವು ತಿನ್ನುವ ಬಗೆ ಹೇಗೆ? ಕಿವಿಗಳ ಮೂಲಕ ತಾನೆ? ನಮ್ಮ ಬೆಳವಣಿಗೆಗೆ ಆವಶ್ಯಕವಾಗಿರುವ ಆಹಾರಪದಾರ್ಥಗಳನ್ನುಕುಮಾರವ್ಯಾಸನು ಲೋಕರೂಢಿಯಲ್ಲಿರುವುದಕ್ಕಿಂತಲೂ ಭಿನ್ನವಾಗಿ ಹಿಗ್ಗಿಸಿ ಹೇಳಿರುವುದು ಅರ್ಥಗರ್ಭಿತವಾಗಿದೆ. ಬಾಯಿಯ ಮೂಲಕ ಅನ್ನವನ್ನು ಸೇವಿಸುತ್ತೇವೆ; ಕಿವಿಯ ಮೂಲಕ ಮಾತನ್ನು ಸೇವಿಸುತ್ತೇವೆ. ಎರಡೂ ಕೂಡ ಆಹಾರವೇ ಹೌದು. ‘ಕರ್ಣಾಮೃತ’ ಎನ್ನುವ ಪದದ ಬಳಕೆ ನಮಗೆ ಗೊತ್ತಿದೆ; ಕುಮಾರವ್ಯಾಸನೂ ಅದನ್ನು ಪ್ರಯೋಗಿಸಿದ್ದಾನೆ. ಕಿವಿಯ ಮೂಲಕ ಸೇವಿಸುವ ಅಮೃತ – ಎಂದು ಇದರ ಅರ್ಥ. ಅಮೃತವನ್ನು ಸೇವಿಸುವುದರಿಂದ ಅಮರತ್ವ ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯಿದೆ.

ದೇವತೆಗಳು ಅದನ್ನು ಸೇವಿಸಿದ್ದರಿಂದ ಅವರಿಗೆ ‘ಅಮರರು’ ಎಂಬ ಅಭಿಧಾನ ದಕ್ಕಿದೆ. ಅದು ಸರಿ, ಕಿವಿಯ ಮೂಲಕ ಸೇವಿಸುವಂಥ ಅಮೃತ ಎಂಬುದರ ಸ್ವಾರಸ್ಯವೇನು? ಯಾವ ಮಾತುಗಳನ್ನು ಕೇಳುವ ಮೂಲಕ ನಾವು ಎಂದೆಂದಿಗೂ ಉಳಿಯುತ್ತೇವೆಯೋ ಆ ಮಾತುಗಳು ‘ಕರ್ಣಾಮೃತ’ ಎಂದೆನಿಸುತ್ತವೆ. ಶ್ರೀಕೃಷ್ಣ ನಮ್ಮನ್ನು ಎಂದೆಂದಿಗೂ ಕಾಪಾಡಬಲ್ಲ. ಆದುದರಿಂದಲೇ ಅವನ ಹೆಸರು ಕೂಡ ನಮಗೆ ಅಮೃತಪ್ರಾಯವೇ. ಹೀಗಾಗಿಯೇ ಅವನಿಗೆ ಸೇರಿದ ಮಾತುಗಳೆಲ್ಲವೂ ‘ಶ್ರೀಕೃಷ್ಣಕರ್ಣಾಮೃತ.’ ಅಂತೆಯೇ, ಲಕ್ಷ್ಮೀಧರನ ತಾಯಿ ಹೇಳಿದ ಮಾತುಗಳು ಅವನನ್ನು ಹೇಗೆ ಶಾಶ್ವತಗೊಳಿಸಿದವು ಎನ್ನುವುದನ್ನು ಮೇಲಣ ಪದ್ಯ ಹೇಳುವಂತಿದೆ. ನಮ್ಮ ಲೋಕದ ಪ್ರತ್ಯಕ್ಷ ಅಮೃತವೆನಿಸಿರುವ ಹಾಲನ್ನು ಉಣಿಸುತ್ತಲೇ ಅವಳು ಕಿವಿಗಳ ಮೂಲಕ ಮತ್ತೊಂದು ಬಗೆಯ ಅಮೃತದ ಗುಟ್ಟನ್ನು ಮಗನಿಗೆ ಹೇಳಿದಳು. ಒಂದು ಅವನ ಭೌತಿಕ ಕಾಯವನ್ನು ಕಾಪಾಡಿದರೆ, ಮತ್ತೊಂದು ಅವನ ಯಶಃಕಾಯವನ್ನು ಎತ್ತಿನಿಲ್ಲಿಸುವಂಥದ್ದು. ಇಷ್ಟೆಲ್ಲ ಇಲ್ಲಿ ನೆನಪಾದದ್ದು ವಸಿಷ್ಠರ ಒಂದು ಮಾತಿನಿಂದ. ಅದೇ ‘ಇಷ್ಟಾಪೂರ್ತ.’

‘ಪ್ರತಿಜ್ಞೆಯನ್ನು ಮಾಡಿ, ಅದರ ಪ್ರಕಾರ ನಡೆಯದಿದ್ದರೆ ಆಗ ಇಷ್ಟಾಪೂರ್ತದ ಫಲವೆಲ್ಲವೂ ನಷ್ಟವಾಗುತ್ತದೆ’ ಎಂದು ದಶರಥನನ್ನು ವಸಿಷ್ಠಮಹರ್ಷಿ ಎಚ್ಚರಿಸಿದನಷ್ಟೆ.

ಇಷ್ಟಾಪೂರ್ತ ಎಂದರೇನು?

‘ಇಷ್ಟಾಪೂರ್ತ’ – ಇದು ತುಂಬ ಪ್ರಾಚೀನ ಪದ; ಋಗ್ವೇದದಲ್ಲಿಯೇ ಇದರ ಉಲ್ಲೇಖವಿದೆ. ಎರಡು ಪದಗಳನ್ನು ಒಂದಾಗಿ ಹೇಳಲಾಗಿದೆ. ಒಳಿತಿಗಾಗಿ ನಡೆಸುವ ಕಾರ್ಯಗಳನ್ನೇ ‘ಇಷ್ಟಾಪೂರ್ತ’ ಎಂದು ಒಕ್ಕಣಿಸಲಾಗಿದೆ. ಕೃತಜ್ಞತೆಯನ್ನು ಸಲ್ಲಿಸಲು ನಡೆಸುವ ಧಾರ್ಮಿಕ ಕಾರ್ಯ ಎಂದೂ ಹೇಳಲಾದೀತು. ನಾವು ಎರಡು ನೆಲೆಗಳಲ್ಲಿ ಉಪಕೃತರು, ಎಂದರೆ ಸಹಾಯವನ್ನು ಪಡೆದವರು; ಒಂದು ಪರೋಕ್ಷಮೂಲದಿಂದ, ಮತ್ತೊಂದು ಪ್ರತ್ಯಕ್ಷರೂಪದಿಂದ. ಎಲ್ಲ ಪರೋಕ್ಷಮೂಲಗಳನ್ನೂ ‘ದೈವ’ ಎಂಬ ಸಂಕೇತದಲ್ಲಿ ನೆಲೆಗೊಳಿಸಲಾದೀತು; ಪ್ರತ್ಯಕ್ಷ
ಮೂಲವೇ ‘ಸಮಾಜ’. ದೈವಕ್ಕೆ ನಾವು ಸಲ್ಲಿಸುವ ಕೃತಜ್ಞತೆಯೇ ‘ಯಜ್ಞ’ ಎಂದು ಕರೆಯಿಸಿಕೊಳ್ಳುತ್ತದೆ; ಹೋಮ, ಹವನ, ಯಾಗ – ಇವೆಲ್ಲವೂ ಅದರಲ್ಲಿ ಸೇರುತ್ತವೆ. ಈ ಎಲ್ಲ ಕಲಾಪಗಳನ್ನು ‘ಇಷ್ಟ’ ಎಂದು ಒಕ್ಕಣಿಸಲಾಗುತ್ತದೆ. ಇದು ಅಂತರಂಗಯಜ್ಞ.

ಸಮಾಜಾಭಿಮುಖವಾಗಿ ನಡೆಸುವ ಬಾಹ್ಯಯಜ್ಞಗಳು ‘ಪೂರ್ತ’ ಎಂದೆನಿಸಿಕೊಳ್ಳುತ್ತವೆ. ಕೆರೆ–ಬಾವಿ–ಕೊಳಗಳನ್ನು ನಿರ್ಮಿಸುವುದು, ದೇವಾಲಯಗಳನ್ನು ಕಟ್ಟಿಸುವುದು, ಅನ್ನದಾನವನ್ನು ಮಾಡುವುದು – ಇಂಥವು ‘ಪೂರ್ತ’. ಇದರ ಬಗ್ಗೆ ಹಲವು ಪುರಾಣಗಳಲ್ಲೂ ಧರ್ಮಶಾಸ್ತ್ರಗಳಲ್ಲೂ ಉಲ್ಲೇಖಗಳಿವೆ:

ಅಗ್ನಿಹೋತ್ರಂ ತಪಃ ಸತ್ಯಂ ವೇದಾನಾಂ ಚೈವ ಸಾಧನಂ |

ಆತಿಥ್ಯಂ ವೈಶ್ವದೇವಂ ಚ ಇಷ್ಟಮಿತ್ಯಭಿಧೀಯತೇ ||

ವಾಪೀಕೂಪತಡಾಗಾದಿ ದೇವತಾಯತನಾನಿ ಚ |

ಅನ್ನಪ್ರದಾನಮಾರಾಮಃ ಪೂರ್ತಮಿತ್ಯಭಿಧೀಯತೇ ||

‘ಅಗ್ನಿಹೋತ್ರ, ತಪಸ್ಸು, ಸತ್ಯ, ವೇದಾಭ್ಯಾಸ, ಜ್ಞಾನಾರ್ಜನೆ, ಅತಿಥಿಸೇವೆ; ಕೆರೆ–ಬಾವಿ–ದೇವಾಲಯ–ಸತ್ರಗಳ ನಿರ್ಮಾಣ; ಅನ್ನದಾನ – ಇವೆಲ್ಲವೂ ಪೂರ್ತ ಎಂದೆನಿಸಿಕೊಳ್ಳುತ್ತವೆ’ ಎನ್ನುವುದು ಮೇಲಣ ಪುರಾಣಶ್ಲೋಕಗಳ ತಾತ್ಪರ್ಯ.

ಪೂರ್ತ ಎಂಬ ಕಲ್ಪನೆ ಮತ್ತಷ್ಟು ವೈಶಾಲ್ಯವನ್ನೂ ಪಡೆಯಿತು. ಸಂತಾನದ ಅಪೇಕ್ಷೆ ಎಲ್ಲ ಜೀವಿಗಳಲ್ಲೂ ಸಹಜವಾಗಿರುವಂಥದ್ದೇ. ಆದರೆ ಮಾನವನು ಅದರಲ್ಲಿ ಅರ್ಥವಂತಿಕೆಯನ್ನೂ ಕಂಡುಕೊಂಡ; ತನ್ನನ್ನು ತಾನು ಉಳಿಸಿಕೊಳ್ಳಬಲ್ಲ, ತನ್ನತನವನ್ನು ಮುಂದುವರೆಸಬಲ್ಲ ಶಾಶ್ವತ ಪ್ರತಿನಿಧಿಯನ್ನಾಗಿಯೂ ‘ಸಂತಾನ’ವನ್ನು ಗ್ರಹಿಸಿದ. ಈ ಸಂತಾನದ ಕಲ್ಪನೆ ಕ್ರಮೇಣ ಉದಾತ್ತತತ್ತ್ವವೂ ಆಯಿತು. ನೇರವಾಗಿ ‘ತನ್ನ ರಕ್ತ–ಮಾಂಸಗಳನ್ನು ಹಂಚಿಕೊಂಡು ಜನಿಸಿದ ಮಕ್ಕಳು ಮಾತ್ರವೇ ‘ಸಂತಾನ’ ಎನಿಸಿಕೊಳ್ಳದೆ, ತಾನು ಮಾಡುವ ಸತ್ಕಾರ್ಯಗಳು ಕೂಡ ತನ್ನ ಮಕ್ಕಳಿಗೆ ಸಮ’ – ಎನ್ನುವಂಥ ಧರ್ಮಸೂತ್ರವೂ ಈ ಬಂಧವನ್ನು ಮತ್ತಷ್ಟು ಗಟ್ಟಿಮಾಡಿತು. ಪರಂಪರೆ ಇಂಥ ಕಾರ್ಯಗಳನ್ನು ಗುರುತಿಸಿ ಅವನ್ನು ‘ಸಪ್ತಸಂತಾನ’ ಎಂಬುದಾಗಿ ಒಕ್ಕಣಿಸಿದೆ:

ಕೂಪಸ್ತಡಾಗಮುದ್ಯಾನಂ ಮಂಡಪಂ ಚ ಪ್ರಪಾ ತಥಾ |

ಸದ್ಧರ್ಮಕರಣಂ ಕಾವ್ಯಂ ಸಂತಾನಂ ಸಪ್ತಧೋಚ್ಯತೇ ||

‘ಬಾವಿ, ಕೆರೆ, ತೋಟ, ಮಂಟಪ, ಅರವಟ್ಟಿಗೆ, ಧಾರ್ಮಿಕಕಾರ್ಯ ಮತ್ತು ಕಾವ್ಯ–ಶಾಸ್ತ್ರಗಳು – ಇವು ಏಳು ಬಗೆಯ ಮಕ್ಕಳೇ ಹೌದು.’

‘ಸಪ್ತಸಂತಾನ’ದ ಪಟ್ಟಿಯಲ್ಲಿ ಒಂದೆರಡು ವ್ಯತ್ಯಾಸಗಳು ಕಂಡುಬಂದರೂ ಅವುಗಳ ಮೂಲ ಉದ್ದೇಶದಲ್ಲಿ ಮಾತ್ರ ಏಕತೆಯಿದೆ:

ತಡಾಗಂ ಧನನಿಕ್ಷೇಪೋsಗ್ರಹಾರೋ ದೇವಮಂದಿರಃ |

ವನಂ ಪ್ರಬಂಧಃ ಸತ್ರಂ ಚ ಸಂತಾನಂ ಸಪ್ತಧೋಚ್ಯತೇ ||

‘ಕೆರೆಯನ್ನು ಕಟ್ಟಿಸುವುದು, ಧನಸಹಾಯವನ್ನು ಮಾಡುವುದು, ಅಗ್ರಹಾರದ ನಿರ್ಮಾಣ, ದೇವಾಲಯನಿರ್ಮಾಣ, ತೋಟಗಳನ್ನು ಮಾಡುವುದು, ಗ್ರಂಥಗಳನ್ನು ರಚಿಸುವುದು ಮತ್ತು ಧರ್ಮಸತ್ರಗಳನ್ನು ನಡೆಸುವುದು – ಇವಿಷ್ಟು ಏಳು ಬಗೆಯ ಸಂತಾನವೇ ಹೌದು.’

ಸಪ್ತಸಂತಾನಗಳು ಸಮಾಜದ ಒಳಿತಿಗಾಗಿ, ಹತ್ತುಹಲವರ ಉಪಯೋಗಕ್ಕಾಗಿ ಉದ್ಯುಕ್ತವಾದ ಸಾಮಾಜಿಕ ಮೌಲ್ಯಗಳಿಂದ ಪುಷ್ಟಗೊಂಡ ಕಾರ್ಯಗಳೇ ಹೌದು ಎನ್ನುವುದು ಮೇಲಣ ಮಾತುಗಳಿಂದ ಎದ್ದುಕಾಣುವ ವಿವರ. ನಮ್ಮ ನಡುವೆಯೇ ಇರುವ ಸಾಲುಮರದ ತಿಮ್ಮಕ್ಕ ಇಲ್ಲಿ ನೆನಪಾಗುತ್ತಾರೆ. ಮಕ್ಕಳಿಲ್ಲದ ತಿಮ್ಮಕ್ಕ ದಂಪತಿ ರಸ್ತೆಯುದ್ದಕ್ಕೂ ಮರಗಳನ್ನು ಬೆಳೆಸಿದರಷ್ಟೆ. ಆ ಮರಗಳಲ್ಲಿ ಅವರು ತಮ್ಮ ಮಕ್ಕಳನ್ನು ಕಂಡರು. ಅವರೇನೂ ಶಾಸ್ತ್ರಗಳನ್ನು ಓದಿ ‘ಪೂರ್ತ’ದಲ್ಲಿ ತೊಡಗಿಕೊಂಡಂತಿಲ್ಲ. ಸಂತಾನದ ಪ್ರತಿಫಲವನ್ನು ಮರಗಳಲ್ಲಿಯೂ ಕೆರೆಗಳಲ್ಲಿಯೂ ಕಾಣುವಂಥದ್ದು ಸಂಸ್ಕೃತಿಯ ಸಹಜಾಭಿವ್ಯಕ್ತಿ ಎನಿಸುತ್ತದೆ.

‘ಇಷ್ಟಾಪೂರ್ತ’ವನ್ನೇ ಪರಂಪರೆಯಲ್ಲಿ ‘ಯಜ್ಞ’ ಎಂದೂ, ‘ದಾನ’ ಎಂದೂ ಆದರಿಸಿರುವುದು. ಜ್ಞಾನಯಜ್ಞ, ಅನ್ನದಾನ, ಗ್ರಂಥದಾನ, ಅಕ್ಷರಯಜ್ಞ – ಹೀಗೆ ಹಲವು ಆಯಾಮಗಳಲ್ಲಿ ಈ ತತ್ತ್ವ ಒಟ್ಟು ಭಾರತೀಯತೆಯನ್ನು ಸುತ್ತುವರೆದು, ಅದರ ಅಸ್ಮಿತೆಯನ್ನು ಕಾಪಾಡುತ್ತಿದೆ ಎನಿಸುತ್ತದೆ. (ಹೆಚ್ಚಿನ ಮಾಹಿತಿಗೆ: ‘ಸಾಮಾನ್ಯಧರ್ಮ’; ಲೇಖಕರು: ಶತಾವಧಾನಿ ಆರ್. ಗಣೇಶ್)

* * *

ದಶರಥ ಕೂಡ ಇಷ್ಟಾಪೂರ್ತದ ಹಲವು ಕಾರ್ಯಗಳನ್ನು ನಡೆಸಿದ್ದವನೇ. ವಿಶ್ವಾಮಿತ್ರಮಹರ್ಷಿಗೆ ಅವನು ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಆ ಎಲ್ಲ ಧಾರ್ಮಿಕಕಾರ್ಯಗಳ ಫಲವೂ ನಿಷ್ಫಲವಾಗುತ್ತದೆ ಎಂದು ಅವನನ್ನು ವಸಿಷ್ಠ ಎಚ್ಚರಿಸಿದ. ಔರಸಸಂತಾನದ ಮೇಲಿನ ಪ್ರೀತಿಯ ಕಾರಣದಿಂದಾಗಿ ಅಯೋನಿಜಸಂತಾನದ ಕೀರ್ತಿಪುಣ್ಯವನ್ನು ಕಡೆಗಣಿಸಬಾರದು ಎಂಬ ಅವನ ಮಾತು ಹೃದಯವನ್ನು ಹೊಕ್ಕಿತು. ಒಡಲ ಅಂತರಂಗ ಮತ್ತು ಬಹಿರಂಗದ ಒಳಿತನ್ನು ಕಾಪಾಡಬಲ್ಲ ಇಷ್ಟಾಪೂರ್ತದ ಫಲವನ್ನು ಕಳೆದುಕೊಳ್ಳಲು ದಶರಥ ಸಿದ್ಧನಿರಲಿಲ್ಲ. ರಾಮನನ್ನು ವಿಶ್ವಾಮಿತ್ರನೊಂದಿಗೆ ಕಳುಹಿಸಲು ಅವನು ಒಪ್ಪಿಕೊಂಡ.

ದಶರಥನು ರಾಮನನ್ನು ಬರಮಾಡಿಕೊಂಡ. ಮಗನನ್ನು ಪ್ರೇಮದಿಂದ ಹತ್ತಿರ ಕರೆದು ಅವನ ತಲೆಯನ್ನು ಆಘ್ರಾಣಿಸುತ್ತ, ವಿಶ್ವಾಮಿತ್ರನಿಗೆ ಅವನನ್ನು ಒಪ್ಪಿಸಿದ. ರಾಮನ ಜೊತೆ ಲಕ್ಷ್ಮಣನೂ ಹೊರಟುನಿಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.