ADVERTISEMENT

ಜಿ.ವಿ.ಜೋಶಿ ಲೇಖನ | ಸುಧಾರಣೆಯ ‘ಸುಳಿ’ಯಲ್ಲಿ ಗ್ರಾಮೀಣ ಬ್ಯಾಂಕ್

ಜಿ.ವಿ.ಜೋಶಿ
Published 5 ಆಗಸ್ಟ್ 2020, 19:30 IST
Last Updated 5 ಆಗಸ್ಟ್ 2020, 19:30 IST
ಗ್ರಾಮೀಣ ಬ್ಯಾಂಕ್‌
ಗ್ರಾಮೀಣ ಬ್ಯಾಂಕ್‌   
""

ಬಾಂಗ್ಲಾ ದೇಶದ ಗ್ರಾಮೀಣ ಬ್ಯಾಂಕ್‌ಗಳ ಸಂಸ್ಥಾಪಕ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನುಸ್ ಅವರು ರಾಹುಲ್‌ ಗಾಂಧಿಯವರೊಡನೆ ಇತ್ತೀಚೆಗೆ ನಡೆಸಿದ ಸಮಾಲೋಚನೆಯಲ್ಲಿ, ಭಾರತದ ಗ್ರಾಮೀಣ ಹಣಕಾಸು ವ್ಯವಸ್ಥೆಯಲ್ಲಿರುವ ಲೋಪದೋಷ
ಗಳತ್ತ ಬೊಟ್ಟು ಮಾಡಿದರು. ಗ್ರಾಮೀಣ ಬ್ಯಾಂಕ್‌ಗಳು ಬಡವರಿಗೆ ಹಣಕಾಸು ನೆರವು ನೀಡಿದರೆ ಅಭಿವೃದ್ಧಿ ಖಚಿತ ಎನ್ನುವ ಅವರ ಹೇಳಿಕೆಯನ್ನು ಮನ್ನಿಸಲೇಬೇಕಾದ ಅಗತ್ಯವಿದೆ.

ಭಾರತದಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (ಆರ್.ಆರ್.ಬಿ), ತುರ್ತುಪರಿಸ್ಥಿತಿ ವೇಳೆ ದುರ್ಬಲರಿಗಾಗಿ ಕಣ್ಣೀರು ಸುರಿಸುತ್ತಿದ್ದ ನಾಯಕರು ಹೊರಡಿಸಿದ ಸುಗ್ರೀವಾಜ್ಞೆಯಿಂದ ದಿಢೀರ್ ಆಗಿ ಹುಟ್ಟಿದವು. 1976ರ ‍ಫೆ. 9ರಂದು ಜಾರಿಯಾದ ರಾಷ್ಟ್ರ ಮಟ್ಟದ ಕಾನೂನಿನ ಆಧಾರದಲ್ಲಿ, ಮುಂದೆ ಅವುಗಳಿಗೆ ಶೀಘ್ರ ಬೆಳವಣಿಗೆಯ ಭಾಗ್ಯ ಪ್ರಾಪ್ತಿಯಾಯಿತು. 1991ರ ನಂತರ ಆರ್ಥಿಕ ಸುಧಾರಣೆಗಳು ಹಂತ ಹಂತವಾಗಿ ಜಾರಿಯಾದಂತೆ, ಬ್ಯಾಂಕುಗಳ ವಿಲೀನೀಕರಣದ ಗಾಳಿ ಬೀಸತೊಡಗಿತು. ಅದರ ಪರಿಣಾಮವಾಗಿ, 1990ರ ಮೇ ಅಂತ್ಯಕ್ಕೆ 196ರಷ್ಟಿದ್ದ ಆರ್.ಆರ್.ಬಿಗಳ ಸಂಖ್ಯೆ 2020ರ ಏಪ್ರಿಲ್ ಹೊತ್ತಿಗೆ 43ಕ್ಕೆ ಕುಸಿದಿದೆ.

ಬ್ಯಾಂಕುಗಳ ಸುಧಾರಣೆಯ ಪ್ರಗತಿ ಪರಿಶೀಲನೆಗಾಗಿ ರಚಿಸಲಾಗಿದ್ದ ನರಸಿಂಹಂ ಸಮಿತಿಯ ಶಿಫಾರಸುಗಳನ್ನು ಈ ದೊಡ್ಡ ರಾಷ್ಟ್ರದಲ್ಲಿ ಹೇಗೆ ಬೇಕೋ ಹಾಗೆ ಬಳಸುತ್ತಾ ಬರಲಾಗಿದೆ. ಈಗಂತೂ ಸುಧಾರಣೆಗಳ ಹೆಸರಿನಲ್ಲಿ ಬ್ಯಾಂಕುಗಳು ಏನೇ ಮಾಡಿದರೂ ಸರಿ, ಮಾಡದಿದ್ದರೂ ಸರಿ ಎಂಬಂತಾಗಿದೆ! ಇಷ್ಟು ವ್ಯಾಪಕವಾದ ಸುಧಾರಣೆಯ ಗಾಳಿಯು ಪ್ರಾದೇಶಿಕ ಗ್ರಾಮೀಣ ಬ್ಯಾಂಕಿಂಗ್ ವಲಯವನ್ನು ತಟ್ಟಿದ್ದರಿಂದಲೇ ಅವುಗಳ ಸಂಖ್ಯೆ ಇಳಿದುಹೋಗಿದೆ.

ADVERTISEMENT

ಆರ್.ಆರ್.ಬಿಗಳು ಬಂಡವಾಳ ಶೇಖರಣೆಗಾಗಿ ಮಾರುಕಟ್ಟೆಗಿಳಿದು ಷೇರು ವಹಿವಾಟು ನಡೆಸಲು ಅನುವಾಗುವಂತೆ ನರೇಂದ್ರ ಮೋದಿ ನೇತೃತ್ವದ ಮೊದಲ ಅವಧಿಯ ಸರ್ಕಾರ ಕಾನೂನಿನ ವ್ಯವಸ್ಥೆ ಮಾಡಿತ್ತು. ಕೇಂದ್ರ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ 2018ರ ಫೆಬ್ರುವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ, ಬಲಶಾಲಿಯಾದ ಗ್ರಾಮೀಣ ಬ್ಯಾಂಕುಗಳಿಗೆ ಷೇರು ಮಾರಾಟದ ಅವಕಾಶ ನೀಡುವುದಾಗಿ ಘೋಷಿಸಿದ್ದರು. ಈ ಕ್ರಮವನ್ನು ಅವರ ಉತ್ತರಾಧಿಕಾರಿ ನಿರ್ಮಲಾ ಸೀತಾರಾಮನ್ ಮುಂದುವರಿಸಿದ್ದಾರೆ. ಇದು, ಆರ್.ಆರ್.ಬಿಗಳ ಭಾಗಶಃ ಖಾಸಗೀಕರಣದತ್ತ ಕೇಂದ್ರ ಸರ್ಕಾರ ಇಟ್ಟ ಹೆಜ್ಜೆ.

ಜಿ.ವಿ.ಜೋಶಿ

1976ರ ಕಾನೂನು ಆರ್.ಆರ್.ಬಿ.ಗಳ ಸಂಘಟನೆ ಮತ್ತು ನಿಯಂತ್ರಣಕ್ಕಾಗಿ ರೂಪುಗೊಂಡಿತ್ತು. ಇದೇ ಕಾನೂನು ಈ ಬ್ಯಾಂಕುಗಳನ್ನು ಮುಚ್ಚುವುದಕ್ಕೂ ಅನುವು ಮಾಡಿದೆ! 1970 ಮತ್ತು 80ರ ದಶಕಗಳಲ್ಲಿ ಆರ್.ಆರ್.ಬಿಗಳ ಪ್ರಧಾನ ಉದ್ದೇಶವು ಗ್ರಾಮೀಣ ಪ್ರದೇಶದಲ್ಲಿ ಕೃಷಿ, ಉದ್ದಿಮೆ, ವ್ಯಾಪಾರ- ವಾಣಿಜ್ಯ ಮತ್ತಿತರ ಯೋಜನೆಗಳಿಗಾಗಿ ಸಣ್ಣ ಮತ್ತು ಅತಿಸಣ್ಣ ರೈತರು, ಕೃಷಿ ಕಾರ್ಮಿಕರು, ಕುಶಲಕರ್ಮಿಗಳು ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಸೌಲಭ್ಯ ಒದಗಿಸುವುದಾಗಿತ್ತು. 1999ರ ಜೂನ್‌ನಲ್ಲಿ ಹೈದರಾಬಾದಿನ ಎನ್.ಐ.ಆರ್.ಡಿ ಏರ್ಪಡಿಸಿದ್ದ ದುಂಡು ಮೇಜಿನ ಪರಿಷತ್ತು, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಾಂಸ್ಥಿಕ ಸಾಲ ಒದಗಿಸುವ ಅಗತ್ಯವನ್ನು ಒತ್ತಿ ಹೇಳಿತ್ತು. ಆದರೆ 1991ರ ನಂತರ ಲಾಭ- ಹಾನಿಯ ಲೆಕ್ಕಾಚಾರದ ಆಧಾರದಲ್ಲಿ ದೊಡ್ಡ ಮತ್ತು ಮಧ್ಯಮ ರೈತರಿಗೆ ಆರ್.ಆರ್.ಬಿಗಳಿಂದ ಆದರದ ಸ್ವಾಗತ ದೊರಕುತ್ತಿದೆ. ಆದರೆ ಅದೇ ರೈತರು ಲಾಭ- ಹಾನಿಯ ಲೆಕ್ಕಾಚಾರ ಮಾಡಿಯೇ ಆರ್.ಆರ್.ಬಿಗಳಲ್ಲಿ ತಮ್ಮ ಠೇವಣಿಗಳನ್ನು ಇಡಲು ಉತ್ಸಾಹ ತೋರಿಸಲಿಲ್ಲ.

70 ಮತ್ತು 80ರ ದಶಕಗಳಲ್ಲಿ ಯಾವ ಆಕರ್ಷಣೆಯೂ ಇಲ್ಲದ ಕುಗ್ರಾಮಗಳಲ್ಲಿ ಈ ಬ್ಯಾಂಕುಗಳು ತಮ್ಮ ಶಾಖೆಗಳನ್ನು ತೆರೆದು, ಮುತುವರ್ಜಿ ವಹಿಸಿ, ಬದಲಾವಣೆಯ ಕಹಳೆ ಊದಿದ್ದು ಹಳೆಯ ಕಥೆ. ಬ್ಯಾಂಕಿಂಗ್ ರಂಗದ ಸುಧಾರಣೆಯ ಪ್ರಭಾವದಿಂದ ನಗರಗಳಿಗೆ, ನಗರದ ಸಮೀಪ ಇರುವ ಪ್ರದೇಶಗಳಿಗೆ ಆರ್.ಆರ್.ಬಿ ಶಾಖೆಗಳು ವಿಲೀನೀಕರಣದ ಮಂತ್ರದೊಂದಿಗೆ ವರ್ಗಾವಣೆಗೊಂಡಿವೆ. ಇದನ್ನು ಮುಹಮ್ಮದ್ ಯೂನುಸ್ ಅವರೂ ತಮ್ಮದೇ ಆದ ರೀತಿಯಲ್ಲಿ ಗುರುತಿಸಿದ್ದಾರೆ. ಈಗ ಅವು ಹೆಸರಿಗೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಾದರೂ ಠೇವಣಿ ಸಂಗ್ರಹಿಸುವುದರಲ್ಲಾಗಲೀ ರೈತ ಸಮುದಾಯಗಳಿಗೆ ಸಾಲ ನೀಡುವುದರಲ್ಲಾಗಲೀ ವಿಮಾ ಪಾಲಿಸಿಗಳ ವ್ಯವಹಾರದಲ್ಲಾಗಲೀ ಷೇರುಗಳು ಮತ್ತು ಭದ್ರತಾ ಪತ್ರಗಳಲ್ಲಿ ಹಣ ಹೂಡಿಕೆ ಮಾಡುವುದರಲ್ಲಾಗಲೀ ವಾಣಿಜ್ಯ ಬ್ಯಾಂಕುಗಳಂತೆಯೇ ಕೆಲಸ ಮಾಡುತ್ತಿವೆ.

ಸಂವಿಧಾನದ 14 ಮತ್ತು 16ನೇ ವಿಧಿಗಳು ಸಾರುವ ಸಮಾನತೆಯ ಹಕ್ಕಿನ ಲಾಭವನ್ನು ಗ್ರಾಮೀಣ ಬ್ಯಾಂಕುಗಳಲ್ಲಿ ಕೆಲಸ ಮಾಡುವ ನೌಕರರು ನ್ಯಾಯಾಂಗದ ಮೊರೆ ಹೋಗಿ ಪಡೆದಿದ್ದಾರೆ. ಅವರ ಆರ್ಥಿಕ ಸ್ಥಿತಿಯಲ್ಲಿ ನ್ಯಾಯಾಧಾರಿತ ಸುಧಾರಣೆಯಾಗಿದ್ದು ನಿಜವಾದರೂ ಈಗ ಆರ್.ಆರ್.ಬಿಗಳು ವೇತನ ಭಾರದಿಂದ ನಲುಗುತ್ತಿವೆ. ಇದೇ ಬ್ಯಾಂಕುಗಳಿಂದ ಸಾಲ ಪಡೆಯುವ ಅರ್ಹತೆಯುಳ್ಳ ಗುಂಪುಗಳು, ಆಟಕ್ಕಿದ್ದರೂ ಲೆಕ್ಕಕ್ಕಿಲ್ಲದ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಸಾರುವ ಸಂವಿಧಾನದ ರಾಷ್ಟ್ರೀಯ ನಿರ್ದೇಶಕ ತತ್ವಗಳನ್ನು ಮಾತ್ರ ಸ್ಮರಿಸಿಕೊಂಡು ತೃಪ್ತಿಪಡಬೇಕಾಗಿದೆ.

ಇದ್ದರೂ ಇಲ್ಲದಂತಾಗಿರುವ ಹಿಡುವಳಿಗಳು, ಇಳಿಮುಖವಾದ ಫಲವತ್ತತೆ, ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗದ ಪರಿಸ್ಥಿತಿ, ದೇಶ ಸ್ವತಂತ್ರವಾಗಿ ಇಷ್ಟು ವರ್ಷಗಳು ಕಳೆದುಹೋದರೂ ನೀರಾವರಿ ಸೌಲಭ್ಯದ ಅಲಭ್ಯತೆ, ಹವಾಮಾನ ಬದಲಾವಣೆಯ ಹೊಡೆತ ಮತ್ತು ಹೆಚ್ಚುತ್ತಿರುವ ಸಾಗುವಳಿ ವೆಚ್ಚದಿಂದ ಅನೇಕ ಸಣ್ಣ ಮತ್ತು ಅತಿ ಸಣ್ಣ ರೈತರು ತತ್ತರಿಸಿ ಹೋಗಿರುವ ಸತ್ಯ ಎಂದೋ ಬಯಲಾಗಿದೆ.

ವೋಟ್ ಬೇಟೆಗಾಗಿ ಸಾಲಮನ್ನಾ ಮಾಡಿಸಲು ಹೆಣಗುತ್ತಿರುವ ಶಾಸಕರು, ಸಂಸದರಿಗೆ ಇಂತಹ ದಾರುಣ ಸತ್ಯಗಳ ಗೊಡವೆಯೇ ಇಲ್ಲ. ಸಾಲಮನ್ನಾ ಜಾರಿಯಾದರೂ ವಾಸ್ತವದಲ್ಲಿ ಆಗುತ್ತಿರುವುದು ಆರ್.ಆರ್.ಬಿಗಳಿಂದ ಬಡ ರೈತರು ಪಡೆದ ಹಳೆಯ ಸಾಲಗಳ ಇತಿ-ಮಿತಿಗಳ ತೀವ್ರತೆಯ ದರ್ಶನ!

ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿದ ಸುಮಾರು ಮೂರು ಕೋಟಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಧೈರ್ಯ ತುಂಬುವ ಉದ್ದೇಶದೊಂದಿಗೆ ₹ 30 ಸಾವಿರ ಕೋಟಿ ಕಾರ್ಯನಿರತ ಬಂಡವಾಳ ಒದಗಿಸುವುದಾಗಿ ಹಣಕಾಸು ಸಚಿವೆ ಮೇ 14ರಂದು ಪತ್ರಿಕಾಗೋಷ್ಠಿಯಲ್ಲಿ ಸಾರಿದರು. ಈ ನೆರವು ಸಹಕಾರಿ, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ನಬಾರ್ಡ್ ಮೂಲಕ ಹರಿದು, ಕಷ್ಟ-ನಷ್ಟ ಎದುರಿಸುತ್ತಿರುವ ರೈತರನ್ನು ತಲುಪಬೇಕು. ಈಗ ಪ್ರತೀ ಜಿಲ್ಲೆಯಲ್ಲೂ ನಬಾರ್ಡ್‌ ಕಚೇರಿ ಇದ್ದರೂ ಆ ಮೂಲಕ ಪುನರ್ಧನ ಒದಗಿಸುವ ಕಾರ್ಯಗಳಲ್ಲಿ ಆಗುತ್ತಿರುವ ಉಪಕಾರ ತೀರಾ ಕಡಿಮೆ.

ಗ್ರಾಮೀಣ ಬ್ಯಾಂಕಿಂಗ್ ತಜ್ಞ ಎನ್.ಕೆ.ತಿಂಗಳಾಯ ಅವರು ಬಹಳ ಹಿಂದೆ ಉಜಿರೆಯಲ್ಲಿ ನಡೆದ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ, ನಬಾರ್ಡ್ ಸೃಷ್ಟಿಸಿದ ಸಮಸ್ಯೆಗಳನ್ನು ಉಪಮೆಗಳೊಂದಿಗೆ ನಾಜೂಕಾಗಿ ತಿಳಿಸಿದ್ದರು. ನಬಾರ್ಡ್ ದೊರೆ ಕೂಡಲೇ ವೇದಿಕೆಗೆ ಧಾವಿಸಿ ಕೆಂಡ ಕಾರಿದ್ದರು! ಈಗ ಎನ್.ಪಿ.ಎಯಂಥ ಗಂಭೀರ ಸಮಸ್ಯೆಗಳಿರುವಾಗ, ನಬಾರ್ಡ್‌ ಸ್ವಲ್ಪ ಉದಾರವಾಗಿ ಗ್ರಾಮೀಣ ಬ್ಯಾಂಕುಗಳಿಗೆ ನೆರವಾಗಬೇಕಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಎಂ.ಎಸ್.ಎಂ.ಇಗಳನ್ನು ಬೆಳೆಸುವಲ್ಲೂ ಗೋದಾಮುಗಳ ನಿರ್ಮಾಣಕ್ಕೂ ಹಣಕಾಸು ಒದಗಿಸಲು ನಬಾರ್ಡ್ ತನ್ನ ನೀತಿಯನ್ನು ಕೊಂಚ ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ.

ಆರ್.ಆರ್.ಬಿಗಳ ಸ್ಥಾಪನೆಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಪ್ರಾಯೋಜಕ ಬ್ಯಾಂಕುಗಳು ಅನುಕ್ರಮವಾಗಿ ಶೇ 50, ಶೇ 15 ಮತ್ತು ಶೇ 35ರಷ್ಟು ಬಂಡವಾಳ ಒದಗಿಸಿದ್ದು ಹೌದು. ಆದರೆ ಈಗ ಪರಿಸ್ಥಿತಿ ಬದಲಾಗಿ ಹೋಗಿದೆ. ದೇಶದಲ್ಲಿ ಬ್ಯಾಂಕಿಂಗ್ ರಂಗದ ಅನೇಕ ಗಂಭೀರ ಸಮಸ್ಯೆಗಳನ್ನು ಪರಿಹರಿಸಬೇಕಾಗಿರುವ ಕೇಂದ್ರ ಸರ್ಕಾರ, ಎನ್.ಪಿ.ಎ ಸೃಷ್ಟಿಸಿರುವ ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಯೋಜಕ ವಾಣಿಜ್ಯ ಬ್ಯಾಂಕುಗಳು ಮತ್ತು ಹಣಕಾಸಿನ ಒತ್ತಡದಿಂದ ಚಡಪಡಿಸುತ್ತಿರುವ ರಾಜ್ಯ ಸರ್ಕಾರಗಳು ಇರುವಾಗ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಗತಿ-ಸ್ಥಿತಿ ಇಷ್ಟಾದರೂ ಹೀಗಾದರೂ ಇರುವುದೇ ದೊಡ್ಡದು ಎಂಬಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.