ADVERTISEMENT

ನಾಗೇಶ ಹೆಗಡೆ ಅಂಕಣ| ಮಂಗಳ ಗ್ರಹದತ್ತ ನೂಕುನುಗ್ಗಲು

ಆಚಿನ ಲೋಕಕ್ಕೆ ಹೋಗಬೇಕು ಸರಿ, ಆದರೆ ಇಲ್ಲಿ ಮಾಡಿದ ತಪ್ಪುಗಳು ಅಲ್ಲೂ ಆಗಬಾರದಷ್ಟೆ

ನಾಗೇಶ ಹೆಗಡೆ
Published 10 ಫೆಬ್ರುವರಿ 2021, 19:30 IST
Last Updated 10 ಫೆಬ್ರುವರಿ 2021, 19:30 IST
   

ಉತ್ತರಾಖಂಡದ ದುರಂತಕ್ಕೆ ನಿಜವಾದ ಕಾರಣವನ್ನು ಹುಡುಕಲೆಂದು ಇಸ್ರೊ ವಿಜ್ಞಾನಿಗಳು, ಹಿಮತಜ್ಞರು ಭೂಮ್ಯಾಕಾಶ ಒಂದು ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅರಬ್ಬರು, ಚೀನೀಯರು ಮತ್ತು ನಾಸಾ ವಿಜ್ಞಾನಿಗಳು ಏಕಕಾಲಕ್ಕೆ ಮಂಗಳ ಗ್ರಹಕ್ಕೆ ಲಗ್ಗೆ ಹಾಕುತ್ತಿದ್ದಾರೆ. ನಮ್ಮ ಇಂದು-ನಿನ್ನೆಗಳ ಎಡವಟ್ಟುಗಳ ಅಧ್ಯಯನಕ್ಕೂ ಬಾಹ್ಯಾಕಾಶ ತಂತ್ರಜ್ಞಾನ ಬೇಕು; ನಾಳಿನ ಕನಸುಗಳನ್ನು ಸಾಕಾರಗೊಳಿಸಲಿಕ್ಕೂ ಅದೇ ತಂತ್ರಜ್ಞಾನ ಬೇಕು ಎಂಬಂತಾಗಿದೆ.

ನಾಗೇಶ ಹೆಗಡೆ

ಅದನ್ನೇ ತುಸು ಬೆದಕಿ ನೋಡೋಣ: ಚಮೋಲಿಯ ದುರಂತಕ್ಕೆ ನಿಜವಾದ ಕಾರಣ ಏನೆಂದು ಇನ್ನೂ ಪಕ್ಕಾ ಗೊತ್ತಾಗಿಲ್ಲ. ಸೆಕೆ ಏರುತ್ತಿರುವುದೇ ಕಾರಣವೆ? ಅಥವಾ ಚಳಿ ಹೆಚ್ಚಾಗಿದ್ದು ಕಾರಣವೆ? ಅಥವಾ ಪರಸ್ಪರ ವಿರುದ್ಧದ ಈ ಎರಡೂ ಪ್ರಕೋಪಗಳು ಏಕಕಾಲಕ್ಕೆ ಅಲ್ಲಿ ಕಂಡವೆ? ಸೆಕೆ ಹೆಚ್ಚಿದ್ದರಿಂದಾಗಿ ಗ್ಲೇಸಿಯರ್‌ಗಳು (ಹಿಮನದಿ) ಬಿರುಕು ಬಿಟ್ಟು ಭಿತ್ತಿಗಳು ಕುಸಿದಿರಬಹುದು. ಅಥವಾ ಚಳಿ ಹೆಚ್ಚಿದ್ದರಿಂದಾಗಿ ಅಂಥ ಓರೆಕೋರೆ ಬಿರುಕುಗಳ ಮೇಲೆ ಇನ್ನಷ್ಟು ಹಿಮಗಡ್ಡೆ ಶೇಖರವಾಗಿ ಅವು ಕುಸಿದು ಹಿಮಪಾತ (ಅವಾಲಾಂಚ್‌) ಸಂಭವಿಸಿರಬಹುದು. ಅದೇನೆಂದು ನೋಡಲು ಫೆಬ್ರುವರಿ 7ರ ಕ್ಷಣಕ್ಷಣದ ಉಪಗ್ರಹ ಚಿತ್ರಗಳ ಇಂಚಿಂಚು ಅಧ್ಯಯನ ನಡೆಯುತ್ತಿದೆ.

ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ದೃಷ್ಟಿಯೆಲ್ಲ ಹೀಗೆ ಹಿಮಾಲಯದ ಕಡೆ ಇದ್ದರೆ, ಜಗತ್ತಿನ ಇತರೆಲ್ಲರ ದೃಷ್ಟಿ ಈಗ ಮಂಗಳ ಗ್ರಹದ ಕಡೆ ಇದೆ. ಪೈಪೋಟಿ ಎಂಬಂತೆ ಮೂರು ದೇಶಗಳು ಏಕಕಾಲಕ್ಕೆ ಅಲ್ಲಿ ತಮ್ಮ ನೌಕೆಗಳನ್ನು ಇಳಿಸುತ್ತಿವೆ. ಮೊನ್ನೆ ಮಂಗಳವಾರ, ಇದೇ ಮೊದಲ ಬಾರಿಗೆ ಅರಬ್ ದೊರೆಗಳ ನೌಕೆಯೊಂದು ಯಶಸ್ವಿಯಾಗಿ ಮಂಗಳನ ಕಕ್ಷೆಯನ್ನು ಪ್ರವೇಶಿಸಿದೆ. ನಿನ್ನೆ, ಬುಧವಾರ ಚೀನೀಯರ ಮೊದಲ ಶೋಧನೌಕೆ ಅಲ್ಲಿನ ವಾಯುಮಂಡಲಕ್ಕೆ ಪ್ರವೇಶಿಸುತ್ತ ಚಂದದ ಚಿತ್ರಗಳನ್ನು ಕಳಿಸತೊಡಗಿದೆ. ಮುಂದಿನ ವಾರ ಅಮೆರಿಕದ ನಾಸಾದ ಭಾರೀ ಬಲಶಾಲಿ ನೌಕೆ ಮಂಗಳನ ನೆಲಕ್ಕೆ ಇಳಿಯಲಿದೆ.

ADVERTISEMENT

ಅರಬ್‌ ರಾಷ್ಟ್ರ ಯು.ಎ.ಇ.ಗೆ ಇದು ಸಂಭ್ರಮದ ವಾರ. ಅವರ ‘ಹೋಪ್‌’ ಹೆಸರಿನ ಶೋಧನೌಕೆ ಕಳೆದ ವರ್ಷವಿಡೀ ಪ್ರಯಾಣ ಮಾಡಿ 40 ಕೋಟಿ ಕಿಲೊಮೀಟರ್‌ ಕ್ರಮಿಸಿ ಸುರಕ್ಷಿತವಾಗಿ ಮಂಗಳದ ಗುರುತ್ವ ವಲಯವನ್ನು ಸೇರಿದೆ. (ನಮ್ಮ ಮೊದಲ ‘ಮಂಗಳಯಾನ-1’ರ ಹಾಗೆ) ಅದು ಅಲ್ಲಿನ ನೆಲಕ್ಕೇನೂ ಇಳಿಯುತ್ತಿಲ್ಲ. ಆದರೆ ಇನ್ನು ನಾಲ್ಕು ವರ್ಷ ಅಲ್ಲೇ ಸುತ್ತುತ್ತ (ನಾವು ಮೀಥೇನ್‌ ಹುಡುಕಿದ ಹಾಗೆ) ಅದು ಜಲಜನಕದ ಅಯಾನುಗಳನ್ನು ಹುಡುಕಲಿದೆ. ಹಿಂದೊಂದು ಕಾಲದಲ್ಲಿ ಆ ಕೆಂಪುಗ್ರಹದಲ್ಲಿ ಭಾರೀ ನೀರು ಇತ್ತೆಂದೂ ನಂತರ ಅದೇನೋ ಭಾನಗಡಿ ಆಗಿ ನೀರೆಲ್ಲ ಆವಿಯಾಗಿ ಹಾರಿ ಹೋಯಿತೆಂದೂ ಹೇಳಲಾಗುತ್ತಿದೆ ತಾನೆ? ಹಾಗೆ ಪರಾರಿಯಾದ ನೀರಿನ ಹೆಜ್ಜೆಗುರುತು ಈಗಲೂ ಅಲ್ಲಿನ ಎತ್ತರದ ಆಕಾಶದಲ್ಲಿ ಇರಬೇಕೆಂದು ವಿಜ್ಞಾನಿಗಳು ತರ್ಕಿಸಿದ್ದಾರೆ. ಅದರ ಸತ್ಯಾಸತ್ಯದ ಪರೀಕ್ಷೆಯಲ್ಲಿ ‘ಹೋಪ್‌’ ತೊಡಗಲಿದೆ. ಎಷ್ಟೆಂದರೂ ಅರಬ್ಬರು. ನೀರು ಅವರ ಕಾಲ್ಕೆಳಗೂ ನಾಪತ್ತೆಯಾಗಿದೆ ತಾನೆ?

ಚೀನೀಯರಿಗೂ ಇಂದು ಭಾರೀ ಸಂಭ್ರಮದ ಸಂದರ್ಭ. ಏಕೆಂದರೆ ಇದು ಅವರ ಮೊದಲ ಅಂತರ್ಗ್ರಹ ಯಾತ್ರೆ. ಅವರು ತಮ್ಮ ಶೋಧನೌಕೆಗೆ ‘ಟಿಯಾನ್‌ವೆನ್‌-1’ ಎಂದು ಹೆಸರಿಟ್ಟಿದ್ದಾರೆ. ಎರಡೂವರೆ ಸಾವಿರ ವರ್ಷಗಳ ಹಿಂದೆ ಚೀನೀಯರ ಆದಿಕವಿ ಕೂ ಯುವಾನ್‌ ಎಂಬಾತ ‘ಸ್ವರ್ಗಕ್ಕೆ ಪ್ರಶ್ನೆ’ (ಟಿಯಾನ್‌ವೆನ್‌) ಹೆಸರಿನ ನೀಳ್ಗವಿತೆ ಬರೆದಿದ್ದು, ಅದನ್ನೇ ತಮ್ಮ ಮೊದಲ ಮಂಗಳ ನೌಕೆಗೆ ಇಟ್ಟಿದ್ದಾರೆ. ಐವತ್ತು ಕ್ವಿಂಟಲ್‌ ತೂಕದ ಈ ನೌಕೆ ಮುಂದಿನ ಕೆಲವು ತಿಂಗಳು ಮಂಗಳನ ಸುತ್ತ ಗಸ್ತು ತಿರುಗುತ್ತ ಆಮೇಲೆ ನೆಲಕ್ಕೆ ಇಳಿಯಲಿದೆ (ನಮ್ಮ ವಿಕ್ರಮ್‌ ಲ್ಯಾಂಡರ್‌ ಹೀಗೆ ಇಳಿಯುವ ಹಂತದಲ್ಲಿ ವಿಫಲವಾಗಿತ್ತು). ಯಶಸ್ವಿಯಾಗಿ ಇಳಿದರೆ ಅದರ ಉದರದಿಂದ ಎರಡೂವರೆ ಕ್ವಿಂಟಲ್‌ ತೂಕದ ಬಂಡಿಯೊಂದು ಉರುಳುತ್ತ ಅತ್ತಿತ್ತ ಚಲಿಸಲಿದೆ. ಚೀನಾ ತನ್ನ ಸಾಧನೆಯನ್ನು ಅಷ್ಟೇನೂ ಜೋರಾಗಿ ಕೊಚ್ಚಿಕೊಳ್ಳುವುದಿಲ್ಲ. ‘ಸ್ವರ್ಗಕ್ಕೆ ಪ್ರಶ್ನೆ’ ಕಳಿಸಿದ್ದು ಮಂಗಳದ ನರಕಸದೃಶ ಗುರುತ್ವವಲಯಕ್ಕೆ ಕ್ಷೇಮವಾಗಿ ತಲುಪಿತೆ ಎಂಬುದು (ಇದನ್ನು ಬರೆಯುವ ವೇಳೆಗೆ) ಗೊತ್ತಾಗಲಿಲ್ಲ. ಈ ಹಿಂದೆ ಚಂದ್ರನ ಮೇಲೆ ಉರುಳುಬಂಡಿಯನ್ನು ಓಡಾಡಿಸಿದ ಅನುಭವ ಅಲ್ಲಿನ ತಂತ್ರಜ್ಞರಿಗೆ ಇದೆ; ಹಾಗಾಗಿ ಇಲ್ಲೂ ಅವರಿಗೆ ಯಶಸ್ಸು ಸಿಕ್ಕೀತು. ಯಾವುದಕ್ಕೂ ಆಸಕ್ತರು ಚೀನೀಯರ ಸಿಜಿಟಿಎನ್‌ (CGTN) ಹೆಸರಿನ ಯೂಟ್ಯೂಬ್‌ ಚಾನೆಲ್ಲನ್ನು ನೋಡುತ್ತಿರಬಹುದು.

ಮಂಗಳಗ್ರಹದ ಗುರುತ್ವ ವಲಯದೊಳಕ್ಕೆ ನೌಕೆಯನ್ನು ತೂರಿಸುವುದು ಮತ್ತು ಅದು ಅಲ್ಲೇ ಪ್ರದಕ್ಷಿಣೆ ಹಾಕುತ್ತ ತನ್ನಲ್ಲಿದ್ದ ಡಬ್ಬಿಯನ್ನು ಕೆಳಕ್ಕೆ ಬೀಳಿಸುವುದು ಸುಲಭ. ಆದರೆ ಹುಷಾರಾಗಿ, ಸುರಕ್ಷಿತವಾಗಿ ಅದನ್ನು ಮಂಗಳನ ನೆಲದ ಮೇಲೆ ಇಳಿಸುವುದು ಭಾರೀ ಸವಾಲಿನ ಕೆಲಸ. ಏಕೆಂದರೆ ಅಲ್ಲಿನ ವಾತಾವರಣ ತುಂಬಾ ತೆಳು; ಗುರುತ್ವ ಮಾತ್ರ ಜಾಸ್ತಿ. ಪ್ಯಾರಾಶೂಟ್‌ ಕಟ್ಟಿದರೂ ನೆಲಡಬ್ಬಿಯ (ಲ್ಯಾಂಡರ್‌) ವೇಗವನ್ನು ತಡೆಯಬಲ್ಲ ದಟ್ಟ ವಾಯುಮಂಡಲ ಇಲ್ಲ. ಬದಲಿಗೆ, ಡಬ್ಬಿಯನ್ನು ಓಲಾಡಿಸಿ ದಿಕ್ಕು ತಪ್ಪಿಸುವಷ್ಟು ಸುಂಟರಗಾಳಿ ಅಲ್ಲಲ್ಲಿ ಆಗಾಗ ಏಳುತ್ತಿರುತ್ತದೆ. ಅದಕ್ಕೇ ಕಳೆದ ಐವತ್ತು ವರ್ಷಗಳಲ್ಲಿ ಅಲ್ಲಿಗೆ ಇಳಿಸಲೆಂದು ನಡೆಸಿದ ಯಾನಗಳಲ್ಲಿ ಹೆಚ್ಚಿನವು ವಿಫಲವಾಗಿವೆ.

ಅಮೆರಿಕದ ನಾಸಾ ಈ ಬಾರಿ ಪಟ್ಟುಹಿಡಿದು ‘ಪರ್ಸಿವರನ್ಸ್’ ಹೆಸರಿನ ಗಾಡಿಯನ್ನು ಅಲ್ಲಿ ಇಳಿಸಲು ಸಜ್ಜಾಗಿದೆ. ಅವಡುಗಚ್ಚಿ ಅಥವಾ ಪಟ್ಟುಹಿಡಿದು ನಿಭಾಯಿಸುವ ತಾಕತ್ತಿಗೆ ಇಂಗ್ಲಿಷ್‌ನಲ್ಲಿ ಪರ್ಸಿವರನ್ಸ್‌ ಎನ್ನುತ್ತಾರೆ. ಮುಂದಿನ ವಾರ (ಫೆಬ್ರುವರಿ 18ಕ್ಕೆ) ಒಂದು ಟನ್‌ ತೂಕದ, ಎಸ್‌ಯುವಿ ಗಾತ್ರದ ಆ ಗಾಡಿ ಕೆಳಕ್ಕೆ ಇಳಿಯಲಿದೆ. ಮಂಗಳನ ನೆಲದತ್ತ ಜ್ವಾಲೆ ಹೊಮ್ಮಿಸುತ್ತ ನಾಲ್ಕು ಉಲ್ಟಾ ರಾಕೆಟ್‌ಗಳು (ಅದನ್ನು ಕಟ್ಟಿದ ತೊಲೆಗೆ ಸ್ಕೈಕ್ರೇನ್‌ ಎನ್ನುತ್ತಾರೆ) ಮೆಲ್ಲಗೆ ಗಾಡಿಯನ್ನು ಹಗ್ಗದ ಮೂಲಕ ನೆಲದ ಮೇಲೆ ಇಳಿಸುತ್ತವೆ. ಆಮೇಲೆ ಸ್ಕೈಕ್ರೇನ್‌ ಆ ಹಗ್ಗವನ್ನು ಕಳಚಿ ದೂರ ಒಯ್ದು ತಾನೂ ಬೀಳಲಿದೆ. ಇತ್ತ ಗಾಡಿ ಉರುಳುತ್ತ ವರ್ಷಗಟ್ಟಲೇ ಅಲ್ಲಿ ಇಲ್ಲಿ ಓಡಾಡುತ್ತ ಮನೆ ಕಟ್ಟಲು ಸೂಕ್ತ ನಿವೇಶನ
ಗಳನ್ನು ಗುರುತಿಸಿ ಬಾವುಟ ನೆಡಲಿದೆ. ಒಂಥರಾ ಮುಂಗಡ ಬುಕಿಂಗ್‌ ಮಾಡಿದಂತೆ.

ಬಾವುಟ ನೆಡುವುದೆಂದರೆ ಸಾಮ್ರಾಜ್ಯ ವಿಸ್ತರಣೆ ತಾನೆ? ಹಿಂದೆ ಸ್ಪೇನ್‌, ಪೋರ್ಚುಗೀಸ್‌, ಬ್ರಿಟಿಷ್‌ ದೊರೆಗಳು ನಾವಿಕರ ಕೈಗೆ ಬಾವುಟ ಕೊಟ್ಟು ಹೊಸ ಹೊಸ ಖಂಡಗಳ ಶೋಧಕ್ಕೆ ಕಳಿಸಿದ್ದರು. ಅಲ್ಲಿನ ಸಂಪನ್ಮೂಲ ತಮ್ಮದೆಂದು ಘೋಷಿಸಿಕೊಳ್ಳುತ್ತ ಹೋದರು. ಐದು ಖಂಡಗಳನ್ನು ಆಕ್ರಮಿಸಿದ ನಂತರ ನಿರ್ಜನ
ಅಂಟಾರ್ಕ್ಟಿಕಾಕ್ಕೆ ಲಗ್ಗೆ (ಅಲ್ಲಿ ಭಾರತವೂ ಹೋಗಿ ಬಾವುಟ ಊರಿದೆ). ಐದು ವರ್ಷಗಳ ಹಿಂದೆ ಉತ್ತರ ಧ್ರುವದ ಹಿಮಹಾಸು ಕರಗಿ ನೀರಾದಾಗ, ರಷ್ಯಾ ದೇಶ ಆ ನೀರಿನ ತಳಕ್ಕಿಳಿದು ಅಲ್ಲೊಂದು ಬಾವುಟ ಇಳಿಸಿ, ಅದರ ಕೆಳಗಿನ ತೈಲನಿಕ್ಷೇಪವೆಲ್ಲ ತನ್ನದೆಂದು ಘೋಷಿಸಿತು. ಈಗ ಚಂದ್ರನ ಮೇಲೆ, ಮಂಗಳನ ಮೇಲೆ, ಕ್ಷುದ್ರಗ್ರಹಗಳ ಮೇಲೆ ಬಾವುಟ ಊರುವ ಪೈಪೋಟಿ ನಡೆದಿದೆ. ಇಲ್ಲಿ ನಮ್ಮದೇ ಗ್ರಹದಲ್ಲಿ ಸಮುದ್ರ ಕೊರೆತ, ಭೂಕುಸಿತ, ಹಿಮಕುಸಿತ ಆದಲ್ಲೆಲ್ಲ ಎಚ್ಚರಿಕೆಯ ಕೆಂಬಾವುಟ ನೆಡಲಾಗುತ್ತಿದೆ.

ಈ ಭೂಮಿಯನ್ನು ಪೂರ್ತಿ ಹಾಳುಗೆಡವುವ ಮೊದಲೇ ಬೇರೆ ಜಗತ್ತಿಗೆ ಕಾಲೂರಬೇಕೆಂದು ಸ್ಟೀಫನ್‌ ಹಾಕಿಂಗ್‌ ತನ್ನ ಕೊನೆಯ ದಿನಗಳಲ್ಲಿ ಹೇಳಿದ ಮಾತು ನೆನಪಾಗುತ್ತದೆ. ಆಚಿನ ಲೋಕಕ್ಕೆ ಹೋಗಬೇಕು ಸರಿ. ಆದರೆ ಇಲ್ಲಿ ಮಾಡಿದ ತಪ್ಪುಗಳನ್ನೇ ಅಲ್ಲೂ ಮಾಡ
ಬಾರದಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.