ADVERTISEMENT

ಹುಟ್ಟಿಸಿದ ದೇವರು ಹುಲ್ಲು ಮೇಯಿಸ್ತಾನಾ?

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 14:09 IST
Last Updated 17 ಜೂನ್ 2018, 14:09 IST
ಹುಟ್ಟಿಸಿದ ದೇವರು ಹುಲ್ಲು ಮೇಯಿಸ್ತಾನಾ?
ಹುಟ್ಟಿಸಿದ ದೇವರು ಹುಲ್ಲು ಮೇಯಿಸ್ತಾನಾ?   

ನನ್ನ ಹೆಸರು ರತ್ನಮ್ಮ. ನಾನು ಬೆಂಗಳೂರಿಗೆ ಬಂದು ಸುಮಾರು 15 ವರ್ಷಗಳೆ ಆದವು. ಈಗ ನನಗೆ 45 ವರ್ಷ. ನಾನು ಪೀಣ್ಯ ಇಂಡಸ್ಟ್ರಿಯ ಮಾರುತಿ ಲೇಔಟ್‌ನ ಶಾಲೆಯೊಂದರಲ್ಲಿ ಬೆಳಿಗ್ಗೆ ಆಯಾ ಕೆಲಸ, ಸಂಜೆ ರಸ್ತೆಬದಿಯಲ್ಲಿ ಬೋಂಡಾ ಮಾರಿಕೊಂಡು ಜೀವನಬಂಡಿ ಒಬ್ಬಳೇ ಎಳೆಯುತ್ತಿದ್ದೇನೆ.

ನನ್ನ ತವರು ಮನೆ ಪಾವಗಡ. ನನ್ನ ಅಪ್ಪನ ಮನೆಯಲ್ಲೂ ಬಡತನವಿತ್ತು. ಅಲ್ಲೂ ಜೀವನ ಕಷ್ಟವಿತ್ತು. ನನಗೆ 17 ವಯಸ್ಸು ಆಗುತ್ತಿದ್ದಂತೇ ಚಿತ್ರದುರ್ಗಕ್ಕೆ ಮದುವೆ ಮಾಡಿಕೊಟ್ಟರು. ಗಂಡನ ಮನೇಲಿ ಆದರೂ ಸುಖಜೀವನ ನಡೆಸಬಹುದು ಎಂದು ಏನೇನೋ ಆಸೆ ಇಟ್ಟುಕೊಂಡು ಹೋದೆ. ಆದರೆ ನನ್ನ ಗಂಡ ನನಗೆ ಮಕ್ಕಳು ಆಗಲ್ಲ ಅಂತ ಗೊತ್ತಾದಾಗ ನನ್ನಿಂದ ಬೇರೆಯಾದರು. ಸ್ವಲ್ಪ ದಿನಕ್ಕೇ  ಮತ್ತೊಬ್ಬಳನ್ನು ಮದುವೆಯಾದರು.

ನನ್ನ ಗಂಡ  ಮರು ಮದುವೆಯಾದ ಮೇಲೆ ನನಗೆ ದಿಕ್ಕೆ ತೋಚದಂತಾಗಿ ನಾನು ಸಾಯಲು ಪ್ರಯತ್ನಿಸಿದೆ. ಆದರೆ ದೇವರು ಹುಟ್ಟಿಸಿದ ಜೀವಕ್ಕೆ ಹುಲ್ಲು ಮೇಯಿಸಲ್ವಾ ಅಂದುಕೊಂಡು ಧೈರ್ಯವಾಗಿ ಜೀವನ ನಡೆಸಬೇಕು ಎಂದು ಗೊತ್ತಿಲ್ಲದ ಈ ಬೆಂಗಳೂರಿಗೆ ಬಂದೆ.

ADVERTISEMENT

ಆಗ ಸ್ವಲ್ಪ ದಿನ ತುಂಬಾ ಕಷ್ಟ ಆಯ್ತಮ್ಮ. ಬರೀ ನೀರು ಕುಡಿದು ಬದುಕಿದ ದಿನಗಳಿವೆ. ಆಗ ಎಂ.ಎಂ.ಬ್ರೈಟ್ ಶಾಲೆಯಲ್ಲಿ ಆಯಾ ಆಗಿ ಕೆಲಸಕ್ಕೆ ಸೇರಿಕೊಡೆ. ನನಗೆ ₹ 600  ಸಂಬಳ. ಬರುವ ಅಲ್ಪ ಸಂಬಳದಲ್ಲಿ ಮನೆ ಬಾಡಿಗೆ ಅದು ಇದು ಅಂತ ಸರಿ ಮಾಡಿ, ಹೊಟ್ಟೆ ತುಂಬಾ ಊಟ ಮಾಡಕ್ಕೂ ಆಗ್ತಾ ಇರಲಿಲ್ಲ. ನನಗೆ ಚೆನ್ನಾಗಿ ಬೋಂಡಾ ಮಾಡಕ್ಕೆ ಬರುತ್ತಿದ್ದ ಕಾರಣ ಶಾಲೆ ಕೆಲಸ ಮುಗಿದ ನಂತರ ಸಂಜೆ ಬೊಂಡಾ ವ್ಯಾಪಾರದಲ್ಲಿ ತೊಡಗಿಸಿಕೊಂಡೆ.

ಆಗ ನನಗೆ ಸ್ವಲ್ಪ ದುಡ್ಡು ಉಳಿಯುತ್ತಿತ್ತು. ಅದನ್ನೆ ಚೀಟಿ ಕಟ್ಟಿ ಉಳಿತಾಯ ಮಾಡಿಕೊಂಡಿನಿ. ನನಗೆ ಹಿಂದೆ ಇಲ್ಲ ಮುಂದು ಯಾರೂ ಆಸರೆ ಇಲ್ಲ. ಕಷ್ಟಕಾಲದಲ್ಲಿ ಸ್ವಲ್ಪ ಹಣ ಇದ್ದರೆ ಚೆನ್ನಾಗಿರುತ್ತೆ. ಈಗ ನನಗೆ ಶಾಲೆಯಲ್ಲಿ ₹ 6000 ಸಂಬಳ ಕೊಡ್ತಿದಾರೆ. ನಮ್ಮ ದೇಶದಲ್ಲಿ ಆಯಾ ಕೆಲಸಕ್ಕೆ ಬೆಲೆ ಇಲ್ಲ ಕಣವ್ವ. ಈ ನಗರದಲ್ಲಿ ಕುಡಿಯೋ ನೀರಿನಿಂದ ಹಿಡಿದು ಸಣ್ಣ ಪುಟ್ಟ ವಸ್ತುಗಳಿಗೂ ದೊಡ್ಡ ರೇಟು. ನಮ್ಮಂಥ ಒಂಟಿ ಜೀವಗಳು ಹೇಗೆ ಬದುಕಬೇಕು? ಮನೆ ಬಾಡಿಗೆ, ದಿನಸಿ, ತರಕಾರಿ ಎಲ್ಲದರ ಬೆಲೆ ಜಾಸ್ತಿಯಾಗಿವೆ. ಆರು ಸಾವಿರದಲ್ಲಿ ಬಿಡಿಗಾಸೂ ಉಳಿತಾಯ ಆಗಲ್ಲ.

ನಾವು ನಮ್ಮ ಸಲುವಾಗಿ ಬದುಕಬೇಕು. ಸ್ವಾಭಿಮಾನದಿಂದ ಬದುಕಬೇಕು. ನನ್ನ ಜೀವವಿದ್ದಷ್ಟು ದಿನಾ ಕಷ್ಟಪಟ್ಟು ದುಡಿದು ತಿಂತೀನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.