ADVERTISEMENT

4,723 ಮತದಾರರು ಹೊಸದಾಗಿ ಸೇರ್ಪಡೆ

ಗದಗ ಜಿಲ್ಲೆ: 4 ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 10:16 IST
Last Updated 7 ಮಾರ್ಚ್ 2018, 10:16 IST

ಗದಗ: 2018ರ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ನಾಲ್ಕು ಮತಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, 4,723 ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಒಟ್ಟು ಮತದಾರರ ಸಂಖ್ಯೆ 8.30 ಲಕ್ಷಕ್ಕೆ ಏರಿಕೆ ಆಗಿದೆ.

2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ನಾಲ್ಕೂ ಮತಕ್ಷೇತ್ರಗಳು ಸೇರಿ ಒಟ್ಟು 7.40 ಲಕ್ಷ ಮತದಾರರಿದ್ದರು. ಕಳೆದ 5 ವರ್ಷಗಳಲ್ಲಿ ಮತದಾರರ ಸಂಖ್ಯೆ 90 ಸಾವಿರದಷ್ಟು ಹೆಚ್ಚಿದೆ.

ಪರಿಷ್ಕೃತ ಮತದಾರರ ಪಟ್ಟಿಯಲ್ಲಿ 4.19 ಲಕ್ಷ ಪುರುಷ ಮತದಾರರು, 4.11ಲಕ್ಷ ಮಹಿಳೆ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 939 ಮತಗಟ್ಟೆಗಳಿವೆ. ಜಿಲ್ಲೆಯ ನಾಲ್ಕೂ ಮತಕ್ಷೇತ್ರಗಳನ್ನು ಅವಲೋಕಿಸಿದರೆ ರೋಣ ಮತಕ್ಷೇತ್ರದಲ್ಲಿ ಗರಿಷ್ಠ ಅಂದರೆ 2.20 ಲಕ್ಷ ಮತದಾರರಿದ್ದಾರೆ. ಭೌಗೋಳಿಕ ವಿಸ್ತೀರ್ಣದಲ್ಲಿ ಉಳಿದ ಕ್ಷೇತ್ರಗಳಿಗಿಂತ ದೊಡ್ಡದಾಗಿರುವ ಇಲ್ಲಿ 265 ಮತಗಟ್ಟೆಗಳಿವೆ. 2013ಕ್ಕೆ ಹೋಲಿಸಿದರೆ ಇಲ್ಲಿ ಮತದಾರರ ಸಂಖ್ಯೆಯಲ್ಲಿ 25,351ರಷ್ಟು ಹೆಚ್ಚಳವಾಗಿದೆ. ಮತದಾರರ ಸಂಖ್ಯೆಯಲ್ಲಿ ಎರಡನೆಯ ಅತಿ ದೊಡ್ಡ ಕ್ಷೇತ್ರ ಗದಗ. ಇಲ್ಲಿ 216 ಮತಗಟ್ಟೆಗಳಿವೆ. ಕಳೆದ 5 ವರ್ಷಗಳಲ್ಲಿ ಹೊಸದಾಗಿ 24,420 ಮತದಾರರು ಸೇರ್ಪಡೆಗೊಂಡಿದ್ದು, 1.91 ಲಕ್ಷ ಇದ್ದ ಮತದಾರರ ಸಂಖ್ಯೆ ಈಗ 2.15ಲಕ್ಷಕ್ಕೆ ಏರಿಕೆಯಾಗಿದೆ.

ADVERTISEMENT

ಅವಿಭಜಿತ ಧಾರವಾಡ ಜಿಲ್ಲೆ ಇದ್ದಾಗ ಗದಗ, ಮುಂಡರಗಿ, ರೋಣ, ನರಗುಂದ ಹಾಗೂ ಶಿರಹಟ್ಟಿ ತಾಲ್ಲೂಕು ಸೇರಿ ಐದು ಮತಕ್ಷೇತ್ರ ಹೊಂದಿತ್ತು. 1998ರಲ್ಲಿ ಜಿಲ್ಲೆಯಾಗಿ ಗದಗ ಘೋಷಣೆಯಾದ ಬಳಿಕವೂ ಐದು ಕ್ಷೇತ್ರಗಳನ್ನು ಉಳಿಸಿಕೊಳ್ಳಲಾಗಿತ್ತು. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಮುಂಡರಗಿ ಕ್ಷೇತ್ರವನ್ನು ರೋಣ ಮತ್ತು ಶಿರಹಟ್ಟಿ ಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಯಿತು. ಈಗ ಶಿರಹಟ್ಟಿ ಮೀಸಲು ಕ್ಷೇತ್ರವಾಗಿದೆ. 2013ರ ಚುನಾವಣೆಯಲ್ಲಿ ಶಿರಹಟ್ಟಿ ಮತಕ್ಷೇತ್ರದಲ್ಲಿ ಒಟ್ಟು 1.82 ಲಕ್ಷ ಮತದಾರರಿದ್ದರು. 5 ವರ್ಷಗಳಲ್ಲಿ ಈ ಸಂಖ್ಯೆ 25,949ರಷ್ಟು ಹೆಚ್ಚಿದ್ದು, 2.08 ಲಕ್ಷಕ್ಕೆ ಏರಿಕೆ ಆಗಿದೆ. ಇಲ್ಲಿ ಒಟ್ಟು 242 ಮತಗಟ್ಟೆಗಳಿವೆ.

ಬಂಡಾಯ ನಗರಿ ಎಂದೇ ಹೆಸರಾದ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ 1.71 ಲಕ್ಷ ಮತದಾರರಿದ್ದರು. ಕಳೆದ 5 ವರ್ಷಗಳಲ್ಲಿ ಈ ಸಂಖ್ಯೆ 14,357 ರಷ್ಟು ಹೆಚ್ಚಿದ್ದು, 1.85 ಲಕ್ಷಕ್ಕೆ ಏರಿಕೆಯಾಗಿದೆ. ಕ್ಷೇತ್ರದಲ್ಲಿ 216 ಮತಗಟ್ಟೆಗಳಿವೆ.

ಹೊಸದಾಗಿ ಸೇರ್ಪಡೆ, ಹೆಸರು ಕೈಬಿಡಲು, ತಿದ್ದುಪಡಿ ಹಾಗೂ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆ ಸೇರಿ 2017ರ ನವೆಂಬರ್ 30ರಿಂದ ಫೆಬ್ರುವರಿ 12ರ ಅವಧಿಯಲ್ಲಿ ಒಟ್ಟು 26,954 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಇದರಲ್ಲಿ ವಾಸಸ್ಥಳ ಬದಲಾವಣೆ, ಮರಣ ಮತ್ತು ಒಂದಕ್ಕಿಂತ ಹೆಚ್ಚು ಬಾರಿ ಹೆಸರು ಸೇರ್ಪಡೆ ಸೇರಿದಂತೆ ವಿವಿಧ ಕಾರಣಗಳಿಂದ ಒಟ್ಟು 20,265 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. 4,723 ಮಂದಿ ಅಂತಿಮವಾಗಿ ಸ್ಥಾನ ಪಡೆದಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 72.90ರಷ್ಟು ಮತದಾನವಾಗಿತ್ತು.
***
ಒಟ್ಟು ಮತದಾರರು 8,30,379
ಒಟ್ಟು ಪುರುಷ ಮತದಾರರು 4,19,078
ಒಟ್ಟು ಮಹಿಳಾ ಮತದಾರರು 4,11,301
ಒಟ್ಟು ಮತಗಟ್ಟೆಗಳ ಸಂಖ್ಯೆ 939
ಕ್ಷೇತ್ರವಾರು ಮತದಾರರ ಸಂಖ್ಯೆ
ಗದಗ 2,15,472
ಶಿರಹಟ್ಟಿ 2,08,666
ರೋಣ 2,20,702
ನರಗುಂದ 1,85,539

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.