ADVERTISEMENT

ಕನ್ನಡದಲ್ಲಿ ವಿಜ್ಞಾನ: ಗಂಟಲಿನ ಬಿಸಿತುಪ್ಪ

ಪಿ.ಯು ವಿಜ್ಞಾನ ಪಠ್ಯಪುಸ್ತಕಗಳ ಪಾರಿಭಾಷಿಕ ಪದ ಬಳಕೆಯಲ್ಲಿ ಸಾಧನೆಯಾಗದ ಏಕತೆ

ಟಿ.ಆರ್.ಅನಂತರಾಮು
Published 11 ಸೆಪ್ಟೆಂಬರ್ 2020, 19:30 IST
Last Updated 11 ಸೆಪ್ಟೆಂಬರ್ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿಜ್ಞಾನವನ್ನು ಓದಿ ಪಿ.ಯುಗೆ ಬರುತ್ತಲೇ ವಿದ್ಯಾರ್ಥಿಗಳಿಗೆ ಇಂಗ್ಲಿಷ್‍ನಲ್ಲಿ ಓದಬೇಕಾದಾಗ ಸಹಜವಾಗಿಯೇ ಕಷ್ಟವಾಗುತ್ತದೆ, ಭಾಷೆ ತೊಡಕು ಎನ್ನಿಸುತ್ತದೆ. ಸಿಇಟಿ, ‘ನೀಟ್’ ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಕನ್ನಡದಲ್ಲಿ ಉತ್ತರಿಸಲು ಅವಕಾಶವಿದೆ. ಆದರೆ ಕನ್ನಡ ವಿಜ್ಞಾನ ಪಠ್ಯಗಳೇ ಇಲ್ಲದಿದ್ದರೆ ಉತ್ತರಿಸುವುದು ಹೇಗೆ? ಊಟದ ತಟ್ಟೆ ಇದೆ, ಆದರೆ ಊಟವಿಲ್ಲ ಎನ್ನುವ ಪರಿಸ್ಥಿತಿ.

ಟಿ.ಆರ್.ಅನಂತರಾಮು

ಇದನ್ನು ಮನಗಂಡ ಪದವಿಪೂರ್ವ ಶಿಕ್ಷಣ ಇಲಾಖೆಯು 2015ರಲ್ಲಿ ಕನ್ನಡದಲ್ಲಿ ವಿಜ್ಞಾನ ಪಠ್ಯಪುಸ್ತಕಗಳನ್ನು ಹೊರತರಲು ಯೋಚಿಸಿ, ಈಗ ಭೌತ ವಿಜ್ಞಾನ, ರಸಾಯನ ವಿಜ್ಞಾನ ಮತ್ತು ಜೀವ ವಿಜ್ಞಾನದ ಬಗ್ಗೆ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಹೊರತಂದಿದೆ. ಇದು ಸ್ವಾಗತಾರ್ಹ ಹೆಜ್ಜೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಮೂಲ ಇಂಗ್ಲಿಷ್ ಪಠ್ಯವನ್ನು ಯಥಾವತ್ತಾಗಿ ಕನ್ನಡದಲ್ಲಿ ಅನುವಾದ ಮಾಡಲಾಗಿದೆ. ಇಲ್ಲಿ ವಿಷಯಗಳ ಆಯ್ಕೆಯಲ್ಲಿ ಸ್ವಾತಂತ್ರ್ಯ ಇರುವುದಿಲ್ಲ. ಅನುವಾದದಲ್ಲೂ ಮೂಲಕ್ಕೆ ನಿಷ್ಠವಾಗಿರ ಬೇಕು. ವಿಜ್ಞಾನದಲ್ಲಿ ಪರ್ಯಾಯ ಪದಗಳಿರುವುದು ತುಂಬಾ ಕಡಿಮೆ. ಹೀಗಾಗಿ ಅನುವಾದಕರ ಹೊಣೆ ಹೆಚ್ಚಾಗಿಯೇ ಇರುತ್ತದೆ.

ಕನ್ನಡ ಭಾಷೆಯು ವಿಜ್ಞಾನದ ಭಾಷೆಯಾಗಿಯೂ ಬೆಳೆದಿದೆ ಎಂಬುದನ್ನು ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶ ಸಂಪುಟಗಳು ಅರ್ಧ ಶತಮಾನದ ಹಿಂದೆಯೇ ಸಾಬೀತುಪಡಿಸಿವೆ. ಈ ನಿಟ್ಟಿನಲ್ಲಿ, ಇಲಾಖೆಯು ಹೊರತಂದಿರುವ ವಿಜ್ಞಾನದ ಮೂರು ಪಠ್ಯಪುಸ್ತಕಗಳನ್ನು ಪರಿಶೀಲಿಸಬಹುದು. ಪಠ್ಯಪುಸ್ತಕಗಳನ್ನು ಕೈಗೆತ್ತಿ
ಕೊಳ್ಳುತ್ತಲೇ ರಾಚುವುದು ವಿಜ್ಞಾನ ಪದವನ್ನು ಬದಿಗಿಟ್ಟು ಭೌತಶಾಸ್ತ್ರ (2 ಭಾಗ), ರಸಾಯನಶಾಸ್ತ್ರ (2 ಭಾಗ), ಜೀವಶಾಸ್ತ್ರ ಎಂದು ಮುಖಪುಟದಲ್ಲೇ ಮುದ್ರಿಸಿರುವುದು. ‘ಶಾಸ್ತ್ರ’ ಎನ್ನುವುದನ್ನು ಕೈಬಿಟ್ಟು ಬಹಳಷ್ಟು ವರ್ಷಗಳೇ ಕಳೆದಿವೆ. ಪರಿಶೀಲನಾ ತಂಡದ ಗಮನಕ್ಕೆ ಇದು ಏಕೆ ಬರಲಿಲ್ಲ ಎನ್ನುವುದೇ ಆಶ್ಚರ್ಯ. ಪಾರಿಭಾಷಿಕ ಪದ ಬಳಕೆಯಲ್ಲಿ ಇಲ್ಲಿ ಏಕತೆ ಸಾಧಿಸಿಲ್ಲ.

ADVERTISEMENT

‘ಭೌತವಿಜ್ಞಾನ’ದಲ್ಲಿ ಕೆಲವು ಗೊಂದಲಗಳು ಎದ್ದುಕಾಣುತ್ತವೆ. x-ಕಿರಣವನ್ನು ಇಲ್ಲಿ ‘ಕ್ಷ-ಕಿರಣ’ ಎಂದು ಬಳಸಿರುವುದು ಎಷ್ಟು ಸರಿ? ‘ಸಿಂಥೆಟಿಕ್’ ಎನ್ನುವ ಪದಕ್ಕೆ ಈಗಾಗಲೇ ಬಳಕೆಯಲ್ಲಿರುವ ‘ಸಂಶ್ಲೇಷಿತ’ ಎನ್ನುವ ಪದ ಇರುವಾಗ, ಮೂಲ ಇಂಗ್ಲಿಷ್ ಪದವನ್ನು ಬಳಸುವ ಔಚಿತ್ಯವೇನು? ವಿಭವತೆ ಎನ್ನುವುದನ್ನು ಪೊಟೆನ್ಷಿಯಾಲಿಟಿ ಎಂದು ಸಮಾನಾರ್ಥಕ ಪದವಾಗಿ ಕೊಡಲಾಗಿದೆ. ಇಲ್ಲಿ ವಿಭವ ಎಂದರೆ ಸಾಕು. ಮೊದಲ ಅಧ್ಯಾಯದ ಆರಂಭದಲ್ಲಿ ವಿದ್ಯುದಾವೇಶ ಎಂದು ಸರಿಯಾಗಿ ಬರೆಯಲಾಗಿದ್ದರೂ ನಂತರ ಅದನ್ನು ವಿದ್ಯುತ್ ಆವೇಶ ಎಂದು ಸಂಧಿ ಬಿಡಿಸುವ ಅವಶ್ಯಕತೆ ಏನಿತ್ತು? ವಿದ್ಯುದಾವೇಶ ಕಣ ಎಂಬುದನ್ನು ವಿಜ್ಞಾನದಲ್ಲಿ ಸಲೀಸಾಗಿ ವಿದ್ಯುದಾವಿಷ್ಟ ಕಣ ಎಂದು ಬಳಸಿ ಈಗಾಗಲೇ ರೂಢಿಗೆ ತರಲಾಗಿದೆ. ‘ಟೆಂಪರೇಚರ್’ಗೆ ಸಂವಾದಿ ಪದ ‘ತಾಪಮಾನ’ ಅಲ್ಲ, ಅದು ‘ಉಷ್ಣತೆ’. ಈ ಎಲ್ಲ ತಾಂತ್ರಿಕ ಪದಗಳಿಗೂ ಪಾರಿಭಾಷಿಕ ಶಬ್ದಕೋಶ ಕೊಟ್ಟಿರುವುದಾಗಿ ಇಲಾಖೆ ತಿಳಿಸಿದೆ.

‘ಭೌತವಿಜ್ಞಾನ’ ಮತ್ತು ‘ರಸಾಯನವಿಜ್ಞಾನ’ ಎರಡರಲ್ಲೂ ಶಬ್ದಕೋಶವಿಲ್ಲ. ಆಯಾ ತಾಂತ್ರಿಕ ಶಬ್ದಗಳು ಬಂದಾಗ ಆವರಣದಲ್ಲೇ ಕೊಟ್ಟಿದ್ದರೆ ಈ ಗೊಂದಲ
ಗಳನ್ನು ಕಡಿಮೆ ಮಾಡಬಹುದಾಗಿತ್ತು. ಸಮಾಧಾನವೆಂದರೆ, ಭೌತವಿಜ್ಞಾನ ಭಾಗ- 2ರಲ್ಲಿ ಈ ಬಗೆಯ ಗೊಂದಲಗಳಿಲ್ಲ. ಮೆಟ್ರಿಕ್ ಪದ್ಧತಿಯನ್ನು ಎಲ್ಲ ಕಡೆಯೂ ಅನುಸರಿಸಿರುವುದು, ಏಕಮಾನವನ್ನು ಮೂಲದಲ್ಲಿ ಹೇಗೆ ಇತ್ತೋ ಹಾಗೆಯೇ ಬಳಸಿರುವುದು, ತಾಂತ್ರಿಕ ಪದಗಳಿಗೆ ಕೆಲವೆಡೆಯಾದರೂ ಆವರಣದಲ್ಲಿ ಸಮಾನ ಪದ ಕೊಟ್ಟಿ ರುವುದು ಇಲ್ಲಿ ಅನುಸರಿಸಿರುವ ಮೆಚ್ಚಬೇಕಾದ ಕ್ರಮ.

ರಸಾಯನ ವಿಜ್ಞಾನದಲ್ಲಿ ಗೊಂದಲ ಇನ್ನೂ ಹೆಚ್ಚು. ಈಗಿನ ವಿಜ್ಞಾನ ಬರವಣಿಗೆಗಳಲ್ಲಿ ಆಮ್ಲಜನಕ, ಜಲಜನಕದಂಥ ಪದಗಳನ್ನು ಕೈಬಿಟ್ಟು ಆಕ್ಸಿಜನ್ ಮತ್ತು ಹೈಡ್ರೋಜನ್ ಪದಗಳೇ ಹೆಚ್ಚು ಜನಪ್ರಿಯವಾಗಿವೆ. ಈ ಬದಲಾವಣೆಯನ್ನು ಅನುವಾದಕರು ಗಮನಿಸಿದಂತಿಲ್ಲ. ಬಟ್ಟಿಯನ್ನು ಭಟ್ಟಿ ಎಂದೂ, ಧ್ರುವ ಪದವನ್ನು ಹಲವು ರೂಪಾಂತರಗಳಲ್ಲಿ ಇಲ್ಲಿ ಬಳಸಿರುವುದು, ದುರ್ಬಲ ಎಂಬುದಕ್ಕೆ ಸಾರರಿಕ್ತ ಎಂಬುದರ ಬದಲು ಸೌರರಿಕ್ತ ಎಂದು ಬಳಸಿರುವುದು ನಿರ್ಲಕ್ಷ್ಯವನ್ನು ತೋರಿಸುತ್ತದೆ. ರಸಾಯನ ವಿಜ್ಞಾನದಲ್ಲಿ ‘ಕರಗುತ್ತದೆ’ ಎಂಬ ಆಡುನುಡಿಯೇ ಮೇಲುಗೈ ಪಡೆದಿದೆ. ಮೂಲ ಅರ್ಥವನ್ನು ಗ್ರಹಿಸಿದರೆ ‘ಡಿಸಾಲ್ವ್’ ಎಂಬ ಪದಕ್ಕೆ ಸಮಾನ ಪದ ‘ವಿಲೀನ’ ಎಂಬುದು. ಸ್ಪೆಕ್ಟ್ರಮ್ ಎನ್ನುವ ಪದಕ್ಕೆ ‘ವರ್ಣಪಟಲ’ ಎಂದು, ಇನ್ನೊಂದೆಡೆ ‘ರೋಹಿತ’ ಎಂದು ಎರಡೂ ಪದಗಳನ್ನು ಬಳಸಿರುವುದರ
ಔಚಿತ್ಯ ತಿಳಿಯುವುದಿಲ್ಲ.

ಭೌತವಿಜ್ಞಾನ ಮತ್ತು ರಸಾಯನವಿಜ್ಞಾನ ಎರಡರಲ್ಲೂ ಉಷ್ಣತೆಯನ್ನು ಅಳೆಯಲು ಬಳಸುವ ಏಕಮಾನ ‘ಏ’ (ಕೆಲ್ವಿನ್) ಎಂದು ಬಳಸಿರುವುದು ಸ್ವಾಗತಾರ್ಹ. ಹಾಗೆಯೇ ಇಲೆಕ್ಟ್ರಾನ್ ಎಂಬ ಪದವನ್ನು ಎಲ್ಲ ಕಡೆಯೂ ಏಕರೂಪದಲ್ಲಿ ಬಳಕೆಗೆ ತಂದಿರುವುದು ವಿದ್ಯಾರ್ಥಿಗಳ ಗ್ರಹಿಕೆಗೆ ಸುಲಭ. ಈ ಪಠ್ಯಪುಸ್ತಕಗಳಲ್ಲಿ ಜೀವವಿಜ್ಞಾನ ಪಠ್ಯವನ್ನು ಹೆಚ್ಚಿನ ಜವಾಬ್ದಾರಿಯೊಂದಿಗೆ ಸಿದ್ಧಪಡಿಸಲಾಗಿದೆ (ಅನುವಾದಕರಾರೂ ಸಂಭಾವನೆ ಪಡೆದಿಲ್ಲ ಎಂಬುದು ಬೇರೆಯೇ ವಿಚಾರ). ಇಲ್ಲಿ ಅನುಸರಿಸಿರುವ ಕ್ರಮವೂ ಅನುಕರಣೀಯ.

ಪಾರಿಭಾಷಿಕ ಪದಗಳನ್ನು ಆಯಾ ಜಾಗದಲ್ಲೇ ಕೊಟ್ಟಿರುವುದು ಒಂದಾದರೆ, ಪಠ್ಯಪುಸ್ತಕದ ಕೊನೆಯಲ್ಲಿ 36 ಪುಟಗಳ ಪಾರಿಭಾಷಿಕ ಪಟ್ಟಿಯಲ್ಲಿ ಇಂಗ್ಲಿಷ್‍ನಿಂದ ಕನ್ನಡಕ್ಕೂ ಕನ್ನಡದಿಂದ ಇಂಗ್ಲಿಷ್‍ಗೂ ಪದಗಳ ಅರ್ಥ ಕೊಟ್ಟಿರುವುದು ವಿದ್ಯಾರ್ಥಿಗಳ ಅರ್ಥಗ್ರಹಿಕೆಗೆ ಸುಲಭವಾಗಿದೆ. ಕೆಲವೆಡೆ ಹೊಸತಾಗಿ ಪದಗಳನ್ನು ಸೃಷ್ಟಿಸಲಾಗಿದೆ. ಉದಾ: ಇಂಪ್ಲಾಂಟ್ ಪದಕ್ಕೆ ‘ಒಳನೆಡುಗ’ ಸೊಗಸಾಗಿದೆ. ಮಾನವ ಜೀನೋಮ್ ಯೋಜನೆ ಎಂದರೆ ಸಾಕಾಗಿತ್ತು. ಇಲ್ಲಿ ಮಾನವ ವಂಶವಾಹಿ ಸಮುದಾಯ ಯೋಜನೆ ಎನ್ನುವುದರಲ್ಲಿ, ಸಮುದಾಯ ಎಂದರೆ ಏನು ಎಂಬ ಪ್ರಶ್ನೆ ಏಳುತ್ತದೆ. ಹಾಗೆಯೇ ಇತ್ತೀಚೆಗೆ ಜೀವವಿಜ್ಞಾನದಲ್ಲಿ ಬಳಕೆಯಾಗುತ್ತಿರುವ ಪದಗಳಾದ ಕುಲಾಂತರಿ, ಸ್ತನಿ ಮುಂತಾದವನ್ನು ಅನುವಾದಕರು ಗಮನಿಸಿದ್ದಾರೆ. ಆದರೆ ಬಯೊ ಡೈವರ್ಸಿಟಿ ಎಂಬ ಪದಕ್ಕೆ ಜೀವಿ ವೈವಿಧ್ಯ ಸಾಕಾಗಿತ್ತು, ವೈವಿಧ್ಯತೆ ಅನಗತ್ಯ.

ಇವುಗಳನ್ನು ಹೇಗೋ ಸಹಿಸಿಕೊಳ್ಳಬಹುದು, ಆದರೆ ಮುದ್ರಣಕ್ಕೆ ಮುನ್ನ ಈ ಮೂರು ಪಠ್ಯಗಳಲ್ಲಿ ಪ್ರೂಫನ್ನು ಸರಿಯಾಗಿ ಓದಿಲ್ಲ ಎಂಬುದಕ್ಕೆ ಒಂದಲ್ಲ ಹತ್ತು ಉದಾಹರಣೆಗಳನ್ನು ಕೊಡಬಹುದು. ಅದರಲ್ಲೂ ರಸಾಯನ ವಿಜ್ಞಾನದಲ್ಲಿ ದವನಬಿಂದು, ಕಂತೀಯ ಗುಣ, ಕೋಷ್ಠಕ, ಸೂಷ್ಮಾಣುಜೀವಿ, ಧ್ರವೀಯ, ಊಂಟಾಗುತ್ತವೆ ಇಂಥ ಹತ್ತು ಹಲವು ಅಶುದ್ಧ ಪ್ರಯೋಗಗಳಿವೆ. ಇಂಥವನ್ನು ಐದು ವರ್ಷಗಳ ದೀರ್ಘಾವಧಿಯಲ್ಲಿ ಓದಿ ಸರಿಪಡಿಸಬಹುದಿತ್ತು.

ಇಲ್ಲಿ ಒಂದು ಅಂಶವನ್ನು ಅನುವಾದಕರು ಅವಶ್ಯವಾಗಿ ಗಮನಿಸಬೇಕು. ವಿಜ್ಞಾನದ ನಿಘಂಟಿನ ನೆರವಿಲ್ಲದೆ ಅನುವಾದ ಮಾಡಲು ಹೊರಡಬಾರದು. ಹಿಂದೆ ನಿಘಂಟುಗಳ ಅಭಾವವಿತ್ತು. ಆದರೆ ಈಗ ಶಿಷ್ಟ ಪದಗಳೇ ಇರುವ ಕನ್ನಡ ವಿಜ್ಞಾನ ನಿಘಂಟುಗಳಿವೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ‘ಇಂಗ್ಲಿಷ್- ಕನ್ನಡ ವಿಜ್ಞಾನ ಶಬ್ದಕೋಶ’ವನ್ನು ತಂದಿದೆ. ‘ನವಕರ್ನಾಟಕ ವಿಜ್ಞಾನ– ತಂತ್ರಜ್ಞಾನ ಪದ ಸಂಪದ’ದಲ್ಲಿ 14,000ಕ್ಕೂ ಮಿಕ್ಕಿ ಪದ ಮತ್ತು ವಿವರಣೆಯನ್ನೂ ನೀಡಲಾಗಿದೆ. ಅನುವಾದಕರಿಗೆ ಸದಾ ಇದೊಂದು ಪರಾಮರ್ಶನ ಗ್ರಂಥ. ಇದನ್ನು ಸಮಿತಿ ಗಮನಿಸಿದಂತಿಲ್ಲ.

ಪಿ.ಯು. ಮಟ್ಟದಲ್ಲಿ ಕನ್ನಡದಲ್ಲಿ ವಿಜ್ಞಾನವನ್ನು ಬೋಧಿಸಲು ಹೆಚ್ಚಿನ ಪ್ರೋತ್ಸಾಹ ನೀಡುವ ಇಚ್ಛಾಶಕ್ತಿಯನ್ನು ಯಾವ ಪಕ್ಷದ ನೇತೃತ್ವದ ಸರ್ಕಾರವೂ ತೋರಿಲ್ಲ. ಈಗ ಕೊನೆಯಪಕ್ಷ ಪಿ.ಯು ವಿಜ್ಞಾನ ಪಠ್ಯ ಪುಸ್ತಕಗಳನ್ನು ಕನ್ನಡದಲ್ಲಿ ಅನುವಾದ ಮಾಡಿಸಿ ಪ್ರಕಟಿಸ ಲಾಗಿದೆ. ಅಷ್ಟರಮಟ್ಟಿಗೆ ಸರ್ಕಾರ ಅಭಿನಂದನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.