ADVERTISEMENT

ಸೀಮೋಲ್ಲಂಘನ| ಇರಾಕ್ ಯುದ್ಧ: ಸಿಕ್ಕ ನೆಪ, ಮಿಥ್ಯಾರೋಪ

ಈ ಯುದ್ಧಕ್ಕೀಗ ಎರಡು ದಶಕಗಳು ಸಂದಿದ್ದರೂ ಕೆಲವು ಪ್ರಶ್ನೆಗಳು ಹಾಗೆಯೇ ಉಳಿದುಬಿಟ್ಟಿವೆ

ಸುಧೀಂದ್ರ ಬುಧ್ಯ
Published 24 ಮಾರ್ಚ್ 2023, 19:30 IST
Last Updated 24 ಮಾರ್ಚ್ 2023, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಉಕ್ರೇನ್ ಯುದ್ಧ ಮುಂದುವರಿದಿದೆ. ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಭೇಟಿಯಾಗಿ ದ್ವಿಪಕ್ಷೀಯ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಮಾತನಾಡಿದ್ದಾರೆ. ರಷ್ಯಾವನ್ನು ಏಕಾಂಗಿಯಾಗಿಸಬೇಕು ಎಂದು ಅಮೆರಿಕ ನಡೆಸುತ್ತಿರುವ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ಉಕ್ರೇನ್ ಯುದ್ಧದ ಅಂತ್ಯ ಹೇಗೆ ಎಂಬ ಪ್ರಶ್ನೆಗೆ ನಿಖರ ಉತ್ತರ ಮಾತ್ರ ಕಾಣುತ್ತಿಲ್ಲ.

Caption

ಇದೇ ಹೊತ್ತಿನಲ್ಲಿ, ಇರಾಕ್ ಯುದ್ಧಕ್ಕೆ ಇಪ್ಪತ್ತು ವರ್ಷಗಳು ಸಂದವು ಎಂಬ ಸುದ್ದಿ ಆ ಯುದ್ಧದ ನೆನಪುಗಳನ್ನು ಮುನ್ನೆಲೆಗೆ ತಂದಿದೆ. ಇಪ್ಪತ್ತು ವರ್ಷ ಕಳೆದರೂ ಇರಾಕ್ ಯುದ್ಧ ಕುರಿತ ಕೆಲವು ಪ್ರಶ್ನೆಗಳು ಹಾಗೆಯೇ ಉಳಿದುಬಿಟ್ಟಿವೆ. ಅಷ್ಟಕ್ಕೂ ಇರಾಕ್ ಮೇಲೆ ಅಮೆರಿಕ ಮುಗಿಬಿದ್ದದ್ದು ಏಕೆ? ಸಮೂಹ ವಿನಾಶದ ಶಸ್ತ್ರಾಸ್ತ್ರಗಳನ್ನು ಇರಾಕ್ ನಿಜಕ್ಕೂ ಶೇಖರಿಸಿ ಇಟ್ಟುಕೊಂಡಿತ್ತೇ, ಇಸ್ರೇಲ್ ಮತ್ತು ತೈಲ ಲಾಬಿಯು ಅಮೆರಿಕವನ್ನು ಇರಾಕ್ ಮೇಲೆರಗಲು ಪ್ರೇರೇಪಿಸಿತೇ ಅಥವಾ ಸಿರಿಯಾ, ಲಿಬಿಯಾ, ಇರಾನ್ ಮತ್ತು ಉತ್ತರ ಕೊರಿಯಾದ ಸರ್ವಾಧಿಕಾರಿಗಳಿಗೆ ಸಂದೇಶ ರವಾನಿಸಲು, ವಿಶ್ವದ ಪ್ರಮುಖ ಶಕ್ತಿಯಾಗಿ ತನ್ನ ಸ್ಥಾನವನ್ನು ಮರುಸ್ಥಾಪಿಸಿಕೊಳ್ಳಲು ಅಮೆರಿಕವು ಇರಾಕ್ ಯುದ್ಧವನ್ನು ಬಳಸಿಕೊಂಡಿತೇ?

1990ರ ದಶಕದ ಆರಂಭದಲ್ಲಿ ಸದ್ದಾಂ ಹುಸೇನ್, ಕುವೈತ್ ಮೇಲೆ ಯುದ್ಧ ಸಾರಿದ್ದರು. ಕುವೈತ್ ಬಗಲಿಗೆ ಅಮೆರಿಕ ನಿಂತಿತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ‘ರೆಸಲ್ಯೂಶನ್ 687’ ಅನ್ನು ಅಂಗೀಕರಿಸಿ, ಇರಾಕ್ ಈ ಕೂಡಲೇ ಎಲ್ಲಾ ರಾಸಾಯನಿಕ, ಜೈವಿಕ ಮತ್ತು ಪರಮಾಣು ಅಸ್ತ್ರಗಳನ್ನು ಧ್ವಂಸಗೊಳಿಸಬೇಕು ಮತ್ತು ವಿಶ್ವಸಂಸ್ಥೆಯ ಶಸ್ತ್ರ ಪರಿವೀಕ್ಷಕರ ತಪಾಸಣೆಗೆ ಸಹಕರಿಸಬೇಕು ಎಂದಿತು. ಇರಾಕ್ ಈ ಕರಾರಿಗೆ ಒಪ್ಪಿತ್ತು. ಆದರೆ 1998ರಲ್ಲಿ ತಕರಾರು ತೆಗೆಯಿತು. ಆಗ ಇರಾಕ್ ಮೇಲೆ ಆರ್ಥಿಕ ದಿಗ್ಬಂಧನ ಹೇರಲಾಯಿತು. ಆದರೆ ಸದ್ದಾಂ ಬಗ್ಗಲಿಲ್ಲ. ಅಮೆರಿಕದ ಸಂಸತ್ತು ‘ಇರಾಕ್ ವಿಮೋಚನಾ ಕಾಯ್ದೆ’ಯನ್ನು ಅಂಗೀಕರಿಸಿತು. ಸದ್ದಾಂ ಹುಸೇನ್ ಪದಚ್ಯುತಿಗೊಳಿಸುವುದು ಅಮೆರಿಕದ ಗುರಿಯಾಯಿತು.

ADVERTISEMENT

ಜಾರ್ಜ್ ಡಬ್ಲ್ಯು ಬುಷ್ ಅವರು 2001ರ ಜನವರಿಯಲ್ಲಿ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದಾಗ ‘ಅಮೆರಿಕದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದು ನನ್ನ ಆದ್ಯತೆ’ ಎಂದಿದ್ದರು. ಆದರೆ ಅಮೆರಿಕದ ಸೇನಾ ಮತ್ತು ಆರ್ಥಿಕ ಪ್ರಾಬಲ್ಯದ
ದ್ಯೋತಕದಂತಿದ್ದ ಪೆಂಟಗನ್ ಮತ್ತು ವಿಶ್ವ ವಾಣಿಜ್ಯ ಕೇಂದ್ರದ ಮೇಲೆ 2001ರ ಸೆಪ್ಟೆಂಬರ್ 11ರಂದು ನಡೆದ ದಾಳಿಯು ಅಮೆರಿಕದ ಸಾಮರ್ಥ್ಯವನ್ನು ಅಣುಕಿಸುವಂತಿತ್ತು. ಅಮೆರಿಕದ ಗುಪ್ತಚರ ಇಲಾಖೆ ‘ರಾಸಾಯನಿಕ ಹಾಗೂ ಜೈವಿಕ ಅಸ್ತ್ರಗಳ ದಾಳಿ ನಡೆಯಬಹುದು’ ಎಂದು ಎಚ್ಚರಿಸಿತು. ಉಗ್ರರಿಗೆ ಈ ಮಾರಕ ಅಸ್ತ್ರಗಳನ್ನು ನೀಡಲು ಸದ್ದಾಂ ಹುಸೇನ್ ನೇತೃತ್ವದ ಇರಾಕ್ ಮುಂದಾದರೆ ಎಂಬ ಭೀತಿ ಅಮೆರಿಕವನ್ನು ಕಾಡಿತು.

ಸೆಪ್ಟೆಂಬರ್ 11ರ ದಾಳಿಯ ಆಘಾತದಿಂದ ಹೊರಬಂದು ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸಲು ಅಮೆರಿಕ ಹವಣಿಸುತ್ತಿತ್ತು. ಆಗ ಕಂಡದ್ದೇ ಇರಾಕ್. ಸದ್ದಾಂ ಹುಸೇನ್ ಎಂಬ ಹುಂಬ ಸರ್ವಾಧಿಕಾರಿಯ ಇರಾಕ್. ಇರಾಕ್‌ನಲ್ಲಿ ಶಿಯಾ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಆಡಳಿತದ ಚುಕ್ಕಾಣಿ ಸುನ್ನಿ ಮುಸ್ಲಿಮರ ಕೈಯಲ್ಲಿತ್ತು. ಸದ್ದಾಂ ಹುಸೇನ್ ಅವಧಿಯಲ್ಲಿ ಶಿಯಾ ಮುಸ್ಲಿಮರ ಮೇಲೆ ಜನಾಂಗೀಯ ದಾಳಿ, ಹಿಂಸಾಚಾರಗಳು ನಡೆದವು. ಸಾಮುದಾಯಿಕ ಬಿಕ್ಕಟ್ಟು ಸೃಷ್ಟಿಸಿದ್ದ, ದುರಾಡಳಿತಕ್ಕೆ ಹೆಸರಾಗಿದ್ದ ಸದ್ದಾಂ ಹುಸೇನ್ ಪದಚ್ಯುತಿಗೊಳಿಸಿದರೆ ಅಮೆರಿಕದ ವಿಶ್ವಾಸಾರ್ಹತೆ ಹೆಚ್ಚುತ್ತದೆ ಮತ್ತು ಪ್ರಾಂತೀಯವಾಗಿ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪ್ರಭಾವ ಹಿರಿದಾಗುತ್ತದೆ ಎಂಬ ಲೆಕ್ಕಾಚಾರ ಅಮೆರಿಕದ ನೀತಿನಿರೂಪಕರ ತಲೆಯಲ್ಲಿತ್ತು.

ಇರಾಕ್ ಮೇಲೆರಗುವ ಮುನ್ನ ಒಂದಿಷ್ಟು ಆರೋಪಗಳನ್ನು ಅಮೆರಿಕ ಮಾಡಿತು. ಇರಾಕ್ ಸಮೂಹ ವಿನಾಶದ ಶಸ್ತ್ರಾಸ್ತ್ರಗಳನ್ನು ಹೊಂದುವ ಪ್ರಯತ್ನದಲ್ಲಿದೆ. ರಾಸಾಯನಿಕ, ಜೈವಿಕ ಮತ್ತು ಪರಮಾಣು ಅಸ್ತ್ರಗಳನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳುತ್ತಿದೆ, ಇದರಿಂದಾಗಿ ಪ್ರಾಂತೀಯ ಮತ್ತು ಜಾಗತಿಕ ಶಾಂತಿಗೆ ಧಕ್ಕೆಯಾಗಲಿದೆ ಎಂದು ಆರೋಪಿಸಿತು. 2002ರ ‘ಸ್ಟೇಟ್ ಆಫ್ ಯೂನಿಯನ್’ ಭಾಷಣದಲ್ಲಿ ಉಗ್ರ ಚಟುವಟಿಕೆಗಳ ಬಗ್ಗೆ ಕಠಿಣ ಭಾಷೆ ಪ್ರಯೋಗಿಸಿದ ಅಧ್ಯಕ್ಷ ಬುಷ್, ಇರಾಕ್, ಇರಾನ್ ಮತ್ತು ಉತ್ತರ ಕೊರಿಯಾವನ್ನು ‘Axis of Evil’ ಎಂದು ಕರೆದರು.

2003ರ ಮಾರ್ಚ್ 17ರಂದು ಇರಾಕ್ ತೊರೆಯಲು ಸದ್ದಾಂಗೆ 48 ಗಂಟೆಗಳ ಕೊನೆಯ ಅವಕಾಶ ನೀಡಲಾಯಿತು. ಅದನ್ನು ಸದ್ದಾಂ ಉಪೇಕ್ಷಿಸಿದಾಗ ಮಾರ್ಚ್ 19ರಂದು ಇರಾಕ್ ಮೇಲೆ ಬುಷ್ ಯುದ್ಧ ಘೋಷಿಸಿದರು. ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಪೋಲೆಂಡ್ ದೇಶವು ಅಮೆರಿಕದ ಜೊತೆಯಾದವು. ಕುವೈತ್ ತನ್ನ ಮೂಲಕ ಕಾರ್ಯಾಚರಣೆ ನಡೆಸಲು ಅನುಮತಿಸಿತು. ಸ್ಪೇನ್ ಮತ್ತು ಇಟಲಿ ರಾಜತಾಂತ್ರಿಕ ಸಹಕಾರ ನೀಡಿದವು. ಅಮೆರಿಕಕ್ಕೆ ತಾಗಿಕೊಂಡಿರುವ ಕೆನಡಾ ಮತ್ತು ಮೆಕ್ಸಿಕೊ, ಐರೋಪ್ಯ ಒಕ್ಕೂಟದ ಪ್ರಮುಖ ರಾಷ್ಟ್ರಗಳಾದ ಜರ್ಮನಿ ಮತ್ತು ಫ್ರಾನ್ಸ್ ಅಮೆರಿಕದ ಜೊತೆಯಾಗಲು ನಿರಾಕರಿಸಿದವು.

ಅದು ಭಾರತ ಮತ್ತು ಅಮೆರಿಕ ದ್ವಿಪಕ್ಷೀಯವಾಗಿ ಉತ್ತಮ ಸಂಬಂಧ ಹೊಂದುವ ಹಾದಿಯಲ್ಲಿ ಮೊದಲ ಹೆಜ್ಜೆ ಇಡುತ್ತಿದ್ದ ವರ್ಷಗಳು. ಇರಾಕ್ ಯುದ್ಧದಲ್ಲಿ ಭಾರತ ನೇರವಾಗಿ ಪಾಲ್ಗೊಳ್ಳಬೇಕು ಎಂಬ ಒತ್ತಡ ಅಮೆರಿಕದಿಂದ ಬಂತು. ಅಮೆರಿಕದ ಒತ್ತಡಕ್ಕೆ ಅಂದಿನ ಪ್ರಧಾನಿ ವಾಜಪೇಯಿ ಅವರು ಮಣಿಯಲಿಲ್ಲ. ಭಾರತದ ಸೇನೆಯನ್ನು ಇರಾಕಿಗೆ ಕಳುಹಿಸುವುದು ಭಾರತದ ಹಿತಾಸಕ್ತಿಗೆ ಪೂರಕವಲ್ಲ ಎಂಬ ನಿಲುವನ್ನು ಸರ್ಕಾರ ತಳೆಯಿತು. ಈ ನಿಲುವಿಗೆ ಭಾರತದ ಒಳಗೆ ಮತ್ತು ಹೊರಗೆ ವಿರೋಧ ವ್ಯಕ್ತವಾಯಿತು. ಅಮೆರಿಕದೊಂದಿಗೆ ಸಂಬಂಧ ವೃದ್ಧಿಸಿಕೊಳ್ಳುವ ಮತ್ತು ಜಾಗತಿಕ ವೇದಿಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಅವಕಾಶವನ್ನು ಭಾರತ ಕಳೆದು
ಕೊಳ್ಳುತ್ತಿದೆ ಎಂಬ ಟೀಕೆ ಬಂತು. ಆದರೆ ಸರ್ಕಾರ ನಿಲುವು ಬದಲಿಸಲಿಲ್ಲ. ಕಾರ್ಯಾಚರಣೆ ಆರಂಭವಾದ 42 ದಿನಗಳ ಬಳಿಕ ಸದ್ದಾಂ ಹುಸೇನ್‌ನನ್ನು ಸೆರೆಹಿಡಿಯಲಾಯಿತು. ಸಾಮೂಹಿಕ ಹತ್ಯೆ ಮತ್ತು ಇತರ ಅಪರಾಧಗಳ ಕಾರಣಕ್ಕೆ ಆತನನ್ನು ಗಲ್ಲಿಗೇರಿಸಲಾಯಿತು. ಆದರೆ ರಾಸಾಯನಿಕ, ಜೈವಿಕ ಅಥವಾ ಪರಮಾಣು ಅಸ್ತ್ರಗಳು ಇರಾಕ್‌ನಲ್ಲಿ ಪತ್ತೆಯಾಗಲಿಲ್ಲ!

ಸದ್ದಾಂ ಹುಸೇನ್ ಬಳಿಕ ಇರಾಕ್ ಗವರ್ನಿಂಗ್ ಕೌನ್ಸಿಲ್ ಆಡಳಿತದ ಚುಕ್ಕಾಣಿ ಹಿಡಿಯಿತು. ನೂತನ ಸಂವಿಧಾನವನ್ನು ಇರಾಕ್ ಅಂಗೀಕರಿಸಿತು. ಚುನಾವಣೆ ನಡೆದು ಪ್ರಜಾಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆದರೆ ಆಳದಲ್ಲಿ ಇದ್ದ ಜನಾಂಗೀಯ ದ್ವೇಷ ಮಾಸಲಿಲ್ಲ. ಸುನ್ನಿ, ಶಿಯಾ ಮತ್ತು ಕುರ್ದಿಶ್ ಮುಸಲ್ಮಾನ ಪಂಗಡಗಳ ನಡುವೆ ಅಗೋಚರ ಗೋಡೆ ಇದ್ದೇ ಇತ್ತು. 2011ರಲ್ಲಿ ಅಮೆರಿಕದ ಸೇನೆ ಇರಾಕ್‌ನಿಂದ ಕಾಲ್ತೆಗೆಯುತ್ತಿದ್ದಂತೆಯೇ ಶಿಯಾ ಮತ್ತು ಸುನ್ನಿ ಪಂಗಡಗಳ ನಡುವೆ ಸಂಘರ್ಷ ಹೆಚ್ಚಿತು. ಆಂತರಿಕ ಯುದ್ಧ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ವಿಸ್ತಾರಗೊಳ್ಳಲು ಜಾಗ ಒದಗಿಸಿತು. ಸದ್ದಾಂ ಹುಸೇನ್ ಸರ್ವಾಧಿಕಾರದಿಂದ ಇರಾಕ್ ಬಿಡುಗಡೆಗೊಂಡರೂ ರಾಜಕೀಯ ಸ್ಥಿರತೆ ಸಾಧ್ಯವಾಗಲಿಲ್ಲ. ಜನಜೀವನ ನೆಮ್ಮದಿ ಕಾಣಲಿಲ್ಲ.

ಇತ್ತ ಅಮೆರಿಕ ದೊಡ್ಡ ಸಂಖ್ಯೆಯ ಯೋಧರನ್ನು ಯುದ್ಧದಲ್ಲಿ ಕಳೆದುಕೊಂಡಿತು. ಇರಾಕ್ ಮತ್ತು ಅಫ್ಗಾನಿಸ್ತಾನಕ್ಕೆ ಅಮೆರಿಕದ ಸೇನೆಯನ್ನು ಕಳುಹಿಸಿ ಆತುರ ಮಾಡಿದರು ಎಂಬ ಆರೋಪ ಅಧ್ಯಕ್ಷ ಬುಷ್ ಮೇಲೆ ಬಂತು. ‘ಯುದ್ಧಮೋಹಿ’ ಎಂದು ಅವರನ್ನು ಟೀಕಿಸಲಾಯಿತು. ಆದರೆ ಇರಾಕ್ ಯುದ್ಧ ಚಾಲ್ತಿಯಲ್ಲಿರು ವಾಗಲೇ ಬುಷ್ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಗೊಂಡರು! 2005ರಲ್ಲಿ ಅಮೆರಿಕದ ಅಧ್ಯಕ್ಷೀಯ ನಿಯೋಗ ಇರಾಕ್ ಸಮೂಹ ವಿನಾಶದ ಶಸ್ತ್ರಾಸ್ತ್ರಗಳನ್ನು ಹೊಂದಿತ್ತೇ ಎಂಬ ಕುರಿತು ತನಿಖೆ ನಡೆಸಿ, ಗುಪ್ತಚರ ಇಲಾಖೆ ಮಿಥ್ಯಾರೋಪ ಮಾಡಿತ್ತು ಎಂದು ವರದಿ ನೀಡಿತು. ಇಂದಿಗೂ ಇರಾಕ್ ಯುದ್ಧದ ವಿಷಯ ಬಂದರೆ ಅಮೆರಿಕನ್ನರು ಹೇಳುವುದು ಹೀಗೆ ‘Bush lied and people died’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.